ಬುಧವಾರ, ಜುಲೈ 2, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

Wonders of the human brain: ಮೆದುಳಿಗಿದೆ ಜಗತ್ತನ್ನೇ ಬದಲಾಯಿಸೋ ಅದ್ಭುತ ಶಕ್ತಿ!

Majja Webdeskby Majja Webdesk
08/02/2025
in Majja Special
Reading Time: 2 mins read
Wonders of the human brain: ಮೆದುಳಿಗಿದೆ ಜಗತ್ತನ್ನೇ ಬದಲಾಯಿಸೋ ಅದ್ಭುತ ಶಕ್ತಿ!

-ನಿಮ್ಮ ಮೆದುಳಿನ ಬಗ್ಗೆ ನಿಮಗೆಷ್ಟು ಗೊತ್ತು? 

-ಬ್ರೈನ್ ಅಂದ್ರೆ ಸುಮ್ನೆ ಅಲ್ಲ!  

ಶಿಲಾಯುಗದಿಂದ ಆಧುನಿಕ ಯುಗದ ವರೆಗೆ ವಿಶ್ವ ಅಚ್ಚರಿದಾಯಕ ಬದಲಾವಣೆ ಕಂಡಿದೆ. ಹೆಚ್ಚೇನಲ್ಲ; ಈಗ್ಗೆ ಒಂದು ದಶಕಗಳ ಹಿಂದೆ ಹಿಂತಿರುಗಿ ನೋಡಿದರೂ ಸಾಕು ಜಗತ್ತಿನ ಬೆಳವಣಿಗೆಯ ವೇಗ ಅಚ್ಚರಿ ಮೂಡಿಸುತ್ತೆ. ಕಲ್ಲಿಗೆ ಕಲ್ಲು ಉಜ್ಜಿ ಬೆಂಕಿ ಹೊತ್ತಿಸೋದನ್ನು ಕಲಿತ ಮನುಷ್ಯ ಆ ನಂತರದಲ್ಲಿ ನಿರಂತರವಾಗಿ ಹೊಸಾ ಸಾಧ್ಯತೆಗಳನ್ನು ಅನ್ವೇಷಿಸುತ್ತಾ ಸಾಗಿ ಬಂದಿದ್ದಾನೆ. ಹೀಗೆ ವೈಜ್ಞಾನಿಕವಾಗಿ ಮನುಷ್ಯ ರೂಪಾಂತರ ಹೊಂದುತ್ತಾ ಬಂದಿರೋದರ ಹಿಂದೆ ನಿಖರವಾದ ಕಾರಣಗಳಿದ್ದಾವೆ. ಆಧ್ಯಾತ್ಮಿಕ ಲೋಕ ಮನುಷ್ಯನ ಸೃಷ್ಟಿಯ ಬಾಬತ್ತನ್ನು ದೇವರಿಗೆ ಕೊಡುತ್ತದೆ. ಅದರ ಹಿಂದೆ ಒಂದಷ್ಟು ಪುರಾಣ ಕಥನಗಳು ಕೂಡಾ ಹರಿದಾಡುತ್ತಿವೆ. ಆದರೆ, ವೈಜ್ಞಾನಿಕ ಲೋಕ ನಿಖರವಾದ ಸಂಶೋಧನೆಗಳ ಮೂಲಕ ಮಾನವ ವಿಕಾಸದ ಬಗ್ಗೆ ಅಧ್ಯಯನ ನಡೆಸಿದೆ. ಹಾಗಾದರೆ, ಏನೆಂದರೆ ಏನೂ ಗೊತ್ತಿಲ್ಲದಿದ್ದ ಮನುಷ್ಯ ಜೀವಿ ಇದೀಗ ಎಂತೆಂಥಾ ಆವಿಷ್ಕಾರಗಳನ್ನು ಮಾಡಿ, ಮತ್ತೊಂದಷ್ಟಕ್ಕೆ ಅಣಿಗೊಂಡಿರೋದರ ಹಿಂದಿರುವ ಶಕ್ತಿ ಯಾವುದು ಅಂತೊಂದು ಪ್ರಶ್ನೆ ಮೂಡಿಕೊಳ್ಳುತ್ತೆ. ಅದಕ್ಕೆ ನಿಖರ ಉತ್ತರವಾಗಿ ಎದುರುಗೊಳ್ಳೋದು ಮಾನವನ ಮೆದುಳು!


ಮನುಷ್ಯನ ಮೆದುಳಿನ ಅಗಾಧ ಸಾಧ್ಯತೆಗಳ ಬಗ್ಗೆ ಮನುಷ್ಯರೇ ಇದುವರೆಗೆ ನಾನಾ ಕೋನಗಳಲ್ಲಿ ಸಂಶೋಧನೆಗಳನ್ನು ನಡೆಸಿದ್ದಾರೆ. ಮುಷ್ಠಿ ಗಾತ್ರದಲ್ಲಿರುವ ಮೆದುಳು ಕೇವಲ ಮನುಷ್ಯನ ದೇಹ, ಜೀವನಕ್ರಮ, ಆಲೋಚನೆಗಳನ್ನು ಮಾತ್ರವಲ್ಲದೆ, ಈ ಜಗತ್ತಿನ ಸ್ಥಿತಿಗತಿಗಳನ್ನೇ ಬದಲಿಸಿ ಬಿಡುವಷ್ಟು ಮೆದುಳೆಂಬ ಮಾಯೆ ಶಕ್ತವಾಗಿದೆ. ಬರೀ ಸಂಶೋಧನೆ, ಆವಿಷ್ಕಾರದ ವಿಚಾರದಲ್ಲಿ ಮಾತ್ರವಲ್ಲ… ಖಾಸಗಿಯಾಗಿ ನಮ್ಮ ಬದುಕನ್ನು ರೂಪಿಸಿಕೊಳ್ಳುವ ವಿಚಾರದಲ್ಲಿ ಮೆದುಳಿನ ಶಕ್ತಿ ಗಣನೀಯ. ನಿಖರವಾಗಿ ನಾವೇನಂದುಕೊಳ್ಳುತ್ತೇವೋ, ಯಾವ ಗುರಿಯನ್ನಿಟ್ಟುಕೊಂಡು ಪ್ರಾಮಾಣಿಕವಾಗಿ ಮುಂದುವರೆಯುತ್ತೇವೋ ಅದನ್ನು ಅಚ್ಚರಿದಾಯಕವೆಂಬಂತೆ ಸಾಧ್ಯವಾಗಿಸುವ ಚಮತ್ಕಾರಿ ಗುಣವೂ ಮೆದುಳಿಗಿದೆ. ಸಾಮಾನ್ಯವಾಗಿ ಯಾವಾಗಲೂ ಸಕಾರತ್ಮಕವಾಗಿಯೇ ಆಲೋಚಿಸಬೇಕೆಂದು ಅನುಭವಸ್ಥರು ಹೇಳೋದಿದೆ. ಸಕಾರಾತ್ಮಕ ಆಲೋಚನೆಗಳನ್ನು ಅದಕ್ಕನುಗುಣವಾಗಿ ಸಾಧ್ಯವಾಗಿಸಿ, ನಕಾರಾತ್ಮಕ ಆಲೋಚನೆಗೆ ಅದಕ್ಕೆ ತಕ್ಕುದಾದ ಪ್ರತಿಫಲ ಕರುಣಿಸೋ ಶಕ್ತಿಯೂ ನಮ್ಮ ಮೆದುಳಿಗಿದೆ.

