Kannada Industry: ಕೆಜಿಎಫ್(Kgf) ಸಿನಮಾ ಬಿಡುಗಡೆಯಾದ ಮೇಲೆ ಕನ್ನಡ ಚಿತ್ರರಂಗವನ್ನು ನೋಡುವ ರೀತಿ ಭಿನ್ನವಾಗಿದೆ. ಇಲ್ಲಿ ಬರುವ ಸಿನಿಮಾಗಳ ಮೇಲೆ ಎಲ್ಲರ ಗಮನ ನೆಟ್ಟಿದೆ. ಕನ್ನಡ ಚಿತ್ರರಂಗದ ಸುವರ್ಣ ಯುಗ ಆರಂಭ ಎಂದು ಎಲ್ಲರೂ ಬಡಾಯಿ ಕೊಚ್ಚಿಕೊಳ್ಳುತಿರುವಾಗಲೇ ಚಿತ್ರರಂಗಕ್ಕೆ ಕಗ್ಗತ್ತಲು ಆವರಿಸಿದೆ. ಕರಾಳ ದಿನಗಳನ್ನು ಚಿತ್ರರಂಗ ಕಾಣುತ್ತಿದೆ. ಇದೀಗ ಚಿತ್ರಮಂದಿರದ ಬಾಗಿಲು ಮುಚ್ಚುವ ಪರಿಸ್ಥಿತಿಗೆ ಬಂದು ನಿಂತಿದೆ.
ಕನ್ನಡ ಚಿತ್ರರಂಗ ಒಂಭತ್ತು ದಶಕದ ಸಂಭ್ರಮವನ್ನು ಹೆಮ್ಮೆಯಿಂದ ಸಂಭ್ರಮಿಸುತ್ತಿರುವ ಕಾಲಘಟ್ಟದಲ್ಲಿ ಕರಾಳ ಸುದ್ದಿಯೊಂದು ಕೇಳಿ ಬಂದಿದೆ. ಚಿತ್ರಮಂದಿರಗಳು ಸಿನಿಮಾಗಳಿಂದ, ಜನರಿಂದ ತುಂಬಿ ನಲಿಯುತ್ತಿದ್ದ ಕಾಲಗಳು ನಿಧಾನವಾಗಿ ಮಾಯವಾಗುತ್ತಿದೆ. ವಾರಕ್ಕೆ ಗೊಂಚಲು ಗೊಂಚಲು ಸಿನಿಮಾ ಬಿಡುಗಡೆಯಾದರೂ ಆಟಕ್ಕುಂಟು ಲೆಕ್ಕಕ್ಕಿಲ್ಲವಾಗಿದೆ. ಚಿತ್ರಮಂದಿರಕ್ಕೆ ಜನ ಬರಲು ರೆಡಿಯಿಲ್ಲ. ಪರಿಣಾಮ ಚಿತ್ರಮಂದಿರಗಳು ನಷ್ಟದಲ್ಲಿವೆ. ಇಂದು ಅನೇಕ ಚಿತ್ರಮಂದಿರಗಳು ಆದಾಯವಿಲ್ಲದೇ ಒಂದೊಂದಾಗಿ ಬಾಗಿಲು ಮುಚ್ಚುತ್ತಿವೆ. ಈ ಎಲ್ಲವನ್ನು ಗಮನಿಸಿರುವ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಒಂದಷ್ಟು ದಿನಗಳ ಮಟ್ಟಿಗೆ ಸಿನಿಮಾ ರಿಲೀಸ್ ನಿಲ್ಲಿಸಲು ಆಲೋಚಿಸಿದೆ.
ಚಿಕ್ಕಪುಟ್ಟ ನಟರ ಸಿನಿಮಾಗಳನ್ನು ಜನ ನೋಡಲು ಥೀಯೇಟರ್‌ಗೆ ಬರ್ತಿಲ್ಲ. ಸ್ಟಾರ್ ನಟರು ಒಂದು ಸಿನಿಮಾಗೆ ಮೂರ್ನಾಲ್ಕು ವರ್ಷ ತೆಗೆದುಕೊಳ್ತಿದ್ದಾರೆ. ಹೀಗಾದ್ರೆ ಚಿತ್ರಮಂದಿರಗಳ ಗತಿಯೇನು, ಚಿತ್ರರಂಗದ ಗತಿಯೇನು ಅನ್ನೋದು ವಾಣಿಜ್ಯ ಮಂಡಳಿಯ ಪ್ರಶ್ನೆ. ಸ್ಟಾರ್ ನಟರುಗಳು ವರ್ಷಕ್ಕೆರಡು ಸಿನಿಮಾ ಮಾಡಿದ್ರೆ ಸಿನಿಮಾವನ್ನೇ ಉಸಿರಾಗಿಸಿ ಜೀವನ ಮಾಡುತ್ತಿರುವ ಎಷ್ಟೋ ಕುಟುಂಬಗಳು ನಿರಾಳವಾಗಲಿವೆ ಅನ್ನೋದು ಫಿಲಂ ಚೇಂಬರ್ ವಾದ.
ಇದಕ್ಕಾಗಿ ವಿಧಿ ಇಲ್ಲದೆ ಇಂತಹದ್ದೊಂದು ಕಠಿಣ ನಿರ್ಧಾರಕ್ಕೆ ಮುಂದಾಗಿದೆ ವಾಣಿಜ್ಯ ಮಂಡಳಿ.. ಈ ನಿರ್ಧಾರಕ್ಕೆ ನಿರ್ಮಾಪಕರು, ವಿತರಕರು, ಕಲಾವಿದರು ಯಾವ ರೀತಿ ಸಾಥ್ ನೀಡ್ತಾರೆ ಕಾದು ನೋಡ್ಬೇಕು. ಎಲ್ಲರಿಂದ ಒಮ್ಮತದ ನಿರ್ಧಾರ ಬಂದರೆ ಎರಡು ವಾರವೋ, ಒಂದು ತಿಂಗಳೋ ಚಿತ್ರಮಂದಿರಗಳು ಬಂದ್ ಆಗಲಿವೆ. ಸುವರ್ಣ ಘಳಿಗೆಗಳಿಗೆ ಸಾಕ್ಷಿಯಾಗಿದ್ದ ಚಿತ್ರರಂಗ ಇಂತಹದ್ದೊಂದು ಹಂತಕ್ಕೆ ತಲುಪಿದೆ ಎಂದರೆ ಇದು ಚಿತ್ರರಂಗಕ್ಕಂಟಿದ ಕಪ್ಪು ಚುಕ್ಕೆ.