`ದೇವರ’ ಯಂಗ್ ಟೈಗರ್ ಜೂನಿಯರ್ ಎನ್ ಟಿ ಆರ್ ಅಭಿನಯದ, ಕೊರಟಾಲ ಶಿವ ನಿರ್ದೇಶನದ ಮೋಸ್ಟ್ ಅವೈಟೆಡ್ ಮೂವೀ ಅನ್ನೋದು ನಿಮಗೀಗಾಗಲೇ ಗೊತ್ತಿದೆ. ದಕ್ಷಿಣ ಭಾರತವನ್ನಷ್ಟೇ ಅಲ್ಲದೇ ಇಡೀ ಚಿತ್ರಜಗತ್ತನ್ನ ಚಾತಕ ಪಕ್ಷಿಯಂತೆ ಕಾಯಿಸ್ತಿರೋ `ದೇವರ’ ಚಿತ್ರದ ಕುರಿತಾಗಿ ಬಿಗ್ ಅಪ್ಡೇಟ್ವೊಂದು ಲಭ್ಯವಾಗಿದೆ. ಹೈವೋಲ್ಟೇಜ್ ಆ್ಯಕ್ಷನ್-ಥ್ರಿಲ್ಲರ್ ಟೀಸರ್ ರಿಲೀಸ್ ಮಾಡೋದಕ್ಕೆ ಚಿತ್ರತಂಡ ಮಾಸ್ಟರ್ ಪ್ಲಾನ್ ಮಾಡಿದ್ದು, ಸಲಾರ್ ಹಾಗೂ ಡಂಕಿ ಸಿನಿಮಾದ ಜೊತೆ `ದೇವರ’ ಟೀಸರ್ ಕಣಕ್ಕಿಳಿಸಲಿದ್ದಾರಂತೆ. ಹೀಗೊಂದು ಸುದ್ದಿ ಟಾಲಿವುಡ್ ಫಿಲ್ಮ್ ನಗರದಲ್ಲಿ ಕೇಳಿಬರುತ್ತಿದ್ದು, ಎರಡು ಸೆನ್ಸೇಷನ್ ಸಿನಿಮಾಗಳಿಗೆ ಕೊಮರಮ್ ಭೀಮ್ ಕಿಚ್ಚು ಹಚ್ಚೋದು ಪಕ್ಕಾ ಎನ್ನಲಾಗ್ತಿದೆ.
ದೇವರ ಬಹುಕೋಟಿ ವೆಚ್ಚದ ಸಿನಿಮಾ ಎಂಬುದು ನಿಮಗೆಲ್ಲ ತಿಳಿದೆಯಿದೆ. 100 ಅಲ್ಲ 200 ಅಲ್ಲ ಭರ್ತಿ 300 ಕೋಟಿ ಸುರಿದು `ದೇವರ’ ಅನ್ನೋ ಹೈ ಆಕ್ಟೇನ್ ಆ್ಯಕ್ಷನ್ ಫಿಲ್ಮ್ ತಯಾರಿಸಿದ್ದಾರೆ. ಬರೋಬ್ಬರಿ 150 ಕೋಟಿ ರೂಗಳನ್ನ ವಿಷ್ಯೂಯಲ್ ಎಫೆಕ್ಟ್ಗೆ ಇನ್ವೆಸ್ಟ್ ಮಾಡಿದ್ದಾರೆ. ಆರ್ ಆರ್ ಆರ್ ಮೂಲಕ ಹಾಲಿವುಡ್ ಲೋಕ ಕೊಮರಮ್ ಭೀಮ್ ಕಡೆ ಕಣ್ಣಿಟ್ಟಿರೋದ್ರಿಂದ ನಿರ್ದೇಶಕ ಕೊರಟಾಲ ಶಿವ ಮೈಯೆಲ್ಲಾ ಕಣ್ಣಾಗಿಸಿಕೊಂಡು ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಜನತಾ ಗ್ಯಾರೇಜ್ ನಂತರ ತಾರಕ್-ಕೊರಟಾಲ ಕಾಂಬೋ ರಿಪೀಟ್ ಆಗಿದ್ದು ನಿರೀಕ್ಷೆ ಹೆಚ್ಚಿದೆ. `ದೇವರ’ ಎರಡು ಭಾಗಗಳಲ್ಲಿ ಅದ್ದೂರಿಯಾಗಿ ತಯಾರಾಗ್ತಿದೆ.