ಮೆದುಳೆಂಬ ಅಚ್ಚರಿ


ಮನುಷ್ಯನ ದೇಹವನ್ನು ಒಟ್ಟಾರೆಯಾಗಿ ಹತೋಟಿಯಲ್ಲಿಟ್ಟುಕೊಳ್ಳುವ ಪ್ರಧಾನ ಅಂಗ ಮೆದುಳು. ಈ ಕಾರಣದಿಂದಲೇ ಅದನ್ನು ಆತ್ಮದ ಪ್ರಧಾನ ಕೋಣೆ ಅಂತಲೂ ಕರೆಯಲಾಗುತ್ತದೆ. ಈ ಲೋಕದಲ್ಲಿ ಸಹಸ್ರಾರು ಕೋಟಿ ಜೀವರಾಶಿ ಇದೆ. ಅದೆಲ್ಲದರಲ್ಲಿ ಮನುಷ್ಯ ಸಂಪೂರ್ಣ ಭಿನ್ನವಾಗಿರೋದಕ್ಕೆ ಮೂಲ ಕಾರಣವೇ ಮೆದುಳು. ಇದರ ರಚನೆಯಂತೂ ಅತ್ಯಂತ ಸಂಕೀರ್ಣವಾಗಿದೆ. ನಮ್ಮ ದೇಹದ ಅಷ್ಟೂ ಅಂಗಾಂಗಗಳನ್ನು, ಭಾಗಗಳನ್ನು ನಿಯಂತ್ರಿಸುವ ನರವ್ಯೂಹಕ್ಕೆ ಮೆದುಳೇ ಪವರ್ ಪಾಯಿಂಟ್ ಇದ್ದಂತೆ. ಇಂಥಾ ಮೆದುಳಿನ ಶಕ್ತಿಯಿಂದಲೇ ಬದುಕುತ್ತಾ, ನಮ್ಮದೇ ಆದ ರೀತಿಯಲ್ಲಿ ನಾವೆಲ್ಲ ಮೆರೆಯುತ್ತೇವೆ. ಒಂದು ವೇಳೆ ಮೆಲದುಳಿನ ತೆಕ್ಕೆಯಿಂದ ಸಣ್ಣದೊಂದು ನರ ಜಾರಿಕೊಂಡರೆ ಎಲ್ಲ ಆಟಗಳೂ ಅಲ್ಲಿಗೇ ಮುಕ್ತಾಯವಾಗುತ್ತವೆ. ಅಷ್ಟರ ಮಟ್ಟಿಗೆ ನಮ್ಮ ದೇಹದ ಮೇಲೆ ಮೆದುಳಿನ ಹಿಡಿತವಿದೆ.
ಸಾಮಾನ್ಯವಾಗಿ ಮನುಷ್ಯನ ದೇಹ ಕ್ವಿಂಟಾಲು ತೂಕದ ಆಸುಪಾಸಿನಲ್ಲಿರುತ್ತೆ. ಅಷ್ಟು ದೊಡ್ಡ ದೇಹವನ್ನ ಸಂಭಾಳಿಸೋಕೆ ದೇಹದಲ್ಲಿರೋದು ಪುಟ್ಟ ಮೆದುಳು ಮಾತ್ರ. ನಮ್ಮ ಮೆದುಳಿನ ತೂಕ ಹೆಚ್ಚೆಂದರೆ ೧.೩೦೦ ಗ್ರಾಂ ಇರುತ್ತದಷ್ಟೆ. ಒಟ್ಟಾರೆ ನಮ್ಮ ದೇಹದ ತೂಕಕ್ಕೆ ಹೋಲಿಸಿದರೆ ಮೆದುಳಿನ ಗಾತ್ರ ಏನೇನೂ ಅಲ್ಲ. ಆದರೆ ಅಷ್ಟು ಪುಟ್ಟ ಸೈಜಿನ ಮೆದುಳಿನಲ್ಲಿ ಸಣ್ಣದೊಂದು ತೊಂದರೆ ಕಾಣಿಸಿಕೊಂಡರೆ ಜೀವಕ್ಕೆ ಗ್ಯಾರೆಂಟಿ ಕೊಡಲು ಸಾಧ್ಯವಿಲ್ಲ. ಇಷ್ಟೊಂದು ಪುಟ್ಟ ಸೈಜಿನ ಮೆದುಳಿಗಿರೋ ಅಗಾಧ ಶಕ್ತಿಯ ಬಗ್ಗೆ ಬಹು ಕಾಲದಿಂದಲೂ ನಾನಾ ದಿಕ್ಕಿನಲ್ಲಿ ಸಂಶೋಧನೆಗಳು ನಡೆಯುತ್ತಿವೆ. ವೈದ್ಯಕೀಯ ಮತ್ತು ವೈಜ್ಞಾನಿಕ ವಲಯಕ್ಕಂತೂ ಮೆದುಳೆಂಬುದು ಸಾರ್ವಕಾಲಿಕ ಅಚ್ಚರಿ. ಅದನ್ನು ನಾನಾ ದಿಕ್ಕಿನಲ್ಲಿ ಪರೀಕ್ಷೆಗೊಡ್ಡುವ ಕಾರ್ಯ ಈ ಕ್ಷಣಕ್ಕೂ ಚಾಲ್ತಿಯಲ್ಲಿದೆ.

ಯಾಮಾರಿದ್ರೆ ಅನಾಹುತ ಗ್ಯಾರಂಟಿ


ಮೆದುಳೆಂಬುದು ಕ್ಷಮತೆಯ ದೃಷ್ಟಿಯಿಂದ ಬಲಾಢ್ಯವಾಗಿ ಕಂಡರೂ, ತುಂಬಾ ಸೂಕ್ಷ್ಮವಾದ ಅಂಗ. ಅದು ಇಡೀ ದೇಹದ ಮೇಲೆ ಅಧಿಪತ್ಯ ಸಾಧಿಸೋದು ಬರಿಗಣ್ಣಿಗೆ ಸಲೀಸಾಗಿ ಕಾಣದಂಥಾ ಸಣ್ಣ ನರವ್ಯೂಹದ ಮೂಲಕ. ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ರಕ್ತದದಲ್ಲಿ ನಿಗಧಿತ ಪ್ರಮಾಣದ ರಕ್ತ ಮೆದುಳಿಗೆ ರವಾನೆಯಾಗುತ್ತಲೇ ಇರಬೇಕು. ಇನ್ನೂ ಒಂದಷ್ಟು ಅಂಶಗಳ ಪೂರೈಕೆಯಂತೂ ನಿರಂತವಾಗಿರಬೇಕಾಗುತ್ತೆ. ಒಂದು ವೇಳೆ ಮೆದುಳಿಗೆ ರಕ್ತ ಚಲನೆಯಲ್ಲಿ ವ್ಯತ್ಯಯ ಉಂಟಾದ್ರೆ ಜೀವಕ್ಕೇ ಕುತ್ತುಂಟಾಗಬಹುದು. ಬದುಕಿದ್ದರೂ ಎದ್ದು ಓಡಾಡಲಾರದಂಥಾ, ಯಾವುದಕ್ಕೂ ಸ್ಪಂದಿಸದಂಥಾ ಸ್ಥಿತಿಗೆ ತುತ್ತಾಗುವ ಸಾಧ್ಯತೆಗಳಿದ್ದಾವೆ. ಈ ಕಾರಣದಿಂದಲೇ ಮೆದುಳಿನ ಆರೋಗ್ಯದ ಬಗ್ಗೆ ವೈದ್ಯರು ಹಲವು ಮುಂಜಾಗುರುಕತಾ ಕ್ರಮಗಳನ್ನು ಸೂಚಿಸುತ್ತಾರೆ.
ಇನ್ನುಳಿದಂತೆ ಕೇವಲ ಮೆದುಳಿನ ಭಾಗಕ್ಕೆ ಘಾಸಿಯಾಗದಂತೆ ನೋಡಿಕೊಂಡರೆ ಮೆದುಳು ಸೇಫ್ ಆಗಿರುತ್ತೆ ಅಂದುಕೊಳ್ಳುವಂತಿಲ್ಲ. ಯಾಕಂದ್ರೆ, ನಮ್ಮ ದೇಹದ ಯಾವುದೇ ಭಾಗಗಳಿಗೆ ಹಾನಿಯಾದರೂ ಮೆದುಳು ಘಾಸಿಗೊಳ್ಳುವ ಸಾಧ್ಯತೆಗಳಿದ್ದಾವೆ. ಅಯೋರ್ಟಾ ಭಾಗದಲ್ಲಿ ಹುಟ್ಟಿದ ಎರಡು ಅಪಧಮನಿಗಳು ಕುತ್ತಿಗೆಯ ಬಳಿ ಹಾದು ಹೋಗಿರುತ್ತವೆ. ಇವು ಅತ್ಯಂತ ಸೂಕ್ಷ್ಮವಾಗಿ ಕುತ್ತಿಗೆಯ ಎರಡೂ ಭಾಗಗಳ ಮೂಲಕ ತಲೆಯ ಭಾಗ ತಲುಪಿ, ಅಲ್ಲಿ ಮೆದುಳಿನ ಬುಡಕ್ಕೆ ಕೂಡಿಕೊಳ್ಳುತ್ತೆ. ಅಲ್ಲಿಯೇ ವೃತ್ತಾಕಾರವಾಗಿ ಹಬ್ಬಿಕೊಂಡು ಮೆದುಳಿಗೆ ರಕ್ತ ಪೂರೈಸುವ ಕೆಲಸ ಮಾಡುತ್ತದೆ. ಇನ್ನುಳಿದಂತೆ ತೋಳಿನ ಮೂಲಕ ಬರುವ ಎರಡು ರಕ್ತನಾಳಗಳು ಬೆನ್ನು ಹುರಿಯ ಮೂಲಕ ಅಪಧಮನಿಗಳಾಗಿ ಸಾಗಿ ಮೆದುಳನ್ನು ಸೇರಿಕೊಳ್ಳುತ್ತವೆ. ಇವುಗಳನ್ನು ಅಂತ್ಯದ ಅಪಧಮನಿಗಳೆಂದು ಕರೆಯಲಾಗುತ್ತೆ. ಒಂದು ವೇಳೆ ಇವುಗಳಿಗೆ ಡ್ಯಾಮೇಜ್ ಆದರೆ, ಬೇರ್‍ಯಾವ ಮೂದದಿಂದಲೂ ಮೆದುಳಿಗೆ ರಕ್ತ ಪೂರೈಕೆಯಾಗೋ ದಾರಿಗಳಿಲ್ಲ. ಈ ಕಾರಣದಿಂದಲೇ ಮೆದುಳು ನಿಷ್ಕ್ರಿಯಗೊಂಡು ಜೀವಂತ ಶವವಾಗೋ ಅಪಾಯವಿರುತ್ತದೆ. ಆದ್ದರಿಂದಲೇ ಮೆದುಳಿನ ವಿಚಾರದಲ್ಲಿ ಎಚ್ಚರ ತಪ್ಪಿದರೆ ಉಸಿರಿರುವಷ್ಟೂ ದಿನ ಅನುಭವಿಸಬೇಕಾಗೋ ಆಘಾತ ಖಚಿತ.

