ಒಂದು ಕಡೆ ಚುನಾವಣೆ ಕಾವು, ಇನ್ನೊಂದು ಕಡೆ ಐಪಿಎಲ್ ಫೀವರ್ ಈ ಮಧ್ಯೆ ಕನ್ನಡದ ಆರು ಸಿನಿಮಾಗಳು ಕಣಕ್ಕಿಳಿಯುತ್ತಿವೆ. ಬೆಳ್ಳಿಭೂಮಿ ಅಂಗಳದಲ್ಲಿ ಕನ್ನಡದ ಆರು ಸಿನಿಮಾಗಳ ನಡುವೆ ಭರ್ಜರಿ ಪೈಪೋಟಿ ಎದುರಾಗಿದೆ. ಹಾಗಾದ್ರೆ ಈ ವಾರ ಚಿತ್ರಮಂದಿರಕ್ಕೆ ಎಂಟ್ರಿಕೊಡ್ತಿರುವ ಆ 6 ಸಿನಿಮಾಗಳು ಯಾವುವು? ಆ ಚಿತ್ರಗಳ ಸ್ಪೆಷಾಲಿಟಿ ಏನು? ಆ ಕುರಿತಾದ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.
ಸಿನಿಶುಕ್ರವಾರ, ಶುಭಶುಕ್ರವಾರ ಬಂತು ಎಂದರೆ ಸಾಕು ಚಿತ್ರಪ್ರೇಮಿಗಳಿಗೆ ಹಬ್ಬದೂಟ ಫಿಕ್ಸು. ಅದ್ರಲ್ಲೂ ಈ ವಾರವಂತೂ ಮೃಷ್ಟಾನ್ನ ಭೋಜನವನ್ನ ಬಡಿಸೋದಕ್ಕೆ ಕನ್ನಡದ ಆರು ಸಿನಿಮಾಗಳು ರೆಡಿಯಾಗಿವೆ. ಆ ಪೈಕಿ ಸ್ಯಾಂಡಲ್‍ವುಡ್‍ನ ಚಿರಯುವಕ ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸೂರತ್ಕಲ್ ಪಾರ್ಟ್2 ಕೂಡ ಒಂದು. 2020ರಲ್ಲಿ ಪಾರ್ಟ್1 ತೆರೆಗೆ ಬಂದಿತ್ತು. ಮರ್ಡರ್ ಮಿಸ್ಟ್ರಿಯನ್ನ ಹೊತ್ತುಬಂದಿದ್ದ, ರಣಗಿರಿ ರಹಸ್ಯವನ್ನ ಭೇದಿಸಿದ್ದ ಶಿವಾಜಿಗೆ ಪ್ರೇಕ್ಷಕರು ಜೈಹೋ ಎಂದಿದ್ದರು. ಇದೀಗ ಆ ಮಾಯಾವಿ ಶಿವಾಜಿ ಹೊಸ ಕೇಸ್ ಜೊತೆ ಬಿಗ್‍ಸ್ಕ್ರೀನ್‍ಗೆ ಎಂಟ್ರಿಕೊಡ್ತಿದ್ದಾರೆ. ಮಾಯಾವಿಗೆ ನಟಿ ಮೇಘನಾ ಗಾಂವ್ಕರ್, ರಾಧಿಕಾ ನಾರಾಯಣ್, ಸಂಗೀರಾ ಶೃಂಗೇರಿ ಸಾಥ್ ನೀಡಿದ್ದಾರೆ, ರಮೇಶ್ ಭಟ್, ವೀಣಾ ಸುಂದರ್, ಶೋಭರಾಜ್, ವಿನಾಯಕ್ ಜೋಶಿ ತಾರಾಬಳಗದಲ್ಲಿದ್ದಾರೆ.ಆಕಾಶ್ ಶ್ರೀವತ್ಸ ನಿರ್ದೇಶನ, ಅನುಪ್‍ಗೌಡ, ರೇಖಾ ಅವರ ನಿರ್ಮಾಣ ಚಿತ್ರಕ್ಕಿದ್ದು, ಶಿವಾಜಿ ಸೂರತ್ಕಲ್ -2 ಚಿತ್ರ ಗ್ರ್ಯಾಂಡ್ ಆಗಿ ತೆರೆಮೇಲೆ ಬರ್ತಿದೆ.
