ಬುಧವಾರ, ಜುಲೈ 2, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

interesting facts: ಗಡ್ಡದ ಗೂಡಲ್ಲಿ ಹುಟ್ಟಿತ್ತು ಬಾತುಕೋಳಿ!

Majja Webdeskby Majja Webdesk
14/04/2025
in Majja Special
Reading Time: 2 mins read
interesting facts: ಗಡ್ಡದ ಗೂಡಲ್ಲಿ ಹುಟ್ಟಿತ್ತು ಬಾತುಕೋಳಿ!

-ಅದು ಜಗತ್ತಿನ ಅತ್ಯಂತ ಅಪಾಯಕಾರಿ ಸ್ಥಳ!

-ಅರ್ಜೆಂಟಾದ್ರೆ ಅಲ್ಲಿಗೇ ಬಂದು ನಿಲ್ಲುತ್ತೆ ಟಾಯ್ಲೆಟ್ ಬಂಡಿ! 

 

ಗಂಡಸರ ಗಡ್ಡದಲ್ಲಿ ‘ಹೇನೇನೂ’ ಹುಟ್ಟೋದಿಲ್ಲ ಅನ್ನೋ ಮಾತನ್ನು ಸುಳ್ಳು ಮಾಡಿದ್ದಾನೆ….ಇಂತಹ ಉಪದ್ರವಿ ಕೀಟಗಳ ಬದಲು ಸರಿಯಾಗಿ ಬಾತು ಕೋಳಿಗೆ ಜನ್ಮ ನೀಡಿದ್ದಾನೆ. ಮೊಟ್ಟೆ ಮೇಲೆ ಕೂತು ಕಾವು ನೀಡಿ ಕೋಳಿ ಮಾಡಿದನಾ? ಇಲ್ಲ! ತನ್ನ ಗಡ್ಡವನ್ನೇ ಕೋಳಿ ಗೂಡಿನಂತೆ ಮಾಡಿ ಅಲ್ಲಿಯೇ ಜೋಪಾನ ಮಾಡಿ ಬಾತು ಕೋಳಿಗೆ ಜೀವ ಬರುವಂತೆ ಮಾಡಿದ್ದಾನೆ. ಗಡ್ಡದಲ್ಲಿ ಬಾತು ಕೋಳಿಗಳ ಮೊಟ್ಟೆ ಇರಿಸಿಕೊಂಡ. ಆರಂಭದಲ್ಲಿ ೧-೨ ಹಾಳಾಯಿತು. ದೃತಿಗೆಡದೆ ಮುಂದುವರೆಸಿದ. ನಿರೀಕ್ಷೆ ಫಲ ನೀಡಿತು. ಬಾತೊಂದು ಜನ್ಮ ತಳೆದು ಹೊರಗೆ ಬಂದು ತಲೆ ಏರಿತು. ಬಾತಿಗೆ ಈತನೇ ‘ದಾತ’.


ಕೇಳಲು ಇದು ಸುಲಭ ಎನಿಸುತ್ತದೆ. ಗಡ್ಡದಲ್ಲಿಯೇ ಕೋಳಿ ಮೊಟ್ಟೆ ಇರಿಸಿಕೊಂಡು ಜೀವ ನೀಡುವುದು ಹುಡುಗಾಟದ ಕೆಲಸವಲ್ಲ. ಪ್ರಸವ ವೇದನೆಯಷ್ಟು ಕಷ್ಟವಾಗದಿರಬಹುದು. ಆದರೆ ಅಷ್ಟೇ ಜೋಪಾನವಾಗಿ ಆರೈಕೆ ಮಾಡಬೇಕು. ಆ ವಿಷಯದಲ್ಲಿ ಅಮೆರಿಕದ ಓಹಿಯೊ ನಿವಾಸಿ ಹಿರೊ ಬ್ರಿಯಾನ್ ಡಾಸ್ ಅತ್ಯಂತ ನಾಜೂಕಿನ ಮನುಷ್ಯ. ಈತ ಬಾತಿಗೆ ಜನ್ಮ ನೀಡಿದಾಗ… ನೋಡ್ತಾಯಿರಿ… ಇದು ಹೆಚ್ಚು ಕಾಲ ಬದುಕದು ಎಂದು ಕೆಲವರು ಭವಿಷ್ಯ ನುಡಿದಿದ್ದರು. ಆದರೆ ಅದೆಲ್ಲವೂ ಹುಸಿಯಾಗಿ… ವರ್ಷ ಎರಡು ಉರುಳಿದೆ. ಬಾತು ಕೋಳಿ ಅಸು ನೀಗಿಲ್ಲ. ಈತನ ಗಡ್ಡ, ತಲೆ, ಮುಖದ ಮೇಲೆಲ್ಲಾ ಈ ಕೋಳಿ ಅಡ್ಡಾಡುತ್ತದೆ. ಹೇಳಿ ಕೇಳಿ ಅಪ್ಪ ಅಲ್ವಾ? ಈತನೂ ಅದಕ್ಕೆ ಸಲುಗೆ ನೀಡಿದ್ದಾನೆ. ಅನಿಲ್‌ಕಪೂರ್-ಮಾಧುರಿ ದೀಕ್ಷಿತ್ ಜೋಡಿ ಈ ಸಂಗತಿಯನ್ನು ಕಂಡಿದ್ದರೆ ‘ಆuಛಿಞ, ಜuಛಿಞ, ಕರ್‌ನೇ ಲಗಾ…’ಎಂದು ಹಾಡುತ್ತಿದ್ದರೋ ಏನೋ…?!