ಅದು ನಮ್ಮ ಪವರ್ ಪಾಯಿಂಟ್


ಮೆದುಳೆಂಬುದು ಮನುಷ್ಯ ದೇಹರಚನೆಯಲ್ಲಿ ಪ್ರಧಾನವಾದ ಅಂಗ. ನಮ್ಮ ಎಲ್ಲ ಬುದ್ಧಿಶಕ್ತಿ, ಆಲೋಚನಾ ಸಾಮರ್ಥ್ಯವೆಲ್ಲ ಮೆದುಳಿನ ಆಯಕಟ್ಟಿನ ಭಾಗವೊಂದರಲ್ಲಿ ನಿರ್ಧರಿತವಾಗುತ್ತೆ. ದೇಹದ ಯಾವುದೇ ಭಾಗದ ಸಂವೇದನೆಗಳು ಹಠಾತ್ತನೆ ನಿರ್ಧಾರವಾಗಿ, ವರ್ತನೆಗಳಿಗೆ ಅನುವು ಮಾಡಿ ಕೊಡೋದು ಕೂಡಾ ಮೆದುಳಿನ ಒಂದು ಭಾಗದಿಂದಲೇ. ಯಾವುದೇ ಸೂಚನೆಗಳ ಛಕ್ಕನೆ ಮೆದುಳಿಗೆ ರವಾನೆಯಾಗುತ್ತೆ. ಅಲ್ಲಿಂದಲೇ ಅದಕ್ಕೆ ಪ್ರತಿಕ್ರಿಯೆಗಳೂಊ ಕೂಡಾ ರವಾನೆಯಾಗುತ್ತವೆ. ಕ್ಷಣಾರ್ಧದಲ್ಲಿ ನಿರ್ಧಾರ ಪ್ರಕಟಿಸುವ ಸಾಮರ್ಥ್ಯ ಹಾಗೂ ಎಲ್ಲವನ್ನೂ ನೆನಪಿಟ್ಟುಕೊಳ್ಳಬಲ್ಲ ಅಗಾಧ ಪ್ರಮಾಣದ ಶೇಖರಣಾ ಘಟಕವಿರೋದೂ ಕೂಡಾ ಮೆದುಳಿನಲ್ಲಿಯೇ.
ಈ ವಿಚಾರದಲ್ಲಿ ಬೇರೆಲ್ಲ ಜೀವಿಗಳಿಗಿಂತಲೂ ಮನುಉಷ್ಯನನ್ನು ಭಿನ್ನವಾಗಿಸಿರೋದರ ಸಂಪೂರ್ಣ ಕ್ರಡಿಟ್ಟು ಮೆದುಳಿಗಲ್ಲದೆ ಮತ್ಯಾವುದಕ್ಕೂ ಸಲ್ಲಲು ಸಾಧ್ಯವಿಲ್ಲ.
ಈ ಮೆದುಳಿನ ಸೂಕ್ಷ್ಮತೆಯನ್ನು ಅಳೆಯೋದು, ವಿವರಿಸೋದು ಕಷ್ಟಸಾಧ್ಯ. ಕೆವೊಂದು ಸಂದರ್ಭದಲ್ಲಿ ಹಠಾತ್ತನೆ ಒಂದ್ಯಾವುದಕ್ಕೋ ಪ್ರತಿಕ್ರಿಯಿಸಿ ಬಿಟ್ಟಿರುತ್ತೇವೆ. ಉದಾಹರಣಗೆ ನಾವು ಡ್ರೈವ್ ಮಾಡಿಕೊಂಡು ಹೋಗುವಾಗ ಏಕಾಏಕಿ ಯಾರಾದರೂ ಅಡ್ಡ ಬಂದರೆ, ಇದ್ದಕ್ಕಿಂದ್ದಂತೆ ವಾಹನಗಳು ಹತ್ತಿರ ಸಾಗಿದರೆ ಅಪ್ರಜ್ಞಾಪೂರ್ವಕವಾಗಿ ಕಾಲು ಬ್ರೇಕ್ ಅನ್ನು ಅದುಮುತ್ತೆ. ದೊಡ್ಡ ಅನಾಹುತ ಸ್ವಲ್ಪದರಲ್ಲಿಯೇ ತಪ್ಪಿದಾಗ ನಮ್ಮನ್ನು ಕಾಪಾಡಿದ್ದು ಯಾವುದೋ ಅಗೋಚರ ಶಕ್ತಿ ಅಂತ ಖುಉದ್ದು ನಮಗೇ ಅನ್ನಿಸುತ್ತೆ. ಹಾಗೆ ತುರ್ತು ಸಂದರ್ಭಗಳಲ್ಲಿ ನಮ್ಮೊಳಗೆ ಸೂಪರ್ ಪವರ್ ಒಂದನ್ನು ರವಾನಿಸುವಂತೆ ಮಾಡುವ ಅಗಾಧ ಶಕ್ತಿಯೂ ಮೆದುಳಿನ ವರವೆಂಬುದರಲ್ಲಿ ಯಾವ ಸಂಶಯವೂ ಇಲ್ಲ. ಹಾಗಂತ ಇಂಥಾ ಅಗಾಧ ಶಕ್ತಿಯನ್ನು ಕಾಯಲು ಬಲವಾದ ರಕ್ಷಾ ಕವಚವೇನೂ ಇಲ್ಲ. ಅದರ ಸೂಕ್ಷ್ಮ ನರಗಳು ನಮ್ಮ ದೇಹದ ಆಯಕಟ್ಟಿನ ಭಾಗಗಳಲ್ಲಿ ಹಬ್ಬಿಕೊಂಡಿವೆ. ಅಲ್ಲಿಗೆ ಏಟು ಬಿದ್ದರೆ ಮೆದುಳಿನಂಥಾ ಅದ್ಭುತ ಶಕ್ತಿಯೊಂದು ಆ ಕ್ಷಣವೇ ಕಾರ್ಯ ಸ್ಥಗಿತಗೊಳಿಸುತ್ತೆ.

ಸಂಕೀರ್ಣ ರಚನೆ


ಮೆದುಳಿನದ್ದು ಸಂಕೀರ್ಣವಾದ ರಚನೆ. ಪಿಚಗುಡುವ ಮುದ್ದೆಯಂತಿರೋ ಮೆದುಳಿಗೆ ಅಂಥಾದ್ದೊಂದುಉ ಅಗಾಧ ಶಕ್ತಿ ಅದು ಹೇಗೆ ದಕ್ಕಿತೆಂಬ ಪ್ರಶ್ನೆಗೆ ಇನ್ನೂ ಉತ್ತರಗಳು ಬಾಕಿ ಇದ್ದಾವೆ. ಅತ್ಯಂತ ಮೆದು ಸ್ಥಿತಿಯಲ್ಲಿರುವ ಮೆದುಳಿನ ರಕ್ಷಣೆಗೆಂದು ತಲೆ ಬುರುಡೆ ಸೃಷ್ಟಿಯಾಗಿದೆ. ಅತ್ಯಂತ ಗಟ್ಟಿಯಾದ ಮೇಲ್ಪದರ ಹೊಂದಿರೋ ಬುರುಡೆಗೆ ಅಡಿಗಡಿಗೆ ಏಟು ಬಿದ್ದರೂ ಕೂಡಾ ಮೆದುಳು ತುಳುಕಾಡಿದಂತಾಗುತ್ತೆ. ಈ ಕಾರಣದಿಂದಲೇ ಸಣ್ಣ ಮಕ್ಕಳಿರಲಿ, ದೊಡ್ಡವರೇ ಆಗಿದ್ದರೂ ತಲೆಗೆ ಹೊಡೆಯಬಾರದೆಂಬ ಎಚ್ಚರ ಹಿರೀಕರಿಂದ ರವಾನೆಯಾಗುತ್ತಿರುತ್ತದೆ. ಅದರಾಚೆಗೂ ಆಕ್ಸಿದೆಂಟುಗಳಾದಾಗ, ಬೇರೆ ರೀತಿಯ ಅವಘಡಗಳಾದಾಗ ಮೆದುಳು ಘಾಸಿಗೊಳ್ಳೋದಿದೆ. ಒಂದು ಸಲ ಹಾಗೆ ಮೆದುಳಿಗೆ ತೀವ್ರವಾದ ಪೆಟ್ಟು ಬಿದ್ದರೆ ಯಾರೇ ಆದರೂ ಮೊದಲಿನ ಸ್ಥಿತಿಗೆ ಮರಳೋದು ಕಷ್ಟ.
ಪೋನ್ಸ್ ಪಾಗೂ ಸೆರೆಬ್ರಮ್‌ಗಳ ಮಧ್ಯೆ ಮೆದುಳಿನ ಒಂದು ಭಾಗವಿರುತ್ತೆ. ನಮ್ಮ ಎಲ್ಲ ಸಂವೇದನೆಗಳೂ ಕೂಡಾ ವೇಗವಾಗಿ ಕಾರ್ಯರೂಪಕ್ಕೆ ಬರೋದು ಆ ಭ ಆಗದಿಂದಲೇ. ಮೆಡುಲ್ಲಾ ಎಂಬ ಮೆದುಳಿನ ಭಾಗ ನಮ್ಮ ಉಸಿಕರಾಟ, ಹೃದಯ ಬಡಿತ ಸೇರಿದಂತೆ ಅನೇಕ ಸೂಕ್ಷ್ಮ ವಿಚಾರಗಳಲ್ಲಿ ಹಿಡಿತ ಹೊಂದಿದೆ. ಅದರೊಳಗಿರುವ ಸ್ಟೋರೇಜಿನ ಸಾಮರ್ಥ್ಯ ಮಾತ್ರ ವಿಜ್ಞಾನಿಗಳನ್ನೇ ದಂಗುಬಡಿಸಿದೆ. ಯಾಕಂದ್ರೆ, ಅದರ ಬಗ್ಗೆ ಇನ್ನೂ ಕೂಡಾ ನಾನಾ ದಿಕ್ಕಿನ ಸಂಶೋಧನೆಗಳು ಚಾಲ್ತಿಯಲ್ಲಿವೆ. ಯಾವುದೇ ಕಾಲಘಟ್ಟದಲ್ಲಾದರೂ ಮೆದುಳಿನಿಂದ ಉತ್ಪತ್ತಿಯಾಗುಉವ ಒಂದೇ ಒಂದು ಐಡಿಯಾ ಏನೇನೋ ಬದಲಾವಣೆಗಳನ್ನು ಸಾಧ್ಯವಾಗಿಸುತ್ತದೆ. ಈಗಂತೂ ಇಡೀ ಜಗತ್ತಿನ ವ್ಯಾಪಾರ ವಹಿವಾಟ, ಉದ್ಯಮ ವಲಯ ಇಂಥಾ ಐಡಿಯಾಗಳ ಮೇಲೆ ನಿಂತಿದೆ. ಬಹುಶಃ ಮನುಷ್ಯನ ಮೆದುಳಿಗೆ ಅಂಥಾ ಶಕ್ತಿ ಇಲ್ಲದೇ ಹೋಗಿದ್ದರೆ ಚಂದ್ರನ ಅಂಗಳಕ್ಕೆ ಹೋಗಿ ಇಳಿಯಲು ಸಾಧ್ಯವಾಗುತ್ತಿರಲಿಲ್ಲ. ಸೂರ್ಯನನ್ನೇ ಸಂಶೋಧನೆಯ ವಸ್ತುವಾಗಿಸಿಕೊಳ್ಳುವ ಛಾತಿ ಮೂಡುತ್ತಿರಲಿಲ್ಲ. ನಾನಾ ಆವಿಷ್ಕಾರಗಳಂತೂ ಸಾಧ್ಯವೇ ಇರುತ್ತಿರಲಿಲ್ಲ.

