ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಪ್ರಯುಕ್ತ ಕಟೌಟ್ ನಿಲ್ಲಿಸುವುದಕ್ಕೆ ಹೋಗಿ ವಿದ್ಯುತ್ ಸ್ಪರ್ಶದಿಂದ ಮೂವರು ಅಭಿಮಾನಿಗಳು ಮೃತಪಟ್ಟಿರುವ ಘಟನೆ ಲಕ್ಷ್ಮೇಶ್ವರದ ಸೂರಣಗಿ ಗ್ರಾಮದಲ್ಲಿ ನಡೆದಿದೆ. ನಿಧನರಾಗಿರುವ ಮೂವರ ಅಭಿಮಾನಿಗಳ ಕುಟುಂಬಸ್ಥರನ್ನು ಭೇಟಿ ಮಾಡಲು ನಟ ಯಶ್ ಲಂಡನ್‍ನಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ರಸ್ತೆ ಮಾರ್ಗವಾಗಿ ಲಕ್ಷ್ಮೇಶ್ವರಕ್ಕೆ ತೆರಳುತ್ತಿದ್ದಾರೆ. ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಲು ಯಶ್ ಆಗಮಿಸಿದ್ದಾರೆ.
ಯಶ್ ಶೂಟಿಂಗ್ ನಿಮಿತ್ತ ಲಂಡನ್‍ಗೆ ಹಾರಿದ್ದರು. ಹುಟ್ಟುಹಬ್ಬದ ದಿನ ಅಭಿಮಾನಿಗಳನ್ನು ಭೇಟಿ ಮಾಡಲಿಕ್ಕೆ ಸಾಧ್ಯವಾಗುವ ವಿಚಾರ ತಿಳಿಸಿ, ಟಾಕ್ಸಿಕ್ ಸಿನಿಮಾದ ಶೂಟಿಂಗ್‍ನಲ್ಲಿ ಪಾಲ್ಗೊಂಡಿದ್ದರು. ದುರದೃಷ್ಟವಶಾತ್ ಈ ಘಟನೆ ಸಂಭವಿಸಿದ್ದರಿಂದ ರಾಕಿಭಾಯ್ ಫಾರಿನ್‍ನಿಂದ ಫ್ಲೈಟ್ ಏರಿ ವಾಪಾಸಾಗಿದ್ದಾರೆ. ಲಂಡನ್‍ನಿಂದ ಸೀದಾ ಹುಬ್ಬಳಿಗೆ ಬಂದು ಗದಗದ ಲಕ್ಷ್ಮೇಶ್ವರಕ್ಕೆ ತೆರಳಿ ಮೃತ ಅಭಿಮಾನಿ ಕುಟುಂಬವರನ್ನ ಸಂತೈಸೋ ಕೆಲಸ ಮಾಡಿದ್ದಾರೆ.
ಮೃತಪಟ್ಟ ಯಶ್ ಅಭಿಮಾನಿಗಳ ಕುಟುಂಬಕ್ಕೆ ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡಿದೆ. ಈ ಸಂಬಂಧ ಮಾತನಾಡಿರುವ ಸಚಿವ ಹೆಚ್.ಕೆ ಪಾಟೀಲ್, ವಿದ್ಯುತ್ ಸ್ಪರ್ಶದಿಂದ ಮೃತಪಟ್ಟವರ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದೇವೆ. ಗಾಯಳುಗಳಿಗೆ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಮುಂದುವರಿದು, ಯಶ್ ಅಭಿಮಾನಿಗಳು ಮೃತಪಟ್ಟಿರುವ ಘಟನೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ನಟ ಯಶ್ ಸಹ ನನ್ನ ಜೊತೆ ಮಾತನಾಡಿದ್ದಾರೆ. ಅಭಿಮಾನಿಗಳ ಮನೆಗೆ ಅವರಿಂದು ಭೇಟಿ ನೀಡಲಿದ್ದಾರೆ. ಎತ್ತರದಲ್ಲಿ ಫ್ಲೆಕ್ಸ್ ಹಾಕುವಾಗ ಭದ್ರತಾ ವೈಫಲ್ಯವಾಗುತ್ತಿದೆ. ಈ ರೀತಿ ಘಟನೆಗಳು ನಡೆಯದಂತೆ ಏನೆಲ್ಲಾ ಎಚ್ಚರಿಕೆ ವಹಿಸಬಹುದು ಎಂದು ಸಿಎಂ ಜೊತೆಗೆ ಚರ್ಚೆ ಮಾಡ್ತೀವಿ. ನಂತರ ಕ್ರಮವನ್ನು ಅನುಷ್ಠಾನಗೊಳಿಸುತ್ತೇವೆ ಎಂದು ವಿವರಿಸಿದ್ದಾರೆ.
ಮೃತರನ್ನು ಹನುಮಂತ ಹರಿಜನ್ (24), ಮುರಳಿ ನಡುವಿನಮನಿ (20) ಹಾಗೂ ನವೀನ್ ಗಾಜಿ (20) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮಂಜುನಾಥ್, ಪ್ರಕಾಶ್ ಹಾಗೂ ಹನುಮಂತ ಎಂಬವರಿಗೆ ಗಂಭೀರ ಗಾಯಾಳಾಗಿವೆ. ಗಾಯಾಳುಗಳನ್ನು ಲಕ್ಷ್ಮೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಮಧ್ಯರಾತ್ರಿ ವೇಳೆ, ಹತ್ತಾರು ಜನ ಯುವಕರು ಸೇರಿಕೊಂಡು ತಮ್ಮ ನೆಚ್ಚಿನ ನಟನ ಕಟೌಟ್ ಕಟ್ಟಲು ಮುಂದಾಗಿದ್ದಾರೆ. ರಾತ್ರಿ ಸಮಯ ಆಗಿದ್ದರಿಂದ ವಿದ್ಯುತ್ ತಂತಿ ಯುವಕರ ಗಮನಕ್ಕೆ ಬಂದಿಲ್ಲ. ಇದರಿಂದ ಈ ದುರ್ಘಟನೆ ಸಂಭವಿಸಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಸೂತಕದ ಛಾಯೆ ಮನೆ ಮಾಡಿದೆ.ಈ ಸಂಬಂಧ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.