ವೀರ್ಯಗಾಥೆ!


ತಿಂಗಳಿಗೆ ೨೫ ಲಕ್ಷ ರೂಪಾಯಿಗಳನ್ನು ಗಳಿಸಿದರೂ ‘ಅಯ್ಯೋ ಎಮ್ಮೆ ಕೋಣ’ ಎಂಬ ಮಾತು ಕೇಳಬೇಕಾಗಿದೆ. ‘ಛೇ… ಹೀಗನ್ನಬಾರದಲ್ವಾ?’ ಇದು ಅಕ್ಷರಶಃ ಎಮ್ಮೆ ಕೋಣವೇ ಆಗಿದೆ. ಹೆಸರು ಭೀಮ. ಹರ್ಯಾಣದ ಕುರುಕ್ಷೇತ್ರದ ಸುನಾರಿಯೋದ ಕರ್ಮವೀರ ಸಿಂಗ್ ಇದರ ಮಾಲೀಕ. ವಯಸ್ಸು ಇನ್ನೂ ಐದೇ ವರ್ಷ. ಆಗಲೇ ದಿನಕ್ಕೆ ೪-೫ಎಂ.ಎಲ್. ವೀರ್ಯ ಸುರಿಸುತ್ತಾನೆ. ಈ ವೀರ್ಯವೇ ಭೀಮನ ಯಶಸ್ಸಿಗೆ ಕಾರಣ. ಈ ಕೋಣವೇ ಕರ್ಮವೀರನ ಆಯದ ಮೂಲವಾಗಿದೆ. ಈ ಎಮ್ಮೆಯ ವೀರ್ಯಕ್ಕೆ ಎಲ್ಲಿಲ್ಲದ ಡಿಮ್ಯಾಂಡ್.
ಒಂದೊಂದು ತೊಟ್ಟಿನ ವೀರ್ಯಕ್ಕೂ ಮೌಲ್ಯವಿದೆ. ೭ ಕೋಟಿ ರೂಪಾಯಿಗಳ ಬೇಡಿಕೆ ಬಂದರೂ ಕರ್ಮವೀರ್ ಮಾರಿಲ್ಲ. ಈ ವೀರ್ಯದಿಂದ ಜನಿಸಿದ ಎಮ್ಮೆಗಳು ಅಪರಿಮಿತ ಹಾಲು ನೀಡುತ್ತದೆ. ಅದರ ಮಾಂಸ ಕೂಡ ಅಷ್ಟೇ ರುಚಿಯಂತೆ. ಚರ್ಮವೂ ಶ್ರೇಷ್ಠ. ಭಾರತದಲ್ಲಿ ಈ ರೀತಿಯ ‘ಮುರ್ರಾ’ ಎಮ್ಮೆ ತಳಿಯ ಬಗೆಗೆ ಹೆಚ್ಚಿನ ಜನರಿಗೆ ಜ್ಞಾನವಿಲ್ಲ. ಸರ್ಕಾರವೂ ಈ ಕುರಿತು ಜಾಗೃತಿ ಮೂಡಿಸಿಲ್ಲ. ಉತ್ತರ ಭಾರತದ ಪಂಜಾಬ್, ಹರ್ಯಾಣಗಳಲ್ಲಿ ತಕ್ಕಮಟ್ಟಿಗೆ ತಿಳಿದಿದೆ. ಆದರೆ ದಕ್ಷಿಣಭಾರತೀಯರಿಗೆ ಅಪರಿಚಿತ. ತಿಂಗಳಿಗೆ ಲಕ್ಷಾಂತರ ಆದಾಯ ತರುವ ಈ ಎಮ್ಮೆಯ ‘ವೀರ್ಯಗಾಥೆ’ ಹೇಗಿದೆ? ‘ನೀನಾರಿಗಾದೆಯೋ ಎಲೆ ಮಾನವಾ…?’ ಎಂದು ಆ ಎಮ್ಮೆ ಕೋಣ ಕೇಳುತ್ತಿದೆ. ‘ದನಕಾಯೋನು’ ಕೋಣಕ್ಕೆ ಉತ್ತರ ನೀಡಲಿ!

