Ramya:ಸ್ಯಾಂಡಲ್ವುಡ್ ಅಂಗಳದ ಮೋಹಕ ತಾರೆ ರಮ್ಯಾ(Ramya). ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವ ರಮ್ಯಾ ರಾಜಕೀಯ ಅಂಗಳಕ್ಕೆ ಕಾಲಿಟ್ಟ ಮೇಲೆ ಸಿನಿ ರಂಗದಿಂದ ದೂರ ಉಳಿದಿದ್ರು. ಮೋಹಕ ತಾರೆ ಸಿನಿಮಾ ಮಾಡಬೇಕು, ಬೆಳ್ಳಿ ಪರದೆಯಲ್ಲಿ ಪದ್ಮಾವತಿಯನ್ನು ನೋಡಬೇಕು ಅನ್ನೋದು ಅವ್ರ ಅಭಿಮಾನಿಗಳ ಹಂಬಲ. ಅದರಂತೆ ʻಉತ್ತರಕಾಂಡʼ ಸಿನಿಮಾದಲ್ಲಿ ಡಾಲಿ ಜೊತೆ ಸ್ಕ್ರೀನ್ ಶೇರ್ ಮಾಡುವ ಮೂಲಕ ಕಂ ಬ್ಯಾಕ್ ಮಾಡುವ ಸಿಹಿ ಸುದ್ದಿಯನ್ನು ನೀಡಿದ್ರು. ಆದ್ರೆ ಅದೇ ಖುಷಿಯ ನಶೆಯಲ್ಲಿದ್ದ ಅಭಿಮಾನಿಗಳಿಗೆ ಈಗ ಮತ್ತೆ ನಿರಾಸೆಯಾಗಿದೆ.
ಡಾಲಿ ಧನಂಜಯ(Dhananjay) ಅಭಿನಯದ ಉತ್ತರಕಾಂಡ(Uttarakanda) ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡುವ ಮೂಲಕ ರಮ್ಯಾ ಗ್ರ್ಯಾಂಡ್ ಕಂ ಬ್ಯಾಕ್ ಮಾಡುವ ಸುದ್ದಿಯನ್ನು ನೀಡಿದ್ರು. ಈ ಸುದ್ದಿ ಪಸರ್ ಆದಲ್ಲಿಂದ ಅಭಿಮಾನಿಗಳು ಡಾಲಿ- ರಮ್ಯಾ ತೆರೆ ಮೇಲೆ ಹೇಗ್ ಕಾಣಿಸ್ತಾರೆ ಎಂಬ ಇಮ್ಯಾಜಿನರಿ ಮೂಡ್ಗೆ ಜಾರಿದ್ರು. ಸಿನಿಮಾ ಮುಹೂರ್ತ ಕಾರ್ಯವೂ ಅದ್ದೂರಿಯಾಗಿ ನಡೆದಿತ್ತು, ಆದ್ರೆ ಇದೀಗ ರಮ್ಯಾ ʻಉತ್ತರಕಾಂಡʼ ಸಿನಿಮಾದಲ್ಲಿ ನಟಿಸೋದಿಲ್ಲ ಎಂದಿದ್ದಾರೆ. ಪದ್ಮಾವತಿಯ ಈ ಒಂದು ಪೋಸ್ಟ್ ಬಹು ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಸಖತ್ ನಿರಾಸೆ ತಂದಿದೆ.
ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ರಮ್ಯಾ(Ramya) ಹಾಕಿರುವ ಪೋಸ್ಟ್ ಸಖತ್ ವೈರಲ್ ಆಗಿದೆ. ಡೇಟ್ಸ್ ಕೊರತೆಯಿಂದಾಗಿ ʻಉತ್ತರಕಾಂಡʼ ಸಿನಿಮಾದಲ್ಲಿ ಕೆಲಸ ಮಾಡುತ್ತಿಲ್ಲ, ಜೊತೆಗೆ ರಾಜಕೀಯ ಕೆಲಸಗಳನ್ನು ಸದ್ಯದ ಮಟ್ಟಿಗೆ ನಿಲ್ಲಿಸಿದ್ದೇನೆ. ಚಿತ್ರತಂಡಕ್ಕೆ ಶುಭವಾಗಲಿ ಎಂದು ಪೋಸ್ಟ್ ಮಾಡುವ ಮೂಲಕ ಉತ್ತರಕಾಂಡ ಸಿನಿಮಾದಿಂದ ಮೋಹಕ ತಾರೆ ಹೊರ ನಡೆದಿದ್ದಾರೆ.
ಈ ಹಿಂದೆ ರಾಜ್ ಬಿ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದ ʻಸ್ವಾತಿ ಮುತ್ತಿನ ಮಳೆ ಹನಿಯೇʼ ಸಿನಿಮಾದಲ್ಲಿ ನಟಿಸೋದಾಗಿ ಅನೌನ್ಸ್ ಆಗಿತ್ತು. ಕೆಲ ಸಮಯದ ನಂತರ ಆ ಸಿನಿಮಾದಿಂದಲೂ ರಮ್ಯಾ(Ramya) ಹೊರ ನಡೆದಿದ್ರು. ಆಗಲೂ ಅಭಿಮಾನಿಗಳು ಭ್ರಮ ನಿರಸನ ಗೊಂಡಿದ್ರು. ಇದೀಗ ಮತ್ತೆ ಉತ್ತರಕಾಂಡ ಸಿನಿಮಾದಿಂದ ಹೊರ ನಡೆದಿರೋದು ಇನ್ನಿಲ್ಲದ ನಿರಾಸೆಯನ್ನು ತಂದಿದೆ.