-ನಡೆಯುತ್ತಿದ್ದವರು ಕುಸಿದು ಬಿದ್ದು ಸತ್ತಿದ್ದರು!
-ಅದು ಭಾರತ ಕಂಡ ಘೋರ ದುರಂತ!
೧೯೮೪ರಲ್ಲಿ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದ್ದ ವಿಷಾನಿಲ ಸೋರಿಕೆ ದುರಂತ ಇಂದಿಗೂ ಭಾರತೀಯರ ಮನಸಿಂದ ಮರೆಯಾಗಿಲ್ಲ. ಬಹುಶಃ ಇನ್ನೊಂದು ಶತಮಾನ ಕಳೆದರೂ ಕೂಡಾ ಅದನ್ನು ಮರೆಯೋದು ಕಷ್ಟವಿದೆ. ಯಾಕಂದ್ರೆ ಆ ದುರಂತ ನಡೆದು ಇದೀಗ ನಲವತ್ತು ವರ್ಷ ಕಳೆದಿದೆಯಷ್ಟೆ. ಅದರ ಏಟಿಗೆ ಸಿಕ್ಕ ತಲೆಮಾರೊಂದು ನಾನಾ ರೋಗ ರುಜಿನ, ಅಂಗಾಂಗ ವೈಫಲ್ಯದಿಂದ ಅನುಕ್ಷಣವೂ ನರಳಾಡುತ್ತಿದೆ.
ನಡೆದು ಹೋಗುತ್ತಿರುವಾಗಲೇ ಕುಸಿದು ಬಿದ್ದು ಒದ್ದಾಡಿ ಸತ್ತ ಜನ, ಅದೇ ಸಂಕಟದಿಂದ ನರಳಿ ಉಸಿರು ಚೆಲ್ಲಿದ ಪ್ರಾಣಿಗಳು… ವರ್ಷದ ಹಿಂದೆ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಪ್ರದೇಶದಲ್ಲಿ ಹಠಾತ್ತನೆ ಬಂದೆರಗಿದ ವಿಷಾನಿಲ ದುರಂತದ ಈ ದೃಷ್ಯಾವಳಿಗಳು ಮತ್ತೆ ಭೋಪಾಲ್ ದುರಂತದ ದಾರುಣ ಚಿತ್ರಗಳು ನೆನಪಾಗುವಂತೆ ಮಾಡಿವೆ. ಜಗತ್ತಿನ ನಾನಾ ದೇಶಗಳಂತೆಯೇ ಭಾರತವೂ ಕೊರೋನಾ ವೈರಸ್‌ನಿಂದಾಗಿ ಹೈರಾಣುಗೊಂಡಿದೆ. ಇನ್ನೇನು ಈ ಮಹಾಮಾರಿಯಿಂದ ಮುಕ್ತಿ ಸಿಗುತ್ತದೆಂಬ ಆಶಾವಾದ ಮೊಳೆತುಕೊಂಡಿರೋ ಘಳಿಗೆಯಲ್ಲಿಯೇ ವಿಶಾಖಪಟ್ಟಣಂನಲ್ಲಿ ನಡೆದಿರೋ ಅನಿಲ ದುರಂತ ಇಡೀ ದೇಶಕ್ಕೇ ಆಘಾತವನ್ನುಂಟು ಮಾಡಿತ್ತು. ಇದು ಎಂಭತ್ತರ ದಶಕದಲ್ಲಿ ಸಾವಿರ ಸಾವಿರ ಮಂದಿಯನ್ನು ಬಲಿ ತೆಗೆದುಕೊಂಡಿದ್ದ, ಆ ನಂತರವೂ ಆ ಭಾಗದ ಜನರನ್ನು ನಾನಾ ವೈಖಲ್ಯಗಳಿಂದ ಕಾಡುತ್ತಲೇ ಇರುವ ಭೋಪಾಲ್ ಅನಿಲ ದುರಂತದ ಮತ್ತೊಂದು ಅವತಾರದಂತೆಯೇ ಕಾಣುತ್ತಿರೋದು ಸುಳ್ಳಲ್ಲ.

