ಸಿನಿಮಾ: ಕೆರೆಬೇಟೆ
ನಿರ್ದೇಶನ: ರಾಜ್ ಗುರು.ಬಿ
ನಿರ್ಮಾಪಕ: ಜೈಶಂಕರ್ ಪಟೇಲ್
ಸಂಗೀತ: ಗಗನ್ ಬಡೇರಿಯಾ
ಛಾಯಾಗ್ರಹಣ: ಕೀರ್ತನ್ ಪೂಜಾರಿ
ತಾರಾಬಳಗ: ಗೌರಿಶಂಕರ್, ಬಿಂದು ಶಿವರಾಮ್, ಗೋಪಾಲಕೃಷ್ಣ ದೇಶಪಾಂಡೆ, ಹರಿಣಿ ಶ್ರೀಕಾಂತ್, ಸಂಪತ್ ಮೈತ್ರೇಯ.
ಸೆಟ್ಟೇರಿದ ದಿನದಿಂದ ಬಹಳ ನಿರೀಕ್ಷೆ ಮೂಡಿಸಿದ ಸಿನಿಮಾ ಕೆರೆಬೇಟೆ(Kerebete). ಜೋಕಾಲಿ, ರಾಜಹಂಸ ಸಿನಿಮಾದಲ್ಲಿ ನಟಿಸಿದ್ದ ನಟ ಗೌರಿಶಂಕರ್(Gowrishankar SRG) ಈ ಬಾರಿ ನಾಯಕನಾಗಿ ಗೆದ್ದೆ ಗೆಲ್ಲುವ ಭರವಸೆಯೊಂದಿಗೆ ಒಂದಷ್ಟು ವರ್ಷದ ಬ್ರೇಕ್ ಬಳಿಕ ಕಂಬ್ಯಾಕ್ ಮಾಡಿದ್ರು. ಈ ಸಿನಿಮಾದ ಗೆಲುವು ಅನಿವಾರ್ಯ ಎಂದು ಹೇಳಿದ್ದ ನಟ ಅಷ್ಟೇ ಭರವಸೆಯ ತುಣುಕುಗಳನ್ಮು ಬಿಡುಗಡೆ ಮಾಡಿ ಹೋಪ್ ಕ್ರಿಯೇಟ್ ಮಾಡಿದ್ರು. ಹಾಗಿದ್ರೆ ಸಿನಿಮಾ ಹೇಗಿದೆ..? ಇಲ್ಲಿದೆ ವಿಮರ್ಶೆ.
ನಮ್ಮ ನೆಲ, ಸಂಸ್ಕೃತಿ, ಜನ ಜೀವನಕ್ಕೆ ಜೊತೆಗೆ ಹೊಂದಿಕೊಂಡ ಕಥೆಗಳಿಗೆ ಸಿನಿಮ್ಯಾಟಿಕ್ ಟಚ್ ಕೊಟ್ಟು ತೆರೆಮೇಲೆ ಪ್ರಸ್ತುತ ಪಡಿಸಿದ್ರೆ ಆ ಸಿನಿಮಾ ಗೆಲುವು ಗ್ಯಾರಂಟಿ ಅನ್ನೋ ಟ್ರೆಂಡ್ ಈಗ ಓಡುತ್ತಿದೆ. ಆ ಟ್ರೆಂಡ್ ಜೊತೆ ಹೊರಟ ಸಿನಿಮಾ ‘ಕೆರೆಬೇಟೆ’ (Kerbete). ಕೆರೆಬೇಟೆ ಮಲೆನಾಡ ಭಾಗದಲ್ಲಿ ಕಂಡುಬರುವ ಮೀನು ಬೇಟೆಯಾಡುವ ಪದ್ದತಿ. ಆ ಕೆರೆಬೇಟೆಯೊಂದಿಗೆ ಹೆಣೆದುಕೊಂಡ ಒಂದು ಪ್ರೀತಿಕಥೆ ಅದರೊಂದಿಗೆ ಬೆರೆತ ಜಾತಿ ಪದ್ದತಿ. ಇದರ ಸುತ್ತ ಸಿನಿಮಾ ಕಥೆ ಸುತ್ತುತ್ತದೆ. ನಾಯಕ ಹುಲಿಮನೆ ನಾಗ ಕೋಪಿಷ್ಟ ಆದ್ರೆ ಒಳ್ಳೆಯ ಗುಣಗಳು ಆತನ ಆಸ್ತಿ. ಕೆರೆಬೇಟೆಯಲ್ಲಿ ನಿಸ್ಸೀಮ. ಕಳ್ಳನಾಟ ಸಾಗಾಣೆ ಈತನ ಕಸುಬು. ಹೀಗಿರುವಾಗ ನಾಗ ಮೀನಾಳ ಜೊತೆ ಪ್ರೀತಿಯಲ್ಲಿ ಬೀಳುತ್ತಾನೆ. ಆದ್ರೆ ಆ ಪ್ರೀತಿಗೆ ಜಾತಿಯ ಲೇಬಲ್ ಇರುತ್ತೆ. ಹುಡುಗಿಯ ತಂದೆಯ ಕೆಂಗಣ್ಣಿಗೆ ಗುರಿಯಾಗೋ ಹುಲಿಮನೆ ನಾಗ ತನ್ನ ಪ್ರೀತಿಯನ್ನು ಗೆದ್ದುಕೊಳ್ಳುತ್ತಾನಾ ಅನ್ನೋದೇ ರೋಚಕ.
