-ಜೀವ ತೆಗೆಯಲೂ ಹೇಸದ ರಕ್ಕಸ ಪಡೆಗಳಿವೆ ಎಚ್ಚರ!
-ಎಲ್ಲಿಂದಲೋ ಬರ್ತಾರೆ; ದೋಚಿಕೊಂಡು ಹೋಗ್ತಾರೆ!
ಭಾರತದ ತುಂಬೆಲ್ಲ ನಾನಾ ತೆರನಾದ ಗ್ಯಾಂಗುಗಳು ಸಮಾಜ ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾವೆ. ಸ್ವಾತಂತ್ರ್ಯಾ ನಂತರದಲ್ಲಿ ಹಂತ ಹಂತವಾಗಿ ನಮ್ಮ ರಕ್ಷಣಾ ವ್ಯವಸ್ಥೆ ಬಲಗೊಳ್ಳುತ್ತಾ ಬಂದಿದೆ. ಕರ್ನಾಟಕವೂ ಸೇರಿದಂತೆ ಬಹುತೇಕ ರಾಜ್ಯಗಳ ಪೊಲೀಸ್ ಇಲಾಖೆಗಳು ದೇಶ ಮಟ್ಟದಲ್ಲಿಯೇ ಹೆಸರುವಾಸಿ ಯಾಗಿವೆ. ಈವತ್ತಿಗೆ ಮಿಲಿಟರಿ ವಿಭಾಗದಲ್ಲಿ ನೋಡಿದರೆ, ಭಾರತ ವಿಶ್ವದ ಬಲಾಢ್ಯ ದೇಶಗಳಿಗೆ ಸರಿ ಸಮನಾಗಿ ಬೆಳೆದು ನಿಂತಿದೆ. ದುರಂತವೆಂದರೆ, ಈ ಕ್ಷಣಕ್ಕೂ ಭಾರತವನ್ನು ಆಂತರಿಕವಾಗಿ ಆಂತರಿಕವಾಗಿ ಕೊರೆಯುತ್ತಿರುವಂಥಾ ನಾನಾ ಬಂಧಧೆಗಳು ಮತ್ತು ಮಾಫಿಯಾಗಳನ್ನು ಹತ್ತಿಕ್ಕುವಲ್ಲಿ ನಮ್ಮ ಆಂತರಿಕ ರಕ್ಷಣಾ ವ್ಯವಸ್ಥೆ ಪದೇ ಪದೆ ಸೋಲು ಕಾಣುತ್ತಿದೆ. ಹೇಳಿಕೇಳಿ ಭಾರತ ನೂರಾರು ಕೋಟಿ ಜನಸಂಖ್ಯೆ ಹೊಂದಿರುವಂಥಾ ದೇಶ. ಇಂಥಾ ಅಗಾಧ ಜನಸಂಖ್ಯೆ ಹೊಂದಿರುವಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಸರಿ ದಿಕ್ಕಿನಲ್ಲಿ ಮುನ್ನಡೆಸೋದು ಕಡುಗಷ್ಟದ ಕೆಲಸ. ಈ ಕಾರಣದಿಂದಲೇ ಭಾರತದಲ್ಲಿ ನಾನಾ ನಟೋರಿಯಸ್ ಗ್ಯಾಂಗುಗಳು ಅವ್ಯಾಹತವಾಗಿ ಕಾರ್ಯನಿರ್ವಹಿಸುತ್ತಿದ್ದಾವೆ. ಅವುಗಳ ವಿವರವನ್ನು ಕೇಳಿದರೆ ನೀವು ಬೆಚ್ಚಿ ಬೀಳೋದು ಗ್ಯಾರೆಂಟಿ!
ತಮಿಳ್ನಾಡು ಗ್ಯಾಂಗ್!