ಭಾರತಕ್ಕೆ ಭಾರತವೇ ಕೊರೋನಾದಿಂದ ಪಾರಾಗಲು ಗೃಹಬಂಧನದ ಶಿಕ್ಷೆ ವಿಧಿಸಿಕೊಂಡಿದ್ದಾರಲ್ಲಾ? ಅದೆಲ್ಲವೂ ಇನ್ನು ಕೆಲವೇ ದಿನಗಳಲ್ಲಿ ಮುಗಿಯುತ್ತದೆಂಬ ಆಶಾವಾದದ ನಡುವಲ್ಲಿಯೇ ವಿಶಾಕಪಟ್ಟಣಂನಲ್ಲಿ ವಿಷಾನಿಲ ಸೋರಿಕೆಯಾಗಿದೆ. ಒಂದಷ್ಟು ಜನ, ಪ್ರಾಣಿಗಳು ದಾರುಣವಾಗಿ ಜೀವ ಬಿಟ್ಟರೆ ಸಾವಿರಾರು ಮಂದಿ ಅಸ್ವಸ್ಥರಾಗಿದ್ದಾರೆ. ಇಲ್ಲಿನ ಎಲ್‌ಜಿ ಪಾಲಿಮರ್ಸ್ ಕಾರ್ಖಾನೆಯಲ್ಲಿ ಸ್ಟೈರಿನ್ ರಾಸಾಯನಿಕ ಸೋರಿಕೆಯಾದದ್ದರಿಂದಲೇ ಇಷ್ಟೆಲ್ಲ ಅನಾಹುತಗಳು ನಡೆದಿವೆ. ಹಾಗಂತ ಈ ವಿಷಾನಿಲದ ಪರಿಣಾಮಗಳು ಒಂದಷ್ಟು ಸಾವು ಮತ್ತೊಂದಷ್ಟು ನರಳಾಟಗಳ ನಡುವೆ ತಣ್ಣಗಾಗುವ ವಾತಾವರಣ ಖಂಡಿತಾ ಇಲ್ಲ. ಅದು ಇನ್ನೊಂದಷ್ಟು ವರ್ಷಗಳ ಕಾಲ ಸುತ್ತಲ ಪ್ರದೇಶಗಳ ಜನ, ಜೀವರಾಶಿಗಳ ನಡುವೆ ಅದೆಂತೆಂಥಾ ಭೀಕರ ಪರಿಣಾಮಗಳನ್ನು ಬೀರುತ್ತದೋ ಹೇಳಲು ಬರುವುದಿಲ್ಲ.
ಅದು ಭೀಕರ ದುರಂತ

ಇಂಥಾ ಆತಂಕವೊಂದು ವಿಶಾಖಪಟ್ಟಣಂ ವಿಷಾನಿಲ ಸೋರಿಕೆಯ ಹಿನ್ನೆಲೆಯಲ್ಲಿ ಮಡುಗಟ್ಟಿಕೊಳ್ಳಲು ಕಾರಣವಾಗಿರೋದು ಭೋಪಾಲ್ ಅನಿಲ ದುರಂತ. ೧೯೮೪ರಲ್ಲಿ ನಡೆದಿದ್ದ ಈ ದುರಂರತಕ್ಕೆ ಕಾರಣವಾಗಿದ್ದದ್ದು ಯೂನಿಯನ್ ಕಾರ್ಬೈಟ್ ಕಂಪೆನಿಯಲ್ಲಿ ಮಿಥೈಲ್ ಐಸೋ ಸೈನೈಟ್ ಎಂಬ ವಿಷಾನಿಲ ಸೋರಿಕೆ. ಆ ಕಾಕೋಟಕ ವಿಷ ಅದೆಷ್ಟು ಡೇಂಜರಸ್ ಆಗಿತ್ತೆಂದರೆ, ಸೋರಿಕೆಯಾದ ಘಳಿಗೆಯಲ್ಲಿಯೇ ಮೂರು ಸಾವಿರಕ್ಕೂ ಹೆಚ್ಚು ಜನ ಮಿಸುಕಾಡಲೂ ಸಾಧ್ಯವಾಗದಂತೆ ಜೀವ ಬಿಟ್ಟಿದ್ದರು. ಆ ನಂತರ ಹತ್ತತ್ತಿರ ಹದಿನಾರು ಸಾವಿರಕ್ಕೂ ಹೆಚ್ಚು ಮಂದಿ ಜೀವ ಬಿಟ್ಟರೆಂಬ ಮಾತಿದೆ. ಆದರೆ ಈ ವಿಷಾನಿಲ ಸೇವಿಸಿ ಬದುಕುಳಿದರೂ ಕೂಡಾ ಅಂಗಾಗ ಊನಕ್ಕೀಡಾದವರ ಸಂಖ್ಯೆ ಐದು ಲಕ್ಷಕ್ಕೂ ಹೆಚ್ಚಿದೆ.
