ಅಮೇಜಾನ್ ಮಳೆಕಾಡು ಅಂತೊಂದು ಹೆಸರು ಕೇಳಿದರೇನೇ ವಿಶ್ವದ ಚಾರಣ ಪ್ರಿಯರು, ಪ್ರಕೃತಿ ಪ್ರಿಯರೆಲ್ಲರ ನರ ನಾಡಿಗಳಲ್ಲಿ ರೋಮಾಂಚನದ ಸಂಚಾರವಾಗುತ್ತೆ. ವಿಶ್ವದಲ್ಲಿ ಅಗೋಚರವಾಗಿರುವ ಜೀವ ವೈವಿಧ್ಯ, ಕಾಡಿನ ಗರ್ಭದಲ್ಲೆಲ್ಲೋ ನಿಗೂಢವಾಗಿ ಬದುಕಿರಬಹುದಾದ ಜನ ಸಮುದಾಯ, ಪ್ರಕೃತಿಯ ಒಡಲಲ್ಲಿರುವ ನಿಗೂಢಗಳತ್ತ ಮನಸು ವಾಲಿಕೊಳ್ಳುತ್ತೆ. ಇದು ಹೇಳಿಕೇಳಿ ಆಧುನಿಕ ಜಗತ್ತು. ಮನುಷ್ಯರ ಖಾಸಗೀ ಬದುಕಿಗೀಗ ಆನ್ ಲೈನ್ ಯುಗ ಕೊಳ್ಳಿಯಿಟ್ಟಿದೆ. ಆದರೆ, ಈ ರೀತಿಯಲ್ಲಿ ಖಾಸಗಿತನಕ್ಕೆ ಘಾಸಿಯಾಗ ದುಃಖದಲ್ಲಿರೋ ನರ ಮಾನವರ ಪಾಲಿಗೆ ತನ್ನನ್ನು ಪೊರೆಯುತ್ತಿರುವ ಪ್ರಕೃತಿಗೂ ಒಂದು ಖಾಸಗಿತನವಿದೆ ಅನ್ನೋ ಜದಞಆನೋದಯ ಇನ್ನೂ ಆಗಿಲ್ಲ. ಬಹುಶಃ ಪೂರ್ತಿ ಕೆಡುಕಿನ ವಾತಾವರಣ ಕವುಚಿಕೊಂಡು ಉಸಿರುಗಟ್ಟೋವರೆಗೂ ಅದು ಅರ್ಥವಾಗೋದೂ ಕಷ್ಟವಿದೆ.
ನಮ್ಮ ಸುತ್ತ ಹರಿಯೋ ನದಿಗಳಿಂದಲೇ ಭೂಮಿಯ ಅದೆಷ್ಟೋ ಭಾಗಗಳಿಗೆ ಉಪಕಾರವಾಗುತ್ತೆ. ಜಾಗತಿಕ ಮಟ್ಟದಲ್ಲಿ ಹವಾಮಾನ ಸಮತೋಲನವೂ ಸೇರಿದಂತೆ ಎಲ್ಲವೂ ಈ ನದಿಮೂಲದಿಂದಲೇ ಸೃಷ್ಟಿಯಾಗುತ್ತೆ. ಈ ಕಾರಣದಿಂದಲೇ ಜಗತ್ತಿನ ಅತೀ ದೊಡ್ಡ ನದಿ ಎಂಬ ಖ್ಯಾತಿಗೆ ಪಾತ್ರವಾಗಿರುವ ಅಮೆಜಾನ್ ಗೆ ಇಡೀ ವಿಶ್ವವೇ ಋಣಿಯಾಗಿದೆ. ಇದರ ಅಗಾಧ ವಿಸ್ತಾರ, ಅದರಲ್ಲಿ ಹರಿಯೋ ನೀರಿನ ಪ್ರಮಾಣ ಊಹೆಗೆ ನಿಲುಕದ್ದು. ಈ ನದಿಯನ್ನು ನೆಚ್ಚಿಕೊಂಡೇ ಅಮೆಜಾಜ್ ಕಾಡು ಮಿಲಿಯನ್ನುಗಟ್ಟಲೆ ಹೆಕ್ಟೇರಿನಷ್ಟು ವ್ಯಾಪ್ತಿಯಲ್ಲಿ ಮೈ ಚಾಚಿಕೊಂಡಿದೆ. ಒಂದು ವೇಳೆ ಈ ನದಿ ನೀರೇನಾದರೂ ಬತ್ತೋ ಹಂತ ತಲುಪಿದರೆ, ಆ ಕಾಡು, ಅದರೊಳಗಿರೋ ಅಪರೂಪದ ಜೀವ ಸಂಕುಲ ಸರ್ವನಾಶವಾಗಿ ಬಿಡುತ್ತದೆ. ಹೀಗೊಂದು ಆತಂಕದ ಮಾತುಗಳು ಕೇಳಿಬಂದಾಗೆಲ್ಲ ಈ ಭೂಮಿ ಇರೋವರೆಗೂ ಅಮೆಜಾನ್ ನದಿ ಬತ್ತಲು ಸಾಧ್ಯವಿಲ್ಲ ಎಂಬಂಥಾ ಭಂಡ ನಂಬಿಕೆ ಬಹುತೇಕರನ್ನ ಆವರಿಸಿಕೊಳ್ಳುತ್ತಿತ್ತು. ಆದರೀಗ ದುರಂತದ ಮುನ್ಸೂಚನೆ ಜಗತ್ತಿನ ಕಣ್ಣೆದುರು ರುದ್ರನರ್ತನ ಶುರುವಿಟ್ಟಿದೆ.