ಮೆದುಳಲ್ಲೇ ಇರುತ್ತೆ ಕೊಬ್ಬು!


ಸಾಮಾನ್ಯವಾಗಿ ದೇಹದಲ್ಲಿ ಸಂಗ್ರಹವಾಗುವ ಕೊಬ್ಬನ್ನು ಗಾಂಚಾಲಿಗೆ ಪರ್ಯಾಯವೆಂಬಂತೆ ಬಳಸುವ ಪರಿಪಾಠ ಬೆಳೆದು ಬಂದಿದೆ. ಕೊಬ್ಬು ದೇಹದಲ್ಲಿ ಮಿತಿಗಿಂತ ಹೆಚ್ಚಾದರೆ ಅದೇ ಅನೇಕ ಅನಾರೋಗ್ಯಕ್ಕೂ ಕಾರಣವಾಗೋದು ಗೊತ್ತಿರೋ ಸಂಗತಿ. ಹಾಗಂತ ಕೊಬ್ಬು ಪೂರ್ತಿ ಕಡಿಮೆಯಾದರೂ ಕೂಡಾ ಅಪಾಯ ಎದುರಾಗುತ್ತೆ. ಒಂದು ಮಟ್ಟದ ಕೊಬ್ಬಿನಂಶ ನಮ್ಮ ದೇಹಕ್ಕೆ ಅವಶ್ಯಕ. ನಿಮಗೆ ಅಚ್ಚರಿಯಾದೀತೇನೋ… ನಮ್ಮ ಮೆದುಳೆಂಬ ಶಕ್ತಿ ಕೇಂದ್ರವೇ ಕೊಬ್ಬಿನಿಂದ ಆವರಿಸಿಕೊಂಡಿದೆ. ಅದೊಂದು ರೀತಿಯಲ್ಲಿ ಕೊಬ್ಬಿನ ಮುದ್ದೆಯೂ ಹೌದು. ಯಾಕಂದ್ರೆ, ಒಟ್ಟಾರೆಯಾಗಿ ಮೆದುಳಿನ ರಚನೆ ಮತ್ತು ಅದರ ಸಮರ್ಪಕ ಕಾರ್ಯನಿರ್ವಹಣೆಗೆ ಕೊಬ್ಬಿನಂಶ ಬೇಕೇಬೇಕು.
ಈಗಾಗಲೇ ಆಗಿರುವ ಸಂಶೋಧನೆಗಳ ಆಧಾರದಲ್ಲಿ ಹೇಳೋದಾದರೆ ಒಟ್ಟಾರೆ ಮೆದುಳು ಪ್ರತಿಶತ ಅರವತ್ತರಷ್ಟು ಕೊಬ್ಬಿನಿಂದ ಮಾಡಲ್ಪಟ್ಟಿರುತ್ತದೆ. ಈಗ ಬಹುತೇಕರ ಧ್ಯಾನ ಕೊಬ್ಬು ಕರಗಿಸೋದರ ಸುತ್ತಲೇ ಕೇಂದ್ರೀಕೃತವಾಗಿದೆ. ಕೊಬ್ಬು ಹೆಚ್ಚಾದರೆ ಹೃದಯ ಸಂಬಂಧಿ ಕಾಯಿಲೆಯೂ ಸೇರಿದಂತೆ ನಾನಾ ಪಡಿಪಾಟಲು ಪಡಬೇಕಾಗುತ್ತದೆ ಎಡಂಬಂಥಾ ನಂಬಿಕೆ ಎಲ್ಲರಲ್ಲಿದೆ. ಕೆಲ ಮಂದಿ ಕೊಬ್ಬು ಕರಗಿಸಿ ಸ್ಲಿಮ್ ಆಗೋ ಭರದಲ್ಲಿ ಅಗತ್ಯವಾಗಿ ಬೇಕಿರೋ ಕೊಬ್ಬಿನಂಶಗಳನ್ನೂ ಕಳೆದುಕೊಳ್ಳುತ್ತಾರೆ. ವ್ಯಾಪಾರಿ ಬುದ್ಧಿಯ ಅವೈಜ್ಞಾನಿಕ ಪ್ರಾಡಕ್ಟುಗಳಿಂದಾಗಿ ಈಗಾಗಲೇ ಸಾಕಷ್ಟು ಮಂದಿ ಪಡಬಾರದ ಪಾಡು ಪಟ್ಟಿದ್ದಾರೆ. ಒಂದಷ್ಟು ಜೀವಗಳೇ ಮರೆಯಾಗಿವೆ. ಮೆದುಳಿಗೆ ಕೊಬ್ಬಿನಾಂಶಗಳ ಪೂರೈಕೆ ನಿಯಮಿತವಾಗಿರಬೇಕು. ಒಂದುಉ ವೇಳೆ ಅದು ಕುಂಠಿತಗೊಂಡರೆ ಮೆದುಳಿಗೆ ಪೆಟ್ಟು ಬೀಳುತ್ತೆ. ಅದರ ಫಲವಾಗಿ ನಾನಾ ಕಾಯಿಲೆಗಳು ಮುತ್ತಿಕೊಳ್ಳುತ್ತವೆ.

ಮೆದುಳು ಬೆಳೆಯೋ ಹಂತ


ಇನ್ನೂ ಮೆದುಳಿ ಬಲಿಯದವ, ಮೆದುಳಿಲ್ಲದವ… ಹೀಗೆ ಮೆದುಳೆಂಬುದು ಮೂದಲಿಕೆ, ಬೈಗುಳಗಳಿಗೂ ಬಳಕೆಯಾಗೋದಿದೆ. ಹಿಂಥಾ ಆಡುಮಾತುಇಗಳಲ್ಲಿಯೇ ಮೆದುಳಿನ ಕೆಲ ಸೂಊಕ್ಷ್ಮಗಳು ಅಡಗಿವೆ ಅನ್ನೋದು ಸತ್ಯ. ಬಾಲ್ಯಾವಸ್ಥೆಯಿಂದ ಒಂದು ಹಂತದ ವರೆಗೂ ಮೆದುಳು ಬೆಳವಣಿಗೆ ಹೊಂದುತ್ತಿರುತ್ತದೆ. ಮಗುವೊಂದು ತೊದಲು ಮಾತಾಡುತ್ತಾ, ಎಲ್ಲದಕ್ಕೂ ಪ್ರತಿಕ್ರಿಯಿಸುತ್ತಾ ಹಂತ ಹಂತವಾಗಿ ಬೆಳೆಯೋದು ಮೆದುನ ಜೊತೆ ಜೊತೆಗೇ. ಹಾಗಾದ್ರೆ, ಈ ಮೆದುಳು ಎಷ್ಟು ವರ್ಷದ ವರೆಗೂ ಬೆಳವಣಿಗೆ ಕಾಣುತ್ತೆ. ಯಾವ ಘಟ್ಟದಲ್ಲಿ ಅದರ ಬೆಳವಣಿಗೆ ಪೂರ್ಣಗೊಳ್ಳುತ್ತೆ. ಇಂಥಾ ಪ್ರಶ್ನೆಗಳಿಗೆ ವಿಜ್ಞಾನ ಜಗತ್ತಿನಲ್ಲಿ ನಿಖರವಾದ ಉತ್ತರಗಳಿದ್ದಾವೆ.
ಅದರ ಪ್ರಕಾರವಾಗಿ ಹೇಳೋದಾದರೆ, ಓರ್ವ ವ್ಯಕ್ತಿಗೆ ಇಪ್ಪತೈದು ವರ್ಷವಾಗೋವರೆಗೂ ಮೆದುಳು ಬೆಳೆಯುತ್ತಲೇ ಇರುತ್ತದೆ. ಆ ಘಟ್ಟದಲ್ಲಿ ಮೆದುಳು ಸಂಪೂರ್ಣವಾಗಿ ಮಾಗಿ ಸ್ಥಿತವಾಗುತ್ತೆ. ಮೆದುಳು ತಲೆಯ ಹಿಂಭಾಗದಿಂದ ಬೆಳವಣಿಗೆ ಹೊಂದುತ್ತಾ, ಮುಂಭಾಗಕ್ಕೆ ವ್ಯಾಪಿಸಿಕೊಳ್ಳುತ್ತವೆ. ನಿಮ್ಮ ಆಲೋಚನೆಗಳು ಮತ್ತು ನಿರ್ಧಾರಗಳನ್ನುಉ ನಿಯಂತ್ರಿಸುವ ಶಕ್ತಿ ಮುಂಭಾಗದ ಮೆದುಳಿನಲ್ಲಿರುತ್ತೆ. ಅದರ ಬೆಳವಣಿಗೆಯೊಂದಿಗೆ ಮೆದುಳಿನ ಬೆಳವಣಿಗೆ ಅಂತಿಮ ಘಟ್ಟ ತಲುಪುತ್ತೆ. ಈ ಕಾರಣದಿಂದಲೇ ಇಪ್ಪತ್ತರೊಳಗೆ ಬದುಕಿನ ಯಾವುದೇ ಮಹತ್ವದ ನಿರ್ಧಾರಗಳನ್ನು ಸ್ವತಃ ತೆಗೆದುಕೊಳ್ಳಬಾರದೆಂದು ತಿಳಿದವರು ಹೇಳುತ್ತಾರೆ. ಯಾಕಂದ್ರೆ ಮೆದುಳು ಬಲಿಯದ ಕಾಲದಲ್ಲಿ ಕೈಗೊಂಡ ನಿರ್ಧಾಛರಗಳು ಬಾಲಿಶವಾಗಿರುತ್ತವೆ. ಯಡವಟ್ಟಿನಿಂದ ಕೂಡಡಿರುವ ಸಾಧ್ಯತೆಗಳು ಹೆಚ್ಚಿರುತ್ತವೆ.

ನರ ಚಕ್ರವ್ಯೂಹ


ಮೊದಲೇ ಹೇಳಿದಂತೆ ಮೆದುಳಿಗೆ ದೇಹದ ಅಷ್ಟೂ ನರಗಳ ಸಂಪರ್ಕವಿರುತ್ತದೆ. ಎಷ್ಟು ನರಗಳು ಮೆದುಳಿನೊಂದಿಗೆ ಸಂಪರ್ಕ ಹೊಂದಿರುತ್ತವೆ? ಅವುಗಳು ಹೇಗೆಲ್ಲ ಕಾರ್ಯನಿರ್ವಹಿಸುತ್ತವೆ? ಅನ್ನೋ ಪ್ರಶ್ನೆಗಳು ಕಾಡೋದು ಸಹಜ. ಅದಕ್ಕೆ ಉತ್ತರ ಹುಡುಕುತ್ತಾ ಸಾಗಿದರೆ ಎದುರಾಗೋದು ಮೆದುಳಿನೊಂದಿಗೆ ಹೊಸೆದುಕೊಂಡಿರುವಂಥಾ ನರಗಳ ಚಕ್ರವ್ಯೂಹ. ಈ ಚಕ್ರವ್ಯೂಹವನ್ನು ಬೇಧಿಸುವ ಸಲುವಾಗಿ ವೈದ್ಯ ವಿಜ್ಞಾನಿಗಳು ವರ್ಷಗಟ್ಟಲೆ ಪ್ರಯತ್ನ ಪಟ್ಟಿದ್ದಾರೆ. ಈ ಬಗೆಗಿನ ಒಂದಷ್ಟು ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಅದು ನಿಜಕ್ಕೂ ಬೆರಗಾಗುವಂತಿದೆ. ಅದರನ್ವಯ ಹೇಳೋದಾದರೆ ಸರಿಸುಮಾರು ಎಂಬತ್ತಾರು ಬಿಲಿಯನ್ ನ್ಯೂರಾನ್ ಗಳನ್ನು ಮೆದುಳು ಒಳಗೊಂಡಿದೆ!
ಹೀಗೆ ಹಬ್ಬಿಕೊಂಡಿರುವ ಪ್ರತೀ ನರಗಳಿಗೂ ಬೇರೆ ನರಗಳೊಂದಿಗೆ ಸಂಪರ್ಕವಿರುತ್ತದೆ. ಅವು ಒಂದಕ್ಕೊಂದು ಹೊಂದಿಕೊಂಡೇ ಕಾರ್ಯನಿರ್ವಹಿಸುತ್ತದೆ. ಒಟ್ಟಾರೆ ಮಾನವ ದೇಹ ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕೆಂದರೆ, ಪ್ರತೀ ನರಗಳೂ ಕೂಡಾ ಸುಸ್ಥಿತಿಯಲ್ಲಿರಬೇಕಾಗುತ್ತದೆ. ಈ ಸಂಕೀರ್ಣ ಸ್ಥಿತಿಯ ನರಮಂಡಲವನ್ನು ಕಾಯ್ದುಕೊಳ್ಳೋದೇ ನಿಜವಾದ ಆರೋಗ್ಯದ ಗುಟ್ಟು. ಅದು ಸವಾಲೂ ಹೌದು. ಇಂಥಾ ನರಗಳು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದಂತೆಯೇ ಮಾನಸಿಕ ಆಘಾತವನ್ನೂ ತಂಣದೊಡ್ಡುತ್ತದೆ. ಇಂಥಾ ನರಮಂಡಲ ಘಾಸಿಗೊಂಡರೆ ಖಂಡಿತವಾಗಿಯೂ ಅಲ್ಝೈಮರ್ ನಂಥಾ ಗಂಭೀರ ಮಾನಸಿಕ ಯಾತನೆಗೀಡಾಗಬೇಕಾಗುತ್ತೆ.