ಈಗಾಗಲೇ ಸಿನಿಮಾದ ಒನ್ಲೈನ್ ಕಥೆ ಹೊರಬಿದ್ದಿದ್ದು, ತಂದೆ-ಮಗನ ಪಾತ್ರದಲ್ಲಿ ಭೀಮ್ ಅಬ್ಬರಿಸಿ ಬೊಬ್ಬಿರಿಯಬಹುದಾ ಎನ್ನುವ ಸಂಶಯ ಕಾಡ್ತಿದೆ. ಅಂದ್ಹಾಗೇ, ದೇವರ ಸಮುದ್ರ ತಟದಲ್ಲಿ ನಡೆಯುವ ಕತೆಯನ್ನು ಒಳಗೊಂಡಿದ್ದು, ಸಮುದ್ರದ ಮೇಲೆ ಅಧಿಕಾರಕ್ಕಾಗಿ ಪರಸ್ಪರ ಕಾದಾಟದಲ್ಲಿರುವ ಮೃಗಗಳ ಮಧ್ಯೆ ಜೂ ಎನ್ಟಿಆರ್ ಪಾತ್ರ ಸೆಣೆಸಲಿದೆ ಎನ್ನಲಾಗುತ್ತಿದೆ. ‘ದೇವರ’ ಸಿನಿಮಾ ಪಕ್ಕಾ ಆಕ್ಷನ್ ಭರಿತ ಹೊಡಿ-ಬಡಿ ಕತೆಯನ್ನು ಒಳಗೊಂಡಿರುವುದು ಇದಾಗಲೇ ಖಾತ್ರಿಯಾಗಿದೆ. “ಕತೆಯಲ್ಲಿ ಮನುಷ್ಯರಿಗಿಂತಲೂ ಹೆಚ್ಚು ಮೃಗಗಳೇ ಇರುತ್ತಾರೆ. ಸಾವೆಂದರೆ ಭಯ ಇರದ, ದೇವರೆಂದರೆ ಭಯ ಇರದ ಮೃಗಗಳು ಅವರು. ಆದರೆ ಅವರಿಗೆಲ್ಲ ಒಬ್ಬರೆಂದರೆ ಭಯ. ಅದು ಯಾರೆಂದು ವಿವರಿಸಿ ಹೇಳಬೇಕಿಲ್ಲ. ಭಯ ಇರಬೇಕು, ಭಯ ಅವಶ್ಯಕ, ಭಯ ಪಡಿಸಲು ಈ ಸಿನಿಮಾದಲ್ಲಿ ಆತ ಯಾವ ರೇಂಜಿಗೆ ಬೇಕಾದರು ಹೋಗುತ್ತಾನೆ. ಇದು ಬಹಳ ಎಮೋಷನಲ್ ಪಯಣ” ಅನ್ನೋದನ್ನ `ದೇವರ’ ಫಿಲ್ಮ್ ಟೀಮ್ ಈಗಾಗಲೇ ರಿವೀಲ್ ಮಾಡಿದೆ.

`ದೇವರ’ ಸಿನಿಮಾದಲ್ಲಿ ಜೂ ಎನ್ಟಿಆರ್ ಜೊತೆಗೆ ಬಾಲಿವುಡ್ ಬೆಡಗಿ ಜಾನ್ಹವಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ. ಥಂಗಮ್ ಹೆಸರಿನ ಪಾತ್ರ ನಿರ್ವಹಿಸಿದ್ದು ಇತ್ತೀಚೆಗಷ್ಟೇ ಫಸ್ಟ್ ಲುಕ್ ರಿವೀಲ್ ಆಗಿದೆ. ಲಂಗ-ದಾವಣಿಯಲ್ಲಿ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಪಕ್ಕದ್ಮನೆ ಹುಡುಗಿಯಂತೆ ಕಂಗೊಳಿಸಿದ್ದಾರೆ. ಯಂಗ್ ಟೈಗರ್ ಗೆ ಬಾಲಿವುಡ್ ಹೀರೋ ಸೈಫ್ ಅಲಿಖಾನ್ ವಿಲನ್ನಾಗಿದ್ದಾರೆ. ಭೈರನಾಗಿ ಕೊಮರಮ್ ಭೀಮ್ ಎದುರು ಘರ್ಜಿಸಿದ್ದಾರೆ. ಪ್ರಕಾಶ್ ರಾಜ್, ಶ್ರೀಕಾಂತ್, ಶೈನ್ ಟಾಮ್ ಚಾಕೋ, ಮುರುಳಿ ಶರ್ಮಾ ಹೀಗೆ ಅತೀ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ. `ದೇವರ’ ವಿಶೇಷ ಹಾಡಿಗೆ ಹೆಜ್ಜೆ ಹಾಕುವುದಕ್ಕೆ ಚಿತ್ರತಂಡ ಪ್ಯಾನ್ ಇಂಡಿಯಾ ಬ್ಯೂಟಿಗೆ ಬಲೆಬೀಸಿರುವ ಬಗ್ಗೆ ಬಜಾರ್ ನಲ್ಲಿ ಚರ್ಚೆಯಾಗ್ತಿದೆ.
