-ಕರ್ನಾಟಕಕ್ಕೂ ಒಲಿದಿದೆ ಗ್ರ್ಯಾಮಿ ಹೆಮ್ಮೆ!
-ಆ ಪ್ರಶಸ್ತಿಯ ಹಿಂದಿತ್ತು ಅದ್ಭುತ ದೂರದೃಷ್ಟಿ!
ಸಂಗೀತ ಕ್ಷೇತ್ರದಲ್ಲಿ ಅತ್ಯುನ್ನತ ಸ್ಥಾನಮಾನ ಹೊಂದಿರುವ ಪ್ರಶಸ್ತಿ ಗ್ರ್ಯಾಮಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಷ್ಠೆ ಹೊಂದಿರುವ ಈ ಪ್ರಶಸ್ತಿ, ಸಂಗೀತ ಕ್ಷೇತ್ರದ ಭಾಗವಾಗಿರುವ ಪ್ರತಿಯೊಬ್ಬರ ಕನಸು. ಅದನ್ನು ಪಡೆದುಕೊಂಡರೆ ಯಾರದ್ದೇ ಸಂಗೀತ ಯಾನವಾದರೂ ಸಾರ್ಥಕ್ಯ ಕಂಡಂತಾಗುತ್ತೆ. ಹಾಗಂತ ಅದನ್ನು ಒಲಿಸಿಕೊಳ್ಳುವುದೇನು ಸಲೀಸಿನ ಸಂಗತಿಯಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲಸದಿಂದಲೇ ಗಮನ ಸೆಳೆದು, ನೆಲೆಯೂರಿ ನಿಂತರೆ ಮಾತ್ರವೇ ಗ್ರ್ಯಾಮಿ ಪ್ರಶಸ್ತಿ ಒಲಿಯುತ್ತದೆ. ನಿಮಗೆಲ್ಲರಿಗೂ ಗೊತ್ತಿರುವಂತೆ ಈ ವರ್ಷದ ಗ್ರ್ಯಾಮಿ ಪ್ರಶಸ್ತಿಯನ್ನು ಕನ್ನಡಿಗ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಪಡೆದುಕೊಂಡಿದ್ದಾರೆ. ಡಿವೈನ್ ಟೈಡ್ಸ್ ಎಂಬ ಆಲ್ಬಂ ರಿಕ್ಕಿ ಕೇಜ್ಗೆ ಎರಡನೇ ಬಾರಿ ಗ್ರ್ಯಾಮಿ ಗೌರವವನ್ನು ತಂದುಕೊಟ್ಟಿದೆ. ಇದೀಗ ಅದೇ ಆಲ್ಬಂನ ಇಂಜಿನಿಯರಿಂಗ್ ಮತ್ತು ಮಿಕ್ಸಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದ ಮಂಗಳೂರು ಮೂಲದ ಸಂಗೀತ ನಿರ್ದೇಶಕ ವನಿಲ್ ವೇಗಸ್ ಅವರಿಗೂ ಗ್ರ್ಯಾಮಿ ಪ್ರಶಸ್ತಿ ಒಲಿದು ಬಂದಿದೆ. ಹೀಓಗೆ ಕನ್ನಡಿಗರಿಬ್ಬರಿಗೆ ಒಲಿದಿರುವ ಈ ಗ್ರ್ಯಾಮಿ ಪ್ರಶಸ್ತಿಯ ಹಿನ್ನೆಲೆ ನಿಜಕ್ಕೂ ರೋಚಕವಾಗಿದೆ.

