ಕೆಜಿಎಫ್ ನಂತರ ಕನ್ನಡದಲ್ಲಿ ಪ್ಯಾನ್ ಇಂಡಿಯಾ ಟ್ರೆಂಡ್ ಜೋರಾಗಿದೆ. ಜೊತೆಗೆ ಸೀಕ್ವೆಲ್ ಹಾಗೂ ಪ್ರೀಕ್ವೆಲ್ ಟ್ರೆಂಡ್ ಕೂಡ ಶುರುವಾಗಿದ್ದು, ಕೆಲ ಸಿನಿಮಾ ಟೀಮ್‍ಗಳು ಕಣಕ್ಕಿಳಿದಿವೆ. ಕೆಲವ್ರು ಸಪ್ತಸಾಗರದಾಚೆ ತಮ್ಮ ಸುನಾಮಿ ಎಬ್ಬಿಸ್ಬೇಕು ಅಂತ ಹೊರಟರೆ, ಇನ್ನೂ ಕೆಲವ್ರು ನಮ್ಮ ಸಿನಿಮಾ ಈಗಾಗ್ಲೇ ಪ್ಯಾನ್ ಇಂಡಿಯಾ ರೀಚ್ ಆಗಿದೆ, ಇನ್ನೇನಿದ್ರೂ ಪ್ಯಾನ್ ವಲ್ರ್ಡ್ ಅಂತಿದ್ದಾರೆ. ತಮ್ಮ ತಮ್ಮ ಸಿನಿಮಾಗೆ ಕಿಕ್‍ಸ್ಟಾರ್ಟ್ ಕೂಡ ಕೊಟ್ಟಿದ್ದಾರೆ. ಹಾಗಾದ್ರೆ, 2023ನಲ್ಲಿ ಕನ್ನಡದಲ್ಲಿ ಬರಲಿರೋ ಸೀಕ್ವೆಲ್ ಹಾಗೂ ಪ್ರೀಕ್ವೆಲ್ ಸಿನಿಮಾಗಳು ಯಾವ್ಯಾವುದು? ಏನ್ ಕಥೆ? ಆ ಕುರಿತಾದ ಸ್ಟೋರಿ ಇಲ್ಲಿದೆ ನೋಡಿ
ಇಡೀ ಸಿನಿಮಾ ಜಗತ್ತು ಕನ್ನಡ ಚಿತ್ರರಂಗದತ್ತ ಕಣ್ಣರಳಿಸಿ ನೋಡ್ತಿರುವುದು ಗೊತ್ತೆಯಿದೆ. ಕೆಜಿಎಫ್, ಕಾಂತಾರ, ಕಬ್ಜ ಸಿನಿಮಾದ ನಂತರ ಕಂಟೆಂಟ್ ಪ್ಲಸ್ ಕ್ವಾಲಿಟಿ ಮೇಕಿಂಗ್ ಚಿತ್ರಗಳನ್ನ ವಲ್ರ್ಡ್‍ವೈಡ್ ಸಿನಿಮಾ ಮಂದಿ ಸ್ಯಾಂಡಲ್‍ವುಡ್‍ನಿಂದ ನಿರೀಕ್ಷೆ ಮಾಡ್ತಿದ್ದಾರೆ. ಇದೇ ಹೊತ್ತಿಗೆ ಗಂಧದಗುಡಿಯ ಸಿನಿಮಾಮಂದಿಯೂ ಮೈಕೊಡವಿಕೊಂಡು ಎದ್ದು ನಿಂತಿದ್ದಾರೆ. ಈಗಾಗ್ಲೇ ಯೂನಿವರ್ಸಲ್ ಸಬ್ಜೆಕ್ಟ್‍ವುಳ್ಳ ಕಥೆ ಮೂಲಕ ಕಣಕ್ಕಿಳಿದು ಕನ್ನಡಿಗರಿಂದ ಹಾಗೂ ಪರಭಾಷಾ ಪ್ರೇಕ್ಷಕರಿಂದ ಜೈಕಾರ ಹಾಕಿಸಿಕೊಂಡವರು, ಈಗ ಸೀಕ್ವೆಲ್ ಹಾಗೂ ಪ್ರೀಕ್ವೆಲ್ ಮೂಲಕ ಮತ್ತೆ ಅಖಾಡಕ್ಕಿಳಿಯಲು ರೆಡಿಯಾಗ್ತಿದ್ದಾರೆ.