ಕ್ಷೀರದಾನಿ


ಈ ಅಪ್‌ಡೇಟೆಡ್ ಅಮ್ಮಾಯಿ ದಿನಕ್ಕೆ ೬.೫ ಲೀಟರ್‌ಗಳಷ್ಟು ಹಾಲು ಹಿಂಡುತ್ತಾಳೆ. ಕಳೆದ ೫ ವರ್ಷಗಳಿಂದಲೂ ಇವಳಿಗೆ ಇದೇ ಕಾಯಕ. ನಿತ್ಯ ೫ ತಾಸು ಹಾಲು ಹಿಂಡಲೇ ಮೀಸಲು. ಸಂಗ್ರಹಿಸಿದ ಹಾಲನ್ನು ಫ್ರೀಜರ್‌ನಲ್ಲಿಟ್ಟು ಕಾಪಾಡುತ್ತಾಳೆ. ಬೇಡಿ ಬರುವವರಿಗೆ ನೀಡುತ್ತಾಳೆ. ಸುಮಾರು ೨.೫ ಟನ್‌ಗಳಷ್ಟು ಹಾಲನ್ನು ದಾನ ಮಾಡಿದ್ದಾಳೆ.ಅ ವಳು ಹಿಂಡುವುದು ಹಸು ಅಥವಾ ಎಮ್ಮೆ ಹಾಲೇ? ಎರಡೂ ಅಲ್ಲ, ತನ್ನದೇ ಎದೆ ಹಾಲು. ಈಕೆ ಎರಡನೇ ಬಾರಿಗೆ ಗರ್ಭಧರಿಸಿದಾಗ ಕ್ಷೀರೋತ್ಪಾದನೆ ಶುರುವಾಯಿತು. ಅಂದಿನಿಂದ ಇವಳ ಹಾಲಿನ ದಾನವೂ ಆರಂಭವಾಗಿದೆ.
ನಿತ್ಯ ೫ ತಾಸು ಹಿಂಡುತ್ತಾ ಕೂರುವುದು ಹಿಂಸೆಯಲ್ಲವೇ? ಎಂದರೆ ಇಲ್ಲ ಎನ್ನುತ್ತಾಳೆ. ಅಗತ್ಯವಿರುವ ಮಕ್ಕಳಿಗೆ ಇದನ್ನು ದಾನ ಮಾಡುವುದು ಹೆಚ್ಚಿನ ಆನಂದ ಎನ್ನುತ್ತಾಳೆ. ವೈದ್ಯರು ಏನಂತಾರೆ? ಹಾರ್ಮೋನ್‌ಗಳ ವೈಪರೀತ್ಯದಿಂದ ಒಮ್ಮೊಮ್ಮೆ ಹೀಗಾಗುತ್ತದೆ ಎನ್ನುತ್ತಾರೆ. ೧ ಕೋಟಿ ಮಹಿಳೆಯರಲ್ಲಿ ಓರ್ವರಿಗೆ ಹೀಗಾಗುತ್ತದೆ. ಸೂಕ್ತ ಚಿಕಿತ್ಸೆ ಮಾಡಿಸಿಕೊಂಡರೆ ಇದನ್ನು ತಡೆಗಟ್ಟಬಹುದು. ಚಿಕಿತ್ಸೆ ಬೇಡವೆಂದರೆ ಕೆಲವೇ ವರ್ಷಗಳಲ್ಲಿ ತಾನಾಗೇ ಬತ್ತಿ ಹೋಗಲಿದೆ ಎನ್ನುವರಂತೆ. ಆದರೆ ಈ ಕ್ಷೀರದಾನಿಗೆ ಈ ಮದ್ದು ಬೇಡ-ಶಸ್ತ್ರಚಿಕಿತ್ಸೆಯೂ ಬೇಡವೆನ್ನುವಳು. ಬರುವಷ್ಟು ದಿನ ಹಾಲು ಹಿಂಡಿಕೊಡುತ್ತೇನೆ ಎನ್ನುತ್ತಾಳೆ ಹಾಲಿನಂತಹ ಮನದ ಈಕೆ. ‘ಎದೆಹಾಲಿನ ದಾನ ಮಹಾದಾನ’ ಎನ್ನುವ ಎಲಿಸಾಬೆತ್ ಆಂಡರ್ ಸನ್ ಅಮೆರಿಕದ ಓರೆಗಾಂವ್‌ನಲ್ಲಿದ್ದಾಳೆ.
ಸ್ವಯಂಪ್ರಕಾಶ
