Kiccha Sudeep: ಕಿಚ್ಚ ಸುದೀಪ ಅಭಿನಯದ ಮ್ಯಾಕ್ಸ್(Max) ಸಿನಿಮಾ ಅವರ ಅಭಿಮಾನಿ ಬಳಗದಲ್ಲಿ ಹಾಗೂ ಕನ್ನಡ ಚಿತ್ರರಂಗದಲ್ಲಿ ಸಖತ್ ಕ್ಯೂರಿಯಾಸಿಟಿ ಹುಟ್ಟು ಹಾಕಿದೆ. ಸಿನಿಮಾ ಫಸ್ಟ್ ಲುಕ್, ಟೀಸರ್ ತುಣುಕು ಬಿಟ್ಟರೆ ಸಿನಿಮಾ ಬಗ್ಗೆ ಬೇರಾವುದೇ ಅಪ್ಡೇಟ್ ಹೊರ ಬೀಳುತ್ತಿಲ್ಲ. ಇದರ ನಡುವೆ ಜೈಲರ್ ಸಿನಿಮಾ ಸ್ಟಂಟ್ ಮಾಸ್ಟರ್ ಆಗಮನ ಸುದ್ದಿ ಕೇಳಿ ಬಂದಿದ್ದು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
ಮ್ಯಾಕ್ಸ್(Max)…ಕಿಚ್ಚ ಸುದೀಪ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ. ಕಾಲಿವುಡ್ ನಿರ್ದೇಶಕ ವಿಜಯ್ ಕಾರ್ತಿಕೇಯನ್ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕಾಗಿ ಕಂಪ್ಲೀಟ್ ಚೇಂಜ್ ಓವರ್ ಮಾಡಿಕೊಂಡಿರುವ ಕಿಚ್ಚ ಈ ಸಾರಿ ಗೆದ್ದೇ ಗೆಲ್ಲುವ ಪಣ ತೊಟ್ಟಿದ್ದಾರೆ. ಅದಕ್ಕೆ ತಕ್ಕಂತೆ ಸಿನಿಮಾ ಗ್ಲಿಂಪ್ಸ್ ಕೂಡ ಪ್ರಾಮಿಸಿಂಗ್ ಆಗಿದೆ. ಸದ್ಯ ಚಿತ್ರೀಕರಣದ ಕೊನೆಯ ಹಂತಕ್ಕೆ ಮ್ಯಾಕ್ಸ್ ಚಿತ್ರತಂಡ ತಲುಪಿದೆ. ಕ್ಲೈಮ್ಯಾಕ್ಸ್ ಚಿತ್ರೀಕರಣವನ್ನು ಬಿಗ್ ಬಜೆಟ್‌ನಲ್ಲಿ, ಸ್ಟೈಲೀಶ್ ಆಗಿ ಕಟ್ಟಿಕೊಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದ್ದು, ಇದಕ್ಕಾಗಿ ʼಜೈಲರ್ʼ ಸಿನಿಮಾ ಖ್ಯಾತಿಯ ಸ್ಟಂಟ್ ಮಾಸ್ಟರ್‌ರನ್ನು ಕರೆತಂದಿದೆ.
ರಜನಿಕಾಂತ್(Rajinikanth) ಅಭಿನಯದ ಜೈಲರ್ ಸಿನಿಮಾದ ಸ್ಟೈಲೀಶ್ ಸ್ಟಂಟ್ ಮಾಸ್ಟರ್ ಕೆವಿನ್(Kevin) ಮ್ಯಾಕ್ಸ್ ಚಿತ್ರತಂಡ ಸೇರಿಕೊಂಡಿದ್ದಾರೆ. ಮ್ಯಾಕ್ಸ್ ಗಾಗಿ ಸ್ಟೈಲೀಶ್ ಆಗಿರೋ ಸ್ಟಂಟ್‌ಗಳನ್ನು ಕೆವಿನ್ ಹೆಣೆಯಲಿದ್ದಾರೆ. ಒಂದು ಫೈಟ್ ಸೀನ್ ಮಾತ್ರ ಕೆವಿನ್ ಕಂಪೋಸ್ ಮಾಡಿದ್ದು, ಉಳಿದ ಆಕ್ಷನ್ ಸೀಕ್ವೆಲ್‌ಗೆ ಚೇತನ್ ಡಿಸೋಜಾ ಸ್ಟಂಟ್ ಕಂಪೋಸ್ ಮಾಡಿದ್ದಾರೆ. ಕೆವಿನ್ ನೇತೃತ್ವದಲ್ಲಿ ನಾಲ್ಕು ದಿನಗಳ ಶೂಟಿಂಗ್ ಈಗಾಗಲೇ ಕಂಪ್ಲೀಟ್ ಆಗಿದ್ದು, ಈ ಸುದ್ದಿ ಈಗ ಜಾಹೀರಾಗಿದೆ.
ಆಕ್ಷನ್ ಥ್ರಿಲ್ಲರ್ ಸಿನಿಮಾ ಶೂಟಿಂಗ್ ಮಹಾಬಲಿಪುರಂನಲ್ಲಿ ಬಹುತೇಕ ನಡೆಯುತ್ತಿದ್ದು, ಸಖತ್ ಸ್ಟೈಲೀಶ್ ಹಾಗೂ ರಗಡ್ ಆಗಿ ಕಿಚ್ಚ(Kiccha Sudeep) ಈ ಚಿತ್ರದಲ್ಲಿ ಕಾಣ ಸಿಗಲಿದ್ದಾರೆ. ಅಜನೀಶ್ ಲೋಕನಾಥ್ ಮ್ಯೂಸಿಕ್ ಮ್ಯಾಜಿಕ್ ಚಿತ್ರಕ್ಕಿದ್ದು, ಕೆಜಿಎಫ್ ಖ್ಯಾತಿಯ ಶಿವಕುಮಾರ್ ಕಲಾ ನಿರ್ದೇಶನ ಚಿತ್ರಕ್ಕಿದೆ. ಇದೇ ವರ್ಷ ಮ್ಯಾಕ್ಸ್ ಸಿನಿಮಾ ತೆರೆ ಕಾಣುವ ಸಾಧ್ಯತೆ ಹೆಚ್ಚಿದೆ.