ಕಾಂತಾರ ರಿಲೀಸ್‍ಗೂ ಮುನ್ನ ಪಾರ್ಟ್2 ಮಾಡುವ ಯೋಚನೆ ಇರಲಿಲ್ಲ. ಆದರೆ, ಅದ್ಯಾವಾಗ ಸಿನಿಮಾ ಗ್ಲೋಬಲ್ ಲೆವಲ್ ರೀಚ್ ಆಯ್ತೋ, 16 ಕೋಟಿ ಬಂಡವಾಳದಲ್ಲಿ ತೆಗೆದ ಕಾಂತಾರ ಅದ್ಯಾವಾಗ 400 ಕೋಟಿ ಬಾಚಿಕೊಂಡಿತೋ ಆಗಲೇ ಫಿಲ್ಮ್‍ಟೀಮ್ ಡಿಸೈಡ್ ಮಾಡ್ತು ಪಾರ್ಟ್-2 ಮಾಡೋಣ ಅಂತ. ಆದರೆ ಸೀಕ್ವೆಲ್ ಬದಲಾಗಿ ಪ್ರೀಕ್ವೆಲ್ ಮಾಡೋ ಬಗ್ಗೆ ಶೆಟ್ರು ತೀರ್ಮಾನ ಮಾಡಿದ್ದಾರೆ. ಸದ್ಯ ಕಥೆ ಬರೆಯೋದ್ರಲ್ಲಿ ನಿರ್ದೇಶಕ ಕಮ್ ನಟ ರಿಷಬ್ ಶೆಟ್ಟಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ಮೊದಲ ಭಾಗದಲ್ಲಿ ಪ್ರಕೃತಿ ಮತ್ತು ಮನುಷ್ಯ ನಡುವಿನ ಸಂಘರ್ಷದ ಕಥೆಯನ್ನ ಹೇಳಿದ್ದರು. ಆದ್ರೀಗ ಪ್ರೀಕ್ವೆಲ್‍ನಲ್ಲಿ ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಬಂಧವನ್ನ ಹೇಳಲಿದ್ದಾರಂತೆ. ಜೂನ್‍ನಿಂದ ಶೂಟಿಂಗ್ ಹೊರಡುವ ತಯ್ಯಾರಿಯಲ್ಲಿದ್ದು, ಹೊಂಬಾಳೆ ಸಂಸ್ಥೆ ಬಂಡವಾಳ ಹೂಡಲಿದೆ. ಕಾಂತಾರ ಪಾರ್ಟ್1ನಲ್ಲಿದ್ದ ಬಹುತೇಕ ಕಲಾವಿದರು ಪಾರ್ಟ್2ನಲ್ಲೂ ಮುಂದುವರೆಯಲಿದ್ದಾರೆ.
ಕಬ್ಜ ಬ್ಲಾಕ್‍ಬಸ್ಟರ್ ಹಿಟ್ ಆದ ಬೆನ್ನಲ್ಲೇ ನಿರ್ದೇಶಕ ಕಮ್ ನಿರ್ಮಾಪಕ ಆರ್ ಚಂದ್ರು ಕಬ್ಜ-2 ಘೋಷಣೆ ಮಾಡಿದ್ದಾರೆ. ಯುದ್ಧ ಆರಂಭ ಅಂತೇಳಿ ಐದು ಭಾಷೆಗಳಲ್ಲಿ ಕಬ್ಜ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಖಾಲಿ ಇರುವ ಖುರ್ಚಿ, ಮಾರುದ್ದ ಗನ್ನು, ಹೆಲಿಕ್ಯಾಪ್ಟರ್‍ಗಳ ಹಾರಾಟ, ಯುದ್ಧಭೂಮಿಯ ಚಿತ್ರಣವಿರುವ ಕಬ್ಜ-2 ಪೋಸ್ಟರ್ ನೂರೆಂಟು ಪ್ರಶ್ನೆಗಳನ್ನ ಹುಟ್ಟುಹಾಕಿದೆ. ಪ್ಯಾನ್ ಇಂಡಿಯಾ ಸಿನಿಮಾ ಪ್ರೇಮಿಗಳಲ್ಲಿ ಬೆಟ್ಟದ್ದಷ್ಟು ಕುತೂಹಲ ಮೂಡಿಸಿದೆ. ವಿಶ್ವದಾದ್ಯಂತ 4000 ಥಿಯೇಟರ್‍ಗಳಲ್ಲಿ ರಿಲೀಸ್ ಆದ ಕಬ್ಜ, ಭರ್ಜರಿ 25ದಿನಗಳನ್ನ ಪೂರೈಸಿ, 50ನೇ ದಿನದತ್ತ ಮುನ್ನುಗುತ್ತಿದೆ. ಸದ್ಯ ಪೋಸ್ಟರ್‍ನ್ನಷ್ಟೇ ರಿವೀಲ್ ಮಾಡಿರುವ ಕಬ್ಜ ಕ್ಯಾಪ್ಟನ್, ಶೀಘ್ರದಲ್ಲೇ ಕಬ್ಜ ಪಾರ್ಟ್2 ಬಗ್ಗೆ ಮತ್ತಷ್ಟು ಅಪ್‍ಡೇಟ್ ನೀಡಲಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಹಾಗೂ ನರ್ತನ್ ಕಾಂಬಿನೇಷನ್‍ನಲ್ಲಿ ಭೈರತಿ ರಣಗಲ್ ಸಿನಿಮಾ ಬರ್ತಿದೆ. ಇದು 2017ರಲ್ಲಿ ತೆರೆಕಂಡು ಸಂಚಲನ ಸೃಷ್ಟಿಸಿದ ಮಫ್ತಿ ಸಿನಿಮಾದ ಪ್ರೀಕ್ವೆಲ್ ಸ್ಟೋರಿ. ಮೊದಲ ಭಾಗದಲ್ಲಿ ಮಾಸ್ ಲೀಡರ್ ಶಿವಣ್ಣ ಹಾಗೂ ರೋರಿಂಗ್ ಸ್ಟಾರ್ ಶ್ರೀಮುರುಳಿ ಧಗಧಗಿಸಿದ್ದರು. ಆದರೆ ಈ ಭಾರಿ ಸೆಂಚುರಿ ಸ್ಟಾರ್ ಖದರ್ ತೋರಿಸಲಿದ್ದಾರೆ. ಯಾವ ಕಾರಣಕ್ಕೆ ಭೈರತಿ ರಣಗಲ್ ಅಪರಾಧ ಜಗತ್ತಿನ ದೊರೆಯಾದ ಎಂಬುದನ್ನು ಪ್ರೀಕ್ವೆಲ್ ಮೂಲಕ ನಿರ್ದೇಶಕ ನರ್ತನ್ ಹೇಳಹೊರಟಿದ್ದಾರೆ. ಗೀತ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಪಂಚಭಾಷೆಯಲ್ಲಿ ಈ ಸಿನಿಮಾ ತಯ್ಯಾರಾಗಲಿದೆ. ಘೋಸ್ಟ್, 45, ಕರಟಕ ದಮನಕ, ಜೈಲರ್, ಕ್ಯಾಪ್ಟನ್ ಮಿಲ್ಲರ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಶಿವಣ್ಣ ತೊಡಗಿಸಿಕೊಂಡಿದ್ದಾರೆ.
2019ರಲ್ಲಿ ಎಂ.ಜಿ ಶ್ರೀನಿವಾಸ್ ನಿರ್ದೇಶಿಸಿ, ನಟಿಸಿದ್ದ ಬೀರ್‍ಬಲ್ ಸಿನಿಮಾ ಸೂಪರ್ ಹಿಟ್ಟಾಗಿತ್ತು. ಆ ಸಿನಿಮಾ ರಿಲೀಸ್‍ಗೂ ಮೊದಲೇ ಮೂರು ಭಾಗಗಳಲ್ಲಿ ಈ ಚಿತ್ರ ಬರೋದಾಗಿ ಘೋಷಣೆ ಮಾಡಿದ್ದರು. ಅದ್ರಂತೆ, ಅವರ ಹುಟ್ಟುಹಬ್ಬದಂದು ಸಿನಿಮಾ ಅನೌನ್ಸ್ ಮಾಡಿದ್ದಾರೆ. ಕರುನಾಡ ಚಕ್ರವರ್ತಿಗೆ ಘೋಸ್ಟ್ ಸಿನಿಮಾ ಮಾಡ್ತಿರುವ ಡೈರೆಕ್ಟರ್ ಶ್ರೀನಿ, ಸಿನಿಮ್ಯಾಟಿಕ್ ಯೂನಿವರ್ಸ್ ಕಾನ್ಸೆಪ್ಟ್‍ನ ಕನ್ನಡಕ್ಕೆ ತಂದಿದ್ದಾರೆ. ಘೋಸ್ಟ್‍ನಲ್ಲಿ ಬೀರ್‍ಬಲ್ ಎಂಟ್ರಿ ಮಾಡಿಸಿ ಕ್ಯೂರಿಯಾಸಿಟಿನ ಬಿಲ್ಡ್ ಮಾಡಿ, ಬೀರ್‍ಬಲ್-2 ಟೇಕಾಫ್ ಮಾಡೋ ಯೋಚನೆಯಲ್ಲಿದ್ದಾರೆ.
