ಬಾಲಿವುಡ್ ರಾಮಾಯಣದ ಸುದ್ದಿ ಸಮಾಚಾರ ಇಂದು ನಿನ್ನೆಯದಲ್ಲ. ಕಳೆದ ನಾಲ್ಕು ವರ್ಷಗಳಿಂದಲೂ ಸದ್ದು ಸುದ್ದಿಮಾಡುತ್ತಲೇ ಇದೆ. ಇದೀಗ ಸಿನಿಮಾ ಸೆಟ್ಟೇರುವ ಗಳಿಗೆ ಹತ್ತಿರವಾಗಿದ್ದು ಮತ್ತೊಮ್ಮೆ ಬಿಗ್ ಬ್ರೇಕಿಂಗ್ ನ್ಯೂಸ್ ಆಗಿದೆ. ಹೌದು, ಬಿಟೌನ್ ರಾಮಾಯಣಕ್ಕೆ ಮುಹೂರ್ತ ಫಿಕ್ಸಾಗಿದೆ. ಏಪ್ರಿಲ್ 17 ರಾಮನವಮಿಯ ಶುಭದಿನದಂದು ಸಿನಿಮಾಗೆ ಚಾಲನೆ ಕೊಡುವುದಕ್ಕೆ, ನಿರ್ದೇಶಕ ನಿತಿಶ್ ತಿವಾರಿ ಸಕಲ ರೀತಿಯಲ್ಲಿ ಸಿದ್ದತೆಗಳನ್ನ ಮಾಡಿಕೊಳ್ಳುತ್ತಿರುವುದಾಗಿ ಬಿಟೌನ್ ಮಾಧ್ಯಮಗಳು ಸುದ್ದಿ ಮಾಡುತ್ತಿವೆ.
ಬಾಲಿವುಡ್‌ನಲ್ಲಿ ರಾಮಾಯಣ ನಿರ್ಮಾಣ ಮಾಡುವುದು ನಿರ್ದೇಶಕ ನಿತಿಶ್ ತಿವಾರಿ ಹಾಗೂ ನಿರ್ಮಾಪಕ ಮಧು ಮಾಂಟೇನ್ ಅವ್ರ ಬಹುವರ್ಷದ ಕನಸು. ಇದು ಇವರಿಬ್ಬರ ಡ್ರೀಮ್ ಪ್ರಾಜೆಕ್ಟ್ ಅಂದರೆ ತಪ್ಪಾಗಲಿಕ್ಕಿಲ್ಲ. ಹೌದು, ಕಳೆದ ನಾಲ್ಕು ವರ್ಷಗಳಿಂದ ತಪ್ಪಸ್ಸಿನ ರೀತಿ ಈ ಸಿನಿಮಾಗಾಗಿ ಶ್ರಮವಹಿಸಿದ್ದಾರೆ. ಭಾರತೀಯ ಚಿತ್ರರಂಗ ಮಾತ್ರವಲ್ಲ ಇಡೀ ವಿಶ್ವ ಬೆರಗುಗಣ್ಣಿನಿಂದ ನಮ್ಮ ರಾಮಾಯಣದ ಕಡೆ ತಿರುಗಿ ನೋಡುಬೇಕೆನ್ನುವ ಕನಸಿಂದ ಈ ಚಿತ್ರಕ್ಕಾಗಿ ಒಂದು ದೊಡ್ಡ ತಂಡ ಕಟ್ಟಿಕೊಂಡು ಹಗಲಿರುಳು ದುಡಿದಿದ್ದಾರೆ. ಫೈನಲೀ ಕಲಾವಿದರ ಜೊತೆಗೆ ಶೂಟಿಂಗ್ ಅಖಾಡಕ್ಕೆ ಇಳಿಯಲು ಹೊರಟಿದ್ದು, ರಾಮನವಮಿಯಂದು ಚಿತ್ರಕ್ಕೆ ಅಧಿಕೃತ ಚಾಲನೆ ಕೊಡಲಿದ್ದಾರಂತೆ.