ಆರ್ ಆರ್ ಆರ್ ನಂತರ ತಾರಕ್ ಗ್ಲೋಬಲ್ ಸ್ಟಾರ್ ಎನಿಸಿಕೊಂಡಿರುವುದರಿಂದ ಅವರ ಜೊತೆ ಸ್ಕ್ರೀನ್ ಶೇರ್ ಮಾಡಲಿಕ್ಕೆ ಪ್ಯಾನ್ ಇಂಡಿಯಾ ತುಂಬೆಲ್ಲಾ ಫೇಮಸ್ ಆಗಿರುವ ಪೋರಿನೇ ಬೇಕು ಅಂತ ಫಿಲ್ಮ್ ಟೀಮ್ ಹುಡುಕಾಟದಲ್ಲಿದೆಯಂತೆ. ಅಷ್ಟಕ್ಕೂ, `ದೇವರ’ ಅಂಗಳದಲ್ಲಿ ಕೊಮರಮ್ ಭೀಮ್ ಜೊತೆ ಮೈ ಬಳುಕಿಸುವ ಅದೃಷ್ಟ ಅದ್ಯಾವ ನಟಿಮಣಿಗೆ ಸಿಗುತ್ತೋ? ಏನೋ ಗೊತ್ತಿಲ್ಲ. ಆದರೆ, ಟಿಟೌನ್ ಫಿಲ್ಮ್ ನಗರದಲ್ಲಿ ಮಗಧೀರನ ಚೆಲುವೆ ಕಾಜಲ್, ಬಿಟೌನ್ ಪರಮ ಸುಂದರಿ ಕೃತಿಸೆನಾನ್ ಹೆಸರು ಕೇಳಿಬರುತ್ತಿದೆ. ಇಂಟ್ರೆಸ್ಟಿಂಗ್ ಅಂದರೆ ಸೆನ್ಸೇಷನ್ ಮ್ಯೂಸಿಕ್ ಕಂಪೋಸರ್ ಅನಿರುದ್ ರವಿಚಂದರ್ `ದೇವರ’ ಸಿನಿಮಾಗೆ ಸ್ಪೆಷಲ್ ಡ್ಯಾನ್ಸ್ ನಂಬರ್ ಕಂಪೋಸ್ ಮಾಡಿದ್ದಾರಂತೆ. ಬಿಗ್ ಸ್ಕ್ರೀನ್ ಗೆ ಕಿಚ್ಚು ಹಚ್ಚುವ ಹಾಡು ಇದಾಗಿದ್ದು, ಆಲ್ ಇಂಡಿಯಾ ಫ್ಯಾನ್ಸ್ ಗೆ ಕಿಕ್ಕೇರಲಿದೆಯಂತೆ.ರತ್ನವೇಲ್ ಸಿನಿಮಾಟೋಗ್ರಫಿ, ಶ್ರೀಕರ್ ಪ್ರಸಾದ್ ಸಂಕಲನ ಸಿನಿಮಾಗಿದ್ದು, ಯುವಸುಧ ಆಟ್ರ್ಸ್ ಅಂಡ್ ಎನ್ಟಿ ಆರ್ ಆಟ್ರ್ಸ್ ಜಂಟಿಯಾಗಿ `ದೇವರ’ ಚಿತ್ರ ನಿರ್ಮಿಸುತ್ತಿದೆ. 2024 ರ ಏಪ್ರಿಲ್ 05ಕ್ಕೆ `ದೇವರ’ ವಲ್ಡ್ವೈಡ್ ತೆರೆಗಪ್ಪಳಿಸಲಿದೆ.