ಅದು ಮನುಷ್ಯತ್ವವಿರುವವರೆಲ್ಲರೂ ಕಣ್ಣೀರಾಗುವಂಥಾ ಮಹಾ ದುರಂತ. ಆದರೆ ಈ ನೆಲದ ಬಹುತೇಕ ಅವಿವೇಕಿ ಜನನಾಯಕರಿಗೆ ಮಾತ್ರ ಅಂಥಾ ಮನುಷ್ಯತ್ವದ ಪರಿಚಯವೂ ಇರೋದಿಲ್ಲ. ಭೋಪಾಲ್ ದುರಂತ ನಡೆದಾಗ ದೇಶವಾಸಿಗಳೆಲ್ಲ ಮಮ್ಮಲ ಮರುಗಿದ್ದರು. ಆದರೆ ಆವತ್ತಿಗೆ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದವನು ಥೇಟು ಹೇಸಿಗೆ ತಿನ್ನೋ ಕೆಲಸ ಮಾಡಿದ್ದ. ಇತ್ತ ತನ್ನದೇ ಪ್ರಜೆಗಳು ಹುಳುಗಳಂತೆ ಸತ್ತು ಬೀಳುತ್ತಿದ್ದರೆ ಮುಖ್ಯಮಂತ್ರಿ ಯುನೈಟೇಡ್ ಕಾರ್ಬೈಟ್ ಕಂಪೆನಿ ಧಣಿಗಳ ಬೂಟು ನೆಕ್ಕಲು ನಿಂತಿದ್ದ. ಅದರ ಫಲವಾಗಿಯೇ ಈ ದುರಂತಕ್ಕೆ ಕಾರಣವಾದ ಕಂಪೆನಿಯ ಸಿಇಓ ಆಗಿದ್ದ ವಾರೆನ್ ಆಂಡರ್ಸನ್‌ನನ್ನು ಸೇಫಾಗಿ ಆತನ ದೇಶಕ್ಕೆ ತಲುಪಿಸಿ ನಿರಾಳವಾಗಿದ್ದ.
ಭೋಪಾಲ್ ದುರಂತಕ್ಕೆ ಆ ಕಂಪೆನಿ ಮುಖ್ಯಸ್ಥರುಗಳ ಹೊಣೆಗೇಡಿತನವೇ ಕಾರಣವೆಂಬುದು ಮೇಲುನೋಟಕ್ಕೇ ಸಾಬೀತಾಗುವಂತಿದೆ. ಇಂಥಾ ಕಾರ್ಕೋಟಕ ವಿಷವನ್ನು ಒಡಲಲ್ಲಿಟ್ಟುಕೊಂಡ ಕಾರ್ಖಾನೆಯನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯಬೇಕಾಗುತ್ತಲೆ. ಸೋರಿಕೆಯಾಗದಂತೆ ತಡೆಯಲು ಮುಂಜಾಗ್ರತಾ ಕ್ರಮಗಳನ್ನೂ ಕೈಗೊಳ್ಳಬೇಕಾಗುತ್ತದೆ. ಆದರೆ ಯುನೈಟೇಡ್ ಕಂಪೆನಿಯಲ್ಲಿ ಮಾತ್ರ ಅನಿಲ ಸೋರಿಕೆ ಪತ್ತೆಹಚ್ಚುವ ಯಂತ್ರವನ್ನು ಕಾಟಾಚಾರಕ್ಕೆಂಬಂತೆ ನಿಲ್ಲಿಸಿಡಲಾಗಿತ್ತು. ಇಂಥಾ ಜೋಭದ್ರಗೇಡಿತನದಿಂದಲೇ ದುರಂತ ಸಂಭವಿಸಿದ್ದರೂ ಕೂಡಾ ಆ ಕಂಪೆನಿಯನ್ನು ಬಾರತದ ಕಟಕಟೆಯಲ್ಲಿ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಲಾಗಿಲ್ಲ. ಇದು ಅಂಥಾ ಬಹುರಾಷ್ಟ್ರೀಯ ಕಂಪೆನಿಗಳ ಹಣ ಮದ ಮತ್ತು ನಮ್ಮ ರಾಜಕಾರಣಿಗಳ ಕೂಳುಬಾಕತನಕ್ಕೊಂದು ಉದಾಹರಣೆಯಷ್ಟೇ.
ಆಂಧ್ರದಲ್ಲೂ ಅದೇ

ವರ್ಷದ ಹಿಂದೆ ಆಂಧ್ರದ ವಿಶಾಖಪಟ್ಟಣಂನಲ್ಲಿ ಅನಿಲ ದುರಂತ ಸಂಭವಿಸಿತ್ತು. ಮೇಲುನೋಟಕ್ಕೆ ಎಲ್‌ಜಿ ಪಾಲಿಮರ್ಸ್ ಕಂಪೆನಿ ತಪ್ಪಿತಸ್ಥ ಸ್ಥಾನದಲ್ಲಿದೆ. ಈ ಕಾರ್ಖಾನೆಯಲ್ಲಿಯೂ ಕೂಡಾ ಅವ್ಯವಸ್ಥೆಯೇ ತಾಂಡವವಾಡುತ್ತಾ ಅದೇ ದುರಂತಕ್ಕೆ ಕಾರಣವಾಗಿದೆ. ಅದು ಇನ್ನೊಂದಷ್ಟು ವರ್ಷಗಳ ಕಾಲ ಈ ಭಾಗದ ಜನರನ್ನು ನಾನಾ ಬಗೆಯಲ್ಲಿ ಕಾಡುವ ಎಲ್ಲ ಆತಂಕಗಳೂ ಜಾರಿಯಲ್ಲಿವೆ. ಇದು ಎರಡನೇ ಭೋಪಾಲ್ ದುರಂತವೆಂಬ ವಿಶ್ಲೇಷಣೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೇಳಿಬರುತ್ತಿವೆ. ಆದರೆ ಈ ಹೊತ್ತಿಗೆಲ್ಲ ಸೂತಕದ ನಡುವೆಯೇ ಡೀಲು, ದೋಖಾಬಜಿಗಳಿಗೆ ಚಾಲನೆ ಸಿಕ್ಕಿರಬಹುದು. ಇದು ಈ ದೇಶದ ದುರಂತ. ಇಲ್ಲಿ ಬಡಪಾಯಿಗಳ ಸಾವಿನಲ್ಲಿಯೂ ಕಾಸು ಗೆಬರುವ ಕೆಟ್ಟ ಮನಸ್ಥಿತಿಗಳಿದ್ದಾವೆ.
