ಯಶ್-19 ಯಾವಾಗ? ಯಾವಾಗ? ಅಂತ ಕೇಳಿ ಕೇಳಿ ಸುಸ್ತಾದವರೆಲ್ಲಾ ಕಿವಿಯರಳಿಸಿ ಕೇಳಿಬಿಡಿ. ಕಳೆದ ಒಂದೂವರೆ ವರ್ಷಗಳಿಂದ ನಿಮ್ಮನ್ನ ಕಾಯಿಸಿದ್ದಕ್ಕೆ ಮತ್ತು ನಿಮ್ಮೆಲ್ಲರ ಕಾತುರಕ್ಕೆ ಬಿಗ್ ಬ್ರೇಕ್ ಹಾಕೋದಕ್ಕೆ ಕೆಜಿಎಫ್ ಕಿಂಗ್ ಕೊನೆಗೂ ರೆಡಿಯಾಗಿದ್ದಾರೆ. ಜಗದಗಲದ ನಿರೀಕ್ಷೆಯನ್ನ ಪೂರೈಸೋದಕ್ಕೆ ನಂಗೆ ಕೊಂಚ ಸಮಯ ಬೇಕು ಅಂತ ಕೇಳಿದ್ದ ರಾಕಿಭಾಯ್, ಫೈನಲೀ ಜಗತ್ತಿನ ಮುಂದೆ ತಮ್ಮ ಮುಂದಿನ ಸಿನಿಮಾ ಯಾವುದು ಅನ್ನೋದನ್ನ ಘೋಷಣೆ ಮಾಡೋದಕ್ಕೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಇನ್ನೇನು ನಾಲ್ಕೇ ನಾಲ್ಕು ದಿನದಲ್ಲಿ `ಯಶ್-19′ ಅನಾವರಣಗೊಳ್ಳಲಿದೆ. ಸಿನಿದುನಿಯಾದ ಮಿಲಿಯನ್ ಡಾಲರ್ ಪ್ರಶ್ನೆಗೆ ಮತ್ತು ಮಾನ್ಸ್ಟರ್ ಮುಂದಿನ ಸಿನಿಮಾದ ಮೇಲಿರುವ ಕೌತುಕಕ್ಕೆ ತೆರೆಬೀಳಲಿದೆ. ಹಾಗಾದ್ರೆ, ಮತ್ಯಾಕ್ ತಡ `ಯಶ್-19′ ಕುರಿತಾಗಿರುವ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ
ಭಾರತೀಯ ಚಿತ್ರರಂಗವನ್ನ ಮಾತ್ರವಲ್ಲದೇ ವಿಶ್ವ ಸಿನಿದುನಿಯಾವನ್ನ ಚಾತಕ ಪಕ್ಷಿಯಂತೆ ಕಾಯಿಸ್ತಿರೋ ಸಿನಿಮಾ `ಯಶ್-19′. ಯಸ್, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಈ ಸಿನಿಮಾಗಾಗಿ ಕಳೆದ ಒಂದೂವರೆ ವರ್ಷದಿಂದ ಚಿತ್ರಪ್ರೇಮಿಗಳ ಜೊತೆಗೆ ಚಿತ್ರಜಗತ್ತು ಕೂಡ ಕಣ್ಣಿಗೆ ಎಣ್ಣೆಬಿಟ್ಕೊಂಡು ಕಾಯ್ತಿದೆ. ಆ ಕಾಯುವಿಕೆಗೆ ಬಿಗ್ ಬ್ರೇಕ್ ಹಾಕೋದಕ್ಕೆ ಕೆಜಿಎಫ್ ಕಿಂಗ್ ಕೊನೆಗೂ ಕಣಕ್ಕಿಳಿದಿದ್ದಾರೆ. ಇಲ್ಲಿತನಕ ಅಪ್ಕಮ್ಮಿಂಗ್ ಪ್ರಾಜೆಕ್ಟ್ ಬಗ್ಗೆ ಎಳ್ಳಷ್ಟು ಸುಳಿವು ಕೊಡದೇ ಗೌಪ್ಯತೆ ಕಾಪಾಡಿಕೊಂಡಿದ್ದ ರಾಕಿಭಾಯ್ ನಿನ್ನೆಯಷ್ಟೇ ಅಪ್ಡೇಟ್ ಕೊಟ್ಟಿದ್ದರು. ಏಕಾಏಕಿ ಸೋಷಿಯಲ್ ಸಾಮ್ರಾಜ್ಯಕ್ಕೆ ಧುಮ್ಕಿ ಪ್ರೊಫೈಲ್ನಲ್ಲಿ `ಲೋಡಿಂಗ್’ ಫೋಟೋ ಪೋಸ್ಟ್ ಮಾಡಿ ಸರ್ ಪ್ರೈಸ್ ಕೊಟ್ಟಿದ್ದರು. ಆದ್ರಿವತ್ತು ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಕ್ಯಾಲೆಂಡರ್ ತಗೊಂಡು ಡಿಸೆಂಬರ್ 08ನೇ ತಾರೀಕ್ನ ಮಾರ್ಕ್ ಮಾಡ್ಕೊಳ್ಳಿ. ಬೆಳಗ್ಗೆ ಒಂಭತ್ತು ಗಂಟೆ 55 ನಿಮಿಷಕ್ಕೆ ಸರಿಯಾಗಿ ಟೈಟಲ್ ಅನೌನ್ಸ್ಮೆಂಟ್ ಮಾಡ್ತೀನಿ ಅಂತ ಟ್ವೀಟ್ ಮಾಡಿದ್ದಾರೆ.
ಯಸ್, ಡಿಸೆಂಬರ್ 08ನೇ ತಾರೀಖ್ ಬೆಳಗ್ಗೆ 9 ಗಂಟೆ 55 ನಿಮಿಷಕ್ಕೆ ಸರಿಯಾಗಿ ಮಾನ್ಸ್ಟರ್ ಮುಂದಿನ ಸಿನಿಮಾ ಘೋಷಣೆಯಾಗಲಿದೆ. ಖುದ್ದು ಮಾನ್ಸ್ಟರ್ ಮುಹೂರ್ತ ಫಿಕ್ಸ್ ಮಾಡಿದ್ದು, ಅಂದು `ಯಶ್-19′ ಬಗ್ಗೆ ಕಂಪ್ಲೀಟ್ ಅಪ್ಡೇಟ್ ಸಿಗಲಿದೆ. ಹೇಗಿರಲಿದೆ ಯಶ್-19? ಈ ಕುತೂಹಲಕ್ಕೆ ಅಂದು ತೆರಬೀಳಲಿದೆ. ಯಶ್ ಯಾರ ಜೊತೆ ಕೈ ಜೋಡಿಸಿರಬಹುದು? ಈ ಪ್ರಶ್ನೆಗೆ ಸ್ವತಃ ಸುಲ್ತಾನ್ ಕಡೆಯಿಂದ ಉತ್ತರ ಸಿಕ್ಕಿದೆ. ಬಜಾರ್ನಲ್ಲಿ ಈಗಾಗಲೇ ಕೇಳಿಬಂದ ಹಾಗೇ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಕೆಜಿಎಫ್ ಕಿಂಗ್ಗಾಗಿ ಖಜಾನೆ ತೆರೆದಿಟ್ಟಿದ್ದು ಕೋಟಿ ಕೋಟಿ ಬಂಡವಾಳ ಹೂಡ್ತಿದೆ. ಆದರೆ, ಮಾನ್ಸ್ಟರ್ ಮುಂದಿನ ಸಿನಿಮಾದ ಸಾರಥಿ ಯಾರು? ಗೇಮ್ ಚೇಂಜರ್ ಆಫ್ ಇಂಡಿಯನ್ ಸಿನಿಮಾದ ಅಧಿಪತಿಗೆ ಆ್ಯಕ್ಷನ್ ಕಟ್ ಹೇಳುವ ಅವಕಾಶ ಅದ್ಯಾರಿಗೆ ಸಿಕ್ಕಿದೆ? ಈ ಪ್ರಶ್ನೆಗೆ ಕುತೂಹಲ ಕಾಯ್ದಿರಿಸಿರುವ ಯಶ್ ಫ್ಯಾನ್ಸ್ ಮಾತ್ರವಲ್ಲ ಸಿನಿಮಾಮಂದಿಯ ತಲೆಗೂ ಹುಳಬಿಟ್ಟಿದ್ದಾರೆ.
