ಪ್ರತೀ ವರ್ಷ ಮಳೆಗಾಲ ಕಳೆದು ಬೇಸಿಗೆ ಬರುತ್ತಲೇ ಹಚ್ಚ ಹಸುರು ಹೊದ್ದು ನಿಂತ ಅರಣ್ಯ ಪ್ರದೇಶಕ್ಕೆ ಕಾಡ್ಗಿಚ್ಚಿನ ಕಂಟಕ ಎದುರಾಗುತ್ತೆ. ಅದೆಷ್ಟೋ ವರ್ಷಗಳ ಕಾಲ ರಚನೆಯಾದ ಕಾಡುಗಳು, ಅದರೊಳಗಿರುವ ಜೀವರಾಶಿಗಳೆಲ್ಲ ಅನ್ಯಾಯವಾಗಿ ಸುಟ್ಟು ಕರಕಲಾಗುತ್ತವೆ. ನೀರು ಗಾಳಿ ಮತ್ತು ಬೆಂಕಿಯ ಮುಂದೆ ಅದ್ಯಾವತ್ತಿಗೂ ಮನುಷ್ಯರ ಆಟ ನಡೆಯೋದಿಲ್ಲ ಅಂತೊಂದು ಮಾತಿದೆ. ಆದರೆ, ಆಧುನಿಕ ಮನುಷ್ಯರು ಅವುಗಳ ಮುಂದೆ ಎದೆಯುಬ್ಬಿಸಿಕೊಂಡು ಅಹಂ ಪ್ರದರ್ಶನ ಮಾಡುತ್ತಲೇ ಇದ್ದಾರೆ. ಇದರ ವಿರುದ್ಧ ಪ್ರಕೃತಿ ನಾನಾ ತೆರನಾಗಿ ಪ್ರತೀಕಾರ ತೀರಿಸಿಕೊಳ್ಳುತ್ತಾ ಬಂದಿದೆ. ಒಂದು ದಿಕ್ಕಿನಲ್ಲಿ ಅಭಿವೃದ್ಧಿ ಮಂತ್ರ ಪಠಿಸುತ್ತಾ, ಆ ಝಗಮಗದಲ್ಲಿ ಅರಣ್ಯ ನಾಶ ಮಾಡುವ ಪ್ರಕ್ರಿಯೆ ವ್ಯಾಪಕವಾಗಿ ನಡೆಯುತ್ತಿದೆ. ಬರೀ ಇಷ್ಟೇ ಅಲ್ಲದೆ ಇದ್ದಕ್ಕಿದ್ದಂತೆ ಬೀಳೋ ಬೆಂಕಿ ಕೂಡಾ ಪ್ರತೀ ವರ್ಷ ಇಡೀ ವಿಶ್ವದಲ್ಲಿ ಹೆಕ್ಟೇರುಗಟ್ಟಲೆ ಅರಣ್ಯ ನಾಶಕ್ಕೆ ಕಾರಣವಾಗುತ್ತಿದೆ.
ಹೀಗೆ ಅರಣ್ಯಕ್ಕೆ ಬೆಂಕಿ ಬಿದ್ದು, ಅದರ ರಕ್ಕಸ ಕೆನ್ನಾಲಿಗೆ ಸೆಟೆದು ನಿಂತರೆ ಅದರ ಮುಂದೆ ಮನುಷ್ಯನ ಯಾವ ಆವಿಷ್ಕಾರಗಳ ಆಟವೂ ನಡೆಯೋದಿಲ್ಲ. ಕಂಡ ಕಂಡ ದೇಶಗಳ ನಡುವೆ ಮಸಲತ್ತು ನಡೆಸುತ್ತಾ, ತಾನೇ ಜಗತ್ತಿನ ದೊಡ್ಡಣ್ಣ ಅಂತೆಲ್ಲ ಮೆರೆಯುವ ಅಮೆರಿಕದಂಥಾ ಅಮೆರಿಕಾವನ್ನೇ ಕಾಡ್ಗಿಚ್ಚು ಬೆಚ್ಚಿ ಬೀಳಿಸಿದೆ. ಸುಮನ್ಮನೊಮ್ಮೆ ಯೋಚಿಸಿ ನೋಡಿ. ಅಮೆರಿಕಾ ಮಂದಿಗೆ ಇಂಥಾ ನೈಸರ್ಗಿಕ ವಿಪತ್ತುಗಳನ್ನು ಎದುರಿಸುವ ಎಲ್ಲ ತಾಕತ್ತೂ ಇದೆ. ಆದರೆ ಅದನ್ನು ಕಂಟ್ರೋಲು