ದುರಂತದ ಮೆಲುಕು
ಇಂಥಾ ವಿಷಾನಿಲ ದುರಂತಗಳು ಆ ಕ್ಷಣಕ್ಕೆ ಘಟಿಸಿ ಮರೆಯಾಗುವಂಥವಲ್ಲ. ಅದರ ಪರಿಣಾಮ ಅನ್ನೋದು ಅದೆಷ್ಟೋ ತಲೆಮಾರುಗಳನ್ನೂ ಕಾಡುತ್ತೆ. ಅಂಗವೈಖಲ್ಯವೂ ಸೇರಿದಂತೆ ಜನರ ಬದುಕನ್ನು ಥರ ಥರದಲ್ಲಿ ಹಿಂಡಿ ಹಾಕುತ್ತೆ. ಮಧ್ಯಪ್ರದೇಶದ ಭೋಪಾಲ್ ನಗರದ ಯೂನಿಯನ್ ಕಾರ್ಬೈಡ್ ಕಂಪನಿಯ ಕಾರ್ಖಾನೆಯಲ್ಲಿ ಡಿಸೆಂಬರ್ ೩, ೧೯೮೪ರಲ್ಲಿ ಸಂಭವಿಸಿದ ಅನಿಲ ದುರಂತ ಕೂಡಾ ಅಂಥಾದ್ದೇ ಗಾಯಗಳನ್ನು ಉಳಿಸಿ ಬಿಟ್ಟಿದೆ. ಅದಾಗಿ ನಲವತ್ತು ವರ್ಷ ಕಳೆದರೂ ಕೂಡಾ ಆ ಭಾಗದ ಜನ ಇನ್ನೂ ಅದರ ಪರಿಣಾಮಗಳನ್ನು ಎದುರಿಸುತ್ತಲೇ ಇದ್ದಾರೆ. ಈ ದುರಂತದಿಂದ ಸುಮಾರು ಐದು ಲಕ್ಷ ಜನ ಥರ ಥರದ ಅಂಗವೈಖಲ್ಯದಿಂದ ಬಳಲುತ್ತಿದ್ದಾರೆ. ಇದು ಭೋಪಾಲದ ಅರ್ಧದಷ್ಟು ಜನಸಂಖ್ಯೆ ಎಂಬ ವಿಚಾರ ತಿಳಿದರೆ ಆ ಘೋರ ದುರಂತದ ಪರಿಣಾಮ ಎಂಥಾದ್ದೆಂಬುದರ ಅರಿವಾಗುತ್ತೆ. ಈ ಭಾಗದ ಬಹುತೇಕ ಹಳ್ಳಿಗಳಲ್ಲಿ ಈವತ್ತಿಗೂ ನರಳಾಟ ಕೇಳಿಸುತ್ತೆ. ಯಾರೊಬ್ಬರ ಮನೆಯಲ್ಲಿಯೂ ನರಳಿಕೆ ಇಲ್ಲ ಅನ್ನುವಂತಿಲ್ಲ. ತೀರಾ ಇತ್ತೀಚೆಗೆ ಹುಟ್ಟುತ್ತಿರೋ ಮಕ್ಕಳಲ್ಲಿಯೂ ಕೂಡಾ ವೈಖಲ್ಯ ಕಾಣಿಸಿಕೊಳ್ಳುತ್ತಿದೆ.