ಅದರದ್ದು ಮಿಂಚಿನ ವೇಗ


ಮನುಷ್ಯನ ಮೆದುಳು ಕಾರ್ಯನಿರ್ವಹಿಸುವ ರೀತಿ ಮತ್ತುಉ ಅದರ ವೇಗ ನಿಜಕ್ಕೂ ಅಚ್ಚರಿ ಮೂಡಿಸುತ್ತೆ. ಒಂದ್ಯಾವುದೋ ಪರಿಮಳ ನಿಮ್ಮನ್ನು ಅರವತ್ತರ ಅಂಚಿನಲ್ಲಿದ್ದರೂ, ಐದಾರು ವರ್ಷಗಳ ಕಾಲಘಟ್ಟದ ನೆನಪಿಗೆ ಜಾರಿಸಬಲ್ಲುದು. ಅಂಥಾದ್ದೊಂದು ಅಗಾಧ ಜ್ಞಾಪಕಶಕ್ತಿ ಮೆದುಳಿನಲ್ಲಿ ಸ್ಟೋರ್ ಆಗಿರುತ್ತೆ. ಅರವತ್ತರ ಅಂಚಿನಲ್ಲಿರುವವರಿಗೆ ಒಂದು ಪರಿಮಳ, ಘಟನೆ ಬಾಲ್ಯಕ್ಕೆ ಮರಳುವಂತೆ ಮಾಡಲು ಗಂಟೆಗಟ್ಟಲೆ ಕಾಲ ತೆಗೆದುಕೊಳ್ಳೋದಿಲ್ಲ. ಅದೆಲ್ಲವೂ ಸೆಕೆಂಡುಗಳ ಲೆಕ್ಕದಲ್ಲಿ ಘಟಿಸುತ್ತವೆ. ಇದು ಹೇಗೆ ಸಾಧ್ಯವಾಗುತ್ತೆಂದರೆ, ಮೆದುಳಿನ ಮಾಹಿತಿ ವಲಯದ ಚುರುಕುತನ ಗಂಟೆಗೆ ಮುನ್ನೂರೈವತ್ತು ಕಿಲೋಮೀಟರುಗಳಿಗೂ ಅಧಿಕ ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ.
ಮೆದುಳಿಗೂ ಬೆನ್ನ ಹುರಿಯ ಭಾಗಕ್ಕೂ ನೇರ ಸಂಪರ್ಕವಿರುತ್ತೆ. ಮೆದುಳು ಇಪ್ಪತೈದು ವರ್ಷಗಳ ವರೆಗೂ ಬೆಳವಣಿಗೆಯಾದರೆ, ಬೆನ್ನ ಹುರಿ ನಾಲಕ್ಕು ವರ್ಷಕ್ಕೆಲ್ಲ ಬೆಳವಣಿಗೆ ನಿಲ್ಲಿಸಿ ಬಿಡುತ್ತೆ. ಈ ಬೆನ್ನ ಹುರಿಯಲ್ಲಿ ನರ ಅಂಗಾಂಶಗಳ ಒಂದು ಬೊಂತೆಯೇ ಇರುತ್ತದೆ. ಮೆದುಳಿನಿಂದ ನಮ್ಮ ದೇಹದ ಭಣಾಗಗಳಿಗೆ ಮಿಂಚಿನ ವೇಗದಲ್ಲಿ ಸಂದೇಶಗಳು ರವಾನೆಯಾಗೋದು ಬೆನ್ನ ಹುರಿಯ ಮೂಲಕವೇ. ಈ ಕಾರಣದಿಂದಲೇ ಸ್ಪೈನಲ್ ಕಾರ್ಡ್ ಕೂಡಾ ಮನುಷ್ಯನ ದೇಹದಲ್ಲಿ ಮೆದುಳಿನಷ್ಟೇ ಸೂಕ್ಷ್ಮ ಮತ್ತು ಪ್ರಧಾನ ಭಾಗವಾಗಿ ಪರಿಗಣಿಸಲ್ಪಟ್ಟಿದೆ. ಒಂದು ವೇಳೆ ಬೆನ್ನ ಹುರಿಯಲ್ಲಿ ಮೆದುಳಿನ ನರಗಳಿಗೆ ಘಾಸಿಯಾದರೆ ದೇಹ ನಿಶ್ಚಲವಾಗುತ್ತೆ. ಜೀವಂತ ಶವದಂತೆ ಕೇವಲ ಉಸಿರಾಟ ಮಾತ್ರ ಉಳಿಯುವಂಥಾ ದುರಂತವೂ ಸಂಭವಿಸುತ್ತೆ.

