Kareen Kapoor: ಬಿಟೌನ್ ಬೇಬೋ ಕರೀನಾ ಕಪೂರ್(Kareen Kapoor) ವೃತ್ತಿ ಬದುಕಿಗೆ ಹೊಸ ಗರಿ ಸೇರಿಕೊಂಡಿದೆ. ಸಿನಿಮಾ, ಫ್ಯಾಮಿಲಿ ಜೊತೆಗೆ ಮಕ್ಕಳ ಹಕ್ಕುಗಳ ಬಗ್ಗೆ ಅಪಾರ ಕಾಳಜಿ ವಹಿಸುವ, ಅದಕ್ಕಾಗಿ ತಮ್ಮ ಸೇವೆಯನ್ನು ಹಲವು ವರ್ಷದಿಂದ ಸಲ್ಲಿಸುತ್ತಿರುವ ಕರೀನಾ UNICEF ಭಾರತದ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.
ಸಿನಿಮಾ ನಟನೆ ಮೂಲಕ ಗಮನ ಸೆಳೆದಿರುವ ಅದರ ಜೊತೆಗೆ ಕಳೆದ ಹಲವು ವರ್ಷಗಳಿಂದ ಮಕ್ಕಳ ಹಕ್ಕು, ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿರುವ ಕರೀನಾ ಕಪೂರ್(Kareen Kapoor) UNICEFನ ಭಾರತೀಯ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಂತಸ ಹಂಚಿಕೊಂಡು ಪೋಸ್ಟ್ ಹಾಕಿದ್ದಾರೆ. ಕರೀನಾ ಆಯ್ಕೆ ಸುದ್ದಿ ತಿಳಿಯುತ್ತಿದ್ದಂತೆ ಪ್ರಿಯಾಂಕ ಚೋಪ್ರಾ(Priyanka Chopra) ಸೇರಿದಂತೆ ಹಲವು ನಟಿಯರು ಶುಭ ಕೋರಿದ್ದಾರೆ. ಪ್ರಿಯಾಂಕ ಚೋಪ್ರಾ ಅರ್ಹವಾದ ಆಯ್ಕೆ ಎಂದಿದ್ದು, ವೆಲ್ ಕಂ ಟು ದ ಫ್ಯಾಮಿಲಿ ಎಂದಿದ್ದಾರೆ. ಮೇರಿ ಕೋಮ್ ಖ್ಯಾತಿಯ ನಟಿ ಪ್ರಿಯಾಂಕ ಚೋಪ್ರ ಕೂಡ UNICEFನ ರಾಯಭಾರಿಯಾಗಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ೨೦೧೬ರಿಂದ ಗ್ಲೋಬಲ್ ಗುಡ್‌ವಿಲ್ ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಆಯುಷ್ಮಾನ್ ಕುರಾನ, ಮಲೈಕಾ ಅರೋರ ಸೇರಿದಂತೆ ಬಿಟೌನ್ ಹಲವು, ನಟ-ನಟಿಯರು, ನಿರ್ದೇಶಕರು, ಸ್ನೇಹಿತರು ಬಿಟೌನ್ ಬೇಬೋಗೆ ಸಾಮಾಜಿಕ ಜಾಲತಾಣದಲ್ಲಿ ಶುಭ ಹಾರೈಸಿದ್ದಾರೆ. ಕಳೆದ ತಿಂಗಳು ತೆರೆಕಂಡ ಕ್ರ್ಯೂ (Crew)ಸಿನಿಮಾ ಕರೀನಾಗೆ ಗೆಲುವು ತಂದುಕೊಟ್ಟಿದ್ದು, ಸದ್ಯ ಸಿಂಗಂ ಅಗೈನ್, ದಿ ಬಂಕಿಂಗ್ ಹ್ಯಾಮ್ ಮರ್ಡರ್ಸ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಯಶ್(Yash) ಅಭಿನಯದ ಟಾಕ್ಸಿಕ್(Toxic) ಸಿನಿಮಾದಲ್ಲಿ ಯಶ್ ಅಕ್ಕನ ಪಾತ್ರ ನಿರ್ವಹಿಸಲು ಒಪ್ಪಿಕೊಂಡಿದ್ದ ಕರೀನಾ, ಚಿತ್ರದ ಕಥೆ, ಹಾಗೂ ಡೇಟ್ಸ್‌ಗಳ ಹೊಂದಾಣಿಕೆ ಸಮಸ್ಯೆಯಿಂದ ಟಾಕ್ಸಿಕ್ ಸಿನಿಮಾದಿಂದ ಹೊರ ನಡೆದಿದ್ದಾರೆ.