ರಿಕ್ಕಿ ಕೇಜ್ ೨೦೧೫ರಲ್ಲಿಯೇ ಕನ್ನಡಕ್ಕೆ ಗ್ರ್ಯಾಮಿ ಗೌರವದ ಸಿಹಿ ಹಂಚಿದ್ದರು. ಇದೀಗ ವನಿಲ್ ವೇಗಸ್ ಆ ಪ್ರಶಸ್ತಿಗೆ ಭಾಜನರಾಗುವ ಮೂಲಕ ಮಂಗಳೂರು ಭಾಗಕ್ಕೂ ಆ ಸಿಹಿಯ ಸ್ವಾದ ಹರಡಿಕೊಂಡಂತಾಗಿದೆ. ಇದು ಮಂಗಳೂರು ಸೀಮೆಗೊಲಿದ ಮೊದಲ ಗ್ರ್ಯಾಮಿ ಪ್ರಶಸ್ತಿ ಆಗಿರೋದರಿಂದ ಮಂಗಳೂರಿಗರೆಲ್ಲರೂ ಸಂಭ್ರಮಿಸುತ್ತಿದ್ದಾರೆ. ಅಷ್ಟಕ್ಕೂ ನಮ್ಮ ನಡುವೆ ಇಂಥಾ ದೈತ್ಯ ಪ್ರತಿಭೆಗಳಿದ್ದಾವೆಂಬುದೇ ಹಲವು ಬಾರಿ ಗೊತ್ತಾಗುವುದಿಲ್ಲ. ಆದರೆ, ಅಂಥಾ ಪ್ರತಿಭೆಗಳು ಅಂದುಕೊಂಡಿದ್ದನ್ನು ಸಾಧಿಸೋದನ್ನೇ ವ್ರತದಂತೆ ಸ್ವೀಕರಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಳಗೇನೂ ಇಲ್ಲದೆ ಬರಿದೇ ಬಡಬಡಿಸುವ ಖಾಲಿ ಡಬ್ಬಿಗಳು ಆ ಕ್ಷಣಕ್ಕೆ ಸದ್ದು ಮಾಡಬಹುದು. ಆದರೆ ವನಿಲ್ ವೇಗಸ್ರಂಥಾ ಗಟ್ಟಿ ಪ್ರತಿಭೆಗಳ ಮಟ್ಟಿಗೆ ಅವರ ಕೆಲಸವೇ ಸದ್ದು ಮಾಡುತ್ತೆ. ಅದುವೇ ಹೀಗೆ ಪುರಸ್ಕಾರಗಳನ್ನು ಪಡೆದುಕೊಳ್ಳುವುದರೊಂದಿಗೆ ಇತಿಹಾಸ ಸೃಷ್ಟಿಸುತ್ತೆ!
ಹೀಗೆ ವನಿಲ್ ವೇಗಸ್ರಂತೆ ಪ್ರತಿಷ್ಟಿತ ಪ್ರಶಸ್ತಿಗಳನ್ನು ಪಡೆದುಕೊಂಡವರ ಹಿಂದೆ ಖಂಡಿತಾ ಸುಖದ ಹಾದಿಯಿರುವುದಿಲ್ಲ. ಕಡುಗಷ್ಟದ ಕಹಾನಿಗಳಿರುತ್ತವೆ. ವೇಗಸ್ಗೆ ಗ್ರ್ಯಾಮಿ ಸಿಕ್ಕಿರೋದರ ಹಿಂದೆ ಅಖಂಡ ಇಪ್ಪತ್ತೆರಡು ವರ್ಷಗಳ ಸುದೀರ್ಘ ತಪಸ್ಸಿನ ಹಿನ್ನೆಲೆಯಿದೆ. ಬಡತನ, ನೋವು, ನಿರಾಸೆಗಳನ್ನೆಲ್ಲ ನುಂಗಿಕೊಂಡು ನಿಂತ ಒಳಗುದಿಗಳಿವೆ. ಹೆಜ್ಜೆ ಹೆಜ್ಜೆಗೂ ಅಡ್ಡಗಾಲು ಹಾಕುವ, ಕೈ ಚಾಚಿದ್ದನ್ನೆಲ್ಲ ಕಣ್ಣಳತೆಯಿಂದ ದೂರ ನಿಲ್ಲಿಸುವ ಬಡತನವಿದೆಯಲ್ಲಾ? ಅದರ ಬೇಗುದಿಯಲ್ಲಿ ನೊಂದು ಬೆಂದು ಹದಗೊಂಡವರು ಮಾತ್ರವೇ ಯಾವುದೇ ಕ್ಷೇತ್ರದಲ್ಲಿ, ಏನಾದರೊಂದನ್ನು ಸಾಧಿಸಲು ಸಾಧ್ಯ. ಈ ಮಾತಿಗೆ ಸ್ಪಷ್ಟ ಉದಾಹರಣೆಯಾಗಿ ನಿಲ್ಲುವವರು ವನಿಲ್ ವೇಗಸ್.