ಎಂದೂ ಮಾಯದ ಗಾಯ

ಭಾರತ ಒಂದಷ್ಟು ದುರಂತಗಳನ್ನು ಕಂಡಿದೆ. ಆದರೆ ಭಾರತದ ಇತಿಹಾಸ ಎಂದೂ ಮರೆಯಲಾರದ ಅನಾಹುತಗಳಲ್ಲಿ ಭೋಪಾಲ್ ಅನಿಲ ದುರಂತ ಗುರುತಿಸಿಕೊಂಡಿದೆ. ಕಾರಣವಾದ ಯೂನಿಯನ್ ಕಾರ್ಬೈಡ್ ಕಂಪನಿಯ ಮಾಜಿ ಸಿಇಒ ವಾರೆನ್ ಆಂಡರ್ಸನ್ ಕಡೆಗೂ ನಿಧನ ಹೊಂದಿದ್ದಾನೆ. ಆದರೆ ಅಂಥವನ ಬೇಜವಾಬ್ದಾರಿಯಿಂದಾದ ಈ ದುರಂತ ಸೃಷ್ಟಿಸುತ್ತಿರುವ ಸಂಕಟಗಳಿಗೆ ಮಾತ್ರ ಈ ಶತಮಾನದಲ್ಲಿ ಸಾವಿಲ್ಲ. ದುರಂತ ನಡೆದು ವರ್ಷಗಳು ಕಳೆದ ನಂತರ ಯೂನಿಯನ್ ಕಾರ್ಬೈಡ್ ಸಂಸ್ಥೆ ಸಂತ್ರಸ್ತರಿಗೆ ಒಂದಷ್ಟು ಪರಿಹಾರ ಮೊತ್ತವನ್ನು ಭಾರತ ಸರ್ಕಾರಕ್ಕೆ ನೀಡಿ ಕೇಸಿನಿಂದ ಬಚಾವು ಮಾಡುವಂತೆ ಕೋರಿತ್ತು. ಆದರೆ, ಅಂಥಾ ಕೋಟಿ ಕೋಟಿ ಪರಿಹಾರ ಬಂದರೂ ಆ ದುರಂತದ ಪರಿಣಾಮಗಳು ಮರೆಯಾಗಲು ಸಾಧ್ಯವಿಲ್ಲ.
ಎಂಭತ್ತರ ದಶಕದಲ್ಲಿ ಸಂಭವಿಸಿದ್ದ ಭೋಪಾಲ್ ಅನಿಲ ದುರಂತಕ್ಕೆ ಯೂನಿಯನ್ ಕಾರ್ಬೈಡ್ ಕಂಪನಿ ಕಾರಣವಾಗಿತ್ತು. ಅದೇನು ಅತಿಂಥ ದುರಂತವಾಗಿರಲಿಲ್ಲ. ನಲವತ್ತೆರಡು ಟನ್ನಿನಷ್ಟು ವಿಷಾನಿಲ ವಾತಾವರಣದಲ್ಲಿ ಸೇರಿಕೊಂಡಿತ್ತು. ಅದು ಕಿಲೋಮೀಟರುಗಟ್ಟಲೆ ದೂರ ಹಬ್ಬಿಕೊಂಡು ಜೀವಗಳನ್ನು ಸೆಕೆಂಡುಗಳ ಲೆಕ್ಕದಲ್ಲಿ ಹೊಸಕಿ ಹಾಕಬಲ್ಲ ಕಾರ್ಕೋಟಕ ವಿಷ. ಅದರ ಪರಿಣಾಮವಾಗಿ ಈ ಕಾರ್ಖಾನೆಯ ಸುತ್ತಲಿನ ಕೊಳಚೆ ಪ್ರದೇಶಗಳಲ್ಲಿದ್ದ ಸುಮಾರು ನಾಲಕ್ಕು ಸಾವಿರದಷ್ಟು ಮಂದಿ ಜನ ಅರೆಕ್ಷಣದಲ್ಲಿಯೇ ಸತ್ತು ಮಲಗಿದ್ದರು. ನಂತರದ ಎರಡು ದಶಕಗಗಳ ಕಾಲ ಸಾವುಗಳ ಸರಣಿ ಮುಂದುವರೆದಿತ್ತು. ಒಂದು ಅಂದಾಜಿನ ಪ್ರಕಾರ ಅಧಿಕೃತವಾಗಿ ಇಪ್ಪತ್ತು ಸಾವಿರ ಮಂದಿ ಸತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ಅಸಲೀ ಸಂಖ್ಯೆ ಲಕ್ಷ ದಾಟಿದ್ದರೆ ಅಚ್ಚರಿಯೇನಿಲ್ಲ. ಹೀಗೆ ಒಂದಷ್ಟು ಜೀವ ಬಲಕಕಿಯಾಗಿದ್ದರೂ ಅದು ಹೇಗೋ ಈ ದುರಂತ ಮರೆಯಾಗುತ್ತಿತ್ತು. ಆದರೆ, ಬದುಕಿರುವವರನ್ನೂ ಕೂಡಾ ಈ ವಿಷಾನಿಲ ಜೀವಂತ ಶವವಾಗಿಸಿ ಬಿಟ್ಟಿದೆ. ಸರಿಸುಮಾರು ಐದು ಲಕ್ಷಕ್ಕೂ ಹೆಚ್ಚು ಮಂದಿ ಶಾಶ್ವತ ಅಂಗವೈಖಲ್ಯಕ್ಕೀಡಾಗಿದ್ದಾರೆ.
