ಶ್ರೀ ಹಾಗೂ ಪ್ರಣತಿ ನಾಯಕ- ನಾಯಕಿಯಾಗಿ ನಟಿಸಿರುವ “ಜಸ್ಟ್ ಪಾಸ್” ಚಿತ್ರದ ಟೀಸರ್ ಡಿಸೆಂಬರ್ 10ರಂದು ದುಬೈನಲ್ಲಿ ನಡೆಯಲಿರುವ “ದುಬೈ ದಸರಾ” ಸಂಗೀತ ರಸಸಂಜೆ ಕಾರ್ಯಕ್ರಮದಲ್ಲಿ ಪ್ರಸಾರವಾಗಲಿದೆ. ನಾಡಿನ ಹೆಸರಾಂತ ಕಲಾವಿದರು ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಸಾವಿರಾರು ಕನ್ನಡಿಗರ ಸಮ್ಮುಖದಲ್ಲಿ “ಜಸ್ಟ್ ಪಾಸ್” ಚಿತ್ರದ ಟೀಸರ್ ಪ್ರದರ್ಶನವಾಗಲಿದೆ. ಡಿಸೆಂಬರ್ 13 ರಂದು ಈ ಚಿತ್ರದ ಟೀಸರ್ A2 ಮ್ಯೂಸಿಕ್ ಮೂಲಕ ಬಿಡುಗಡೆಯಾಗಲಿದೆ.

ಈ ಹಿಂದೆ ‘ಇರುವುದೆಲ್ಲವ ಬಿಟ್ಟು’, ‘ಗಜಾನನ ಅಂಡ್ ಗ್ಯಾಂಗ್’ ಮತ್ತು ‘ಹೊಂದಿಸಿ ಬರೆಯಿರಿ’ ಚಿತ್ರಗಳಲ್ಲಿ ನಟಿಸಿರುವ ನಾಯಕ ನಟ ಶ್ರೀ ಮಹಾದೇವ್ ಈಗ ‘ಜಸ್ಟ್ ಪಾಸ್’ ಎಂಬ ತಮ್ಮ ನಾಲ್ಕನೇ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಶ್ರೀ ಮಹಾದೇವ್ ಕಾಲೇಜ್ ಹುಡುಗನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಶ್ರೀಗೆ ಪ್ರಣತಿ ಜೋಡಿಯಾಗಿದ್ದಾರೆ. ಡಾನ್ಸ್ ಕರ್ನಾಟಕ ಡಾನ್ಸ್, ಫ್ಯಾಮಿಲಿ ವಾರ್ ಸೀಸನ್ 2 ರನ್ನರ್ ಅಪ್ ಆಗಿರುವ ಪ್ರಣತಿ, ಬ್ರಹ್ಮಗಂಟು ಸೀರಿಯಲ್ ನಲ್ಲೂ ನಟಿಸಿದ್ದರು. ಈಗ `ಜಸ್ಟ್ ಪಾಸ್’ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

“ಜಸ್ಟ್ ಪಾಸ್” ಸಿನಿಮಾಗೆ ಕೆ.ಎಂ.ರಘು ಆ್ಯಕ್ಷನ್ ಕಟ್ ಹೇಳಿದ್ದಾರೆ. ಮೊದಲ ಬಾರಿ ನಿರ್ದೇಶಕರು ಯೂತ್ ಫುಲ್ ಸಬ್ಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ರಾಯ್ಸ್ ಎಂಟರ್ ಟೈನ್ಮೆಂಟ್ ಲಾಂಛನದಲ್ಲಿ ಕೆ.ವಿ.ಶಶಿಧರ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದ್ದು, ಸದ್ಯ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆ.ಶ್ರೀ, ಪ್ರಣತಿ, ರಂಗಾಯಣರಘು ಸಾಧುಕೋಕಿಲ ಸುಚೇಂದ್ರ ಪ್ರಸಾದ್, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ, ಗೋವಿಂದೇಗೌಡ, ದಾನಪ್ಪ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.ಕೆ.ಎಂ.ಪ್ರಕಾಶ್ ಸಂಕಲನ, ಹರ್ಷವರ್ಧನ್ ರಾಜ್ ಸಂಗೀತ, ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಾಹಣ ಚಿತ್ರಕ್ಕಿದೆ.





