ಸ್ಯಾಂಡಲ್‌ವುಡ್‌ನ ಹಿರಿಯ ನಟಿ, ಬಹುಭಾಷಾ ತಾರೆ ಲೀಲಾವತಿ ಅವರು ಬದುಕು ಮುಗಿಸಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ನಿನ್ನೆ ಕೊನೆಯುಸಿರೆಳೆದಿದ್ದು, ಇಂದು ಬೆಂಗಳೂರಿನ ನೆಲಮಂಗಲದ ಸೋಲದೇವನಹಳ್ಳಿಯ ಫಾರ್ಮ್ ಹೌಸ್‌ನಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ. ಡೀ ಚಿತ್ರರಂಗ ಲೀಲಮ್ಮನ ಸಾವಿಗೆ ಕಂಬನಿ ಮಿಡಿಯುತ್ತಿದೆ. ಕಲಾವಿದರು ಮಾತ್ರವಲ್ಲದೇ ರಾಜಕೀಯ ಗಣ್ಯರು ಸೇರಿದಂತೆ ಪ್ರಧಾನಿ ಮೋದಿಜೀ ಕೂಡ ಟ್ವೀಟ್ ಮಾಡಿ ಹಿರಿಯ ನಟಿಯ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.
40-50ರ ದಶಕ ಅಂದ್ರೆ, ಕನ್ನಡ ಚಿತ್ರರಂಗದ ಸುವರ್ಣ ಯುಗಕ್ಕೆ ಮುನ್ನುಡಿ ಬರೆದ ಕಾಲ.. ಬಿ.ಆರ್.ಪಂತುಲು, ಹುಣಸೂರು ಕೃಷ್ಣಮೂರ್ತಿ, ಹೆಚ್.ಎಲ್.ಎನ್.ಸಿಂಹ, ಶಂಕರ್ ಸಿಂಗ್ ಸೇರಿದಂತೆ, ಘಟಾನುಗಟಿಗಳು ಸಿನಿಮಾ ಮಾಡುತ್ತಿದ್ದ ಬಂಗಾರದ ಯುಗ.. ಅಂತಹ ಯುಗದಲ್ಲಿ ಸಣ್ಣ ಪಾತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ, ಕನ್ನಡದ ಹೆಮ್ಮೆಯ ಕಲಾವಿದೆ ಲೀಲಾವತಿ. ಪಾತ್ರ ಯಾವುದೇ ಇರಲಿ, ಲೀಲಾಜಾಲವಾಗಿ ನಟಿಸಿ ಸೈ ಅನಿಸಿಕೊಂಡ ಅಪ್ಪಟ ಕನ್ನಡದ ಪ್ರತಿಭೆ ಲೀಲಾವತಿ.. ಸುಲಲಿತ ಕನ್ನಡ, ಸಹಜ ಅಭಿನಯದಿಂದಲೇ, ಕನ್ನಡಿಗರ ಮನೆ ಮನಗಳಲ್ಲಿ ನೆಲಿಸಿದ ಅಭಿಜಾತ ಕಲಾವಿದೆ.. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಹುಟ್ಟಿದ ಲೀಲಾವತಿಯವರು, ಬದುಕು ಸಾಗಿಸಲು ಮೈಸೂರಿನ ಕಡೆ ಮುಖ ಮಾಡಿದ್ರು.. ಸುಬ್ಬಯ್ಯನಾಯ್ಡು ಅವರ ನಾಟಕ ಕಂಪನಿಯಲ್ಲಿ ನಟಿಸುತ್ತಿದ್ದಾಗ, ಅವರಿಗೆ ಸಿನಿಮಾ ಜಗತ್ತಿನ ನಂಟು ಬೆಳೆಯಿತು.
‘ನಾಗಕನ್ನಿಕ’ ಚಿತ್ರದಲ್ಲಿ ಸಖಿಯ ಪಾತ್ರಕ್ಕೆ ಬಣ್ಣ ಹಚ್ಚುವ ಮುಖೇನ ಬಣ್ಣದ ಜಗತ್ತಿಗೆ ಕಾಲಿಟ್ಟ ಲೀಲಾ ಕಿರಣ್, ಮುಂದೆ ಕನ್ನಡ ಚಿತ್ರರಂಗದಲ್ಲಿ ಲೀಲಾವತಿಯಾದ್ರು.. ನಾಯಕಿಯಾಗಿ ತಮ್ಮದೇ ಛಾಪು ಮೂಡಿಸಿದ ನಟಿ ಲೀಲಾವತಿ, ಕನ್ನಡ ಚಿತ್ರರಂಗದಲ್ಲಿ ಪೋಷಕ ಪಾತ್ರಗಳಿಗೊಂದು ಘನತೆ ಗಾಂಭಿರ್ಯತೆ ತಂದುಕೊಟ್ಟ ಹೆಮ್ಮೆಯ ಕನ್ನಡತಿ. ವಾತ್ಸಲ್ಯಮಯಿ ಅಮ್ಮ, ಬಜಾರಿ ಅತ್ತೆ, ಪ್ರೀತಿಯ ಅಕ್ಕ, ಅಕ್ಕರೆಯ ಅಜ್ಜಿ ಯಾವುದೇ ಪಾತ್ರವಿರಲಿ, ಪರಕಾಯ ಪ್ರವೇಶ ಮಾಡಿ ಪಾತ್ರಕ್ಕೊಂದು ಜೀವಂತಿಕೆ ತಂದ ಕೀರ್ತಿ ಲೀಲಾವತಿ ಅವರದ್ದು.. ನಾಯಕಿಯಾಗಿ ಅವರು ಅಭಿನಯಿಸಿದ ಪ್ರಥಮ ಚಿತ್ರ, ‘ಮಾಂಗಲ್ಯ ಯೋಗ’.. ಅಲ್ಲಿಂದ ಶುರುವಾದ ಇವರ ಸಿನಿಪಯಣ, ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ, ಒಟ್ಟು 600 ಸಿನಿಮಾಗಳವರೆಗೂ ಮುಂದುವರೆಯಿತು.
ಕನ್ನಡದ ಎಲ್ಲಾ ಘಟಾನುಘಟಿಗಳ ಜೊತೆ ತೆರೆಹಂಚಿಕೊಂಡ ನಟಿ ಲೀಲಾವತಿ, ಡಾ.ರಾಜ್ ಅವರೊಂದಿಗೆ ತೆರೆಹಂಚಿಕೊಂಡ ಮೊಟ್ಟ ಮೊದಲ ಸಿನಿಮಾ ರಣಧೀರ ಕಂಠೀರವ.. ನಂತ್ರ ಸಂತ ತುಕಾರಾಂ, ಕಣ್ತೆರೆದು ನೋಡು, ಕೈವಾರ ಮಹಾತ್ಮೆ, ಗಾಳಿ ಗೋಪುರ, ಕನ್ಯಾರತ್ನ, ಕುಲವಧು, ವೀರ ಕೇಸರಿ ಹೀಗೆ ಹಲವಾರು ಚಿತ್ರಗಳಲ್ಲಿ ರಾಜ್ಗೆ ನಾಯಕಿಯಾದ್ರು.. ಆ ಕಾಲಕ್ಕೆ ನಾಯಕರಿಗಿಂತ ಎರಡರಷ್ಟು ಸಂಭಾವನೆ ಪಡೆಯುತ್ತಿದ್ದ, ಹೆಮ್ಮೆಯ ಕನ್ನಡತಿ ಲೀಲಾವತಿ.. ೭೦ರ ದಶಕದ ನಂತರ ನಾಯಕಿ ಪಾತ್ರಗಳಿಂದ ಪೋಷಕ ಪಾತ್ರಗಳಿಗೆ ಶಿಫ್ಟ್ ಆದ ಲೀಲಾವತಿಯವರು, ವೈವಿಧ್ಯಮಯ ಪಾತ್ರಗಳಿಗೆ ಜೀವ ತುಂಬಿದ್ದಾರೆ.. ಗೆಜ್ಜೆ ಪೂಜೆ, ಸಿಪಾಯಿ ರಾಮು, ನಾಗರಹಾವು, ಭಕ್ತ ಕುಂಬಾರ, ನಾ ನಿನ್ನ ಮರೆಯಲಾರೆ, ಅವುಗಳಲ್ಲಿ ಪ್ರಮುಖ ಚಿತ್ರಗಳು.
