ʻಸಲಾರ್ʼ ಸಿನಿಮಾದ ಮೂಲಕ ಡಾರ್ಲಿಂಗ್ ಪ್ರಭಾಸ್ ವರ್ಲ್ಡ್‌ವೈಡ್ ದಿಬ್ಬಣ ಹೋಗಿದ್ದಾರೆ. ಬಾಹುಬಲಿ ಸಿನಿಮಾದ ನಂತರ ಮರೀಚಿಕೆಯಾಗಿದ್ದ ಗೆಲುವನ್ನ ಪ್ರಶಾಂತ್ ನೀಲ್ ಕೃಪಕಟಾಕ್ಷದಿಂದ ಮರಳಿ ಪಡೆದಿರುವ ಅಮರೇಂದ್ರ ಬಾಹುಬಲಿ ʻಸಲಾರ್ʼ ಸಿನಿಮಾದಿಂದ ಗೆಲುವಿನ ಗದ್ದುಗೆ ಏರಿ ಗಹಗಹಿಸುತ್ತಿದ್ದಾರೆ. ಯಶಸ್ಸೆಂಬ ಅಶ್ವಮೇಧ ಕುದುರೆಯನ್ನೇರಿ ಮಗದೊಮ್ಮೆ ಪ್ಯಾನ್ ಇಂಡಿಯಾ ಅಂಗಳದಲ್ಲಿ ಮೆರೆಯುತ್ತಿದ್ದಾರೆ. ಇದೇ ಹೊತ್ತಿಗೆ ಪ್ರಭಾಸ್‌ನ ಕಲ್ಕಿಯಾಗಿ ಮತ್ತೊಮ್ಮೆ ಕಣಕ್ಕಿಳಿಸಲು ನಿರ್ದೇಶಕ ನಾಗ್ ಅಶ್ವಿನ್ ಮುಹೂರ್ತ ಫಿಕ್ಸ್ ಮಾಡಿಸಿದ್ದಾರೆ. 6000 ವರ್ಷಗಳ ಹಿಂದೆ ಮುಗಿದೋದ ಅಧ್ಯಾಯಕ್ಕೆ ಮುನ್ನುಡಿ ಬರೆದಿರೋ ಮಹಾನಟಿ ಡೈರೆಕ್ಟರ್, ಆ ಕಥೆಗೆ ಅಮರೇಂದ್ರ ಬಾಹುಬಲಿನಾ ನಾಯಕನನ್ನಾಗಿ ಮಾಡಿ, ಬೆಳ್ಳಿಭೂಮಿ ಅಂಗಳದಲ್ಲಿ ಮೆರವಣಿಗೆ ಹೊರಡಿಸಲು ಸಿದ್ದತೆ ನಡೆಸುತ್ತಿದ್ದಾರೆ. ಅಷ್ಟಕ್ಕೂ, ಆ ಕಥೆ ? ಆ ಸಿನಿಮಾ ಬೇರಾವುದು ಅಲ್ಲ Kalki 2898 AD.
ಯಸ್. Kalki 2898 AD ನಾಗ್ ಅಶ್ವಿನ್ ಹಾಗೂ ಪ್ರಭಾಸ್ ಕಾಂಬಿನೇಷನ್‌ನಲ್ಲಿ ಬರ್ತಿರೋ ಮೋಸ್ಟ್ ಎಕ್ಸ್‌ಪೆಕ್ಡೆಡ್ ಸೈನ್ಸ್ ಫಿಕ್ಷನ್ ಸಿನಿಮಾ. ಇಲ್ಲಿ ಪ್ರಭಾಸ್ ಜೊತೆ ದೀಪಿಕಾ ಪಡುಕೋಣೆ, ದಿಶಾ ಪಟಾಣಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಸೇರಿದಂತೆ ಹಲವು ದಿಗ್ಗಜರ ಸಮಾಗಮ ಆಗಿದೆ. ಅಚ್ಚರಿ ಅಂದರೆ 6000 ವರ್ಷಗಳ ಹಿಂದೆ ಮುಗಿದ ಕಥೆನಾ ನಾಗ್ ಅಶ್ವಿನ್ ರೀಓಪನ್ ಮಾಡಿದ್ದಾರೆ. ಡಾರ್ಲಿಂಗ್ ಪ್ರಭಾಸ್‌ನ ಹೀರೋ ಮಾಡಿ ನಯಾ ಕಥೆ ಹೇಳೋದಕ್ಕೆ ಹೊರಟಿದ್ದಾರೆ. ಸಲಾರ್ ದೇವ ಇಲ್ಲಿ ಸೂಪರ್ ಹೀರೋ ಆಗಿ ಮಿಂಚಿದ್ದು, ಕಲ್ಕಿಯಾಗಿ ಕಮಾಲ್ ಮಾಡಲು ರೆಡಿಯಾಗಿದ್ದಾರೆ. ಈಗಾಗಲೇ ರಿಲೀಸ್ ಆಗಿರೋ ಟೀಸರ್ ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ. ಇನ್ನೂ ಚಿತ್ರತಂಡ ಪ್ರಚಾರ ಪಡಸಾಲೆಗೆ ಧುಮುಕಿದೆ. ವಿವಿಧ ನಗರದಲ್ಲಿ ರೈಡರ್ಸ್ ಗಳು ಕಲ್ಕಿ ಪೋಸ್ಟರ್ ಹಿಡಿದು ಪ್ರೋಮೋಷನ್ ಶುರು ಮಾಡಿದ್ದಾರೆ. ಈ ವಿಭಿನ್ನ ಪ್ರಮೋಷನ್ ನೋಡಿ ಡಾರ್ಲಿಂಗ್ ಫ್ಯಾನ್ಸ್ ಖುಷಿಪಡ್ತಿದ್ದಾರೆ.
