Daniel Balaji: ಇಂದು ಬೆಳ್ಳಂಬೆಳಿಗ್ಗೆ ತಮಿಳು ಖ್ಯಾತ ಖಳನಟ ಡೇನಿಯಲ್ ಬಾಲಾಜಿ(Daniel Balaji) ಸಾವಿನ ಸುದ್ದಿ ಕಾಲಿವುಡ್ ಅಂಗಳಕ್ಕೆ ಬರ ಸಿಡಿಲಂತೆ ಬಡಿದಿತ್ತು. ಪ್ರತಿಭಾವಂತ ನಟನ ಅಗಲಿಕೆ ಚಿತ್ರರಂಗ ಮರುಗಿತ್ತು, ಅನೇಕ ನಟ-ನಟಿಯರು, ನಿರ್ದೇಶಕರು ಕಂಬನಿ ಮಿಡಿದಿದ್ರು. ಇದೀಗ ನಟ ಡೇನಿಯಲ್ ಕುಟುಂಬ ನಟನ ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದೆ.
48 ವರ್ಷದ ಡೇನಿಯಲ್(Daniel Balaji) ನಿನ್ನೆ ರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಪ್ರತಿಭಾವಂತ ನಟನ ಸಾವಿನ ಸುದ್ದಿಯಿಂದ ಚಿತ್ರರಂಗ ಹಾಗೂ ಅವರ ಅಭಿಮಾನಿಗಳು ಅಪಾರ ದುಃಖತಪ್ತರಾಗಿದ್ದಾರೆ. ತೆರೆ ಮೇಲೆ ವಿಲನ್ ಆಗಿ ಅಬ್ಬರಿಸಿದ್ದ ನಟನ ಅಚಾನಕ್ ಸಾವು ಯಾರಿಗೂ ಅರಗಿಸಿಕೊಳ್ಳಲಾಗುತ್ತಿಲ್ಲ. ಡೇನಿಯಲ್(Daniel Balaji) ಕಳೆದುಕೊಂಡು ಅವರ ಕುಟುಂಬ ಕೂಡ ಶೋಕ ಸಾಗರದಲ್ಲಿದೆ. ಆ ನೋವಿನಲ್ಲೂ ನಟನ ಕಣ್ಣುಗಳನ್ನು ನೇತ್ರದಾನ ಮಾಡುವ ಮೂಲಕ ಇನ್ನೊಬ್ಬರ ಬಾಳಿಗೆ ಬೆಳಕಾಗೋ ಸಾರ್ಥಕ ಕೆಲಸ ಮಾಡಿದೆ. ಈ ಮೂಲಕ ನಟನ ಮೇಲಿನ ಗೌರವವನ್ನು ಹೆಚ್ಚಿಸಿದೆ. ಡೇನಿಯಲ್ ಕುಟುಂಬದ ಈ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ದಕ್ಷಿಣ ಭಾರತ ಚಿತ್ರರಂಗದಲ್ಲಿ ಅದರಲ್ಲೂ ತಮಿಳು ಸಿನಿರಂಗದಲ್ಲಿ ಡೇನಿಯಲ್(Daniel Balaji) ಹೆಸರಾಂತ ಖಳನಟ. ಅಪಾರ ಖ್ಯಾತಿ ಕೂಡ ಗಳಿಸಿಕೊಂಡಿದ್ದ ಇವರ ಸಿನಿ ಕೆರಿಯರ್ ಹೂವಿನ ಹಾಸಿಗೆ ಆಗಿರಲಿಲ್ಲ. ಚಿಕ್ಕ ಪುಟ್ಟ ಪಾತ್ರದ ಮೂಲಕ ಆರಂಭವಾಗಿ ಖ್ಯಾತ ಖಳನಟನ ವರೆಗೆ ಅವರ ಜರ್ನಿ ರೋಚಕ. ಕನ್ನಡದಲ್ಲಿ ಯಶ್ ನಟನೆಯ ʻಕಿರಾತಕʼ ಸಿನಿಮಾದಲ್ಲಿ ಸಹನಟನಾಗಿ ಕಾಣಿಸಿಕೊಂಡಿದ್ದರು. ಇದಲ್ಲದೆ ʻಶಿವಾಜಿನಗರʼʻ, ʻಡವ್ʼ, ʻಅಂಡರ್ ವರ್ಲ್ಡ್ʼ ಸಿನಿಮಾಗಳಲ್ಲಿ ನಟಿಸಿರುವ ಡ್ಯಾನಿಯಲ್ ಕನ್ನಡ ಸಿನಿ ಪ್ರಿಯರಿಗೂ ಪರಿಚಿತ ನಟ.
ಸುಮಾರು 40ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿರುವ ಡೇನಿಯಲ್(Daniel Balaji), ಕನ್ನಡ, ತೆಲುಗು,ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ವೆಟ್ರಿ ಮಾರನ್, ಗೌತಮ್ ವಾಸುದೇವನ್ ಸೇರಿದಂತೆ ಹಲವು ಖ್ಯಾತ ನಿರ್ದೇಶಕರ ಜೊತೆ ಕೆಲಸ ಮಾಡಿದ ಖ್ಯಾತಿ ಇವರದ್ದು.