ಇಂಡಿಯಾದ ಮೊದಲ ಸೂಪರ್ ಸ್ಟಾರ್ ಅಂತಾನೇ ಕರೆಸಿಕೊಳ್ಳುವ ತಲೈವಾಗೆ ಬಾಲಿವುಡ್‌ನಿಂದ ಬುಲಾವ್ ಬಂದಿದೆ. ವಯಸ್ಸು 73 ಆದರೂ ಕೂಡ ಏಜ್ ಈಸ್ ಜಸ್ಟ್ ಎ ನಂಬರ್ ಅಂತ ಪ್ರೂ ಮಾಡ್ತಾ, ಬೆಳ್ಳಿತೆರೆ ಹಾಗೂ ಬಾಕ್ಸ್ ಆಫೀಸ್‌ನಲ್ಲಿ ದರ್ಬಾರ್ ಮಾಡ್ತಿರೋ ಟೈಗರ್ ಮುತ್ತುವೇಲ್ ಪಾಂಡಿಯನ್‌ಗೆ ಬಿಟೌನ್ ಮತ್ತೊಮ್ಮೆ ಗಾಳ ಹಾಕಲು ಪ್ರಯತ್ನಿಸಿದೆ. ಬಾಲಿವುಡ್‌ನ ಜನಪ್ರಿಯ ನಿರ್ದೇಶಕ ಕಂ ನಿರ್ಮಾಪಕ ಸಾಜಿದ್ ನಾಡಿಯವಾಲ ನಿರ್ಮಿಸ್ತಿರೋ ಸಿನಿಮಾಗೆ ಬಾಬಾರನ್ನ ಸಂಪರ್ಕ ಮಾಡಿದ್ದು, ಸದ್ಯ ಮಾತುಕತೆಯ ಹಂತದಲ್ಲಿರೋದಾಗಿ ಬಿಟೌನ್ ಅಂಗಳದಲ್ಲಿ ಸುದ್ದಿಯಾಗ್ತಿದೆ.
ಬಾಬಾ ಕೈಯಲ್ಲಿ ಸದ್ಯ ಮೂರ್ನಾಲ್ಕು ಸಿನಿಮಾಗಳಿವೆ. ಜೈಲರ್ ಮ್ಯಾಸೀವ್ ಹಿಟ್ಟಾದ ಬೆನ್ನಲ್ಲೇ ಜನಪ್ರಿಯ ನಿರ್ಮಾಣ ಸಂಸ್ಥೆಗಳು ತಲೈವಾ ಹಿಂದೆಬಿದ್ದಿದ್ದು, ಸದ್ಯ ಲೈಕಾ ಪ್ರೊಡಕ್ಷನ್ ನಿರ್ಮಿಸ್ತಿರೋ ʻವೆಟ್ಟೈಯನ್ʼ ಚಿತ್ರದಲ್ಲಿ ಬಾಷಾ ಬ್ಯುಸಿಯಾಗಿದ್ದಾರೆ. ಜೈ ಭೀಮ್ ಸಿನಿಮಾ ಖ್ಯಾತಿಯ ಟಿ.ಜೆ ಜ್ಞಾನವೇಲ್ ನಿರ್ದೇಶನ ʻವೆಟ್ಟೈಯನ್ʼ ಚಿತ್ರಕ್ಕಿದ್ದು ನಿರೀಕ್ಷೆ ಹೆಚ್ಚಿದೆ. ಬಿಗ್ ಬಿ ಅಮಿತಾಬ್ ಬಚ್ಚನ್, ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ ಸೇರಿದಂತೆ ಸೌತ್-ನಾರ್ತ್ ಸೂಪರ್ ಸ್ಟಾರ್‌ಗಳ ಸಮಾಗಮ ಈ ಚಿತ್ರದಲ್ಲಾಗಿದೆ.
