ಬಿಟೌನ್ ನಟಿಮಣಿಯರು ಚಂದನವನಕ್ಕೆ ಬಲಗಾಲಿಟ್ಟು ಬರೋದೇನು ಹೊಸದಲ್ಲ. ಈಗಾಗಲೇ ಅನೇಕ ಮಹಾನಟಿಯರು ಸ್ಯಾಂಡಲ್‌ವುಡ್‌ಗೆ ಗ್ರ್ಯಾಂಡ್ ಎಂಟ್ರಿಕೊಟ್ಟು ಫುಲ್ ಎಂಟರ್‌ಟೈನ್ಮೆಂಟ್ ನೀಡಿ ಹೋಗಿದ್ದಾರೆ. ಇದೀಗ, ಬಿಟೌನ್ ಕ್ಯೂಟಿ ಪೈ ಅಂತಾನೇ ಕರೆಸಿಕೊಳ್ಳೋ ನಟಿ ಅಲಿಯಾ ಭಟ್ (Alia Bhatt) ಗಂಧದಗುಡಿ ಪ್ರವೇಶಿಸ್ತಾರೆ ಅನ್ನೋ ಸುದ್ದಿ ಜೋರಾಗಿ ಕೇಳಿಬರ್ತಿದೆ. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ(Rishab Shetty) ನಿರ್ದೇಶಿಸಿ, ನಟಿಸಲಿರೋ ಬಹುನಿರೀಕ್ಷಿತ ಕಾಂತಾರ ಚಾಪ್ಟರ್1 (Kantara: Chapter 1) ಸಿನಿಮಾಗೆ ಅಲಿಯಾ ಭಟ್‌ರನ್ನ ಅಪ್ರೋಚ್ ಮಾಡಿರೋದಾಗಿ ಸುದ್ದಿ ಹೊರಬಿದ್ದಿದೆ.
ಯಸ್, ಬಿಟೌನ್ ಬ್ಯೂಟಿ ಅಲಿಯಾ ಭಟ್ (Alia Bhatt) ರನ್ನ ಕನ್ನಡಕ್ಕೆ ತರಲು ತಯಾರಿ ನಡೀತಿದೆಯಂತೆ. ಕಾಂತಾರ ಚಾಪ್ಟರ್-1ಮೂಲಕ ಆರ್ ಆರ್ ಆರ್ ಚೆಲುವೆನಾ ಸ್ಯಾಂಡಲ್‌ವುಡ್‌ಗೆ ಕರೆದುಕೊಂಡು ಬರಬೇಕು ಅಂತ ಹೊಂಬಾಳೆ ಸಂಸ್ಥೆ(Hombale Films) ನಿರ್ಧರಿಸಿದೆಯಂತೆ. ಈಗಾಗಲೇ, ಅಲಿಯಾ ಭಟ್ (Alia Bhatt) ಜೊತೆ ಮಾತುಕತೆ ನಡೆಸಿದೆಯಂತೆ. ಅಂದ್ಹಾಗೇ, ಈ ಸುದ್ದಿನಾ ತಳ್ಳಿಹಾಕೋ ಹಂಗಿಲ್ಲ. ಯಾಕಂದ್ರೆ, ಹೊಂಬಾಳೆ ಈಗ ದಕ್ಷಿಣ ಭಾರತೀಯ ಚಿತ್ರರಂಗದ ಜನಪ್ರಿಯ ನಿರ್ಮಾಣ ಸಂಸ್ಥೆಯಾಗಿ ಬೆಳೆದುನಿಂತಿದೆ. ಸೌತ್ ಮಾತ್ರವಲ್ಲ ಬಿಟೌನ್ ಸ್ಟಾರ್‌ಗಳಿಗೂ ಸಿನಿಮಾ ಮಾಡೋದಕ್ಕೆ ಮಾಸ್ಟರ್ ಪ್ಲಾನ್ ಮಾಡ್ತಿದೆ. ಹೀಗಿರುವಾಗ ಬಾಲಿವುಡ್ ನಟಿ ಅಲಿಯಾ ಭಟ್‌ರನ್ನ (Alia Bhatt) ಕನ್ನಡಕ್ಕೆ ಕರೆತರೋದು ಹೊಂಬಾಳೆಗೆ ದೊಡ್ಡ ವಿಷ್ಯವಲ್ಲ.
