ಮಂಗಳವಾರ, ಜುಲೈ 1, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

endosulfan effects: ಕಾರ್ಕೋಟಕ ವಿಷದ ಮೇಲೆ ಇದೆಂಥಾ ಕನಿಕರ?

Majja Webdeskby Majja Webdesk
07/03/2025
in Majja Special
Reading Time: 1 min read
endosulfan effects: ಕಾರ್ಕೋಟಕ ವಿಷದ ಮೇಲೆ ಇದೆಂಥಾ ಕನಿಕರ?

-ಎಂಡೋಸಲ್ಫಾನ್ ಸತ್ರಸ್ತರ ದಯನೀಯ ಸ್ಥಿತಿ!

-ಭಾರತದಲ್ಲಿ ಇದಕ್ಕಿದೆ ಮುಕ್ತ ಅವಕಾಶ!  

 

ಎಂಡೋಸಲ್ಫಾನ್… ಹೋಗೊಂದು ಹೆಸರು ಕೇಳಿದರೂ ಸಾಕು ಕೇರಳದ ಅಂಚಿನಲ್ಲಿರುವ ಕೆಲ ಭಾಗಗಳ ಮಂದಿ, ನಮ್ಮದೇ ದಕ್ಷಿಣ ಕನ್ನಡದ ಬಂಟ್ವಾಳ, ಪುತ್ತೂರು ಸುತ್ತಲ ಊರಿನ ಜನರೆಲ್ಲ ಅಕ್ಷರಶಃ ಬೆಚ್ಚಿ ಬೀಳುತ್ತಾರೆ. ಇದೀಗ ಎಲ್ಲೆಡೆ ಆಗಾಗ ವಿಷರಹಿತ, ರಾಸಾಯನಿಕ ರಹಿತ ಆಹಾರಗಳ ಬಗ್ಗೆ ಚರ್ಚೆಗಳು ನಡೆಯುತ್ತವೆ. ಅದರಿಂದ ಆರೋಗ್ಯದ ಮೇಲಾಗಬಲ್ಲ ಪರಿಣಾಮಗಳ ಬಗ್ಗೆ ಒಂದಷ್ಟು ಘನ ಗಂಭೀರವಾದ ವಿಚಾರವನ್ನು ತಜ್ಞರು ಸವಿವರವಾಗಿ ಹೇಳುತ್ತಾರೆ. ಅದೆಲ್ಲವನ್ನೂ ವಿಧೇಯತೆಯಿಂದ ಕೇಳಿ, ಒಂದಷ್ಟು ಹೊತ್ತು ನಾವೇ ತಿನ್ನುತ್ತಿರೋ ಆಹಾರವನ್ನು ನೆನೆದು ನಡುಗಿ ಹೋಗಿ, ಆ ಬಳಿಕ ಮತ್ತದೇ ವಿಷದ ಕೊಂಪೆಯಂಥಾ ಆಹಾರ ತಿಂದು ಬಿದ್ದುಕೊಳ್ಳುತ್ತೇವೆ. ಎಂಡೋ ಸಲ್ಫಾನಿನಂಥಾ ಕಾರ್ಕೋಟಕ ವಿಷದ ನಾನಾ ಸ್ವರೂಪ ನಮ್ಮ ಸುತ್ತ ಸುಳಿಯುತ್ತಾ ಮತ್ತೊಂದು ತಲೆಮಾರನ್ನು ನರಳಿಸುತ್ತದೆಂಬ ಕಿಂಚಿತ್ ಕಾಳಜಿಯೂ ನಮಗಿಲ್ಲವಾಗಿರೋದು ಮಾತರ್ರ ಘೋರ ದುರಂತ!
ನಮ್ಮದೇಶದ ದೌರ್ಭಾಗ್ಯವೇ ವಿಚಿತ್ರವಾಗಿದೆ. ಇಲ್ಲಿ ಮರೆವಿನ ಕಾಯಿಲೆ ತುಸು ಜಾಸ್ತಿ. ಅದೆಂಥಾದ್ದೇ ದುರಂತ ನಡೆದರೂ ಸೂತಕ ಕಳೆದಷ್ಟೇ ವೇಗವಾಗಿ ನೆನಪುಗಳೂ ಕೂಡಾ ಮಾಸಲಾಗುತ್ತವೆ. ಆದರೆ, ಇಂಥಾ ವಿಷದಿಂದಾದ ದುರಂತಕ್ಕೀಡಾದವರ ಬದುಕು ಮಾತ್ರ ನಿತ್ಯ ನರಕವಾಗಿ ಬಿಡುತ್ತೆ. ಕರ್ನಾಟಕದ ಮಟ್ಟಿಗೆ ಹೇಳೋದಾದರೆ ದಕ್ಷಿಣ ಕನ್ನಡ ಭಾಗದ ಕೆಲ ಊರುಗಳಲ್ಲಿನ ಜನರ ಪಾಡು ಈವತ್ತಿಗೂ ಕೂಡಾ ಹಾಗಾಗಿದೆ. ಒಂದು ಕಾಲದಲ್ಲಿ ದಕ್ಷಿಣ ಕನ್ನಡ ಸೀಮೆಯ ಗೇರು ಮರಗಳ ಮೇಲೆ ಹೆಲಿಕಾಪ್ಟರಿನಲ್ಲಿ ಎಂಡೋ ಸಲ್ಫಾನ್ ಅನ್ನು ಸ್ಪ್ರೇ ಮಾಡಲಾಗಿತ್ತು. ಅದು ರಣ ಭೀಕರ ವಿಷ ಅಂತಾಗಲಿ, ಅದು ನೆಮ್ಮದಿಯನ್ನೇ ಸರ್ವನಾಶ ಮಾಡುತ್ತದೆ ಎಂದಾಗಲಿ ಸಣ್ಣ ಕಲ್ಪನೆ ಕೂಡಾ ಆ ಬಡಪಾಯಿ ಜನರಿಗೆ ಇರಲಿಲ್ಲ. ಗೇರು ಫಸಲು ಪಡೆಯುವ ಸಲುವಾಗಿ ಹಣವಂತರು ಸ್ಪ್ರೇ ಮಾಡಿದ ಎಂಡೋ ಸಲ್ಫಾನ್ ಎಂಬೋ ವಿಷ ಕಸಿದುಕೊಂಡಿದ್ದು ಗೇರು ತೋಟಗಳಲ್ಲಿ ಕೂಲಿನಾಲಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಬಡಪಾಯಿಗಳ ನೆಮ್ಮದಿಯನ್ನು.
ಯಾವಾಗ ಇಂಥಾದ್ದೊಂದು ವಿಷ ನಮ್ಮದೇ ನೆಲದಲ್ಲಿ ಜೀವ ಹಾನಿ ಮಾಡಿತೋ ಆ ಕ್ಷಣದಿಂದಲೇ ಇಂಥಾ ವಿಷ ಬಳಕೆಯ ವಿರುದ್ಧ ನಿರಂತರವಾಗಿ ಪ್ರತಿಭಟನೆಗಳು ನಡೆಯುತ್ತಾ ಬಂದಿವೆ. ಕರ್ನಾಟಕ ಸರ್ಕಾರ ಇಕಲ್ಲಿ ಎಂಡೋ ಸಲ್ಫಾನ್ ಅನ್ನು ಸಂಪೂರ್ಣವಾಗಿ ನಿಶೇಧ ಮಾಡಿದ್ದಾಗಿ ಹೇಳಿಕೊಳ್ಳುತ್ತದೆ. ಆದರೆ ಅದೇ ಎಂಡೋ ಸಲ್ಫಾನ್ ಎಂಬ ವಿಷ ಹೆಸರು ಬದಲಿಸಿಕೊಂಡು, ಬೇರೆ ಬೇರೆ ರೂಪಗಳಲ್ಲಿ ಇಂದಿಗೂ ಚಾಲ್ತಿಯಲ್ಲಿದೆ. ಕೃಷಿಕರು ಅದರ ಖಬರೇ ಇಲ್ಲದಂತೆ ತಂದೂ ತಂದು ತಮ್ಮದೇ ಜಮೀನಿಗೆ ಸುರಿಯುತ್ತಿದ್ದಾರೆ. ಈ ವಿಷ ಕೇರಳದ ಭಾಗ ಮತ್ತು ನ್ಮ್ಮದೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾಡಿರುವಂಥಾ ಅನಾಹುತಗಳನ್ನು ಕಂಡರೆ ಯಾರಿಗಾದರೂ ಭೀತಿ ಆವರಿಸಿಕೊಳ್ಳದೇ ಇರುವುದಿಲ್ಲ. ಅಂಥಾದ್ದೊಂದು ಘೋರ ಪರಿಣಾಮ ಇಲ್ಲದೇ ಹೋಗಿದ್ದರೆ ಅದು ಭಾರತ ಕಂಡ ಮಹಾ ದುರಂತಗಳಲ್ಲಿ ಒಂದಾಗಿ ದಾಖಲಾಗುತ್ತಿರಲೂ ಇಲ್ಲ.

ವಿಷದ ಮಾಫಿಯಾ
ಎಂಡೋ ಸಲ್ಫಾನ್ ಮೇಲು ನೋಟಕ್ಕೆ ನಿಷೇಧವಾಗಿದೆ ಎಂಬಂತೆ ಕಂಡರೂ ಅದೇನೂ ಕಟ್ಟುನಿಟ್ಟಾಗಿಲ್ಲ. ಅದೇಕೋ ಆಡಳಿತ ಯಂತ್ರಕ್ಕೆ ಈ ವಿಷದ ಮೇಲೆ ವಿಪರೀತ ಪ್ರೀತಿ ಇದ್ದಂತಿದೆ. ರಾಜ್ಯದಲ್ಲಿ ಈ ವಿಷದ ನಿಷೇಧವನ್ನು ಖಾಯಂಗೊಳಿಸಿ, ವಿಷಕಾರಕ ಕೀಟನಾಶದಿಂದ ಸಂತ್ರಸ್ಥರಾಗಿರುವ ಕುಟುಂಬದ ಗಣತಿ ನಡೆಸುವ ಮೂಲಕ ಶಾಶ್ವತ ಪರಿಹಾರ ನೀಡುವಂತೆ ಹೋರಾಟಗಾರರು ಅಡಿಗಡಿಗೆ ಒತ್ತಾಯಿಸುತ್ತಿದ್ದಾರೆ. ಸರ್ಕಾರ ತಡವಾಗಿಯಾದರೂ ತಾತ್ಕಾಲಿಕ ಎಂಡೋಸಲ್ಫಾನ್ ನಿಷೇಧಕ್ಕೆ ಕ್ರಮ ಕೈಗೊಂಡಿದೆ. ಕೇರಳ ಸರ್ಕಾರವು ಈ ಹಿಂದೆಯೇ ಎಂಡೋಸಲ್ಫಾನನ್ನು ಖಾಯಮ್ಮಾಗಿ ನಿಷೇಧಿಸಿದೆ. ಹಾಗಿರುವಾಗ ಈ ವಿಷದ ನಿಷೇಧಕ್ಕೂ ತಾತ್ಕಾಲಿಕ ಸೂತ್ರದ ಮೊರೆ ಹೋಗಿರುವ ಸರ್ಕಾರಗಳ ನಡೆಯೇ ಆಕ್ರೋಶ ಮೂಡಿಸುತ್ತಿದೆ. ಅದು ಇಂಥಾ ಕೀಟನಾಶಕ ಕಂಪೆನಿಗಳ ಮಾಫಿಯಾದ ಪರಿಣಾಮವಾಗಿರಬಹುದೆಂದೂ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ.
ಹಾಗಾದರೆ, ಈ ಎಂಡೋಸಲ್ಫಾನ್ ನಮ್ಮ ದೇಶವನ್ನೂ ಮಾತ್ರ ಕಾಡಿದೆಯಾ? ಬೇರೆ ದೇಶದ ವಾತಾವರಣ ಹೇಗಿದೆ ಅಂತ ನೋಡ ಹೋದರೆ ಆ ವಿಷದ ವಿಶ್ವರೂಪ ದರ್ಶನವಾಗುತ್ತೆ. ಈಗಾಗಲೇ ವಿಶ್ವದ ಎಪ್ಪತ್ತಕ್ಕೂ ಹೆಚ್ಚು ದೇಶಗಳು ಎಂಡೋಸಲ್ಫಾನ್‌ನ ಉತ್ಪಾದನೆ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿವೆ. ಆದರೆ ಭಾರತ ಸರ್ಕಾರ ಮಾತ್ರ ಎಂಡೋಸಲ್ಫಾನ್ ದುಷ್ಪರಿಣಾಮಗಳ ಭೀಕರ ಚಿತ್ರಣ ಸಿಕ್ಕಿದ ನಂತರವೂ ಅದನ್ನು ಶಾಶ್ವತವಾಗಿ ನಿಷೇಧ ಮಾಡಲು ಹಿಂದೆ ಮುಂದೆ ನೋಡುತ್ತಿರೋದು ನಿಜಕ್ಕೂ ಆಕ್ರೋಶ ಹುಟ್ಟಿಸುತ್ತೆ.
ಎಂಡೋಸಲ್ಫಾನಿನಿಂದಾಗಿಯೇ ಕಾಸರಗೋಡು, ಪುತ್ತೂರು, ವಿಟ್ಲ ಮುಂತಾದ ತಾಲೂಕುಗಳ ಸಾವಿರಾರು ಮಂದಿ ದೈಹಿಕ, ಮಾನಸಿಕ ವೈಕಲ್ಯಗಳಿಂದ ಬಳಲುತ್ತಿದ್ದಾರೆ. ಈ ವಿಚಾರವನ್ನು ಈಗಾಗಲೇ ಎಂಬುದು ಅನೇಕ ವರದಿಗಳು ಮತ್ತು ಅಧ್ಯಯನಗಳು ಸಾಬೀತುಪಡಿಸಿದ್ದಾವೆ.. ಸರಿಸುಮಾರು ಎಂಭತ್ತರ ದಶಕದಿಂದ ಈ ಪ್ರದೇಶದಲ್ಲಿ ಸುಮಾರು ಐವತ್ತು ಸಾವಿರ ಲೀಟರ್‌ಗಳಷ್ಟು ಎಂಡೋಸಲ್ಫಾನಿನ ವೈಮಾನಿಕ ಸಿಂಪಡಣೆ ನಡೆದಿತ್ತೆಂಬ ವಿಚಾರವೂ ಜಾಹೀರಾಗಿದೆ. ಹೀಗೆ ಸಿಂಪರಣೆಗೆ ಬಳಸುವ ರಾಸಾಯನಿಕಗಳು ತುಂಬ ವಿಷಕಾರಿಯಾದುದರಿಂದ ಜಾನುವಾರು, ಮೇಕೆ, ಕುರಿ ಮತ್ತಿತರ ಪ್ರಾಣಿಗಳನ್ನು ಹತ್ತು ದಿನಗಳವರೆಗೆ ಗೇರು ತೋಟದಲ್ಲಿ ಬಿಡಕೂಡದೆಂದು ಅಂದು ಅರಣ್ಯ ಉಪ ಸಂರಕ್ಷಣಾಧಿಕಾರಿ ಪತ್ರಿಕಾ ಪ್ರಕಟಣೆಯನ್ನೇ ಹೊಡಿಸಿರೋದು ಈಗಾಗಲೇ ಸಾಬೀತಾಗಿದೆ. ಇಷ್ಟಾದರೂ ಕೂಡಾ ಇಂಥಾ ವಿಷದ ಬಗ್ಗೆ ಈ ಸರ್ಕಾರಗಳಿಗೇನು ಪ್ರೀತಿಯೋ ತಿಳಿಯುತ್ತಿಲ್ಲ.
ಭೀಕರ ಪರಿಣಾವಲ್ಲಿಂಥಾ ಕೀಟನಾಶಕ, ವಿಷಗಳನ್ನು ತಯಾರಿಸಿಯೇ ಜಾಗತಿಕ ಮಟ್ಟದಲ್ಲಿ ದಂಣಧೆ ನಡೆಸುತ್ತಿರುವ ಒಂದಷ್ಟು ಅಂತಾರಾಷ್ಟ್ರೀಯ ಕಂಪೆನಿಗಳಿದ್ದಾವೆ. ಒಂದಷ್ಟು ದೇಶಗಳು ಅಂಥಾ ಕಂಪೆನಿಗಳ ಲಾಭಿಗಳ ಮುಂದೆ ಮಂಡಿಯೂರಿ ಬಿಡುತ್ತವೆ. ಹಣ ಬಲದಿಂದಲೇ ಇಂಥಾ ಕಂಪೆನಿಗಳು ಎಲ್ಲವನ್ನೂ ದಕ್ಕಿಸಿಕೊಂಡು ಬಿಡುತ್ತವೆ. ಎಂಡೋಸಲ್ಫಾನ್ ವಿಷವಲ್ಲ ಅಂತ ಎಂಡೋಸಲ್ಫಾನ್ ತಯಾರಕ ಸಂಸ್ಥೆಗಳು ವಾದ ಮಂಡಿಸುತ್ತಾ ಬಂದಿವೆ. ಆದರೆ ಈ ವಿಷದ ಹಿಸ್ಟರಿ ಮಾತ್ರ ಭಯಾನಕವಾಗಿದೆ. ಪ್ರಯೋಗಾಲಯಗಳಲ್ಲಿ ಇಲಿಗಳ ಸಂತಾನ ಶಕ್ತಿ ಕುಂದಿಸಲು, ವೀರ್ಯಹರಣ ಮಾಡಲು ಎಂಡೋಸಲ್ಫಾನ್ ವಿಷವನ್ನೇ ಬಳಸಿ ಅದನ್ನು ಮತ್ತೆ ಸರಿಪಡಿಸುವ ವಿಧಾನವನ್ನು ಪ್ರಯೋಗಿಸಲಾಗುತ್ತಿದೆ. ಈ ವಿಚಾರವನ್ನು ಖುದ್ದು ವಿಜ್ಞಾನಿಗಳೇ ಒಪ್ಪಿಕೊಂಡಿದ್ದಾರೆ. ಅಂಥಾ ವಿಷ ಡೇಂಜರಸ್ ಅಲ್ಲ ಎಂಬ ವಾದ ಖಂಡಿತವಾಗಿಯೂ ಭಂಡತನದ ಪರಾಕಾಷ್ಠೆಯಂತೆ ಕಾಣಿಸುತ್ತದೆ.
ಆದರೆ, ಈ ವಿಷದ ವಿಚಾರದಲ್ಲಿ ಈಗಾಗಲೇ ಒಂದಷ್ಟು ದೇಶಗಳು ಎಚ್ಚೆತ್ತುಕೊಂಡಿವೆ. ಎಂಡೋಸಲ್ಫಾನ್‌ನ ವಿಷದ ಭೀಕರತೆಯನ್ನು ಮನಗಂಡು ಅಮೆರಿಕಾದ ಪರಿಸರ ರಕ್ಷಣಾ ಸಂಸ್ಥೆ ಅದನ್ನು ಭಯಾನಕ ವಿಷವೆಂದು ನಿರೂಪಿಸಿದೆ.ಕಿದರಿಂದಾಗಿ ಅಮೆರಿಕಾ ಸರ್ಕಾರ ಎಂಡೋಸಲ್ಫಾನ್ ಅನ್ನು ನಿಷೇಧಿಸಿದೆ. ಇತ್ತ ಆಸ್ಟ್ರೇಲಿಯಾ ಕೂಡಾ ಎಂಡೋಸಲ್ಫಾನ್ ಗೆ ಬ್ರೇಕ್ ಹಾಕಿದೆ. ಇನ್ನುಳಿದಂತೆ ಬ್ರೆಝಿಲ್, ಕೆನಡಾ, ದಕ್ಷಿಣ ಕೊರಿಯಾ ದೇಶಗಳೂ ಎಂಡೋಸಲ್ಫಾನ್ ಅನ್ನು ಯಾವತ್ತೋ ನಿಷೇಧಿಸಿವೆ. ಹಾಗಂತ ಏಕಾಏಕಿ ಇಂಥಾ ನಿಷೇಧ ಕ್ರಮವನ್ನು ಕೈಗೊಂಡಿಲ್ಲ. ಅದರ ಹಿಂದೆ ವೈಜ್ಞಾನಿಕ ಸಂಶೋಧನೆಗಳು, ಪರೀಕ್ಷೆಗಳ ಹಿನ್ನೆಲೆ ಇದೆ. ಆದರೂ ಅದೇಕೋ ಭಾರತದ ಮಟ್ಟಿಗೆ ಅದು ಅಷ್ಟೇನೂ ವಿಷವಲ್ಲ ಅನ್ನಿಸುತ್ತಿರೋದೊಂದು ಸೋಜಿಗ!
ಎಲ್ಲೆಲ್ಲೂ ನಿಷೇಧ
ಕೃಷಿಗೆ ಒಂದು ಹಂತದಲ್ಲಿ ಎಂಡೋ ಸಲ್ಫಾನ್ ಅನ್ನು ನೆಚ್ಚಿಕೊಂಡಿದ್ದ ಅನೇಕ ದೇಶಗಳಿದ್ದಾವೆ. ಅದರಲ್ಲಿ ಶ್ರೀಲಂಕಾ ಕೂಡಾ ಸೇರಿಕೊಳ್ಳುತ್ತೆ. ಶ್ರೀಲಂಕಾದ ಆರ್ಥಿಕತೆಯಲ್ಲಿ ಚಹಾ ಕೃಷಿ ಶೇಕಡಾ ಹದಿನಾರರಷ್ಟು ಪಾಲು ಹೊಂದಿದ್ದರೂ ಅಲ್ಲಿ ಎಂಡೋಸಲ್ಫಾನ್ ನಿಷೇಧವಾಗಿದೆ. ಅದರಿಂದಾಗಿ ಅಲ್ಲಿನ ಆರ್ಥಿಕತೆಯ ಮೇಲೆ ಕಿಂಚಿತ್ತೂ ದುಷ್ಪರಿಣಾಮವಾಗಿಲ್ಲ. ಆದರೆ ಭಾರತದಲ್ಲಿ ಅತ್ಯಲ್ಪ ಆರ್ಥಿಕತೆಯ ಪಾಲು ಹೊಂದಿರುವ ಚಹಾ ಉದ್ಯಮದಲ್ಲಿ ಎಂಡೋಸಲ್ಫಾನ್ ನಿಷೇಧಿಸಲು ಭಾರತ ಹಿಂದೇಟು ಹಾಕುತ್ತಿರೋದು ಜಾಗತಿಕ ಮಟ್ಟದಲ್ಲಿ ಹಾಸ್ಯಾಸ್ಪದವಾಗಿ ಕಾಣುತ್ತಿದೆ. ತನ್ನೊಳಗಿನ ಜನರ ಬಗ್ಗೆ ಕಾಳಜಿ ಹೊಂದಿರುವಂಥಾ ಯಾವ ದೇಶದ ಆಡಳಿತ ವರ್ಗವಾದರೂ ಎಂಡೋ ಸಲ್ಫಾನಿನಂಥಾ ಭಯಾನಕ ವಿಷವನ್ನು ನಿಷೇಧಿಸದೇ ಬಿಡುವುದಿಲ್ಲ. ಆದರೆ, ನಮ್ಮ ದೇಶದಲ್ಲಿ ಅದೇನಾಗುತ್ತಿದೆಯೋ ತಿಳಿಯುತ್ತಿಲ್ಲ!

Tags: #agricutur#banendosulfan#endosulfan#endosulfaneffects#endosulfanvictims#india

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
which one is real spirituality: ನಾವಂದುಕೊಂಡಿದ್ದು ನಿಜವಾದ ಭಕ್ತಿಯಲ್ಲವೇ?

which one is real spirituality: ನಾವಂದುಕೊಂಡಿದ್ದು ನಿಜವಾದ ಭಕ್ತಿಯಲ್ಲವೇ?

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.