ಸಿನಿಮಾ ಪ್ರೇಮಿಗಳಿಗೆ ಕಾಮಿಡಿ ಕಚಗುಳಿ ಇಡೋದಕ್ಕೆ ನಟ ಕೋಮಲ್ ಮತ್ತೆ ಬರ್ತಿದ್ದಾರೆ. ಕೆಂಪೇಗೌಡ-2 ಚಿತ್ರದ ನಂತರ ಸುಮಾರು ವರ್ಷಗಳ ಕಾಲ ಕೋಮಲ್ ಬೆಳ್ಳಿತೆರೆಮೇಲೆ ಕಾಣಿಸಿಕೊಂಡಿರಲಿಲ್ಲ. ಆದ್ರೀಗ ಉಂಡೇನಾಮ ಸಿನಿಮಾದ ಮೂಲಕ ಅದ್ದೂರಿಯಾಗಿ ಎಂಟ್ರಿಕೊಡ್ತಿದ್ದಾರೆ. ಯಾರಿಗೆ ಉಂಡೆನಾಮ ತಿಕ್ಕುತ್ತಾರೋ ಏನೋ ಗೊತ್ತಿಲ್ಲ ಆದರೆ ಈ ವಾರ ಚಿತ್ರಮಂದಿರಕ್ಕೆ ಹೋಗೋ ಪ್ರೇಕ್ಷಕರಿಗೆ ಕೋಮಲ್ ಹೊಟ್ಟೆಹುಣ್ಣಾಗುವಂತೆ ನಗ್ಸೋದು ಹಂಡ್ರೆಂಡ್ ಪರ್ಸೆಂಟ್ ಪಕ್ಕಾ. ಉಂಡೇನಾಮ ಹಾಸ್ಯನಟ ಕೋಮಲ್ ನ ಮನಸ್ಸಲ್ಲಿಟ್ಟುಕೊಂಡು ಮಾಡಿದ ಕಥೆಯಾಗಿದ್ದು, ಕೆ.ಎಲ್ ರಾಜಶೇಖರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕ್ರಿಸ್ಟಲ್ ಪಾರ್ಕ್ ಬ್ಯಾನರ್ ಅಡಿಯಲ್ಲಿ ಟಿಆರ್ ಚಂದ್ರಶೇಖರ್ ಹಾಗೂ ಅವ್ರ ಪುತ್ರ ನಂದಕಿಶೋರ್ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿಬಂದಿದೆ. ಧನ್ಯಾ ಬಾಲಕೃಷ್ಣ, ಹರೀಶ್ ರಾಜ್, ತಬಲ ನಾಣಿ, ಕೆಜಿಎಫ್ ಸಂಪತ್, ವೈಷ್ಣವಿ ಅಪೂರ್ವ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.
ಹಿಂದೆ ನಿರ್ದೇಶಕ ರಿಷಬ್ ಶೆಟ್ಟಿಯವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರವನ್ನ ನೀವೆಲ್ಲರನೂ ನೋಡಿ ಗೆಲ್ಲಿಸಿದ್ರಿ. ಇದೀಗ ಅಂತಹದ್ದೇ ಸರ್ಕಾರಿ ಶಾಲೆಯ ಕಥೆಯನ್ನ ಇಟ್ಕೊಂಡು ನಿಮ್ಮ ಮುಂದೆ ಪ್ರವೀಣಾ ಹೆಸರಿನ ಸಿನಿಮಾ ಬರುತ್ತಿದೆ. ನಾಳೆ ಈ ಚಿತ್ರ ರಾಜ್ಯಾದ್ಯಂತ ರಿಲೀಸ್ ಆಗ್ತಿದೆ. ಮಹೇಶ್ ಸಿಂಧುವಳ್ಳಿ ನಿರ್ದೇಶನ, ಜಗದೀಶ್ ಕೆ ಆರ್ ನಿರ್ಮಾಣದ ಈ ಚಿತ್ರದಲ್ಲಿ ಮಂಡ್ಯ ರಮೇಶ್, ಶಶಿ, ಐಶ್ವರ್ಯ, ರಾಷ್ಟ್ರಪ್ರಶಸ್ತಿ ವಿಜೇತ ಮಾಸ್ಟರ್ ರೋಹಿತ್, ವಿಜಯ್ ಕಾರ್ತಿಕ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.