ತ್ಯಾಜ್ಯ ನಾಶದ ಕಂಟಕ

ಇಂಥಾ ದುರಂತ ನಡೆದು ಈಗ ನಲವತ್ತರು ವರ್ಷ ದಾಟಿಕೊಂಡಿದೆ. ಈ ಹೊತ್ತಿನಲ್ಲಿ ಮತ್ತೊಂದು ಕಂಟಕದ ಮುನ್ಸೂಚನೆಯಿಂದ ಆ ಭಾಗದ ಜನ ಮತ್ತಷ್ಟು ಭೀತರಾಗಿದ್ದಾರೆ. ಕಳೆದ ನಲವತ್ತು ವರ್ಷಗಳ ಹಿಂದೆ ನಡೆದ ಭಯಾನಕ ಅನಿಲ ದುರಂತದ ಬಳಿಕ ಯೂನಿಯನ್ ಕಾರ್ಬೈಡ್ ಫ್ಯಾಕ್ಟರಿಯಲ್ಲಿದ್ದ ಮುನ್ನೂರು ಚಿಲ್ಲರೆ ಟನ್‌ಗಳಷ್ಟು ಅಪಾಯಕಾರಿ ತ್ಯಾಜ್ಯವನ್ನು ನಾಶಪಡಿಸಲು ಸ್ಥಳಾಂತರಿಸಲಾಗಿದೆ ಅಂತೊಂದು ಮಾಹಿತಿ ದಿನಗಳ ಹಿಂದೆ ಅಧಿಕೃತವಾಗಿ ಹೊರಬಿದ್ದಿದೆ. ಈ ಫ್ಯಾಕ್ಟರಿಯಲ್ಲಿದ್ದ ಇಂಥಾ ಅಪಾಯಕಾರಿ ತ್ಯಾಜ್ಯವನ್ನು ಸೀಲ್ಡ್ ಕಂಟೈನರ್ ಟ್ರಕ್ ಗಳಲ್ಲಿ ಬುಧವಾರ ರಾತ್ರಿ ಭೋಪಾಲ್‌ನಿಂದ ಇನ್ನೂರೈವತ್ತು ಕಿಲೋಮೀಟರ್ ದೂರದಲ್ಲಿರುವ ಧರ್ ಜಿಲ್ಲೆಯ ಪಿತಾಂಪುರ್ ಕೈಗಾರಿಕಾ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ರಾತ್ರಿ ಒಂಬತ್ತು ಗಂಟೆಯಿಂದ ಕಂಟೈನರ್ ಟ್ರಕ್‌ಗಳು ತಡೆರಹಿತವಾಗಿ ಪ್ರಯಾಣ ಬೆಳೆಸಿದ್ದಾವೆ. ಸುಮಾರು ಏಳು ಗಂಟೆಯ ಪ್ರಯಾಣಕ್ಕೆ ಗ್ರೀನ್ ಕಾರಿಡಾರ್ ವ್ಯವಸ್ಥೆ ಕಲ್ಪಿಸಲಾಗಿತ್ತು ಎಂದು ಭೋಪಾಲ್ ಅನಿಲ ದುರಂತ ಪರಿಹಾರ ಮತ್ತು ಪುನರ್ವಸತಿ ವಿಭಾಗದ ನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಈ ತ್ಯಾಜ್ಯ ನಿರ್ವಹಣೆ ಕೂಡಾ ತುಂಬಾನೇ ರಿಸ್ಕಿನ ಕೆಲಸ. ಹೆಚ್ಚೂ ಕಡಿಮೆ ನೂರು ಮಂದಿ ಅರ್ಧ ಗಂಟೆಗಳ ಪಾಳಿಯಂತೆ ಭಾನುವಾರ ಕೆಲಸ ಮಾಡಿ ಈ ತ್ಯಾಜ್ಯವನ್ನು ಟ್ರಕ್‌ಗೆ ತುಂಬಿದರು. ಈ ಕೆಲಸದಲ್ಲಿ ನಿರತರಾದ ಕಾರ್ಮಿಕರಿಗೆ ಪ್ರತೀ ಮೂವತ್ತು ನಿಮಿಷಕ್ಕೆ ಒಮ್ಮೆ ವಿಶ್ರಾಂತಿ ನೀಡಲಾಗುತ್ತಿತ್ತು. ಅವರನ್ನು ಆರೋಗ್ಯ ತಪಾಸಣೆಗೆ ಒಳಗಾಗಿಸಲಾಗಿದೆ ಎಂಬ ಮಾಹಿತಿ ಜಾಹೀರಾಗಿದೆ. ನಲವತ್ತು ವರ್ಷಗಳ ಹಿಂದೆ ಯೂನಿಯನ್ ಕಾರ್ಬೈಡ್ ರಾಸಾಯನಿಕ ಕಾರ್ಖಾನೆಯಲ್ಲಿ ಅಪಾಯಕಾರಿಯಾದ ಮಿಥೇಲ್ ಐಸೋಸೈನೆಟ್ ಅನಿಲ ಸೋರಿಕೆಯಾದ ಪರಿಣಾಮ ಐದಾರು ಸಾವಿರ ಮಂದಿ ಸಾವನ್ನಪ್ಪಿದ್ದರು. ಸಾವಿರಾರು ಮಂದಿ ದೀರ್ಘಕಾಲದ ಅನಾರೋಗ್ಯಕ್ಕೆ ಒಳಗಾದರು. ಇದನ್ನು ಜಗತ್ತಿನ ಅತೀ ಘೋರ ಕೈಗಾರಿಕಾ ದುರಂತಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಆದರೆ ಇಂಥಾ ವಿಷ ಕಾರ್ಖಾನೆಯ ತ್ಯಾಜ್ಯ ವಿಲೇವಾರಿಯಿಂದ ಇನ್ನೂ ಎಂತೆಂಥಾ ಅನಾಹುತ ನಡೆಯಲಿದೆಯೋ ಎಂಬ ಭಯ ಆ ಭಾಗದ ಜನರನ್ನು ಕಾಡಲಾರಂಭಿಸಿದೆ.