ದುರಂತದ ಮುನ್ಸೂಚನೆ
ಈವತ್ತಿಗೆ ಪ್ರಾಕೃತಿಕ ಅಸಮತೋಲನದಿಂದಾಗಿ ಜಾಗತಿಕ ಮಟ್ಟದಲ್ಲಿ ಎಲ್ಲವೂ ಅದಲು ಬದಲಾಗಿವೆ. ಮಳೆಯ ಲೆಕ್ಕಾಚಾರ ಲಯ ತಪ್ಪಿದೆ. ತೀರಾ ತಲೆ ಚಿಟ್ಟು ಹಿಡಿಸುವಷ್ಟು ಮಳೆ ಧಾರಾಕಾರ ಸುರಿದರೂ ಕೂಡಾ ಅದೆಲ್ಲವೂ ಸಮುದ್ರ ಸೇರುತ್ತೆ. ಮಣ್ಣಿನ ಮೇಲ್ಮೈ ರಚನೆಯೇ ಅಸ್ತವ್ಯಸ್ತವಾಗಿರೋದರಿಂದಾಗಿ ನೀರನ್ನು ಇಂಗಿಸಿಕೊಳ್ಳುವ ಸಹಜ ಸಾಮರ್ಥ್ಯವನ್ನು ಮಣ್ಣು ಕಳೆದುಕೊಂಡಿದೆ. ಹಾಗಾದರೆ ಮಣ್ಣು ನೀರು ಇಂಗಿಸಿಕೊಳ್ಳುವ ಶಕ್ತಿ ಕಳೆದುಕೊಂಡಿದ್ದರ ಅರ್ಥವೇನೆಂದು ಹುಡುಕ ಹೋದರೆ, ಅದು ಮಣ್ಣಿನ ಸಾವಿನ ಸೂಚನೆ ಅನ್ನೋ ಆಘಾತಕರ ಉತ್ತರ ಸಿಗುತ್ತದೆ. ಮಣ್ಣೇ ಸಾವಿನ ಸಮೀಪ ನಿಂತಿರುವಾಗ ಜಲಮೂಲಗಳ ಅಳಿಯದೆ ಉಳಿದಾವೆಂಬ ನಂಬಿಕೆ ಹುಟ್ಟಲು ಸಾಧ್ಯವೇ ಇಲ್ಲ. ಅದು ಸಾಧ್ಯವಾಗಿದ್ದರೆ, ಜೀವನದಿ ಅಮೆಜಾನ್ ಬತ್ತಿ ಬರಿದಾಗುವ ಹಂತ ತಲುಪಿಕೊಳ್ಳುತ್ತಿರಲಿಲ್ಲ.
ಅಮೆಜಾನ್ ಕಾಡಿನೊಳಗೆ ನಾನಾ ಪಲ್ಲಟಗಳು ಸಂಭವಿಸುತ್ತಿವೆ ಎಂಬರ್ಥದಲ್ಲಿ ವಿಜ್ಞಾನಿಗಳು, ಪರಿಸರಾಸಕ್ತರು ಹೇಳಿಕೊಂಡೇ ಬರುತ್ತಿದ್ದಾರೆ. ಆನರಿಗೆಲ್ಲ ಅಮೆಜಾನಿನ ಅಬೇಧ್ಯ ಕಾಡಿನೊಳಗೆ ನುಗ್ಗಿ ಎಕ್ಕುಟ್ಟಿಸುವ ಉಮೇದು ಇದೆಯೇ ಹೊರತು, ವಿಜ್ಞಾನಿಗಳ ಮಾತಿನ ಬಗ್ಗೆ ಗಂಭೀರವಾಗಿ ಆಲೋಚಿಸುವ ಪುರಸೊತ್ತಾಗಲಿ ದರ್ದಾಗಲೀ ಇಲ್ಲ. ಇದೆಲ್ಲದರ ಫಲವಾಗಿ ಅಮೇಜಾನ್ ಈಗ ಸಾವಿನ ಸಮ್ಮುಖದಲ್ಲಿ ನಿಂತಿದೆ. ಪರಿಸರ ತಜ್ಞರು ಈಗೊಂದಷ್ಟು ವರ್ಷಗಳಿಂದ ಅಮೆಜಾನ್ ನದಿ ಹಾಗೂ ಅದರ ಮೂಲಗಳ ಮೇಲೆ ಕಣ್ಣಿಟ್ಟು ಕೂತಿದ್ದರು. ಕೆಲ ವರ್ಷಗಳಿಂದ ಅಮೆಜಾನ್ ನೀರಿನ ಒಟ್ಟಾರೆ ಪ್ರಮಾಣದಲ್ಲಿ ಇಳಿಕೆ ಕಾಣುತ್ತಿರುವ ಆಘಾತಕರ ಸತ್ಯ ಎದುರಾಗಲಾರಂಭಿಸಿತ್ತು.
ಆದರೆ, ಆ ಪರಿಯ ನೀರಿನಲ್ಲಿ ಕೊಂಚ ಇಳಿಕೆಯಾದರೆ ಬರಿಗಣ್ಣಿಗೆ ಕಾಣಿಸುವುದಿಲ್ಲ. ಈಗೊಂದಷ್ಟು ಕಾಲದಿಂದ ನಿರಂತರವಾಗಿ ಅಮೆಜಾನ್ ನದಿಯ ನೀರು ಇಳಿಮುಖವಾಗುತ್ತಾ ಬಂದಿತ್ತು. ಕಳೆದ ವರ್ಷದ ಅಂಚಿನ ಹೊತ್ತಿಗೆಲ್ಲ ಅಮೇಜಾನ್ ನೀರು ಗಾಬರಿ ಬೀಳಿಸುವಂತೆ ಬರಿದಾಗಿ ಬಿಟ್ಟಿತ್ತು. ಯಾವ ರೀತಿಯೆಂದರೆ, ಆ ನದಿಯ ಉದ್ದಕ್ಕೂ ಆಚೀಚಿನ ವಾತಾವರಣ ಅಕ್ಷರಶಃ ಬರಗಾಲಪೀಡಿತವಾದಂತೆ ಕಾಣಲಾರಂಭಿಸಿತ್ತು. ಬ್ರೆಜಿಲ್, ದಕ್ಷಿಣ ಅಮೆರಿಕಾ ಮುಂತಾದೆಡೆಗಳಲ್ಲಿ ಕಳೆದ ವರ್ಷದಿಂದಲೇ ಬರಗಾಲದ ಪರಿಸ್ಥಿತಿ ವಿಪರೀತಕ್ಕಿಟ್ಟುಕೊಂಡಿದೆ. ಇದು ಮುಂದುವರೆದ ಹಣೆಪಟ್ಟಿಯಿಟ್ಟುಕೊಂಡ ದೇಶಗಳ ಸರಹದ್ದಿಗೆ ಬರುವ ಪ್ರದೇಶ. ಆದರೆ, ಅಲ್ಲೀಗ ಹಣವೆಂಬುದು ಕೆಲಸಕ್ಕೆ ಬಾರದಂಥಾ ವಿಷಮ ವಾತಾವರಣ ತಲೆದೋರಿದೆ. ಆ ಭಾಗದ ಮಂದಿ ಹನಿ ನೀರಿಗೂ ಪರದಾಡುತ್ತಾ, ಕೃಷಿ ಸೇರಿದಂತೆ ಎಲ್ಲದಕ್ಕೂ ತತ್ವಾರ ಅನುಭವಿಸುತ್ತಿದ್ದಾರೆ. ಇಂಥಾ ಬರದ ಛಾಯೆಯೀಗ ಜೀವ ನದಿ ಅಮೆಜಾನ್ ನದಿಯ ಮೇಲೂ ಸ್ಪಷ್ಟವಾಗಿಯೇ ಪ್ರತಿಫಲಿಸುತ್ತಿದೆ.
