ಮಹಾನಟಿ ಕೀರ್ತಿ ಸುರೇಶ್ ʻಹಿಂದಿ ತೆರಿಯಾದು ಪೋಯಾʼ ಅಂತಿದ್ದಾರೆ. ಅದಕ್ಕೆ ಕಾರಣ ʻರಘುತಾತʼ. ಯಾರ್ರೀ ರಘುತಾತ ಅಂತೀರಾ? ಹೊಂಬಾಳೆ ಮಾಲೀಕರು ನಿರ್ಮಾಣ ಮಾಡ್ತಿರುವ ತಮಿಳು ಸಿನಿಮಾದ ಹೆಸರು. ಯಸ್, ಕೆಜಿಎಫ್, ಕಾಂತಾರ ನಂತರ ಹೊಂಬಾಳೆ ಸಂಸ್ಥೆ ಪರಭಾಷೆಯಲ್ಲಿ ಚಿತ್ರ ನಿರ್ಮಾಣಕ್ಕಿಳಿದಿದೆ. ಆಯಾ ಭಾಷೆಯ ಸ್ಟಾರ್ ನಟರು, ನಿರ್ದೇಶಕರ ಜೊತೆ ಕೈ ಜೋಡಿಸೋ ಮೂಲಕ ಒಳ್ಳೊಳ್ಳೆ ಸಿನಿಮಾಗಳನ್ನ ಭಾರತೀಯ ಸಿನಿಮಾರಂಗಕ್ಕೆ ಕಾಣಿಕೆಯಾಗಿ ನೀಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ. ಅದರ ಭಾಗವಾಗಿ ತಮಿಳಿನಲ್ಲಿ ತೆರೆಗೆ ಬರಲು ರೆಡಿಯಾಗ್ತಿರೋ ಸಿನಿಮಾ ʻರಘುತಾತʼ .
ಈ ಸಿನಿಮಾವನ್ನು ಹೆಸರಾಂತ ಯುವಬರಹಗಾರ ಸುಮನ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಹಿಂದಿಯ ಜನಪ್ರಿಯ ಶೋಗಳಾಗಿರುವ ‘ದಿ ಫ್ಯಾಮಿಲಿ ಮ್ಯಾನ್’, ‘ಗನ್ಸ್ ಆಂಡ್ ಗುಲಾಬ್ಸ್’, ‘ಗೇಮ್ ಓವರ್’, ‘ಫರ್ಜಿ’ ಬರಹಗಾರರ ತಂಡದ ಸದಸ್ಯರಾಗಿರುವ ಇವರು, ಇದೀಗ ‘ರಘುತಾತ’ ಸಿನಿಮಾದ ಚಿತ್ರಕತೆಯನ್ನು ತಾವೇ ರಚಿಸಿ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಫಸ್ಟ್ ಲುಕ್ ಹಾಗೂ ಒಂದಿಷ್ಟು ಗ್ಲಿಂಪ್ಸ್ ಮೂಲಕ ಈ ಚಿತ್ರ ಸಿನಿಮಾ ಪ್ರೇಮಿಗಳ ಗಮನ ಸೆಳೆದಿತ್ತು. ಸದ್ಯ ರಿಲೀಸ್ ಆಗಿರೋ ʻರಘುತಾತʼ ಟೀಸರ್ ದುನಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ. ʻಹಿಂದಿ ತೆರಿಯಾದು ಪೋಯಾʼ ಡೈಲಾಗ್ ಕೆಲವರಿಗೆ ಕಿಕ್ ಕೊಟ್ಟರೆ, ಇನ್ನೂ ಕೆಲವರನ್ನ ಕೆರಳುವಂತೆ ಮಾಡಿದೆ.