ಯಾವುದೇ ಅಪರಾಧ ಪ್ರಕರಣವೇ ಆಗಿದ್ದರೂ ಒಂದಕ್ಕೊಂದು ಸಂಬಂಧ ಇದ್ದೇ ಇರುತ್ತದೆ. ಚಾಣಾಕ್ಷ ಕಾಕಿ ಕಣ್ಣುಗಳಿಂದ ಅದು ತಪ್ಪಿಸಿಕೊಳ್ಳೋದು ಕಷ್ಟ. ಅದೆಷ್ಟೋ ಸಂದರ್ಭಗಳಲ್ಲಿ ಯಾವುದೋ ಕಾರಣದಿಂದ ಬಯಲಾದ ಸಣ್ಣ ಸತ್ಯವೊಂದು ಭೀಕರ ಜಾಲಗಳನ್ನೇ ಬಯಲು ಮಾಡಿದ್ದಿದೆ. ಈ ಹಿಂದೆ ಬೆಂಗಳೂರು ಪೊಲೀಸರು ಬಯಲು ಮಾಡಿರುವ ಒಂದು ಜಾಲದ ಕಥೆಯೂ ಅಂಥಾದ್ದೆ. ಅವರು ಬಂಧಿಸಿದ್ದು ಟೆಂಪೋ ಟ್ರಾವೆಲ್ ಕದಿಯುತ್ತಿದ್ದ ತಮಿಳು ಗ್ಯಾಂಗೊಂದನ್ನು. ಆದರೆ ಅದರ ಹಿನ್ನೆಲೆಯಲ್ಲಿ ಬಯಲಾದದ್ದು ರಕ್ತ ಚಂದನ ಕಳ್ಳತನದ ಭಯಾನಕ ಜಾಲ. ಕಾರು ಮತ್ತು ಟೆಂಪೋ ಟ್ರಾವೆಲರ್ಗಳನ್ನು ಕದ್ದು ಆಂಧ್ರ ಮತ್ತು ತಮಿಳುನಾಡಿನ ರಕ್ತ ಚಂದನ ಸ್ಮಗ್ಲರ್ಗಳಿಗೆ ಮಾರಾಟ ಮಾಡುತ್ತಿದ್ದ ಮೂವರನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮೂವರೂ ತಮಿಳುನಾಡು ಮೂಲದವರು. ಇವರುಬೆಂಗಳೂರಿಗೆ ಬಂದು ಕಳ್ಳತನ ಕೃತ್ಯಗಳನ್ನು ನಡೆಸಿ ವಾಹನ ಸಮೇತ ಪರಾರಿ ಆಗುತ್ತಿದ್ದರು. ಪ್ರಮುಖ ಆರೋಪಿ ಎಂ.ರಾಜೇಂದ್ರನ್, ಕಾಂಜೀವರಂನ ನಿವಾಸಿಯಾದರೆ, ನಾಗರತಿನ್ ಹಾಗೂ ಎಸ್.ಸೇಟು ವೆಲ್ಲೂರು ಜಿಲ್ಲೆಯವರು. ಇವರಿಂದ ಐವತ್ತು ಲಕ್ಷ ಮೌಲ್ಯದ ನಾಲ್ಕು ಟೆಂಪೋ ಟ್ರಾವೆಲರ್ ವಾಹನ ಜಪ್ತಿ ಮಾಡಲಾಗಿದೆ. ಈ ಆರೋಪಿಗಳ ಬುಡಕ್ಕೊದೆಯುತ್ತಲೇ ರಕ್ತ ಚಂದನ ಅಕ್ರಮ ಮಾರಾಟ ಗ್ಯಾಂಗಿನೊಂದಿಗಿನ ನಂಟನ್ನೂ ಕಾರಿಕೊಂಡಿದ್ದಾರೆ.
ಬಂಧಿತ ಮೂವರೂ ಕಳೆದ ಹದಿನಾರು ವರ್ಷಗಳಿಂದ ಕದ್ದ ವಾಹನಗಳ ನಂಬರ್ ಪ್ಲೇಟ್ ಬದಲಾಯಿಸಿ ಕಳ್ಳ ಮಾರ್ಗದ ಮೂಲಕವೇ ಆಂಧ್ರ ಮತ್ತು ತಮಿಳುನಾಡಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದರು. ರೈಲಿನಲ್ಲಿ ಬೆಂಗಳೂರಿಗೆ ಬರುತ್ತಿದ್ದ ಇವರು ಹಗಲು ಹೊತ್ತಿನಲ್ಲಿ ಸುತ್ತಾಡಿ ಮನೆ ಮುಂದೆ ನಿಂತಿರುವ ಟೆಂಪೋ ವಾಹನಗಳನ್ನು ಗುರುತು ಹಿಡಿಯುತ್ತಿದ್ದರು. ರಾತ್ರಿವೇಳೆ ಬಂದು ಕಳ್ಳತನ ಮಾಡುತ್ತಿದ್ದರು. ಇಡೀ ವಾಹನದ ಸ್ವರೂಪವನ್ನೇ ಬದಲಾಯಿಸಿ ಬೇರೆ ನಂಬರ್ ಪ್ಲೇಟ್ಗಳನ್ನು ಅಳವಡಿಸಿ ಅತ್ಯಂತ ಕಡಿಮೆ ಹಣಕ್ಕೆ ರಕ್ತ ಚಂದನ ಸಾಗಾಟ ಮಾಡೋ ಗ್ಯಾಂಗಿಗೆ ಮಾರಾಟ ಮಾಡಿ ಬಿಡುತ್ತಿದ್ದರು. ವಿದೇಶದಲ್ಲಿ ರಕ್ತ ಚಂದನಕ್ಕೆ ವಜ್ರದಷ್ಟು ಬೆಲೆ ಇರುವ ಕಾರಣದಿಂದಲೇ ಆಂಧ್ರ ಪ್ರದೇಶದಲ್ಲಿ ಇದನ್ನು ಕಡಿತಲೆ ಮಾಡಿ ಮಾರಾಟ ಮಾಡುವ ದೊಡ್ಡ ಜಾಲವೇ ಇದೆ. ಮಂಗಳೂರು, ಚೆನ್ನೈ, ಗೋವಾ, ಮುಂಬೈನ ಬಂದರುಗಳ ಮೂಲಕ ಚೀನಾ, ಜಪಾನ್, ಕೊರಿಯಾ, ಲ್ಯಾಟೀನ್ ಅಮೆರಿಕ ದೇಶಗಳಿಗೆ ರಕ್ತಚಂದನವನ್ನು ಮಾರಾಟ ಮಾಡಲಾಗುತ್ತದೆ. ಬಂದರುಗಳಿಗೆ ರಕ್ತಚಂದನವನ್ನು ಸಾಗಿಸಲು ಕದ್ದ ಟೆಂಪೋ ಟ್ರಾವೆಲರ್ಗಳನ್ನು ಸ್ಮಗ್ಲರ್ಗಳ ಜಾಲ ಬಳಸುತ್ತಿದೆ. ತೀರ್ಥ ಕ್ಷೇತ್ರಗಳಿಗೆ ತೆರಳುತ್ತಿರುವುದಾಗಿ ಹೇಳಿ ಪೊಲೀಸರಿಂದ, ಚೆಕ್ ಪೋಸ್ಟ್ಗಳಲ್ಲಿ ತಪ್ಪಿಸಿಕೊಳ್ಳುವುದು ಸುಲಭವಾದ್ದರಿಂದ ಸುಸಜ್ಜಿತವಾದ ಟೆಂಪೋ ಟ್ರಾವೆಲರ್ಗಳನ್ನೇ ಸ್ಮಗ್ಲರ್ಗಳು ಬಳಸುತ್ತಾರೆ. ಈ ಕಾರಣದಿಂದ ಬಂಧಿತ ಆರೋಪಿಗಳು ಸುಸಜ್ಜಿತ ಸ್ಥೀತಿಯಲ್ಲಿದ್ದ ಟೆಂಪೋ ವಾಹನಗಳನ್ನೇ ಕದಿಯುತ್ತಿದ್ದರು. ಹೀಗೆ ವಾಹನ ಕದ್ದೇಟಿಗೆ ಅದು ಸ್ವರೂಪವನ್ನೇ ಬದಲಾಯಿಸಿಕೊಂಡು ರಕ್ತಚಂದನ ಕಳ್ಳರ ಪಾಲಾಗುತ್ತಿತ್ತು.
ಟೆಂಪೋಗಳು ಕಣ್ಮರೆ

ಬೆಂಗಳೂರಿನ ಅನೇಕ ಕಡೆಗಳಲ್ಲಿ ಇಂಥಾ ಟೆಂಪೋ ಟ್ರಾವೆಲರ್ಗಳು ಕಾಣೆಯಾಗುತ್ತಿದ್ದವು. ಚಂದ್ರಾ ಲೇಔಟ್ ಪ್ರದೇಶವೊಂದರಲ್ಲಿಯೇ ಇಂಥಾ ಹತ್ತಾರು ಕೇಸುಗಳು ದಾಖಲಾಗಿದ್ದವು. ಆದರೆ ಅದೇನೇ ಮಾಡಿದರೂ ಇದರ ಮೂಲ ಮಾತ್ರ ಪತ್ತೆಯಾಗುತ್ತಿರಲಿಲ್ಲ. ಯಾವಾಗ ಟಿಟಿ ಕಳ್ಳತನದ ಪ್ರಕರಣಗಳು ಅತಿಯಾದವೋ ಆಗ ಪೊಲೀಸರು ಮುಳ್ಳನ್ನು ಮುಳ್ಳಿಂದಲೇ ತೆಗೆಯುವ ತಂತ್ರವೊಂದನ್ನು ಜಾರಿಗೆ ತಂದಿದ್ದರು. ಈ ಭಾಗದ ಕೆಲ ಟಿಟಿ ವಾಹನಗಳಿಗೆ ಜಿಪಿಆರ್ಎಸ್ ಅಳವಡಿಸಲು ನಿರ್ಧರಿಸಲಾಗಿತ್ತು. ಅದೇ ರೀತಿ ಚಂದ್ರಾಲೇಔಟ್ ವ್ಯಾಪ್ತಿಯಿಂದ ಕಳ್ಳತನವಾಗಿದ್ದ ಟೆಂಪೋ ವಾಹನದಲ್ಲಿಯೂ ಜಿಪಿಎಸ್ ಅಳವಡಿಸಲಾಗಿತ್ತು. ಈ ವಾಹನ ತಮಿಳುನಾಡಿನಲ್ಲಿರುವುದಾಗಿ ಜಿಪಿಎಸ್ ಮೂಲಕ ಗೊತ್ತಾಗಿತ್ತು. ಅಲ್ಲಿಗೆ ತೆರಳಿದ ತಂಡ ವಾಹನವನ್ನು ಮತ್ತು ಖದೀಮರನ್ನು ಪತ್ತೆ ಹಚ್ಚಿತ್ತು. ತಿರುಪತಿ ತಿರುಮಲ ಸುತ್ತುವರೆದಿರುವಂತೆ ಕಡಪ ಹಾಗೂ ಚಿತ್ತೂರು ಅರಣ್ಯದಲ್ಲಿ ರಕ್ತ ಚಂದನ ಕಳ್ಳಸಾಗಣೆ ಇದೇ ಮೊದಲಲ್ಲ ಔಷಧಿಯ ಗುಣಗಳುಳ್ಳ ಇಲ್ಲಿನ ರಕ್ತ ಚಂದನಕ್ಕೆ ಎಲ್ಲಿಲ್ಲದ ಬೇಡಿಕೆ. ವಿದೇಳಗಳಲ್ಲೂ ಇದಕ್ಕೆ ಡಿಮ್ಯಾಂಡ್. ರಕ್ತ ಚಂದನದ ಕಳ್ಳಸಾಗಣೆ ದಶಕಗಳಿಂದ ನಿರಂತರವಾಗಿ ನಡೆಯುತ್ತಿದೆ. ರಕ್ತಚಂದನ ಕಳ್ಳಸಾಗಣೆ ಪ್ರಕರಣದಲ್ಲಿ ಗಂಗಿರೆಡ್ಡಿ ಎಂಬಾತ ಕರ್ನಾಟಕದಲ್ಲಿ ಕಾಡುಗಳ್ಳ ವೀರಪ್ಪನ್ನಷ್ಟೇ ಕುಖ್ಯಾತಿ ಪಡೆದಿದ್ದ. ತಲೆಮರೆಸಿಕೊಂಡಿದ್ದ ಆತನನ್ನು ಮಲೇಷ್ಯಾದಲ್ಲಿ ಬಂಧಿಸಲಾಗಿತ್ತು.