ನಿಮ್ಮ ಸುಂದರ ‘ಮೈಕಾಂತಿ’ಗೆ ನಮ್ಮ ಎಣ್ಣೆ, ಲೋಷನ್‌ಗಳನ್ನು ಬಳಸಿ ಎಂದು ನಿತ್ಯ ನೂರಾರು ಕಂಪೆನಿಗಳು ಜಾಹೀರಾತು ನೀಡುತ್ತವೆ. ಆದರೆ ಅದೆಲ್ಲಕ್ಕಿಂತಲೂ ಮಿಗಿಲಾದುದೆಂದರೆ ನಾರ್ತ್‌ಸ್ಟಾರ್! ಇದನ್ನು ಚರ್ಮದೊಳಗೆ ಇಳಿಬಿಟ್ಕೊಂಡರೆ ಕತ್ತಲಲ್ಲೂ ಮಿಂಚಬಹುದು…! ಮೂವರು ಜೈವಿಕ ಬೇಧಕರ (ಃiohಚಿಛಿಞeಡಿs) ಸಂಶೋಧನೆ ಇದು. ಸಣ್ಣ ನಾಣ್ಯವೊಂದರ ಅಗಲವಿರುವ ವಿಶೇಷ ಎಲ್‌ಇಡಿ ಬಿಲ್ಲೆಗೆ ‘ನಾರ್ತ್ ಸ್ಟಾರ್’ ಎಂದು ನಾಮಕರಣ ಮಾಡಿದ್ದಾರೆ. ಕೈ, ತೋಳು, ಮುಂಗೈಗಳ ಚರ್ಮದೊಳಗೆ ಇಳಿಸುತ್ತಾರೆ. ಶರೀರದ ಶಾಖಕ್ಕೆ ಮತ್ತು ಜೊತೆಗೆ ನೀಡುವ ಆಯಸ್ಕಾಂತವನ್ನು ಬಳಸಿದರೆ ೩ ವೋಲ್ಟ್‌ಗಳ ಬ್ಯಾಟರಿ ಚಾಲೂ ಆಗಿ, ೧೦ ಕ್ಷಣ ಎಲ್‌ಇಡಿ ಬೆಳಗುತ್ತದೆ. ಬೆಳಕು ಬೇಕೆನಿಸಿದಾಗಲೆಲ್ಲಾ ಹೀಗೆ ಮಾಡಬಹುದು.
ತಡೆ ರಹಿತ ವಿದ್ಯುತ್ ಸಾಧ್ಯವೇ? ಗೊತ್ತಿಲ್ಲ… ಆದರೆ ೧೦ ಕ್ಷಣದಲ್ಲಿ ಕ್ಯಾಂಡಲ್ ಹುಡುಕಿಕೊಳ್ಳಲು, ಅಥವಾ ಟಾರ್ಚ್ ಹುಡುಕಿ ಆನ್ ಮಾಡಲು ಸಹಕಾರಿಯಾಗಲಿದೆ. ಜರ್ಮನ್ನರ ಈ ಅವಿಷ್ಕಾರವಿದು. ಅಲ್ಲಿನವರಿಗೆ ಇದು ಎಷ್ಟು ಉಪಯೋಗವೋ ತಿಳಿಯದು. ಕೈಕೊಡುವ ವಿದ್ಯುತ್ ಇರುವ ನಮ್ಮ ರಾಜ್ಯಕ್ಕೆ ಹೆಚ್ಚಿನ ಅಗತ್ಯವಿದೆ. ಇದರಿಂದ ಚರ್ಮಕ್ಕಾಗಲಿ, ಶರೀರಕ್ಕಾಗಲಿ ಅಡ್ಡಪರಿಣಾಮಗಳಿಲ್ಲವೇ? ಚರ್ಮ ಸುಲಿದು ಅದರೊಳಗೆ ಇದನ್ನು ಪೋಣಿಸಿದಾಗ ಸಹಜವಾಗಿಯೇ ನೋವು-ಬಾವು ಇರಲಿದೆ. ನಂತರ ತೊಂದರೆ ಇಲ್ಲವಂತೆ. ದುಡ್ಡುಕೊಟ್ಟು ನೋವು ತಿನ್ನುವ ದರ್ದೆಕೆ? ಆ…ದುಡ್ಡುಕೊಟ್ಟು ಅಚ್ಚೆ ಹಾಕಿಸಿಕೊಳ್ಳುವುದು ಎಷ್ಟು ಆನಂದವೋ ಅಷ್ಟೇ ಪರಮಾನಂದ ನೀಡಲಿದೆ ಈ ‘ನಾರ್ತ್ ಸ್ಟಾರ್’!
ಸಾವಿನ ಸಂಭ್ರಮ!
ನಮ್ಮ ನಿಧನವನ್ನು ನಾವೇ ಸಂಭ್ರಮಿಸುವ ವಿಶೇಷ ಹಬ್ಬದ ಆಚರಣೆಯಿದು. ‘ಮಹಾಲಯ ಅಮಾವಾಸ್ಯೆ ದೂರ ಇರುವ ಈ ಸಂದರ್ಭದಲ್ಲಿ ಇದೇನ್ರೀ ಅನಿಷ್ಠಾ?!’ ಇಲ್ರೀ… ‘ಖಿಡಿಥಿ-beಜಿoಡಿe-ಥಿou-ಜie’ – ‘ಸಾಯುವ ಮುನ್ನ-ಪ್ರಯತ್ನಿಸಿ’ ಎಂಬ ನಿಧನದಾಟವಿದು. ಅಲಿಯಾಸ್ ಹಬ್ಬ. ಬದುಕಿದ್ದವರ ಬೊಂಬೆಗಳನ್ನು ಅಥವಾ ಚಿತ್ರಗಳನ್ನು ಶವಪೆಟ್ಟಿಯಲ್ಲಿಟ್ಟು, ಹೂವಿನ ಹಾರ ಹಾಕಿಸುತ್ತಾರೆ. ಗಂಧ ಕಡ್ಡಿಯಿಂದ ಪೂಜಿಸುವಂತೆ ಸೂಚಿಸುತ್ತಾರೆ. ದೀಪಕ್ಕಾಗಿ ಕ್ಯಾಂಡಲ್ ಹಚ್ಚುವಂತೆ ಹೇಳುತ್ತಾರೆ. ಬಂಧುಗಳ ಆದಿಯಾಗಿ ಎಲ್ಲರೂ ಕಣ್ಣೀರು ಸುರಿಸಿ, ಸಾವನ್ನು ಸ್ವಾಗತಿಸುವಂತೆ ಸೂಚಿಸುತ್ತಾರೆ…! ‘ಸತ್ತ’ಂತೆ ನಟಿಸುವವನ ಪರವಾಗಿ ಆಗಮಿಸಿದ್ದ ಎಲ್ಲ ಅತಿಥಿಗಳು ಮಾಡುತ್ತಾರೆ. ಅಸುನೀಗಿದವನ ಗುಣ ಗಾನ ಮಾಡುತ್ತಾರೆ.
ಎದೆ ಎದೆ ಬಡಿದುಕೊಂಡು ಅಳುತ್ತಾರೆ ಅಲ್ವಾ? ಛೇ ಛೇ… ಇದೇನು ತಮಿಳುನಾಡು ಅಲ್ಲಾ ರೀ ಹಾಗೆಲ್ಲಾ ಮಾಡಲು… ಮುಂದೆ ಓದಿ…ಸುಮಾರು ಒಂದು ತಾಸು ಈ ಡ್ರಾಮ ನಡೆಯುತ್ತದೆ. ಬದುಕಿದ್ದಾಗಲೇ ಸೂತಕದ ಮಾತುಗಳನ್ನು ಕೇಳುವುದರಿಂದ ಅದೇನು ಸುಖವಿದೆಯೋ ತಿಳಿಯದು. ಆದರೂ ಈ ಉತ್ಸವಕ್ಕೆ ಜಪಾನಿಯರು ಸು(ಶು)ಖಾಸ್ತು ಎನ್ನುತ್ತಾರೆ. ದಿನೇ ದಿನೇ ಈ ಆಚರಣೆ ಪ್ರಸಿದ್ಧಿಗೆ ಬರುತ್ತಿದೆ. ಜಪಾನೀಯರಿನ್ನೂ ಸಾಯೋದ್ರಲ್ಲೇ ಇದ್ದಾರೆ. ನಾವು ಬದುಕಿದ್ದಂತೇ ಘಠಶ್ರಾದ್ಧಾವನ್ನೂ ಮಾಡಿಕೊಳ್ಳುತ್ತೇವೆ. ಅಂದರೆ ತಿಥಿ ಕೂಡ ಮಾಡಿ ಮುಗಿಸುತ್ತೇವೆ. ಹಾಗೆ ತಿಥಿ ಮಾಡಿಸಿಕೊಂಡವನಿಗೆ ಸಕಲ ಧಾರ್ಮಿಕ ಆಚರಣೆಗಳಿಂದಲೂ ದೂರ ಇರಿಸುತ್ತೇವೆ. ಅಂದರೆ ನಿಧನದ ವಿಷಯದಲ್ಲಿ ಭಾರತೀಯರು ನಿಧಾನ ಮಾಡಿಲ್ಲ. ಸಾಕಷ್ಟು ಮುಂದಿದ್ದೇವೆ ತಾನೆ? ಹೌದು. ನಮ್ಮದು ಟ್ರಾಜಿಡಿ ಆದರೆ ಜಪಾನೀಯರದ್ದು ಕಾಮಿಡಿ!

