ಜ್ವಾಲಾಮುಖಿಯಂತೆ ಸಿಡಿದು, ಬೆಳ್ಳಿಭೂಮಿ ಅಂಗಳದಲ್ಲಿ ಚಂಡಮಾರುತದ ಅಲೆಯನ್ನೇ ಎಬ್ಬಿಸಿದ `ಸಲಾರ್’ ಸಿನಿಮಾ ಮೊದಲ ದಿನ ದೋಚಿದ್ದೆಷ್ಟು? ಅದೆಷ್ಟು ಕೋಟಿ ಹಣ ಹೊಂಬಾಳೆ ಖಜಾನೆಗೆ ಬಂದು ಸೇರಿತು. ರೆಬೆಲ್ ಸ್ಟಾರ್ ಪ್ರಭಾಸ್ ದಂಗೆಗೆ ಯಾವ್ಯಾವ ದಾಖಲೆಗಳೆಲ್ಲಾ ಧೂಳೀಪಟ ಆದ್ವು? ಹೀಗೊಂದಿಷ್ಟು ಕುತೂಹಲ ಪ್ರೇಕ್ಷಕ ವಲಯದಲ್ಲಿ ಇದ್ದೇ ಇರುತ್ತೆ. ಆ ಕೌತುಕಕ್ಕೆ ಉತ್ತರ ಇಲ್ಲಿದೆ ನೋಡಿ
ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ಕ್ಲಿಕ್ ಆಗಿದೆ. ಖಾನ್ಸಾರ್ ಸಾಮ್ರಾಜ್ಯದ ಕಥನಕ್ಕೆ ಕಲಾಭಿಮಾನಿಗಳು ಫುಲ್ ಮಾರ್ಕ್ ಕೊಟ್ಟು ಪಕ್ಕಾ ಪೈಸಾ ವಸೂಲ್ ಸಿನಿಮಾ ಅಂತ ಥಿಯೇಟರ್ ನಿಂದ ಹೊರನಡೆದಿದ್ದಾರೆ. ಹೀಗಾಗಿ, ಗಲ್ಲಾಪೆಟ್ಟಿಗೆ ಕೂಡ ಗಹಗಹಿಸುತ್ತಿದೆ.ಪ್ಯಾನ್ ಇಂಡಿಯಾ ಪ್ರೇಕ್ಷಕರೆಲ್ಲರೂ ಕೂಡ `ಸಲಾರ್’ ಸಿನಿಮಾ ನೋಡಿ ಮೆಚ್ಚಿಕೊಂಡಿರೋದ್ರಿಂದ ಕೋಟಿ ಕೋಟಿ ಹಣ ಹೊಳೆಯಾಗಿ ಹೊಂಬಾಳೆ ಖಜಾನೆ ಸೇರಿದೆ. ಐದು ಭಾಷೆಯಲ್ಲಿ ಅದ್ದೂರಿಯಾಗಿ ತೆರೆಕಂಡ `ಸಲಾರ್’ ಚಿತ್ರ ಅಡ್ವಾನ್ಸ್ ಬುಕ್ಕಿಂಗ್ನಲ್ಲಿ ಕೋಟಿ ಕೋಟಿ ಹಣ ಬಾಚಿಕೊಂಡಿತ್ತು. ಸುಮಾರು 30ಲಕ್ಷಕ್ಕೂ ಹೆಚ್ಚು ಟಿಕೆಟ್ಗಳು ಮೊದಲ ದಿನವೇ ಸೋಲ್ಡ್ ಔಟ್ ಆಗಿದ್ದರಿಂದ ಭರ್ಜರಿ ಕಮಾಯಿ ಆಗೋದು ಪಕ್ಕಾ ಆಗಿತ್ತು. ಅದರಂತೇ, ಈಗ ಮೊದಲ ದಿನದ ಬಾಕ್ಸ್ ಆಫೀಸ್ ಲೆಕ್ಕಚ್ಚಾರದ ಪಟ್ಟಿ ಹೊರಬಿದ್ದಿದೆ. ಸಿನಿಮಾ ಟ್ರೇಡ್ ಅನಲಿಸ್ಟ್ ಮನೋಬಲ ವಿಜಯಬಾಲನ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿರುವಂತೆ `ಸಲಾರ್’ ಫಸ್ಟ್ ಡೇ ವಲ್ರ್ಡ್ ವೈಡ್ ಬಾಕ್ಸ್ ಆಫೀಸ್ ಕಲೆಕ್ಷನ್ ಬರೋಬ್ಬರಿ 176 ಕೋಟಿ 52 ಲಕ್ಷ ರೂಪಾಯಿ