ಚಂದ್ರಗಿರಿ ಅರಣ್ಯದಲ್ಲಿ ರಕ್ತ ಚಂದನ ಮರಗಳನ್ನು ಕಡಿದು ಸಾಗಿಸುವ ಕೃತ್ಯ ಮಾಡಿಸಲಾಗುತ್ತಿತ್ತು. ಇದರ ಹಿಂದೆ ಪ್ರಭಾವಿಗಳ ಕೈವಾಡವೂ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕಳ್ಳಸಾಗಣೆದಾರರಿಂದ ವಶಕ್ಕೆ ಪಡೆದಿದ್ದ ರಕ್ತ ಚಂದನವನ್ನು ತಿರುಪತಿಯಲ್ಲಿ ಇತ್ತೀಚೆಗೆ ಹರಾಜು ಹಾಕಿದ್ದಾಗ ಮುನ್ನೂರು ಕೋಟಿಗೂ ಹೆಚ್ಚು ಮೊತ್ತಕ್ಕೆ ಮಾರಾಟವಾಗಿತ್ತು. ದೇಶದ ವಿವಿಧೆಡೆಯಿಂದ ಆಗಮಿಸಿದ್ದ ಖ್ಯಾತ ಆಯುರ್ವೇದ ಪಂಡಿತರು ಹರಾಜಿನಲ್ಲಿ ಭಾಗವಹಿಸಿ ಖರೀದಿಸಿದ್ದರು. ಹೀಗೆ ರಕ್ತ ಚಂದನವನ್ನು ಒಂದೆಡೆಯಿಂದ ಸಾಗಿಸುವ ಕೆಲಸಕ್ಕೆ ಬಳಕೆಯಾಗುತ್ತಿದ್ದದ್ದು ಇದೇ ಕಾರ್ಯತಂತ್ರ. ರಕ್ತ ಚಂದನ ಅಕ್ರಮವಾಗಿ ಮಾರಾಟ ಮಾಡುವ ದೊಡ್ಡ ಜಾಲವೇ ಇದೆ. ಇತ್ತೀಚೆಗೆ ಹೊಸಕೋಟೆಯಲ್ಲಿ ರಕ್ತ ಚಂದನ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ತಂಡದ ಮೇಲೆ ಮೂರ್ನಾಲ್ಕು ಬಾರಿ ದಾಳಿ ನಡೆಸಿ ಸುಮಾರು ಹತ್ತು ಕೋಟಿ ರೂ. ಮೊತ್ತದ ರಕ್ತ ಚಂದನ ವಶಕ್ಕೆ ಪಡೆಯಲಾಗಿತ್ತು. ಈ ಪ್ರಕರಣದಲ್ಲಿ ಚೀನಾ ಪ್ರಜೆಗಳು ಬಂಧನಕ್ಕೊಳಗಾಗಿದ್ದರು.ರಕ್ತ ಚಂದನ ಮಾರಾಟ ಜಾಲ ಕರ್ನಾಟಕ ದಲ್ಲೂ ವ್ಯಾಪಿಸಿರುವುದರಿಂದ, ರಕ್ತ ಚಂದನ ಕಳ್ಳ ಸಾಗಣೆಗಾಗಿ ತಮಿಳು ನಾಡಿನ ಗ್ಯಾಂಗ್ ಕರ್ನಾಟಕದ ಮೂಲಕವೇ ಆಂಧ್ರ ಪ್ರವೇಶಿಸಿರುವುದು ಖಚಿತವಾಗಿರುವುದರಿಂದ ಇದೀಗ ಆಂಧ್ರಪ್ರದೇಶ ಪೊಲೀಸರ ಕಣ್ಣು ರಾಜ್ಯದ ಮೇಲೆ ಬಿದ್ದಿತ್ತು. ಇದೀಗ ಸಿಕ್ಕಿ ಬಿದ್ದಿರುವ ಟಿಟಿ ಕಳ್ಳರ ಕಡೆಯಿಂದ ದೇಶಾಧ್ಯಂತ ಆಕ್ಟೀವ್ ಆಗಿರುವ ಈ ಜಾಲ ಬಯಲಾಗೋ ಎಲ್ಲ ಲಕ್ಷಣಗಳೂ ಇವೆ.
