ಬಾಲಿವುಡ್ ಬಾಬಾ ಸಂಜಯ್ ದತ್ತ್ ಕೆಜಿಎಫ್ ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಗ್ರ್ಯಾಂಡ್ ಎಂಟ್ರಿಕೊಟ್ಟಿದ್ದು, ಅಧೀರನ ಪಾತ್ರದಿಂದ ಬಾಲಿವುಡ್ ಮುನ್ನಭಾಯ್ ಸೆಕೆಂಡ್ ಇನ್ನಿಂಗ್ಸ್ ಶುರುವಾಗಿದ್ದು ನಿಮಗೆಲ್ಲ ಗೊತ್ತೆಯಿದೆ. ಸದ್ಯ, ಸಂಜುಬಾಬ ಹಿಂದಿಗಿಂತ ಸೌತ್ ಸಿನಿಮಾಗಳಲ್ಲೇ ಹೆಚ್ಚು ಕಾಣಿಸಿಕೊಳ್ತಿದ್ದಾರೆ. ದಳಪತಿ ಜೊತೆ ಲಿಯೋದಲ್ಲಿ ಆಂಟನಿ ದಾಸ್ ಆಗಿ ಧಗಧಗಿಸಿದ ಬಾಬ, ಈಗ ಪುರಿ ಜಗನ್ನಾಥ್ ನಿರ್ದೇಶನದ ಡಬಲ್ ಇಸ್ಮಾರ್ಟ್ ಸಿನಿಮಾದ ಭಾಗವಾಗಿದ್ದಾರೆ. ಇನ್ನೂ ನಿಮಗೆಲ್ಲ ತಿಳಿದಿರುವಂತೆ ಕೆಡಿ ಚಿತ್ರದ ಮೂಲಕ ಅಧೀರನನ್ನ ಶೋ ಮ್ಯಾನ್ ಪ್ರೇಮ್ ಅವ್ರು ಮತ್ತೆ ಕನ್ನಡಕ್ಕೆ ಕರೆತಂದಿದ್ದಾರೆ. ಹೈವೋಲ್ಟೇಜ್ ಆಕ್ಷನ್ ಥ್ರಿಲ್ಲರ್ ಕೆಡಿಗಾಗಿ ಸದ್ಯ ಪ್ಯಾನ್ ಇಂಡಿಯಾ ಎದುರುನೋಡ್ತಿದೆ. ಟೈಟಲ್ ಟೀಸರ್ ನೋಡಿ ಹುಚ್ಚೆದ್ದಿರೋ ಸಿನಿಮಾ ಪ್ರೇಮಿಗಳು, ಬೆಂಕಿಚೆಂಡು ಧ್ರುವ ಸರ್ಜಾ ಹಾಗೂ ಅಧೀರನ ಜುಗಲ್ಬಂಧಿ ಹೇಗಿರಬಹುದು ಅಂತ ಕಣ್ಣರಳಿಸಿದ್ದಾರೆ. ಹೀಗಿರುವಾಗಲೇ ಶೋ ಮ್ಯಾನ್ ಪ್ರೇಮ್ ಅವ್ರು ಸಂದರ್ಶನವೊಂದರಲ್ಲಿ ಅಧೀರನ ಬಗ್ಗೆ ಅಚ್ಚರಿ ಬಿಚ್ಚಿಟ್ಟಿದ್ದಾರೆ.
ಹೌದು, ಕೆಡಿ ಸಿನಿಮಾದ ಬಗ್ಗೆ ಹೆಚ್ಚುನು ರಿವೀಲ್ ಮಾಡದೇ ಕುತೂಹಲ ಕಾಯ್ದಿರಿಸಿಕೊಂಡಿರೋ ಪ್ರೇಮ್ ಸಾಹೇಬ್ರು, ಇತ್ತೀಚೆಗೆ ಖಾಸಗಿ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ 42 ದಿನಗಳ ಕಾಲ ನಡೆದ ನೈಟ್ ಶೂಟಿಂಗ್ ಬಗ್ಗೆ ಮಾಹಿತಿ ಹೊರಹಾಕಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭರ್ತಿ 42 ದಿನಗಳ ಕಾಲ ಚಿತ್ರೀಕರಣ ನಡೆಸಿದೆವು. ಆ 42 ದಿನವೂ ನೈಟ್ ಶೂಟಿಂಗೇ ಆಗಿತ್ತು. ಒಂದೇ ಷೆಡ್ಯೂಲ್ಡ್ನಲ್ಲಿ ರಾತ್ರಿ ವೇಳೆ ಚಿತ್ರೀಕರಣ ಮಾಡಿಕೊಂಡ ನಮಗೆ, ಬಾಬ ಫುಲ್ ಸಪೋರ್ಟ್ ಮಾಡಿದರು. ಸಣ್ಣದೊಂದು ಕಂಪ್ಲೆಂಟ್ ಮಾಡದೇ ನಮ್ಮ ಸಿನಿಮಾಗೆ ಸಹಕರಿಸಿದರು. ನಿಜಕ್ಕೂ ಒಬ್ಬ ದಿಗ್ಗಜ ಕಲಾವಿದ 42 ದಿನ ನೈಟ್ ಶೂಟಿಂಗ್ನಲ್ಲಿ ಪಾಲ್ಗೊಂಡು ಸಹಕಾರ ಕೊಡುವುದು ದಾಖಲೆಯೇ ಸರೀ ಅಂತಾರೇ ಪ್ರೇಮ್ ಅವರು. ಅಂದ್ಹಾಗೇ, ಈ ಚಿತ್ರದಲ್ಲಿ ಸಂಜು ಬಾಬ ಅವರು ವಿಶಾಲ್ ಅಗ್ನಿಹೋತ್ರಿ ಪಾತ್ರ ನಿರ್ವಹಿಸಲಿದ್ದಾರೆ. ಕಾಳಿದಾಸ ಅಲಿಯಾಸ್ ಆ್ಯಕ್ಷನ್ ಪ್ರಿನ್ಸ್ ಎದುರು ಅಧೀರನ ಘರ್ಜನೆ ಹೇಗಿರಲಿದೆ ಎನ್ನುವ ಕಾತುರ ಚಿತ್ರಪ್ರೇಮಿಗಳನ್ನ ಒಂಟಿಕಾಲಿನಲ್ಲಿ ನಿಲ್ಲಿಸಿದೆ.