ನಿಮಗೀಗಾಗಲೇ ಗೊತ್ತಿರುವ ಹಾಗೇ ಬಿಟೌನ್ ರಾಮಾಯಣದಲ್ಲಿ ರಣಬೀರ್ ಕಪೂರ್ ರಾಮನಾದರೆ, ಸೀತೆಯಾಗಿ ಸೌತ್ ಸುಂದರಿ ಸಾಯಿ ಪಲ್ಲವಿ ಕಾಣಿಸಿಕೊಳ್ಳಲಿದ್ದಾರೆ. ಲಾರ್ಡ್ ಹನುಮಾನ್ ಕ್ಯಾರೆಕ್ಟರ್‌ಗೆ ಸನ್ನಿಡಿಯೋಲ್, ಕುಂಬಕರ್ಣನಾಗಿ ಬಾಬಿ ಡಿಯೋಲ್ ಹೆಸರು ಕೇಳಿಬರುತ್ತಿದೆ. ಶೂರ್ಪನಕಿ ಪಾತ್ರಕ್ಕೆ ರಾಕುಲ್ ಪ್ರೀತ್ ಸಿಂಗ್ ನಾನ್ ರೆಡಿ ಅಂದವ್ರಂತೆ. ಕೈಕೇಯಿಯಾಗಿ ಕಾಣಿಸಿಕೊಳ್ಳೋಕೆ ಲಾರಾ ದತ್ತಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಇನ್ನೂ ಮುಖ್ಯವಾಗಿ ರಾವಣ ಕ್ಯಾರೆಕ್ಟರ್‌ಗೆ ರಾಕಿಂಗ್ ಸ್ಟಾರ್ ಹೆಸರು ಫಿಕ್ಸಾಗಿದೆ. ಕೆಜಿಎಫ್ ಮೂಲಕ ವರ್ಲ್ಡ್ ಈಸ್ ಮೈ ಟೆರಿಟರಿ ಅಂತ ಗಹಗಹಿಸಿರೋ ರಾಕಿಭಾಯ್, ರಾವಣನಾಗಿ ಧಗಧಗಿಸಬೇಕು ಅಂತ ಫ್ಯಾನ್ಸ್ ಆಸೆಪಡ್ತಿದ್ದಾರೆ. ಆದರೆ, ಈ ಬಗ್ಗೆ ಯಶ್‌ಭಾಯ್ ಇಲ್ಲಿವರೆಗೂ ತುಟಿಕ್ ಪಿಟಿಕ್ ಅಂದಿಲ್ಲ.
ಯಶ್ ಏನೂ ಹೇಳದೇ ಇದ್ದರೂ, ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಮಧು ಮಾಂಟೇನ್ ಅವರು ಯಶ್ ಈ ಸಿನಿಮಾದಲ್ಲಿ ಇರಲಿದ್ದಾರೆ ಎಂದು ಈ ಹಿಂದೆಯೇ ಹೇಳಿದ್ದರು. ಇತ್ತ ರಾವಣನ ಪಾತ್ರಕ್ಕೆ ಯಶ್ ಲುಕ್ ಟೆಸ್ಟ್ ಕೊಟ್ಟಿರುವುದಾಗಿ, 15 ದಿನ ಕಾಲ್‌ಶೀಟ್ ನೀಡಿರುವುದಾಗಿ ಮುಂಬೈ ಅಂಗಳದಲ್ಲಿ ಸುದ್ದಿ ಕೂಡ ಆಗಿದೆ. ಕಳೆದ ಎರಡು ತಿಂಗಳಿಂದ ಮುಂಬೈನಲ್ಲಿ ಲುಕ್ ಟೆಸ್ಟ್ ಅಂಡ್ ಟೆಕ್ನಿಕಲ್ ರಿಹರ್ಸಲ್ ಮಾಡ್ಕೊಂಡಿರೋ ನಿತಿಶ್ ತಿವಾರಿ ಅಂಡ್ ಟೀಮ್ ಏಪ್ರಿಲ್‌ನಿಂದ ಶೂಟಿಂಗ್ ಹೊರಡಲಿದೆಯಂತೆ. ಹಾಲಿವುಡ್‌ನ ಪ್ರಖ್ಯಾತ VFX ಸಂಸ್ಥೆ DNEG ರಾಮಾಯಣ ಪ್ರಪಂಚವನ್ನು ಸೃಷ್ಟಿ ಮಾಡಲಿದ್ದು, ಬರೋಬ್ಬರಿ 500 ದಿನಗಳ ಕಾಲ ಈ ಸಿನಿಮಾದ ಮೇಲೆ ವರ್ಕ್ ಮಾಡಿದೆಯಂತೆ. ಒಟ್ನಲ್ಲಿ ಇಡೀ ವಿಶ್ವ ಸಿನಿದುನಿಯಾವನ್ನ ಬೆರಗುಗೊಳ್ಳುವಂತೆ ಮಾಡೋದಕ್ಕೆ ದಂಗಲ್ ಡೈರೆಕ್ಟರ್ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಏಪ್ರಿಲ್‌ನಿಂದ ಶೂಟಿಂಗ್ ಶುರು ಮಾಡಿ, ಮುಂದಿನ ವರ್ಷ ದೀಪಾವಳಿಗೆ ತೆರೆಗೆ ತರೋದಕ್ಕೆ ಸಿದ್ದತೆ ನಡೆಸಿರುವುದಾಗಿ ಹೇಳಿಕೊಂಡಿದ್ದಾರೆ.