ಈ ತ್ಯಾಜ್ಯವನ್ನು ವಿಲೇವಾರಿ ಮಾಡಿಸುವ ಸಲುವಾಗಿ ಹತ್ತಾರು ವರ್ಷಗಳಿಂದ ಪ್ರತಿಭಟನೆ, ಹೋರಾಟಗಳು ನಡೆಯುತ್ತಾ ಬಂದಿವೆ. ಈ ಸಂಬಂಧವಾಗಿ ಹೂಡಲಾಗಿರುವ ದಾವೆ ಸುಪ್ರೀಂ ಅಂಗಳವನ್ನೂ ತಲುಪಿಕೊಂಡಿತ್ತು. ಸುಪ್ರೀಂ ಕೋರ್ಟ್ ನಿರ್ದೇಶನದ ಬಳಿಕವೂ ಯೂನಿಯನ್ ಕಾರ್ಬೈಡ್ ಫ್ಯಾಕ್ಟರಿಯಲ್ಲಿ ತ್ಯಾಜ್ಯವನ್ನು ವಿಲೇವಾರಿ ಮಾಡದೇ ಜನರ ಜೀವಗಳ ಜೊತೆ ಚೆಲ್ಲಾಟವಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಡಿಸೆಂಬರ್ ಮೂರರಂದು ಮಧ್ಯ ಪ್ರದೇಶದ ಹೈಕೋರ್ಟ್ ಅಧಿಕಾರಿಗಳಿಗೆ ಛೀಮಾರಿ ಹಾಕಿದೆ. ತ್ಯಾಜ್ಯ ವಿಲೇವಾರಿಗೆ ನಾಲ್ಕು ವಾರಗಳ ಗಡುವು ನೀಡಿತ್ತು. ಈ ಆದೇಶವನ್ನೂ ಪಾಲಿಸದೇ ಹೋದಲ್ಲಿ ಇದು ನ್ಯಾಯಾಂಗ ನಿಂದನೆಯಾಗುತ್ತದೆ. ಈ ಬಗ್ಗೆ ಸಂಬವಂಧಿಸಿದವರು ತಕ್ಕ ಶಿಕ್ಷೆಯನ್ನೂ ಅನುಭವಿಸಬೇಕಾಗುತ್ತದೆಂದು ಕೋರ್ಟ್ ಒತ್ತಿ ಹೇಳಿತ್ತು. ಈ ಒತ್ತಡದ ನಡುವಲ್ಲಿ ತ್ಯಾಜ್ಯ ವಿಲೇವಾರಿ ಮಾಡಲಾಗಿದೆ. ಇದರಲ್ಲಿನ್ನು ಎಂತೆಂಥಾ ಎಡವಟ್ಟುಗಳು ನಡೆದಿವೆಯೋ ಭಗವಂತನೇ ಬಲ್ಲ!