ಇಷ್ಟೊಂದು ಕಲೆಕ್ಷನ್ ಆಗಿರೋದು ನಿಜಾನಾ? ಈ ಕುತೂಹಲದ ಪ್ರಶ್ನೆಗೆ ಹೊಂಬಾಳೆ ಸಂಸ್ಥೆ ಉತ್ತರ ಕೊಡಬೇಕು. ಆದರೆ ಫಸ್ಟ್ ಡೇ ಕಲೆಕ್ಷನ್ ಬಗ್ಗೆ ಹೊಂಬಾಳೆ ಸಂಸ್ಥೆ ಅಧಿಕೃತವಾಗಿ ಪ್ರಕಟಣೆ ಮಾಡಿಲ್ಲ. ಬಟ್, ತಮ್ಮ ಸೋಷಿಯಲ್ ಖಾತೆಯಲ್ಲಿ `ಸಲಾರ್’ ರೆಕಾರ್ಡ್ ಬ್ರೇಕಿಂಗ್ ಬ್ಲಾಕ್ಬಸ್ಟರ್ ಅನ್ನೋದನ್ನ ಖಚಿತಪಡಿಸಿದೆ. ಇತ್ತ ಕಿಂಗ್ ಖಾನ್ ಜವಾನ್, ಪಠಾಣ್, ಅನಿಮಲ್ ಸಿನಿಮಾಗಳ ರೆಕಾರ್ಡ್ನ `ಸಲಾರ್’ ಬೀಟ್ ಮಾಡಿರುವ ಬಗ್ಗೆ ವರದಿಯಾಗ್ತಿದೆ. ಪಠಾಣ್ ಮೊದಲ ದಿನ 57 ಕೋಟಿ ರೂ ಗಳಿಸಿದ್ದರೆ, ಜವಾನ್ 75 ಕೋಟಿ ರೂ. ಮತ್ತು ಅನಿಮಲ್ 63 ಕೋಟಿ ರೂ. ಗಳಿಕೆ ಕಂಡಿತ್ತು. ಇದೀಗ `ಸಲಾರ್’ 175 ಕೋಟಿ ಕೊಳ್ಳೆ ಹೊಡೆದಿದೆ. ಈ ಮೂಲಕ ಪಠಾಣ್, ಜವಾನ್ ಮತ್ತು ಅನಿಮಲ್ ಸಿನಿಮಾವನ್ನು ಗಲ್ಲಾಪೆಟ್ಟಿಗೆ ಡಬ್ಬದಲ್ಲಿ ಸೋಲಿಸಿ 2023ರ ಅತಿದೊಡ್ಡ ಓಪನರ್ ಅನಿಸಿಕೊಂಡಿದ್ದಾರೆ ಪ್ರಭಾಸ್
ಕೆಜಿಎಫ್ ನಂತರ ಮತ್ತೊಂದು ಬ್ಲಾಕ್ಬಸ್ಟರ್ ಹಿಟ್ಗಾಗಿ ಹೊಂಬಾಳೆ ಕಾದುಕುಳಿತಂತೆ, ಒಂದೇ ಒಂದು ಗೆಲುವಿಗಾಗಿ ಡಾರ್ಲಿಂಗ್ ಪ್ರಭಾಸ್ ಐದಾರು ವರ್ಷಗಳಿಂದ ಎದುರುನೋಡ್ತಿದ್ದರು. ಸಾಹೋ, ರಾಧೆಶ್ಯಾಮ್, ಆದಿಪುರುಷ್ ನಂತಹ ಬಹುಕೋಟಿ ವೆಚ್ಚದ ಸಿನಿಮಾಗಳಿಗೆ ಪ್ರಭಾಸ್ ಬಣ್ಣಹಚ್ಚಿದ್ರೂ ಕೂಡ ಗೆಲುವು ದಕ್ಕಲಿಲ್ಲ. ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟವನ್ನ ಕಾಯ್ದುಕೊಳ್ಳಲಾಗಲಿಲ್ಲ. ಆದರೆ, `ಸಲಾರ್’ ಸಿನಿಮಾದಿಂದ ಪ್ರಭಾಸ್ ಭರ್ಜರಿಯಾಗಿ ಕಂಬ್ಯಾಕ್ ಮಾಡುತ್ತಾರೆ. ಬಿಗ್ ಬ್ರೇಕ್ ಪಡೆದುಕೊಂಡು ಡಾರ್ಲಿಂಗ್ ಹಳೆಯ ಫಾರ್ಮ್ಗೆ ಮರಳ್ತಾರೆ. ಸೋಲಿನ ಸುಳಿಗೆ ಸಿಕ್ಕಿ ಒದ್ದಾಡ್ತಿರೋ ಮಿರ್ಚಿ ಹೀರೋನಾ ನೀಲ್ ಸಾಹೇಬ್ರು ಮೇಲಕ್ಕೆ ಎತ್ತುತ್ತಾರೆ. ಗೆಲುವಿನ ಗದ್ದುಗೆ ಏರಿ ಪ್ರಭಾಸ್ ಗಹಗಹಿಸ್ತಾರೆ ಅನ್ನೋ ಮಾತುಗಳು ಜೋರಾಗಿ ಕೇಳಿಬಂದಿದ್ವು. ಅದರಂತೇ, ಸಾಹೋ ಹೀರೋ ಸೋಲಿಗೆ ಸೆಡ್ಡು ಹೊಡೆದಿದ್ದಾರೆ. ದೇವನಾಗಿ ಧಗಧಗಿಸಿ ಪ್ಯಾನ್ ಇಂಡಿಯಾ ಪ್ರೇಕ್ಷಕರಿಂದ ಬಹುಪರಾಕ್ ಹಾಕಿಸಿಕೊಂಡಿದ್ದಾರೆ. `ಲಯನ್, ಚೀತಾ, ಟೈಗರ್, ಎಲಿಫೆಂಟ್ ಗಿಂತ ಡೈನೋಸಾರ್ ಉರುಫ್ ರೆಬೆಲ್ ಸ್ಟಾರ್ ಪ್ರಭಾಸ್ ಎಷ್ಟು ವೈಲೆನ್ಸ್ ಅನ್ನೋದನ್ನ `ಸಲಾರ್’ ಮೂಲಕ ನೀಲ್ ಸಾಹೇಬ್ರು ಸಾಬೀತುಪಡಿಸಿದ್ದಾರೆ.
ಹಾಲಿವುಡ್ ಲೋಕಕ್ಕೆ ಸೆಡ್ಡು ಹೊಡೆದಂತಿರುವ ಹೈವೋಲ್ಟೇಜ್ ಆ್ಯಕ್ಷನ್ ಥ್ರಿಲ್ಲರ್ `ಸಲಾರ್’ ಸಿನಿಮಾನ ಬರೀ ಸಿನಿಮಾ ಪ್ರೇಮಿಗಳು ಮಾತ್ರವಲ್ಲ ಸಿನಿಮಾ ತಾರೆಯರು ಕೂಡ ಶಿಳ್ಳೆ ಹೊಡೆದು ಸಂಭ್ರಮಿಸುತ್ತಿದ್ದಾರೆ. ದೃಶ್ಯಬ್ರಹ್ಮ ಎಸ್ ಎಸ್ ರಾಜಮೌಳಿ, ಮೆಗಾ ಸ್ಟಾರ್ ಚಿರಂಜೀವಿ ಸೇರಿದಂತೆ ಅನೇಕ ತಾರೆಯರು ಕೊಂಡಾಡುತ್ತಿದ್ದಾರೆ. ಈ ಚಿತ್ರದಿಂದ ಹೊಂಬಾಳೆ ಫಿಲ್ಮ್ಸ್ಗೆ ಭರ್ಜರಿ ಲಾಭ ಆಗಿದೆ.’ಸಲಾರ್’ ಚಿತ್ರವನ್ನು ಕೆಲವರು ‘ಉಗ್ರಂ’ ಕಥೆ ಹಾಗೂ ‘ಕೆಜಿಎಫ್ 2’ ಮೇಕಿಂಗ್ಗೆ ಹೋಲಿಕೆ ಮಾಡಿದರು. ವಿಶ್ವ ಮಟ್ಟದಲ್ಲಿ ಈ ಸಿನಿಮಾದ ಗಳಿಕೆ 175 ಕೋಟಿ ರೂಪಾಯಿ ಆಗಿದೆ. ಈ ಚಿತ್ರದಿಂದ ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ದೊಡ್ಡ ಗೆಲುವು ಕಂಡಿದ್ದಾರೆ. ಕ್ರಿಸ್ಮಸ್ ರಜೆ ಇರುವುದರಿಂದ ಸಿನಿಮಾ ಮತ್ತಷ್ಟು ಗಳಿಕೆ ಮಾಡಲಿದೆ. ಹೊಂಬಾಳೆ ಸಂಸ್ಥೆ ತನ್ನ ಎಲ್ಲಾ ಸಿನಿಮಾಗಳನ್ನು ಅಮೇಜಾನ್ ಪ್ರೈಂ ಕೊಡುತ್ತಾ ಬರುತ್ತಿತ್ತು. ಇದೀಗ ಸಲಾರ್ ನೆಟ್ಫ್ಲಿಕ್ಸ್ಗೆ ಬರಲಿದೆ ಎನ್ನಲಾಗಿದೆ.