ವನಿಲ್ ವೇಗಸ್ ಮೂಲತಃ ಮಂಗಳೂರಿನವರು. ಹುಟ್ಟಿ ಬೆಳೆದದ್ದು, ಅಗೋಚರವಾಗಿದ್ದ ಸಂಗೀತದ ಕನಸನ್ನು ಬೆಂಬಿದ್ದು ಅಲೆದಿದ್ದೆಲ್ಲವೂ ಮಂಗಳೂರು ಸೀಮೆಯ ಪರಿಸರದಲ್ಲಿಯೇ. ಮಂಗಳೂರಿನ ಉಳ್ಳಾಲದ ಐಸಾಕ್ ವೇಗಸ್ ಮತ್ತು ಡೈಸಿ ಫಿರೇರಾ ದಂಪತಿಯ ಪುತ್ರರಾದ ವೇಗಾಸ್ ಪಾಲಿಗೆ ಆರಂಭದಿಂದಲೂ ಸಂಗೀತದ್ದೇ ಧ್ಯಾನ. ಸಂಗೀತ ಪರಿಕರಗಳನ್ನು ಬಹುವಾಗಿ ಪ್ರೀತಿಸುತ್ತಿದ್ದ ಅವರಿಗೆ ಅದ್ಯಾವುದೂ ಕೂಡಾ ಸಲೀಸಾಗಿ ಕೈಗೆಟುಕುವಂತಿರಲಿಲ್ಲ. ಈ ಹುಡುಗನ ಅತೀವ ಸಂಗೀತ ಪ್ರೇಮ ನೋಡಿದ್ದ ತಂದೆಯ ಸ್ನೇಹಿತ ಅದೊಂದು ದಿನ ಆಟಿಕೆಯ ಫಿಯಾನೋವೊಂದನ್ನು ವೇಗಾಸ್ಗೆ ಉಡುಗೊರೆಯಾಗಿ ಕೊಟ್ಟಿದ್ದರಂತೆ. ಅದು ವೇಗಾಸ್ ಕೈಗೆಟುಕಿದ ಮೊಟ್ಟಮೊದಲ ಸಂಗೀತ ಪರಿಕರ!
ಆ ನಂತರದಲ್ಲಿ ಬಸದುಕು ಯಾವ ಹುದುಲಿನತ್ತ ಹೊರಳಿಕೊಂಡರೂ ಸಂಗೀತ ಮಾತ್ರವೇ ತನ್ನ ಭವಿಷ್ಯ ಎಂಬ ಆತ್ಮ ಬಲದೊಂದಿಗೆ ಮೇಲೆದ್ದು ನಿಂತವರು ವನಿಲ್ ವೇಗಾಸ್. ಆ ಕಾಲಕ್ಕೆ ಸಂಗೀತದಲ್ಲಿ ಆಸಕ್ತಿ ಇದ್ದರೂ ಅವರ ಪಾಲಿಗೆ ಗುರುವಿನ ಸಾಮಿಪ್ಯ ಸಿಗಲಿಲ್ಲ. ಮಗನ ಕನಸಿನ ಪರಿಚಯವಿದ್ದರೂ ಅದಕ್ಕೊಂದು ದಿಕ್ಕುಗಾಣಿಸುವ ಆರ್ಥಿಕ ಕಸುವು ಹೆತ್ತವರಿಗೂ ಇರಲಿಲ್ಲ. ಇಂಥಾ ಹಿನ್ನಡೆಗಳಿಂದ ಆತ್ಮಕ್ಕಂಟಿದ್ದ ಸಂಗೀತ ವ್ಯಾಮೋಹ ಮರೆಯಾಗೋದುಂಟೇ? ಯಾವ ಅಡೆತಡೆಗಳಿಗೂ ಜಗ್ಗದ ವೇಗಾಸ್ ಸಂಗೀತವನ್ನು ಸ್ವಯಂ ಕಲಿಯಲಾರಂಭಿಸಿದ್ದರು. ಆ ಕಾಲಕ್ಕೆ ಆಕಾಶವಾಣಿಯ ಆಲಾಪಗಳೇ ಅವರ ಗುರು ಸ್ಥಾನವನ್ನು ತುಂಬಿದ್ದವು.