ಜೀವನದಿ ಸಾವಿನತ್ತ
ಅದು ಹೇಳಿಕೇಳಿ ಜೀವ ನದಿ. ಅದೆಷ್ಟು ಶತಮಾನಗಳಿಂದ ಅದು ಹರಿಯುತ್ತಿದ್ದರೂ ಯಾವತ್ತಿಗೂ ಮೈದುಂಬಿದ ಸ್ಥಿತಿಯಲ್ಲಿಯೇ ಕಂಗೊಳಿಸುತ್ತಿತ್ತು. ಮನುಷ್ಯನ ದೇಹ ಮೈ ಕೈ ತುಂಬಿಕೊಂಡಿದ್ದಾಗಲೇ ಒಂದು ಚಹರೆ ಇರುತ್ತದೆ. ಸಣಕಲಾದಾಗ ಮೂಳೆಗಳೆಲ್ಲ ಕಾಣಿಸಿಕೊಂಡು ಚರ್ಮದ ಮೇಲೆ ಅಸ್ಥಿ ಪಂಜರದ ಛಾಯೆ ಕಾಣಲಾರಂಭಿಸುತ್ತೆ. ಇತಿಹಾಸದಲ್ಲಿ ಮೊದಲ ಬಾರಿ ಅಮೆಜಾನ್ ನದಿ ಕೂಡಾ ಅಂಥಾ ಸ್ಥಿತಿಗಿಳಿದಿದೆ. ಒಂದೇ ಸಮನಾಗಿ ತುಂಬಿ ಹರಿಯುತ್ತಿದ್ದ ಈ ನದಿಯೀಗ ಪ್ರಯಾಸ ಪಟ್ಟು ಹರಿಯುತ್ತಿದೆ. ತೀರಾ ಆಳವಿಲ್ಲದ ಪ್ರದೇಶಗಳಲ್ಲಿ ಅಮೆಜಾನ್ ಸಾವಿನತ್ತ ತೆವಳಿಕೊಂಡು ಹರಿಯುತ್ತಿರುವಂತೆ ಭಾಸವಾಗುತ್ತಿರುವ ಚಿತ್ರಣ ಒಂದಿಡೀ ಜಗತ್ತಿನ ನಿದ್ದೆಗೆಡಿಸಿದೆ.
ಪೆರುವಿನ ಆಚಿಡಿಸ್ ಪರ್ವತದಿಂದ ಸಾಗಿ ಬಂದು ದಕ್ಷಿಣಮೆರಿಕವನ್ನು ಬಳಸಿಕೊಂಡು ಹರಿಯುವ ಧೈತ್ಯ ನದಿ ಅಮೇಜಾನ್. ಸಮುದ್ರ ಮಟ್ಟದಿಂದ ಐದು ಸಾವಿರ ಚಿಲ್ಲರೆ ಅಡಿಗಳಷ್ಟು ಎತ್ತರದಲ್ಲಿ ಹರಿಯುವ ಈ ನದಿ ಅದೆಷ್ಟೋ ಸಹಸ್ರ ಕೋಟಿ ಜೀವರಾಶಿಗೆ, ತನ್ನ ಇಕ್ಕೆಲಗಳ್ಲ್ಲಿ ಮೈ ಚಾಚಿಕೊಂಡಿರುವ ಅಗಾಧ ಪ್ರಮಾಣದ ಕಾಡಿಗೆಲ್ಲ ಉಸಿರಿದ್ದಂತೆ. ಹೀಗೆ ಬಹು ದೂರ ಸಾಗುವ ಅಮೆಜಾನ್ ನಂತರ ಅಟ್ಲಾಂಟಿಕ್ ಸಾಗರ ಸೇರುತ್ತದೆ. ಆದರೆ, ಅದರ ಜಲಾನಯನ ಪ್ರದೇಶಗಳೆಲ್ಲ ಇದೀಗ ಭಣಗುಡಲಾರಂಭಿಸಿದೆ. ಇದು ಜಾಗತಿಕ ಹವಾನಾ ವೈಪರಿತ್ಯ ಹಾಗೂ ಕಾಡುಗಳೊಳಗೆ ಸದ್ದಿಲ್ಲದೆ ನಡೆಯುತ್ತಿರುವ ಮಾನವ ಹಸ್ತಕ್ಷೇಪ ಮತ್ತು ಏರುತ್ತಿರೋ ಜಾಗತಿಕ ತಾಪಮಾನದ ಸ್ಪಷ್ಟ ಸೂಚನೆ. ಅಮೇಜಾನಿನಂಥಾ ಅಮೆಜಾನೇ ಬತ್ತುತ್ತಿರುವಾಗ ಜಗತ್ತಿನ ಮಿಕ್ಕುಳಿದ ನದಿಗಳು ಕಣ್ಣೆದುರೇ ಕಲ್ಲು ಮರಳಿನ ರಾಶಿಯಾಗಿ, ನಿಸ್ತೇಜಗೊಳ್ಳುವ ಆತಂಕವೊಂದು ಪ್ರಜ್ಞಾವಂತರನ್ನೆಲ್ಲ ಬೆಚ್ಚಿ ಬೀಳಿಸುತ್ತಿದೆ.