ಕಲಾಸೇವೆಯನ್ನೇ ತಮ್ಮ ಉಸಿರಾಗಿಸಿಕೊಂಡ ನಟಿ ಲೀಲಾವತಿ ಅವ್ರು, ಕನ್ನಡಕ್ಕಾಗಿ, ಕನ್ನಡ ಚಿತ್ರರಂಗಕ್ಕಾಗಿಯೇ ಬದುಕಿದವರು.. ತಾವಷ್ಟೇ ಅಲ್ಲ ತಮ್ಮ ಪುತ್ರನನ್ನೂ ಕಲಾಸೇವೆಗೆ ಮುಡಿಪು ನೀಡಿದ್ದು, ಇವರ ಕಲಾಭಿಮಾನ ಹಾಗೂ ಕನ್ನಡಾಭಿಮಾನಕ್ಕೆ ಹಿಡಿದ ಕನ್ನಡಿ.. ಅವರ ಸುಪುತ್ರ ವಿನೋದ್ರಾಜ್, 1987ರಲ್ಲಿ ‘ಡ್ಯಾನ್ಸ್ ರಾಜಾ ಡ್ಯಾನ್ಸ್’ ಚಿತ್ರದ ಮುಖೇನ ಕಲಾಸಮುದ್ರಕ್ಕೆ ಧುಮುಕಿದ್ರು.. ಕೃಷ್ಣ ನೀ ಕುಣಿದಾಗ, ಕಾಲೇಜ್ ಹೀರೋ, ಯುದ್ಧ ಪರ್ವ, ನಂಜುಂಡ ಸೇರಿದಂತೆ ಹಲವಾರು ಹಿಟ್ ಸಿನಿಮಾಗಳಲ್ಲಿ ನಟಿಸಿದ ವಿನೋದ್ ರಾಜ್ ಕೂಡ, ಅಮ್ಮನಂತೆಯೇ ಕನ್ನಡಿಗರ ಪಾಲಿನ ಕಲಾಬಂಧುವಾದ್ರು.. ಮಗನಿಗಾಗಿಯೇ ಹಲವು ಚಿತ್ರಗಳನ್ನ ನಿರ್ಮಿಸಿದ ನಟಿ ಲೀಲಾವತಿಯವರು, ‘ಕನ್ನಡದ ಕಂದ’ ಎಂಬ ಸಿನಿಮಾ ನಿರ್ಮಿಸಿದ್ದು, ಅವರ ಕಲಾವಂತಿಕೆ ಹಾಗೂ ಕನ್ನಡತನಕ್ಕೆ ಹಿಡಿದ ಕನ್ನಡಿ.