ಭಯಾನಕ ಭಿಲ್ ಗ್ಯಾಂಗ್!

ಕರ್ನಾಟಕ ಪೊಲೀಸ್ ಇಲಾಖೆ ಇತ್ತೀಚಿನ ವರ್ಷಗಳಲ್ಲಿ ಪತ್ತೆ ಹಚ್ಚಿದ ಅತ್ಯುತ್ತಮ ಪ್ರಕರಣಗಳಲ್ಲಿ ಭಿಲ್ ಗ್ಯಾಂಗ್ ಸದಸ್ಯರ ಬಂಧನ ಕೂಡ ಒಂದೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಶುಕ್ರವಾರ ಪೊಲೀಸರು ನಡೆಸಿದ ತನಿಖೆಯ ಬಗ್ಗೆ ಇಲಾಖೆ ತಿಳಿಸಿದ ನಂತರ ಸಾರ್ವಜನಿಕವಾಗಿ ಬೆಂಗಳೂರು ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಇವೆಲ್ಲದರ ನಡುವೆ ಇಡೀ ಭಿಲ್ ಸಮುದಾಯವನ್ನೇ ಕ್ರಿಮಿನಲ್ ಟ್ರೈಬ್ ಎಂಬ ಹಣೆಪಟ್ಟಿ ಕಟ್ಟುವ ಪ್ರಯತ್ನವೂ ನಡೆದುಹೋಗಿದೆ. ಆದರೆ ಭಿಲ್ ಸಮುದಾಯದ ಇತಿಹಾಸದ ಪುಟಗಳನ್ನು ತಿರುವಿದರೆ ಅಲ್ಲಿ ಹೋರಾಟವಿದೆ, ಸಂಗ್ರಾಮವಿದೆ, ಬಂಡವಾಳಶಾಹೀ ವಿರುದ್ಧದ ಕೂಗಿದೆ, ಸಮಾಜದಿಂದ ಬಹಿಷ್ಕರಿಸಲ್ಪಟ್ಟ ನೋವಿದೆ ಮತ್ತು ಅದೆಲ್ಲಕ್ಕಿಂತ ವಿಭಿನ್ನವಾದ ಬಿಲ್ವಿದ್ಯಾ ಪ್ರಾವೀಣ್ಯತೆ ಕಾಣುತ್ತದೆ. ಒಂದು ಕಾಲದಲ್ಲಿ ಬ್ರಿಟೀಷರ ವಿರುದ್ಧ ಸೆಣಸಾಡಿ ಬಹಿಷ್ಕರಿಸಲ್ಪಟ್ಟ ಭಿಲ್ ಸಮುದಾಯದ ಇಂದಿನ ಸ್ಥಿತಿಗತಿಗಳೇನು ವಿಸ್ತೃತ ವರದಿ ಇಲ್ಲಿದೆ…
ಮಧ್ಯ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಗುಜರಾತ್ ಮತ್ತು ತ್ರಿಪುರಾದ ಕೆಲ ಭಾಗಗಳಲ್ಲಿ ನೆಲೆಸಿರುವ ಭಿಲ್ ಅಥವಾ ಭೀಲ್ ಎಂದು ಕರೆಸಿಕೊಳ್ಳುವ ಸಮುದಾಯ ಉತ್ತರಭಾರತದ ಅತಿ ದೊಡ್ಡ ಆದಿವಾಸಿ ಜನಾಂಗ. ಬಿಲ್ವಿದ್ಯೆಯಲ್ಲಿ ಅತ್ಯುತ್ತ ಪ್ರಾವೀಣ್ಯತೆ ಹೊಂದಿರುವ ಭಿಲ್ ಜನರು ರಾಜಾಳ್ವಿಕೆಯ ಕಾಲಗಳಲ್ಲಿ ಸೇನೆಯ ಅವಿಭಾಜ್ಯ ಅಂಗವಾಗಿದ್ದವರು. ಅದೆಷ್ಟೋ ಯುದ್ಧಗಳ ಗತಿಯನ್ನೇ ಬದಲಿಸಿದ ಕೀರ್ತಿಯೂ ಇವರಿಗಿದೆ. ದೈಹಿಕವಾಗಿ ಬಲಾಢ್ಯರಾಗಿರುವ ಈ ಸಮುದಾಯದ ಮಂದಿ ಸಾವಿರಾರು ವರ್ಷಗಳ ಕಾಲ ಸೈನಿಕರಾಗಿಯೇ ಜೀವನ ಸಾಗಿಸಿದ್ದಾರೆ. ನಾಗರೀಕತೆ ಬೆಳೆದಂತೆ, ಅಸ್ತ್ರ-ಶಸ್ತ್ರಗಳ ಬಳಕೆ ಆರಂಭವಾಗಿತ್ತು. ಜನರಿನ್ನೂ ಬಿಲ್ಲು ಬಾಣಗಳನ್ನು ಬಳಸಲು ಮುಂದಾಗುವ ಮೊದಲೇ ಭಿಲ್ ಸಮುದಾಯ ಪರಿಣಿತಿ ಹೊಂದಿತ್ತು. ಅದಕ್ಕಾಗಿಯೇ ಇವರು ಸೈನ್ಯದಲ್ಲಿ ಪ್ರಾಮುಖ್ಯತೆ ಪಡೆದಿದ್ದರು ಎಂಬ ಅಂಶಗಳು ಅಂತರ್ಜಾಲದಲ್ಲಿ ಲಭ್ಯವಾಗುತ್ತದೆ.
