Sambavami Yuge Yuge: ಆಧುನಿಕತೆಯ ಸೋಗಿನಲ್ಲಿ ನಮ್ಮ ಹಳ್ಳಿಗಳಲ್ಲಿ ಮೊದಲಿದ್ದ ವೈಭವ ಕಡಿಮೆಯಾಗುತ್ತಿದೆ. ವಿದ್ಯಾವಂತರೆಲ್ಲ ಪಟ್ಟಣ ಸೇರುತ್ತಿದ್ದಾರೆ. ಹೀಗಾಗಬಾರದು, ಯುವಕರು ಹಳ್ಳಿಗಳಲ್ಲೇ ಇದ್ದು ಕೆಲಸ ಮಾಡಬೇಕೆನ್ನುವ ಸಂದೇಶವಿರುವ ‘ಸಂಭವಾಮಿ ಯುಗೇ ಯುಗೇ’(Sambavami Yuge Yuge) ಜೂನ್ 21ರಂದು ಬಿಡುಗಡೆಯಾಗಲಿದೆ. ಜಯ್ ಶೆಟ್ಟಿ(Jay Shetty) – ನಿಶಾ ರಜಪೂತ್(Nisha Rajut) ಹಾಗೂ ಮಧುರಾಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರದ ನಿರ್ದೇಶಕ ಚೇತನ್ ಚಂದ್ರಶೇಖರ್ ಶೆಟ್ಟಿ ಮಾತನಾಡಿ ನಾನು ಕಳೆದ ಹತ್ತು ವರ್ಷಗಳಿಂದ ಚಿತ್ರರಂಗದಲ್ಲಿದ್ದು, ಸೋಶಿಯಲ್ ಕಂಟೆಂಟ್ ಇಟ್ಟುಕೊಂಡು ಈ ಚಿತ್ರ ನಿರ್ದೇಶನ ಮಾಡಿದ್ದೇನೆ. ಫ್ಯಾಮಿಲಿ ಆಡಿಯನ್ಸ್ ಕೂತು ನೋಡುವಂಥ ವಿಭಿನ್ನ ಕಮರ್ಷಿಯಲ್ ಕಾನ್ಸೆಪ್ಟ್ ಇರುವ ಈ ಚಿತ್ರಕ್ಕೆ ಚಿತ್ರದಲ್ಲಿ ಕೃಷ್ಣನ ಪಾತ್ರ ಹಾಗೂ ಅರ್ಜುನನನ್ನು ಹೋಲುವ ಪಾತ್ರಗಳೂ ಇವೆ. ಹಳ್ಳಿಯ ಹುಡುಗರು ವಿದ್ಯಾವಂತರಾದ ಮೇಲೆ, ಕೆಲಸದ ನಿಮಿತ್ತ ಪಟ್ಟಣಕ್ಕೆ ಅಂತ ಹೋದವರು ಅಲ್ಲೇ ನೆಲೆಸುತ್ತಾರೆ. ಇದರಿಂದ ಮುಂದಿನ ತಲೆಮಾರಿನ ಕಥೆ ಏನು? ನಮ್ಮ ಹಳ್ಳಿಗಳು ಉಳಿಯುವುದಾದರೂ ಹೇಗೆ ?, ಹಾಗಾಗಿ ಯುವಕರು ಹಳ್ಳಿಯಲ್ಲೇ ನೆಲೆಸಬೇಕು, ಹಳ್ಳಿಗಳನ್ನು ಬೆಳೆಸಬೇಕು ಎಂಬ ಕಥಾಹಂದರದ ಮೇಲೆ ಈ ಚಿತ್ರ ಮಾಡಿದ್ದೇವೆ ಎಂದು ಹೇಳಿದರು.
ನಾಯಕ ಜಯ್ ಶೆಟ್ಟಿ((Jay Shetty) ಮಾತನಾಡಿ ಈ ಹಿಂದೆ 1975 ಎಂಬ ಚಿತ್ರದಲ್ಲಿ ಅಭಿನಯಿಸಿದ್ದೆ. ಕೃಷಿ ಮತ್ತು ರೈತರ ಮೇಲೆ ಮಾಡಿದ ಚಿತ್ರವಿದು, ತನಗೆ ಆಶ್ರಯ ಕೊಟ್ಟ ಊರಿಗೆ ಏನಾದರೂ ಮಾಡಬೇಕು ಎಂದು ನಾಯಕ ಮುಂದಾಗುತ್ತಾನೆ. ಮುಂದೇನಾಗುತ್ತದೆ ಎನ್ನುವುದೇ ಈ ಚಿತ್ರದ ಕಾನ್ಸೆಪ್ಟ್ ಎಂದರು.
ನಾಯಕಿ ನಿಶಾ ರಜಪೂತ್(Nisha Rajput) ಮಾತನಾಡುತ್ತ ನಾನು ಬಿಜಾಪುರದವಳಾದರೂ, ಬೆಳೆದಿದ್ದು ಮುಂಬೈನಲ್ಲಿ. ಕನ್ನಡದಲ್ಲಿ ನಟಿಸಬೇಕು ಎಂಬ ಆಸೆ ಇತ್ತು. ಈ ಚಿತ್ರದಲ್ಲಿ ಸ್ವಾತಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು, ನಾಯಕನ ತಂಗಿಯ ಪಾತ್ರ ಮಾಡಿರುವ ಮಧುರಾಗೌಡ ಮಾತನಾಡಿ ಈ ಚಿತ್ರದಲ್ಲಿ ಸುಧಾರಾಣಿ ಅವರ ಮಗಳಾಗಿ ನಟಿಸಿದ್ದು ನನ್ನ ಅದೃಷ್ಟ ಎಂದು ತನ್ನ ಪಾತ್ರದ ಕುರಿತು ಹೇಳಿಕೊಂಡರು. ಪೂರನ್ ಶೆಟ್ಟಿಗಾರ್ ಅವರ ಸಂಗೀತ ಸಂಯೋಜನೆ, ರಾಜು ಹೆಮ್ಮಿಗೆಪುರ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.