Jaggesh: ಚಂದನವನದ ನವರಸ ನಾಯಕ ನಟ ಜಗ್ಗೇಶ್(Jaggesh). ಸಿನಿಮಾಗಳಲ್ಲಿ ಎಲ್ಲರನ್ನು ನಕ್ಕು ನಲಿಸೋ ಜಗ್ಗೇಶ್ ಭಾವಜೀವಿ ಕೂಡ ಹೌದು. ಸಿನಿಮಾ, ರಾಜಕೀಯದಲ್ಲಿ ಬ್ಯುಸಿಯಾಗಿರುವ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಬಾಲ್ಯದ ನೆನಪುಗಳನ್ನು ನೆನೆಯುತ್ತಾ, ಗೆಳೆಯರನ್ನು ಸ್ಮರಿಸುತ್ತಾ, ನಡೆದು ಬಂದ ದಿನಗಳನ್ನು ಮೆಲುಕು ಹಾಕುತ್ತಿರುತ್ತಾರೆ. ಇದೀಗ ಜಗ್ಗೇಶ್(Jaggesh)ತಮ್ಮ 50 ವರ್ಷದ ಗೆಳೆತನವನ್ನು ಎಲ್ಲರ ಮುಂದೆ ತೆರೆದಿಟ್ಟಿದ್ದಾರೆ.
ಶ್ರೀರಾಮ್‌ಪುರದಲ್ಲಿರುವ ಗೆಳೆಯನ ಮೆಕ್ಯಾನಿಕ್ ಶಾಪ್‌ಗೆ ಎಂಟ್ರಿ ಕೊಟ್ಟಿರುವ ಜಗ್ಗೇಶ್(Jaggesh) ಗೆಳೆಯ ಅಂತೋಣಿ ಕ್ರೂಸಿಸ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಫೇಸ್‌ಬುಕ್‌ನಲ್ಲಿ ನಾಲ್ಕು ಸಾಲು ಗೀಚಿದ್ದಾರೆ. ಬಾಲ್ಯದ ನೆನಪಿನೊಂದಿಗೆ ಐವತ್ತು ವರ್ಷದ ಗೆಳೆತನವನ್ನು ಸ್ಮರಿಸಿದ್ದಾರೆ. ʻಈ ಬೈಕ್ ಮೆಕ್ಯಾನಿಕ್ ಅಂಗಡಿಯಲ್ಲಿ ತಮ್ಮ ತಂದೆ ಬುಲೆಟ್ ರಿಪೇರಿ ಮಾಡಿಸುತ್ತಿದ್ದರು, ನಾನು ತಪ್ಪು ಮಾಡಿದಾಗ ನನ್ನ ಕೈಕಾಲು ಹಗ್ಗದಲ್ಲಿ ಕಟ್ಟಿ ಈ ಅಂಗಡಿ ಬಾಗಿಲಲ್ಲೇ ಅಪ್ಪ ಶಿಕ್ಷೆ ನೀಡಿ ಕೂರಿಸುತ್ತಿದ್ದರು. ನಮ್ಮ ಸೇಹಕೂಟ ಸೇರುತ್ತಿದ್ದ ಜಾಗ ಕೂಡ ಇದೆ. ಆ ಕಾಲದ ರೌಡಿಗಳಾದ ಶ್ರೀರಾಮಪುರ ಕಿಟ್ಟಿ, ಕರಿಯ(ಪ್ರೇಮ್ ʻಕರಿಯʼ ಸಿನಿಮಾಗೆ ಸ್ಪೂರ್ತಿ), ಸ್ವತಂತ್ರಪಾಳ್ಯ ಶಿವ, ನಂಜುಂಡ, ಮಚ್ಚ ಪ್ರಕಾಶ ಎಲ್ಲರೂ ಇಲ್ಲಿಗೆ ಬರುತ್ತಿದ್ದರು. ನನ್ನ ಜೊತೆ ಯಾವುದೇ ಬಿಲ್ಡಪ್ ಇಲ್ಲದೇ ಉತ್ತಮ ನಡವಳಿಕೆ ತೋರುತ್ತಿದ್ದರು ಬಹಳ ಬೇಸರವಾದಾಗ ಅಥವಾ ಸಮಯ ಸಿಕ್ಕಾಗ ಇಲ್ಲಿ ಕುಳಿತು ಟೀ ಕುಡಿಯುತ್ತೇನೆʼ ಎಂದು ಕಳೆದ ದಿನಗಳನ್ನು ಸ್ನೇಹಿತನೊಂದಿಗೆ ಮತ್ತೆ ನೆನೆದಿದ್ದಾರೆ ನವರಸ ನಾಯಕ.
ಚುನಾವಣೆ ಪ್ರಯುಕ್ತ ಜಗ್ಗೇಶ್(Jaggesh) ಸಿನಿಮಾದಿಂದ ಕೊಂಚ ಗ್ಯಾಪ್ ತೆಗೆದುಕೊಂಡಿದ್ದಾರೆ. ಕಳೆದ ತಿಂಗಳು ತೆರೆಕಂಡ ʻರಂಗನಾಯಕʼ (Ranganayaka) ಸಿನಿಮಾ ಹೀನಾಯ ಸೋಲು ಕಂಡಿದ್ದು, ಚುನಾವಣೆ ನಂತರ ಜಗ್ಗೇಶ್ ಹೊಸ ಸಿನಿಮಾ ಸೆಟ್ಟೇರಲಿದೆ.