ಮೆದುಳಿನ ಬಗೆಗಿನ ಅಚ್ಚರಿಗಳು


ಮೆದುಳಿನ ರಚನೆ ಕೊಬ್ಬಿನಾಂಶಗಳಿಂದಾಗಿದೆ ಎಂಬ ವಿಚಾರ ಈಗಾಗಲೇ ಸಾಬೀತಾಗಿದೆ. ಆದರೆ ಹಾಗೆ ರಚನೆಯಾದ ಮೆದುಳಿನಲ್ಲಿ ಶೇಖಡಾ ಎಪ್ಪತೈದು ಪರ್ಸೆಂಟಿನಷ್ಟು ನೀರಿನ ಅಂಶವಿರುತ್ತದೆ. ಈ ಕಾರಣದಿಂದಲೇ ನೀರಿನ ಅಂಶ ದೇಹಕ್ಕೆ ನಿಗಧಿತ ಪ್ರಮಾಣಕ್ಕೆ ಸೇರ್ಪಡೆಗೊಳ್ಳುವುದು ಅನಿವಾರ್ಯ. ರಕ್ತ ಪರಿಚಲನೆಯಾಗದಿದ್ದದೆ ಎಷ್ಟು ಹಾನಿಯಾಗುತ್ತೋ, ನಿರ್ಜಲೀಕರಣ ಕೂಡಾ ಮೆದುಳಿಗೆ ಅಷ್ಟೇ ಪ್ರಮಾಣದಲ್ಲಿ ಆಘಾತ ತಂದೊಡ್ಡುತ್ತದೆ. ಸೋಡಿಯಂ ಮತ್ತು ಎಲೆಕ್ಟ್ರೋಲೈಟ್ ಗಳ ನಷ್ಟವಾದರೆ ಯಾವುದೇ ವ್ಯಕ್ತಿಯ ವರ್ತನೆಗಳಲ್ಲಿಯೇ ಬದಲಾವಣೆಯಾದರೂ ಅಚ್ಚರಿಯೇನಿಲ್ಲ. ಮೆದುಳು ಸಂಪೂರ್ಣ ಬೆಳವಣಿಗೆ ಹೊಂದಲು ಇಪ್ಪತೈದು ವರ್ಷ ಬೇಕಾಗುತ್ತದೆ. ಆದರೆ ಎಳವೆಯಲ್ಲಿ ಅಂದರೆ ಮಗುಉವೊಂದಕ್ಕೆ ಒಂದು ವರ್ಷವಿರುವಾಗ ಮೆದುಳಿನ ಬೆಳವಣಿಗೆ ವೇಗವಾಗಿರುತ್ತದೆ. ಆ ಹಂತದಲ್ಲಿಯೇ ಶೇಖಡಾ ಎಂಬತ್ತರಷ್ಟು ಮೆದುಳು ಬೆಳವಣಿಗೆ ಕಂಡಿರುತ್ತದೆ. ಆ ನಂತರದ ದೀರ್ಘಾವಧಿಯಲ್ಲಿ ಮೆದುಉಳಿನ ಜೀವಕೋಶಗಳ ಬಲಗೊಳ್ಳುತ್ತಾ ಸಾಗುತ್ತವೆ.
ಸಾಮಾನ್ಯವಾಗಿ ಪ್ರತಿಯೊಬ್ಬರೂ ನಒಂದಿಲ್ಲೊಮದು ಹಂತದಲ್ಲಿ ತಲೆ ನೋವಿನಿಂದ ನರಳುತ್ತಾರೆ. ಮತ್ತೆ ಕೆಲ ಮಂದಿಯನ್ನು ಸುದೀರ್ಘ ಕಾಲಾವಧಿಯಲ್ಲಿ ತಲೆ ನೋವು ಬೆಂಬಿದ್ದು ಕಾಡುತ್ತದೆ. ಹೀಗೆ ಸತ್ತೇ ಹೋಗುವಂತೆ ಭಾಸವಾಗುಉವ ತಲೆ ನೋವಿಗೆ ನಿಜವಾದ ಕಾರಣವೇನು? ಆ ನೋವು ಅದೆಲ್ಲಿಂದ ಉತ್ಪತ್ತಿಯಾಗುತ್ತೆ? ಇಂಥಾ ಪ್ರಶ್ನೆಗಳೇ ಒಮ್ಮೊಮ್ಮೆ ತಲೆ ನೋವಿನಂತೆ ಕಾಡುತ್ತೆ. ನಿಖರವಾಗಿ ಹೇಳಬೇಕಂದ್ರೆ ತಲೆನೋವಿಗೆ ಮೂಲ ಕಾರಣ ಮೆದುಳು. ಅಲ್ಲಿ ನಡೆಯೇ ಕೆಲ ರಾಸಾಯನಿಕಗಳ ಸಂರ್ಘದಿಂದ ತಲೆ ನೋವು ಉಂಟಾಗುತ್ತೆ. ಹಾಗೆ ಬಿಡುಗಡೆಯಾಗೋ ರಾಸಾಯನಿಕ ಅಂಶಗಳ ತೀವ್ರತೆಯ ಆಧಾರದಲ್ಲಿ ತಲೆನೋವಿನ ಪ್ರಮಾಣ ನಿಗಧಿಯಾಗುತ್ತೆ.
ತಲೆ ಬುರುಡೆಗೆ ಸಂಪರ್ಕ ಹೊಂದಿರುವ ಸ್ನಾಯುಗಳು, ರಕ್ತಪರಿಚಲನೆಯ ನರಗಳ ವ್ಯತ್ಯಯಗಳಿಂದಲೂ ತಲೆ ನೋವು ಬಾಧಿಸುವ ಸಾಧ್ಯತೆಗಳಿದ್ದಾವೆ. ಮೆದುಳಿನಲ್ಲಿರುವ ಸಿರಾಟೊನಿನ್ ಎಂಬ ರಾಸಾಯನಿಕ ಅಂಶ ಹೆಚ್ಚಾದಾಗ ತಲೆ ನೋವು ಬರುತ್ತೆ. ಅದು ಉಲ್ಬಣಿಸಿದಾಗ ಮೈಗ್ರೇನಿಗೂ ಕಾರಣವಾಗುತ್ತೆ. ಈ ರಾಸಾಯನಿಕ ಮಟ್ಟದ ಬದಲಾವಣೆ ಮತ್ತು ಅದರ ಪರಿಣಾಮಗಳು ಗಂಡು ಹೆಣ್ಣಿನಲ್ಲಿ ವ್ಯತ್ಯಾಸ ಕಾಣಿಸುತ್ತದೆ. ಇದರ ಪರಿಣಾಮ, ತೀವ್ರತೆ ಹೆಣ್ಣುಮಕ್ಕಳಲ್ಲೇ ಹೆಚ್ಚೆಂಬುದನ್ನು ಸಂಶೋಧನೆಯೊಂದು ಕಂಡುಕೊಂಡಿದೆ. ಮೆದುಳಿನಲ್ಲಿರೋ ನರಗಳ ಸಂಖ್ಯೆಗೂ ನಕ್ಷತ್ರ ಪುಣಜದಲ್ಲಿನ ನಕ್ಷತ್ರಗಳಿಗೂ ವ್ಯತ್ಯಾಸವೇನಿಲ್ಲ. ಎರಡನ್ನೂ ಕೂಡಾ ಎಣಿಸುವುದು ಕಷ್ಟ. ಇಂಥಾ ಸಂಕೀರ್ಣವಾದ ಮೆದುಳು ವೈದ್ಯ ವಿಜ್ಞಾನಿಗಳಿಗೆ ಈವತ್ತಿಗೂ ಸವಾಲೊಡ್ಡುತ್ತಿದೆ. ಈ ಮೆದುಳಿನ ಶಕ್ತಿಯನ್ನು ನಮ್ಮ ಏಳಿಗೆಗೆ ಬಳಸಿಕೊಳ್ಳುವತ್ತ, ಅದನ್ನು ಆರೋಗ್ಯದಿಂದಿಡುವತ್ತ ಸಕಲರೂ ಗಮನ ಹರಿಸಬೇಕಿದೆ!

Tags: #brain#humanbrain#itsmajjaspecial#wonderfacts#wondesofbrain

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
alians: ಶೀಘ್ರದಲ್ಲೇ ಭೂಮಿಗೆ ನೆಗೆಯಲಿವೆಯಾ ಏಲಿಯನ್ಸ್?

alians: ಶೀಘ್ರದಲ್ಲೇ ಭೂಮಿಗೆ ನೆಗೆಯಲಿವೆಯಾ ಏಲಿಯನ್ಸ್?

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.