ಇವರ 7 ದಶಕಗಳ ಸುಧೀರ್ಗ ಸಿನಿಪಯಣದಲ್ಲಿ, ಹತ್ತು ಹಲವು ಪ್ರಶಸ್ತಿಗಳು ಇವರನ್ನ ಅರಸಿಕೊಂಡು ಬಂದಿವೆ.. ಮದುವೆ ಮಾಡಿ ನೋಡು, ಸಂತ ತುಕಾರಾಂ ಚಿತ್ರಗಳಿಗೆ ಲೀಲಾವತಿಯವರು ರಾಷ್ಟ್ರಪ್ರಶಸ್ತಿ ಪಡೆದ್ರೆ, ತುಂಬಿದ ಕೊಡ, ಮಹಾತ್ಯಾಗ, ಭಕ್ತ ಕುಂಬಾರ, ಸಿಪಾಯಿ ರಾಮು, ಗೆಜ್ಜೆ ಪೂಜೆ, ಡಾಕ್ಟರ್ ಕೃಷ್ಣ ಚಿತ್ರಗಳಲ್ಲಿನ ಅಭಿನಯಕ್ಕೆ ರಾಜ್ಯ ಪ್ರಶಸ್ತಿ ಸ್ವೀಕರಿಸಿದ್ರು. ಅವರೇ ನಿರ್ಮಿಸಿದ ‘ಕನ್ನಡದ ಕಂದ’ ಚಿತ್ರಕ್ಕೆ ಫಿಲಂ ಫೇರ್ ಪ್ರಶಸ್ತಿ ಗರಿಯೂ ಮೂಡಿದೆ. ಲೀಲಾವತಿಯವರಿಗೆ ‘ಡಾ. ರಾಜ್ ಕುಮಾರ್’ ಪ್ರಶಸ್ತಿ ನೀಡುವ ಮೂಲಕ, ರಾಜ್ಯ ಸರ್ಕಾರ ಅವರನ್ನ ಗೌರವಿಸಿದೆ. ಕನ್ನಡ ಚಿತ್ರರಂಗಕ್ಕೆ ಇವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ತುಮಕೂರು ವಿಶ್ವವಿದ್ಯಾಲಯ, ೨೦೦೮ರಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿದೆ.
ಸಿನಿರಂಗದ ನಂಟಿನಲ್ಲಿದ್ದುಕೊಂಡೇ, ಲೀಲಾವತಿ ಹಾಗೂ ಅವರ ಪುತ್ರ ವಿನೋದ್ ರಾಜ್, ಕೃಷ್ಟಿಯಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದರು. ಅಷ್ಟೇ ಅಲ್ಲ ಸೋಲದೇವನಹಳ್ಳಿಯಲ್ಲಿ ಆಸ್ಪತ್ರೆಯೊಂದನ್ನ ಕಟ್ಟಿಸುವ ಮೂಲಕ, ಬಡವರ ನೋವಿಗೆ ಸ್ಪಂದಿಸಿದ್ದರು. ಇತ್ತೀಚೆಗಷ್ಟೇ ಆ ಆಸ್ಪತ್ರೆಯ ಉದ್ಘಾಟನೆ ಮಾಡಲಾಯ್ತು. ಇದು ಲೀಲಾವತಿ ಅಮ್ಮನವರ ಕನಸಾಗಿತ್ತು. ಅವರ ಕೊನೆಗಾಲದಲ್ಲಿ ಆ ಕನಸು ಈಡೇರಿಸಿಕೊಂಡೇ ಕೊನೆಯಸಿರೆಳೆದರು. ಸಾಮಾನ್ಯ ಜನರಿಗೆ ಮಾತ್ರವಲ್ಲ ಪ್ರಾಣಿ ಪಕ್ಷಿಗಳಿಗೂ ನೆರವಾಗಬೇಕು ಅಂತ ಪಶುವೈದ್ಯಕೀಯ ಆಸ್ಪತ್ರೆಯನ್ನೂ ಕಟ್ಟಿಸಿ ಬದುಕು ಮುಗಿಸಿದ್ದಾರೆ. ಒಟ್ನಲ್ಲಿ ಬದುಕಿನದ್ದಕ್ಕೂ ಕಷ್ಟಗಳನ್ನೇ ಉಂಡ ಅವರು ಇದ್ದಷ್ಟು ದಿನ ಬೇರೆಯವರ ಕಷ್ಟಕ್ಕೆ ಸ್ಪಂಧಿಸಿದ್ದರು, ಕೈಲಾದ ಸಹಾಯ ಮಾಡಿದ್ದರು. ಇಂತಿಪ್ಪ ಜೀವಕ್ಕೆ ಆ ಭಗವಂತ ಮುಕ್ತಿ ಕೊಡಲಿ. ಲೀಲಮ್ಮನ ಆತ್ಮಕ್ಕೆ ಶಾಂತಿ ಸಿಗಲಿ.