ಅಂದ್ಹಾಗೇ, ಈ ಚಿತ್ರಕ್ಕಾಗಿ ಬರೀ ದಕ್ಷಿಣ ಭಾರತವಲ್ಲ ಇಡೀ ವಿಶ್ವ ಸಿನಿದುನಿಯಾವೇ ಕಾದು ಕುಳಿತಿದೆ. ಸುಮಾರು 600 ಕೋಟಿ ವೆಚ್ಚದಲ್ಲಿ ಎರಡು ಭಾಗಗಳಲ್ಲಿ ತಯ್ಯಾರಾಗುತ್ತಿರುವ ಈ ಸಿನಿಮಾ, ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲೇ ಅತೀ ದುಬಾರಿ ಚಿತ್ರವೆಂಬ ಖ್ಯಾತಿ ಪಡೆದಿದೆ. ತೆಲುಗು ಹಾಗೂ ಹಿಂದಿ ಎರಡು ಭಾಷೆಯಲ್ಲಿ ಏಕಕಾಲಕ್ಕೆ ತಯ್ಯಾರಾಗುತ್ತಿದ್ದು, ಇಂಟರ್ ನ್ಯಾಷನಲ್ ಟೆಕ್ನಿಷಿಯನ್ಸ್ ಗಳು ಈ ಸಿನಿಮಾಗಾಗಿ ವರ್ಕ್ ಮಾಡ್ತಿದ್ದಾರೆ. ಅಮೆರಿಕದಲ್ಲಿ ಪ್ರತಿಷ್ಠಿತ ‘ಸ್ಯಾನ್ ಡಿಯಾಗೋ ಕಾಮಿಕ್ ಕಾನ್’ ಸಮಾರಂಭದಲ್ಲಿ ಫಸ್ಟ್ ಗ್ಲಿಂಪ್ಸ್ ಅನಾವರಣಗೊಳಿಸುವ ಮೂಲಕ ಚಿತ್ರತಂಡ ಹೊಸ ದಾಖಲೆ ಬರೆದಿತ್ತು. ಇದೀಗ, ರಿಲೀಸ್ ಡೇಟ್ ಅನೌನ್ಸ್ ಮಾಡುವ ಮೂಲಕ ಸಿನಿಮಾಪ್ರೇಮಿಗಳ ಕಾತುರ ಹೆಚ್ಚಿಸಿದೆ. 2024ರ ಮೇ9ರಂದು ಥಿಯೇಟರ್‌ಗಳಲ್ಲಿ ಲಗ್ಗೆ ಇಡಲಿದೆ. ಜಗದೇಕ ವೀರಡು ಅತಿಲೋಕ ಸುಂದರಿ, ಮಹಾನಟಿಯಂತಹ ಸೂಪರ್ ಡೂಪರ್ ಹಿಟ್ ಚಿತ್ರ ನಿರ್ಮಿಸಿರುವ ವೈಜಯಂತಿ ಮೂವೀಸ್ ಪ್ರಾರಂಭವಾಗೀ ಮೇ 9ಕ್ಕೆ 5 ದಶಕವಾಗಲಿದೆ. ಹೀಗಾಗಿ ಕಲ್ಕಿ 2898 ಸಿನಿಮಾವನ್ನು ಈ ದಿನದಂದೇ ತೆರೆಗೆ ತರ್ತಿದೆ.