ಇಲ್ಲಿ ಯಾವ ಸಾಧನೆಗಳೂ ಕೂಡಾ ಸಲೀಸಾಗಿ ಸಂಭವಿಸುವುದಿಲ್ಲ. ಪ್ರತೀ ಗೆಲುವಿನ ಹಿಂದೆಯೂ ನಾನಾ ಕಷ್ಟ ಕೋಟಲೆ, ಅವಮಾನ, ತರುಚು ಗಾಯಗಳಿರುತ್ತವೆ. ಅಂಥಾ ಕುರುಹುಗಳಿಲ್ಲದ ಗೆಲುವಿಗೆ ಅಸಲೀ ಸ್ವಾದ ಖಂಡಿತಾ ಇರುವುದಿಲ್ಲ. ಅಡ್ಡ ದಾರಿಯಲ್ಲಿ ದಕ್ಕಿದ ಗೆಲುವು ಅಸಲಿಗೆ ಗೆಲುವೇ ಅಲ್ಲ. ಅದರ ರೂವಾರಿಗಳು ಒಂದಷ್ಟು ಗಾವುದ ದೂರ ಆ ಪ್ರಭೆಯಲ್ಲಿ ನಡೆಯೋದೂ ಕೂಡಾ ಕಷ್ಟವಿದೆ. ತೀರಾ ಸಣ್ಣ ಪುಟ್ಟ ಹಾದಿ ಮಾತ್ರವಲ್ಲ; ಈವತ್ತಿಗೆ ವಿಶ್ವದ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆಯಾಗಿ ಗುರುತಿಸಿಕೊಂಡಿರುವ, ಭಾತರದ ಹೆಮ್ಮೆಯ ಇಸ್ರೋ ಸಾಗಿ ಬಂದ ದಾರಿಯಲ್ಲೂ ಕೂಡಾ ಅಂಥಾ ಏಳು ಬೀಳಿನ ಕಥನವಿದೆ. ಬಹುಶಃ ಈಗ ಇಸ್ರೋ ಮಾಡಿರುವ ಸಾಧನೆ, ವಿಶ್ವದ ಮುಂದುವರೆದ ರಾಷ್ಟ್ರಗಳನ್ನೇ ಬೆಚ್ಚಿ ಬೀಳಿಸಿ ಮುಂದುವರೆಯುತ್ತಿರುವ ಪರಿಯನ್ನು ಗಮನಿಸಿದವರಿಗೆ, ಅದರ ಹಿಂದಿನ ಕಥನಗಳು ಅಚ್ಚರಿ ಮೂಡಿಸದಿರೋದಿಲ್ಲ. ಆ ಕಷ್ಟಗಳ ಹಾದಿ ಸವೆಸಿ ಬಂದು ವಿಶ್ವ ಮಟ್ಟಡಲ್ಲಿ ಮನ್ನಣೆ ಗಳಿಸಿಕೊಂಡಿಕರುವ ಇಸ್ರೋದ ಹಿಂದೆ ಅನೇಕ ವಿಜ್ಞಾನಿಗಳ ಅವಿರತವಾದ ಶ್ರಮವಿದೆ. ಅದು ಯಾವುದೇ ಕ್ಷೇತ್ರದಲ್ಲಿ ಸಾಧಿಸ ಹೊರಟವರಿಗೂ ಅಕ್ಷರಶಃ ಸ್ಫೂರ್ತಿಯಂತಿದೆ.
ಹೇಳಿ ಕೇಳಿ ಭಾರತ ಒಂದು ಕಾಲಕ್ಕೆ ಬಡ ದೇಶ. ಇಂದು ಒಂದಷ್ಟು ಸುಧಾರಿಸಿ ನಿಂತಿರುವ ಈ ದೇಶದ ಅಭಿವೃದ್ಧಿಯ ಹಿಂದೆ ದಶಕಗಳ ಹಿಂದಿನ ಶ್ರಮವಿದೆ. ಬ್ರಿಟೀಷರ ಸಂಕೋಲೆಗಳಿಂದ ಬಿಡುಗಡೆಗೊಂಡು, ಇದಕ್ಕೊಂದು ದೇಶದ ರೂಪುರೇಷೆ ಕೊಡೋದೇ ಆ ಕಾಲಕ್ಕೆ ಸವಾಲಿನ ಸಂಗತಿಯಾಗಿತ್ತು. ಬಡತನ ಆಹಾರ ಸಮಸ್ಯೆಯೇ ಹಾಸಿ ಹೊದೆಯುವಷ್ಟಿತ್ತು. ಹೀಗೆ ದೇಶವಾಸಿಗಳು ಸಂಕಟ ಪಡುತ್ತಿದ್ದ ದಿನಗಳಲ್ಲಿಯೇ ಆಕಾಶದತ್ತ ಕೈ ಚಾಚಿ ನಿಂತ ಕನಸುಗಣ್ಣಿನ ಒಂದಷ್ಟು ವಿಜ್ಞಾನಿಗಳ ಆಸೆಯಾಗಿದ್ದದ್ದು ಇಸ್ರೋ ಸ್ಥಾಪನೆ. ಅವಿರತ ಪ್ರಯತ್ನಗಳ ನಂತರ ೧೯೬೯ರಲ್ಲಿ ಇಸ್ರೋ ಸ್ಥಾಪನೆಯಾಗಿತ್ತು. ಆ ನಂತರ ವಿಶ್ವದ ಕಣ್ಣಿಗೆ ನಗೆ ಪಾಟಲಿನಂತೆ ಕಾಣಿಸುವ ಒಂದಷ್ಟು ದೂರವನ್ನು ಇಸ್ರೋ ಪ್ರಯಾಸದಿಂದಲೇ ಕ್ರಮಿಸಿತ್ತು. ಇಂಥಾ ಪ್ರತಿಷ್ಠಿತ ಸಂಸ್ಥೆಯ ಕೇಂದ್ರ ಕಚೇರಿ ಬೆಂಗಳೂರಿನಲ್ಲಿದೆ ಅನ್ನೋದೇ ನಮ್ಮೆಲ್ಲರ ಪಾಲಿಗೆ ಹೆಮ್ಮೆಯ ಸಂಗತಿ.
ಸೈಕಲ್ ಸಾಹಸ!
