-ಪುಟ್ಟ ಜೀವಿಗಳೆಲ್ಲ ಎಲ್ಲಿ ಹೋದವು?
-ಗುಬ್ಬಚ್ಚಿಗಳನ್ನು ಸಂಹರಿಸಿದ್ದು ಆಧುನೀಕರ!
ನಮ್ಮ ನಡುವಿದ್ದ ಮನುಷ್ಯರು ಮರೆಯಾದರೆ ಒಂದಷ್ಟು ದಿನಗಳ ನಂತರ ಪರ್ಮನೆಂಟಾಗಿ ಮರೆತು ಬಿಡುವವರು ನಾವು. ಹಾಗಿರುವಾಗ ನಮ್ಮ ಆಸುಪಾಸಲ್ಲಿ ಚಿಂವ್ ಗುಡುತ್ತಾ, ಏಕಾಏಕಿ ಕಣ್ಮರೆಯಾಗೋ ಸಣ್ಣಪುಟ್ಟ ಜೀವಿಗಳನ್ನು ನೆನಪಿಟ್ಟುಕೊಳ್ಳೋದುಂಟೇ? ದಶಕದ ಹಿಂದೆ ಸುಮ್ಮನೆ ಪೇಟೆಯಲ್ಲಿ ಹಾದುಹೋಗುವಾಗ ಕಾಳುಗಳನ್ನು ತಿನ್ನುತ್ತಿರುವ ಗುಬ್ಬಿಗಳ ಹಿಂಡೇ ಕಾಣಸಿಗುತ್ತಿತ್ತು. ಆದರೀಗ ಪರಿಸ್ಥಿತಿ ಪಟ್ಟಂಪೂರಾ ಬದಲಾಗಿದೆ. ನಗರದಲ್ಲಿ ಗುಬ್ಬಚ್ಚಿಗಳ ಕಲರವ ಕಣ್ಮರೆಯಾಗಿದೆ. ಚಿಂವ್ ಚಿಂವ್ ಎನ್ನುವ ಮಧುರ ಧ್ವನಿ ಮಾಯವಾಗಿದೆ. ಹೀಗೇ ಮುಂದುವರೆದರೆ ಮುಂದೊಂದು ದಿನ ಗುಬ್ಬಚ್ಚಿಗಳು ಅಳಿದು ಹೋದ ಪಕ್ಷಿ ಪ್ರಬೇಧಗಳ ಜೊತೆ ಸೇರುವ ಲಕ್ಷಣ ದಟ್ಟವಾಗಿದೆ. ನಮ್ಮ ಮುಂದಿನ ಪೀಳಿಗೆ ಈ ಗುಬ್ಬಿಗಳನ್ನು ಗೂಗಲ್ಲಿನಲ್ಲಿ ನೋಡಿ ಪುಳಕಗೊಳ್ಳಬೇಕಾಗಿ ಬರ ಬಹುದೇನೋ. ಆದರೆ, ಸಣ್ಣ ದೇಹದ ಗುಬ್ಬಚ್ಚಿಗಳ ಕಣ್ಮರೆ ದೊಡ್ಡ ಆಘಾತವೊಂದರ ಮುನ್ಸೂಚನೆ ಅನ್ನೋದನ್ನು ಯಾರೆಂದರೆ ಯಾರೂ ಮರೆಯುವಂತಿಲ್ಲ!