ಮಾಡುವಲ್ಲಿ ಮಾತ್ರ ಇತರೇ ದೇಶಗಳಂತೆಯೇ ಅಕ್ಷರಶಃ ಅಸಹಾಯಕರಾಗಿದ್ದಾರೆ. ಲಾಸ್ ಏಂಜಲೀಸಿನಲ್ಲಿ ತೂರಿ ಬಂದ ಬೆಂಕಿಯ ಕೆನ್ನಾಲಿಗೆ ಎಲ್ಲವನ್ನೂ ಸರ್ವನಾಶ ಮಾಡಿದೆ. ಅನ್ನು ನೋಡುತ್ತಾ ಕಣ್ಣೀರು ಹಾಕೋದರ ಹೊರತಾಗಿ ಅಮೆರಿಕಾ ಮಂದಿಗೆ ಮತ್ಯಾವ ದಾರಿಗಳೂ ಇರಲಿಲ್ಲ. ಹಾಗಾದರೆ, ಇಂಥಾ ಕಾಡ್ಗಿಚ್ಚು ಹೇಗೆ ಹಬ್ಬುತ್ತೆ? ಅದರ ಹಿಂದಿರೋ ಅಸಲೀ ವಿಚಾರಗಳೇನು ಅಂತ ಹುಡುಕ ಹೋದರೆ ಒಂದಷ್ಟು ಸೂಕ್ಷ್ಮ ಸಂಗತಿಗಳು ಜಾಹೀರಾಗುತ್ತವೆ!
ಕಾಡ್ಗಿಚ್ಚಿನ ಹಿಂದಿರೋದೇನು?
ಪ್ರತೀ ಬೇಸಿಗೆ ಬಂದಾಗ ಸೃಷ್ಟಿಯಾಗುತ್ತದಲ್ಲಾ ಕಾಡ್ಗಿಚ್ಚು? ಅದು ಸೃಷ್ಟಿಯಾಗೋದು ಹೇಗೆ ಅನ್ನೋದರ ಬಗ್ಗೆರೀ ಸಮನಾಜದಲ್ಲಿ ಚಿತ್ರವಿಚಿತ್ರವಾದ ನಂಬಿಕೆಗಳಿದ್ದಾವೆ, ಕಲ್ಪನೆಗಳೂ ಇದ್ದಾವೆ. ಅದರ ಸುತ್ತಲೇ ರಣ ರೋಚಕವಾದ ಒಂದಷ್ಟು ವಿಚಾರಗಳೂ ಕೂಡಾ ಹಬ್ಬಿಕೊಂಡಿರೋದು ಸುಳ್ಳಲ್ಲ. ಜಿಂಕೆಗಳು ಕಾದಾಡುವಾಗ ಅವುಗಳ ಕೋಡುಗಳು ಒಂದಕ್ಕೊಂದು ತಿಕ್ಕಿಕೊಂಡು, ಅಲ್ಲಿ ಘರ್ಷಣೆ ಉಂಟಾಗಿ ಬೆಂಕಿ ಹತ್ತಿಕೊಳ್ಳುತ್ತದೆ ಅನ್ನೋದು ಜಪ್ರಿಯ ನಂಬಿಕೆ. ಮರಗಳು ಗಾಳಿ ಬಂದಾಗ ಒಂದಕ್ಕೊಂದು ತಾಕಿದಾಗ, ಕೆಲ ಮರಗಳ ನಡುವೆ ಬೆಂಕಿ ಹೊತ್ತಿಕೊಳ್ಳುತ್ತದೆಂಬುದೂ ಕೂಡಾ ಜನಪ್ರಿಯ ನಂಬಿಕೆ. ಇನ್ನು ಕಾಡೊಳಗೆ ತಲೆ ಎತ್ತಿ ನಿಂತಿರೋ ಬಿದಿರೆಂಬುದಂತೂ ಕಾಡ್ಗಿಚ್ಚಿನ ವಿಚಾರದಲ್ಲಿ ಸದಾ ಬಿದಿರು ಆರೋಪಿ ಸ್ಥಾನದಲ್ಲಿ ನಿಲ್ಲುತ್ತದೆ. ಯಥಾ ಪ್ರಕಾರ ಬಿದಿರುಗಳು ಒಂದಕ್ಕೊಂದು ತಾಕುತ್ತಾ ಬೆಂಕಿ ಹತ್ತಿಕೊಳ್ಳುತ್ತದೆ ಅನ್ನೋ ನಂಬಿಕೆಯಂತೂ ಆಳವಾಗಿ ಬೇರೂರಿಕೊಂಡಿದೆ.
ಹಾಗಾದರೆ ಇದೆಲ್ಲವೂ ಸತ್ಯವಾ? ನಿಜಕ್ಕು ಬೆಂಕಿ ಹೇಗೆ ಹುಟ್ಟಿಕೊಳ್ಳುತ್ತೆ ಅನ್ನೋ ಪ್ರಶ್ನೆ ಮೂಡೋದು ಸಹಜ. ವೈಜ್ಞಾನಿಕವಾಗಿಯೂ ಕೂಡಾ ಅದಕ್ಕೆ ಯಾವ ಪುರಾವೆಗಳೂ ಇಲ್ಲ. ಅಷ್ಟಕ್ಕೂ ಕಾಡಿನ ಬೆಂಕಿ ಈ ಯಾವುದರಿಂದಲೂ ಸಂಭವಿಸೋದಿಲ್ಲ. ನಮ್ಮ ದೇಶದಲ್ಲಿ ಸೃಷ್ಟಿಯಾಗೋ ಎಲ್ಲಕ ಕಾಡ್ಗಿಚ್ಚಿನ ಹಿಂದೆಯೂ ಮಾನವನ ಕೈವಾಡವಿದೆ. ಈ ವರೆಗೂ ಕೂಡಾ ನಮ್ಮಲ್ಲಿ ಕಾಡ್ಗಿಚ್ಚಿನ ಬಗ್ಗೆ ನಾನಾ ಅಧ್ಯಯನಗಳು ನಡೆದಿವೆ. ಅವೆಲ್ಲವೂ ಕೂಡಾ ಮೇಲ್ಕಂಡ ವಿಚಾರವನ್ನು ಸಾಬೀತುಗೊಳಿಸಿವೆ. ತೀರಾ ನಮ್ಮ ಸ್ಥಳೀಯ ವಾತಾವರಣವನ್ನೊಮ್ಮೆ ಪರಾಮರ್ಶೇ ನಡೆಸಿ ಹಿರೀಕರನ್ನು ಮಾತಾಡಿಸಿದರೂ ಸಾಕು ಕಾಡಿಗೆ ಬೀಳೋ ಬೆಂಕಿಯ ಹಿಂದಿರೋದು ಮಾನವನೇ ಎಂಬಂಥಾ ಕಟು ವಾಸ್ತವದ ದಿವ್ಯ ದರ್ಶನವಾಗುತ್ತೆ.
ಮನುಷ್ಯರದ್ದೇ ಕಿತಾಪತಿ
ಹಾಗಾದ್ರೆ ಈ ಮಾನವರು ತಮ್ಮನ್ನು ಪೊರೆಯುವ ಕಾಡಿದೆ ಅದೇಕಾಗಿ ಬೆಂಕಿ ಹಚ್ಚುತ್ತಾರೆಂಬ ಪ್ರಶ್ನೆ ಮೂಡಿಕೊಳ್ಳೋದು ಸಹಜ. ಇದಕ್ಕೆ ಸಂಕೀಣವಾದ ಉತ್ತರ ಸಿಗುತ್ತದೆ. ಹೀಗೆ ಜನರು ಕಾಡಿಗೆ ಬೆಂಕಿ ಹಾಕಲು ನಾನಾ ಕಾರಣಗಳಿವೆ. ಬಿದಿರು ಮುಂತಾದ ಅರಣ್ಯ ಸಂಪತ್ತನ್ನು ಕಡಿದು ಸಾಗಿಸುವ ಮಾಫಿಯಾ ಮಂದಿಯೇ ಕಾಡಿಗೆ ಕಿಡಿ ಸೋಕಿಸುತ್ತಾರೆ. ಅರಣ್ಯದಲ್ಲಿ ಬೇಟೆಯಾಡುವವರು ಪ್ರಾಣಿಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡಿಸಲು ಕಾಡಿಗೆ ಬೆಂಕಿ ಕೊಡುವ ಪರಿಪಾಠವೂ ಇದೆ. ಅರಣ್ಯದಲ್ಲಿ ಬೇಸಾಯ ಮಾಡುವವರು ಒಂದು ಬೆಳೆ ಬಂದ ನಂತರ ಮತ್ತೆ ಬೆಳೆಯುವ ಮುನ್ನ ಕಿಚ್ಚಿಡುವ ಸಂಪ್ರದಾಯವಿದೆ. ಹೀಗೆ ಹಚ್ಚಿದ ಬೆಂಕಿ ಅರಣ್ಯದ ಬೇರೆ ಭಾಗಗಳಿಗೆ ಹಬ್ಬಿಕೊಳ್ಳುತ್ತೆ. ಅರಣ್ಯದ ಉತ್ಪನ್ನಗಳನ್ನು ಸಂಗ್ರಹಿಸಲು ಬರುವ ಕೆಲವರು ಹಾವು ಮುಂತಾದ ಸರಿಸೃಪಗಳನ್ನು ನಾಶ ಮಾಡಲು ಬೆಂಕಿ ಹಾಕುತ್ತಾರೆ. ನೋಡ ನೋಡುತ್ತಲೇ ಅದು ದೊಡ್ಡ ಕಾಡಿನ ಬೆಂಕಿಯಾಗಿ ರೂಪಾಂತರ ಹೊಂದುತ್ತೆ.