ಮಲೆನಾಡ ಹಸಿರ ಸಿರಿ ಆ ಸಿರಿಯೊಂದಿಗೆ ಬೆರೆತ ಮಲೆನಾಡ ಭಾಷೆ, ಅಲ್ಲಿನ ಆಚಾರ ವಿಚಾರ ಪ್ರೇಕ್ಷಕರಿಗೆ ಮಜಾ ನೀಡುತ್ತೆ. ಆದ್ರೆ ಮತ್ತೆ ಮತ್ತೆ ಕೇಳೋ ಕೆಲ ಸಂಭಾಷಣೆ ಕಿರಿ ಕಿರಿಯನ್ನೂ ಹುಟ್ಟಿಸುತ್ತೆ. ಕಥೆಯ ಆಯ್ಕೆಯಲ್ಲಿ ಗೆದ್ದಿರುವ ಗೌರಿಶಂಕರ್(Gowrishankar SRG) ಹಿಂದಿನ ಸಿನಿಮಾಗಳಿಗಿಂತ ಹೆಚ್ಚೇ ನಟನೆಯಲ್ಲಿ ಇಷ್ಟವಾಗುತ್ತಾರೆ. ಮೇಕಿಂಗ್ ವಿಚಾರಕ್ಕೆ ಬಂದ್ರೆ ಚಿತ್ರಕ್ಕೆ ಫುಲ್ ಮಾರ್ಕ್ಸ್. ಸಿನಿಮಾ ನಿರೂಪಣೆ, ಚಿತ್ರಕಥೆ ವಿಚಾರದಲ್ಲಿ ಗ್ರಿಪ್ ಇಲ್ಲದೇ ನೋಡುಗರ ಪೇಷನ್ಸ್ ಚೆಕ್ ಮಾಡುತ್ತೆ. ನಿರ್ದೇಶಕ ರಾಜ್ ಗುರು(Rajguru.B) ವಿಷನ್ ಚೆನ್ನಾಗಿದ್ರು ಪ್ರಸ್ತುತ ಪಡಿಸುವಲ್ಲಿ ಎಡವಿದ್ದಾರೆ. ಹಾಡು, ಸಂಗೀತ, ತಾಂತ್ರಿಕ ಬಳಗಕ್ಕೆ ಇಲ್ಲಿ ಫುಲ್ ಮಾರ್ಕ್ ನೀಡಲೇಬೇಕು. ಮೊದಲ ಸಿನಿಮಾವಾದ್ರು ನಾಯಕಿ ಬಿಂದು ಶಿವರಾಮ್( Bindhu Shivram) ಅಭಿನಯದಲ್ಲಿ ಗಮನ ಸೆಳೆಯುತ್ತಾರೆ. ಗರುಡಪ್ಪನಾಗಿ ಗೋಪಾಲಕೃಷ್ಣ ದೇಶಪಾಂಡೆ(Gopalkrishna Deshpande) ಅಭಿನಯ ಮೆಚ್ಚುಗೆ ಪಡೆದುಕೊಳ್ಳುತ್ತೆ. ಒಟ್ಟಾರೆಯಾಗಿ, ಮಲೆನಾಡ ಹಸಿರು ಸೌಂದರ್ಯವನ್ನು ಮೈದುಂಬಿಕೊಂಡು ತೆರೆಮೇಲೆ ಬರುವ ‘ಕೆರೆಬೇಟೆ'(Kerbete) ಪ್ರೇಕ್ಷಕರ ಮನಮುಟ್ಟೋದ್ರಲ್ಲಿ ಕೊಂಚ ಎಡವಿದೆ.