ಈವತ್ತಿಗೆ ಇಸ್ರೋ ಅದೆಂಥಾ ಕಮಾಲ್ ಸೃಷ್ಟಿಸಬಹುದೆಂದು ವಿಶ್ವಾದ್ಯಂತ ಕಾತರದ ಕಣ್ಣಿಟ್ಟು ಕಾಯುವಂಥಾ ವಾತಾವರಣವಿದೆ. ಒಂದು ರಾಕೆಟ್ ಉಡ್ಡಯನ ಮಾಡೋದಕ್ಕೆ ಇಂದು ಸರಿಕಟ್ಟಾದ ಅತ್ಯಾಧುನಿಕ ಸೌಕರ್ಯಗಳಿದ್ದಾವೆ. ತಾಂತ್ರಿಕತೆಯ ವಿಚಾರದಲ್ಲಂತೂ ವಿಶ್ವದ ಯಾವ ಬಾಹ್ಯಾಕಾಶ ಯಾನ ಸಂಸ್ಥೆಗಳೂ ಕೂಡಾ ಇಸ್ರೋವನ್ನು ಸರಿಗಟ್ಟಲು ಸಾಧ್ಯವಿಲ್ಲ. ಇಂಥಾ ಇಸ್ರೋ ಬಲುಉ ಕಷ್ಟ ಪಟ್ಟು ತಯಾರಿಸಿದ ಮೊದಲ ರಾಕೆಟ್ ಉಡಾವಣೆಯ ಸಂದರ್ಭದಲ್ಲಿ ಅದನ್ನು ಸಾಗಿಸೋದಕ್ಕೊಂದು ವ್ಯವಸ್ಥೆಯೂ ಇರಲಿಲ್ಲ ಎಂದರೆ ಅಚ್ಚರಿಯಾಗುತ್ತೆ. ೧೯೬೦ರಲ್ಲಿಯೇ ರಾಕೆಟ್ ತಯಾರಿಕೆಗೆ ಭಾರತ ಸರ್ಕಾರದ ಕಡೆಯಿಂದ ಅನುಮತಿ ಸಿಕ್ಕಿತ್ತು. ಆದರೆ ಅದಕ್ಕೆ ಬೇಕಾದಂಥತಾ ಯಾವ ಸವಲತ್ತುಗಳೂ ಇರಲಿಲ್ಲ. ಏನೋ ಮತ್ವದ್ದನ್ನು ಸಾಧಿಸುವ ಹಂಬಲ, ಆತ್ಮ ವಿಶ್ವಾಸ ಹೊಂದಿದ್ದ ಆಗಿನ ಯುವ ವಿಜ್ಞಾನಿಗಳಿಗೆ ಯಾವ ಕೊರತೆಗಳೂ ದೊಡ್ಡವೆನಿಸಲಿಲ್ಲ. ದೇಶದ ನಾನಾ ಭಾಗಗಳ ಯುವ ವಿಜ್ಞಾನಿಗಳು ಕೇರಳದ ತಿರುವನಂತಪುರಂನಲ್ಲಿ ಬೀಡು ಬಿಟ್ಟಿದ್ದರು. ಅಲ್ಲಿನ ಕೆಲ ಕೊಟ್ಟಿಗೆಗಳಲ್ಲಿಯೇ ರಾಕೆಟ್ ತಯಾರಿಸುವ ಕಾರ್ಯಕ್ಕೆ ಚಾಲನೆ ಸಿಕ್ಕಿತ್ತು.
ಹೀಗೆ ವರ್ಷಗಟ್ಟಲೆ ಶ್ರಮ ಪಟ್ಟ ವಿಜ್ಞಾನಿಗಳು ರಾಕೆಟ್ ಅನ್ನು ಕಡೆಗೂಊ ತಯಾರಿಸಿದ್ದರು. ಈ ಹಾದಿಯಲ್ಲಿ ಅವರು ಪಟ್ಟಿದ್ದ ಕಷ್ಟಗಳು ಒಂದೆರಡಲ್ಲ. ಹೀಗೆ ಶ್ರಮ ವಹಿಸಿ ರಾಕೆಟ್ ಸಿದ್ಧ ಪಡಿಸಿದರೂಊ ಕೂಡಾ ಅದನ್ನು ಉಡಾವಣಾ ಸ್ಥಥಳಕ್ಕೆ ಕೊಂಡೊಯ್ಯುವುದೇ ದೊಡ್ಡ ಸವಾಲಾಗಿತ್ತು. ಯಾಕೆಂದರೆ ಆ ಹೊತ್ತಿಗೆಲ್ಲ ಬಡತನದ ಬೇಗೆಯಲ್ಲಿ ಬೇಯುತ್ತಿದ್ದ ಭಾರತದ ಆಡಳಿತ ವ್ಯವಸ್ಥೆ ರಾಕೆಟ್ ಸಾಗಾಣೆಗೆ ಬೇಕಾದ ವ್ಯವಸ್ಥೆ ಮಾಡುವಂಥಾ ಕಸುವು ಹೊಂದಿರಲಿಲ್ಲ. ವಿಜನ್ಞಾನಿಗಳು ಅದರಿಂದ ದೃತಿಗೆಡಲಿಲ್ಲ. ಎತ್ತಿನ ಗಾಡಿ ಮತ್ತು ಸೈಕಲ್ಲುಗಳಲ್ಲಿಯೇ ನಿಧಾನವಾಗಿ ರಾಕೆಟ್ಟಿನ ಬಿಡಿ ಭಾಗಗಳನ್ನು ಉಡಾವಣಾ ಸ್ಥಳಕ್ಕೆ ಕೊಂಡೊಯ್ಯಲಾಗಿತ್ತು. ಇದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಆರಂಭಿಕ ಯಶೋಗಾಥೆಯಾಗಿ ಮಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಹಾಗೆ ಶುರುವಾದ ಈ ಯಾನ ಚಂದ್ರನನ್ನು ಮುಟ್ಟಿ, ಸೂರ್ಯನ ಮೇಲೆ ಕಣ್ಣಿಟ್ಟು ಪಹರೆ ಕಾಯುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದೊಂದು ಅಚ್ಚರಿ!
ನಮಗೆಲ್ಲ ಏನುಪಯೋಗ?
ಇಂಥಾ ಉಪಗ್ರಹ ಉಡಾಯಿಸೋದು, ಚಂದ್ರನ ಮೇಲೆ ಹೋಗೋದು, ಯಾವುದೋ ಉಪಗ್ರಹವನ್ನ ತೇಲಿ ಬಿಡೋದರಿಂದ ನಮಗೆಲ್ಲ ಏನುಪಯೋಗವಿದೆ? ಅದೆಲ್ಲ ವೇಸ್ಟು ಎಂಬಂಥಾ ಮನಃಸ್ಥಿತಿ ಹೊಂದಿರುವವರೂ ನಮ್ಮ ನಡುವಿದ್ದಾರೆ. ಹಾಗಾದರೆ, ಇಂಥಾ ಪ್ರಯತ್ನಗಳಿಂದಾಗೋ ಉಪಯೋಗವೇನುಉ ಅಂತತ ಹುಡುಕ ಹೊರಟರೆ ಅಚ್ಚರಿಯ ವಿಚಾರಗಳು ದಂಡಿ ದಂಡಿಯಾಗಿ ಎದುರುಗೊಳ್ಳುತ್ತವೆ. ಮಾನವ ನಿರ್ಮಿತ ಕೃತಕ ಉಪಗ್ರಹಗಳು ಮಾನವನ ಪ್ರಗತಿಯಲ್ಲಿ ಅತಿಮುಖ್ಯ ಕೊಡುಗೆಗಳನ್ನು ನೀಡಿವೆ. ಮಾನವನ ದಿನನಿತ್ಯದ ಭಾಗವಾಗಿವೆ. ಈ ನಿಟ್ಟಿನಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋ ಕೂಡ ತನ್ನ ಸುಮಾರು ಇತಿಹಾಸದಲ್ಲಿ ಅನೇಕ ಉಪಗ್ರಹಗಳನ್ನು ತಯಾರಿಸಿ ಉಡಾವಣೆ ಮಾಡಿದೆ. ಇಸ್ರೋದ ಅಂಗ ಸಂಸ್ಥೆಯಾದ ಯು. ಆರ್. ರಾವ್ ಉಪಗ್ರಹ ಕೇಂದ್ರವು ತಯಾರಿಸಿ ಉಡಾವಣೆ ಮಾಡಿದ ವಿವಿಧ ಉಪಗ್ರಹಗಳ ಉಪಯೋಗಗಳು, ಉಪಗ್ರಹ ತಂತ್ರಜ್ಞಾನದಲ್ಲಿ ಆದ ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋದಂತೆ ವೈಜ್ಞಾನಿಕ ಲೋಕದ ವಿಶ್ವ ರೂಊಪ ದರ್ಶನವಾಗುತ್ತದೆ!
ಇಂಥಾ ಉಪಗ್ರಹಗಳೇ ನಮ್ಮ ಬದುಕನ್ನು ಅತ್ಯಂತ ಸಹ್ಯವಾಗಿಸುತ್ತಾ ಸಾಗಿವೆ. ಈಗ ನಾವು ಆಧುನಿಕತೆಯತ್ತ ಮುಖ ಮಾಡಿ ನಿಂತಿರೋದರ ಹಿಒಂದೆಯೇ ಇಸ್ರೋದ ಋಉಣವಿದೆ. ನಮಗೆಲ್ಲಾ ತಿಳಿದಿರುವಂತೆ ಕೃತಕ ಉಪಗ್ರಹಗಳು ಮಾನವ ನಿರ್ಮಿತ ಆಕಾಶಕಾಯಗಳು, ಇವು ಭೂಮಿ ಅಥವಾ ಬೇರೆ ಗ್ರಹಗಳನ್ನು ಸುತ್ತುತ್ತಿರುತ್ತವೆ. ಅವುಗಳ ಉಪಯೋಗಕ್ಕೆ ತಕ್ಕಂತೆ ಉಪಗ್ರಹಗಳನ್ನು ವಿವಿಧ ಕಕ್ಷೆಗೆ ಹಾರಿಸಲಾಗುತ್ತದೆ. ವಿಶ್ವದಾದ್ಯಂತ ಅನೇಕ ಬಾಹ್ಯಾಕಾಶ ಸಂಸ್ಥೆಗಳು ವಿವಿಧ ರೀತಿಯ ಉಪಗ್ರಹಗಳನ್ನು ಉಡಾಯಿಸಿವೆ. ಭಾರತದ ಇಸ್ರೋ ಸಂಸ್ಥೆಯೂ ಕೂಡ ಅನೇಕ ಉಪಗ್ರಹಗಳನ್ನು ಉಡಾಯಿಸಿದೆ. ಭಾರತೀಯ ಬಾಹ್ಯಾಕಾಶ ವಿಜ್ಞಾನದ ಪಿತಾಮಹ ಎಂದೇ ಹೆಸರಾದ ಡಾ.ವಿಕ್ರಮ್ ಸಾರಾಭಾಯಿ ಅವರು ಹೇಳಿದಂತೆ ಭಾರತದ ಸಮಗ್ರ ಅಭಿವೃದ್ಧಿಗಾಗಿ ಬಾಹ್ಯಾಕಾಶ ವಿಜ್ಞಾನ ಹಾಗೂ ತಂತ್ರಜ್ಞಾನದ ಉಪಯೋಗ ಮತ್ತು ಬೆಳವಣಿಗೆಯನ್ನು ಉತ್ತೇಜಿಸಿವುದು ಎಲ್ಲ
ಆವಿಷ್ಕಾರಗಳ ಪ್ರಧಾನ ಉದ್ದೇಶ.
ಇಸ್ರೊ ಅನೇಕ ಅಂಗ ಸಂಸ್ಥೆಗಳನ್ನು ಹೊಂದಿದೆ. ಅದರಲ್ಲಿ ಯು ಆರ್ ರಾವ್ ಉಪಗ್ರಹ ಕೇಂದ್ರ ಕೂಡಾ ಪ್ರಧಾನವಾಗಿ ಸೇರಿಕೊಂಡಿದೆ. ಈ ಸಂಸ್ಥೆ ಈವರೆಗೂ ಅನೇಕ ಉಪಗ್ರಹಗಳನ್ನು ಹಾರಿಸಿದೆ. ಉಪಗ್ರಹ ತಂತ್ರಜ್ಞಾನದಲ್ಲಿ ಹಾಗೂ ನಿರ್ಮಾಣದಲ್ಲಿ ಅನೇಕ ಮೈಲಿಗಲ್ಲುಗಳನ್ನು ದಾಟಿ ಇದುವರೆಗೂ ನೂರಕ್ಕೂ ಹೆಚ್ಚು ಉಪಗ್ರಹಗಳನ್ನು ಯಶಸ್ವಿಯಾಗಿ ಉಡ್ಡಯನ ಮಾಡಿದೆ. ಉಪಗ್ರಹಗಳ ಉಪಯೋಗಕ್ಕೆ ತಕ್ಕಂತೆ ಅವುಗಳನ್ನು ಈ ಕೆಳಗಿನಂತೆ ವಿಂಗಡಿಸಬಹುದು. ದೂರಸಂಪರ್ಕ, ದೂರಸಂವೇದಿ, ನ್ಯಾವಿಗೇಷನ್, ಅಂತರಗ್ರಹ ಯೋಜನೆಗಳು, ವೈಜ್ಞಾನಿಕ ಸಂಶೋಧನ ಉಪಗ್ರಹಗಳು… ಇವೆಲ್ಲವೂ ನಮ್ಮ ದೇಶದ ಅಭಿವೃದ್ಧಿಗೆ ಪೂರಕವಾಗಿವೆ.
ನಮಗೇ ಗೊತ್ತಿಲ್ಲದಂತೆ ನಾವೆಲ್ಲ ಇಂಥಾ ಉಪಗ್ರಹಗಳ ಉಪಕಾರದ ಋಣದಲ್ಲಿದ್ದೇವೆ. ದೂರಸಂಪರ್ಕ ಉಪಗ್ರಹಗಳು ದೇಶಕ್ಕೆ ಉಪಗ್ರಹ ಆಧಾರಿತ ಅನೇಕ ಸೇವೆಗಳನ್ನು ಒದಗಿಸುತ್ತವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ; ದೂರಸಂಪರ್ಕ, ದೂರದರ್ಶನ, ದೂರಶಿಕ್ಷಣ, ದೂರ ವೈದ್ಯಕೀಯ, ರೇಡಿಯೋ ಪ್ರಸಾರ, ಹವಾಮಾನ ಮುನ್ಸೂಚನೆ ಹಾಗು ವಿಪತ್ತಿನ ಎಚ್ಚರಿಕೆ ಮುಂತಾದ ಸೇವೆಗಳನ್ನು ಒದಗಿಸುತ್ತವೆ. ಈ ಸೇವೆಗಳನ್ನು ಒದಗಿಸಲು ಬಾಹ್ಯಾಕಾಶ ವ್ಯವಸ್ಥೆ ಎರಡು ವಿಭಾಗಗಳನ್ನು ಹೊಂದಿದೆ. ಬಾಹ್ಯಾಕಾಶ ವಿಭಾಗ ಮತ್ತು ಭೂಮಿಯ ಮೇಲೆ ಇರುವ ಭೂನಿಲ್ದಾಣ ವಿಭಾಗವೆಂದು ಅವುಗಳನ್ನು ವಿಂಗಡಿಸಲಾಗಿದೆ. ಬಾಹ್ಯಾಕಾಶ ವಿಭಾಗ ವಿವಿಧ ಕಕ್ಷೀಯ ಸ್ಥಾನಗಳಲ್ಲಿ ಉಪಗ್ರಹಗಳನ್ನು ಒಳಗೊಂಡಿದೆ. ಈ ನಿಟ್ಟಿನಲ್ಲಿ ಇಸ್ರೋ ಸಂಸ್ಥೆಏಪ್ರಿಲ್ ೧೯೮೨ ರಲ್ಲಿ ತನ್ನ ಮೊದಲ ದೂರಸಂಪರ್ಕ ಉಪಗ್ರಹ ಇನ್ಸಾಟ್ ೧೦ ಉಪಗ್ರಹವನ್ನು ಭೂಸ್ಥಿರ ಕಕ್ಷೆಗೆ ಹಾರಿಸಲಾಯಿತು, ಈವರೆಗೆ ಸುಮಾರು ನಲವತೈದು ಉಪಗ್ರಹಗಳನ್ನು ದೂರಸಂಪರ್ಕ ಉದ್ದೇಶಕ್ಕಾಗಿ ಉಡಾವಣೆ ಮಾಡಲಾಗಿದೆ. ಅವೆಲ್ಲವೂ ಯಶ ಕಂಡಿವೆ.