ಅಂದ್ಹಾಗೇ, ನಟಿ ಅಲಿಯಾ (Alia Bhatt) ಸದ್ಯ ಬಹುಬೇಡಿಕೆಯ ನಟಿಮಣಿ. ಒಂದು ಸಿನಿಮಾಗೆ 10 ರಿಂದ 15 ಕೋಟಿ ಸಂಭಾವನೆನಾ ಪರ್ಸ್‌ಗೆ ಇಳಿಸಿಕೊಳ್ತಾಳೆ. ಸದ್ಯ ಈಕೆ ಕೈಯಲ್ಲಿ ಜಿಗ್ರಾ, ಲವ್ ಅಂಡ್ ವಾರ್, ಜೀ ಲೆ ಜರಾ ಮತ್ತು ಬ್ರಹ್ಮಾಸ್ತ್ರ 2 ಸಿನಿಮಾಗಳಿವೆ. ಬಿಟೌನ್‌ನಲ್ಲಿ ಅಷ್ಟೊಂದು ಬ್ಯುಸಿ ಇದ್ರೂ ಕೂಡ ಸೌತ್ ಸಿನಿಮಾ ಸ್ಟಾರ್ ಡೈರೆಕ್ಟರ್‌ಗಳು ಅಲಿಯಾ ಭಟ್ ಕಾಲ್‌ಶೀಟ್‌ಗಾಗಿ ಕಾದು ಕುಂತಿದ್ದಾರೆ. ಅದರಲ್ಲೂ ಆರ್ ಆರ್ ಆರ್ ಸಿನಿಮಾ ನಂತರ ಸೀತೆ ಅಲಿಯಾಗೆ ಡಿಮ್ಯಾಂಡ್ ಜಾಸ್ತಿಯಾಗಿದೆ. ಇದೇ ಹೊತ್ತಿಗೆ, ಕಾಂತಾರ ಚಾಪ್ಟರ್1 (Kantara: Chapter 1) ಮೂಲಕ ಕನ್ನಡಕ್ಕೆ ಬರ್ತಾರೆನ್ನುವ ಸುದ್ದಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.
ಕಾಂತಾರ ಚಾಪ್ಟರ್1 (Kantara: Chapter 1) ಮೂಲಕ ಅಲಿಯಾ (Alia Bhatt) ಕನ್ನಡಕ್ಕೆ ಬರ್ತಾರೆನ್ನುವ ಸುದ್ದಿ ಸಂಚಲನದ ನಡುವೆ ಸಪ್ತಸಾಗರದಾಚೆ ಚೆಲುವೆ ರುಕ್ಮಿಣಿ ವಸಂತ್ (Rukmini Vasanth) ಸಿನಿಮಾಗೆ ಸೆಲೆಕ್ಟ್ ಆಗಿದ್ದಾರೆನ್ನುವ ಸುದ್ದಿ ಕೇಳಿಬರುತ್ತಿದೆ. ಹೊಂಬಾಳೆ ಸಂಸ್ಥೆ ನಿರ್ಮಾಣದ ಬಘೀರ ಚಿತ್ರದ ನಾಯಕಿಯಾಗಿರೋ ರುಕ್ಮಿಣಿ, ಈಗ ಅದೇ ಹೊಂಬಾಳೆ ನಿರ್ಮಾಣದಲ್ಲಿ ಮೂಡಿಬರ್ತಿರೋ ʻಕಾಂತಾರ-1ʼ (Kantara: Chapter 1) ಸಿನಿಮಾಗೂ ಆಯ್ಕೆಯಾಗಿರಬಹುದು. ಅಷ್ಟಕ್ಕೂ, ಅಧಿಕೃತವಾಗಿ ಈ ವಿಚಾರವನ್ನ ಹೊಂಬಾಳೆಯಾಗಲೀ, ರಿಷಬ್ ಶೆಟ್ರಾಗಲಿ (Rishab Shetty) ಹೊರಹಾಕಿಲ್ಲ. ಬಟ್, ಬಜಾರ್‌ನಲ್ಲಿ ಹೀಗೊಂದು ಸುದ್ದಿ ಹರಿದಾಡ್ತಿದೆ. ಅಂದ್ಹಾಗೇ, ರುಕ್ಮಿಣಿ ವಸಂತ್‌ಗೆ (Rukmini Vasanth) ಕನ್ನಡದಲ್ಲಿ ಮಾತ್ರವಲ್ಲ ಪರಭಾಷೆಯಲ್ಲೂ ಬೇಡಿಕೆಯಿದೆ. ವಿಜಯ್ ಸೇತುಪತಿ ಹಾಗೂ ಶಿವಕಾರ್ತಿಕೇಯನ್ ಸಿನಿಮಾಗಳಿಗೆ ನಾಯಕಿಯಾಗಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವಣ್ಣನ ಜೊತೆ ಭೈರತಿ ರಣಗಲ್ ಚಿತ್ರದಲ್ಲೂ ಕಿಚ್ಚು ಹಚ್ಚಿದ್ದಾರೆ. ಬಜಾರ್‌ನಲ್ಲಿ ಕೇಳಿಬಂದಿರೋ ಸುದ್ದಿ ನಿಜವಾದರೆ ಕಾಡುಬೆಟ್ಟು ಶಿವಪ್ಪನ ಜೊತೆ ರುಕ್ಮಿಣಿ ಮೆರವಣಿಗೆ ಹೊರಡಲಿದ್ದಾರೆ.