ಹೀಗೆ ಸಾಗಿ ಬಂದ ವೇಗಾಸ್ರೊಳಗಿನ ಸಂಗೀತ ಧ್ಯಾನಕ್ಕೆ ತಕ್ಕ ವೇದಿಕೆ ಸೃಷ್ಟಿಸಿದ್ದ ಚರ್ಚ್ನೊಳಗಿನ ವಾತಾವರಣ. ಕೆಲ ಕಾರ್ಯಕ್ರಮಗಳಲ್ಲಿ ಕೀಬೋರ್ಡಿನಂಥಾ ಪರಿಕರಗಳನ್ನು ನುಡಿಸಲಾರಂಭಿಸಿದ್ದ ವೇಗಾಸ್, ಆ ನಂತರದಲ್ಲಿ ಸಂಗೀತವನ್ನೇ ಹೊಟ್ಟೆಪಾಡಿಗೂ ನೆಚ್ಚಿಕೊಂಡಿದ್ದರು. ಸಮಾನ ಮನಸ್ಕರದ್ದೊಂದು ಬ್ಯಾಂಡ್ ಕಟ್ಟಿಕೊಂಡು ಮದುವೆ ಮುಂತಾದ ಕಾರ್ಯಕ್ರಮಗಳಲ್ಲಿ ಸಂಗೀತ ಕಚೇರಿಗಳನ್ನು ನಡೆಸಿಕೊಡಲಾರಂಭಿಸಿದರು. ಆ ನಂತರ ಕೆಲ ಕೊಂಕಣಿ ಆಲ್ಬಂಗಳಿಗೆ ಸಂಗೀತ ಸಂಯೋಜನೆ ಮಾಡಲಾರಂಭಿಸಿದ ವೇಗಾಸ್, ಕೆಲವಾರು ಪ್ರಾದೇಶಿಕ ಸಿನಿಮಾಗಳಿಗೂ ಸಂಗೀತ ಸಂಯೋಜನೆ ಮಾಡಿ ಸೈ ಅನ್ನಿಸಿಕೊಂಡಿದ್ದರು. ಹೀಗೆ ಬದುಕಿನ ಅನಿವಾರ್ಯತೆಯನ್ನೂ ಕೂಡಾ ಸಂಗೀತದ ಮಂತ್ರದಂಡ ಹಿಡಿದು ಎದುರಿಸುತ್ತಾ ಸಾಗಿದ ಅವರು ಪರಿಪೂರ್ಣ ಸಂಗೀತ ನಿರ್ದೇಶಕನಾಗಿ ರೂಪುಗೊಂಡಿದ್ದರು.
