ಆಶಿಕಾ ರಂಗನಾಥ್…. ಸ್ಯಾಂಡಲ್ವುಡ್ ನಲ್ಲಿ ಈಕೆ ಮಿಲ್ಕಿಬ್ಯೂಟಿ ಅಂತಲೇ ಫೇಮಸ್. ಮುದ್ದು ಮುಖದಿಂದ, ಅಭಿನಯದಿಂದ ಕನ್ನಡ ಕಲಾಭಿಮಾನಿಗಳ ಮನಸೂರೆಗೊಂಡಿರೋ ಈ ಮುದ್ದುಬೊಂಬೆ ಈಗ ಮಹಾನಟಿಯಂತೆ ಕಂಗೊಳಿಸಿ ತೆಲುಗು ಪ್ರೇಕ್ಷಕರು ಕಣ್ಣರಳಿಸುವಂತೆ ಮಾಡಿದ್ದಾರೆ. ಯಸ್, ರೆಮೋ ಸಿನಿಮಾ ನಂತರ ಪರಭಾಷೆಗೆ ಹಾರಿರೋ ಪಟಾಕಿ ಪೋರಿ ಸದ್ಯ ʻನಾ ಸಾಮಿ ರಂಗʼ ಅಖಾಡದಲ್ಲಿದ್ದಾರೆ. ಟಾಲಿವುಡ್ ಕಿಂಗ್ ಅಕ್ಕಿನೇನಿ ನಾಗಾರ್ಜುನ್ ಜೊತೆ ಸ್ಕ್ರೀನ್ ಶೇರ್ ಮಾಡಿದ್ದು ಖಡಕ್ ಡೈಲಾಗ್ ಹೊಡೆದಿದ್ದಾರೆ. ಸದ್ಯ, ನಾ ಸಾಮಿ ರಂಗ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಮುದ್ದುಬೊಂಬೆ ಆಶಿಕಾ ಮಹಾನಟಿಯ ಅವತಾರ ನೋಡುಗರ ಗಮನ ಸೆಳೆಯುತ್ತಿದೆ. ನಾಗಾರ್ಜುನ್ ಹಾಗೂ ಚುಟುಚುಟು ಬೆಡಗಿ ಕಾಂಬೋ ಕ್ಲಿಕ್ ಆಗೋ ಎಲ್ಲಾ ಲಕ್ಷಣಗಳು ಕಾಣ್ತಿವೆ.
`ನಾ ಸಾಮಿ ರಂಗ’ ನಾಗಾರ್ಜುನ ಅವರ 99ನೇ ಚಿತ್ರ. ವಿಜಯ್ ಬಿನ್ನಿ ನಿರ್ದೇಶನ ಈ ಸಿನಿಮಾಗಿದೆ. ಪಕ್ಕಾ ಫ್ಯಾಮಿಲಿ ಎಂಟರ್ ಟೇನರ್ ಚಿತ್ರ ಇದಾಗಿದ್ದು, ಸಂಕ್ರಾಂತಿ ಹಬ್ಬಕ್ಕೆ ಸ್ಪೆಷಲ್ಲಾಗಿ ತೆರೆಗೆ ಬರ್ತಿದೆ. ರಾಷ್ಟ್ರಪ್ರಶಸ್ತಿ ಹಾಗೂ ಆಸ್ಕರ್ ಪ್ರಶಸ್ತಿ ವಿಜೇತ ಎಂ ಎಂ ಕೀರವಾಣಿ ಸಂಗೀತ ಸಂಯೋಜಿಸಿದ್ದು, ಪ್ರಸನ್ನ ಕುಮಾರ್ ಬೆಜವಾಡ ಸಂಭಾಷಣೆ ಬರೆದಿದ್ದಾರೆ. ನಾಗಾರ್ಜುನ್ ಹೊರತಾಗಿ, ಚಿತ್ರದಲ್ಲಿ ಅಲ್ಲರಿ ನರೇಶ್, ಆಶಿಕಾ ರಂಗನಾಥ್, ಮಿರ್ನಾ ಮೆನನ್, ಅಲ್ಲರಿ ನರೇಶ್ ಮತ್ತು ರಾಜ್ ತರುಣ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 64ರಲ್ಲೂ ಯಂಗ್ ಅಂಡ್ ಎನರ್ಜಿಟಿಕ್ ಹೀರೋ ಆಗಿರೋ ಟಿಟೌನ್ ಕಿಂಗ್, ಇವತ್ತಿನ ಹೀರೋಗಳು ಥಂಡಾ ಹೊಡೆಯುವಂತೆ ಮಾಡ್ತಿದ್ದಾರೆ.
ಇನ್ನೂ ಸ್ಯಾಂಡಲ್ವುಡ್ ಅಂಗಳದಲ್ಲಿ ಸ್ಟಾರ್ ನಾಯಕಿಯಾಗಿ ಮಿಂಚಿದ ಆಶಿಕಾ ರಂಗನಾಥ್, ಪಟ್ಟತ್ತು ಅರಸನ್ ಚಿತ್ರದ ಮೂಲಕ ತಮಿಳು ಇಂಡಸ್ಟ್ರಿಗೆ ಕಾಲಿಟ್ಟಿದ್ದರು. ಅಮಿಗೋಸ್ ಮೂಲಕ ಟಾಲಿವುಡ್ ಪ್ರವೇಶಿಸಿದ್ದರು. ಆದರೆ, ಡೆಬ್ಯೂ ಸಿನಿಮಾದಿಂದ ಅಷ್ಟೇನು ಸಕ್ಸಸ್ ಸಿಗಲಿಲ್ಲ. ಆದ್ರೀಗ ಟಿಟೌನ್ ಕಿಂಗ್ಗೆ ಕ್ವೀನ್ ಆಗಿ ಕಮಾಲ್ ಮಾಡಲು ಹೊರಟಿದ್ದಾರೆ. ಫಸ್ಟ್ ಲುಕ್ನಿಂದನೇ ತೆಲುಗು ಪ್ರೇಕ್ಷಕರ ಹೃದಯ ಗೆದ್ದಿರೋ ಮುಗುಳುನಗೆ ಸುಂದರಿ, ʻನಾ ಸಾಮಿ ರಂಗʼ ಸಿನಿಮಾದ ಮೂಲಕ ಟಾಲಿವುಡ್ ಪ್ರೇಕ್ಷಕರ ಮನಸ್ಸಲ್ಲಿ ಅಚ್ಚಳಿಯದೇ ಉಳಿಯುತ್ತಾರೆನ್ನುವ ಭರವಸೆ ಟ್ರೇಲರ್ನಿಂದ ಗರಿಗೆದರಿದೆ.
ಸದ್ಯ ಪರಭಾಷಾ ಅಂಗಳದಲ್ಲಿ ಕನ್ನಡತಿಯರದ್ದೇ ಕಾರುಬಾರು. ಅದರಲ್ಲೂ ರಶ್ಮಿಕಾ ಮತ್ತು ಶ್ರೀಲೀಲಾ ಬಹುಬೇಡಿಕೆಯ ನಟಿಯರಾಗಿ ಗುರ್ತಿಸಿಕೊಂಡಿದ್ದಾರೆ. ಅವ್ರಂತೆ ಮಿಲ್ಕಿಬ್ಯೂಟಿ ಆಶಿಕಾ ಕೂಡ ಶೈನ್ ಆಗ್ತಾರಾ? ಅಕ್ಕ-ಪಕ್ಕದ ಇಂಡಸ್ಟ್ರಿಯಲ್ಲಿ ಪಟಾಕಿ ಪೋರಿ ಡಿಮ್ಯಾಂಡಿಂಗ್ ಹೀರೋಯಿನ್ನಾಗಿ ಬೆಳೆದು ನಿಲ್ತಾರಾ? ಕಾದುನೋಡಬೇಕು. ಎನಿವೇ, ಕ್ರೇಜಿಬಾಯ್ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಈಕೆ, ಶಿವಣ್ಣ, ಸುದೀಪ್, ಗಣೇಶ್, ಶ್ರೀ ಮುರುಳಿ ಸೇರಿದಂತೆ ಹಲವು ತಾರೆಯರೊಟ್ಟಿಗೆ ಸ್ಕ್ರೀನ್ ಶೇರ್ ಮಾಡಿ ಸೈ ಎನಿಸಿಕೊಂಡಿದ್ದಾರೆ. ಸದ್ಯ ಕನ್ನಡದಲ್ಲಿ ಸಿಂಪಲ್ಸುನಿ ನಿರ್ದೇಶನದ ಗತವೈಭವ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ.