Puneeth Rajkumar: ಅಭಿಮಾನಿಗಳ ಪಾಲಿನ ಪರಮಾತ್ಮ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajakumar) ಅಗಲಿ ಮೂರು ವರುಷ ಸಮೀಪಿಸುತ್ತಿದೆ. ದೈಹಿಕವಾಗಿ ಅವ್ರಿಲ್ಲ ಅನ್ನೋ ನೋವು ಎಂದಿಗೂ ನಮ್ ಜೊತೆ ಇದ್ರು ಅವ್ರು ಮಾಡಿರೋ ಕೆಲಸಗಳು, ಸಿನಿಮಾಗಳು, ಹಾಗೂ ಅವ್ರ ಅಭಿಮಾನಿಗಳ ಅಭಿಮಾನ ಅಪ್ಪು ಸದಾ ನಮ್ಮ ನಡುವೆ ಇದ್ದಾರೆ ಎಂಬ ಬಲವಾದ ಭಾವನೆಯನ್ನು ಎಲ್ಲರಲ್ಲೂ ಬಿತ್ತಿದೆ. ಹಾಗಾಗಿಯೇ ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಅಂತೇಳಿ ಅವ್ರನ್ನು ತಮ್ಮ ದಿನನಿತ್ಯದ ಜೀವನದಲ್ಲೂ ನೆನೆಸಿಕೊಳ್ಳುತ್ತಾ, ಅವ್ರ ಕೆಲಸ, ಅಭಿಮಾನಗಳನ್ನು ಸ್ಮರಿಸುತ್ತಾ ಅಭಿಮಾನಿಗಳು ಹಾಗೂ ಕರುನಾಡ ಜನತೆ ಆರಾಧಿಸುತ್ತಿದ್ದಾರೆ. ಹೇಳೀ ಕೇಳಿ ಇದು ಮಾರ್ಚ್ ತಿಂಗಳು, ಅಭಿಮಾನಿಗಳಿಗೆ ಅಪ್ಪು ಅಗಲಿಕೆ ಬಹುವಾಗಿ ಕಾಡುತ್ತೆ. ಕಾರಣ ಪುನೀತ್‌ರಾಜ್ ಕುಮಾರ್ ಹುಟ್ಟುಹಬ್ಬ. ಪ್ರತಿ ವರ್ಷ ಅವ್ರನ್ನು ಭೇಟಿ ಮಾಡಿ ವಿಶ್ ಮಾಡಿ ಖುಷಿ ಪಡುತ್ತಿದ್ದ ಅಭಿಮಾನಿಗಳಿಗೆ ಈ ದಿನ ಬಂದ್ರೆ ಇನ್ನಿಲ್ಲದ ನೋವು. ಜೊತೆಗೆ ತೆರೆ ಮೇಲೂ ಅಪ್ಪುವನ್ನು ನೋಡೋಕೆ ಆಗಲ್ಲ ಅನ್ನೋ ಬೇಸರ. ಆದ್ರೆ ಈ ಬಾರಿ ಆ ಬೇಸರವಿರೋದಿಲ್ಲ. ಅಪ್ಪುವನ್ನು ತೆರೆ ಮೇಲೆ ನೋಡಿ ಸಂಭ್ರಮಿಸಬಹುದು,, ಡಾನ್ಸ್ ನೋಡಿ ವಿಶ಼ಲ್ ಹಾಕಬಹುದು.. ಅಂತದೊಂದು ಗುಡ್ ನ್ಯೂಸ್ ಅಭಿಮಾನಿ ವಲಯಕ್ಕೆ ದೊಡ್ಮನೆ ನೀಡಿದೆ. ಅದುವೇ ಸೂಪರ್ ಡೂಪರ್ ಹಿಟ್ ʻಜಾಕಿʻ (Jackie) ಸಿನಿಮಾ ರೀರಿಲೀಸ್.