ಹೀಗೆ ಒಂದು ಹಂತ ದಾಟಿಕೊಂಡ ವೇಗಾಸ್, ಕೊಂಚ ಮೈ ಮರೆತಿದ್ದರೂ ಮಂಗಳೂರು ಸೀಮೆಯಲ್ಲಿಯೇ ಕಳೆದು ಹೋಗುತ್ತಿದ್ದರೇನೋ. ಬದುಕು ಹೀಗೆಯೇ ಮುಂದುವರೆಯಬಲ್ಲುದೆಂಬ ನಂಬಿಕೆ ಹುಟ್ಟಿದ ಮೇಲೂ, ಮತ್ಯಾವುದೋ ಮಾಯೆಯತ್ತ ಕೈಚಾಚುವಂತೆ ಮಾಡಿದ್ದು ವೇಗಾಸ್ರೊಳಗಿದ್ದ ಸಂಗೀತದ ಹಸಿವು. ಇದೆಲ್ಲವನ್ನೂ ಮೀರಿ ಸಂಗೀತ ಕ್ಷೇತ್ರದಲ್ಲಿ ಮಹತ್ತರವಾದುದನ್ನು ಸಾಧಿಸಬೇಕೆಂಬ ಆಕಾಂಕ್ಷೆಯಿಂದ ಅವರು ಬೆಂಗಳೂರಿಗೆ ತೆರಳುವ ನಿರ್ಧಾರ ಕೈಗೊಂಡಿದ್ದರು. ಹಾಗೆ ವೇಗಾಸ್ ಬೆಂಗಳೂರು ತಲುಪಿಕೊಂಡಿದ್ದು ೨೦೦೭ರಲ್ಲಿ. ಮಹಾನಗರಿಯ ಒಡಲು ಸೇರಿಕೊಂಡ ವೇಗಾಸ್ರ ಮುಂದಿದ್ದ ನಿಖರ ಗುರಿ ಖ್ಯಾತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಗರಡಿಗೆ ಸೇರಿಕೊಳ್ಳುವುದಾಗಿತ್ತು. ಹೇಗೋ ಪ್ರಯಾಸಪಟ್ಟು ಅದರಲ್ಲಿ ಯಶವನ್ನೂ ಕಂಡಿದ್ದರು.

ಹಳ್ಳಿ ಪ್ರತಿಭೆ ವನಿಲ್ ವೇಗಾಸ್ರ ಬದುಕಿ ಸರಿಯಾದ ದಿಕ್ಕಿನತ್ತ ಹೊರಳಿಕೊಂಡಿದ್ದು ರಿಕ್ಕಿ ಕೇಜ್ ಸಮ್ಮುಖದಲ್ಲಿಯೇ. ಬಹುಶಃ ಆ ನಿರ್ಧಾರದಲ್ಲಿ ವೇಗಾಸ್ ಕೊಂಚ ಆಯತಪ್ಪಿದ್ದರೂ ಗ್ರ್ಯಾಮಿ ಪ್ರಶಸ್ತಿ ಅವರಿಂದ ದೂರವೇ ಉಳಿಯುತ್ತಿತ್ತೇನೋ. ಕನ್ನಡಿಗ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ಸಂಗೀತ ನಿರ್ದೇಶಕ. ಆ ಕಾಲಕ್ಕೆ ರಿಕ್ಕಿಯ ಯಶದ ಹಾದಿಯಲ್ಲಿ ಪ್ರಥಮ ಹೆಜ್ಜೆಗಳು ಪಡಿಮೂಡಿಕೊಂಡಿದ್ದವಷ್ಟೇ. ಈ ಹಂತದಲ್ಲಿ ಬಳಿ ಬಂದ ವೇಗಾಸ್ರ ಪ್ರತಿಭೆ ಗಮನಿಸಿದ ರಿಕ್ಕಿ. ಅವರನ್ನು ಪ್ರತಿಯೊಂದು ವಿಚಾರದಲ್ಲಿಯೂ ಮತ್ತಷ್ಟು ಪಳಗುವಂತೆ ನೋಡಿಕೊಂಡಿದ್ದರು. ಸದಾ ಬೆಂಬಲವಾಗಿ ನಿಂತ ರಿಕ್ಕಿ ಸಂಗೀತ ಜಗತ್ತಿನತ್ತ ವೇಗಾಸ್ರನ್ನು ತೆರೆದುಕೊಳ್ಳುವಂತೆ ಮಾಡಿದ್ದರು. ಹೀಗೆಯೇ ಮುಂದುವರೆದು ಬಂದ ವೇಗಾಸ್, ೨೦೧೫ರಲ್ಲಿ ರಿಕ್ಕಿ ಕೇಜ್ಗೆ ಗ್ರ್ಯಾಮಿ ಪ್ರಶಸ್ತಿ ತಂದುಕೊಟ್ಟಿದ್ದ ವಿಂಡ್ಸ್ ಆಫ್ ಸಂಸಾರ ಆಲ್ಬಂಗೂ ಕೆಲಸ ಮಾಡಿದ್ದರು. ೨೦೧೬ರಲ್ಲಿ ಅತ್ಯುತ್ತಮ ಜಾನಪದ ವಿಭಾಗದಲ್ಲಿ ಲ್ಯಾಟಿನ್ ಗ್ರ್ಯಾಮಿಗೆ ನಾಮನಿರ್ದೇಶನಗೊಂಡಿದ್ದ ಹರ್ಟಾಡೋರ ಅಯಾಹುವಾಸ್ಕಾ ಡ್ರೀಮ್ಸ್ ಎಂಬ ಆಲ್ಬಂನಲ್ಲಿಯೂ ವೇಗಾಸ್ ಕೆಲಸ ಮಾಡಿದ್ದರು. ೨೦೦೦ನೇ ಇಸವಿಯ ಸುಮಾರಿಗೆ ಸಂಗೀತ ಕ್ಷೇತ್ರಕ್ಕೆ ಬಂದು, ಮಂಗಳೂರಿನ ಹಲವಾರು ಸಂಗೀತ ತಂಡಗಳಲ್ಲಿ ಕೀಬೋರ್ಡ್ ವಾದಕರಾಗಿ ಕಾರ್ಯ ನಿರ್ವಹಿಸಿದ್ದವರು ವೇಗಾಸ್. ಈವರೆಗೂ ಅವರು ಮೂರು ಸಾವಿರಕ್ಕೂ ಅಧಿಕ ಯಶಸ್ವೀ ಜಾಹೀರಾತುಗಳ ಭಾಗವಾಗಿದ್ದಾರೆ. ಒಂದಷ್ಟು ಗ್ರ್ಯಾಮಿ ಪ್ರಶಸ್ತಿ ವಿಜೇತ ಆಲಂಗಳಲ್ಲಿಯೂ ಕೈಚಳಕ ತೋರಿಸಿದ್ದಾರೆ. ಇದೀಗ ಗ್ರ್ಯಾಮಿ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ಸಂಗೀತ ಕ್ಷೇತ್ರದ ಅಂತಾರಾಷ್ಟ್ರೀಯ ಐಕಾನ್ ಆಗಿಯೂ ಅವತರಿಸಿದ್ದಾರೆ.

ಹೀಗೆ ಜಗತ್ತಿನ ಬಹುತೇಕ ರಾಷ್ಟ್ರಗಳ ಸಂಗೀತ ಸಾಧಕರನ್ನು ಗುರುತಿಸುತ್ತಿರುವ ಗ್ರ್ಯಾಮಿ ಪ್ರಶಸ್ತಿಗೆ ಅರವತ್ನಾಲಕ್ಕು ವರ್ಷಗಳ ಘನ ಇತಿಹಾಸವಿದೆ. ಇದುವರೆಗೂ ಆಯ್ಕೆಯ ವಿಚಾರದಲ್ಲಿ ಅದೇ ಘನತೆ, ಗೌರವಗಳನ್ನು ಕಾಪಿಟ್ಟುಕೊಂಡು ಬಂದಿರುವುದು ಈ ಪ್ರಶಸ್ತಿಯ ನಿಜವಾದ ಹೆಗ್ಗಳಿಕೆ. ೧೯೫೮ರಲ್ಲಿ ಶುರುವಾದ ಈ ಪ್ರಶಸ್ತಿ ಇದುವರೆಗೂ ಜಗತ್ತಿನ ನಾನಾ ಸಂಗೀತ ದಿಗ್ಗಜರನ್ನು ಅರಸಿ ಬಂದಿದೆ. ರಿಕ್ಕಿ ಕೇಜ್ ಮೂಲಕ ಆ ಗೌರವ ಕರುನಾಡಿಗೂ ಸಿಕ್ಕಿದೆ. ಇದೀಗ ಮೂರನೇ ಬಾರಿ ವನಿಲ್ ವೇಗಾಸ್ ಮೂಲಕ ಮತ್ತೆ ನಮಗೆಲ್ಲ ಹೆಮ್ಮೆಯ ಕ್ಷಣಗಳು ಎದುರಾಗಿವೆ. ಈ ಪ್ರಶಸ್ತಿ ನಮ್ಮ ನಾಡಿನ ಪ್ರತಿಭೆ ವನಿಲ್ ವೇಗಾಸ್ರನ್ನು ಮತ್ತಷ್ಟು ಎತ್ತರಕ್ಕೇರಿಸುವಂತಾಗಲೆಂಬುದು ಹಾರೈಕೆ.