ಇಂಟ್ರೆಸ್ಟಿಂಗ್ ಅಂದರೆ ಅದೃಷ್ಟ ಹೊತ್ತು ತರುವ ತಿಂಗಳಲ್ಲೇ ಯಶ್ ಅಖಾಡಕ್ಕೆ ಇಳಿಯತ್ತಿದ್ದಾರೆ. ಹೌದು, ಡಿಸೆಂಬರ್ ತಿಂಗಳು ಯಶ್ ಪಾಲಿಗೆ ರಾಜಯೋಗ ಹೊತ್ತುಬರುವ ತಿಂಗಳಂದ್ರೆ ಬಹುಷಃ ತಪ್ಪಾಗಲಿಕ್ಕಿಲ್ಲ. ಇಲ್ಲಿವರೆಗೂ ಡಿಸೆಂಬರ್ ನಲ್ಲಿ ರಿಲೀಸ್ ಆಗಿರುವ ಅವರ ಸಿನಿಮಾಗಳು ಬ್ಲಾಕ್ಬಸ್ಟರ್ ಹಿಟ್. ಅದರಲ್ಲೂ ಕೆಜಿಎಫ್ ಡಿಸೆಂಬರ್ ನಲ್ಲಿ ರಿಲೀಸ್ ಆಗಿ ರಾಕಿಂಗ್ ಸ್ಟಾರ್ ನ ಜಗದ್ವಿಖ್ಯಾತಿಗೊಳಿಸ್ತು. ಇದೀಗ ಮತ್ತದೇ ಡಿಸೆಂಬರ್ ನಲ್ಲಿ ತಮ್ಮ ಮುಂದಿನ ಸಿನಿಮಾ ಅನೌನ್ಸ್ ಮಾಡ್ತಿದ್ದಾರೆ. ಡಿಸೆಂಬರ್ 08ರಂದು ಇಡೀ ಜಗತ್ತು ಎದುರುನೋಡ್ತಿರೋ ತಮ್ಮ ಸಿನಿಮಾ ಅನೌನ್ಸ್ ಮಾಡಿ, ಡಿಸೆಂಬರ್ 09ರಂದು ವೆಡ್ಡಿಂಗ್ ಆ್ಯನಿವರ್ಸರಿ ಸೆಲಬ್ರೇಟ್ ಮಾಡಿಕೊಳ್ಳಲಿದ್ದಾರೆ. ಅದೆಷ್ಟು ಗ್ರ್ಯಾಂಡ್ ಆಗಿರಲಿದೆಯೋ ಗೊತ್ತಿಲ್ಲ ಆದರೆ `ಯಶ್-19′ ಮಾತ್ರ ಇಡೀ ಜಗತ್ತನ್ನ ಥಂಡಾ ಹೊಡೆಸೋದಂತೂ ಗ್ಯಾರಂಟಿ.