ಹೀಗೆ ಮಳೆಗಾಲ, ಬೇಸಿಗೆ ಕಾಲಗಳೆಂಬ ಹಂಲ್ಲದೆ ಸದಾ ಕಾಲವೂ ಮೈದುಂಬಿ ಹರಿಯುತ್ತಿದ್ದ ನದಿ ಅಮೇಜಾನ್. ಇದೊಂದು ನದಿಯಿಂದಾಗಿಯೇ ಅಮೆಜಾನ್ ಕಾಡು ಹಸಿರಿನಿಂದ ನಳನಳಿಸುತ್ತಾ ಬಂದಿತ್ತು. ಈವತ್ತಿಗೆ ಅಮೆಜಾನ್ ಮಳೆಕಾಡು ಇಡೀ ವಿಶ್ವದ ಗಮನ ಸೆಳೆದಿದೆ. ಅದೆಂಥಾ ವೈಜ್ಞಾನಿಕ ಆವಿಷ್ಕಾರಗಳ ನಿಲುಕಿಗೂ ಇದರೊಳಗಿನ ನಿಗೂಢಗಳು ಇನ್ನೂ ಸಿಕ್ಕಿಲ್ಲ. ಅದರ ಗರ್ಭದಲ್ಲಿರೋ ಅಸಂಖ್ಯಾತ ಜೀವರಾಶಿಯ ಪರಿಚಯ ಇದುವರೆಗೂ ಆಗಿಲ್ಲ. ಅಂಥಾ ದೊಡ್ಡ ಪ್ರಮಾಣದ ಜೀವಕೋಟಿ ಬದುಕುತ್ತಿರೋದು ಅಮೆಜಾನ್ ನದಿಯ ಋಣದಲ್ಲಿಯೇ. ಒಂದು ವೇಳೆ ಈ ನದಿಮೂಲ ಸಂಪೂರ್ಣವಾಗಿ ಬತ್ತಿದರೆ ಈ ಜಗತ್ತಿನ ಅನರ್ಘ್ಯ ಜೀವರಾಶಿ ಹೇಳ ಹೆಸರಿಲ್ಲದಂತೆ ನಾಶವಾಗುತ್ತೆ. ಆ ಮೂಲಕ ಜಾಗತಿಕ ಮಟ್ಟದಲ್ಲಿ ಪ್ರಾಕೃತಿಕ ಸಮತೋಲನ ಸರ್ವನಾಶವಾಗೋದು ಖಚಿತ.
ಅದರ ಗಾತ್ರ ಬೆಚ್ಚಿ ಬೀಳಿಸುತ್ತೆ
ನಾವು ಒಂದಷ್ಟು ದೊಡ್ಡ ಗಾತ್ರದಲ್ಲಿರೋ ನದಿಗಳನ್ನು ಕಂಡಿದ್ದೇವೆ. ಸಮುದ್ರದ ಅಗಾಧತೆ ಕಂಡು ಅಚ್ಚರಿಗೊಳ್ಳುತ್ತೇವೆ. ಸಾವಿರಾರು ನದಿಗಳು ಸೇರಿ ಸಮುದ್ರ ತುಂಬುತ್ತದೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಅಮೆಜಾನಿನ ಗಾತ್ರ ಮಾತ್ರ ಸಮುದ್ರವೇ ಧುಮ್ಮಿಕ್ಕಿ ಹರಿಯುವಂತೆ ಕಾಣಿಸುತ್ತದೆ. ಇಡೀ ಜಗತ್ತು ಬಿಸಿಲಿನಿಂದ ಬಾಯಾರಿ, ಕೆಲ ಪ್ರದೇಶಗಳಲ್ಲಿ ನದಿಗಳು ಬತ್ತಿದರೂ ಅಮೆಜಾನ್ ಜೀವಂತಿಕೆಯಿಂದ ನಳನಳಿಸುತ್ತಿತ್ತು. ಇದರ ಗಾತ್ರದ ಬಗ್ಗೆ ತಿಳಿದರೆ ಎಂಥವರಿಗಾದರೂ ಅಚ್ಚರಿಯಾಗದಿರೋದಿಲ್ಲ. ಮಳೆಗಾಲದ ಅವಧಿಯ ತುಂಬೆಲ್ಲ ಈ ನದಿಯ ಅಗಲ ಭರ್ತಿ ಐವತ್ತು ಕಿಲೋಮೀಟರಿನಷ್ಟಿರುತ್ತದೆಂದರೆ, ಅದರ ಹರಿವಿನ ಅಗಾಧತೆಯ ಅಂದಾಜು ಸಿಗುತ್ತದೆ. ಇನ್ನು ಬೇಸಗೆಯ ಅವಧಿಯಲ್ಲಿಯೂ ಈ ನದಿ ಐದಾರು ಕಿಲೋಮೀಟರುಗಳಷ್ಟು ಅಗಲ ಮೈ ಚಾಚಿಕೊಂಡಿರುತ್ತೆ. ಇಂಥಾ ನದಿ ಬತ್ತುತ್ತಿದೆ ಎಂದರೆ, ಅದು ಜಾಗತಿಕ ಮಟ್ಟದ ಕೆಡುಕಿನ ಮುನ್ಸೂಚನೆಯಲ್ಲದೆ ಮತ್ತೇನೂ ಅಲ್ಲ!