ಇನ್ನುಳಿದಂತೆ ಕಂಡಲ್ಲಿಗೆ ಲಗ್ಗೆ ಇಡುವ ಪ್ರವಾಸಿಗರ ಪಾಲು ಕಾನ ಬೆಂಕಿಯ ಹಿಂದಿದೆ. ಧೂಮಪಾನ ಮಾಡಿ ಎಸೆದ ಬೀಡಿ, ಸಿಗರೇಟುಗಳಿಂದ ಎಕರೆಗಟ್ಟಲೆ ಕಾಡು ನಾಶವಾಗಿದೆ. ಇಂಥಾ ಅನೇಕ ಉದಾಹರಣೆಗಳಿದ್ದಾವೆ. ಕಾಡಿಗೆ ಹೋಗುವುದರಿಂದಲೇ ವನ್ಯಸಂರಕ್ಷಣೆಯಾಗಿಬಿಡುತ್ತದೆ ಎಂಬ ಭ್ರಮೆಯಿಟ್ಟುಕೊಂಡು ಅಲ್ಲಿ ಹೋಗಿ ಅಡುಗೆ ಮಾಡಿಕೊಳ್ಳಲು ಹಚ್ಚಿದ ಬೆಂಕಿ ಆರಿಸದರೇ ಕಾಡೆ ಸುಟ್ಟುಹೋದ ಘಟನೆಗಳು ಬೇಕಾದಷ್ಟಿವೆ. ಅರಣ್ಯಾಧಿಕಾರಿಯ ವಿರುದ್ಧ ಸೇಡು ತೀರಿಸಿಕೊಳ್ಳುವ ಸುಲಭ ಮಾರ್ಗವೇ ಕಾಡಿಗೆ ಬೆಂಕಿ ಕೊಡುವುದು ಎಂಬಂತಾಗಿದೆ. ಯಾವುದೋ ವೈಮನಸ್ಯ ಕಾಡಿನ ಬೆಂಕಿಯಲ್ಲಿ ಕೊನೆಗೊಂಡಿರುವ ಅನೇಕ ಪ್ರಸಂಗಗಳಿದ್ದಾವೆ. ಈ ಹಿಂದೆ ನಾಗರಹೊಳೆ ಕಾಡಿಗೆ ಜನ ನುಗ್ಗಿ ಪೆಟ್ರೋಲ್ ಸುರಿದು ಬೆಂಕಿ ಹಾಕಿದ್ದ ಘಟನೆ ನಡೆದಿತ್ತು. ಅದೇ ಮಾದರಿಯಲ್ಲಿ ಭದ್ರಾ ಕಾಡಿಗೆ ಬೆಂಕಿ ಹಾಕಲಾಗಿತ್ತು. ಆ ಕಿಚ್ಚಿನಿಂದ ಕಾಡು ಸರ್ವನಾಶವಾಗಿತ್ತು.
ಸರ್ವನಾಶ
ಹೀಗೆ ಕಾಡಿಗೆ ಯಾವ ರೀತಿಯಲ್ಲಿ ಬೆಂಕಿ ತಗುಲಿಕೊಂಡರೂ ಕೂಡಾ ಅದರ ಪರಿಣಾಮ ಭೀಕರವಾಗಿರುತ್ತೆ. ನೆಲದಲ್ಲಿ ವಾಸಿಸೋ ಪ್ರಾಣಿಗಳು, ಕೀಟ, ಹಕ್ಕಿಗಳು ನೇರವಾಗಿ ಕರಕಲಾಗುತ್ತವೆ. ಇದರಿಂದಾಗಿ ಜೀವಜಾಲದ ಒಂದು ಕೊಂಡಿಗೆ ದೊಡ್ಡ ಹೊಡತ ಬೀಳುತ್ತದೆ. ಆಹಾರ ಸರಪಳಿಗೂ ಸಹ ಕುಂದುಂಟಾಗುತ್ತೆ. ಅಲ್ಲಿನ ಫಲವತ್ತಾದ ಮಣ್ಣಿನ ಮೇಲ್ಪದರ ಬೆಂಕಿಯಿಂದ ನಾಶವಾಗುತ್ತದೆ. ಸೂಕ್ಷ್ಮವಾಗಿಒ ಮತ್ತೊಂದಷ್ಟು ಪ್ರತಿಕೂಲ ಪರಿಣಾಮಗಳಾಗುತ್ತವೆ. ಜೈವಿಕ ವಿಘಟನೆಗೆ ಒಳಗಾಗಿ ಮಣ್ಣಿನಪೋಷಕಾಂಶವಾಗ ಬೇಕಿದ್ದ ಒಣಗಿದ ಎಲೆ, ಕೊಂಬೆ ಮುಂತಾದವು ನಾಶವಾಗಿ ಕಾಡೊಳಗೆ ಇಂಗಾಲದ ಅಂಶ ಗಣನೀಯವಾಗಿ ಕಡಿಮೆಯಾಗುತ್ತದೆ.
