ಭಾರತೀಯ ಚಿತ್ರರಂಗದ ಮೊದಲ ಸೂಪರ್ ಸ್ಟಾರ್ ಅಂತನೇ ಖ್ಯಾತಿ ಪಡೆದಿರೋ ತಲೈವಾ, ಏಷಿಯಾದ ಹೈಯೆಸ್ಟ್ ಪೇಯ್ಡ್ ಆಕ್ಟರ್ ಅನ್ನೋ ಸತ್ಯ ಎಲ್ಲರಿಗೂ ಗೊತ್ತೆಯಿದೆ. ರೆಮ್ಯೂನರೇಷನ್ ವಿಚಾರದಲ್ಲಿ ಜಾಕಿಚಾನ್‌ರನ್ನೂ ಮೀರಿಸಿರೋ ಶಿವಾಜಿ, ಒಂದು ಚಿತ್ರಕ್ಕೆ ನೂರು ಕೋಟಿಗಿಂತ ಅಧಿಕ ಸಂಭಾವನೆ ಪಡೆದಿದ್ದು ಉದಾಹರಣೆ ಇದೆ. ಅಚ್ಚರಿ ಅಂದರೆ ತಲೈವಾ ತಮ್ಮ ಮುಂದಿನ 171ನೇ ಸಿನಿಮಾಗೆ 250 ಕೋಟಿ ಜೇಬಿಗಿಳಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿಯಿದೆ. ಜೈಲರ್ ಸಿನಿಮಾಗೆ 100 ಕೋಟಿ ಸಂಭಾವನೆ ಕೊಟ್ಟು, ಲಾಭದಲ್ಲೂ ಶೇರ್ ಕೊಟ್ಟು, ದುಬಾರಿ ಕಾರ್‌ನ ಗಿಫ್ಟ್ ಮಾಡಿದ್ದ ಸನ್‌ಪಿಕ್ಚರ್ ಸಂಸ್ಥೆ, ತಲೈವಾ 171ನೇ ಚಿತ್ರಕ್ಕೆ 250 ಕೋಟಿ ಕೊಡಲು ಒಪ್ಪಿಕೊಂಡಿದೆ ಎನ್ನುವ ಧಮಾಕೇದಾರ್ ಸಮಾಚಾರ ಸೌತ್ ಸಿನಿದುನಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಹೀಗಿರುವಾಗಲೇ, ಲಾಲ್ ಸಲಾಂ ಸಿನಿಮಾಗೆ ಸೂಪರ್ ಸ್ಟಾರ್ ರಜನಿಕಾಂತ್ ಅವ್ರು ಪಡೆದಿರೋ ಸಂಭಾವನೆ ಬಗ್ಗೆ ಬಿಗ್ ಬ್ರೇಕಿಂಗ್ ನ್ಯೂಸ್ ವೊಂದು ಹೊರಬಿದ್ದಿದೆ.
ಲಾಲ್ ಸಲಾಂ…. ತಲೈವಾ ಸ್ಪೆಷಲ್ ರೋಲ್‌ನಲ್ಲಿ ಧಗಧಗಿಸಿರೋ, ಐಶ್ವರ್ಯ ರಜನಿಕಾಂತ್ ಆಕ್ಷನ್ ಕಟ್ ಹೇಳಿರೋ ಚಿತ್ರ. ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ತಿದೆ. ಒಂದು ನಿಮಿಷ 29 ಸೆಕೆಂಡ್ ಇರುವ ಲಾಲ್ ಸಲಾಂ ಟ್ರೇಲರ್ ನೋಡಿ ತಲೈವಾ ಅಭಿಮಾನಿಗಳು ಜೈಲರ್ ನಂತರ ಅನದರ್ ಬ್ಲಾಕ್‌ಬಸ್ಟರ್ ಲೋಡಿಂಗ್ ಅಂತಿದ್ದಾರೆ. ಈ ಮಧ್ಯೆ ಬಾಬಾ ಸಂಭಾವನೆ ವಿಚಾರ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಮಗಳ ನಿರ್ದೇಶನದ ಸಿನಿಮಾದಲ್ಲಿ ತಲೈವಾ 1 ನಿಮಿಷಕ್ಕೆ 1 ಕೋಟಿಯಂತೆ, 40 ನಿಮಿಷಕ್ಕೆ ಭರ್ತಿ 40 ಕೋಟಿ ರೆಮ್ಯೂನರೇಷನ್ ತಗೊಂಡಿದ್ದಾರೆನ್ನುವ ಮ್ಯಾಟ್ರು ಕಾಲಿವುಡ್ ಅಂಗಳದಲ್ಲಿ ಕೇಕೆ ಹೊಡೆಯುತ್ತಿದೆ.