ಇಂಥಾ ಗ್ರ್ಯಾಮಿ ಪ್ರಶಸ್ತಿ ಶುರುವಾದದ್ದು ೧೯೫೮ರಲ್ಲಿ. ವಿಶ್ವದ ಸಂಗೀತ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಪ್ರತಿಭಾನ್ವಿತರನ್ನು ಗುರುತಿಸಿ, ಪ್ರಶಸ್ತಿ ನೀಡಿ ಗೌರವಿಸುವ ಉದ್ದೇಶ ಅದರ ಹಿಂದಿತ್ತು. ಇಂಥಾದ್ದೊಂದು ಘನತೆವೆತ್ತ ಪ್ರಶಸ್ತಿಯನ್ನು ಶುರು ಮಾಡಿದ್ದು ಯುಎಸ್ ನ ರೆಕಾರ್ಡಿಂಗ್ ಅಕಾಡೆಮಿ. ಒಂದಷ್ಟು ವರ್ಷಗಳ ಕಾಲ ಸಂಗೀತ ಕ್ಷೇತ್ರದ ದಿಗ್ಗಜರುಗಳು ಸಿದ್ಧತೆ ನಡೆಸಿ, ನಾನಾ ದಿಕ್ಕಿನಿಂದ ಸಲಹೆ ಸೂಚನೆಗಳನ್ನು ಪಡೆದುಕೊಂಡು ಈ ಪ್ರಶಸ್ತಿಯನ್ನು ಆರಂಭಿಸಲಾಗಿತ್ತು. ಇದರ ಪರಿಕಲ್ಪನೆ ಮತ್ತು ಶೀರ್ಷಿಕೆಗೆ ಮೂಲವಾಗಿದ್ದದ್ದು ಗ್ರಾಮಾಫೋನ್. ಈಗಲೂ ಗ್ರಾಮಿ ಅವಾರ್ಡಿಗೆ ಗ್ರಾಮಾಫೋನ್ ಪ್ರಶಸ್ತಿ ಅಂತಲೂ ಕರೆಯಲಾಗುತ್ತದೆ. ಹಾಗೆ ನೋಡಿದರೆ, ೧೯೫೦ರ ಹೊತ್ತಿಗೆಲ್ಲ ಗ್ರಾಮಿ ಅವಾರ್ಡಿನ ತಯಾರಿಗಳು ಆರಂಭವಾಗಿದ್ದವು.