ʼʼರಘುತಾತಾ’ ಮಹಿಳಾ ಪ್ರಧಾನ ಕಥೆಯನ್ನೊಳಗೊಂಡ ಚಿತ್ರವಾಗಿದ್ದು, ಒಬ್ಬ ಯುವತಿಯ ಸುತ್ತ ಸುತ್ತುತ್ತದೆ. ಆಕೆ ತನ್ನ ನೆಲ ಮತ್ತು ಜನರ ಅಸಿತ್ವವನ್ನು ರಕ್ಷಿಸುವ ನಿಟ್ಟಿನಲ್ಲಿ ಏನೆಲ್ಲ ಸಾಹಸಗಳನ್ನು ಮಾಡುತ್ತಾಳೆ ಎಂಬುದನ್ನು ಈ ಕಥೆಯಲ್ಲಿ ಹಾಸ್ಯಮಯವಾಗಿ ಚಿತ್ರಿಸಲಾಗಿದೆʼʼ ಎಂದು ಚಿತ್ರತಂಡ ಈ ಹಿಂದೆಯೇ ಹೇಳಿಕೊಂಡಿತ್ತು. ಇದೀಗ ಬಿಡುಗಡೆಯಾದ ಒಂದು ನಿಮಿಷದ ಟೀಸರ್‌ನಲ್ಲಿ, ತಮಿಳುನಾಡಿನಲ್ಲಿ ಹಿಂದಿ ಹೇರಿಕೆಯ ವಿರುದ್ಧ ಹೋರಾಡುವ ಯುವತಿಯಾಗಿ ಕೀರ್ತಿ ಸುರೇಶ್ ಮಿಂಚಿದ್ದಾರೆ. ಉದ್ಯೋಗ ಬಡ್ತಿಗಾಗಿ ಹಿಂದಿ ಪರೀಕ್ಷೆಯಲ್ಲಿ ಉತ್ತೀರ್ಣವಾಗಬೇಕು ಎನ್ನುವ ಷರತ್ತನ್ನು ಆಕೆ ವಿರೋಧಿಸುತ್ತಾಳೆ. ಅನೇಕ ಜನರನ್ನು ಸಂಘಟಿಸಿ ಬೀದಿಗಿಳಿದು ಹೋರಾಡುತ್ತಾಳೆ. ಸದ್ಯ ಇದಿಷ್ಟು ವಿಚಾರ ಟೀಸರ್ ಮೂಲಕ ಬಹಿರಂಗಗೊಂಡಿದೆ. ರೆಟ್ರೋ ಶೈಲಿಯಲ್ಲಿ ಚಿತ್ರ ಮೂಡಿ ಬಂದಿದೆ. ದಿಟ್ಟ ಯುವತಿ ಪಾತ್ರದಲ್ಲಿ ಕಂಡು ಬಂದಿರುವ ಕೀರ್ತಿ ಸುರೇಶ್ ಪಾತ್ರಕ್ಕೆ ಅಭಿಮಾನಿಗಳು ಮನ ಸೋತಿದ್ದಾರೆ.
ಎಂ.ಎಸ್. ಭಾಸ್ಕರ್, ದೇವದರ್ಶಿನಿ, ರವೀಂದ್ರ ವಿಜಯ್, ಆನಂದ್‌ಸಾಮಿ, ರಾಜೇಶ್ ಬಾಲಕೃಷ್ಣನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಯಾಮಿನಿ ಯಜ್ನಮೂರ್ತಿ ಛಾಯಾಗ್ರಹಣ ಚಿತ್ರಕ್ಕಿದ್ದು, ʼಜೈ ಭೀಮ್ʼ ಖ್ಯಾತಿಯ ಸೀನ್ ರೋಲ್ಡನ್ ಸಂಗೀತ ಸಂಯೋಜಿಸಿದ್ದಾರೆ. ಟೀಸರ್ ಕೊನೆಯಲ್ಲಿ ಕಮಿಂಗ್ ಸೂನ್ ಎಂದು ಹೇಳಿರುವ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಘೋಷಿಸಿಲ್ಲ. ಮೂಲಗಳ ಪ್ರಕಾರ ಈ ಚಿತ್ರ ಬೇಸಗೆ ರಜೆಯ ವೇಳೆ ತೆರೆಗೆ ಬರಲಿದೆ. ಒಟ್ನಲ್ಲಿ ಹೊಂಬಾಳೆ ಸಂಸ್ಥೆ ಪ್ರಸ್ತುತ ಹಲವು ಸಿನಿಮಾಗಳ ಮೇಲೆ ಬಂಡವಾಳ ಹೂಡಿದೆ. ‘ಸಲಾರ್’ ಬ್ಲಾಕ್ ಬಸ್ಟರ್ ಬೆನ್ನಲ್ಲೇ ಸೀಕ್ವೆಲ್‌ಗೆ ತಯಾರಿ ನಡೆಸಿದೆ. ಕನ್ನಡದಲ್ಲಿ ಶ್ರೀಮುರಳಿ ನಟನೆಯ ‘ಬಘೀರ’, ಯುವ ರಾಜ್ಕುಮಾರ್ ನಟನೆಯ ‘ಯುವ’, ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡುತ್ತಿರುವ ‘ಕಾಂತಾರ 1’, ರಕ್ಷಿತ್ ಶೆಟ್ಟಿ ನಟಿಸಿ ನಿರ್ದೇಶನ ಮಾಡುತ್ತಿರುವ ‘ರಿಚರ್ಡ್ ಆಂಟೊನಿ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ.