ಬುಧವಾರ, ಜುಲೈ 2, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

dr vijayalakshmi deshmane: ಸ್ಲಂನಿಂದ ಬಂದು ಕ್ಯಾನ್ಸರ್ ಸರ್ಜನ್ ಆದ ಮಾದರಿ ವೈದ್ಯೆ!

Majja Webdeskby Majja Webdesk
10/03/2025
in Lifestyle, Majja Special
Reading Time: 1 min read
dr vijayalakshmi deshmane: ಸ್ಲಂನಿಂದ ಬಂದು ಕ್ಯಾನ್ಸರ್ ಸರ್ಜನ್ ಆದ ಮಾದರಿ ವೈದ್ಯೆ!

-ಸಾವಿರಾರು ಜೀವ ಉಳಿಸಿದ ದೇವತೆ ಡಾ ವಿಜಯಲಕ್ಷ್ಮಿ ದೇಶಮಾನೆ!

-ಈ ವೈದ್ಯೆಯದ್ದು ಅಂತಿಂಥಾ ಸಾಧನೆಯಲ್ಲ! 

 

ಡಾ.ವಿಜಯಲಕ್ಷ್ಮಿ ದೇಶಮಾನೆ ಯವರಿಗೆ ಗೌರವ ಪದ್ಮಶ್ರೀ ಪುರಸ್ಕಾರ ಸಿಕ್ಕಿದೆ. ಕಾಟನ್ ಸೀರೆ, ಸದಾ ಹೆಗಲು ಮುಚ್ಚುವ ಸೆರಗು, ಹಣೆಯಲ್ಲಿ ಕುಂಕುಮ, ಮುಖದಲ್ಲೊಂದು ಯಾವತ್ತೂ ಕಳೆಗುಂದದ ನಗು… ವಿಜಯಲಕ್ಷ್ಮಿ ದೇಶಮಾನೆ ಎಂಬ ಹೆಸರು ಕೇಳಿದಾಕ್ಷಣವೇ ಈ ಚಿತ್ರವೊಂದು ಎಲ್ಲರ ಮನಸುಗಳಲ್ಲಿಯೂ ಅರಳಿಕೊಳ್ಳುತ್ತೆ. ತೀರಾ ಸ್ಲಂ ಒಂದರಲ್ಲಿ, ಬಡತನವನ್ನೇ ಹಾಸಿ ಹೊದ್ದಂತಿದ್ದ ಕುಟುಂಬದ ಕಿಡಿಯಾದ ಅವರೀಗ ಪ್ರಖ್ಯಾತ ಕ್ಯಾನ್ಸರ್ ಸರ್ಜನ್. ಅದೆಷ್ಟೋ ಕ್ಯಾನ್ಸರ್ ಫೇಶೇಂಟುಗಳ ಜೀವ ಉಳಿಸಿದ ದೇವತೆಯಾಗಿಯೂ ಅವರು ಗೌರವಾಧರಗಳಿಗೆ ಪಾತ್ರರಾಗಿದ್ದಾರೆ. ಇಂಥಾ ಮೇರು ಸಾಧಕಿಯಾಗಿದ್ದರೂ ಕೂಡಾಠ ಓರ್ವ ಸಾಮಾನ್ಯ ಹೆಣ್ಣುಮಗಳಂತೆ ಕಾಣಿಸುವ, ಅಂಥಾದ್ದೇ ಸರಳಾತಿ ಸರಳ ವ್ಯಕ್ತಿತ್ವ ಹೊಂದಿರುವ ಅವರಿಗೆ ಸಿಕ್ಕಿರೋದರಿಂದ ಪದ್ಮಶ್ರೀ ಪುಸ್ಕಾರದ ಘನತೆ ಗೌರವ ಮತ್ತಷ್ಟು ಹೆಚ್ಚಿಕೊಂಡಿದೆ.


ವಿಜಯಲಕ್ಷ್ಮಿ ದೇಶಮಾನೆ ಅವರೀಗ ಕ್ಯಾನ್ಸರ್ ಎಂಬ ಮಹಾ ಮಾರಿಯ ಬಾಧೆಗೀಡಾದವರೆಲ್ಲರ ಪಾಲಿಗೆ ಅಕ್ಷರಶಃ ದೇವತೆಯಂತೆ ಕಾಣಿಸುತ್ತಿದ್ದಾರೆ. ಕೈಯಲ್ಲಿ ಸ್ಟೆತಾಸ್ಕೋಪ್ ಹಿಡಿದು ಅವರು ನಡೆದು ಬರುತ್ತಿದ್ದರೆ, ಜೀವನ್ಮರಣದ ನಡುವೆ ಹೋರಾಡುತ್ತಿರುವ ರೋಗಿಗಳ ಕಣ್ಣಲ್ಲಿ ಭರವಸೆಯ ಬೆಳಕೊಂದು ತಂತಾನೇ ಮೂಡಿಕೊಳ್ಳುತ್ತೆ. ಹಾಗೆ ಕ್ಯಾನ್ಸರ್ ರೋಗಿಗಳ ಪಾಲಿನ ಆಶಾಕಿರಣವಾಗಿ ಡಾ. ವಿಜಯಲಕ್ಷ್ಮಿ ದೇಶಮಾನೆ ಪ್ರಸಿದ್ಧಿ, ಪ್ರೀತಿ ಪಡೆದುಕೊಂಡಿದ್ದಾರೆ. ಇಷ್ಟೆಲ್ಲ ಹೆಸರುವಾಸಿಯಾಗಿರುವ ಕಲಬುರಗಿ ಮೂಲದ ಹೆಸರಾಂತ ಕ್ಯಾನ್ಸರ್ ತಜ್ಞೆ ಡಾ. ವಿಜಯಲಕ್ಷ್ಮೀ ದೇಶಮಾನೆ ಅವರಿಗೆ ಪದ್ಮಶ್ರೀ ಪುರಸ್ಕಾರ ಒಲಿದು ಬಂದಿರೋದು ನಿಜಕ್ಕೂ ನಾವೆಲ್ಲರೂ ಹೆಮ್ಮೆ ಪಡುವಂಥಾ ಸಂಗತಿ.

ಪಾತಾಳದಿಂದ ಬಂದವರು


ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಂಬಿಬಿಎಸ್ ಅನ್ನೋದು ಕೋಟಿ ಕೋಟಿ ಬೇಡುವ ದಂಧೆಯಾಗಿ ಬಿಟ್ಟಿದೆ. ಅದರಲ್ಲಿಯೂ ಎಂಭತ್ತತರ ದಶಕದ ಆಚೀಚಿನ ದಿನಗಳಲ್ಲಿಯಂತೂ ಬಡ ಬಗ್ಗರು ವೈದ್ಯರಾಗುವ ಕನಸು ಕಾನೋದೂ ನಗೆಪಾಟಲಿನ ಸಂಗತಿಯಾಗಿತ್ತು. ವಿಶೇಷವಾಗಿ ದಮನಿತ ಸಮುದಾಯದ ಹುಡುಗಿಯೊಬ್ಬಳು ವೈದ್ಯೆಯಾಗೋದೆಂದರೆ ಈ ಸಮಾಜದಿಂದಲೇ ನಾನಾ ಕೊಂಕುನುಡಿಗಳನ್ನು ಕೇಳಬೇಕಾಗಿ ಬರುತ್ತಿತ್ತು. ತರಕಾರಿ ಮಾರಾಟ ಮಾಡುವ ಕುಟುಂಬದಿಂದ ಬಂದಿರುವ ಡಾ. ವಿಜಯಲಕ್ಷ್ಮಿ ದೇಶಮಾನೆ ಅವರು ಪ್ರಖ್ಯಾತ ಕ್ಯಾನ್ಸರ್ ತಜ್ಞೆಯಾಗಿ, ಪದ್ಮಶ್ರೀ ಪುರಸ್ಕಾರವರೆಗೆ ವಿಜಯಲಕ್ಷ್ಮಿ ಅವರು ಸಾಗಿ ಬಂದ ದಾರಿಯತ್ತ ಒಮ್ಮೆ ಕಣ್ಣಾಡಿಸಿದರೆ ನಿಜಕ್ಕೂ ಅಚ್ಚರಿಯಾಗುತ್ತೆ. ಅವರು ಕ್ಯಾನ್ಸರ್ ರೋಗಿಗಳ ಪಾಲಿನ ಧನ್ವಂತರಿ ಎಂದೇ ಖ್ಯಾತಿ ಗಳಿಸಿದ್ದಾರೆ. ಅದಕ್ಕೆ ಕಾರಣ ಅವರ ಶ್ರದ್ಧೆ, ಶ್ರಮ, ತ್ಯಾಗ, ಮಾನವೀಯ ಕಳಕಳಿ, ವೈದ್ಯ ವೃತ್ತಿಯನ್ನೇ ಉಸಿರಾಗಿಸಿಕೊಂಡು ಬದುಕಿದ ಅಪರೂಪದ ವೈದ್ಯೆ. ವ್ಯವಹಾರಿಕ ಅಂಶಗಳನ್ನು ತುಸುವೂ ಇಟ್ಟುಕೊಳ್ಳದೆ ರೋಗಿಗಳ ಜೀವ ಕಾಪಾಡುವುದನ್ನೇ ಧ್ಯೇಯವಾಗಿಸಿಕೊಂಡ ಅವರು ಈ ಶತಮಾನ ಕಂಡ ಮಾದರಿ ವೈದ್ಯೆ ಎಂಬುದರಲ್ಲಿ ಎರಡು ಮಾತಿಲ್ಲ.
ವೃತ್ತಿ ಬದುಕಿನಲ್ಲಿ ವಿಜಯಲಕ್ಷ್ಮಿ ಅವರು ಸಾಗಿ ಬಂದ ಹಾದಿ ಕೂಡಾ ಸಮ್ಮೋಹಕವಾಗಿದೆ. ಎಂ ಬಿ ಬಿ ಎಸ್, ಎಂ ಎಸ್ ಜನರಲ್ ಸರ್ಜರಿ ಎಫ್‌ಎ.ಐ.ಎಸ್. ಪದವಿ ಪಡೆದು ಕಿದ್ವಾಯಿ ಮೆಮೋರಿಯಲ್ ಇನ್ಸಿಟ್ಯೂಟ್ ಆಫ್ ಎನ್ನಾಲಜಿಯಲ್ಲಿ ಸರ್ಜರಿಯ ಪ್ರಾಧ್ಯಾಪಕರಾಗಿದ್ದ ಅವರು ನಂತರದಲ್ಲಿ ಕಿದ್ವಾಯಿ ಆಸ್ಪತ್ರೆಯ ನಿರ್ದೇಶಕಿಯಾಗಿಯೂ ಮಾದರಿಯಾಗಿಯೇ ಕಾರ್ಯ ನಿರ್ವಹಿಸಿದ್ದರು. ಕಲಬುರಗಿಯ ಕೊಳಗೇರಿ ಪ್ರದೇಶದಲ್ಲಿ ವಿಜಯಲಕ್ಷ್ಮಿ ಹೆತ್ತವರು ಒಂದು ಕಾಲದಲ್ಲಿ ವಾಸವಾಗಿದ್ದರು. ತಂದೆ ಬಾಬುರಾವ್ ಕಟ್ಟಿಗೆ ಕಡಿಯುವುದು, ಕೂಲಿ ಮಾಡುತ್ತಾ ಮಿಲ್ ಒಂದರಲ್ಲಿ ಕಾರ್ಮಿಕನಾಗಿ ಸೇರಿದರು. ತಾಯಿ ರತ್ನಮ್ಮ ತರಕಾರಿ ಮಾರಾಟದಿಂದ ಕುಟುಂಬಕ್ಕೆ ನೆರವಾಗಿದ್ದರು. ಬಾಬುರಾವ್ ಮತ್ತು ರತ್ನಮ್ಮ ದಂಪತಿಗೆ ವಿಜಯಲಕ್ಷ್ಮಿಸೇರಿದಂತೆ ಏಳು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗ. ದಿನದ ದುಡಿಮೆಯನ್ನೇ ನೆಚ್ಚಿಕೊಂಡು ಬದುಕುತ್ತಿದ್ದ ಕುಟುಂಬದಲ್ಲಿ ವಿಜಯಲಕ್ಷ್ಮಿ ಅವರು ವೈದ್ಯೆಯಾಗಿ ಬಡವರಿಗೆ ಒಳ್ಳೆಯ ಸೇವೆ ಒದಗಿಸಬೇಕು ಎಂಬುದು ಹೆತ್ತವರ ಕನಸಾಗಿತ್ತು. ಅದನ್ನು ನನಸು ಮಾಡಿಕೊಂಡು ಮಗಳನ್ನು ವೈದ್ಯೆಯಾಗಿಸಿದ ಆ ಹೆತ್ತವರೂ ಕೂಡಾ ಸಾಧಕರಾಗಿಯೇ ಕಾಣಿಸುತ್ತಾರೆ.

ಕಷ್ಟಗಳ ಕುಲುಮೆ


ಹೀಗೆ ಇಂದು ದೇಶವ್ಯಾಪಿ ಪ್ರಸಿದ್ಧರಾಗಿರುವ ಡಾ ವಿಜಯಲಕ್ಷ್ಮಿ ದೇಶಮಾನೆಯವರ ಕರ್ಮಭೂಮಿಯಂತಿರುವ ಊರು ಕಲ್ಬುರ್ಗಿ. ಕಲಬುರಗಿಯ ಚಕ್ರಕಟ್ಟಾ ಮಾರುತಿ ಮಂದಿರದ ಬಳಿ ತರಕಾರಿ ಮಾರುತ್ತ ಜೀವನ ಸಾಗಿಸುತ್ತಿದ್ದ ತಾಯಿಯೊಂದಿಗೆ ತರಕಾರಿ ಮಾರುತ್ತಲೇ ಹೈಸ್ಕೂಲ್ ಶಿಕ್ಷಣ ಕನ್ನಡ ಪೂರೈಸಿದ ವಿಜಯಲಕ್ಷ್ಮಿ ಅವರು ಆ ನಂತರ ಹುಬ್ಬಳ್ಳಿಯಲ್ಲಿ ವೈದ್ಯಕೀಯ ಪದವಿ ಪಡೆದರು. ಮಗಳು ವೈದ್ಯಳಾಗಬೇಕೆಂಬ ಆಸೆಗೆ ತಾಯಿ ರತ್ನಮ್ಮ ತಮ್ಮ ಮಂಗಳಸೂತ್ರ ಮಾರಿ ಅದರಿಂದ ಬಂದ ಹಣದಿಂದಲೇ ವಿಜಯಲಕ್ಷ್ಮೀಯವರ ವೈದ್ಯಕೀಯ ಶಿಕ್ಷಣದ ಶುಲ್ಕ ಭರಿಸಿದ್ದರು. ತಂದೆ ಕೂಡಾ ಒಂದಿನಿತೂ ವಿಶ್ರಾಂತಿ ಪಡೆಯದೆ ಮನೆಯನ್ನು ನಿಭಾಯಿಸುತ್ತಾ, ಮಗಳ ಓದಿಗೆ ಹೆಜ್ಜೆ ಹೆಜ್ಜೆಯಲ್ಲಿಯೂ ಒತ್ತಾಸೆಯಾಗಿ ನಿಂತಿದ್ದರು. ವಿಜಯಲಕ್ಷ್ಮಿ ಹೆತ್ತವರ ಶ್ರಮವೆಲ್ಲ ಸಾರ್ಥಕವಾಗುವಂತೆ ವೈದ್ಯಕೀಯ ಪದವಿ ಪಡೆದು ಸೈ ಅನ್ನಿಸಿಕೊಂಡಿದ್ದರು.
ಈವತ್ತಿಗೆ ಅದೇನೇ ಓದುವವರಿಗಾದರೂ ನಾನಾ ಸೌಕರ್ಯ ಮಾಡಿ ಕೊಡುವಷ್ಟರಲ್ಲಿ ಪೋಶಕರು ಹೈರಾಣಾಗುತ್ತಾರೆ. ತರಕಾರಿ ಮಾರುತ್ತಲೇ ಓದುತ್ತಾ, ಡಾಕ್ಟರ್ ಪದವಿ ಪಡೆದ ಬಂದ ಡಾ. ವಿಜಯಲಕ್ಷ್ಮೀ ದೇಶಮಾನ್ಯೆ ಕ್ಯಾನ್ಸರ್ ಸರ್ಜನ್ ಆಗಿ ಮಾಡಿರುವ ಸಾಧನೆ, ಸಾಗಿದ ದಾರಿ, ಏರಿದ ಎತ್ತರ ಮಾದರಿ. ರೋಗಿಗಳ ಸೇವೆಯೇ ಪರಮ ಧ್ಯೇಯವಾಗಿಸಿಕೊಂಡಿದ್ದ ಡಾ. ವಿಜಯಲಕ್ಷ್ಮಿ, ದಿನದ ಬಹುತೇಕ ಸಮಯ ಆಸ್ಪತ್ರೆಯಲ್ಲೇ ಕಳೆಯುತ್ತಿದ್ದರು. ಈ ಮೂಲಕ ರೋಗಿಗಳ ಪಾಲಿಗೆ ದೇವತೆಯಾಗಿದ್ದರು. ಸಮಯದ ಪರಿವೆಯೇ ಇಲ್ಲದೇ ಚಿಕಿತ್ಸೆ ನೀಡಬೇಕೆಂಬ ಉದ್ದೇಶಕ್ಕೆ ಡಾ.ವಿಜಯಲಕ್ಷ್ಮಿ ವಾಚ್ ಕಟ್ಟುತ್ತಲೇ ಇರಲಿಲ್ಲವಂತೆ. ಇಂಥಾ ಸೇವಾ ಮನೋಭಾವದ ಫಲವಾಗಿ ಅವರು ಗಳಿಸಿದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ.

ಮಾದರಿ ವ್ಯಕ್ತಿತ್ವ

ಈವತ್ತಿಗೂ ನಮ್ಮ ನಾಡಿನಲ್ಲಿ ಒಂದಷ್ಟು ಮಂದಿ ವೃತ್ತಿಯನ್ನು ಸೇವೆಯೆಂದು ಪರಿಗಣಿಸಿರುವ ಮಾದರಿ ವೈದ್ಯರಿದ್ದಾರೆ. ಅದರಾಚೆಗೆ ಈ ವೃತ್ತಿಯೀಗ ಹಣ ಬಾಚುವ ದಂಧೆಯಾಗಿಯೂ ರೂಪಾಂತರ ಹೊಂದಿದೆ. ಹೀಗೆ ಕಾಸು ಮಾಡೋದನ್ನೇ ಉದ್ದೇಶವಾಗಿಸಿಕೊಂಡಿರುವವರೆಲ್ಲ ವಿಜಯಲಕ್ಷ್ಮಿ ಅವರ ಸೇವಾ ಮನೋಭಾವವನ್ನು ನೋಡಿ ಕಲಿಯೋದಿದೆ. ಇಂಥಾ ಮಾದರಿ ವ್ಯಕ್ತಿತ್ವದಿಂದಾಗಿಯೇ ದೇಶ, ವಿದೇಶಗಳಲ್ಲೂ ಅವರ ಸಾಧನೆ ಗುರುತಾಗಿದೆ. ತಮ್ಮ ಬದುಕನ್ನೇ ವೈದ್ಯ ವೃತ್ತಿಗೆ ಸಮರ್ಪಿಸಿದ ಡಾ. ವಿಜಯಲಕ್ಷ್ಮಿ ರಾತ್ರೋರಾತ್ರಿ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗುವ ವೈದ್ಯರ ನಡುವೆ ಭಿನ್ನವಾಗಿ ನಿಲ್ಲುತ್ತಾರೆ. ಇವರನ್ನು ಅಂಥಾ ಯಾರೊಂದಿಗೂ ಹೋಲಿಸುವಂತೆಯೇ ಇಲ್ಲ. ಯಾಕೆಂದರೆ ಅವರು ಸೇವೆಯಿಂದಲೇ ಫೇಮಸ್ ಆದವರು. ಡಾ.ವಿಜಯಲಕ್ಷ್ಮಿ ದೇಶಮಾನೆ ಅವರಿಗೆ ಪದ್ಮಶ್ರೀ ಗೌರವ ಸಂದಿರೋದು ನಿಜಕ್ಕೂ ಈ ನಾಡಿನ ಸರ್ವರೂ ಖುಷಿ ಪಡುವ ಸಂಗತಿ.
ಹೀಗೆ ಸೇವೆಯಿಂದ, ವ್ಯಕ್ತಿತ್ವದಿಂದ ಮಾದರಿಯಾಗಿರುವ ಅಪ್ರತಿಮ ಸಾಧಕಿ ಡಾ. ವಿಜಯಲಕ್ಷ್ಮಿ ದೇಶಮಾನೆ ಅವರಿಗೆ ಇದೀಗ ಎಪ್ಪತ್ತರ ಹರೆಯ. ಅವರಿಗೀಗ ಪದ್ಮಶ್ರೀ ಪುರಸ್ಕಾರ ಒಲಿದು ಬಂದಿದೆ. ಅವರು ಸಾಧಕರೂ ಹೌದು. ಸೇವಕರೂ ಹೌದು. ಡಾ. ವಿಜಯಲಕ್ಷ್ಮಿ ದೇಶಮಾನೆ ಕಡು ಬಡತದ ಕೆಸರಿನಲ್ಲಿ ಅರಳಿದ ತಾವರೆಯಂಥವರು. ಬೆಂಕಿಯಲ್ಲಿ ಅರಳಿದ ಹೂವು ಎಂದರೂ ಅತಿಶಯವೇನಲ್ಲ. ದೇಶದ ಪ್ರಸಿದ್ಧ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ತಜ್ಞರಾಗಿ ಗುರುತಿಸಿಕೊಂಡಿರುವ ಅವರು, ಬೆಂಗಳೂರಿನ ಕಿದಾಯಿ ಸ್ಮಾರಕ ಕ್ಯಾನ್ಸರ್ ಆಸ್ಪತ್ರೆಯ ನಿರ್ದೇಶಕ ರಾಗಿ ಮಾಡಿಇರುವ ಸೇವಾ ಕಾರ್ಯಗಳನ್ನು ಈ ನಾಡು ಎಂದಿಗೂ ಮರೆಯುವಂತಿಲ್ಲ. ಸಾವಿನ ತೆಕ್ಕೆಯಲ್ಲಿದ್ದ ಅದೆಷ್ಟೋ ಕ್ಯಾನ್ಸರ್ ರೋಗಿಗಳನ್ನು ಬದುಕಿಸಿದ ಖ್ಯಾತಿ ಅವರಿಗಿದೆ.
ಇಂಥಾ ಸಾಧಕಿ ಡಾ. ವಿಜಯಲಕ್ಷ್ಮಿ ದೇಶಮಾನೆ ಅವರು ಹುಟ್ಟಿ ಬೆಳೆದಿದ್ದು ಕಲ್ಬುರ್ಗಿಯ ಕೊಳೆಗೇರಿಯೊಂದರಲ್ಲಿ. ಆದರ್ಶಗಳನ್ನೇ ಮೈಗೂಡಿಸಿಕೊಂಡಿದ್ದ ಚಮ್ಮಾರ ಬಾಬುರಾವ್ ಅವರ ಹೆಮ್ಮೆಯ ಮಗಳು. ಬಾಬೂ ರಾವ್ ಅವರು ಸ್ವಾತಂತ್ರ್ಯ ಹೋರಾಟದ ಪ್ರಭಾವಕ್ಕೆ ಒಳಗಾಗಿದ್ದವರು. ಮನೆಯಲ್ಲಿ ಸರಿಸುಮಾರು ಹತ್ತು ಮಂದಿಯಿದ್ದರು. ಇಂಥಾ ಸಂಸಾರವನ್ನು ವಿಜಯಲಕ್ಷ್ಮಿ ಅವರ ಹೆತ್ತವರು ಸರಿದೂಗಿಸಿಕೊಂಡು ಹೋದ ಪರಿಯೇ ನಿಜಕ್ಕೂ ಅಚ್ಚರಿ. ಆ ಸಂಸಾರದಲ್ಲಿ ಒಂದು ಹೊತ್ತಿನ ಊಟಕ್ಕೂ ಪರದಾಡುವಂಥಾ ಸ್ಥಿತಿಯಿತ್ತು. ಇದೆಲ್ಲದರ ನಡುವೆಯೂ ಬಾಬುರಾಯರು ಎದೆಗುಂದದೆ ತಮ್ಮ ಯಾವ ಮಗುವನ್ನು ಶಿಕ್ಷಣದಿಂದ ವಂಚಿತವಾಗಿಸದೆ ಚೆಂದಗೆ ಓದಿಸಿ ಬೆಳೆಸಿದ್ದರು. ತಮ್ಮ ಮಗಳು ವೈದ್ಯೆಯಾಗಬೇಕೆಂಬ ಕನಸು ಕಂಡಿದ್ದ ಹೆತ್ತವರು ಬೆವರನ್ನು ರಕ್ತದಂತೆ ಬಸಿದು ಅದನ್ನು ಸಾಧ್ಯವಾಗಿಸಿಕೊಂಡಿದ್ದರು. ಹೆತ್ತವರ ಶ್ರಮವನ್ನು ಸಾರ್ಥಕಗೊಳಿಸುವಂತೆ ಬೆಳೆದು ನಿಂತ ಹೆಮ್ಮೆಯ ಮಗಳಾಗಿಯೂ ವಿಜಯಲಕ್ಷ್ಮಿ ಗಮನ ಸೆಳೆಯುತ್ತಾರೆ.

ಎಂಥಾ ಕಷ್ಟವಿತ್ತು ಗೊತ್ತಾ?


ಡಾ. ವಿಜಯಲಕ್ಷ್ಮಿ ಅವರ ಅಮ್ಮ ಬೀದಿ ಬದಿಯಲ್ಲಿ ತರಕಾರಿ ಮಾರುತ್ತಿದ್ದರು. ವಿಜಯಲಕ್ಷ್ಮಿ ತಮ್ಮ ಅಣ್ಣನ ಜೊತೆ ತಾವೂ ತಲೆಯ ಮೇಲೆ ತರಕಾರಿ ಬುಟ್ಟಿ ಹೊತ್ತು ಲಿಂಗಾಯತರ ವಾಡೆಗಳಲ್ಲಿ ಮಾರಾಟ ಮಾಡಿ ಕುಟುಂಬಕ್ಕೆ ಆಸರೆ ಆಗುತ್ತಿದ್ದರು. ಅವರಿಗೆ ಆ ಕಾಲದಿಂದಲೇ ಯಾವ ಹಮ್ಮು ಬಿಮ್ಮುಗಳೂ ಇರಲಿಲ್ಲ. ಅವರ ಪ;ಆಲಿಗೆ ಗುರಿ ತಲುಪೋದಷ್ಟೇ ಮುಖ್ಯವಾಗಿತ್ತು. ಇಂಥಾ ಕಾರಣಗಳಿಂದಲೇ ಕಡೆಗೂ ಜಾಣೆ ವಿಜಯಲಕ್ಷ್ಮಿ ಎಂಬಿಬಿಎಸ್‌ಗೆ ಆಯ್ಕೆಯಾಗಿದ್ದರು. ಸಲೀಸಾಗಿ ಆಯ್ಕೆಯಾದರೂ ಕೂಡಾ ಡೊಡ್ಡ ಮಟ್ಟದ ಫೀಸು ಪಾವತಿಸಲು ನಹೆತ್ತವರಿಗೆ ಸಾಧ್ಯವಾಗಲಿಲ್ಲ. ಕಡೆಗೆ ಮಗಳ ಎಂಬಿಬಿಎಸ್ ಪ್ರವೇಶಕ್ಕಾಗಿ ಅವರ ತಾಯಿ ತಮ್ಮ ಮಾಂಗಲ್ಯವನ್ನೇ ಮಾರಲು ಮುಂದಾಗಿದ್‌ದರು. ಆ ಕಾಲದಲ್ಲಿ ಮಾಂಗಲ್ಯದ ಸುತ್ತಾ ನಾನಾ ನಂಬಿಕೆ ಭಕ್ತಿ ಇತ್ತು. ಅದೆಲ್ಲವನ್ನೂ ಮೀರಿಒ ಮಗಳ ಭವಿಷ್ಯಕ್ಕಾಗಿ ಮಾಂಗಲ್ಯವನ್ನೇ ಒತ್ತೆಯಿಟ್ಟ ತಾಯಿ ಕೂಡಾ ಆದರ್ಶಪ್ರಾಯವಾಗಿ ಕಾಣಿಸುತ್ತಾರೆ.
ಇಂಥಾ ಕಡುಗಷ್ಟದಿಂದ ಎಂಬಿಬಿಎಸ್ ಸೇರಿಕೊಂಡಿದ್ದ ವಿಜಯಲಕ್ಷ್ಮಿ ಅವರು ಆ ನಂತರ ಸಾಗಿದ ಹಾದಿ ಯಾರಿಗೇ ಆದರೂ ಸ್ಫೂರ್ತಿಯಂತಿರೋದು ಸುಳ್ಳಲ್ಲ. ಡಾ. ವಿಜಯಲಕ್ಷ್ಮಿ ಅವರು ಈ ದೇಶದ ಖ್ಯಾತ ಕ್ಯಾನ್ಸರ್ ಶಸ್ತ್ರವೈದ್ಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡರು. ಅತ್ಯಂತ ಶ್ರದ್ಧೆ ಮತ್ತು ಪರಿಣತಿಯನ್ನು ಬೇಡುವ ಮಹತ್ವಪೂರ್ಣ ಕೆಲಸವದು. ಕ್ಯಾನ್ಸರ್‌ಗೆ ಶಸ್ತ್ರಕ್ರಿಯೆ ಎಂದರೆ ಸಾಮಾನ್ಯ ಸಂಗತಿಯೇನಲ್ಲ. ತುಸು ಎಚ್ಚರ ತಪ್ಪಿದರೂ ಅನಾಹುತವಾಗುವ ಸಾಧ್ಯತೆಗಳಿದ್ದಾವೆ. ಅಂಥಾದ್ದದನ್ನು ಲೀಲಾಜಾಲವಾಗಿಸಿಕೊಂಡ ವಿಜಯಲಕ್ಷ್ಮಿ ಅವರು ನಲವತ್ತು ವರ್ಷಗಳ ಕಾಲ ನಿರಂತರವಾಗಿ ಸೇವೆ ಸಲಲಿಸಿದ್ದಾರೆ. ಸರ್ಜನ್ ಆಗಿ ಸಾವಿರಾರು ರೋಗಿಗಳ ಬಾಳಿಗೆ ಬೆಳಕಾಗಿದ್ದಾರೆ.

ಟೀಚರ್ ಆಗೋ ಕನಸು


ಹಾಗಂತ ಎಳವೆಯಿಂದಲೇ ವಜಯಲಕ್ಷ್ಮಿ ಅವರಿಗೆ ವೈದ್ಯೆಯಾಗಬೇಕೆಂಬ ಕನಸೇನೂ ಇರಲಿಲ್ಲ. ಬಾಲ್ಯದಿಂದಲೇ ಅವರಿಗೆ ಶಿಕ್ಷಕಿಯಾಗಬೇಕೆಂಬ ಆಸೆಯಿತ್ತಂತೆ. ಆದರೆ ತಂದೆ ತಾಯಿಗೆ ಮಗಳು ವೈದ್ಯಳಾಗಬೇಕೆಂಬ ಹಂಬಲವಿತ್ತು. ಹುಟ್ಟಿನಿಂದ ತಮ್ಮ ಜನಾಂಗಕ್ಕೆ ಚಪ್ಪಲಿಗೆ ಸೂಜಿ ಸೇರಿಸಿ ಅಭ್ಯಾಸವಿದೆ. ಹಾಗಾಗಿ ಅಂಗಾಂಗಗಳನ್ನೂ ಸೂಜಿಯ ಮೂಲಕ ಬೆಸೆಯಬಹುದು ಎಂಬ ಭರವಸೆ ಆ ಹೆತ್ತವರಿಗಿತ್ತು. ಈ ಕಾರಣದಿಂದಲೇ ಸರ್ಜನ್ ಆಗುವುದು ಕಷ್ಟವಲ್ಲ ಎಂದು ಭಾವಿಸಿ ವೈದ್ಯಳಾದೆ ಎನ್ನುವ ಡಾ. ವಿಜಯಲಕ್ಷ್ಮಿಯವರು ಸರಳತೆಗೆ ಮಾದರಿಯಾಗಬಲ್ಲಂಥಾ ಸರಳ ವ್ಯಕ್ತಿತ್ವದವರು. ಕನ್ನಡ ಮಾಧ್ಯಮದ ವಿದ್ಯಾರ್ಥಿಯಾಗಿದ್ದರಿಂದ ಎಂಬಿಬಿಎಸ್‌ಗೆ ಸೇರಿದ ಆರಂಭದ ವರ್ಷದಲ್ಲಿ ಇವರು ಓದಿನಲ್ಲಿ ತುಸು ಹಿಂದೆ ಬಿದ್ದರು. ಅನಂತರದ ವರ್ಷಗಳಲ್ಲಿ ಹಿಂದೆ ತಿರುಗಿ ನೋಡಿದ್ದೇ ಇಲ್ಲ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಪುರಸ್ಕಾರ, ಬಿರುದು ಬಾವಲಿ, ಚಿನ್ನದ ಪದಕಗಳು ಬೇಡವೆಂದರೂ ಇವರನ್ನು ಹುಡುಕಿ ಬಂದಿದ್ದವು. ಇದೀಗ ಪದ್ಮಶ್ರೀ ಪ್ರಶಸ್ತಿಯ ಪುಳಕ ಈ ಮಾದರಿ ವೈದ್ಯೆಗೆ ಒಲಿದು ಬಂದಿದೆ.
ಅವರಿಗೆ ಈಗಾಗಲೇ ಸಿಕ್ಕಿರುವ ಪ್ರಶಸ್ತಿಗಳ ಪಟ್ಟಿ ನೋಡಿದರೇನೇ ಅಚ್ಚರಿ ಆಗದಿರೋದಿಲ್ಲ. ಮಹಿಳಾ ಶಿರೋಮಣಿ ಪ್ರಶಸ್ತಿ, ಅಂತಾರಾಷ್ಟ್ರೀಯ ಅಧ್ಯಯನ ಕೇಂದ್ರದ ಸ್ವರ್ಣಪದಕ, ರಾಷ್ಟ್ರೀಯರತ್ನ ಪ್ರಶಸ್ತಿ, ಅಂತಾರಾಷ್ಟ್ರೀಯ ಉನ್ನತ ವೈದ್ಯ ಪ್ರಶಸ್ತಿ, ಅಮೆರಿಕದ ಬಯೋಗ್ರಾಫಿಕಲ್ ಸಂಸ್ಥೆಯಿಂದ ವರ್ಷದ ನಾರಿ ಪ್ರಶಸ್ತಿ ಸೇರಿದಂತೆ ಅನೇಕಾನೇಕ ಪ್ರಶಶ್ತಿಗಳು ಅವರನ್ನು ಅರಸಿ ಬಂದಿವೆ. ಅವರಿಗೆ ಇದುವರೆಗೂ ಸಿಕ್ಕಿರುವ ಪ್ಗರಶಸ್ತಿಗಳನ್ನೆಲ್ಲ ದಾಖಲಿಸಿದರೆ ಅದೇ ಒಂದು ಸುದೀರ್ಘವಾದ ಲೇಖನವಾದೀತೇನೋ. ಈವತ್ತಿಗೆ ಸಣ್ಣಪುಟ್ಟ ಪ್ರಶಸ್ತಿಗಳಿಗೂ ಮುಗಿಬೀಳುವಂಥಾ ವಾತಾವರಣವಿದೆ. ಹಾಗೆ ಪ;ಐಪೋಟಿ ನಡೆಸಿ ಪ್ರಶಸ್ತಿ ಪಡೆದುಕೊಂಡೋರೆಲ್ಲ ಅದನ್ನೇ ಕಿರೀಟವೆಂಬಂತೆ ಭ್ರಮಿಸಿಕೊಂಡು ಮೆರೆಯೋದೂ ಇದೆ. ಆದರೆ, ಅತ್ಯಂತ ವಿನಮ್ರವಾಗಿ ಪ್ರಶಸ್ತಿ ಸ್ವೀಕಾರ ಮಾಡಿ, ಅಷ್ಟೇ ವಿಧೇಯತೆಯಿಂದ ಬದುಕುವ ಅವರ ಗುಣ ಎಲ್ಲರಿಗೂ ಮಾದರಿ.

ಸಾಧನೆಯ ಶಿಖರ


ಪ್ರಖ್ಯಾತ ಕ್ಯಾನ್ಸರ್ ತಜ್ಞರಾಗಿ ಹೆಸರಾಗಿರುವ ಡಾ. ವಿಜಯಲಕ್ಷ್ಮಿ ದೇಶಮಾನೆ ಅವರು ನಮ್ಮ ದೇಶದ ಪ್ರತಿಷ್ಠಿತ ಆಸ್ಪತ್ರೆಯಾದ ಬೆಂಗಳೂರಿನ ಕಿದ್ವಾಯ್ ಸ್ಮಾರಕ ಆಸ್ಪತ್ರೆಯ ನಿರ್ದೇಶಕರಾಗಿದ್ದರು. ಅಲ್ಲಿ ಅವರದು ಮೂವತೈದು ವರ್ಷಗಳಷ್ಟು ಸುದೀರ್ಘ ಕಾಲಾವಧಿಯಲ್ಲಿ ಸೇವೆ ಸಲ್ಲಿಸಿದ್ದರು. ಸ್ತನ ಕ್ಯಾನ್ಸರ್ ಶಸ್ತ್ರಕ್ರಿಯಾ ತಜ್ಞರಾಗಿ ಅವರು ಸಾಧಿಸಿರುವ ಕುಶಲತೆ ಕಂಡು ಭಾರತೀಯ ವೈದ್ಯ ಸಮೂಹವೇ ಬೆರಗಾಗಿದೆ. ಸೇವೆ ಮಾಡುವ ಸಲುವಾಗಿಯೇ ಅವಿವಾಹಿತರಾಗಿ ಉಳಿದ ತ್ಯಾಗಮಯಿಯಾಗಿಯೂ ವಿಜಯಲಕ್ಷ್ಮಿ ಅವರು ಗಮನ ಸೆಳೆಯುತ್ತಾರೆ. ಈ ಅನುರಾಗಮಯಿ. ಈ ಮೂಲಕ ಜನಸೇವೆಗೆಂದೇ ತಮ್ಮಿಡೀ ಬದುಕನ್ನು ಮುಡಿಪಾಗಿಟ್ಟಿರುವ ವಿಜಯಲಕ್ಷ್ಮಿ ಅವರು ಎಪ್ಪತ್ತರಾಚೆಗೆ ವಯಸ್ಸು ದಾಟಿಕೊಂಡಿರುವ ಈ ಘಳಿಗೆಯಲ್ಲಿಯೂ ಅತ್ಯಂತ ಲವಲವಿಕೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ.
ಇಷ್ಟೆಲ್ಲ ಸಾಧನೆಯನ್ನವರು ಮೌನವಾಗಿ, ಮೆಲು ಮಾತಿನ ಮೂಲಕವೇ ಮಾಡುತ್ತಾ ಬಂದಿದ್ದಾರೆ. ತಮ್ಮ ಸಾಧನೆಯ ಬಗ್ಗೆ ಅವರು ಹೇಳಿಕೊಂಡವರಲ್ಲ. ಅಂಥಾ ತೋರಿಕೆಗಳು ಅವರ ವ್ಯಕ್ತಿತ್ವನ್ನು ಸವರಿಕೊಂಡು ಹೋಗಲೂ ಸಾಧ್ಯವಿಲ್ಲವೇನೋ ॒ಅವರು ಎಂದೂ ಪ್ರಚಾರದ ಹಿಂದೆ ಬಿದ್ದವರಲ್ಲ. ತಮ್ಮ ಜೀವಮಾನದ ಅಷ್ಟೂ ಗಳಿಕೆಯನ್ನು ಈ ಸಮಾಜಕ್ಕೆ ಮರಳಿ ಕೊಡುವ ಮೂಲಕವೇ ಅವರು ಪೂಜ್ಯ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ನಿವೃತ್ತರಾದ ಬಳಿಕವೂ ವಿಶ್ರಾಂತಿ ಪಡೆಯದೆ ಸೇವೆಯಲ್ಲಿಯೇ ನಿರತರಾಗಿರೋದು ಅವರ ನಿಜವಾದ ಹೆಗ್ಗಳಿಕೆ. ನಿಖರವಾದ ಟೈಂ ಟೇಬಲ್ ಹಾಕಿಕೊಂಡು ಅದರಂತೆಯೇ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಪ್ರತೀ ತಿಂಗಳಲ್ಲಿ ಹದಿನೈದು ದಿನ ಕ್ಯಾನ್ಸರ್ ಸೊಸೈಟಿಗೆ ತಮ್ಮ ಸಮಯವನ್ನು ಮೀಸಲಿಟ್ಟಿದ್ದಾರೆ. ಪ್ರತೀ ತಿಂಗಳ ಮೂರು ದಿನ ಅಬಲಾಶ್ರಮಕ್ಕೆ ಮೀಸಲಾಗಿಸಿದ್ದಾರೆ. ಮಿಕ್ಕುಳಿದ ದಿನಗಳಲ್ಲಿಯೂ ಅವರು ವಿಶ್ರಾಂತಿ ಪಡೆದುಕೊಳ್ಳೋದಿಲ್ಲ. ಕ್ಯಾನ್ಸರ್ ಬಗೆಗಿನ ಜಾಗೃತಿ ಶಿಬಿರ, ಸಮಾಲೋಚನೆ ಹಾಗೂ ಸಂಶೋಧನೆಗಳಿಗೆ ಮುಡಿಪಾಗಿಡುತ್ತಾ ಬಂದಿದ್ದಾರೆ.

ಬಹುಶಃ ಹೀಗೆ ತಮ್ಮ ಜೀವಿತದ ಪ್ರತೀ ಘಳಿಗೆಗಳನ್ನೂ ಜನ ಸೇವೆಗೆಂದೇ ಮೀಸಲಾಗಿಟ್ಟವರು ಬಲು ವಿರಳ. ಉಇಂಥಾದ್ದೊಂದು ನಿರ್ಧಾರವನ್ನು ತಪಸ್ಸಿನಂತೆ ಆಚರಿಸಿಕೊಂಡು ಬರುತ್ತಿರುವ ವಿಜಯಲಕ್ಷ್ಮಿ ದೇಶಮಾನೆ ಅವರ ಬಗ್ಗೆ ಯಾರಿಗಾದರೂ ಅಭಿಮಾನ ಮೂಡಿಕೊಳ್ಳದಿರಲು ಸಾಧ್ಯವೇ ಇಲ್ಲ. ಎಲ್ಲವನ್ನೂ ಒಂದು ನಿಷ್ಕಳಂಕ ನಗೆಯ ಮೂಲಕವೇ ಎದುರುಗೊಳ್ಳುವ ವರು ನಮಗೆ ಸದಾ ಕಾಲವೂ ಪ್ರೇರಣೆ. ಬಹುಶಃ ಅವರು ಸರ್ವ ಕಾಲಕ್ಕೂ ನಮ್ಮ ನಾಡಿನಲ್ಲಿ ಆದರ್ಶ ವ್ಯಕ್ತಿತ್ವವಾಗಿ ಉಳಿದುಕೊಳ್ಳುತ್ತಾರೆ. ಡಾ. ವಿಜಯಲಕ್ಷ್ಮಿ ದೇಶಮಾನೆ ನಮ್ಮ ಇಡೀ ಬದುಕಿಗೆ ದಾರಿ ತೋರಬಲ್ಲ ಬೆಳಕು. ಅವರ ನಿಷ್ಕಳಂಕ ವ್ಯಕ್ತಿತ್ವದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ವಿಶೇಷವೆಂದರೆ ಕಾರ್ಖಾನೆಯೊಂದರಲ್ಲಿ ಸಾಮಾನ್ಯ ಕಾರ್ಮಿಕರಾಗಿದ್ದವರು ಸ್ವಾತಂತ್ರ್ಯ ಹೋರಾಟಗಾರ ಬಾಬುರಾವ್ ದೇಶಮಾನೆ. ಅವರು ಮಾದಿಗ ಜನಾಂಗಕ್ಕೆ ಸೇರಿದವರು. ಇಂತಾ ದಮನಿತ ಸಮುದಾಯದಲ್ಲಿ ಹುಟ್ಟಿ ಸಾಮಾಜಿಕವಾಗಿ, ಆರ್ಥಿಕವಾಗಿ ನಾನಾ ಕಷ್ಟ ಕಂಡುಂಡಿದ್ದ ಬಾಬೂ ರಾವ್ ತಮ್ಮ ಮಗಳನ್ನು ಅಸಾಮಾನ್ಯವಾಗಿ ಬೆಳೆಸಿದ ಸಾಧಕರೂ ಹೌದು.
ತಂದೆಯೂ ಆದರ್ಶ ವ್ಯಕ್ತಿ
ಸಾಮಾನ್ಯವಾಗಿ ಯಾವಚುದೇ ಮಕ್ಕಳನ್ನು ಸಾಧಕರನ್ನಾಗಿ ಬೆಳೆಸೋದರಲ್ಲಿ ಹೆತ್ತವರ ಪಾಲು ಬೆಟ್ಟದಷ್ಟಿರುತ್ತದೆ. ಆ ನಿಟ್ಟಿನಲ್ಲಿ ಹೇಳೋದಾದರೆ ಡಾ. ವಿಜಯಲಕ್ಷ್ಮಿ ದೇಶಮಾನೆ ಅವರ ತಂದೆ ಬಾಬೂರಾವ್ ದೇಶಮಾನೆ ನಿಜಕ್ಕೂ ಸಾಧಕರೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ತಮ್ಮ ಆರು ಹೆಣ್ಣು ಮಕ್ಕಳಿಗೂ ಕೂಡಾ ಉನ್ನತ ಶಿಕ್ಷಣ ಪಡೆಯುವ ಅವಕಾಶ ಮಾಡಿಕೊಟ್ಟ ನಿಜದ ಛಲಗಾರ ಬಾಬೂಬೂರಾವ್. ಅವರ ಆರೂ ಮಕ್ಕಳೂ ಕೂಡಾ ತಮ್ಮದೇ ರೀತಿಯಲ್ಲಿ ಸಾಧಕರಾಗಿದ್ದಾರೆ. ವಿಜಯಲಕ್ಷ್ಮಿ ಅವರ ಅಣ್ಣನ ಕೂಡಾ ವಕೀಲ ವೃತ್ತಿಯಲ್ಲಿ ಪ್ರಖ್ಯಾತಿ ಗಳಿಸಿಕೊಂಡಿರುವವರು. ಡಾ. ವಿಜಯಲಕ್ಷ್ಮಿ ದೇಶಮಾನೆ ಇಡೀ ದೇಶದಲ್ಲಿ ತಮ್ಮ ಪ್ರತಿಭೆ ಮತ್ತು ಸೇವೆಯಿಂದ ಖ್ಯಾತರಾಗಿದ್ದಾರೆ. ಭಾರತದಲ್ಲಿ ಕೊರತೆಯಿಲ್ಲ. ಆದರೆ, ವಿದೇಶದಲ್ಲಿ ನೆಲೆಸಿ ಐಷಾರಾಮಿ ಜೀವನ ನಡೆಸುವವರೇ ಹೆಚ್ಚು. ಬಯಸಿದ್ದರೆ ವಿಜಯಲಕ್ಷ್ಮಿ ಅವರಿಗೂ ಅಂಥಾ ಸುಪ್ಪತ್ತಿಗೆ ದಕ್ಕಿಸಿಕೊಳ್ಳೋದು ಕಷ್ಟವಿರಲಿಲ್ಲ. ಆದರೆ ಅವರದ್ದು ತನ್ನ ಜನರ ಸೇವೆ ಮಾಡಬೇಕೆಂಬ ಉಜತ್ಕಟ ಆಕಾಂಕ್ಷೆ. ಈ ಕಾರಣದಿಂದಲೇ ಅವರು ಭಿನ್ನವಾಗಿ ನಿಲ್ಲುತ್ತಾರೆ. ಬೇಷರತ್ತಾಗಿ ಸರ್ವರ ಪ್ರೀತಿಗೆ ಪಾತ್ರರಾಗಿದ್ದಾರೆ.
ಈಗಂತೂ ಪ್ರಸಿದ್ಧಿ ಅನ್ನೋದು ಭ್ರಮೆಯ ಕೊಂಪೆಯಾಗಿ ಬಿಟ್ಟಿದೆ. ಯಾರ್‍ಯಾರೋ ಇಲ್ಲಿ ಪ್ರಸಿದ್ಧಿ ಎಂಬ ಭ್ರಾಮಕ ಕಿರೀಟ ಹೊತ್ತು ಮೆರೆಯುತ್ತಿದ್ದಾರೆ. ಇಂಥಾ ಸಂತೆಯಲ್ಲಿ ನಮಗೆ ನಿಜಕ್ಕೂ ಮಾದರಿಯಾಗಬೇಕಾದದ್ದು, ಆದರ್ಶವಾಗಬೇಕಾದದ್ದು ಯಾರೆಂಬುದೇ ಯಕ್ಷಪ್ರಶ್ನೆಯಾಗಿದೆ. ಈ ನಿಟ್ಟಿನಲ್ಲಿ ಇಂಥಾ ಪ್ರಶ್ನೆ ಕಾಡಿದಾಗೆಲ್ಲ ವಿಜಯಲಕ್ಷ್ಮಿ ದೇಶಮಾನೆಯವರಂಥವರು ಕಣ್ಣೆದುರು ನಿಲ್ಲುತ್ತಾರೆ. ಇವರ ಹೊರತು ಬೇರ್‍ಯಾರು ತಾನೇ ನಮ್ಮೆಲ್ಲರಿಗೆ ಆದರ್ಶಪ್ರಾಯರಾಗಲು ಸಾಧ್ಯ. ಇವರು ಭಾಷಣ ಮಾಡಲಿಲ್ಲ, ಮಾತಿನಲ್ಲಿ ಮಂಟಪ ಕಟ್ಟಿ ಜನರನ್ನು ಮರುಳು ಮಾಡಲಿಲ್ಲ. ಏನೇನೋ ಬೋಧಿಸುತ್ತಾ ತಾವು ಬೇರೆ ರೀತಿಯಲ್ಲಿ ಬದುಕಲಿಲ್ಲ. ಆದರೆ ಅವರ ಬದುಕಿನ ರೀತಿಗಿಂತಲೂ ಬೋಧನೆ ಬೇರೇನಿಲ್ಲ. ಡಾ ವಿಜಯಲಕ್ಷ್ಮಿ ದೇಶಮಾನೆ ಮೇರು ವ್ಯಕ್ತಿತ್ವ ಹೊಂದಿರುವವರು. ಈ ತಲೆಮಾರಿನ ವೈದ್ಯರು, ಇತರೇ ಕ್ಷೇತ್ರಗಳವರು ಅವರಿಂದ ಕಲಿತುಕೊಳ್ಳೋದು ಬೇಕಾದಷ್ಟಿದೆ.

Tags: #drvijayalakshmideshmane#inspiration#lifestory

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
history of bird flu: ಹಕ್ಕಿ ಜ್ವರದ ಬೆನ್ನಟ್ಟಿ ಬರಲಿದೆಯಾ ಭಯಾನಕ ವೈರಸ್?

history of bird flu: ಹಕ್ಕಿ ಜ್ವರದ ಬೆನ್ನಟ್ಟಿ ಬರಲಿದೆಯಾ ಭಯಾನಕ ವೈರಸ್?

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.