ಒಂದು ಕಾಲದಲ್ಲಿ ಗುಬ್ಬಚ್ಚಿಗಳು ನಮ್ಮಲ್ಲದ ಸಹಜೀವಿಗಳಂತೆ ಸ್ವಚ್ಛಂದವಾಗಿದ್ದವು. ಮನೆ ಶಾಲೆ ಸೇರಿದಂತೆ ಜನ ಸಂದಣಿ ಇರುವ ಪ್ರದೇಶದಲ್ಲಿಯೇ ಗೂಡು ಕಟ್ಟಿಕೊಂಡು ಹಾಯಾಗಿದ್ದವು. ಆದರೆ ಬರ ಬರುತ್ತಾ ಇಂಡಿಯನ್ ರಾಬಿನ್, ಮುನಿಯಾ, ಬುಲ್ ಬುಲ್, ಕಾಜಾಣ, ನವಿಲು, ಕೆಂಬೂತಗಳು ಸಾಕಷ್ಟು ಸಂಖ್ಯೆಯಲ್ಲಿ ಕಾಣಿಸಿಕೊಂಡರೂ ಅದೇಕೋ ಗುಬ್ಬಚ್ಚಿಗಳ ಸುಳಿವೇ ಇಲ್ಲ. ಯಾವುದೇ ಪ್ರದೇಶಗಳಲ್ಲಿ ಆಗಾಗ ಮಾತ್ರವೇ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಗುಬ್ಬಚ್ಚಿಗಳು ಕಾಣಸಿಗೋದಿದೆ. ಆದರೆ ಆ ಕಾಲದಲ್ಲಿದ್ದ ಗುಬ್ಬಚ್ಚಿಗಳ ಸಂಖ್ಯೆಗೂ ಈವಾಗಿನ ಸಂಖ್ಯೆಗೂ ಅಜಗಜಾಂತರ ವ್ಯತ್ಯಾಸಗಳಿದ್ದಾವೆ.
ಎಲ್ಲಿ ಹೋದವು ಗುಬ್ಬಚ್ಚಿಗಳು?

ಹಾಗಾದರೆ ಈ ಗುಬ್ಬಚ್ಚಿಗಳು ಹೀಗೆ ಏಕಾಏಕಿ ಕಣ್ಮರೆಯಾಗಿದ್ದೇಕೆ? ಬದಲಾಗುತ್ತಿರುವ ಪರಿಸರ, ಕಾಂಕ್ರೀಟ್ ಕಾಡುಗಳ ನಡುವೆ ಗೂಡು ಕಟ್ಟಲಾಗದ ಸಂದಿಗ್ಧ ಸ್ಥಿತಿ ಗುಬ್ಬಚ್ಚಿಗಳಿಗೆ ಕಾಡುತ್ತಿದೆ ಅನ್ನಿಸುತ್ತೆ. ಮೊದಲಾದರೆ ಹಂಚಿನ, ಹುಲ್ಲಿನ ಮನೆಗಳು. ಧಾರಾಳವಾದ ಜಾಗ ಗುಬ್ಬಚ್ಚಿಗಳಿಗೆ ಗೂಡು ಕಟ್ಟಲು ಸಿಗುತ್ತಿತ್ತು. ಆಗೆಲ್ಲಾ ಹೊಲಗದ್ದೆಗಳಲ್ಲಿ ಕಾಳು, ಸಣ್ಣ ಪುಟ್ಟ ಕೀಟಗಳು, ಹುಳ ಹುಪ್ಪಟೆಗಳು ಧಾರಾಳವಾಗಿ ಸಿಗುತ್ತಿದ್ದವು. ಈ ಗುಬ್ಬಚ್ಚಿಗಳೂ ಅವುಗಳನ್ನು ತಿಂದು ಸುಖವಾಗಿದ್ದವು. ಈಗ ಕಾಳೂ ಇಲ್ಲ, ಹುಳಗಳೂ ಇಲ್ಲ. ರಾಸಾಯನಿಕ ಸಿಂಪರಣೆಯ ಹೊಡೆತಕ್ಕೆ ಸಣ್ಣ ಪುಟ್ಟ ಹುಳ, ಕೀಟಗಳು ಸತ್ತು ಹೋಗಿವೆ. ಇದರಿಂದ ಹಕ್ಕಿಗಳಿಗೆ ಆಹಾರದ ಕೊರತೆಯಾಗಿರಲೂ ಬಹುದು. ತನ್ನ ನೈಸರ್ಗಿಕ ಆಹಾರವಲ್ಲದ ಅನ್ನವನ್ನು ಹಕ್ಕಿಗಳು ತಿನ್ನುವುದನ್ನು ನೋಡುವಾಗ ನೋವಾಗುತ್ತದೆ. ಹೊಟ್ಟೆಯ ಹಸಿವು ಮತ್ತು ಬದುಕುವ ಆಸೆ ಹಕ್ಕಿಗಳನ್ನು ಮಾನವ ಬಳಸುವ ಆಹಾರವನ್ನು ಸೇವಿಸುವ ಅನಿವಾರ್ಯತೆಗೆ ತಂದು ನಿಲ್ಲಿಸಿದೆ. ಗುಬ್ಬಚ್ಚಿಗಳಿಗೂ ಕೂಡಾ ಅಂಥಾದ್ದೇ ಸ್ಥಿತಿ ಬಂದಿದ್ದೀತು. ಇನ್ನುಳಿದಂತೆ ಮೊಬೈಲ್ ಟವರುಗಳ ವಿಕಿರಣ ಪುಟ್ಟ ಗುಬ್ಬಚ್ಚಿಗಳನ್ನು ತಣ್ಣಗೆ ಕೊಲ್ಲುತ್ತಯಿರೋದನ್ನು ನಂಬದಿರಲಾಗೋದಿಲ್ಲ!
ವಿಶ್ವಾದ್ಯಂತ ಈ ಗುಬ್ಬಿಗಳೀಗ ಅಳಿವಿನಂಚಿನಲ್ಲಿವೆ. ಅವುಗಳ ಸಂತತಿಯನ್ನು ಉಳಿಸುವ ಸಲುವಾಗಿ ಭಾರತದ ನೇಚರ್ ಫಾರೆವರ್ ಸೊಸೈಟಿ ಐವತ್ತು ರಾಷ್ಟ್ರಗಳಲ್ಲಿ ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸುತ್ತಿದೆ. ಈ ಮೂಲಕ ಈ ಜೀವಿಗಳ ಉಳಿವಿಗಾಗಿ ಒಂದಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಬದಲಾದ ಬದುಕು, ಯಾಂತ್ರಿಕ ಜಗತ್ತು, ಪ್ಯಾಕೆಟ್ ಆಹಾರ, ಕೀಟನಾಶಕಗಳ ವಿಪರೀತ ಬಳಕೆ, ಬದಲಾದ ಮಾನವ ಜೀವನ ಶೈಲಿ ಇದಕ್ಕೆ ಗುಬ್ಬಚ್ಚಿಗಳು ಹೊಂದುತ್ತಿಲ್ಲ. ಈ ಕಾರಣದಿಂದಾಗಿ ಅವುಗಳು ಅವನತಿಯತ್ತ ಸಾಗುತ್ತಿವೆ. ಮೊಹಮ್ಮದ್ ದಿಲಾವರ್ ಎಂಬ ವ್ಯಕ್ತಿಯ ನೇತೃತ್ವದಲ್ಲಿ ಆರಂಭವಾದ ನೇಚರ್ ಫಾರೆವರ್ ಸೊಸೈಟಿ ಗುಬ್ಬಚ್ಚಿಗಳ ಹೆಚ್ಚಳಕ್ಕೆ ಶ್ರಮಿಸುತ್ತಿದೆ. ನಮ್ಮೆಲ್ಲದ ಆಧುನಿಕತೆಯ ಹುಚ್ಚು ಪುಟ್ಟ ಪಕ್ಷಿಯೊಂದರ ಬದುಕು ಕಸಿಯುತ್ತಿದೆ. ಇದರ ನಡುವಲ್ಲಿಯೇ ನಮ್ಮ ದೇಶದಲ್ಲಿ ಗುಬ್ಬಚ್ಚಿಯ ಉಳಿವಿಗಾಗಿ ಪ್ರಯತ್ನಗಳು ನಡೆಯುತ್ತಿವೆ. ಇದೆಲ್ಲದರ ನಡುವಲ್ಲಿಯೂ ಗುಬ್ಬಚ್ಚಿಗಳ ಸಂಖ್ಯೆ ದಿನೇ ದಿನೆ ಕ್ಷೀನಿಸುತ್ತಿರೋದು ಮಾತ್ರ ಆಘಾತಕಾರಿ ಸಂಗತಿ.
ಸ್ವಚ್ಚಂದ ಬದುಕು
