‘ಪಲ್ಲಕ್ಕಿ’ ಸಿನಿಮಾದ ಖ್ಯಾತಿಯ ಕೆ. ನರೇಂದ್ರಬಾಬು ನಿರ್ದೇಶನದಲ್ಲಿ ಮೂಡಿಬಂದಿರುವ ‘13’ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ರಾಘವೇಂದ್ರ ರಾಜ್ಕುಮಾರ್, ಶ್ರುತಿ ಜೋಡಿಯಾಗಿ ಅಭಿನಯಿಸಿರುವ ‘13’ ಸಿನಿಮಾದಲ್ಲಿ ನಾಯಕ ನಟ ರಾಘವೇಂದ್ರ ರಾಜಕುಮಾರ್ ನಿವೃತ್ತ ಸೈನಿಕ ಹಾಗೂ ಗುಜರಿ ಅಂಗಡಿ ಮಾಲೀಕ ಮೋಹನ್ ಕುಮಾರ್ ಪಾತ್ರದಲ್ಲಿ ಮತ್ತು ಶ್ರುತಿ ಟೀ ಅಂಗಡಿ ನಡೆಸುವ ಸಾಯಿರಾಬಾನು ಎಂಬ ಮುಸ್ಲಿಂ ಮಹಿಳೆಯ ಪಾತ್ರದಲ್ಲಿ ನಟಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಭಾಗದಲ್ಲಿ ನಡದೆ ಒಂದು ನೈಜ ಘಟನೆಯನ್ನು ಸ್ಫೂರ್ತಿಯಾಗಿಟ್ಟುಕೊಂಡು ತೆರೆಗೆ ತರಲಾಗಿರುವ ಈ ಸಿನಿಮಾದಲ್ಲಿ ನಟ ಪ್ರಮೋದ್ ಶೆಟ್ಟಿ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿದ್ದಾರೆ. ಚಿಕ್ಕಮಗಳೂರು ಸುತ್ತಮುತ್ತ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ.
‘ಯುವಿ ಪ್ರೊಡಕ್ಷನ್’ ಅಡಿಯಲ್ಲಿ ಕೆ. ಸಂಪತ್ ಕುಮಾರ್, ಹೆಚ್. ಎಸ್. ಮಂಜುನಾಥ್, ಮಂಜುನಾಥ ಗೌಡ ಹಾಗೂ ಸಿ. ಕೇಶವಮೂರ್ತಿ ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಗಂಡ- ಹೆಂಡತಿ ಅಂದರೆ ಹೀಗಿರಬೇಕು ಎನ್ನುವಂತಿದ್ದ ದಂಪತಿಗಳಿಬ್ಬರೂ ತಮ್ಮದಲ್ಲದ ತಪ್ಪಿಗೆ ಇಡೀ ಜೀವನ ಯಾವ ರೀತಿ ಕಷ್ಟಪಡುತ್ತಾರೆ ಎಂಬುದನ್ನು ಥ್ರಿಲ್ಲರ್ ಕಥೆಯ ಮೂಲಕ ಹೇಳುವ ಚಿತ್ರ ಇದಾಗಿದೆ. ಮಂಜುನಾಥ್ ನಾಯ್ಡು ಅವರ ಛಾಯಾಗ್ರಹಣ ಹಾಗೂ ಸೋಹನ್ ಬಾಬು ಅವರ ಸಂಗೀತ ಈ ಚಿತ್ರಕ್ಕಿದೆ. ಇತ್ತೀಚೆಗೆ ‘13’ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಚಿತ್ರಕ್ಕೆ ‘ಯು/ಎ’ ಪ್ರಮಾಣಪತ್ರ ನೀಡಿದೆ. ಇದೇ ಖುಷಿಯಲ್ಲಿರುವ ಚಿತ್ರತಂಡ ಇದೇ ಸೆಪ್ಟೆಂಬರ್ ನಲ್ಲಿ ಈ ಚಿತ್ರವನ್ನು ತೆರೆಗೆ ತರಲು ಯೋಜನೆ ಹಾಕಿಕೊಂಡಿದೆ.