ಹಾಗಾದ್ರೆ ಸಪ್ತಮಿಗೌಡ (Sapthami Gowda) ಕಥೆಯೇನು? ಕಾಂತಾರ ಸೀಕ್ವೆಲ್‌ನಲ್ಲಿದ್ದ ಲೀಲಾಗೆ ಪ್ರೀಕ್ವೆಲ್‌ನಲ್ಲಿ ಜಾಗ ಇಲ್ಲವಾ? ಕಾಡುಬೆಟ್ಟು ಶಿವಪ್ಪನ ಜೊತೆ ಮಿಂಚೋ ಅದೃಷ್ಟ ಸಪ್ತಮಿಗಿಲ್ಲವಾ? ಈ ಕುತೂಹಲದ ಪ್ರಶ್ನೆ ನಿಮ್ಮೆಲ್ಲರಂತೆ ನಮಗೂ ಇದೆ. ಆದರೆ, ಚಿತ್ರತಂಡ ಇಲ್ಲಿವರೆಗೂ ಕಾಂತಾರ ಪ್ರೀಕ್ವೆಲ್‌ನಲ್ಲಿ ಯಾರೆಲ್ಲಾ ಕಲಾವಿದರು ಇರ್ತಾರೆನ್ನುವ ಗುಟ್ಟನ್ನ ಗುಟ್ಟಾಗಿಯೇ ಇರಿಸಿದೆ.
ಇನ್ನೂ, ನಿಮಗೆಲ್ಲ ಗೊತ್ತಿರೋ ಹಾಗೇ ಅದ್ದೂರಿಯಾಗಿ ಸಿನಿಮಾ ಮುಹೂರ್ತ ನೆರವೇರಿದೆ. ಕಾಡುಬೆಟ್ಟು ಶಿವಪ್ಪನ ನಯಾ ಅವತಾರ ಈಗಾಗಲೇ ಅನಾವರಣಗೊಂಡಿದ್ದು ಇಡೀ ಚಿತ್ರಜಗತ್ತೇ ಬೆರಗುಗೊಂಡಿದೆ. ಒಂದು ಕೈಲಿ ಕೈಯಲ್ಲಿ ತ್ರಿಶೂಲ, ಇನ್ನೊಂದು ಕೈಯಲ್ಲಿ ಜಮದಗ್ನಿಯ ಕೊಡಲಿ ಹಿಡಿದು ದಟ್ಟ ಕಾಡೊಳಗೆ ದರ್ಶನ ನೀಡುವ ಡಿವೈನ್ ಸ್ಟಾರ್ ಪಾತ್ರ, ಅಘೋರಿಯಾ ರೂಪವಾ ಅಥವಾ ಸಾಕ್ಷಾತ್ ಪರಶಿವನ ದರ್ಶನವಾ ಎನ್ನುವ ಅನುಮಾನ ಪ್ರೇಕ್ಷಕರನ್ನ ಒಂಟಿಕಾಲಿನಲ್ಲಿ ನಿಲ್ಲಿಸಿದೆ. ಕಾಂತಾರ ಸೀಕ್ವೆಲ್ ನಲ್ಲಿ ಕೆಲಸ ಮಾಡಿದ ತಾಂತ್ರಿಕ ವರ್ಗ ಈಗ ಪ್ರೀಕ್ವೆಲ್‌ಗೆ ದುಡಿಯೋ ಬಗ್ಗೆ ಚಿತ್ರತಂಡವೇ ಹೇಳಿಕೊಂಡಿದೆ. ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಕಶ್ಯಪ್ ಕ್ಯಾಮೆರಾ ಕೈಚಳಕ ಸಿನಿಮಾಗಿರಲಿದೆ. ಇನ್ನೇನಿದ್ರೂ ಡಿವೈನ್ ಸ್ಟಾರ್ ತಂಡ ಕಟ್ಟಿಕೊಂಡು ಅಖಾಡಕ್ಕೆ ಇಳಿಬೇಕು, ಚಿತ್ರೀಕರಣಕ್ಕೆ ಚಾಲನೆ ಕೊಡಬೇಕು ಅಷ್ಟೇ.