ಶೆಟ್ರೆ ಬಾಲಿವುಡ್ಗೆ ಹೋಗ್ತಿದ್ದೀರಂತೆ ಹೌದಾ ಎಂದಾಗ? ಯಾವ ವುಡ್ಗೂ ಹೋಗ್ತಿಲ್ಲ, ಯಾವ ವುಡ್ಗೂ ಹೋಗಲ್ಲ ಎಂದಿದ್ದರು. ನಂಗೆ ಬಾಲಿವುಡ್, ಕಾಲಿವುಡ್, ಟಾಲಿವುಡ್ ಸೇರಿದಂತೆ ಎಲ್ಲಾ ವುಡ್ಗಳಿಂದ ಆಫರ್ ಬಂದಿರೋದೇನೋ ನಿಜ ಆದರೆ ನಾನು ಸ್ಯಾಂಡಲ್ವುಡ್ ಬಿಟ್ಟು ಹೋಗಲ್ಲ ಅಂತ ಹೇಳಿಕೊಂಡಿದ್ದರು. ಆದರೆ ಸದ್ದಿಲ್ಲದೇ ಮುಂಬೈಗೆ ಹೋಗಿ ಬಾಲಿವುಡ್ ಸ್ಟಾರ್ ಡೈರೆಕ್ಟರ್ನ ಭೇಟಿ ಮಾಡಿ ಬಂದಿದ್ದಾರೆ. ಕಳೆದ ಮೂರು ತಿಂಗಳ ಹಿಂದೊಮ್ಮೆ ಇದೇ ಡೈರೆಕ್ಟರ್ನ ಮೀಟ್ ಮಾಡಿದ್ರು. ಇದೀಗ ಮತ್ತೊಮ್ಮೆ ಅವರನ್ನ ಭೇಟಿಯಾಗುವ ಮೂಲಕ ರಿಷಬ್ ಶೆಟ್ರು ಕುತೂಹಲ ಕೆರಳಿಸಿದ್ದಾರೆ. ಅಷ್ಟಕ್ಕೂ, ಡಿವೈನ್ ಸ್ಟಾರ್ ಮುಂಬೈಗೆ ಹೋಗಿ ಮೀಟ್ ಆಗಿದ್ದು ಯಾರನ್ನ ಗೊತ್ತೆ ? ಬಾಲಿವುಡ್ನ ಸ್ಟಾರ್ ನಿರ್ದೇಶಕ ಅಶುತೋಷ್ ಗೋವಾರಿಕರ್ ಅವ್ರನ್ನ
ಅಶುತೋಷ್ ಗೋವಾರಿಕರ್ ಹಿಂದಿ ಚಿತ್ರರಂಗದ ಹೆಸರಾಂತ ನಿರ್ದೇಶಕರು. ಲಗಾನ್, ಸ್ವದೇಶ್, ಜೋದಾ ಅಕ್ಬರ್, ಮೊಹೆಂಜೋದಾರೋ, ಪಾಣಿಪತ್ ಸೇರಿದಂತೆ ಹಲವು ಅದ್ಭುತ ಸಿನಿಮಾಗಳನ್ನ ಭಾರತೀಯ ಚಿತ್ರರಂಗಕ್ಕೆ ಕಾಣಿಕೆಯಾಗಿ ಕೊಟ್ಟಿರುವ ಖ್ಯಾತಿ ಇವರಿಗೆ ಸಲ್ಲುತ್ತೆ. ಇಂತಹ ಜನಪ್ರಿಯ ನಿರ್ದೇಶಕರನ್ನ ಕಾಂತಾರ ಖ್ಯಾತಿಯ ಶೆಟ್ರು ಎರಡೆರಡು ಭಾರಿ ಭೇಟಿಯಾಗಿರುವುದು ಹಲವು ಕುತೂಹಲಕ್ಕೆ ಕಾರಣವಾಗಿದೆ. ಇಬ್ಬರು ಸೇರಿ ಮಹಾಸಿನಿಮಾವೊಂದಕ್ಕೆ ಕೈ ಹಾಕಿದರಾ ಎನ್ನುವ ಪ್ರಶ್ನೆ ಕೂಡ ಮೂಡಿದೆ.