ಹೌದು, ಜಸ್ಟ್ ಪೋಸ್ಟರ್ ಮೂಲಕ ರಾಕಿಭಾಯ್ ಕೊಟ್ಟಿರೋ ಸುಳಿವು ನೋಡಿದರೆ ಸೂಪರ್ ಮ್ಯಾನ್ ಆಗಿ ಕಣಕ್ಕಿಳಿಯೋ ಲಕ್ಷಣಗಳು ಕಾಣ್ತಿವೆ. ಆಸ್ಟ್ರೇಲಿಯಾ, ಅಮೇರಿಕಾ, ಸಿಡ್ನಿ, ನ್ಯೂಜಿಲ್ಯಾಂಡ್, ಇಟಲಿ, ಯುರೋಪ್, ಲಂಡನ್, ದುಬೈ, ಶ್ರೀಲಂಕಾ, ಮಲೇಷಿಯಾ ಸುತ್ತಿ ಲಂಡನ್ ಅಂತ ಸುತ್ತಾಡಿದ್ದು ಹಾಲಿವುಡ್ ಮಂದಿಗೆ ಟಕ್ಕರ್ ಕೊಡಲಿಕ್ಕಾ ಎನ್ನುವ ಅನುಮಾನ ದಟ್ಟವಾಗ್ತಿದೆ. ಕೆಜಿಎಫ್ ಮೂಲಕ ಪ್ಯಾನ್ ವಲ್ರ್ಡ್ ರೀಚ್ ಆಗಿರೋ ರಾಕಿಭಾಯ್, ಮುಂದಿನ ಸಿನಿಮಾದ ಮೂಲಕ ಗ್ಲೋಬಲ್ ಗಡಿ ದಾಟಿ ಗಹಗಹಿಸಲು ಸ್ಕೆಚ್ ಹಾಕಿದ್ರಾ? ಹೀಗೊಂದು ಪ್ರಶ್ನೆಯೂ ಕಾಡಲಿಕ್ಕೆ ಶುರು ಆಗಿದೆ. ಇತ್ತೀಚೆಗಷ್ಟೇ ಲಂಡನ್ನಲ್ಲಿ `ಯಶ್-19′ ಸಿನಿಮಾದ ಶೂಟಿಂಗ್ ಶುರುವಾಗಿದೆ. ಜೆಜೆ ಪೆರ್ರಿಯಂತಹ ಹಾಲಿವುಡ್ ಟೆಕ್ನಿಷಿಯನ್ಸ್ ಗಳು ಕೆಲಸ ಮಾಡ್ತಿದ್ದಾರೆ ಅಂತೆಲ್ಲಾ ಸುದ್ದಿಯಾಗಿತ್ತು. ಆ ಸುದ್ದಿ ನಿಜ ಆದರೆ ಟೈಟಲ್ ಅನೌನ್ಸ್ ಮೆಂಟ್ ಜೊತೆ ಟೀಸರ್ ಝಲಕ್ ಕೂಡ ಹೊರಬೀಳಬಹುದು. ಯಾವುದಕ್ಕೂ ಕಾದು ನೋಡಬೇಕು ಅಷ್ಟೇ
ಅಷ್ಟಕ್ಕೂ, `ಯಶ್-19′ ಯಾವ್ ಜಾನರ್ ಸಿನಿಮಾ? ಈ ಹಿಂದೆ ಯಶ್ ಹೇಳಿಕೊಂಡಂತೆ ಸೈನ್ಸ್ ಫಿಕ್ಷನ್ನಾ ಅಥವಾ ಗೋವಾ ಡ್ರಗ್ ಮಾಫಿಯಾ ಕಥೆನಾ? ಡೈರೆಕ್ಟರ್ ಯಾರು? ಮಲೆಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ಗೆ ಯಶ್ ಕಾಲ್ಶೀಟ್ ಸಿಕ್ಕಿರೋದು ನಿಜಾನಾ? ಜಗದಗಲದ ನಿರೀಕ್ಷೆ ಪೂರೈಸಲು ಪಣ ತೊಟ್ಟಿರೋ ಅಣ್ತಮ್ಮ, ತಮ್ಮ ಮುಂದಿನ ಸಿನಿಮಾ ಜವಾಬ್ದಾರಿನಾ ಗೀತು ಮೋಹನ್ದಾಸ್ಗೆ ವಹಿಸಿದ್ರಾ? ಈ ಎಲ್ಲಾ ಪ್ರಶ್ನೆಗೆ ಡಿಸೆಂಬರ್ 08ರಂದು ಉತ್ತರ ಸಿಗುತ್ತೆ. ಒಟ್ನಲ್ಲಿ ವೆಡ್ಡಿಂಗ್ ಆ್ಯನಿವರ್ಸರಿಗೆ ಒಂದು ದಿನ ಮೊದಲೇ, ಬರ್ತ್ಡೇ ಒಂದು ತಿಂಗಳು ಬಾಕಿಯಿರುವ ಮೊದಲೇ ರಾಕಿಭಾಯ್ ಸಖತ್ ಸರ್ ಪ್ರೈಸ್ ಕೊಟ್ಟಿದ್ದಾರೆ. ತಮ್ಮ ಲಕ್ಕಿ ಮಂತ್ನಲ್ಲೇ ಅಖಾಡಕ್ಕೆ ಇಳಿಯುತ್ತಿದ್ದಾರೆ.