ಹೌದು, ಲಾಲ್ ಸಲಾಂ ಸಿನಿಮಾದಲ್ಲಿ ತಲೈವಾ 40 ನಿಮಿಷ ತೆರೆಮೇಲೆ ಕಾಣಿಸಿಕೊಳ್ತಾರಂತೆ. ಈ 40 ನಿಮಿಷಕ್ಕೆ 40 ಕೋಟಿಯೇ ಸಂಭಾವನೆ ಪಡೆದಿದ್ದಾರೆನ್ನುವುದು ಸಿನಿದುನಿಯಾದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ. ನಾಳೆ ಲಾಲ್ ಸಲಾಂ ಚಿತ್ರ ಅದ್ದೂರಿಯಾಗಿ ತೆರೆಕಾಣ್ತಿದೆ. ಕಳೆದ ವರ್ಷ ಜೈಲರ್ ಚಿತ್ರದಲ್ಲಿ ಟೈಗರ್ ಮುತ್ತುವೇಲ್ ಪಾಂಡಿಯನ್ ಆಗಿ ಘರ್ಜಿಸಿ, ಗಲ್ಲಾಪೆಟ್ಟಿಗೆನಾ ಶೇಕ್ ಶೇಕ್ ಮಾಡಿ 650 ಕೋಟಿ ಕೊಳ್ಳೆ ಹೊಡೆದು ಕೊಟ್ಟಿದ್ದ ಶಿವಾಜಿ, ಲಾಲ್ ಸಲಾಂ ಮೂಲಕ ಮೊಯ್ದೀನ್ ಭಾಯ್ ಆಗಿ ಕಣಕ್ಕಿಳಿಯುತ್ತಿದ್ದಾರೆ. ಪುತ್ರಿ ಐಶ್ವರ್ಯ ರಜನಿಕಾಂತ್ ನಿರ್ದೇಶಿಸಿರೋ ʻಲಾಲ್ ಸಲಾಂʼ ಚಿತ್ರ, ಹಿಂದೂ-ಮುಸ್ಲಿಂ ಧರ್ಮಗಳ ನಡುವಿನ ಘರ್ಷಣೆ ಮತ್ತು ಸಾಮರಸ್ಯದ ಕಥೆಯನ್ನು ವಿವರಿಸಲಿದ್ದು, ಕ್ರೀಡಾ ಕಥನವೂ ಚಿತ್ರದಲ್ಲಿ ಅಡಕವಾಗಿದೆ. ಪಡೆಯಪ್ಪನ ಜೊತೆಗೆ ಭಾರತ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಕಪಿಲ್ ದೇವ್ ಕೂಡ ತೆರೆಹಂಚಿಕೊಂಡಿದ್ದು, ಇಬ್ಬರು ದಿಗ್ಗಜರನ್ನ ಬಿಗ್‌ಸ್ಕ್ರೀನ್ ಮೇಲೆ ನೋಡೋದಕ್ಕೆ ಫ್ಯಾನ್ಸ್ ಕಾತುರರಾಗಿದ್ದಾರೆ.