Dr Rajkumar: 2006 ಏಪ್ರಿಲ್12 ಕರ್ನಾಟಕದ ಕಲಾಭಿಮಾನಿಗಳಿಗೆ, ಕರುನಾಡ ಜನತೆಗೆ ಕರಾಳ ದಿನ. ವರನಟ, ನಟಸಾರ್ವಭೌಮ ಡಾ.ರಾಜ್ ಕುಮಾರ್(Dr Rajkumar) ಅಗಲಿದ ದಿನವದು. ‘ಅಭಿಮಾನಿ ದೇವರುಗಳು’ ನೆಚ್ಚಿನ ನಟನನ್ನು ಕಳೆದುಕೊಂಡು ಮರುಗಿದ ದಿನವದು. ಆ ದಿನಕ್ಕೀಗ ಬರೊಬ್ಬರಿ 18 ವರ್ಷ.
ಕನ್ನಡದ ಮೇರು ನಟ ಕೆಂಟಕಿ ಕರ್ನಲ್ ಬಿರುದಾಂಕಿತ ಡಾ, ರಾಜ್ ಕುಮಾರ್(Dr Rajkumar) 18ನೇ ವರ್ಷದ ಪುಣ್ಯಸ್ಮರಣೆ ಇಂದು. ವರನಟನನ್ನು ಕಳೆದು ಕೊಂಡು 18 ವರ್ಷವಾದರೂ ಅವರ ಸವಿನೆನಪು ಎಂದಿಗೂ ಅಭಿಮಾನಿ ದೇವರುಗಳಲ್ಲಿ, ಕರುನಾಡ ಜನತೆಯಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ. ಅಂತಹ ಕಲಾಸೇವೆ ಅವರದ್ದು. ಅದಕ್ಕೆ ದೊಡ್ಮನೆ ಎಂದರೇನೆ ಎಲ್ಲರಿಗೂ ಅಚ್ಚುಮೆಚ್ಚು.
ಪ್ರತಿವರ್ಷದಂತೆ ಇಂದೂ ಕೂಡ ಕುಟುಂಬಸ್ಥರು ಡಾ.ರಾಜ್(Dr Rajkumar) ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಇತ್ತ ಅಭಿಮಾನಿಗಳು ಕೂಡ ರಾಜ್ಯ ಹಲವು ಭಾಗಗಳಲ್ಲಿ ರಕ್ತದಾನ, ಅನ್ನದಾನ ಶಿಬಿರಗಳನ್ನು ಹಮ್ಮಿಕೊಂಡಿದ್ದಾರೆ. ಕೈಲಾದಷ್ಟು ನೆರವು ನೀಡುತ್ತಿದ್ದಾರೆ.
ಇನ್ನೂರಕ್ಕೂ ಹೆಚ್ಚು ಸಿನಿಮಾಗಳು, ನೂರಾರು ಪಾತ್ರ, ಪ್ರತಿ ಸಿನಿಮಾದಲ್ಲೂ ವಿಭಿನ್ನ ಅಭಿನಯದ ಛಾಪು. ಅದೇ ಛಾರ್ಮ್. ಆರಂಭದಿಂದ ಕೊನೆಯ ದಿನಗಳವರೆಗೂ ಅಷ್ಟೇ ಬೇಡಿಕೆ ಸೃಷ್ಟಿಸಿಕೊಂಡಿದ್ದ ಭಾರತೀಯ ಚಿತ್ರರಂಗ ಕಂಡ ಅಪರೂಪದ ನಟ. ‘ಬೇಡರ ಕಣ್ಣಪ್ಪ’ನಾಗಿ ಚಿತ್ರರಂಗಕ್ಕೆ ಬಂದು ‘ಶಬ್ದವೇಧಿ’ ಸಿನಿಮಾದವರೆಗೆ ರಂಜಿಸಿದ ಈ ಮಹಾನ್ ಕಲಾವಿದ. ಕನ್ನಡ, ಕರುನಾಡು ಹಾಗೂ ಭಾರತೀಯ ಚಿತ್ರರಂಗ ಇರುವವರೆಗೆ ಎಂದಿಗೂ ಜೀವಂತ ಚೇತನ ಅಣ್ಣಾವ್ರು.