ಇಂಥಾದ್ದೊಂದು ನದಿ ಮೈದುಂಬಿಕೊಳ್ಳಬೇಕೆಂದರೆ ನೂರಾರು ಉಪ ನದಿಗಳ ಪಾತ್ರ ಖಂಡಿತವಾಗಿಯೂ ಇರುತ್ತದೆ. ಇಂಥಾ ಉಪ ನದಿಗಳು ಬತ್ತುತ್ತಾ ಸಾಗಿದರೆ ಜೀವ ನದಿಯೊಂದು ನೋಡ ನೋಡುತ್ತಲೆ ಸಾವಿನತ್ತ ಹರಿಯಲಾರಂಭಿಸುತ್ತದೆ. ಅಮೆಜಾನ್ ನದಿಯ ವಿಚಾರದಲ್ಲಿಯೂ ಈಗ ಅಂಥಾದ್ದೇ ದುರಂತ ನಡೆಯುತ್ತಿದೆ. ಅಮೇಜಾನಿನ ಪ್ರಧಾನ ಉಪನದಿಯಾಗಿರೋದು ಮಡೈರಾ ನದಿ. ಅಮೆಜಾನಿನ ಜೀವಂತಿಕೆಯಲ್ಲಿ ಮಡೈರಾದ ಕೊಡುಗೆ ಅಪಾರ. ಆದರೆ ಕಳೆದ ದಶಕದುದ್ದಕ್ಕೂ ಮಡೈರಾ ನದಿ ಸೊರಗುತ್ತಾ ಸಾಗಿ ಬಂದು ಕಡೆಯ ವರ್ಷದ ಕಡೇಯ ಭಾಗದಲ್ಲಿ ಸಂಪೂರ್ಣವಾಗಿಯೇ ನಿರ್ಜೀವಗೊಂಡಂತಿದೆ. ಇನ್ನುಳಿದಂತೆ ಅಮೆಜಾನಿನ ಮತ್ತೊಂದು ಉಪ ನದಿ ಸೊಲಿಮೈಸ್ ಕಳೆದ ವರ್ಷವೇ ಸಂಪೂರ್ಣವಾಗಿ ಬತ್ತಿ ಹೋಗಿದೆ. ಇದು ವೈಜ್ಞಾನಿಕ ಸಮೀಕ್ಷೆಯ ಮೂಲಕ ಸಾಬೀತಾಗಿದೆ.
ಭೀಕರ ಬರಗಾಲ
ಬ್ರೆಜಿಲ್ ಮುಂತಾದ ಭಾಗದಲ್ಲಿ ಈಗ ಬರಗಾಲದ ಸ್ಥಿತಿ ಗಂಭೀರ ಸ್ವರೂಪ ಪಡೆದುಕೊಂಡಿದೆ. ಜಗತ್ತಿನ ಮತ್ಯಾವ ದೇಶಗಳಲ್ಲಿಯೂ ಇಲ್ಲದಂಥಾ ಕ್ಷಾಮ ಈ ಭಾಗಕ್ಕೆ ಅಡರಿಕೊಂಡಿದೆ. ಅಲ್ಲಿನ ಹವಾಮನಾನ ಸಂಸ್ಥೆಗಳೂ ಕೂಡಾ ಪ್ರಸ್ತುತ ಪರಿಸ್ಥಿತಿಯ ಗಂಭೀರತೆಯನ್ನು ಸಾರಿ ಹೇಳುತ್ತಿವೆ. ಅಮೇಜಾನಿನ ಮಟ್ಟಿಗೆ ಅತ್ಯಂತ ದೊಡ್ಡ ನಗರವಾಗಿ ಮನೌಸ್ ಗುರುತಿಸಿಕೊಂಡಿದೆ. ಅಮೆಜಾನ್ ಗರ್ಭದಲ್ಲಿರೋ ಈ ಊರೇ ಇದೀಗ ಬರಗಾಲದಿಂದ ಕಂಗಾಲಾಗಿದೆ. ಇದರ ಪರಿಣಾಮವಾಗಿಯೇ ದಕ್ಷಿಣಮೇರಿಕಾಕ್ಕೆ ಇತ್ತೀಚೆಗೆ ಕಾಡ್ಗಿಚ್ಚಿನ ಬಿಸಿ ತಾಕಿತ್ತು. ಕೆಲ ಹವಾಮಾನ ತಜ್ಞರು ಹೇಳುತ್ತಿರೋ ವಿಚಾರಗಳು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸೂಚನೆ ಕೊಟ್ಟಿದೆ. ಯಾಕೆಂದರೆ ಕಳೆದ ವರ್ಷಕ್ಕಿಂತ ಈ ವರ್ಷ ಬರಗಾಲ ಮತ್ತಷ್ಟು ಬಿಗಡಾಯಿಸೋದು ಪಕ್ಕಾ. ಹಾಗಾದರೆ, ಜೀವನದಿ ಅಮೆಜಾನ್ ಮತ್ತಷ್ಟು ಬತ್ತೋದು ಶತಃಸ್ಸಿದ್ದ!
ಅಮೆಜಾನ್ ದುರಂತ
ಮೇಲುನೋಟಕ್ಕೆ ಅಮೇಜಾನ್ ಅನ್ನೋದು ಅಬೇಧ್ಯ ಕಾಡಿನಂತೆ ಕಾಣಿಸುತ್ತದೆ. ಕೆಲ ಚಾರಣಿಗರು ಪ್ರಯಾಸ ಪಟ್ಟು ಅದರ ಒಂದಷ್ಟು ಭಾಗಗಳನ್ನು ಸುತ್ತಿದ್ದಾರೆ. ಅಂಥಾ ಪ್ರಯತ್ನಗಳು ಕುರುಡನೊಬ್ಬ ಆನೆ ಮುಟ್ಟಿದಾಗ ದಕ್ಕುವಂಥಾದ್ದೇ ಮೇಲು ಸ್ತರದ ಸಂಗತಿಗಳನ್ನು ಜಗತ್ತಿಗೆ ದಾಟಿಸಿದೆ. ಅದರೊಳಗೆ ಒಂದು ಕಾಲದಲ್ಲಿ ಬುಡಕಟ್ಟು ಜನಾಂಗದವರಿದ್ದರೆಂಬ ಮಾತಿದೆ. ಆದರೀಗ ಅಂಥಾ ಬುಡಕಟ್ಟು ಜನಾಂಗಗಳ ಮೂಲವೂ ಮಾಯವಾಗಿದೆ. ಹಾಗಾದರೆ ಅಮೆಜಾನ್ ಕಾಡಿನೊಳಗೆ ನಿಜಕ್ಕೂ ಏನಾಗುತ್ತಿದೆ. ಇಡೀ ವಿಶ್ವದಲ್ಲಿ ದೊಡ್ಡ ದೊಡ್ಡ ಕಾಡುಗಳು ಆಧುನೀಕರಣ ಮತ್ತು ಮನುಷ್ಯರ ಲಾಲಸೆಗಳಿಂದಾಗಿ ನಾಶವಾಗಿವೆ. ಹಾಗಿರುವಾಗ ಅಮೆಜಾನಿನ ಕಾಡುಗಳು ಯಥಾ ಸ್ಥಿತಿಯಲ್ಲಿರಲು ಸಾಧ್ಯವೇ?