ನಿಮಗೆಲ್ಲ ಗೊತ್ತಿರೋ ಹಾಗೇ ಶೆಟ್ರು ಸದ್ಯ ಕಾಂತಾರ ಪ್ರೀಕ್ವೆಲ್ ಸಿನಿಮಾಗೆ ಕೈ ಹಾಕಿದ್ದಾರೆ. ಮೊದಲ ನೋಟದಲ್ಲೇ ಇಡೀ ಪ್ಯಾನ್ ಇಂಡಿಯಾ ಪ್ರೇಕ್ಷಕರನ್ನ ಮಂತ್ರಮುಗ್ದರನ್ನಾಗಿಸಿದ್ದಾರೆ. ಮೈಕೊಡವಿಕೊಂಡು ಅಖಾಡಕ್ಕಿಳಿದು ಅದ್ದೂರಿ ಸಿನಿಮಾ ತೆಗೆಯೋ ಪ್ಲಾನ್ ನಲ್ಲಿರುವ ಶೆಟ್ರು, ಒಂದೊಂದಾಗಿ ದೈವಗಳ ದರ್ಶನ ಪಡೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಮಂಗಳೂರಿನ ಗುರುಪುರ ವಜ್ರದೇಹಿ ಮಠದ ಮೈಸಂದಾಯ ಕೋಲದಲ್ಲಿ ರಿಷಬ್ ಭಾಗಿಯಾಗಿದ್ದರು. ಸ್ವಯಂಪ್ರೇರಿತವಾಗಿ ದೈವದ ಅಭಯ ಪಡೆಯಲು ಹೋಗಿದ್ದ ಶೆಟ್ರಿಗೆ, ಧೈರ್ಯ ಕಳೆದುಕೊಳ್ಳದಂತೆ ದೈವದ ಸೂಚನೆ ನೀಡಿತ್ತು. ಏನೇ ಸಮಸ್ಯೆ ಎದುರಾದರೂ ಕುಗ್ಗಬೇಡ, ಮುನ್ನುಗ್ಗು ನಿನ್ನ ಬೆನ್ನ ಹಿಂದೆ ನಾನಿದ್ದೇನೆ ಎಂದು ಸನ್ನೆ ಮಾಡಿ ದೈವ ಆಶೀರ್ವದಿಸಿತ್ತು. ಇದರ ಬೆನ್ನಲ್ಲೇ ರಿಷಬ್ ಶೆಟ್ರು ಮುಂಬೈ ಫ್ಲೈಟ್ ಏರಿ ಬಾಲಿವುಡ್ ಡೈರೆಕ್ಟರ್ನ ಭೇಟಿ ಮಾಡಿ ಅಚ್ಚರಿ ಮೂಡಿಸಿದ್ದಾರೆ.
ಅಷ್ಟಕ್ಕೂ, ನಮ್ಮ ಶೆಟ್ರು, ಅಶುತೋಷ್ ಗೋವಾರಿಕರ್ ಅವ್ರನ್ನ ಮೀಟ್ ಮಾಡ್ತಿರುವುದು ಯಾಕೆ? ಅವ್ರೊಟ್ಟಿಗೆ ಬಾಲಿವುಡ್ ಪ್ರಾಜೆಕ್ಟ್ಗೆ ಏನಾದರೂ ಕೈ ಜೋಡಿಸಿದ್ರಾ? ಈ ಕುತೂಹಲದ ಪ್ರಶ್ನೆಗೆ ಸದ್ಯಕ್ಕೆ ನಮ್ಮ ಬಳಿಯೂ ಉತ್ತರವಿಲ್ಲ. ಆದರೆ, ಅಶುತೋಷ್ ಗೋವಾರಿಕರ್ ಅವರು `ಆದಿ ಗುರು ಶಂಕರಾಚಾರ್ಯರ’ ಸಿನಿಮಾ ಮಾಡಲು ಹೊರಟಿದ್ದಾರೆ. ಚಿತ್ರಕ್ಕೆ `ಶಂಕರ್’ ಅಂತ ಹೆಸರಿಟ್ಟು ಸಿನಿಮಾ ಅನೌನ್ಸ್ ಮಾಡಿದ್ದಾರೆ. ಶಂಕರಾಚಾರ್ಯರ ಜೀವನ ಮತ್ತು ಲೋಕಜ್ಞಾನವನ್ನು ಸಿನಿಮೀಯ ನಿರೂಪಣೆ ಮೂಲಕ ಇಡೀ ಜಗತ್ತಿಗೆ ತೋರಿಸುವುದಕ್ಕೆ ಸಜ್ಜಾಗಿದ್ದು, ಇವತ್ತಿನ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ನಲ್ಲಿ `ಶಂಕರ್’ ಚಿತ್ರ ಮೂಡಿಬರಲಿದೆ. ಅನುಮಾನ ಏನಂದರೆ ಈ ಚಿತ್ರಕ್ಕೀಗ ಡಿವೈನ್ ಸ್ಟಾರ್ ಕೈ ಜೋಡಿಸಿರಬಹುದಾ ಅನ್ನೋದು.