ಭೂ ವೀಕ್ಷಣೆ
ಭೂಮಿಯ ಮೇಲೆ ಸದಾ ಕಣ್ಣಿಡುತ್ತಾ, ಆಡಳಿತಾತ್ಮಕ ವಿಚಾರದಲ್ಲಿಯೂ ಉಪಗ್ರಹ ಉಡಾವಣೆ ಸಹಕಾರಿಯಾಗಿದೆ. ಭೂಮಿಯ ವೀಕ್ಷಣಾ ಉಪಗ್ರಹಗಳ ಮುಖ್ಯ ಉದ್ದೇಶ ಭೂಮಿಯ ಬಗ್ಗೆ ಮಾಹಿತಿ ಸಂಗ್ರಹಿಸುವುದು ಭೂ ವೀಕ್ಷಣಾ ಉಪಗ್ರಹಗಳ ಅವಶ್ಯಕತೆ ಪ್ರಾಥಮಿಕವಾಗಿ ಭೂಪ್ರದೇಶಗಳಲ್ಲಿರುತ್ತದೆ. ಅವುಗಳ ಉದ್ದೇಶವನ್ನು ಈ ಕೆಳಗಿನಂತೆ ಪಟ್ಟಿ ಮಾಡಬಹುದು. ಮೊದಲ ದೂರಸಂವೇದಿ ಉಪಗ್ರಹವಾದ ಭಾಸ್ಕರ-೧ ಅನ್ನು ಜೂನ್ ೧೯೭೯ ರಲ್ಲಿ ಉಡಾವಣೆ ಮಾಡಲಾಯಿತು. ಕಾರ್ಟೋಗ್ರಫಿ, ಸಮುದ್ರಶಾಸ್ತ್ರ, ಮಾಪನಶಾಸ್ತ್ರ, ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಮತ್ತು ಬಾಹ್ಯಾಕಾಶ ವಿಜ್ಞಾನ ಅಧ್ಯಯನ , ಗ್ರಾಮೀಣಾಭಿವೃದ್ಧಿ ಮತ್ತು ನಗರ ನಿರ್ವಹಣೆ, ಅರಣ್ಯ ಸಂಪನ್ಮೂಲ ಮತ್ತು ಜೈವಿಕ ಸಂಪನ್ಮೂಲಗಳ ರಕ್ಷಣೆ, ಹವಾಮಾನ ಮೇಲ್ವಿಚಾರಣೆ ಮತ್ತು ಮುನ್ಸೂಚನೆ, ನದಿ ದಂಡೆಗಳ ಸವೆತ ಮತ್ತು ನೀರಿನ ಲಭ್ಯತೆಯ ನಕ್ಷೆ, ಜೈವಿಕ ವೈವಿಧ್ಯತೆ ಮತ್ತು ವನ್ಯಜೀವಿಗಳ ಮೇಲೆ ಹವಾಮಾನ ಪ್ರಭಾವ…
ಅವುಗಳ ವಲಸೆಯ ಮಾದರಿ, ಪ್ರವಾಹಗಳು, ಭೂಕಂಪಗಳು, ಮೇಘ ಸ್ಫೋಟಗಳು, ಹಿಮನದಿ ಹಿಮಪಾತಗಳಂತಹ ನೈಸರ್ಗಿಕ ವಿಕೋಪಗಳ ಮೇಲ್ವಿಚಾರಣೆ ಮತ್ತು ಮುನ್ಸೂಚನೆ ರೇಲ್ವೆ ಹಳಿಗಳು, ರಸ್ತೆಗಳು, ಮೇತುವೆಗಳು ಮತ್ತು ಸೇತುವೆಗಳು ಇತ್ಯಾದಿಗಳಿಗಾಗಿ ಪಟ್ಟಣ ನಗರಗಳಲ್ಲಿ ಯೋಜನೆ, ಬೆಳೆ ಅಂದಾಜು, ರೋಗ ಪತ್ತೆ ಮತ್ತು ನಷ್ಟದ ಅಂದಾಜು, ಮೀನುಗಾರಿಕೆಗಾಗಿ ಮೀನಿನ ಇರುವಿಕೆಯ ಮತ್ತು ಸಾಂದ್ರತೆಯ ಗುರಉತಿಸುವಿಕೆ ಖನಿಜಗಳ ಪತ್ತೆ, ಅವುಗಳ ನಕ್ಷೆ ಮತ್ತು ಉಸ್ತುವಾರಿ ಮುಂತಾದವುಗಳಿಗೆ ಇಂದಿಗೂ ಆಡಳಿತಾತ್ಮಕ ವಿಭಾಗ ಸಲೀಸಾಗಿರೋದರ ಹಿಂದೆ ಉಪಗ್ರಹಗಳಿದ್ದಾವೆ.
ನ್ಯಾವಿಗೇಷನ್ ಕ್ರಾಂತಿ
ಇಂದು ನಾವು ಫಟಕ್ಕನೆ ಎಲ್ಲೊಂದಲೂ ಲ್ಯಾಂಡ್ ಮಾರ್ಕ್ ಲೊಕೇಷನ್ನುಗಳನ್ನು ಕಳೆಸಿ, ರೂಟ್ ಮ್ಯಾಪ್ ಹಾಕಿಕೊಂಡು ಊರು ತುಂಬಾ ಅಡ್ಡಾಡುತ್ತೇವೆ. ಇದು ಸಾಧ್ಯವಾಗಿದ್ದರ ಹಿಂದೆ ಅದೆಷ್ಟೋ ವಿಜ್ಞಾನಿಗಳುಉ ಮತ್ತು ಇಸ್ರೋದ ಶ್ರಮವಿದೆ. ಉಪಗ್ರಹ ಆಧಾರಿತ ನ್ಯಾವಿಗೇಶನ್ ಸಿಸ್ಟಮ್ ಪ್ರಪಂಚದಾದ್ಯಂತದ ಬಳಕೆದಾರರಿಗೆ ಸ್ಥಾನನಿರ್ಧಾರ ಸ್ಥಾನೀಕರಣ, ಸಂಚಾರ, ಸಮಯ ಸೇವೆಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿದೆ. ಭಾರತವೂ ಸಹ ತನ್ನ ಎರಡು ಪ್ರಮುಖ ಯೋಜನೆಗಳೊಂದಿಗೆ ಉಪಗ್ರಹ ನ್ಯಾವಿಗೇಷನ್ ವಲಯಕ್ಕೆ ಪ್ರವೇಶಿಸಿದೆ. ಭಾರತೀಯ ಪ್ರಾದೇಶಿಕ ನ್ಯಾವಿಗೇಷನ್ ಉಪಗ್ರಹ ವ್ಯವಸ್ಥೆ ಜಿಪಿಎಸ್‌ಗಾಗಿ ಬಾಹ್ಯಾಕಾಶ, ಆಧಾರಿತ ಯೋಜನೆಯಾಗಿದೆ. ಕಟ್ಟುನಿಟ್ಟಾದ ನಾಗರಿಕ ವಿಮಾನಯಾನ ಅಗತ್ಯತೆಗಳನ್ನು ಪೂರೈಸಲು ಇಸ್ರೋ ಮತ್ತು ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಜಂಟಿಯಾಗಿ ಅಭಿವೃದ್ಧಿಪಡಿಸಿದ ಯೋಜನೆ. ಇದರಿಂದಾಗುತ್ತಿರೋ ಪ್ರಯೋಜನಗಳು ಸಾಕಷ್ಟಿವೆ.