ಹೇಳಿ ಕೇಳಿ ಧಗ ಧಗಿಸೋ ಬೇಸಿಗೆಯಲ್ಲಿ ನೀರು ಮತ್ತು ಆಹಾರಕ್ಕೆ ತತ್ವಾರವಿರುತ್ತೆ. ಇನ್ನು ಬೆಂಕಿಯಿಂದ ಹಣ್ಣುಬಿಡುವ ಮರಗಳು ಸುಟ್ಟು ಹೋದರೆ ಮಂಗ, ಕರಡಿ, ಮುಸುವ, ಜಿಂಕೆಗಳು ಮಾತ್ರವಲ್ಲದೇ ಆನೆಗಳಿಗೂ ಸಹ ಆಹಾರದ ಕೊರತೆಯನ್ನು ಉಂಟು ಮಾಡುತ್ತದೆ. ಇದರಿಂದಾಗಿ ಅನೇಕ ಪ್ರಾಣಿಗಳು ಹಸಿವಿನಿಂದ ಸಾಯುತ್ತವೆ. ಬೇಸಿಗೆಯಲ್ಲಿ ಆಹಾರ ನೀರು ಕಡಿಮೆಯಾಗಿ ಪ್ರಾಣಿಗಳು ಸಾಯುವುದು ಪ್ರಕೃತಿಯ ಸಹಜ ಚಕ್ರವೇ ಆದರೂ ಮಾನವನ ಹಸ್ತಕ್ಷೇಪವಿರದಿದ್ದಲ್ಲಿ ಕಾಡಿಗೆ ಬೆಂಕಿ ಬೀಳುವುದಿಲ್ಲ ಎಂಬುದು ಸರ್ವ ಕಾಲಕ್ಕೂ ಸತ್ಯದ ಸಂಗತಿ. ನಿಖರವಾಗಿ ಹೇಳೋದಾದರೆ ಕಾಡ್ಗಿಚ್ಚು ತಪ್ಪಿಸಬಹುದಾದ ದುರಂತ. ಆದರೆ ಸ್ವಾರ್ಥ ಲಾಲಸೆಗಳೇ ಮುಖ್ಯವಾಗಿರುವ ಕಲೆಲ ಮಾನವರಿಗೆ ಅರಣ್ಯದ ಕಿಮ್ಮತ್ತಿನ ಬಗ್ಗೆ ಅರಿವಿಲ್ಲ. ತಾವು ಯಾವುದೇ ಕಿಸುರಿಟ್ಟುಕೊಂಡು ಕಿಡಿ ಸೋಕಿದರೂ ಶತಮಾನದ ಜೀವ ವೈವಿಧ್ಯ, ಪ್ರಾಕೃತಿಕ ಹೆಣಿಗೆ ನಾಶವಾಗುತ್ತದೆಂಬ ಖಬರೂ ಕೂಡಾ ಇಲ್ಲ. ಈ ಕಾರಣದಿಂದಲೇ ಪ್ರತೀ ಬೇಸಿಗೆ ಬಂದಾಗಲೂ ಕಾಡಿಗೆ ಕಿಚ್ಚು ಹಬ್ಬೋದು ಖಾಯಂ ಎಂಬಂತಾಗಿದೆ!
