Duniya Vijay: ದುನಿಯಾ ವಿಜಯ್(Duniya Vijay) ನಂಜನಗೂಡು ನಂಜುಂಡೇಶ್ವರನ ದರ್ಶನ ಪಡೆದಿದ್ದಾರೆ. ‘ಭೀಮ’ ಸಿನಿಮಾ ಗೆಲುವಿಗಾಗಿ ನಂಜುಂಡೇಶ್ವರನಲ್ಲಿ ಮಂಡಿಯೂರಿ ಪ್ರಾರ್ಥಿಸಿದ್ದಾರೆ. ಹಾಗಂತ ಏಸಿ ಕಾರ್ ಏರಿ ದರ್ಶನ ಪಡೆದಿಲ್ಲ, ಬಸ್ಸೋ, ರೈಲೋ ಏರಿ ದರ್ಶನ ಪಡೆದಿಲ್ಲ. ಬದಲಾಗಿ ಕಾಲ್ನಡಿಗೆಯಲ್ಲಿ ಹೋಗಿ ದರ್ಶನ ಪಡೆದಿದ್ದಾರೆ. ಸ್ನೇಹಿತರೊಡಗೂಡಿ ಪಾದಾಯಾತ್ರೆ ಕೈಗೊಂಡು ದರ್ಶನ ಪಡೆದಿದ್ದಾರೆ. ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಆತ್ಮೀಯ ಸ್ನೇಹಿತರೊಂದಿಗೆ ಐದು ದಿನಗಳ ಕಾಲ ಪಾದಯಾತ್ರೆ ನಡೆಸಿದ್ದಾರೆ ದುನಿಯಾ ವಿಜಯ್(Duniya Vijay). ರಾತ್ರಿ ಹಗಲೆನ್ನದೇ, ಬಿಸಿಲು ಬೆಂಕಿ ಲೆಕ್ಕಿಸದೇ ಪಾದಯಾತ್ರೆ ಮಾಡಿದ್ದಾರೆ. ಬಸ್ ಸ್ಟ್ಯಾಂಡ್, ಮರದಡಿ ಹೀಗೆ ಎಲ್ಲೆಂದರಲ್ಲಿ ವಿಶ್ರಾಂತಿ ಪಡೆದು ಪಯಣ ಮುಂದುವರೆಸಿದ್ದಾರೆ. ಮಧ್ಯ ರಾತ್ರಿ ಸ್ನೇಹಿತರೊಂದಿಗೆ ಟೀ ಕುಡಿದು ಮತ್ತೆ ಪಯಣ ಆರಂಭಿಸಿದ್ದಾರೆ. ಸ್ನೇಹಿತರೊಂದಿಗೆ ಬೆರೆತು ಒಂದಿಷ್ಟು ಜಾಲಿ ಮಾಡುತ್ತಾ, ದಾರಿಯಲ್ಲಿ ಸಿಕ್ಕ ಅಭಿಮಾನಿಗಳನ್ನು ಭೇಟಿ ಮಾಡುತ್ತಾ ಅಂತಿಮವಾಗಿ ನಂಜುಂಡೇಶ್ವರನ ದರ್ಶನ ಪಡೆದು ಪುನೀತರಾಗಿದ್ದಾರೆ.
ಐದು ದಿನಗಳ ಈ ಜರ್ನಿಯ ವೀಡಿಯೋ ತುಣುಕನ್ನು ವಿಜಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಿನಿಮಾ ಹೊರತಾಗಿ ಡಿಫ್ರೆಂಟ್ ಲೈಫ್ ಸ್ಟೈಲ್ ಅಳವಡಿಸಿಕೊಂಡಿದ್ದಾರೆ ದುನಿಯಾ ವಿಜಿ. ಇತ್ತೀಚೆಗೆ ಆನೇಕಲ್‌ನ ಸ್ನೇಹಿತನ ಹೋಟೆಲ್‌ಗೆ ಯಾರೂ ತಿಳಿಯದಂತೆ ಭೇಟಿ ನೀಡಿ ಸರ್ಫ್ರೈಸ್ ನೀಡಿದ್ರು. ಆಗಾಗ ಈ ರೀತಿ ಸ್ನೇಹಿತರೊಡಗೂಡಿ ಸಿಟಿ ರೌಂಡ್ಸ್ ಹಾಕುತ್ತಿರುತ್ತಾರೆ. ಇದೀಗ ಶಿವನ ಆರ್ಶೀವಾದ ಪಡೆಯಲು ಪಾದಯಾತ್ರೆ ಬೆಳೆಸಿದ್ದು ಗಮನ ಸೆಳೆಯುತ್ತಿದೆ.
‘ಭೀಮ’(Bheema) ಮೂಲಕ ಮಾಸ್ ಆಗಿ ಬೆಳ್ಳಿ ತೆರೆಮೇಲೆ ಮತ್ತೊಮ್ಮೆ ಕಮಾಲ್ ಮಾಡೋಕೆ ದುನಿಯಾ ವಿಜಯ್ ಸರ್ವ ರೀತಿಯಲ್ಲೂ ರೆಡಿಯಾಗಿದ್ದಾರೆ. ಸಲಗ ಮೂಲಕ ಡೈರೆಕ್ಷನ್ ವೆಂಚರ್ ಆರಂಭಿಸಿ ಗೆದ್ದಿರುವ ಬ್ಲಾಕ್ ಕೋಬ್ರಾ ಭೀಮ ಸಿನಿಮಾದಲ್ಲೂ ಅದೇ ಹಾದಿ ಹಿಡಿದಿದ್ದಾರೆ. ‘ಭೀಮ’(Bheema) ಚಿತ್ರ ಬಿಡುಗಡೆಯ ಸನಿಹದಲ್ಲಿರುವಾಗಲೇ ಜಡೇಶ್ ಕುಮಾರ್ ಹಂಪಿ ಜೊತೆ ಹೊಸ ಸಿನಿಮಾ ಕೂಡ ಅನೌನ್ಸ್ ಮಾಡಿದ್ದಾರೆ.