ಇಂಥಾ ತ್ಯಾಜ್ಯವನ್ನು ಎಲ್ಲಿಗೋ ಕೊಂಡೊಯ್ದು ವಿಲೇವಾರಿ ಮಾಡಲಾಗೋದಿಲ್ಲ. ಅದಕ್ಕೆ ಒಂದಷ್ಟು ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕಾಗುತ್ತದೆ. ತ್ಯಾಜ್ಯದಲ್ಲಿ ಯಾವುದೇ ಹಾನಿಕಾರಕ ಅಂಶ ಇಲ್ಲ ಎಂದು ತಿಳಿದು ಬಂದರೆ ಮೂರು ತಿಂಗಳೊಳಗೆ ಈ ತ್ಯಾಜ್ಯವನ್ನು ಸುಟ್ಟುಹಾಕಬೇಕಾಗುತ್ತದೆ. ಆರಂಭದಲ್ಲಿ ಕೆಲವು ತ್ಯಾಜ್ಯಗಳನ್ನು ಪಿತಾಂಪುರ್‌ನಲ್ಲಿ ಸುಡಲಾಗುವುತ್ತದೆ. ಬಳಿಕ ಆ ಬೂದಿಯನ್ನು ಪರಿಶೀಲಿಸಿ ಅದರಲ್ಲಿ ಏನಾದರೂ ಹಾನಿಕಾರಕ ಅಂಶವಿದೆಯಾ ಎಂದು ಪರೀಕ್ಷೆ ನಡೆಸಬೇಕಾಗುತ್ತದೆ. ಇಂಥಾ ಸುಡುವ ಪ್ರಕ್ರಿಯೆಯನ್ನೂ ಕೂಡಾ ವೈಜ್ಞಾನಿಕವಾಗಿಯೇ ಮಾಡಬೇಕಾಗುತ್ತದೆ. ಈ ವೇಳೆ ಹೊಗೆಯನ್ನು ನಾಲ್ಕು ಪದರದ ಫಿಲ್ಟರ್ ನಡೆಸಲಾಗುತ್ತದೆ. ಈ ಮೂಲಕ ವಾಯು ಮಾಲಿನ್ಯವಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಅದೆಲ್ಲವನ್ನೂ ಸರಿಯಾಗಿ ಮಾಡದಿದ್ದರೆ ಸುಟ್ಟ ಜಾಗದ ಸುತ್ತಮುತ್ತಲ ಪ್ರದೇಶದ ಜನರ ಮೇಲೆ ಪ್ರತಿಕೂಲ ಪರಿಣಾಮ ಬೀರೋದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ.

ಒಂದು ವೇಳೆ ತ್ಯಾಜ್ಯ ಸುಟ್ಟ ಬೂದಿಯಲ್ಲಿ ಹಾನಿಕಾರಕ ಅಂಶ ಪತ್ತೆಯಾದರೆ ಮತ್ತೆ ಎರಡು ಪದರದಲ್ಲಿ ಮುಚ್ಚಲಾಗುತ್ತದೆ. ಈ ಮೂಲಕ ಮಣ್ಣು ಮತ್ತು ನೀರಿನಲ್ಲಿ ಯಾವುದೇ ರೀತಿ ಸೇರದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತದೆ. ಈ ಪ್ರಕ್ರಿಯೆಯನ್ನು ಕೇಂದ್ರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳ ಮೇಲುಸ್ತುವರಿಯಲ್ಲಿ ತಜ್ಞರು ನಡೆಸುತ್ತಾರೆ. ಹತ್ತು ವರ್ಷದ ಹಿಂದೆಯೂ ಒಂದಷ್ಟು ಟನ್‌ಗಳಷ್ಟು ಅಪಾಯಕಾರಿ ತ್ಯಾಜ್ಯವನ್ನು ಪಿತಾಂಪುರ್‌ನಲ್ಲಿ ವಿಲೇವಾರಿ ಮಾಡಲಾಗಿತ್ತು. ತ್ಯಾಜ್ಯ ಭೂಮಿ ಮತ್ತು ನೀರು ಸೇರಿ ಸುತ್ತಮುತ್ತಲಿನ ಗ್ರಾಮಗಳು ಮಲಿನವಾಗಿವೆ ಎಂದು ಈ ಸಂದರ್ಭದಲ್ಲಿ ಕೆಲ ಹೋರಾಟಗಾರರು ಆರೋಪಿಸಿದ್ದರು. ಇದನ್ನು ನಿರಾಕರಿಸಿರುವ ಅಧಿಕಾರಿಗಳು ಎಲ್ಲಾ ಪರೀಕ್ಷೆಗಳನ್ನು ನಡೆಸಿಯೇ ವಿಲೇವಾರಿ ನಡೆಸಲಾಗಿತ್ತು. ಯಾವುದೇ ಚಿಂತೆ ಬೇಡ ಎಂದು ಭರವಸೆ ನೀಡಿದ್ದಾರೆ. ಅನಿಲ ದುರಂತ ಸ್ಥಳದಲ್ಲಿನ ತ್ಯಾಜ್ಯ ವಿಲೇವಾರಿ ಕಾರ್ಯವನ್ನು ವಿರೋಧಿಸಿ ಭಾನುವಾರ ಪೀತಾಂಪುರ್‌ನಲ್ಲಿ ಜನರು ಪ್ರತಿಭಟನೆ ನಡೆಸಿದ್ದಾರೆ. ಇದರ ನಡುವೆಯೂ ಅಧಿಕಾರ ಬಳಸಿ ಅಲ್ಲಿಯೇ ವಿಲೇವಾರಿ ಮಾಡಲು ಮುಂದಾಗಿದ್ದಾರೆ. ಕೊಂಚ ಯಾಮಾರಿದರೂ ಮತ್ತಷ್ಟು ಅನಾಹುತವಾಗೋದರಲ್ಲಿ ಯಾವ ಸಂದೇಹವೂ ಇಲ್ಲ!