ಭಿಲ್ ಎಂಬ ಹೆಸರು ತಮಿಳಿನ ವಿಲ್ಲುವಾರ ಎಂಬ ಪದದಿಂದ ಬಂದಿದೆ ಎನ್ನಲಾಗುತ್ತದೆ. ಅದೇ ರೀತಿ ವಿಲ್ಲು ಅಥವಾ ಬಿಲ್ಲು ಎಂಬ ಪದದಿಂದ ಆ ಹೆಸರು ಬಂದಿದೆ ಎಂಬುದಾಗಿಯೂ ಹೇಳಲಾಗುತ್ತದೆ. ಒಟ್ಟಿನಲ್ಲಿ ವೃತ್ತಿಪರ ಬಿಲ್ಲುಗಾರರಾಗಿದ್ದರಿಂದ ಸಮುದಾಯವನ್ನು ಭಿಲ್ ಎಂದು ಕರೆದಿರುವುದು ಸ್ಪಷ್ಟ. ರಾಮಾಯಣ ಮತ್ತು ಮಹಾಭಾರತದಲ್ಲಿಯೂ ಭಿಲ್ ಜನಾಂಗದ ಉಲ್ಲೇಖವಿದೆ. ಅಪಹರಣವಾದ ಸೀತೆಯನ್ನು ಹುಡುಕಿ ಹೋಗುವ ರಾಮನಿಗೆ ದಾರಿಯಲ್ಲಿ ಭಿಲ್ ಜನಾಂಗದ ಕೆಲ ಮಹಿಳೆಯರು ಊಟ ಉಪಚಾರ ಮಾಡಿದ ಉಲ್ಲೇಖವಿದೆ. ಮಹಾ ಕಾವ್ಯಗಳಲ್ಲಿ ಮತ್ತು ಪುರಾಣಗಳಲ್ಲಿ ಅಲ್ಲಲ್ಲಿ ಇಣುಕಿ ಮರೆಯಾಗುವ ಭಿಲ್ ಜನರು ನಂತರ ಇತಿಹಾಸದಲ್ಲಿ ದೊಡ್ಡ ಪಾತ್ರವನ್ನು ಹೊಂದಿದ್ದಾರೆ. ಹಿಂದಿನ ಕಾಲದಲ್ಲಿ ಭಿಲ್ರನ್ನು ಮಹಾ ಯೋಧರೆಂದು ಗುರುತಿಸಲಾಗುತ್ತಿತ್ತು. ಮೊಘಲರ, ಮರಾಠರ ಮತ್ತು ಬ್ರಿಟೀಷರ ವಿರುದ್ಧ ಯುದ್ಧದಲ್ಲಿ ಭಿಲ್ ಸೇನಾನಿಗಳು ಭಾಗಿಯಾಗಿದ್ದರು. ಬ್ರಿಟಿಷರಿಗೆ ಹಲವು ಆದಿವಾಸಿ ಜನಾಂಗಗಳಂತೆ ಭಿಲ್ ಸಮುದಾಯವೂ ಕೂಡ ದೊಡ್ಡ ಶತ್ರುವಾಗಿತ್ತು. ಭಿಲ್ ಜನರ ಗೊರಿಲ್ಲಾ ಯುದ್ಧದಿಂದ ಬ್ರಿಟೀಷ್ ಸೇನೆ ಹೈರಾಣಾಗಿಹೋಗಿತ್ತು. ಭಿಲ್ರನ್ನು ತಡೆಯಲು ಸಾಧ್ಯವೇ ಆಗದ ಸಂದರ್ಭಗಳೂ ಸೃಷ್ಟಿಯಾಗಿತ್ತು ಎನ್ನಲಾಗುತ್ತದೆ. ಆಗ, ಬ್ರಿಟೀಷ್ ಸೇನೆ ಭಿಲ್ ಜನಾಂಗವನ್ನು ಬಹಿಷ್ಕರಿಸಿ, ಅವರಿಗೆ ಕಳ್ಳರು ಮತ್ತು ಹಿಂಸಾಚಾರಿಗಳು ಎಂಬ ಪಟ್ಟ ನೀಡಿತ್ತು. ರಾಜದ್ರೋಹದ ಕಾನೂನಿನಡಿಯಲ್ಲಿ ಹಲವು ಭಿಲ್ ಸಮುದಾಯದ ನಾಯಕರನ್ನು ಬಂಧಿಸಲಾಗಿತ್ತು ಎಂದೂ ಹೇಳಲಾಗುತ್ತದೆ.