ಇಷ್ಟಕ್ಕೇ ನಿಲ್ಲದೆ ಇಡೀ ವಿಶ್ವವನ್ನೇ ಹಿಂದಿಕ್ಕುವಂಥಾ ಆವಿಷ್ಕಾರಗಳಲ್ಲಿಯೂ ಇಸ್ರೋ ನಿರತವಾಗಿದೆ. ಬಳಕೆದಾರರಿಗೆ ಪೊಸಿಷನಿಂಗ್, ನ್ಯಾವಿಗೇಷನ್ ಮತ್ತು ಟೈಮ್ ಸೇವೆಗಳನ್ನು ಒದಗಿಸುವ ಭಾರತದ ಸ್ವದೇಶಿ ನಿರ್ಮಿತ ಪ್ರಾದೇಶಿಕ ನ್ಯಾವಿಗೇಷನ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಇಸ್ರೋ ವಿಜ್ಞಾನಿಗಳು ಮಗ್ನರಾಗಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮತ್ತು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಗಗನ್ ಯೋಜನೆಯನ್ನು ಭಾರತೀಯ ವಾಯುಪ್ರದೇಶಕ್ಕಾಗಿ ಉಪಗ್ರಹ ಆಧಾರಿತ ಸುಧಾರಿತ ವ್ಯವಸ್ಥೆಯಾಗಿ ಜಾರಿಗೆ ತಂದಿದೆ. ಗಗನ್ ಪ್ರಾಥಮಿಕ ಉದ್ದೇಶವು ಸುರಕ್ಷಿತ-ವಿಮಾನಯಾನ ಯೋಜನೆಗೆ ಉಪಗ್ರಹ ಆಧಾರಿತ ವ್ಯವಸ್ಥೆಯನ್ನು ಸ್ಥಾಪಿಸುವುದು. ಕಾರ್ಯನಿರ್ವಹಣೆಯ ಕಾರ್ಯಕ್ಷಮತೆ ಮತ್ತು ಕಾರ್ಯಾಚರಣೆಯ ಅಗತ್ಯತೆಗಳನ್ನು ಅಂತರರಾಷ್ಟ್ರೀಯ ಮಾನದಂಡಗಳಲ್ಲಿ ಉಲ್ಲೇಖಿಸಿದಂತೆ ವಿಶೇಷವಾಗಿ ನಿಯಂತ್ರಿಸುವ ನಿಟ್ಟಿನಲ್ಲಿಯೂ ಇಸ್ರೋ ಮುಂದಟಿ ಇಟ್ಟಿದೆ.
ಸ್ಯಾಟಲೈಟ್ ಕಮಾಲ್
ನಾವೀಗ ಬದುಕನ್ನು ಸಹ್ಯವಾಗಿಸಿಕೊಂಡಿರುವಂಥಾ ಎಲ್ಲ ಸಾಧನಗಳಲ್ಲಿಯೂ ಇಸ್ರೋ ಸಂಸ್ಥೆಯ ಪಾತ್ರವಿದೆ. ಭಾರತೀಯ ಪ್ರಾದೇಶಿಕ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ ಯೋಜನೆಯು ಬಾಹ್ಯಾಕಾಶ ನೌಕೆಗಳು ಮತ್ತು ಅತ್ಯಾಧುನಿಕ ಭೂಕೇಂದ್ರದ ಸಂಯೋಜನೆಯನ್ನು ಬಳಸಿಕೊಂಡು ಪ್ರಾದೇಶಿಕ ನ್ಯಾವಿಗೇಷನಲ್ ಉಪಗ್ರಹ ವ್ಯವಸ್ಥೆಯನ್ನು ಸ್ಥಾಪಿಸುವ ಯೋಜನೆ ಬಹು ಹಿಂದೆಯೇ ಕಾರ್ಯಗತಗೊಂಡಿದೆ. ಇದರ ಫಲವಾಗಿಯೇ ಎಲ್ಲ ಹವಾಮಾನ ಪರಿಸ್ಥಿತಿಗಳಲ್ಲಿ ಉತ್ತಮವಾದ ನಿಖರತೆಯೊಂದಿಗೆ ಸಾರ್ವಕಾಲಿಕ ನ್ಯಾವಿಗೇಷನ್ ವ್ಯವಸ್ಥೆಯನ್ನು ಒದಗಿಸುತ್ತದೆ. ಭಾರತದಲ್ಲಿ ಎಲ್ಲಿಯಾದರೂ ಹಾಗೂ ಭಾರತದ ಸುತ್ತಲೂ ಸುಮಾರು ಸಾವಿರದೈನೂರು ಕಿಲೋಮೀಟರ್ ಸ್ಟ್ಯಾಂಡರ್ಡ್ ಪೊಸಿಷನಿಂಗ್ ಸೇವೆ, ನಿರ್ಬಂಧಿತ ಸೇವೆಯನ್ನು ಬಳಕೆದಾರರಿಗೆ ಈ ಮೂಲಕ ಬಳಕೆದಾರರಿಗೆ ಅತ್ಯಂತ ಅಚ್ಚುಕಟ್ಟಾಗಿ ಒದಗಿಸಲಾಗುತ್ತಿದೆ.
ಇನ್ನುಳಿದಂತೆ ಅಂತರ್ ಗ್ರಹ ಯೋಜನೆಗ ಅಡಿಯಲ್ಲಿ ಭೂಮಿಯ ಹೊರಗಿನ ನಮ್ಮ ಸೌರವ್ಯೂಹದ ಗ್ರಹ ಮತ್ತು ವಿವಿಧ ಆಕಾಶಕಾಯಗಳ ಅಧ್ಯಯನಕ್ಕಾಗಿ ಉಪಗ್ರಹಗಳನ್ನು ಉಡಾಯಿಸಲಾಗುತ್ತದೆ. ಇವುಗಳಲ್ಲಿ ಕಕ್ಷೀಯ ಉಪಗ್ರಹಗಳು, ಪರಿಭ್ರಾಮಕಗಳು, ಲ್ಯಾಂಡರ್ ಕ್ರಾಫ್ಟ್ ಗಳು ಮತ್ತು ರೋವರ್ ಗಳು ಸೇರಿರುತ್ತವೆ. ಇವುಗಳಲ್ಲಿ ಯಾವುದಾದರೂ ಒಂದು ಅಥವಾ ಎಲ್ಲವನ್ನೂ ಬಳಸುವ ಮೂಲಕ ಅಂತರ್ ಗ್ರಹ ಉಪಗ್ರಹ ಯೋಜನೆಗಳು ಕಾರ್ಯಾಚರಣೆ ನಡೆಸುತ್ತವೆ. ಈ ಉಪಗ್ರಹಗಳ ಮುಖ್ಯ ಉದ್ದೇಶ ಬಾಹ್ಯಾಕಾಶ ಪರಿಸರದಲ್ಲಿ ಮತ್ತು ಗ್ರಹಗಳ ಮೇಲೆ ಮಾನವ ಬದುಕುಳಿಯುವುದರ ಬಗ್ಗೆ ಅಧ್ಯಯನ ನಡೆಸುವುದು ಹಾಗೂ ಭೂಮಿಯಿಂದ ಅನ್ಯಗ್ರಹಗಳಿಗೆ ಸಂವಹನಕ್ಕೆ ಸಂಬಂಧಿಸಿದ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸೋದಾಗಿದೆ.
ಅಂತರ್ ಗ್ರಹ ಯೋಜನೆಗಳು ಅತ್ಯಂತ ಕಠಿಣವಾದವುಗಳು. ಅದರೆ ಅದರ ಸಾಧ್ಯತೆಗಳು ಮಾತ್ರ ಊಹೆಗೆ ನಿಲುಕುವಂಥವಲ್ಲ. ಗ್ರಹಗಳ ಭೌತಿಕ, ರಾಸಾಯನಿಕ ಮತ್ತು ವಾತಾವರಣದ ವ್ಯವಸ್ಥೆಗಳ ಪರಿಶೋಧನೆಯನ್ನು ಕೂಡ ಅವುಗಳ ಮೂಲಕ ಮಾಡಬಹುದು. ಅಂತರ್ ಗ್ರಹ ಯೋಜನಗಳ ಉದ್ದೇಶಗಳು, ಉಪಯೋಗಳು ವಿಸ್ತಾರವಾಗಿವೆ. ಗ್ರಹಗಳ ವಾತಾವರಣದ ತಿಳುವಳಿಕೆ ಭೂಮಿಯ ಪರಿಸರಕ್ಕೆ ಸಂಭವನೀಯ ಸಾಮೀಪ್ಯವನ್ನು ಹೊಂದಿದ ಗ್ರಹಗಳ ಮಾಹಿತಿಯನ್ನು ಒದಗಿಸುತ್ತದೆ. ಗ್ರಹಗಳಲ್ಲಿ ವಾಸ ಯೋಜನೆಯ ಬಗ್ಗೆ ಅಧ್ಯಯನ ನಡೆಸುವುದು, ಸೂರ್ಯನ ಬಿರುಗಾಳಿ, ಧೂಮಕೇತುಗಳು ಮತ್ತು ಉಲ್ಕಾಶಿಲೆಗಳ ಹೊಡೆತಗಳಂತಹ ಸೌರವ್ಯೂಹದಲ್ಲಿ ಉಂಟಾಗುವ ದುರಂತದ ಅಂಶಗಳ ಬಗ್ಗೆ ಮುನ್ಸೂಚನೆ ನೀಡುವುದೂ ಸೇರಿದಂತೆ ಆ ಪಟ್ಟಿ ದೊಡ್ಡದಿದೆ.
ಸಂಶೋಧನೆಗಳಿದ ಏನು ಪ್ರಯೋಜನ?
ವಿಜ್ಞಾನಿಗಳು ನಡೆಸುತ್ತಿರುವ ಸಂಶೋಧನೆಗಳಿಗೆ ಜಗತ್ತನ್ನೇ ಬದಲಿಸುವಷ್ಟು ಶಕ್ತಿಯಿದೆ. ನಮ್ಮ ಬ್ರಹ್ಮಾಂಡದ ಬಗ್ಗೆ ಹೆಚ್ಚು ವಿವರವಾದ ತಿಳುವಳಿಕೆಗಾಗಿ ವೈಜ್ಞಾನಿಕ ಉಪಗ್ರಹ ಕಾರ್ಯಾಚರಣೆಗಳನ್ನು ಉಪಯೋಗಿಸಲಾಗುತ್ತೆ. ಇದರಲ್ಲಿ ಮುಖ್ಯವಾದವುಗಳು ಮಾಸ್ ಆರ್ಬಿಟರ್ ಮತ್ತು ಚಂದ್ರಯಾನ ಯೋಜನೆಗಳು. ಮಾರ್ಸ್ ಆರ್ಬಿಟರ್ ಯೋಜನೆಯನ್ನು ಮಂಗಳ ಗ್ರಹದ ಅಧ್ಯಯನಕ್ಕೂ, ಚಂದ್ರಯಾನವನ್ನು ಚಂದ್ರನ ಅಧ್ಯಯನಕ್ಕೂ ಬಳಸಲಾಗಿದೆ. ಭಾರತದ ಮೊದಲ ಬಹು ತರಂಗಾಂತರ ಬಾಹ್ಯಾಕಾಶ ವೀಕ್ಷಣಾಲಯಕ್ಕೆ ಮೀಸಲಾದ ಉಪಗ್ರಹ. ವಿದ್ಯುತ್ಕಾಂತೀಯ ವರ್ಣಪಟಲದ ಆಪ್ಟಿಕಲ್, ನೇರಳಾತೀತ, ಕಡಿಮೆ ಮತ್ತು ಹೆಚ್ಚಿನ ಶಕ್ತಿಯ ಎಕ್ಸ್-ರೇ ಪ್ರದೇಶಗಳಲ್ಲಿ ಆಕಾಶ, ಬ್ರಹ್ಮಾಂಡವನ್ನು ವೀಕ್ಷಿಸುತ್ತದೆ. ಆದರೆ ಇತರ ವೈಜ್ಞಾನಿಕ ಉಪಗ್ರಹಗಳು ಕಿರಿದಾದ ಶ್ರೇಣಿಯ ತರಂಗಾಂತರಗಳಿಂದ ಅಂತರಿಕ್ಷವನ್ನು ವೀಕ್ಷಿಸುವ ಸಾಮರ್ಥ್ಯವನ್ನು ಹೊಂದಿವೆ. ಈ ನಿಟ್ಟಿನಲ್ಲಿ ಸದರಿ ಬಗೆಯ ಉಪಗ್ರಹಗಳ ಶಕ್ತಿ ಹಿರಿದಾಗಿದೆ.
