ಹಿರಿಯ ಕಲಾವಿದರಾದ ರಾಘವೇಂದ್ರ ರಾಜಕುಮಾರ್, ಶೃತಿ ಹಾಗೂ ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಭಾವೈಕ್ಯತೆಯ ಸಂದೇಶ ಸಾರುವ, ಕುತೂಹಲಕಾರಿ ಕಥಾಹಂದರ ಹೊಂದಿರುವ ಚಿತ್ರ ‘13’ ಇದೇ ಸೆ. 15ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಈ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಮೋಹನ್ ಕುಮಾರ್ ಎಂಬ ಹಿಂದೂ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದರೆ, ನಟಿ ಶೃತಿ ಅವರು ಸಾಹಿರಾಭಾನು ಎಂಬ ಮುಸ್ಲಿಂ ಮಹಿಳೆಯ ಪಾತ್ರ ನಿರ್ವಹಿಸಿದ್ದಾರೆ.
ಚಿತ್ರದ ಬಿಡುಗಡೆಗೂ ಮೊದಲು ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದ ‘13’ ಚಿತ್ರತಂಡ ಸಿನಿಮಾದ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿತು. ಮೊದಲಿಗೆ ಮಾತನಾಡಿದ ನಟ ರಾಘವೇಂದ್ರ ರಾಜಕುಮಾರ್, ‘ನಾನು ಈ ಕಥೆ ಕೇಳಬೇಕಾದರೆ ಅಲ್ಲಿ ನನಗೆ ನಾಯಕನ ಪಾತ್ರ ಕಾಣಲಿಲ್ಲ, ಒಂದು ಪಾತ್ರ ಕೊನೇವರೆಗೆ ಪ್ರೇಕ್ಷಕರನ್ನು ಕರೆದುಕೊಂಡು ಹೋಗುತ್ತೆ ಅದೇ ನನ್ನ ಪಾತ್ರ ಅನಿಸಿತು. ಈ ಚಿತ್ರದ ನಿಜವಾದ ಹೀರೋ ಅಂದರೆ ಕಂಟೆಂಟ್, ಈಗ ಜನರನ್ನು ಥೇಟರ್ ವರೆಗೂ ಕರೆದುಕೊಂಡು ಬರುವ ಜವಾಬ್ದಾರಿ ನಿಮ್ಮ ಮೇಲಿದೆ. ಈ ಚಿತ್ರದಲ್ಲಿ ನಾನೊಬ್ಬ ಹಿಂದೂ, ಶೃತಿ ಅವರು ಮುಸ್ಲಿಂ ಮಹಿಳೆ, ಈತ ಅಲ್ಲಾ ಕಾಪಾಡು ಅಂದರೆ, ಆಕೆ ಕೃಷ್ಣಾ ಕಾಪಾಡು ಅನ್ನುತ್ತಾಳೆ. ಚಿತ್ರದಲ್ಲಿ ಇಬ್ಬರೂ ತಮ್ಮ ಜಾತಿ, ಧರ್ಮವನ್ನು ಬಿಟ್ಟು ಒಂದಾಗಿಬಿಡ್ತಾರೆ. ಅದೇ ನನಗೆ ಇಷ್ಟವಾಗಿದ್ದು’ ಎಂದು ಹೇಳಿದರು.
ನಿರ್ದೇಶಕ ನರೇಂದ್ರ ಬಾಬು ಮಾತನಾಡಿ, ‘ಸಿನಿಮಾ ನಾವಂದುಕೊಂಡಿದ್ದಕ್ಕಿಂತಲೂ ಅದ್ಭುತವಾಗಿ ಮೂಡಿಬಂದಿದೆ. 13 ಕೋಟಿ ಹಣದ ಸುತ್ತ ನಡೆಯುವ ಕಥೆಯಿದು. ಆರಂಭದಿಂದ ಅಂತ್ಯದವರೆಗೂ ಚಿತ್ರದ ಕೊನೆಗೆ ಏನಾಗುತ್ತೆ ಅಂತ ಯಾರಿಗೂ ಗೊತ್ತಾಗುವುದಿಲ್ಲ. ಸಿನಿಮಾದ ಎಲ್ಲರಿಗೂ ಅವರವರ ಪಾತ್ರಬಿಟ್ಟು ಬೇರೇನೂ ಗೊತ್ತಿಲ್ಲ. ಪಾರ್ಟ್ 2ಗೆ ಕಥೆ ರೆಡಿ ಇದೆ. ಹಾಡು, ಟೀಸರನ್ನು ನೋಡಿದವರೆಲ್ಲರೂ ಇಷ್ಟಪಟ್ಟಿದ್ದಾರೆ. ಚಿತ್ರದ ಬಗ್ಗೆ ಈವರೆಗೂ ಯಾರಿಂದಲೂ ಒಂದಾದರೂ ನೆಗೆಟಿವ್ ಮೆಸೇಜ್ ಬಂದಿಲ್ಲ. ಎಲ್ಲರೂ ಯಾವಾಗ ಸಿನಿಮಾ ಬರುತ್ತೆ ಅಂತಾನೇ ಕೇಳ್ತಿದಾರೆ’ ಎಂದರು.
ನಟರಾದ ಪ್ರಮೋದ್ ಶೆಟ್ಟಿ, ಲೋಕೇಶ್, ದಿಲೀಪ್ ಪೈ, ವಿನಯ ಸೂರ್ಯ ತಮ್ಮ ಪಾತ್ರಗಳ ಕುರಿತಂತೆ ಮಾತನಾಡಿದರು. ನಿರ್ಮಾಪಕರಾದ ಮಂಜುನಾಥ ಗೌಡ, ಮಂಜುನಾಥ್ ಹೆಚ್.ಎಸ್, ಕೇಶವಮೂರ್ತಿ ಸಿ. ಚಿತ್ರದ ಕುರಿತು ತಮ್ಮ ಭರವಸೆ ವ್ಯಕ್ತಪಡಿಸಿದ್ದಾರೆ.