ಇನ್ನೂ ಡಿಟೆಕ್ಟೀವ್ ದಿವಾಕರನ ಆಗಮನ ಯಾವಾಗ ಅಂತ ಚಿತ್ರಪ್ರೇಮಿಗಳು ಕಾಯ್ತಿದ್ದಾರೆ. ಅನದರ್ ಮಿಸ್ಟ್ರಿರಿಯಸ್ ಕೇಸ್ ಜೊತೆ ದಿವಾಕರ್ ಬರಲಿ ಅಂತ ಎಕ್ಸ್‍ಪೆಕ್ಟ್ ಮಾಡಿದ್ದಾರೆ. ಸದ್ಯ ಕಾಂತಾರ-2 ಚಿತ್ರದಲ್ಲಿ ಬ್ಯುಸಿಯಾಗಿರೋ ರಿಷಬ್ ಶೆಟ್ಟಿ, ಅದ್ಯಾವಾಗ ಜಯತೀರ್ಥ ನಿರ್ದೇಶನದ ಬೆಲ್‍ಬಾಟಮ್ ಅಡ್ಡಕ್ಕೆ ಬರ್ತಾರೋ ಗೊತ್ತಿಲ್ಲ. ಆದರೆ, ನಿಧಿ-ಆದಿ ಮಾತ್ರ ಲವ್ ಮಾಕ್ಟೇಲ್-3 ಅಖಾಡಕ್ಕೆ ಇಳಿಯಲಿದ್ದಾರೆ. ಜೂನ್, ಜುಲೈ ನಿಂದ ಶೂಟಿಂಗ್ ಹೊರಡೋದಕ್ಕೆ ರಿಯಲ್ ಲೈಫ್ ಜೋಡಿ ಅಂಡ್ ರೀಲ್ ಲೈಫ್ ಕಪಲ್ಸ್ ಗಳಾದ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ರೆಡಿಯಾಗಿದ್ದಾರೆ.
ಆದರೆ ಇಡೀ ಜಗತ್ತು ಕುತೂಹಲದಿಂದ ಕಾಯ್ತಿರೋದು ಕೆಜಿಎಫ್-3 ಯಾವಾಗ ಅಂತ. ಈ ಕುತೂಹಲದ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಕೆಜಿಎಫ್ ಪಾರ್ಟ್2 ಬಿಡುಗಡೆಯಾಗಿ ಒಂದು ವರ್ಷ ಆಯ್ತು. ಆದರೆ, ಸಿನಿಮಾ ತಂಡದ ಕಡೆಯಿಂದ ಅಧಿಕೃತವಾಗಿ ಕೆಜಿಎಫ್-3 ಘೋಷಣೆಯಾಗಿಲ್ಲ. ಸೀಕ್ವೆಲ್ ಬರೋದಂತೂ ಸತ್ಯ. ಅದು 3ನೇ ಫ್ರಾಂಚೈಸ್ ಮಾತ್ರವಲ್ಲ 4,5,6 ಹೀಗೆ ಬರುತ್ತಲೇ ಇರುತ್ತವೆಂದು ನಿರ್ಮಾಪಕ ವಿಜಯ್ ಕಿರಗಂದೂರ್ ಬಹಳ ಹಿಂದೆಯೇ ಹೇಳಿಕೊಂಡಿದ್ದಾರೆ. ಹೀಗಾಗಿ ಕಾದುನೋಡದೇ ಬೇರೆ ದಾರಿಯಿಲ್ಲ.