ರೋಮಾಂಚಕ ಉದ್ದೇಶಗಳು
ಇಂಥಾ ಎಲ್ಲ ಆವಿಷ್ಕಾರಗಳು ಮತ್ತು ಸಂಶೋಧನೆಗಳು ರೋಮಾಂಚನಕಾರಿಯಾದ ಉದ್ದೇಶಗಳನ್ನು ಒಳಗೊಂಡಿವೆ. ನ್ಯೂಟ್ರಾನ್ ನಕ್ಷತ್ರಗಳು ಮತ್ತು ಕಪ್ಪು ಕುಳಿಗಳನ್ನು ಹೊಂದಿರುವ ಬೈನರಿ ಸ್ಟಾರ್ ಸಿಸ್ಟಮ್‌ಗಳಲ್ಲಿ ಹೆಚ್ಚಿನ ಶಕ್ತಿ ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳುವುದಕ್ಕೂ ಇಂಥಾ ಉಪಗ್ರಹಗಳು ಬಳಕೆಯಾಗುತ್ತವೆ. ನ್ಯೂಟ್ರಾನ್ ನಕ್ಷತ್ರಗಳ ಕಾಂತೀಯ ಕ್ಷೇತ್ರಗಳನ್ನು ಅಂದಾಜು ಮಾಡಲು, ನಕ್ಷತ್ರ ಜನನ ಪ್ರದೇಶಗಳು ಮತ್ತು ನಮ್ಮ ನಕ್ಷತ್ರಪುಂಜದ ಆಚೆ ಇರುವ ನಕ್ಷತ್ರ ವ್ಯವಸ್ಥೆಗಳಲ್ಲಿ ಹೆಚ್ಚಿನ ಶಕ್ತಿ ಪ್ರಕ್ರಿಯೆಗಳನ್ನು ಅಧ್ಯಯನ ಮಾಡುವುದು ಇದರ ಪ್ರಧಾನ ಉದ್ದೇಶ.
ಹಾಗಂತ ಇದರ ಪರಿಧಿ ಅಷ್ಟಕ್ಕೇ ಸೀಮಿತವಲ್ಲ. ಆಕಾಶದಲ್ಲಿ ಹೊಸ ಪ್ರಕಾಶಮಾನವಾದ ಎಕ್ಸ್ ರೇ ಮೂಲಗಳನ್ನು ಪತ್ತೆ ಮಾಡುವುದು, ನೇರಳಾತೀತ ಪ್ರದೇಶದಲ್ಲಿ ಬ್ರಹ್ಮಾಂಡದ ಸೀಮಿತ ಆಳವಾದ ಕ್ಷೇತ್ರ ಸಮೀಕ್ಷೆಯನ್ನು ಮಾಡುವುದು ಸೇರಿದಂತೆ ಅದರ ಉದ್ದೇಶಗಳು ವಿಸ್ತಾರವಾಗಿವೆ. ಸಣ್ಣ ಉಪಗ್ರಹಗಳು ಉಪಗ್ರಹ ತಂತ್ರಜ್ಞಾನದ ಪ್ರದರ್ಶನಕ್ಕೆ ಒಂದು ವೇದಿಕೆಯಂತೆ ಭಾಸವಾಗುತ್ತವೆ. ಇವುಗಳ ಮೂಲಕ ಅನೇಕ ವೈಜ್ಞಾನಿಕ ತಂತ್ರಜ್ಞಾನಗಳನ್ನು ಕಾರ್ಯಾಚರಣೆಗೆ ತರಲು ಇದನ್ನು ವೇದಿಕೆಯಾಗಿ ಬಳಸಬಹುದಾಗಿದೆ. ಸಣ್ಣ ಸಣ್ಣ ವೈಜ್ಞಾನಿಕ ವಿಚಾರಗಳೊಂದಿಗೆ ಅನೇಕ ತಂತ್ರಜ್ಞಾನಗಳನ್ನು ಈ ಉಪಗ್ರಹಗಳಲ್ಲಿ ಪರಿಶೀಲಿಸಿ, ಪರೀಕ್ಷಿಸಿ ದೊಡ್ಡ ಉಪಗ್ರಹಗಳಲ್ಲಿ ಬಳಸಬಹುದು. ಈ ಮೂಲಕ ವಿಜ್ಞಾನದ ಫಲಿತಾಂಶದ ಮೌಲ್ಯ ಮತ್ತು ಸಂಶೋಧನಾ ಸಾಮರ್ಥ್ಯದ ಆಧಾರದ ಮೇಲೆ ವೈಜ್ಞಾನಿಕ ಉಪಗ್ರಹಗಳಿಗೆ ಸೂಕ್ತವಾದ ಸಂಶೋಧನೆಗಳನ್ನು ಶಿಫಾರಸು ಮಾಡಿಬಹುದು.ಗೀ ಮೂಲಕ ಮುಂದಿನ ದಿನಗಳಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸಾ ಕ್ರಾಂತಿಯ ಅಲೆ ಎಬ್ಬಿಸುವ ಪ್ರಯತ್ನಗಳು ಇಸ್ರೋದೊಳಗೆ ವ್ಯಾಪಕವಾಗಿ ನಡೆಯುತ್ತಿವೆ.
ನವ ಭಾರತ ನಿರ್ಮಾಣದ ಕನಸು
ಬಹತೇಕ ಇಸ್ರೋ ವಿಜ್ಞಾನಿಗಳ ಶ್ರಮದ ಹಿಂದೆ ನವ ಭಾರತ ನಿರ್ಮಾಣದ ಕನಸಿದೆ. ಈ ದಿಸೆಯಲ್ಲಿ ಇವರುಉ ಸೃಷ್ಟಿಸಿರುವ ಉಪಗ್ರಹಗಳಿಗೆ ಅನಂತ ಸಾಧ್ಯತೆಗಳಿದ್ದಾವೆ. ಭವಿಷ್ಯದ ಬಾಹ್ಯಾಕಾಶ ವಿಜ್ಞಾನಿಗಳು, ತಂತ್ರಜ್ಞರನ್ನು ತಯಾರು ಮಾಡಲು ಇಸ್ರೋ ಪ್ರಯತ್ನ ನಡೆಸುತ್ತಿದೆ. ಉಪಗ್ರಹ ತಂತ್ರಜ್ಞಾನದ ಸಾಮರ್ಥ್ಯ ವೃದ್ಧಿಸಲು ಮಾಡಲು ವಿದ್ಯಾರ್ಥಿ ಉಪಗ್ರಹಗಳನ್ನು ಬಳಸಬಹುದು. ಈ ಮೂಲಕ ಬಾಹ್ಯಾಕಾಶ ತಂತ್ರಜ್ಞಾನವನ್ನು ಕಲಿಯಲು ಇಸ್ರೋ ಸಂಸ್ಥೆ ವಿದ್ಯಾರ್ಥಿ ಸಮುದಾಯವನ್ನು ಪ್ರೋತ್ಸಾಹಿಸುತ್ತಿದೆ. ಈ ಮೂಲಕ ಭವಿಷ್ಯದಲ್ಲಿ ಉಪಗ್ರಹಗಳನ್ನು ಅಭಿವೃದ್ಧಿಪಡಿಸಲು, ತಯಾರಿಸಲು, ಪರೀಕ್ಷಿಸಲು, ಬಾಹ್ಯಾಕಾಶ ತಂತ್ರಜ್ಞಾನ ಉಪಗ್ರಹ ವಿನ್ಯಾಸವನ್ನು ಮಾಡಲು ಈ ಯೋಜನೆ ಬಹು ಉಪಯುಕ್ತ. ಈ ದಿಸೆಯಲ್ಲಿ ಭಾರತದೊಳಗೆ ಹೊಸ ತಲೆ ಮಾರಿನ ವಿಜ್ಞಾನಿಗಳ ಉಗಮದತ್ತಲೂ ಇಸ್ರೋ ಗಂಭೀರವಾಗಿ ಕಣ್ಣಿಟ್ಟಿದೆ.
