Taj: ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರು ‘ತಾಜ್’ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ. ಇದೇ ಬೆನ್ನಲ್ಲೇ ಚಿತ್ರದ ಪ್ರಚಾರ ಕಾರ್ಯ ಆರಂಭಿಸಿರುವ ಚಿತ್ರತಂಡ ಸಿನಿಮಾದ ಟೀಸರ್ ಮತ್ತು ಹಾಡೊಂದನ್ನು ಬಿಡುಗಡೆ ಮಾಡಿದೆ.
ಸುಮಾರು 12 ವರ್ಷಗಳಿಂದ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕನಾಗಿ, ಸಹ ನಿರ್ದೇಶಕನಾಗಿ, ಬರಹಗಾರನಾಗಿ, ಸಾಹಿತಿಯಾಗಿ ಗುರುತಿಸಿಕೊಂಡಿರುವ ಬಿ. ರಾಜರತ್ನ ಮೊದಲ ಬಾರಿಗೆ ಈ ಸಿನಿಮಾದ ಮೂಲಕ ನಿರ್ದೇಶಕನಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ನಿರ್ದೇಶಕ ಬಿ. ರಾಜರತ್ನ, ‘ಸುಮಾರು ಹತ್ತಕ್ಕೂ ಹೆಚ್ಚು ಕಥೆಗಳನ್ನು ಕೇಳಿದ ನಂತರ ನಿರ್ಮಾಪಕರು ಈ ಸಿನಿಮಾ ಮಾಡಲು ಒಪ್ಪಿಕೊಂಡರು. ಇದೊಂದು ನೈಜ ಘಟನೆಗಳನ್ನು ಆಧರಿಸಿದ ಸಿನಿಮಾ. ನಮ್ಮ ಸುತ್ತಮುತ್ತ ನಡೆದ ಶೇಕಡಾ 80 ರಷ್ಟು ನೈಜ ಘಟನೆಗಳು ಮತ್ತು ಶೇಕಡಾ 20 ರಷ್ಟು ಸಿನಿಮೀಯ ಅಂಶಗಳನ್ನು ಇಟ್ಟುಕೊಂಡು ‘ತಾಜ್’ ಸಿನಿಮಾ ಮಾಡಲಾಗಿದೆ. ಹಿಂದೂ-ಮುಸ್ಲಿಂ ಜೋಡಿಯ ಪ್ರೇಮಕಥೆ ಸಿನಿಮಾದಲ್ಲಿದ್ದು, ಜೊತೆಗೆ ಮಾನವೀಯ ನೆಲೆಗಟ್ಟು, ಸಾಮಾಜಿಕ ಸಂದೇಶ ಎಲ್ಲವನ್ನೂ ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ’ ಎಂದು ಕಥಾಹಂದರದ ಬಗ್ಗೆ ವಿವರಣೆ ನೀಡಿದರು.
ನವನಟ ಷಣ್ಮುಖ(Shanmukha) ‘ತಾಜ್’(Taj) ಸಿನಿಮಾದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಗೆ ಅಡಿಯಿಡುತ್ತಿದ್ದಾರೆ. ತಮ್ಮ ಚೊಚ್ಚಲ ಸಿನಿಮಾದ ಬಗ್ಗೆ ಮಾತನಾಡುವ ನಾಯಕ ನಟ ಷಣ್ಮುಖ, ‘ಮೊದಲ ಸಿನಿಮಾ, 10 ಕಥೆಗಳನ್ನು ಕೇಳಿ ನಂತರ ಮಾಡಿದ ಸಿನಿಮಾವಿದು. ಈಗಾಗಲೇ ಬಹುತೇಕ ಕಾರ್ಯಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ತೆರೆಗೆ ಬರುವ ಯೋಜನೆಯಿದೆ. ಸುಮಾರು 8 ತಿಂಗಳ ಹಿಂದೆ ಶುರುವಾದ ಸಿನಿಮಾ ಈಗ ತೆರೆಗೆ ಬರುತ್ತಿದೆ. ಹಿಂದೂ-ಮುಸ್ಲಿಂ ನಡುವಿನ ಕಥೆ, ಮಾನವೀಯತೆಯ ನೆಲೆಗಟ್ಟು , ಸಾಮಾಜಿಕ ಸಂದೇಶ ಎರಡೂ ಸಿನಿಮಾದಲ್ಲಿದೆ. ನಮ್ಮ ನಡುವೆಯೇ ನಡೆದ ಕೆಲ ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾವನ್ನು ತೆರೆಗೆ ತರಲಾಗುತ್ತಿದೆ ಎಂದು ತಿಳಿಸಿದ್ರು.
ಬೆಂಗಳೂರು ಸುತ್ತಮುತ್ತ ‘ತಾಜ್’(Taj) ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದ್ದು ಸಿನಿಮಾಕ್ಕೆ ಜೆಸ್ಸಿಗಿಫ್ಟ್ ಸಂಗೀತ ಸಂಯೋಜಿಸಿದ್ದಾರೆ. ‘ತಾಜ್’ ಸಿನಿಮಾದ ಟೀಸರ್ ಮತ್ತು ಹಾಡಿನ ಬಿಡುಗಡೆ ವೇಳೆ ಹಾಜರಿದ್ದ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ಸಿನಿಮಾದ ಬಗ್ಗೆ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಂಡರು. ಸದ್ಯ ಬಿಡುಗಡೆಯಾಗಿರುವ ‘ತಾಜ್’ ಸಿನಿಮಾದ ಟೀಸರ್ ಮತ್ತು ಹಾಡು ಸಿನಿಪ್ರಿಯರ ಗಮನ ಸೆಳೆಯುತ್ತಿದ್ದು, ಸಿನಿಮಾ ಶೀಘ್ರದಲ್ಲಿಯೇ ತೆರೆಗೆ ಬರುತ್ತಿದೆ. ‘ಶ್ರೀಪಾವನಿ ಲಕ್ಷ್ಮೀ ಕಂಬೈನ್ಸ್’ ಲಾಂಛನದಲ್ಲಿ ಶ್ರೀಮತಿ ಲಕ್ಷ್ಮೀ ಷಣ್ಮುಖ ನಿರ್ಮಾಣ ಮಾಡಿರುವ ‘ತಾಜ್’ ಸಿನಿಮಾಕ್ಕೆ ಬಿ. ರಾಜರತ್ನ ಆ್ಯಕ್ಷನ್-ಕಟ್ ಹೇಳಿದ್ದಾರೆ. ಯುವ ಪ್ರತಿಭೆ ಷಣ್ಮುಖ ‘ತಾಜ್’(Taj) ಸಿನಿಮಾದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದು, ಅಪ್ಸರಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಲರಾಜವಾಡಿ, ಶೋಭರಾಜ್, ವರ್ಧನ್, ಪದ್ಮಾವಾಸಂತಿ, ಪಟ್ರೆ ನಾಗರಾಜ್, ಕಡ್ಡಿ ವಿಶ್ವ, ಸೂರಜ್ ಮೊದಲಾದ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.