ಅಪಾಯಕಾರಿ ರೂಪಾಂತರ. ಪ್ರಕೃತಿಗೆ ಆಯ ಸಂದರ್ಭಕ್ಕೆ ತಕ್ಕುದಾಗಿ ರೂಪಾಂತರ ಹೊಂದುವಂಥಾ ಅದ್ಭುತ ಗುಣವಿದೆ. ಅದಕ್ಕೆ ಬೇಕಾದಂತೆ ತನ್ನನ್ನು ತಾನು ರೂಪಿಸಿಕೊಳ್ಳುವ ಚಮಾತ್ಕಾರಿಕ ಶಕ್ತಿಯೂ ಅದಕ್ಕಿದೆ. ಒಂದು ವೇಳೆ ಕಾಡಿಗೆ ನಿರಂತರವಾಗಿ ಬೆಂಕಿ ಬೀಳುತ್ತಿದ್ದರೆ ಇದು ಪ್ರಕೃತಿ ನಿಧಾನವಾಗಿ ಅದಕ್ಕೆ ಸ್ಪಂದಿಸುತ್ತೆ. ಬೇಗ ಬೆಂಕಿ ಹಿಡಿಯದ ಜಾತಿಯ ಮರಗಳು ಮಾತ್ರವೇ ಹೆಚ್ಚು ಬೆಳೆಯುವಂತೆ ಮಾಡುತ್ತದೆ. ಉಳಿದ ಉಪಯೋಗಿ ಮರಗಳು ನಾಶವಾಗಿ ಪಾರಂಪರಿಕ ಕೊಂಡಿ ಕಡಿದು ಹೋಗುತ್ತೆ. ಇದರ ಪರಿಣಾಮವನ್ನು ಬೆಂಕಿ ಇಟ್ಟ ಮನುಷ್ಯನೂ ಅನುಭವಿಸಬೇಕಾಗುತ್ತದೆ.
ಕಾಡುಗಳ್ಳರ ಹಿಕ್ಮತ್ತು
ಕಾಡಿನ ಗರ್ಭಕ್ಕೆ ನುಗ್ಗಿ ಅರಣ್ಯ ಸಂಪತ್ತನ್ನು ಲೂಟಿ ಹೊಡೆಯೋ ದಂಧೆ ಲಾಗಾಯ್ತಿನಿಂದಲೂ ನಡೆಯುತ್ತಾ ಬಂದಿದೆ. ಕಾಡಿನಿಂದ ಬಿದಿರನ್ನು ಸಾಗಿಸುವ ದಂಧೆಯಂತೂ ಬಹು ಕಾಲದಿಂದಲೂ ನಡೆಯುತ್ತಿದೆ. ಬಿದಿರಿನಿಂದ ಬೆಂಕಿ ಹತ್ತುತ್ತದೆಂದು ಸುಳ್ಳು ಹೇಳಿ ಕಾಡಿನಿಂದ ಬಿದಿರು ಸಾಗಿಸುವ ಷಡ್ಯಂತ್ರ ಬಹು ಕಾಲದಿಂದಲೂ ನಡೆಯುತ್ತಿದೆ. ಈ ದಂಧೆಯಿಂದ ಸಾಕಷ್ಟು ತೊಂದರೆ ಉಂಟಾಗಿದೆ. ಕೊಟ್ಯಂತರ ವರ್ಷಗಳಿಂದ ಬಿದಿರು ಬೇಸಿಗೆಯಲ್ಲಿ ಹೊತ್ತಿ ಉರಿದ ಉದಾಹರಣೆಯಿಲ್ಲ. ಹಾಗಿರುವಾಗ ಈಗ ಹೇಗೆ ಬೆಂಕಿಗೆ ಕಾರಣವಾಗಲು ಸಾಧ್ಯ? ಈ ವಾದಗಳನ್ನು ನ್ಯಾಯಾಲದ ಮೆಟ್ಟಿಲು ಹತ್ತಿ ಯಶಸ್ವಿಯಾಗಿ ಹತ್ತಿಕ್ಕಿದ್ದು ನಮ್ಮ ವನ್ಯಸಂರಕ್ಷಣಾಸಕ್ತರ ನಿಜವಾದ ಗೆಲುವು. ಇಂದು ರಕ್ಷಿತಾರಣ್ಯಗಳಿಂದ ಒಂದು ಹುಲ್ಲುಕಡ್ಡಿಯನ್ನೂ ಹೊರತೆಗೆಯುವಂತಿಲ್ಲ ಎಂಬ ಆದೇಶವನ್ನು ಘನವೆತ್ತ ಸರ್ವೋಚ್ಚ ನ್ಯಾಯಾಲಯ ನೀಡಿದೆ. ಆದರೂ ಈ ಮರ ಕಡಿತಲೆ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ.