ವಿಶೇಷ ಸಮುದಾಯ

ಬೇರೆ ರಾಜ್ಯಗಳನ್ನು ಹೊರತುಪಡಿಸಿ, ರಾಜಸ್ಥಾನದಲ್ಲಿ ಮೂವತೊಂಭತ್ತು ಭಾಗದಷ್ಟು ಜನಸಂಖ್ಯೆ ಹೊಂದಿರುವ ಭಿಲ್ ಸಮುದಾಯ ಹೊಂದಿದೆ ಎಂಬ ಮಾಹಿತಿವೀಗಾಗಲೇ ಲಭ್ಯವಾಗಿದೆ. ಅವರು ಬಳಸುವ ಭಾಷೆ ಭಿಲಿ. ಅದೊಂದು ಇಂಡೋ-ಆರ್ಯನ್ ಭಾಷೆ. ಮರಾಠಿ, ರಾಜಸ್ಥಾನಿಯ ಸೊಗಡೂ ಅದರಲ್ಲಿ ಸೇರಿಕೊಂಡಿದೆ. ಭಿಲ್ ಸಮುದಾಯ ಮಹಿಳೆಯರು ಸಾಂಪ್ರದಾಯಿಕ ಸೀರೆಗಳನ್ನು ತೊಟ್ಟರೆ, ಪುರುಷರು ಉದ್ದವಾದ ಜುಬ್ಬಾ ಮತ್ತು ಪೈಜಾಮ ಧರಿಸುತ್ತಾರೆ. ಹಿತ್ತಾಳೆಯ ಆಭರಣಗಳನ್ನು ಮಹಿಳೆಯರು ಧರಿಸುತ್ತಾರೆ. ಭಿಲ್ ಜನರು ನೀಳ ಕಾಯದವರು, ಉತ್ತಮ ಶರೀರ ಹೊಂದಿದವರು ಮತ್ತು ನೋಡಲು ಸ್ಪುರದ್ರೂಪಿಗಳು. ಸರಳತೆ ಮತ್ತು ಸತ್ಯನುಡಿಗಾಗಿ ಅವರು ಹೆಸರಾದವರು ಮತ್ತು ಸ್ವತಂತ್ರ್ಯವನ್ನು ಬಹಳವಾಗಿ ಪ್ರೀತಿಸುವವರು ಎನ್ನಲಾಗುತ್ತದೆ. ಅದರ ಜತೆ ವಂಶಪಾರಂಪರಿಕವಾಗಿ ಭಿಲ್ ಜನ ಶಕ್ತಿಶಾಲಿಗಳು ಮತ್ತು ಧೈರ್ಯಶಾಲಿಗಳು. ಭಿಲ್ ಜನಾಂಗದ ಶಸ್ತ್ರ ಬಿದುರಿನಿಂದ ಮಾಡಿದ ಬಿಲ್ಲು. ತಲೆತಲಾಂತರದಿಂದ ಭೇಟೆಯಾಡುವುದರಲ್ಲಿ ನಿಸ್ಸೀಮರು. ಸದ್ಯ ರೈತರಾಗಿ ಬದಲಾಗಿದ್ದಾರೆ. ಎಲ್ಲಾ ಕೋಮು, ಪಂಥ, ಧರ್ಮದಲ್ಲಿರುವಂತೆಯೇ ಇಲ್ಲಿಯೂ ದುಷ್ಟರಿರಬಹುದು, ಕಳ್ಳರಿರಬಹುದು, ಆದರೆ ಇಡೀ ಜನಾಂಗ ಸತ್ಯ ಮತ್ತು ನ್ಯಾಯಕ್ಕೆ ಹತ್ತಿರವಾದ ಜೀವನ ನಡೆಸಿಕೊಂಡು ಬಂದಿದೆ. ಕೆಲವು ಮೂಲಗಳ ಪ್ರಕಾರ, ಅವರು ಇವತ್ತಿಗೂ ಹೆಬ್ಬೆರಳನ್ನು ಬಳಸಿ ಬಿಲ್ಲು ಬಾಣಗಳ ಪ್ರಯೋಗ ಮಾಡುವುದಿಲ್ಲ. ಅವರ ಆರಾದ್ಯ ದೈವ ಏಕಲವ್ಯನ ನೆನಪಿಗಾಗಿ ಹೀಗೊಂದು ಸಂಪ್ರದಾಯವನ್ನು ಅವರು ಆಚರಿಸಿಕೊಂಡು ಬರುತ್ತಿದ್ದಾರೆ.
