Shiva Rajkumar: ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್(Shiva Rajkumar) ನಟಿಸುತ್ತಿರುವ ಬಹು ನಿರೀಕ್ಷಿತ ಸಿನಿಮಾ ‘ಭೈರವನ ಕೊನೆಯ ಪಾಠ’. ಟೈಟಲ್ ಮೂಲಕವೇ ಕುತೂಹಲ ಹೆಚ್ಚಿಸಿದ್ದ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಶಿವಣ್ಣ ಜನ್ಮದಿನದ ವಿಶೇಷವಾಗಿ ನಿರ್ದೇಶಕ ಹೇಮಂತ್ ಎಂ ರಾವ್ ಹಾಗೂ ಇಡೀ ತಂಡ ಎರಡು ದಿನ ಮುಂಚಿತವಾಗಿಯೇ ‘ಭೈರವನ ಕೊನೆ ಪಾಠ’(Bhairavana Kone Pata) ಫಸ್ಟ್ ಲುಕ್ ಉಡುಗೊರೆಯಾಗಿ ನೀಡಿದೆ.
‘ಭೈರವನ ಕೊನೆಯ ಪಾಠ’ (Bhairavana Kone Pata) ಸಿನಿಮಾದ ಫಸ್ಟ್ ಲುಕ್ ಖಡಕ್ ಆಗಿದ್ದು, ಹಿಂದೆಂದೂ ಕಾಣದ ಹೊಸ ಅವತಾರದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದಾರೆ. ಎರಡು ಪೋಸ್ಟರ್ ಗಳಲ್ಲಿ ಎರಡು ರೀತಿಯ ಲುಕ್ ಮೂಲಕ ಮಾಸ್ ಲೀಡರ್ ಪ್ರತ್ಯಕ್ಷರಾಗಿದ್ದಾರೆ. ಗಡ್ಡ ಹಾಗೂ ಮೀಸೆ ಬೆಳ್ಳಗಾಗಿದೆ. ಯುದ್ಧಕ್ಕೆ ಸಜ್ಜಾದ ಪೋಷಾಕು, ಬೆನ್ನಿಗೆ ಬಾಣಗಳನ್ನು ಇಟ್ಟುಕೊಂಡಿದ್ದಾರೆ. ಹಿಂಭಾಗದಲ್ಲಿ ಕುದುರೆ ಇದೆ. ‘ಭೈರವನ ಕೊನೆ ಪಾಠ’ ಎಂಬುದರ ಜೊತೆಗೆ ‘ರಾಜನಿಗೆ ಪಾಠಗಳು’ ಎಂದು ಇಂಗ್ಲಿಷ್ನಲ್ಲಿ ಬರೆಯಲಾಗಿದೆ. ಪೋಸ್ಟರ್ ನಲ್ಲಿ ಹಂಪಿಯ ಕಮಲ ಮಹಲ್ ಕೂಡ ಇರುವುದು ಸಿನಿಮಾ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.
ಚಿತ್ರದ ಬಗ್ಗೆ ಮಾತನಾಡಿದ ಡಾ.ಶಿವ ರಾಜ್‌ಕುಮಾರ್(Shiva Rajkumar), “ಅಪ್ಪಾಜಿ, ಈ ರೀತಿಯ ಪಾತ್ರಗಳನ್ನು ನಿಭಾಯಿಸುವುದರಲ್ಲಿ ಹೆಸರುವಾಸಿಯಾಗಿದ್ದರು. ಭೈರವ ಪಾತ್ರದಲ್ಲಿ ನಟಿಸುತ್ತಿರುವುದಕ್ಕೆ ನನಗೆ ಅತೀವ ಸಂತೋಷವಾಗಿದೆ. ಹೇಮಂತ್ ಎಂ ರಾವ್ ಮತ್ತು ತಂಡದೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ” ಎಂದಿದ್ದಾರೆ. ಹೇಮಂತ್ ಎಂ ರಾವ್ ಮಾತನಾಡಿ, ”ಭೈರವನ ಕೊನೆ ಪಾಠ(Bhairavana Kone Pata)ನನ್ನ ಮಹತ್ವಾಕಾಂಕ್ಷೆಯ ಚಿತ್ರ. ಸೂಪರ್ ಸ್ಟಾರ್ ಸಿನಿಮಾವನ್ನು ನಿರ್ದೇಶಿಸುವ ಜವಾಬ್ದಾರಿಯು ಸವಾಲಿನ ಕೆಲಸವಾಗಿದೆ. ಶಿವಣ್ಣ ಜೊತೆ ಕೆಲಸ ಮಾಡುವುದು ಪ್ರತಿಯೊಬ್ಬ ನಿರ್ದೇಶಕರ ಆಸೆ. ಇಡೀ ದಿನ ಬೆಟ್ಟದ ಮೇಲೆ ಫೋಟೋಶೂಟ್ ನಡೆದಿದೆ. ಇದು ಕೆಲವು ಶತಮಾನಗಳ ಹಿಂದಿನ ಸಿನಿಮಾ” ಎಂದಿದ್ದಾರೆ.
ನಿರ್ಮಾಪಕ ವೈಶಾಕ್ ಜೆ ಗೌಡ ಮಾತನಾಡಿ, “ಭೈರವನ ಕೊನೆ ಪಾಠ ತುಂಬಾ ವಿಶೇಷವಾದ ಚಿತ್ರವಾಗಲಿದೆ ಎಂದು ನನಗೆ ತಿಳಿದಿತ್ತು. ಚಿತ್ರ ಅದ್ಧೂರಿಯಾಗಿ ಮೂಡಿಬರಲಿದೆ. ಸೆಟ್‌ಗಳು, ಸ್ಥಳಗಳು, ಎಲ್ಲವನ್ನೂ ದೊಡ್ಡದಾಗಿ ಪ್ಲ್ಯಾನ್ ಮಾಡಲಾಗಿದೆ ಮತ್ತು ನಿಖರವಾಗಿ ಕಾರ್ಯಗತಗೊಳಿಸಲಾಗುತ್ತದೆ. ನನಗೆ ತುಂಬಾ ವಿಶ್ವಾಸವಿದೆ ಇದು ಅತ್ಯುತ್ತಮ ಚಲನಚಿತ್ರವಾಗಲಿದೆ” ಎಂದು ಅಭಿಪ್ರಾಯಪಟ್ಟರು. ಹೇಮಂತ್ ರಾವ್(Hemanth M Rao) ಅವರು ಈ ಮೊದಲು ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಕವಲುದಾರಿ’, ‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಎ ಹಾಗೂ ಸೈಡ್ ಬಿ ಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ಈಗ ಅವರು ಶಿವರಾಜ್ಕುಮಾರ್ ಜೊತೆ ಕೈ ಜೋಡಿಸಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ. ‘ಭೈರವನ ಕೊನೆ ಪಾಠ’ ಚಿತ್ರವನ್ನು ‘ವೈಶಾಖ್ ಜೆ ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ಡಾ. ವೈಶಾಖ್ ಜೆ ಗೌಡ ನಿರ್ಮಿಸುತ್ತಿದ್ದಾರೆ. ಈ ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.