ಈ ಸಿನಿಮಾದ ಜೊತೆಗೆ ಶಿವಾಜಿ ಸನ್ ಪಿಕ್ಚರ್ಸ್ ನಿರ್ಮಾಣದ ಸಿನಿಮಾದಲ್ಲಿ ತೊಡಗಿಸಿಕೊಳ್ಳಬೇಕಿದೆ. ಜೈಲರ್ ನಂತರ ನಿರ್ಮಾಪಕ ಕಲಾನಿಧಿ ಮಾರನ್ ಅವರು ಪಡೆಯಪ್ಪನ ಕಾಲ್‌ಶೀಟ್ ಪಡೆದಿದ್ದು, ಮತ್ತೊಂದು ಅದ್ದೂರಿ ಸಿನಿಮಾ ಮಾಡೋದಕ್ಕೆ ಮುಂದಾಗಿದ್ದಾರೆ. ಲೋಕೇಶ್ ಕನಗರಾಜ್ ನಿರ್ದೇಶನದ ಜವಬ್ದಾರಿ ಹೊತ್ತಿದ್ದು, ಕಥೆ-ಚಿತ್ರಕಥೆ ನಿರ್ಮಾಣದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಇದೇ ಮೊದಲ ಭಾರಿಗೆ ವಿಕ್ರಮ್ ಸಾರಥಿಗೆ ತಲೈವಾ ಕಾಲ್‌ಶೀಟ್ ಸಿಕ್ಕಿದ್ದು ಎಲ್‌ಸಿಯೂ ಕಾನ್ಸೆಪ್ಟ್‌ನಲ್ಲಿ ಶಿವಾಜಿನಾ ಹೇಗೆ ತೋರಿಸ್ತಾರೆನ್ನುವ ಕುತೂಹಲ ಸಕಲರಲ್ಲೂ ಇದೆ.
ಇನ್ನೂ ಈ ಸಿನಿಮಾದ ಜೊತೆಗೆ ಜೈಲರ್ ಸೀಕ್ವೆಲ್ ಗೂ ಪಡೆಯಪ್ಪ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆನ್ನುವ ಸುದ್ದಿಯಿದೆ. ಸದ್ಯ ಕಮಿಟ್ ಆಗಿರೋ ಸಿನಿಮಾಗಳನ್ನ ಪೂರೈಸಿ ನಂತರ ಜೈಲರ್ ಅಖಾಡಕ್ಕೆ ಧಮ್ಕತ್ತಾರೆನ್ನುವ ನ್ಯೂಸ್ ಕಾಲಿವುಡ್ ಅಂಗಳದಲ್ಲಿ ಓಡಾಡ್ತಿದೆ. ಇದರ ಜೊತೆಗೆ ಬಿಟೌನ್ ಅಂಗಳದಿಂದ ಬುಲಾವ್ ಬಂದಿದ್ದು ಅಲ್ಲಿಗೂ ಲಗ್ಗೆ ಇಡಬೇಕಿದೆ. ಈಗಾಗಲೇ ಹಿಂದಿಯ ಸಾಕಷ್ಟು ಸಿನಿಮಾಗಳಲ್ಲಿ ತಲೈವಾ ಧಗಧಗಿಸಿದ್ದಾರೆ. ಇದೀಗ ಮತ್ತೊಮ್ಮೆ ಲಾಲ್ ಸಲಾಂನ ಹಿಂದಿ ಅಖಾಡಕ್ಕೆ ಕರೆದೊಯ್ಯುವ ಪ್ಲಾನ್ ಭರ್ಜರಿಯಾಗಿ ನಡೀತಿದೆ. ಹೇಗಿರಲಿದೆ ಆ ಸಿನಿಮಾ? ನಿರ್ದೇಶಕರು ಯಾರು? ಸಿನಿಮಾ ತಂಡ ಹಾಗೂ ಟೆಕ್ನಿಷಿಯನ್ಸ್‌ಗಳ ಬಗ್ಗೆ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.