ಇಂಥಾ ಪ್ರಶ್ನೆಗಳಿಗೆಲ್ಲ ಉತ್ತರ ಹುಡುಕುತ್ತಾ ಹೋದರೆ ನಿಜಕ್ಕೂ ಬೆಚ್ಚಿ ಬೀಳಿಸುವ ಸತ್ಯಗಳು ಜಾಹೀರಾಗುತ್ತಿವೆ. ಈವತ್ತಿಗೆ ಅಮೇಜಾನ್ ಎಂದರೆ ಭಯಾನಕ ಕಾಡು, ಈವತ್ತಿಗೂ ಅದರ ಮೂಲ ಸ್ಥಿತಿಗೆ ಕುಂದುಂಟಾಗಿಲ್ಲ ಅಂತೆಲ್ಲ ಅಂದುಕೊಳ್ಳಲಾಗುತ್ತಿದೆ. ಆದರೆ ಇದು ಅರ್ಧ ಶತಮಾನದಷ್ಟು ಹಿಂದಿನ ಸತ್ಯ. ಈ ಕಾಡಿನ ಇಕ್ಕೆಲಗಳಲ್ಲಿ ಮನುಜಷ್ಯನ ಸಂಚಾರ ಇದೆ ಅಂತಾದರೆ, ಅದರ ಸಂಪತ್ತಿನ ಮೇಲೆ ಅವರ ಕಾಕ ದೃಷ್ಟಿ ಬೀಳದಿರಲು ಸಾಧ್ಯವೇ? ಈ ನಿಟ್ಟಿನಲ್ಲಿ ನೋಡಹೋದರೆ ಅಮೆಜಾನ್ ನ ದಟ್ಟ ಕಾಡು ಈಗಾಗಲೇ ಶೇಖಡಾ ಐವತ್ತು ಪರ್ಸೆಂಟಿನಷ್ಟು ನಾಶವಾಗಿದೆ ಎಂಬ ಕಟು ವಾಸ್ತವವೊಂದು ಜಾಹೀರಾಗುತ್ತದೆ.
ಅಮೆಜಾನ್ ಎಂಬುದು ಅತ್ಯಂತ ಅಪರೂಪದ ಸಸ್ಯ ಸಂಪತ್ತನ್ನು ಹೊಂದಿರುವ ಕಾಡು. ಅದರೊಳಗೆ ಬೇರ್‍ಯಾವ ಕಾಡುಗಳಲ್ಲಿಯೂ ಸಿಗದ ಅಮೂಲ್ಯವಾದ ಮರಗಳಿದ್ದಾವೆ. ಈಗಾಗಲೇ ಅದನ್ನೆಲ್ಲ ನಾಶ ಮಾಡಲಾಗಿದೆ. ಇನ್ನುಳಿದಂತೆ ಅಮೆಜಾನ್ ಕಾಡಿನೊಳಗೆ ವಿಜ್ಞಾನ ಜಗತ್ತಿಗೂ ಸಿಗದಂಥಾ ಜೀವ ಸಂಕುಲ ಇದೆ ಎಂಬ ವಿಚಾರ ಜನಜನಿತ. ಅದರಲ್ಲಿ ಸತ್ಯವೂ ಇದೆ. ಆದರೆ ಅಂಥಾ ಅಗಾಧ ವನ್ಯ ಸಂಪತ್ತನ್ನು ಈಗಾಗಲೇ ಬಹುಪಾಲು ನಾಶ ಮಾಡಲಾಗಿದೆ. ಅಮೇಜಾನ್ ಎಂಬುದು ಜಗತ್ತಿನ ಪಾಲಿಗೆ ಅದೆಷ್ಟು ಅಮೂಲ್ಯವಾದದ್ದೆಂಬ ಖಬರು ಈ ಭಾಗದ ಕಾಡುಗಳ್ಳರಿಗೆ, ಅವರನ್ನು ಬೆಳೆಸಿ ಕಾಸು ಗುಂಜುವ ಅಧಿಕಾರಸ್ಥರಿಗೆ ಇದ್ದಂತಿಲ್ಲ. ಅದರ ಪರಿಣಾಮವಾಗಿಯೇ ಅಮೇಜಾನ್ ನದಿ, ದಟ್ಟ ಕಾಡಿನ ಸಮೇತ ಸಾವಿನತ್ತ ಹೊರಳಿಕೊಳ್ಳುತ್ತಿದೆ.
ಅಮೇಜಾನ್ ಎಂಬುದು ಅದೆಷ್ಟು ದೊಡ್ಡ ಹರಿವು ಹೊಂದಿರುವ ನದಿ ಎಂದರೆ, ಅದು ಹತ್ತಾರು ದೇಶಗಳನ್ನು ಬಳಸಿಕೊಂಡು ಹರಿದು ನಂತರ ಅಟ್ಲಾಂಟಿಕ್ ಸಾಗರ ಸೇರುತ್ತದೆ. ಸುರಿನಾಮ್, ವೆನಿಜುವೇಲಾ, ಪೆರು, ಈಕ್ವೆಡಾರ್, ಕೊಲಂಬಿಯಾ, ಬೊಲಿವಿಯಾ, ದಕ್ಷಿಣಮೇರಿಕ ದೇಶಗಳಲ್ಲಿ ಅಮೆಜಾನ್ ಹರಿಯುತ್ತದೆ. ಈ ಎಲ್ಲ ಭಾಗಗಗಳಲ್ಲಿಯೂ ಕೂಡಾ ಈ ಜೀವ ನದಿನ ಮೇಲೆ ನಿರಂತರವಾಗಿ ಪ್ರಹಾರಗಳು ನಡೆಯುತ್ತಿವೆ. ಇಷ್ಟು ದೊಡ್ಡ ಗಾತ್ರದ ನದಿ ಹಾದು ಹೋಗುವ ಜಾಗಗಳಲ್ಲೆಲ್ಲ ಸಹಜವಾಗಿಯೇ ಅಮೂಲ್ಯವಾದ ಅಮೆಜಾನ್ ಕಾಡು ಸೃಷ್ಟಿಯಾಗಿದೆ. ಇಡೀ ವಿಶ್ವದಲ್ಲಿನ ಅಷ್ಟೂ ನದಿಗಳಿಂದ ಸಮುದ್ರ ಸೇರುವ ನೀರಿನ ಪ್ರಮಾಣವಿದೆಯಲ್ಲಾ? ಅದರಲ್ಲಿ ಶೇಖಡಾ ಇಪ್ಪತ್ತರಷ್ಟು ನೀರು ಅಮೇಜಾನ್ ಪಾಲಿನದ್ದೆಂದರೆ ಅಚ್ಚರಿಯಾಗದಿರೋದಿಲ್ಲ. ಅಂಥಾ ನದಿ ಬತ್ತುತ್ತಿರೋದು ಜಾಗತಿಕ ಅವಸಾನದ ಸ್ಪಷ್ಟ ಸೂಚನೆ ಅಲ್ಲದೆ ಬೇರೇನೂ ಅಲ್ಲ.
ಇದು ಬೆರಗಿನ ಕಾಡು
ಇನ್ನು ಕಾಡಿನ ವಿಚಾರಕ್ಕೆ ಬಂದರೆ ಅಮೆಜಾನ್ ಜಗತ್ತಿನ ಅತಿದೊಡ್ಡ ಮಳೆ ಕಾಡೆಂಬ ಹೆಗ್ಗಳಿಕೆ ಗಳಿಸಿಕೊಂಡಿದೆ. ಇದರ ಒಟ್ಟಾರೆ ವ್ಯಾಪ್ತಿ ನಿಜಕ್ಕೂ ಅಚ್ಚರಿದಾಯಕವಾಗಿದೆ. ಇದು ೫.೫ ಮಿಲಿಯನ್ ಚದರ ಕಿಲೋಮೀಟರ್ ವ್ಯಾಪಿಸಿಕೊಂಡಿದೆ. ನಿಖರವಾಗಿ ಹೇಳಬೇಕೆಂದರೆ, ಅಮೇಜಾನ್ ಅನ್ನೋದು ಅಚ್ಚರಿಗಳ ಕಣಜ. ಅದರ ಒಂದೊಂದು ಸೂಕ್ಷ್ಮಗಳೂ ಕೂಡಾ ಬೆರಗಾಗಿಸಿ ಕಾಡುತ್ತವೆ. ಅದರ ಸಂಕೀರ್ಣತೆ ಎಂಥಾದ್ದಿದೆಯೆಂದರೆ, ಅದರ ನಿಗೂಢ ಸಂಪೂರ್ಣವಾಗಿ ಈ ಜಗತ್ತಿಗೆ ಪರಿಚಯವಾಗಲು ಇನ್ನೊಂದಷ್ಟು ಶತಮಾನ ಬೇಕಾದೀತೇನೋ…
ಅಮೆಜಾನ್ ಜಗತ್ತಿನ ಏಕೈಕ ಅತಿ ದೊಡ್ಡ ಉಷ್ಣವಲಯದ ಮಳೆಕಾಡು. ಇದು ವಿಶ್ವಕ್ಕೆ ಪರಿಚಯವಿರುವ ಜೀವವೈವಿಧ್ಯದ ಶೇಖಡಾ ಹತ್ತರಷ್ಟನ್ನು ತನ್ನ ಒಡಲಲ್ಲಿಟ್ಟುಕೊಂಡಿದೆ. ಆನತ್ತಿಗೆ ಗೊತ್ತಿಲ್ಲದ ಜೀವಿಗಳ ಸಂತೆಯೇ ಈ ಕಾಡಿನೊಳಗಿದೆ. ಇದು ಆರು ಸಾವಿರ ಚಿಲ್ಲರೆ ಕಿಲೋಮೀಟರುಗಳಷ್ಟು ದೂರ ಧುಮ್ಮಿಕ್ಕಿ ಹರಿಯುತ್ತದೆ. ಈ ಕಾಡು ಅನೇಕ ದೇಶಗಳ ಜೊತೆಗೆ ಕೋಟ್ಯಂತರ ಭಿನ್ನ ಭೂಭಾಗದ ಮನುಷ್ಯರಿಗೂ ಜೀವ ನೀಡಿದೆ. ಕೇವಲ ಕಾಡಿನ ಜೀವಿಗಳು ಮಾತ್ರವಲ್ಲದೇ ಇದರ ಇಕ್ಕೆಲಗಳಲ್ಲಿ ಚಿತ್ರವಿಚಿತ್ರ ಬಗೆಯ ಜನಾಂಗಗಳು ಆಶ್ರಯ ಪಡೆದುಕೊಂಡಿವೆ. ಆ ಮೂಲಕ ಭಿನ್ನವಾದ ಸಾಂಸ್ಕೃತಿಕ, ಸಾಮಾಜಿಕ ವಾತಾವರಣವೂ ಅಮೇಜಾನಿನ ಹರಿವಿನುದ್ದಕ್ಕೂ ಕಳೆಗಟ್ಟಿಕೊಂಡಿದೆ.