ಇನ್ನುಳಿದಂತೆ ಪರಿಸರ ಸಂರಕ್ಷಣೆಯ ಹೆಸರಲ್ಲಿಯೇ ನಾಶ ಮಾಡೋ ಕಾರ್ಯವೂ ನಡೆದು ಬಂದಿದೆ. ಬೇಸಿಗೆಯಲ್ಲಿ ಉಪಯೋಗವಾಗಲೆಂದು ಕಾಡಿನಲ್ಲಿ ನೀರಿನಾರಸರೆಗಳನ್ನು ಉಂಟು ಮಾಡುತ್ತಾರೆ. ಇದು ಮೇಲ್ನೋಟಕ್ಕೆ ಮಾನವೀಯವಾಗಿ ಕಂಡರೂ ಅದು ಅಸಮತೋಲನಕ್ಕೆ ಕಾರಣವಾಗುತ್ತದೆಂದು ಪರಿಸರ ತಜ್ಞರೇ ಹೇಳುತ್ತಾರೆ. ಇದೆಲ್ಲದರಾಚೆ ಬೆಂಕಿಯಂಥಾ ಅನಾಹುತವಾಗದಿರಲೆಂದು ಅರಣ್ಯ ಇಲಾಖೆ ಸಾಕಷ್ಟು ಎಚ್ಚರಿಕೆ ವಹಿಸುತ್ತದೆ. ಬೇಸಿಗೆಗೆ ಮೊದಲೇ ಸೂಕ್ಷ್ಮ ಜಾಗಗಳನ್ನು ಗುರುತಿಸಿ ಅಲ್ಲಿನ ಒಣಹುಲ್ಲು ಇತ್ಯಾದಿಗಳನ್ನು ತೆರವು ಮಾಡಲಾಗುತ್ತದೆ. ಕೆಲವು ಬೇರೆ ಪ್ರದೇಶದಲ್ಲಿ ಬೆಂಕಿಬಿದ್ದರೆ ಅದು ಅಷ್ಟು ಸುಲಭವಾಗಿ ಕಾಡಿಗೆ ದಾಟಿಕೊಳ್ಳುವುದಿಲ್ಲ. ಇದು ಕೇವಲ ಅರಣ್ಯ ಇಲಾಖೆಯ ಕೆಲಸವಲ್ಲ. ಕಾಡಿನ ಆಸುಪಾಸಲ್ಲಿ ವಾಸಿಸುವಂಥಾ ಪ್ರತಿಯೊಬ್ಬರೂ ಕೂಡಾ ಈ ಬಗ್ಗೆ ಗಮನಹರಿಸಬೇಕಿದೆ. ಬಲಿದಾನ
ಇಂಥಾ ಕಾಡುಗಳ ಸಂರಕ್ಷಣೆಗೆ ಟೊಂಕ ಕಟ್ಟಿ ನಿಂತವರು, ಅದಕ್ಕಾಗಿಯೇ ಬಲಿಯಾದವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ದಟ್ಟ ಹಸಿರು ಮತ್ತು ಬೆಟ್ಟಗುಡ್ಡ ಅಪರೂಪದ ಮರಗಳು ಹೇರಳವಾಗಿ ಬೆಳೆದು ನಿಂತು ತಂಪನ್ನೆರೆವ ಕಾಡು, ಪಕ್ಷಿಗಳ ಇಂಚರ, ಸರೀಸೃಪಗಳ ಸದ್ದು, ವಿಶಿಷ್ಟವಾದ ಪಕ್ಷಿಗಳು ಕಾಣಸಿಗುವ ಸಸ್ಯಸಂಪತ್ತು ಹಾಗೂ ವನ್ಯಜೀವಿಗಳನ್ನು ಕಣ್ತುಂಬಿಕೊಳ್ಳಬಹುದಾದ ಅರಣ್ಯ ಸುತ್ತಾಡಿ ಪ್ರಾಣಿ, ಪಕ್ಷಿ, ಅರಣ್ಯ ಸಂಪತ್ತನ್ನು ನೋಡಲು ಎಲ್ಲರೂ ಬಯಸುತ್ತಾರೆ. ಇಂಥಾದ್ದನ್ನು ಕಾಪಾಡಿಕೊಳ್ಳಲು ಹೋಗಿ, ಕಾಡಿಗೆ ಬಿದ್ದ ಬೆಂಕಿ ನಂದಿಸಲು ಹೋಗಿ ಅನೇಕರು ಸತ್ತೇ ಹೋಗಿದ್ದಾರೆ. ಇಂಥಾ ಬಲಿದಾನಗಳನ್ನು ಈ ಸಮಾಜ ನೆನಪಿಟ್ಟುಕೊಳ್ಳೋದಿಲ್ಲ ಎಂಬುದೇ ನಿಜವಾದ ವಿಪರ್ಯಾಸ.
ಇಂಥಾ ಕಾಡ್ಗಿಚ್ಚು ಮಾನವ ನಿರ್ಮಿತ ಎಂಬುದು ಪಕ್ಕಾ ಸಂಗತಿ. ಕಾಡಿಗೆ ಬೆಂಕಿ ಹಚ್ಚುವ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಕೂಗು ಪ್ರಜ್ಞಾವಂತರದ್ದು. ನಾವೆಲ್ಲ ನಮ್ಮ ದುರಾಸೆಗಾಗಿ ಪ್ರಕೃತಿಯನ್ನು ನಾಶ ಪಡಿಸುತ್ತಾ ಹೋದರೆ ಪ್ರಕೃತಿ ಬಲವಾದ ಪೆಟ್ಟುಇ ಕೊಟ್ಟೇ ಕೊಡುತ್ತದೆ. ಕಾಡ್ಗಿಚ್ಚಿನ ತೀವ್ರತೆ ಹೆಚ್ಚಿದರೆ ಹುಲ್ಲಿನ ಬೇರುಗಳು ನಾಶವಾಗಿ ಮಳೆ ಬಂದ ನಂತರವೂ ಬರಡಾಗುತ್ತೆ. ಭೂಮಿ ನೀರಿಂಗಿಸಿಕೊಳ್ಳುವ ಗುಣ ಕಳೆದುಕೊಂಡು, ಭೂ ಕುಸಿತ, ಸಾವು ನೋವುಗಳು ನಿತ್ಯೋತ್ಸವ ಆಚರಿಸುತ್ತವೆ.
ಮಾನವ ಹಸ್ತಕ್ಷೇಪ
ಕಾಡು ತನ್ನ ಪಾಡಿಗೆ ತಾನು ಬೆಳೆದು ನಿಲ್ಲೋ ಅದ್ಭುತ ಶಕ್ತಿ. ಇದರ ಮೇಲೆ ಮಾನವ ಹಸ್ತಕ್ಷೇಪ ನಡೆದರೆ ಅಪಾಯ ಗ್ಯಾರಂಟಿ. ಇದು ಕಾಡು ಹಾಗೂ ಕಾಡುಪ್ರಾಣಿಗಳಿಗೆ ಕಂಟಕವೇ ಆಗಿದೆ. ಮನುಷ್ಯ ಇಂದು ಮನುಷ್ಯನಾಗಿ ಉಳಿದಿಲ್ಲ. ಅರಣ್ಯಕ್ಕೆ ಬೆಂಕಿ ಬೀಳಲು ಕಾರಣಗಳನ್ನು ಹಲವು ಆಯಾಮಗಳಲ್ಲಿ ನೋಡಲಾಗುತ್ತದೆ. ಕಾಡಿನ ನಡುವೆ ತಲೆಯೆತ್ತಿ ನಿಂತ ರೆಸಾರ್ಟ್ ಅಭಿವೃದ್ಧಿ ಕಾಮಗಾರಿಗಳಿಗಾಗಿ ಕಾಡು ನಾಶ ಅವ್ಯಾಹತವಾಗಿ ನಡೆಯುತ್ತಿದೆ. ಅಳಿದುಳಿದ ಕಾಡನ್ನು ಬೆಂಕಿ ಆಪೋಶನ ತೆಗೆದುಕೊಳ್ಳುತ್ತಿದೆ. ಇಂಥಾ ಕಾಡ್ಗಿಚ್ಚಿನಿಂದಾಗುವ ಪರಿಣಾಮವನ್ನು ನಾವೆಲ್ಲ ಬಹು ವರ್ಷಗಳ ಕಾಲ ಅನುಭವಿಸಬೇಕಾಗುತ್ತದೆ. ವೈಜ್ಞಾನಿಕ ವರದಿಗಳ ಪ್ರಕಾರ ದು ಸಾಬೀತಾಗಿದೆ. ಇಂಥಾ ಅಧ್ಯಯನಗಳ ಪ್ರಕಾರ ಹೇಳೋದಾದರೆ, ಅರಣ್ಯಕ್ಕೆ ಬೆಂಕಿ ಬಿದ್ದರೆ ಅದು ಒಟ್ಟಾರೆ ಕಾಡಿನ ಏಳು ವರ್ಷಗಳಷ್ಟು ಸಹಜ ಬೆಳವಣಿಗೆಯನ್ನು ಒಮ್ಮೆಲೆ ಕುಂಠಿತಗೊಳಿಸುತ್ತದೆ. ಹಾಗೆ ಬೆಂಕಿ ಬಿದ್ದ ಜಾಗದಲ್ಲಿ ಮತ್ತೆ ಸಹಜ ಕಾಡೊಂದು ಸೃಷ್ಟಿಯಾಗಲು ನೂರಾರು ವರ್ಷಗಳೇ ಬೇಕಾಗಬಹುದು!