ಹಾಗಾದ್ರೆ, ಶಂಕರಾಚಾರ್ಯರ ಪಾತ್ರವನ್ನ ಮಾಡ್ತಿರುವುದು ನಮ್ಮ ಡಿವೈನ್ ಸ್ಟಾರಾ? ಹಿಂದೂ ಧರ್ಮ ಪುನರೋತ್ಥಾನದ ಮೂಲ ಪುರುಷ ಶಂಕರಾಚಾರ್ಯರ ಪಾತ್ರಕ್ಕೆ ದೈವಮಾನವ ಡಿವೈನ್ ಸ್ಟಾರ್ ಗಿಂತ ಬೇರೊಬ್ಬರು ಬೇಕಿಲ್ಲವೆಂದು ಗೋವಾರಿಕರ್ ನಿರ್ಧರಿಸಿದ್ರಾ? ಅದಕ್ಕಾಗಿಯೇ ಶೆಟ್ರನ್ನ ಮುಂಬೈನ ತಮ್ಮ ಆಫೀಸ್ಗೆ ಕರೆಸಿಕೊಳ್ತಿದ್ದಾರಾ? ಇದ್ಯಾವ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ. ಆದರೆ, ಲಗಾನ್ ನಿರ್ದೇಶಕರನ್ನ ನಮ್ಮ ಡಿವೈನ್ ಸ್ಟಾರ್ ಭೇಟಿ ಮಾಡಿ ಬಂದಿರುವುದರಿಂದ, ಶಂಕರಾಚಾರ್ಯರ ಪಾತ್ರವನ್ನ ಶೆಟ್ರೆ ನಿಭಾಯಿಸಬಹುದೆಂದು ಊಹಿಸಿಕೊಳ್ಳಬಹುದು. ಒಂದ್ವೇಳೆ ನಿಮ್ಮಗಳ ಈ ಕಲ್ಪನೆ ಸುಳ್ಳಾದರೆ `ಶಂಕರ್’ ಸಿನಿಮಾಗೆ ಕಥೆ-ಚಿತ್ರಕಥೆ-ಸಂಭಾಷಣೆ ಬರೆಯಲಿಕ್ಕಾದ್ರೂ ಬಾಲಿವುಡ್ ಡೈರೆಕ್ಟರ್ ಗೆ ರಿಷಬ್ ನೆರವಾಗಿರಬಹುದು. ಯಾಕಂದ್ರೆ, ನೆಲಮೂಲದ ಕಥೆಯನ್ನ ಕಾಂತಾರ ಮೂಲಕ ಇಡೀ ಜಗತ್ತಿಗೆ ಸಾರಿ ಸೈ ಎನಿಸಿಕೊಂಡವರು. ಹೀಗಾಗಿ, ಅದ್ವೈತ ಚಿಂತನೆಯ ಮೂಲಕ ಲೋಕ ಬೆಳಗಿದ ಮಹಾನ್ ಶಕ್ತಿಯ ಕಥೆಯನ್ನ ಬೆಳ್ಳಿತೆರೆಗೆ ತರುವಲ್ಲಿ ಗೋವಾರಿಕರ್ ಜೊತೆ ಡಿವೈನ್ ಸ್ಟಾರ್ ಕೈ ಜೋಡಿಸಿರುತ್ತಾರೆ ಎಂದರೆ ಬಹುಷಃ ತಪ್ಪಾಗಲಿಕ್ಕಿಲ್ಲ. ಏನೇ ಆದ್ರೂ ಶೆಟ್ರೆ ಇದಕ್ಕೆ ಉತ್ತರ ಕೊಡಬೇಕು. ಇಲ್ಲ ಅಶುತೋಷ್ ಗೋವಾರಿಕರ್ ಅವ್ರು ಅಧಿಕೃತವಾಗಿ ಯಾವ ಸಿನಿಮಾ? ಏನ್ ಕಥೆ? ಶೆಟ್ರ ಪಾತ್ರವೇನು? ಎಂಬುದನ್ನ ಅಧಿಕೃತವಾಗಿ ಹೇಳಿಕೊಳ್ಳಬೇಕು. ಅಲ್ಲಿವರೆಗೂ ಕುತೂಹಲದಿಂದ ಕಾದುನೋಡೋದಷ್ಟೇ ನಮ್ಮಗಳ ಕೆಲಸ