ರೆಕಾರ್ಡಿಂಗ್ ಕ್ಷೇತ್ರದಲ್ಲಿ ಭಾರೀ ಹೆಸರು ಮಾಡಿದ್ದ ಹಾಲಿವುಡ್ಡಿನ ನೂರಾರು ಮಂದಿಯನ್ನು ಒಳ ಒಂದು ಸಮಿತಿಯನ್ನೂ ಕೂಡಾ ರಚನೆ ಮಾಡಲಾಗಿತ್ತು. ಆರಂಭಿಕವಾಗಿ ಒಂದಷ್ಟು ದಿಕ್ಕಿನಲ್ಲಿ ಚರ್ಚೆಗಳು ನಡೆದಾದ ನಂತರದಲ್ಲಿ, ಈ ಪ್ರಶಸ್ತಿಗೆ ಯಾವ ಹೆಸರಿಡಬೇಕೆಂಬ ಪ್ರಶ್ನೆ ಎದುರಾಗಿತ್ತು. ಆ ಕಾಲದಲ್ಲಿಯೇ ಇದು ತಲೆಲಮಾರುಗಳನ್ನು ದಾಟಿಕೊಳ್ಳುವ ಪ್ರಶಸ್ತಿ ಎಂಬ ಭರವಸೆ ಹೊಂದಿದ್ದ ಆಯೋಜಕರು, ಶೀರ್ಷಿಕೆಗಾಗಿ ಅಭಿಪ್ರಾಯ ಸಂಗ್ರಹಣೆಯ ಮೊರೆ ಹೋಗಿದ್ದರು. ನೂರು ಮಂದಿಯನ್ನು ಹೆಸರು ಸೂಚಿಸುವಂತೆ ಕೇಳಿಕೊಳ್ಳಲಾಗಿತ್ತು. ಅದರಲ್ಲಿ ಪ್ರತಿಯೊಬ್ಬರೂ ಕೂಡಾ ನಾನಾ ಕಾನ್ಸೆಪ್ಟಿನೊಂದಿಗೆ ಪ್ರಶಸ್ತಿಯ ಶೀರ್ಷಿಕೆಯನ್ನು ಪ್ರಸ್ತುತಪಡಿಸಿದ್ದರು. ಕಡೆಗೂ ಫೋನೋಗ್ರಾಮ್ ಸಂಶೋಧಕರಾದ ಥಾಮಸ್ ಎಡಿಸನ್ ಅವರ ಗೌರವಾರ್ಥವಾಗಿ ಎಡ್ಡಿ ಎಂಬ ಶೀರ್ಷಿಕೆಯೊಂದು ಅಂತಿಮ ಘಟ್ಟ ತಲುಪಿಕೊಂಡಿಕತ್ತು.
ಆದರೆ, ಮುನ್ನೂರಕ್ಕೂ ಹೆಚ್ಚು ಸ್ಪರ್ಧಿಗಳು ಗ್ರಾಮಫೋನ್ ಪೊರಿಕಲ್ಪನೆಯಡಿಯಲ್ಲಿ ಗ್ರ್ಯಾಮಿ ಎಂಬ ಶೀರ್ಷಿಕೆಯನ್ನು ದಾಖಲಿಸಿದ್ದರು. ಕಡೆಗೂ ಕೂಡಾ ಅದಏ ಹೆಸರನ್ನು ಈ ಅವಾರ್ಡಿಗೆ ನಿಕ್ಕಿ ಮಾಡಲಾಗಿತ್ತು. ಮೊದಲ ಗ್ರ್ಯಾಮಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆದದ್ದು ೧೯೫೯ರ ಮೇ ೪ರಂದು. ಏಕಕಾಲದಲ್ಲಿಯೇ ಆ ಸಮಾರಂಭ ಕ್ಯಾಲಿಫೋರ್ನಿಯಾ ಮತ್ತು ನ್ಯೂಯಾರ್ಕಿನಲ್ಲಿ ನಡೆದಿತ್ತು. ಹಾಗೆ ಆರಂಭವಾಗಿದ್ದ ಈ ಪ್ರಶಸ್ತಿಗಳೀಗ ನೂರಾರು ವಿಭಾಗಗಳಲ್ಲಿ ಪ್ರಚಲಿತದಲ್ಲಿವೆ. ವಿಶೇಷವೆಂದರೆ, ಈ ಪ್ರಶಸ್ತಿ ವರ್ಷದಿಂದ ವರ್ಷಕ್ಕೆ ನಂಬಿಕೆ ಉಳಿಸಿಕೊಂಡು ಇಂದಿಗೂ ಅದೇ ಪ್ರತಿಷ್ಠೆಯೊಂದಿಗೆ ಮುಂದುವರೆದುಕೊಂಡು ಬರುತ್ತಿದೆ.