ʻಕೆಡಿʼ ನಿಮಗೆಲ್ಲ ಗೊತ್ತಿರೋ ಹಾಗೇ ಪ್ರೇಮ್ ಹಾಗೂ ಧ್ರುವ ಕಾಂಬಿನೇಷನ್ನಲ್ಲಿ ಬರ್ತಿರೋ ಹೈವೋಲ್ಟೇಜ್ ಸಿನಿಮಾ. ಬಿಗ್ ಬಜೆಟ್ನಲ್ಲಿ, ಬಹುತಾರಾಗಣದಲ್ಲಿ ಮೂಡಿಬರ್ತಿರೋ ಕೆಡಿ ಬಗ್ಗೆ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಪ್ಯಾನ್ ಇಂಡಿಯಾ ತುಂಬೆಲ್ಲ ನಿರೀಕ್ಷೆಯಿದೆ. ಪ್ರತಿಷ್ಟಿತ ನಿರ್ಮಾಣ ಸಂಸ್ಥೆ ಕೆವಿಎನ್ ಬಂಡವಾಳ ಸುರಿಸಿದ್ದು ಸೌತ್-ನಾರ್ತ್ ಸೂಪರ್ ಸ್ಟಾರ್ಗಳಿಗೆ ರತ್ನಗಂಬಳಿ ಹಾಕಿ `ಕೆಡಿ’ ಕಣಕ್ಕೆ ಬರಮಾಡಿಕೊಂಡಿದೆ. ಕನ್ನಡದಿಂದ ಕ್ರೇಜಿಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್, ರೀಷ್ಮಾ ನಾಣಯ್ಯ ಸೇರಿದಂತೆ ಹಲವರು ಪ್ರಮುಖ ಪಾತ್ರವರ್ಗದಲ್ಲಿದ್ದು, ಬಿಟೌನ್ನಿಂದ ಸಂಜುಬಾಬ, ಶಿಲ್ಪಾಶೆಟ್ಟಿ ಸ್ಪೆಷಲ್ ಅಪಿಯರೆನ್ಸ್ ಮಾಡಿದ್ದಾರೆ. ವಿಂಟೇಜ್ ಲುಕ್ನಲ್ಲಿರೋ `ಕೆಡಿ’ ಕಲಾವಿದರು, ಕಲಾಭಿಮಾನಿಗಳನ್ನ ಮಾತ್ರವಲ್ಲ ಕಲಾಲೋಕವೇ ಕಣ್ಣರಳಿಸಿ ನೋಡುವಂತೆ ಮಾಡಿದ್ದಾರೆ.
ಇನ್ನೂ ಇತ್ತೀಚೆಗೆ ಕೆಡಿ ಕಣಕ್ಕೆ ನಾಚ್ ಮೇರಿ ರಾಣಿ ಬಂದು ಹೋಗಿದ್ದಾರೆ. ಅಷ್ಟಕ್ಕೂ, ಬಾಲಿವುಡ್ನ ಈ ಗರ್ಮಿ ಬ್ಯೂಟಿ ತನ್ನ ಜಿರೋ ಸೈಜ್ ಸೊಂಟ ಕುಣಿಸಿರೋದು ಸಂಜುಬಾಬ ಜೊತೆಗಾ ಅಥವಾ ಬಹದ್ದೂರ್ ಗಂಡು ಆಕ್ಷನ್ ಪ್ರಿನ್ಸ್ ಜೊತೆಗಾ ಗೊತ್ತಿಲ್ಲ. ಆದರೆ, ಇತ್ತೀಚೆಗೆ ನೋರಾ ಫತ್ಹೇಹಿ ಲೆಗ್ ಶೇಕ್ ಮಾಡಿರೋ ಸ್ಪೆಷಲ್ ಸಾಂಗ್ ಚಿತ್ರೀಕರಣ ನಡೆದಿದೆ. ಹೇಗಿರಲಿದೆ ಕೆಡಿ ಅಖಾಡದಲ್ಲಿ ಗರ್ಮಿ ಬ್ಯೂಟಿ ಘಮಲು ಅನ್ನೋದನ್ನ ಕಾದು ನೋಡಬೇಕು. ಎನಿವೇ, ಎಲ್ಲಾ ಅಂದುಕೊಂಡಂತೆ ಆದರೆ ಇದೇ ಏಪ್ರಿಲ್ 22ರಂದು ಬೆಳ್ಳಿತೆರೆಗೆ ಕೆಡಿ ಕಿಚ್ಚು ಹಚ್ಚಲಿದೆ. ಐದು ಭಾಷೆಯಲ್ಲಿ ಪ್ಯಾನ್ ಇಂಡಿಯಾ ತುಂಬೆಲ್ಲಾ ರಿಲೀಸ್ ಆಗಲಿದೆ.