ಸಲಗ ಸಿನಿಮಾದ ಸೂರಿಯಣ್ಣ ಖ್ಯಾತಿಯ ದಿನೇಶ್ ಕುಮಾರ್ ನಟಿಸಿ, ನಿರ್ಮಿಸಿರುವ ಮಾರಿಗುಡ್ಡದ ಗಡ್ಡಧಾರಿಗಳು ಚಿತ್ರ ಕೂಡ ಈ ವಾರ ತೆರೆಗೆ ಬರ್ತಿದೆ. ವಿಲನ್‍ಗಾಗಿಯೇ ಮಾಡಿರೋ ಸಿನಿಮಾ ಇದಾಗಿದ್ದು, ಆರ್ ಚಂದ್ರಕಾಂತ್ ಡೈರೆಕ್ಷನ್ ಮಾಡಿದ್ದಾರೆ. ಪ್ರವೀಣ್ ರಾಜ್, ನಮೃತಾ ಅಗಸಿಮನಿ, ರಮೇಶ್ ಭಟ್, ಅವಿನಾಶ್ ಸೇರಿದಂತೆ ಇತರರು ಪಾತ್ರವರ್ಗದಲ್ಲಿದ್ದಾರೆ. ಇಂಟ್ರೆಸ್ಟಿಂಗ್ ಅಂದರೆ ಸಲಗ ಸೂರಿಯಣ್ಣನ ಲುಕ್ಕು-ಗೆಟಪ್ಪು ನೋಡಿ ಕೆಲ ಚಿತ್ರಪ್ರೇಮಿಗಳು ನೀವು ಥೇಟ್ ಗಬ್ಬರ್ ಸಿಂಗ್ ಕಾಣ್ತಿದ್ದೀರಿ ಅಂತ ಕೊಂಡಾಡ್ತಿದ್ದಾರೆ. ಎನಿವೇ, ನಾಳೆ ಬೆಳ್ಳಿತೆರೆ ಮೇಲೆ ಸೂರಿಯಣ್ಣ ಹೊಸ ಖದರ್ ತೋರಿಸಲಿದ್ದು, ಪ್ರೇಕ್ಷಕ ಮಹಾಷಯರು ಏನಂತಾರೇ ಅನ್ನೋದನ್ನ ಕಾದುನೋಡ್ಬೇಕು.
