ಅದ್ಯಾವ ದಿವ್ಯಮುಹೂರ್ತದಲ್ಲಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕಾಂತಾರ ಒಂದು ದಂತಕಥೆ ಅಂತ ಟೈಟಲ್ ಇಟ್ರೋ ಏನೋ ಗೊತ್ತಿಲ್ಲ. ಶೆಟ್ಟರು ಹರವಿಟ್ಟ ನೆಲಮೂಲದ ಕಥೆ ಮತ್ತು ದೈವದ ಮಹತ್ವ ದಂತಕಥೆಯಾಗಿಯೇ ದಾಖಲಾಯ್ತು. ಕೆಜಿಎಫ್ ನಂತರ ಇಡೀ ಜಗತ್ತು ಮತ್ತೊಮ್ಮೆ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತಾಯ್ತು. ಇದರಿಂದ ಶೆಟ್ರಿಗೆ ಮಾತ್ರವಲ್ಲ ಕರಾವಳಿ ಭಾಗದ ಕಥೆಗೆ ಬೇಡಿಕೆ ಹೆಚ್ಚಿದೆ. ಅಲ್ಲಿನ ಕಲೆ,ಸಂಸ್ಕೃತಿ, ಆಚರಣೆಯ ಜೊತೆಗೆ ದೈವದ ಕುರಿತಾದ ಸಿನಿಮಾ ಮಾಡಲಿಕ್ಕೆ ಸ್ಯಾಂಡಲ್ ವುಡ್ ಮಂದಿ ಉತ್ಸುಕರಾಗಿದ್ದಾರೆ. ಒಂದು ಬಗೆಯ ಸಿನಿಮಾಗಳು ಸೂಪರ್ ಹಿಟ್ ಆದಾಗ ಆ ಸಿದ್ದಸೂತ್ರದ ಹಿಂದೆ ಸಾಗೋದು, ಸಕ್ಸಸ್ ಗಾಗಿ ಹಪಹಪಿಸೋದು ಸಹಜ. ಅದರಂತೆ ಈಗ ಕೆಲ ನಿರ್ದೇಶಕರು ಕಾಂತಾರ ಜಾಡು ಹಿಡಿದು ಹೊರಟಿದ್ದಾರೆ. ಅವರಲ್ಲಿ ನಿರ್ದೇಶಕ ಗುರುದತ್ತ್ ಗಾಣಿಗ ಕೂಡ ಒಬ್ಬರು ಅನ್ನೋದಕ್ಕೆ ಅವರ ಹೊಸ ಸಿನಿಮಾ ಕರಾವಳಿ ಸಾಕ್ಷಿ.
ಗುರುದತ್ತ್ ಗಾಣಿಗ ಸ್ಯಾಂಡಲ್ ವುಡ್ ನ ಯಂಗ್ ಆಂಡ್ ಟ್ಯಾಲೆಂಟೆಡ್ ಡೈರೆಕ್ಟರ್. ಈ ಹಿಂದೆ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದ ಸಾರಥ್ಯ ವಹಿಸಿದ್ದರು. ಕಿಚ್ಚನ ಕೃಪಕಟಾಕ್ಷದಿಂದ ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಷ್ ಅವರಿಗೆ ಆ್ಯಕ್ಷನ್ ಕಟ್ ಹೇಳುವ ಅವಕಾಶ ಸಿಕ್ಕಿತ್ತು.ಹೌದು, ಕರ್ಣ ಹಾಗೂ ಕಿಚ್ಚ ಇಬ್ಬರನ್ನೂ ಹಾಕ್ಕೊಂಡು ಸಿನಿಮಾ ಮಾಡಿ ಸಿನಿಮಾ ಪ್ರೇಮಿಗಳಿಂದ ಸೈ ಎನಿಸಿಕೊಂಡಿದ್ದರು. ಇದೀಗ ಕರಾವಳಿ ಹೆಸರಿನ ಸಿನಿಮಾ ಮೂಲಕ ಮತ್ತೆ ಅಖಾಡಕ್ಕೆ ಇಳಿದಿದ್ದಾರೆ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವ್ರನ್ನ ಕೋಣದ ಮೇಲೆ ಕೂರಿಸಿ ಕರಾವಳಿ ಹಾಗೂ ಕಂಬಳದ ನಯಾ ಕಥೆ ಹೇಳೋದಕ್ಕೆ ಹೊರಟಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಚಿತ್ರದ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿದ್ದು, ಕುತೂಹಲ ಕೆರಳಿಸಿದೆ.
