ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಹಾಗೂ ಡ್ಯಾನ್ಸ್ ಕಿಂಗ್ ಪ್ರಭುದೇವ ಕಾಂಬಿನೇಷನ್‌ನಲ್ಲಿ ಬರುತ್ತಿರುವ ʻಕರಟಕ ದಮನಕʼ ಸಿನಿಮಾ ಸಖತ್ ಸೌಂಡ್ ಮಾಡ್ತಿದೆ. ವಿಕಟಕವಿ ಯೋಗರಾಜ್ ಭಟ್ ಕಲ್ಪನೆಯಲ್ಲಿ ಅರಳಿರೋ ಈ ಚಿತ್ರ ಈಗಾಗಲೇ ಹಾಡುಗಳ ಮೂಲಕ ಸಿನಿಮಾ ಪ್ರೇಮಿಗಳ ಮನಸೂರೆಗೊಂಡಿದೆ. ಇದೀಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಮೃತ ಹಸ್ತದಿಂದ ಅನಾವರಣಗೊಂಡಿರೋ ಕರಟಕ ದಮನಕ ಕ್ಯಾರೆಕ್ಟರ್ ಟೀಸರ್ ಕಲಾಭಿಮಾನಿಗಳ ಗಮನ ಸೆಳೆಯುತ್ತಿದೆ.
ಶಿವಣ್ಣ ಹಾಗೂ ಪ್ರಭುದೇವ ಜುಗಲ್‌ಬಂದಿ ಕಿಕ್ ಕೊಡುತ್ತೆ, ಇವರಿಬ್ಬರ ಕಾಂಬಿನೇಷನ್ ವರ್ಕೌಟ್ ಆಗುತ್ತೆ ಅನ್ನೋದು ಟೀಸರ್ ನೋಡಿದರೆ ಗೊತ್ತಾಗ್ತಿದೆ. ಇವರಿಬ್ಬರಿಗೆ ಜೋಡಿಯಾಗಿ ನಿಶ್ವಿಕಾ ನಾಯ್ಡು, ಪ್ರಿಯಾ ಆನಂದ್ ನಟಿಸಿದ್ದಾರೆ. ಮುಖ್ಯ ಮಂತ್ರಿ ಚಂದ್ರು ಹಾಗೂ ತನಿಕೆಲ್ಲ ಭರಣಿ, ರವಿಶಂಕರ್, ರಾಕ್‌ಲೈನ್ ವೆಂಕಟೇಶ್, ರಂಗಾಯಣ ರಘು, ಬಿರಾದರ್ ಸೇರಿದಂತೆ ಹಲವು ಹಿರಿಯ ಕಲಾವಿದರ ದಂಡೇ ಈ ಸಿನಿಮಾದಲ್ಲಿದೆ. ವಿ ಹರಿಕೃಷ್ಣ ಸಂಗೀತ ಸಂಯೋಜನೆಯಲ್ಲಿ 7 ಹಾಡುಗಳು ಮೂಡಿಬಂದಿವೆ. ಸಂತೋಷ್ ರೈ ಪಾತಾಜೆ ಕ್ಯಾಮೆರಾ ಕೈಚಳಕ ಸಿನಿಮಾಗಿದೆ. ಸದ್ಯ ಕ್ಯಾರೆಕ್ಟರ್ ಟೀಸರ್‌ನಿಂದ ಸಿನಿಮಾ ಸೌಂಡ್ ಮಾಡ್ತಿದ್ದು, ಶೀಘ್ರದಲ್ಲೇ ಟ್ರೇಲರ್ ಹೊರಬೀಳಲಿದೆ.
ಪಂಚತಂತ್ರದ ಎರಡು ಕ್ಯಾರೆಕ್ಟರ್‌ಗಳನ್ನು ಟೈಟಲ್ ಆಗಿಟ್ಟುಕೊಂಡು ಭಟ್ರು ಈ ಸಿನಿಮಾ ಮಾಡಿದ್ದಾರೆ. ನರಿಗಳ ಸ್ವಭಾವವನ್ನೇ ಇಬ್ಬರು ದಿಗ್ಗಜರ ಪಾತ್ರಕ್ಕೆ ಕೊಟ್ಟು ಭಟ್ರು ಏನು ಹೇಳುವುದಕ್ಕೆ ಹೊರಟಿದ್ದಾರೆ ಎನ್ನುವುದು ಸಿನಿಪ್ರಿಯರ ಕುತೂಹಲಕ್ಕೆ ಕಾರಣವಾಗಿದೆ. ʻಕರಟಕ ದಮನಕʼ ಎಂದರೆ ‘ಒಂದಾನೊಂದು ಕಾಲದಲ್ಲಿ ಎರಡು ಕುತಂತ್ರಿ ನರಿಗಳಿದ್ದವು. ಒಂದರ ಹೆಸರು ಕರಟಕ ಇನ್ನೊಂದರ ಹೆಸರು ದಮನಕ. ಈ ಎರಡೂ ನರಿಗಳು ಕಾಡು ಮತ್ತು ನಾಡಿನ ತಲೆ ಕೆಡಿಸಿ ಇತಿಹಾಸವಾದವು. ಈ ಕುತಂತ್ರಿ ನರಿಗಳು ಇಂದು ಇಲ್ಲಿ ಮಾನವ ರೂಪ ತಾಳಿವೆ. ಎಚ್ಚರಿಕೆ’ ಎಂದು ಪೋಸ್ಟ್ ಮಾಡಿ ತಲೆಗೆ ಹುಳಬಿಟ್ಟಿದ್ದಾರೆ. ಈಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಈ ಚಿತ್ರದ ಕ್ಯಾರೆಕ್ಟರ್ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಟೀಸರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು, ಮಾರ್ಚ್ 8 ಮಹಾ ಶಿವರಾತ್ರಿ ಶುಭದಿನದಂದು ಚಿತ್ರ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.