ನಾಳೆ ಸುರಾರಿ ಸಿನಿಮಾ ಕೂಡ ರಿಲೀಸ್ ಆಗ್ತಿದೆ. 100 ದಿನಗಳಲ್ಲಿ 6 ಪ್ಯಾಕ್ ಬರಿಸಿಕೊಂಡು ಅಖಾಡಕ್ಕಿಳಿದಿದ್ದ ಸುರಾರಿ ನಟ ವಿಶಾಲ್ ಅಜಯ್, ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನದ ಜೊತೆಗೆ ನಾಯಕನಟನಾಗಿ ಅಭಿನಯಿಸಿದ್ದರಿಂದ ಸುರಾರಿ ಸಿನಿಮಾದ ಮೇಲೆ ಕುತೂಹಲವಿದೆ. ಆ ಕುತೂಹಲಕ್ಕೆ ನಾಳೆ ಬಿಗ್ ಬ್ರೇಕ್ ಬೀಳಲಿದ್ದು, ಸುರಾರಿ ಹೀರೋ ಸುನಾಮಿ ಎಬ್ಬಿಸ್ತಾರಾ ಏನು ಅನ್ನೋದು ಇನ್ನಷ್ಟೇ ಗೊತ್ತಾಗ್ಬೇಕಿದೆ. ಸುರಾರಿ ಸಿನಿಮಾವನ್ನ ಐರಿಸ್ ಸ್ಟುಡಿಯೋ ನಿರ್ಮಾಣ ಮಾಡಿದ್ದು, ಅರ್ಚನಾ ನಾಯಕಿಯಾಗಿ ಮಿಂಚಿದ್ದಾರೆ. ಚಿತ್ರದಲ್ಲಿ ಫಿಟ್‍ನೆಸ್ ಮಾಸ್ಟರ್ ಆಗಿ ಚಿತ್ರಾಲ್ ರಂಗಸ್ವಾಮಿ, ಸಿಬಿಐ ಅಧಿಕಾರಿಯಾಗಿ ರತನ್ಯಾ, ಪೈಲ್ವಾನ್ ಪಾತ್ರದಲ್ಲಿ ಗಣೇಶ್ ರಾವ್ ಇದ್ದಾರೆ. ಓಂಪ್ರಕಾಶ್ ರಾವ್, ಅವಿನಾಶ್,ಮಿಮಿಕ್ರಿ ಗೋಪಿ ಜೊತೆಗೆ ರಂಗಭೂಮಿ ಕಲಾವಿದರು ಸುರಾರಿ ಸಿನಿಮಾ ಪೋಷಣೆ ಮಾಡಿದ್ದಾರೆ.
ಈ ಐದು ಸಿನಿಮಾ ಜೊತೆ ಅವಂತಿಕಾ ಹೆಸರಿನ ಚಿತ್ರ ಕೂಡ ನಾಳೆ ಬಿಗ್‍ಸ್ಕ್ರೀನ್‍ಗೆ ಲಗ್ಗೆ ಇಡ್ತಿದೆ. ಕೆಂಪೇಗೌಡ ಮಾಗಡಿಯವರು ನಿರ್ದೇಶನ ಮಾಡಿರುವ, ರತ್ನಚಂದನ ಅವ್ರು ನಿರ್ಮಿಸಿರುವ ಅವಂತಿಕಾ ಟ್ರೈಲರ್‍ನಿಂದ ಒಂದಿಷ್ಟು ನಿರೀಕ್ಷೆ ಹುಟ್ಟಿಸಿತ್ತು. ವಿನುಮನಸು ಸಂಗೀತ ನಿರ್ದೇಶನ ಈ ಚಿತ್ರಕ್ಕಿದ್ದು, ರತ್ನಚಂದನ, ಅರ್ಪಿತಾಗೌಡ, ಅಮೃತ ಅಯ್ಯರ್, ರಮೇಶ್ ಭಟ್, ರಮೇಶ್ ಪಂಡಿತ್, ಸಂಜು ಬಸಯ್ಯ ಪಾತ್ರವರ್ಗದಲ್ಲಿದ್ದಾರೆ. ಅವಂತಿಕಾ ಹಾರರ್ ಸಿನಿಮಾವಾಗಿದ್ದು ಪ್ರೇಕ್ಷಕರನ್ನ ಹೆದರಿಸೋಕೆ ಬರ್ತಿದೆ. ಸಸ್ಪೆನ್ಸ್, ಆ್ಯಕ್ಷನ್, ಕಾಮಿಡಿ, ರೊಮ್ಯಾನ್ಸ್, ಥ್ರಿಲ್ಲಿಂಗ್ ಎಲಿಮೆಂಟ್ಸ್ ಇರೋ ಅವಂತಿಕಾಗೆ ಪ್ರೇಕ್ಷಕರು ಏನಂತಾರೇ? ಈ ವಾರ ತೆರೆಗೆ ಬರ್ತಿರೋ ಆರು ಸಿನಿಮಾ ಪೈಕಿ ಯಾವ ಚಿತ್ರವನ್ನ ಕೈಹಿಡಿಯುತ್ತಾರೆ ಕಾದುನೋಡ್ಬೇಕು.