ಅಮೇಜಾನ್ ಕಾಡು, ನದಿ ನಾಶವಾದರೆ ಖಂಡಿತವಾಗಿಯೂ ಜಾಗತಿಕ ಮಟ್ಟದಲ್ಲಿ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಈ ಕಾರಣದಿಂದಲೇ ಜಗತ್ತಿನ ನಾನಾ ಪರಿಸರಾಸಕ್ತ ಸಂಸ್ಥೆಗಳು, ವಿಜ್ಞಾನಿಗಳು ಅಮೇಜಾನಿನ ನೈಜ ಚಿತ್ರಣವನ್ನು ಮಗಾಣಲು ನಿರಂತರವಾಗಿ ಪ್ರಯತ್ನಿಸುತ್ತಾ ಬರುತ್ತಿದ್ದಾರೆ. ಆ ಪ್ರಯತ್ನಗಳು ಕಲೆ ಹಾಕಿದ್ದು ಮಾತ್ರ ಆಘಾತತಕರ ಅಂಶಗಳನ್ನೇ. ಇದರನ್ವಯ ಹೇಳೋದಾದರೆ ಕನಿಷ್ಠ ಇಪ್ಪತ್ತು ಪರ್ಸೆಂಟ್ ಅರಣ್ಯವನ್ನು ಅಮೆಜಾನ್ ಸುಳಿವೇ ಸಿಗದಂತೆ ಕಳೆದುಕೊಂಡಿದೆ.
ಇತ್ತೀಚೆಗಂತೂ ಇಲ್ಲಿನ ಅರಣ್ಯ ಸಂಪತ್ತನ್ನು ಲೂಟಿ ಹೊಡೆಯುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಈ ಕಾಡು ಹಬ್ಬಿರುವ ಒಂದಷ್ಟು ದೇಶಗಳಲ್ಲಿ ಕಾಡಿನ ಸಂರಕ್ಷಣೆಗಾಗಿ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಈ ಬಗ್ಗೆ ಜಾಗತಿಕವಾಗಿ ಒತ್ತಡ ಬಿದ್ದರೆ ಮಾತ್ರವೇ ಅಳಿದುಳಿದ ಕಾಡನ್ನಾದರೂ ಉಳಿಸಿಕೊಳ್ಳಬಹುದು. ಅಮೇಜಾನ್ ಮಳೆಕಾಡಿನಿಂದಾಗಿ ಇಡೀ ಜಗತ್ತಿನ ವಾತಾವರಣ ಈವತ್ತಿಗೂ ಸಮತೋಲನ ಕಾಯ್ದುಕೊಂಡಿದೆ. ಅದು ದೂರದ ದೇಶದಲ್ಲಿರುವ ಮಳೆ ಕಾಡಾದ್ದರಿಂದ ಅದು ನಾಶವಾದರೆ ನಮಗೇನೂ ಆಗೋದಿಲ್ಲ ಅಂತ ಅಂದುಕೊಂಡಿರಬಹುದು. ಆದರೆ ಇಡೀ ಜಗತ್ತು ಅಮೆಜಾನ್ ಮಳೆಕಾಡಿನ ಋಉಣದಲ್ಲಿದೆ ಅನ್ನೋದು ವಾಸ್ತವಿಕ ವಿಚಾರ. ಒಂದು ವೇಳೆ ಈ ಮಳೆಕಾಡು ನಾಶವಾಗಿ, ನದಿಯ ಹರಿವು ಇಳಿಮುಖವಾಗುತ್ತಲೇ ಹೋದರೆ ಅದರ ಪರಿಣಾಮವನ್ನು ಜಾಗತಿಕ ಮಟ್ಟದಲ್ಲಿ ಅನುಭವಿಸಬೇಕಾಗುತ್ತದೆ.
ವಿಶ್ವದ ಮೇಲೆ ಅಮೆಜಾನ್ ಋಣ
ಈ ಮಳೆಕಾಡು ಇಡೀ ವಿಶ್ವದ ವಾತಾವರಣವನ್ನು ಕಂಟ್ರೋಲಿನಲ್ಲಿಟ್ಟುಕೊಳ್ಳುವಷ್ಟು ಶಕ್ತವಾಗಿದೆ. ಅಮೇಜಾನ್ ತೊಂಬತ್ತರಿಂದ ನೂರಾ ನಲವತ್ತು ಮೆಟ್ರಿಕ್ ಟನ್ ಇಂಗಾಲವನ್ನೊಳಗೊಂಡಿದೆ. ಇಲ್ಲಿನ ಪರಿಸರ ನಾಶವಾಗಿ ಆ ಇಂಗಾಲದ ಒಂದೇ ಒಂದು ಭಾಗವೇನಾದರೂ ವಾತಾವರಣ ಸೇರಿಕೊಂಡರೆ ಜಾಗತಿಕ ತಾಪಮಾನ ಜ್ವರದಂತೆ ಏರಿಕೊಳ್ಳುತ್ತದೆ. ಈ ಅಮೇಜಾನ್ ನದಿ ಅನೇಕ ರೂಪಾಂತರಗಳನ್ನು ಹೊಂದುತ್ತಾ ಬಂದಿದೆ. ನಂಬಲು ಸಾಧ್ಯವಾಗದಂತೆ ವದಿಕ್ಕು ಬದಲಿಸಿಕೊಂಡಿದೆ. ಒಂದು ಕಾಲದಲ್ಲಿ ಈ ನದಿ ಪೂರ್ವದಿಂದ ಪಶ್ಚಿಮಕ್ಕೆ ಹರಿಯುತ್ತಿತ್ತು. ಆಗ ಫೆಸಿಫಿಕ್ ಮಹಾಸಾಗರಕ್ಕೆ ಸೇರುತ್ತಿತ್ತು. ಹತ್ತು ಮಿಲಿಯನ್ ವರ್ಷಗಳ ಹಿಂದೆ ಅದರ ಹರಿವು ಅಟ್ಲಾಂಟಿಕ್ ಮಹಾ ಸಾಗರದತ್ತ ಅಚ್ಚರಿದಾಯಕವಾಗಿ ತಿರುಗಿಕೊಂಡಿತ್ತು. ಹೀಗೆ ಸಾಗಿ ಬಂದ ಜೀವ ನದಿಯೀಗ ಸಾವಿನತ್ತ ಚಲಿಸುತ್ತಿದೆ. ಹೀಗೆಯೇ ಬಿಟ್ಟರೆ ಅದುವೇ ಜಗತ್ತಿನ ವಿನಾಶಕ್ಕೆ ಮುನ್ನುಡಿಯಾಗುತ್ತದೆ ಅನ್ನೋದರಲ್ಲಿ ಯಾವ ಸಂದೇಹವೂ ಇಲ್ಲ!