ಭಿಲ್ ಜನಾಂಗದ ಧಾರ್ಮಿಕ ಪದ್ಧತಿಗಳು ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿವೆ. ಹೆಚ್ಚಿನ ಜನರು ಸ್ಥಳೀಯವಾದ ದೇವರುಗಳನ್ನು ಆಚರಿಸುತ್ತಾರೆ. ಖಂಡೋಬಾ, ಕನ್ಹೋಬಾ, ಬಹಿರೋಬಾ ಮತ್ತು ಸೀತಾಲ್ಮಾತ, ಹೆಚ್ಚು ಜನರಿಂದ ಪೂಜಿತವಾಗುವ ದೇವದೇವತೆಗಳು. ಭಿಲ್ರಲ್ಲಿ ಕೆಲವರು ಹುಲಿಯನ್ನು ದೇವರೆಂದು ಪೂಜಿಸುತ್ತಾರೆ. ಅದಕ್ಕೆ ವಾಗ್ದೇವ್, ಎಂಬ ಹೆಸರಿನಿಂದ ಕರೆಯುತ್ತಾರೆ. ಆದರೆ ವಿಶೇಷವೆಂದರೆ ಅವರಿಗೆ ಅವರದ್ದೇ ಆದ ಸ್ವಂತ ದೇವಸ್ಥಾನಗಳಿಲ್ಲ. ಇದು ಎಲ್ಲಾ ಆದಿವಾಸಿ ಜನಾಂಗಗಳಿಗೂ ಅನ್ವಯಿಸುವ ಸಾಧ್ಯತೆಯೂ ಇದೆ. ಬುಡಕಟ್ಟು ಜನಾಂಗಗಳಲ್ಲಿ ಕಂಡುಬರುವ ಅಮಾಯಕ ಮೂಢನಂಬಿಕೆಗಳೂ ಭಿಲ್ರಲ್ಲಿ ಹಾಸುಹಿಕ್ಕಾಗಿದೆ. ಯುದ್ಧಕ್ಕೆ ಹೊರಡುವ ಮುನ್ನವೂ ಅವರು ಶಕುನಕ್ಕಾಗಿ ಕಾಯುತ್ತಿದ್ದರು. ಯಾವುದೇ ಕೆಲಸ ಕಾರ್ಯಗಳಿಗೂ ಶಕುನವಿಲ್ಲದೇ ಹೊರಡುವವರಲ್ಲ. ಹಳ್ಳಿಗೊಬ್ಬ ಸ್ಥಳೀಯವಾಗಿ ಗುರು ಇರುತ್ತಾರೆ. ಪೂಜೆ ಪುನಸ್ಕಾರಗಳನ್ನು ಅವರೇ ಮಾಡುತ್ತಾರೆ. ಅದೇ ರೀತಿ ಹಳ್ಳಗೊಬ್ಬ ಮುಖ್ಯಸ್ಥ, ಆತನೇ ಕೋರ್ಟ್, ಆತನೇ ನ್ಯಾಯಾಧೀಶ. ಭಿಲ್ ಸಮುದಾಯ ಇರುವೆಲ್ಲ ಕಡೆ ಇಂದಿಗೂ ಪೊಲೀಸ್ ಠಾಣೆಗಳಿಗೆ ದೂರುಗಳು ಹೋಗುವುದು ತೀರಾ ಕಡಿಮೆ. ಸಮುದಾಯದ ಕಟ್ಟುಪಾಡುಗಳನ್ನು ಜನರು ತಪ್ಪದೇ ಪಾಲಿಸುತ್ತಾರೆ. ಹಾಡು ಮತ್ತು ನೃತ್ಯಕ್ಕೆ ಭಿಲ್ ಜನಾಂಗ ಹೆಚ್ಚಿನ ಒತ್ತು ನೀಡುತ್ತದೆ. ಘೂಮರ್ ಎಂಬ ನೃತ್ಯಶೈಲಿ ಭಿಲ್ ಸಮುದಾಯದ ಪ್ರಖ್ಯಾತ ನೃತ್ಯ ಪ್ರಾಕಾರ. ಶ್ರಾವಣ ಮಾಸದಲ್ಲಿ ಪುರುಷರು ಥಾನ್ ಗಾಯಿರ್, ಎಂಬ ನೃತ್ಯ ರೂಪಕವನ್ನು ಮಾಡುತ್ತಾರೆ. ಇದೊಂದು ಧಾರ್ಮಿಕ ನೃತ್ಯ ರೂಪಕವಾಗಿದ್ದು, ಭಿಲ್ ಜನಾಂಗದ ಇತಿಹಾಸವನ್ನೂ ಸಾರುತ್ತದೆ. ಶಿಲ್ಪಕಲೆಯಲ್ಲಿಯೂ ಪರಿಣಿತಿ ಹೊಂದಿರುವ ಭಿಲ್ ಜನರು ಕರಕುಶಲ ಕಲೆಯನ್ನೂ ಬಲ್ಲವರಾಗಿದ್ದಾರೆ.