ಮತ್ಸ್ಯಬೇಲಿ


ಟರ್ಕಿ ದೇಶದ ಎಯಿಜಿನ್ ಸೀ ಬಳಿಯ ಕಾಂಪೌಂಡ್ ರಹಿತ ಈ ಮನೆಗೆ ಬೇಲಿ ಇಲ್ಲ. ೨೦ ಸಾವಿರ ಡಾಲರ್ ಖರ್ಚು ಮಾಡಿ ೫೦ ಮೀಟರ್ ಉದ್ದದ ಮತ್ಸ್ಯಾಗಾರ ನಿರ್ಮಿಸಿದ್ದಾನೆ ಮಾಲೀಕ ಮೊಹ್ಮೆಟ್ ಆಲಿ ಗೊಕ್ಸೆಗು. ಬಾಹ್ಯಕ್ಕಿಂತಲೂ ಆಂತರಿಕ ಸೌಂದರ್‍ಯ ಮುಖ್ಯ ಎಂಬುದು ತಿಳಿದಿದೆ. ಆದರೂ ಆಕರ್ಷಕ ‘ಮತ್ಸ್ಯ ಬೇಲಿ’ ನಿರ್ಮಿಸಿದ್ದಾನೆ. ಗೊಕ್ಸೆಗು ಏನು ಗುಗ್ಗು ಅಲ್ಲಾ ರೀ…ಮನೆಯೊಳಗೆ ಬರುವ ಅತಿಥಿಗಳಿಗಿಂತಲೂ ಹೊರಗೆ ನಿಲ್ಲುವವರೇ ಅಧಿಕವಾಗಿರುವಂತೆ ಮಾಡಿರಬೇಕು. ಗಾಜಿನ ಮತ್ಸ್ಯಾಗಾರದಲ್ಲಿ ಜೀವಂತ ‘ಮೀನಾರಾಶಿ’ಯೊಂದಿಗೆ ಆಕ್ಟೋಪಸ್ ಕೂಡ ಇದೆಯಂತೆ. So ಗೋಲಿ ಹೊಡೆದರೆ ಅಪಾಯ ಗಟ್ಟಿ.
ಇದು ಟರ್ಕಿಯ ಮತ್ಸ್ಯ ಬೇಲಿಯ ಮನೆ ನೋಡಿ… ಪ್ರಾನ್ಸ್‌ನ ಬಾಂದೋಲ್ ನಗರಕ್ಕೆ ಬನ್ನೀ… ಈ ಮನೆಯಲ್ಲಿ ಮತ್ಸ್ಯಗಾರವೇ ಇದೆ. ರೀ ಈ ಮತ್ಸ್ಯಾಗಾರಕ್ಕೆ ಇಳಿದು ಈಜಬಹುದು. ಮೀನಿನಂತೆ ಪುಟ್ಟ ಕಲ್ಲುಗಳು, ಅವುಗಳ ಮೇಲೆಲ್ಲಾ ಈಜಿ ಮೋಜು ಮಾಡಬಹುದು. ವಿಶಿಷ್ಟ ವಿನ್ಯಾಸದ ಅಕ್ವೇರಿಯಂ ಈಜುಕೊಳದಿಂದ ಮನೆಯ ಒಳಗೂ, ಹೊರಗೂ ಒಂದೇ ರೀತಿಯಾಗಿ ಕಾಣಿಸಲಿದೆ. ಈ ಅಕ್ವೇರಿಯಂಗಿಳಿದರೆ, ಗಾಜಿನ ಗೋಡೆಯ ಮೂಲಕ, ಮನೆಯೊಳಗೇ ಈಜಿದ ಅನುಭವವಾಗಲಿದೆ. ಈ ವಿನ್ಯಾಸವನ್ನು ಖ್ಯಾತ ಕಟ್ಟಡ ವಿನ್ಯಾಸಕಾರ ರೂಡಿ ರಿಕೊಟ್ಟಿ ರೂಪಿಸಿದ್ದಾನೆ. ಏರ್‌ಬಿಎನ್‌ಬಿ ಎಂಬ ಸಂಸ್ಥೇ ರೂಪಿಸಿರುವ ಈ ಮನೆಯಲ್ಲಿ ‘ಹೋಂ ಸ್ಟೇ’ ಮಾಡಲು ಅಡ್ಡಿಯಿಲ್ಲ. ಆದರೆ ದುಭಾರಿ ತೆರಬೇಕು. ವಾರಾಂತ್ಯದಲ್ಲಿ ಇನ್ನಷ್ಟು ಕಾಸ್ಟ್ಲಿ. ಕಾಸಿಲ್ಲಾ ಅಂದ್ರೆ ಈ ಮನೆಯಲ್ಲಿ ಕರಿಮಣಿ ಕೂಡ ತೋರಿಸರು. ಇದಕ್ಕಿಂತಲೂ ಗೋಲಿ ಹೊಡೆಯದೆ ಟರ್ಕಿಯ ಮನೆಯನ್ನೇ ಮನತುಂಬಿಕೊಳ್ಳಲು ಅಡ್ಡಿಯಿಲ್ಲ.