ಇಸ್ರೋದ ಇಷ್ಟೆಲ್ಲ ಸಾಧನೆಗಳಿಗೆ ಹಲವುಉ ದಿಕ್ಕುಗಳ ಸಂಪರ್ಕ, ಸಹಕಾರ ಮತ್ತು ಸಹಭಾಗಿತ್ವವಿದೆ. ಇಸ್ರೋದ ಈ ಬಾಹ್ಯಾಕಾಶ ಯೋಜನೆಯಲ್ಲಿ ಕಳೆದ ಕೆಲವು ದಶಕಗಳಲ್ಲಿ ಹಲವಾರು ವಿಶ್ವವಿದ್ಯಾನಿಲಯಗಳು, ಶೈಕ್ಷಣಿಕ ಸಂಸ್ಥೆಗಳು, ಬಾಹ್ಯಾಕಾಶ ಸಂಬಂಧಿತ ಕಾರ್ಯಕ್ರಮಗಳು ಮತ್ತು ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಭಾಗವಹಿಸಿವೆ. ಇದರ ಭಾಗವಾಗಿ, ಹಲವಾರು ಸಂಸ್ಥೆಗಳು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಶಿಕ್ಷಣವನ್ನು ಪರಿಚಯಿಸಲು ಆಸಕ್ತಿ ಹೊಂದಿತ್ತು. ಇದರ ಫಲವಾಗಿಯೇ ವಿದ್ಯಾರ್ಥಿ ಸಮುದಾಯ ಅನೇಕ ಉಪಗ್ರಹಗಳನ್ನು ವಿನ್ಯಾಸಗೊಳಿಸಿದೆ. ಪೇಲೋಡ್‌ಗಳನ್ನು ಅಭಿವೃದ್ಧಿಪಡಿಸಿದೆ. ವಿಶ್ವವಿದ್ಯಾನಿಲಯದಲ್ಲಿನ ವಿದ್ಯಾರ್ಥಿಗಳು, ವಿದ್ಯಾರ್ಥಿ ಉಪಗ್ರಹಗಳು ಬಾಹ್ಯಾಕಾಶ ತಂತ್ರಜ್ಞಾನ ಯೋಜನೆಗಳಿಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳನ್ನು ಸಂಘಟಿಸಲು, ಭಾರತೀಯ ದೂರಸಂವೇದಿ ಕಾರ್ಯಕ್ರಮದ ಭಾಗವಾಗಿ ಸಣ್ಣ ಉಪಗ್ರಹಗಳ ರೂಪದಲ್ಲಿ ಈ ಚಟುವಟಿಕೆಗಳನ್ನು ಸುಗಮಗೊಳಿಸಲು ಇಸ್ರೋ ಸಂಸ್ಥೆ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದೆ. ಈ ಮೂಲಕ ನವ ವಿಜ್ಞಾನಿಗಳ ಸೃಷ್ಟಿಗೆ ವಿಫುಲ ಅವಕಾಶಗಳನ್ನು ಕಲ್ಪಿಸುತ್ತಿದೆ.
ಇಸ್ರೀ ಈಗಂತೂ ಹಲವಾರು ಶಿಕ್ಷಣ ಸಂಸ್ಥೆಗಳಲ್ಲಿ ನವ ವಿಜ್ಞಾನಿಗಳ ಶೋಧ ನಡೆಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ, ಇಸ್ರೋ ಹಾಗೂ ಯು. ಆರ್. ರಾವ್ ಉಪಗ್ರಹ ಕೇಂದ್ರ ದೇಶಗಳ ಒಳಗ ಹೊರಗಿನ ಶಿಕ್ಷಣ ಸಂಸ್ಥೆಗಳ ಮತ್ತು ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ಹಲವಾರು ಸಣ್ಣ ಉಪಗ್ರಹಗಳನ್ನು ನಿರ್ಮಿಸಿದೆ. ಉಡಾವಣೆಯನ್ನೂ ಯಶಸ್ವಿಯಾಗಿ ಮಾಡಿದೆ. ಯು. ಆರ್. ರಾವ್ ಉಪಗ್ರಹ ಕೇಂದ್ರ ಭವಿಷ್ಯದಲ್ಲಿ ಅನೇಕ ಯೋಜನೆಗಳನ್ನು ಆಯೋಜಿಸಿದೆ. ನ್ಯಾವಿಗೇಷನ್ ಹಾಗು ಇತರ ಉಪಗ್ರಹಗಳ ಉನ್ನತೀಕರಣ ಮತ್ತು ಸಾಮರ್ಥ್ಯ ವೃದ್ಧಿಗೊಳಿಸುವುದು ಮುಂತಾದ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ.
ಇಸ್ರೋ ಹೀಗೆ ಸಾಗಿ ಬಂದ ಹಾದಿ ನಿಜಕ್ಕೂ ಅಚ್ಚರಿ ಮೂಡಿಸುಉತ್ತೆ. ಇಸ್ರೋ ಸ್ಥಾಪನೆಯಾದಾಗ ಅನೇಕ ದೇಶಗಳು ಒಳಗೊಳಗೇ ನಕ್ಕಿದ್ದವು. ಆಹಾರಕ್ಕೂ ತತ್ವಾರವಿರುವ ದೇಶವೊಂದು ಬಾಹ್ಯಾಕಾಶದತ್ತ ಕೈ ಚಾಚಿದ್ದೇ ಹೊಟ್ಟೆ ತುಂಬಿದ ಮಂದಿಯ ಪಾಲಿಗೆ ನಗೆಪಾಟಲಿನಂತೆ ಕಂಡಿದ್ದರಲ್ಲಿ ಅಚ್ಚರಿಯೇನಿಲ್ಲ. ಆ ಕ್ಷಣದಲ್ಲಿ ಹುರುಪಿನೊಂದಿಗೆ ಯಾನ ಹೊರಟಿದ್ದ ಭಾರತೀಯ ಯುವ ವಿಜ್ಞಾನಿಗಳ ಮೇಲೆ ಯಾವ ಭರವಸೆಯೂ ಇರಲಿಲ್ಲ. ಅಂಥಾ ವಿಜ್ಞಾನಿಗಳೆಲ್ಲರೂ ಬಂದ ಸವಾಲುಉಗ್ಳನ್ನೆಲ್ಲ ಎದುರಿಸಿದರು. ಯಾವ ಸವಲತ್ತುಗಳೂಊ ಇಲ್ಲದೆ ಕೂಊಲಿಯಾಳುಗಳಂತೆ ರಾಕೆಟ್ಟುಗಳನ್ನು ತಯಾರಿಸಿದರು. ಇಂಥಾ ಶ್ರಮದಿಂದ ಮೊದಲ ರಾಕೆಟ್ ಮುಗಿಲಿಗೆ ಚುಂಬಿಸಿದಾಗ ಭಾರತ ಮಾತ್ರವಲ್ಲ; ಇಡೀ ವಿಶ್ವವೇ ನಿಬ್ಬೆರಗಾಗಿತ್ತು. ಈವತ್ತಿಗೆ ಇಸ್ರೋ ನಾನಾ ಅಂಗ ಸಂಸ್ಥೆಗಳನ್ನು ಹೊಂದಿಗೆ. ನಾನಾ ಸಿಕ್ಕಿನಲ್ಲಿ ಅದರ ಕಾರ್ಯಗಳು ಹಬ್ಬಿಕೊಂಡಿವೆ. ಒಟ್ಟಾರೆಯಾಗಿ ಈ ಸಂಸ್ಥೆ ಭಾರತದ ಹೆಮ್ಮೆಯಾಗಿ ಮುಗಿಲೆತ್ತರಕ್ಕೆ ಬೆಳೆದು ನಿಂತಿದೆ!