ಅಂದ್ಹಾಗೇ, ರಿಲೀಸ್ ಆಗಿರುವ ಟೀಸರ್ ನಲ್ಲಿ ಜಗತ್ತಿಗೆ ಎಂಟ್ರಿ ಕೊಡುವ ಎರಡು ಹೊಸ ಜೀವಗಳನ್ನು ನೋಡಬಹುದು. ತಾಯಿ ಮಗುವಿಗೆ ಜನ್ಮ ನೀಡುತ್ತಿರುವ ದೃಶ್ಯದ ಜೊತೆಗೆ ಎಮ್ಮೆ ಕೂಡ ತನ್ನ ಮಗುವಿಗೆ ಜನ್ಮ ನೀಡುತ್ತಿದೆ. ಈ ಟೀಸರ್ ನೋಡ್ತಿದ್ರೆ ಮನುಷ್ಯ ಮತ್ತು ಪ್ರಾಣಿ ನಡುವಿನ ಸಂಘರ್ಷದ ಬಗ್ಗೆ ಇರುವ ಸಿನಿಮಾ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗ್ತಿದೆ. ಬ್ಯಾ ಗ್ರೌಂಡ್ ನಲ್ಲಿ ಬರುವ ಯಕ್ಷಗಾನದ ಧ್ವನಿ ಟೀಸರ್ ನ ತೂಕವನ್ನು ಹೆಚ್ಚಿಸುವ ಜೊತೆಗೆ ಕುತೂಹಲ ದುಪ್ಪಟ್ಟು ಮಾಡಿದೆ. ಕರಾವಳಿ ಎಂದ ಮೇಲೆ ಆ ಭಾಗದ ಕಲೆ, ಸಂಸ್ಕೃತಿ, ದೈವ, ಯಕ್ಷಗಾನ ಮುಖ್ಯವಾಗಿ ಕಂಬಳ ಸೇರಿದಂತೆ ಅಲ್ಲಿನ ಆಚಾರ ವಿಚಾರ ಎಲ್ಲವನ್ನು ಈ ಸಿನಿಮಾದಲ್ಲಿ ನೋಡಬಹುದೆನ್ನುವ ಕಾತುರ ಅಭಿಮಾನಿಗಳಲ್ಲಿದೆ. ಇನ್ನು ಕರಾವಳಿ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಅಭಿಮನ್ಯೂ ಸದಾನಂದನ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.
ಇನ್ನೂ ಈ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಅವರ ಪಾತ್ರ ತುಂಬಾ ವಿಭಿನ್ನವಾಗಿದೆ. ಇಲ್ಲಿತನಕ ತರಹೇವಾರಿ ಪಾತ್ರಗಳಿಗೆ ಜೀವತುಂಬಿರುವ ಡೈನಾಮಿಕ್ ಪ್ರಿನ್ಸ್ ಗೆ ಈ ಸಿನಿಮಾದ ಪಾತ್ರ ಚಾಲೆಂಜಿಂಗ್ ಆಗಿರಲಿದ್ದು, ಕರಿಯರ್ ಗೆ ಪ್ಲಸ್ ಆಗುವಂತಿದೆ. ಸಾಕಷ್ಟು ವರ್ಷದಿಂದ ಬಿಗ್ ಬ್ರೇಕ್ ಗಾಗಿ ಎದುರುನೋಡ್ತಿರೋ ಪ್ರಜ್ಜುಗೆ ಕರಾವಳಿ ಚಿತ್ರದ ಈ ಪಾತ್ರ ಕೈಹಿಡಿಯುತ್ತಾ? ಕೆಸರಗದ್ದೆ ಓಟದಲ್ಲಿ ಕಂಬಳಿ ಓಡಿಸಿ ಪ್ರಿನ್ಸ್ ಸೈ ಎನಿಸಿಕೊಳ್ತಾರಾ? ಡಿವೈನ್ ಸ್ಟಾರ್ ಥರ ಡೈನಾಮಿಕ್ ಪ್ರಿನ್ಸ್ ಗೂ ಕರಾವಳಿ ಹಾಗೂ ಕಂಬಳ ಕಥೆ ವರವಾಗುತ್ತಾ? ಈ ಕುತೂಹಲಕ್ಕೆ ಸದ್ಯಕ್ಕೆ ಉತ್ತರವಿಲ್ಲ. ಬಟ್ ಡೈನಾಮಿಕ್ ಪ್ರಿನ್ಸ್ ಗೆ ಒಂದು ಬ್ರೇಕ್ ಸಿಗಬೇಕು. ಅದು ಈ ಚಿತ್ರದಿಂದ, ಗುರುದತ್ ಗಾಣಿಗ ಕಲ್ಪನೆಯ ಕರಾವಳಿ ಸಿನಿಮಾದಿಂದ ಸಿಗಲಿ ಅನ್ನೋದೇ ಮಜ್ಜಾ ಕನ್ನಡದ ಆಶಯ.