ಹೌದು, ಮಾರ್ಚ್ 17 ಕರುನಾಡ ರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ. ಈ ಬಾರಿಯ ಹುಟ್ಟುಹಬ್ಬವನ್ನು ಅಪ್ಪುವನ್ನು ತೆರೆ ಮೇಲೆ ನೋಡೋ ಮೂಲಕ ಸಂಭ್ರಮಿಸಬಹುದು. ಅಭಿಮಾನಿಗಳ ಕಿಕ್ ಹೆಚ್ಚಿಸಿದ್ದ ಸೂಪರ್ ಸಕಸ್ಸ್ ಸಿನಿಮಾ ʻಜಾಕಿʻಯನ್ನು ತೆರೆ ಮೇಲೆ ಮತ್ತೆ ಬಿಡುಗಡೆ ಮಾಡಲಾಗ್ತಿದೆ. ವಿಶೇಷ ಅಂದ್ರೆ ಎರಡು ದಿನ ಮುಂಚಿತವಾಗಿಯೇ ತೆರೆ ಮೇಲೆ ಅಪ್ಪುವನ್ನು ಸಂಭ್ರಮಿಸಬಹುದು. ಅಂದ್ರೆ ಮಾರ್ಚ್ 15ಕ್ಕೆ ʻಜಾಕಿʻ ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗ್ತಿದೆ. ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneeth Rajkumar)ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದಕ್ಕಾಗಿ ಜಾಕಿ ಸಿನಿಮಾವನ್ನು ಹೊಸದಾಗಿ ಮಾಸ್ಟರಿಂಗ್ ಕೂಡ ಮಾಡಿಸಲಾಗಿದೆ. ಈ ಸುದ್ದಿ ಅಧೀಕೃತವಾಗಿ ಜಾಹೀರಾದಾಗಿನಿಂದ ದೊಡ್ಮನೆ ಅಭಿಮಾನಿಗಳ, ಸಿನಿ ಪ್ರೇಕ್ಷಕರ ಸಂತಸ ದುಪ್ಪಟ್ಟಾಗಿದೆ.
ಪವರ್ ಸ್ಟಾರ್ ಸಿನಿ ಕೆರಿಯರ್ ನ ಕಲ್ಟ್ ಕ್ಲಾಸಿಕ್ ಸೂಪರ್ ಹಿಟ್ ಸಿನಿಮಾ ʻಜಾಕಿʻ. ಹಲವು ವಿಶೇಷತೆ ಒಳಗೊಂಡ ಈ ಸಿನಿಮಾ ಅಪ್ಪು ಹಾಗೂ ಸುಕ್ಕಾ ಸೂರಿ (Suri) ಕಾಂಬಿನೇಶನ್ ನಲ್ಲಿ ಮೂಡಿ ಬಂದ ಮೊದಲ ಸಿನಿಮಾ. 2010 ರಲ್ಲಿ ತೆರೆಕಂಡ ಜಾಕಿ 100 ದಿನಗಳನ್ನು ಪೂರೈಸೋದ್ರ ಜೊತೆಗೆ ಹಲವು ದಾಖಲೆ ಬರೆದಿತ್ತು. ಈ ಚಿತ್ರದ ಹಾಡುಗಳು ಈಗಲೂ ಕೇಳುಗರ ಪ್ಲೇ ಲಿಸ್ಟ್ ನಲ್ಲಿವೆ. ಅದ್ರಲ್ಲೂ ʻಶಿವ ಅಂತ ಹೋಗುತ್ತಿದ್ದೆ ರೋಡಿನಲ್ಲಿʻ ಸಾಂಗ್ ಟ್ರೆಂಡ್ ಕ್ರಿಯೇಟ್ ಮಾಡಿತ್ತು. ಇದೀಗ ಈ ಸಿನಿಮಾ ಮತ್ತೊಮ್ಮೆ ತೆರೆ ಮೇಲೆ ಅಬ್ಬರಿಸಲು ಬರ್ತಿದೆ. ದೊಡ್ಮನೆ ಅಭಿಮಾನಿಗಳು ಸಿನಿಮಾವನ್ನು ಗ್ರ್ಯಾಂಡ್ ಆಗಿ ಮತ್ತೊಮ್ಮೆ ವೆಲ್ ಕಂ ಮಾಡೋಕೆ,, ಪರಮಾತ್ಮನನ್ನು ತೆರೆ ಮೇಲೆ ಮತ್ತೊಮ್ಮೆ ಬಹಳ ಅದ್ದೂರಿಯಾಗಿ ಸಂಭ್ರಮಿಸೋಕೆ,, ಅತೀವ ಪ್ರೀತಿಯಿಂದ ಕಾಯುತ್ತಿದ್ದಾರೆ.