ಪಾಂಚಾಲಿ

ರಜೋವರ್ಮಳನ್ನು ‘ಮುತ್ತು ಐದೆ’, ದ್ರೌಪದಿ, ಪಾಂಚಾಲಿ ಎಂದೆಲ್ಲಾ ಕರೆಯಬಹುದು. ಮುತೈದೆ ಓಕೆ ಆದರೆ ಮುತ್ತು ಐದೆ ಹಾಗೂ ದ್ರೌಪದಿ ಎಂದೆಲ್ಲಾ ಯಾಕೆ ಕಿಂಡಲ್ ಮಾಡುವುದು? ಇವಳಿಗೆ ಐವರು ಗಂಡದಿಂದರಿದ್ದಾರೆ. ಮಹಾಭಾರತದಲ್ಲಿದ್ದಂತೆ ಇವರೆಲ್ಲ ಸಹೋದರರೇ. ಅಚ್ಚರಿಯ ಸಂಗತಿಯೆಂದರೆ ಒಂದು ಕೋಣೆಯ ಮನೆಯಲ್ಲಿ ಎಲ್ಲರೂ ವಾಸವಾಗಿದ್ದಾರೆ. ರಾತ್ರಿಯಾದರೇ…? ಥೇಟ್ ‘ಮಹಾಭಾರತ’ದ ಪದ್ಧತಿ. ಒಬ್ಬರಿಗೆ ಮಾತ್ರ ಅವಕಾಶ- ಉಳಿದವರಿಗೆ ಆಕಾಶ! ಇನ್ನೊಂದು ವಿಷಯ ಏನಪ್ಪಾ ಅಂದರೇ ಈಕೆ ಒಂದು ಮಗುವಿನ ತಾಯಿ ಕೂಡ ಹೌದು.
‘ಗೊತ್ತಿಲ್ಲಪ್ಪ!’ ಎನ್ನುತ್ತಾಳೆ ರಜೋವರ್ಮ-ಆ ಮರ್ಮ ಬಿಡಿಸಲು ಸಹೋದರರು ಯಾರೂ ಸಿದ್ದರಿಲ್ಲ! ಏಕೆಂದರೆ ಅವರಿಗೆ ನೆಮ್ಮದಿ ಬೇಕು. ಮೇಲಾಗಿ ಎಲ್ಲರಿಗೂ ಆ ಮಗು ಬೇಕು. ನಕ್ಕಾಗ ಇವನಂತೆ, ಅತ್ತಾಗ ಅವನಂತೆ, ಬಿದ್ದಾಗ ಮತ್ತೊಬ್ಬನಂತೆ, ನಡೆದಾಗ ತನ್ನಂತೆ… ಎಂದೆಲ್ಲಾ ತಮ್ಮ ತಮ್ಮಲ್ಲಿಯೇ ಸಮಾಧಾನ ಮಾಡಿಕೊಳ್ಳುವ ದೊಡ್ಡ ಗುಣವುಳ್ಳವರು. ಈ ಪಾಂಚಾಲಿಯ ಕುಟುಂಬ ಡೆಹ್ರಾಡೂನ್ ಸಮೀಪದ ಹಳ್ಳಿಯಲ್ಲಿದೆ. ಕೂಲಿ ಕಾರ್ಮಿಕರಾಗಿರುವ ಇವರದ್ದು ಬಡತನವಿರಬಹುದು. ಆದರೆ ಮಾನಸಿಕ ನೆಮ್ಮದಿಗೆ, ಹೃದಯ ಶ್ರೀಮಂತಿಕೆಗೆ ಕೊರತೆಯಿಲ್ಲ. ಇವರ ಪ್ರವರ ನಮ್ಮ ಮಾಧ್ಯಮಗಳಲ್ಲಿ ಮಾತ್ರವಲ್ಲದೆ ವಿಶ್ವದ ನಾನಾ ಮಾಧ್ಯಮಗಳಲ್ಲಿ ಪ್ರಸಾರ/ಪ್ರಕಟವಾಗಿದೆ. ಆದರ್ಶ ದಾಂಪತ್ಯಕ್ಕೆ ಇವರು ಮತ್ತೊಂದು ಹೆಸರು. ರಜೋವರ್ಮಳ ತಾಯಿ ಕೂಡ ಮೂವ್ವರು ಸಹೋದರರನ್ನು ವರಿಸಿದ್ದಳಂತೆ. ‘ತಾಯಂತೆ ಮಗಳು-ನೂಲಿನಂತೆ ಸೀರೆ’ ಎಂಬ ಗಾದೆಗೆ ರಜೋ- ರುಜುವಾತಾಗಿದ್ದಾಳೆ.

‘ಲೌಲಿ’ ಲೌ ಆಕಾರದ ಡ್ಯಾಂ


ಇದೇನು ಪ್ರೇಮಿಗಳಿಗಾಗಿ ನಿರ್ಮಿಸಿದ್ದಾರೆಯೇ? ಪ್ರೇಮಿಗಳು ಬರಲು ಅಡ್ಡಿಯಿಲ್ಲ. ಆದರೆ ಅವರಿಗಾಗಿ ಮಾತ್ರವೇ ಇದನ್ನು ನಿರ್ಮಿಸಿಲ್ಲ. ಟೌಮ್ ಸೌಕ್ ಹೈಡ್ರೋ ಎಲೆಕ್ಟ್ರಿಕ್ ಪವರ್ ಸ್ಟೇಷನ್‌ಗೆ ನೀರು ಸಂಗ್ರಹಿಸಲು ನಿರ್ಮಿಸಿರುವ ಅಣೆಕಟ್ಟೆ ಇದು. ಈ ಅಣೆಕಟ್ಟೆಯನ್ನು ಲೌ ಆಕಾರದಲ್ಲಿ ಏಕೆ ನಿರ್ಮಿಸಿದ್ದಾರೆಂಬುದು ತಿಳಿದಿಲ್ಲ. ನೀರು ಸಂಗ್ರಹಕ್ಕೆ ಶೇಪ್ ಅಡ್ಡಿಯಾಗಿಲ್ಲ. ಲೌ ಪಾಸಾದವರ ಹೃದಯದಲ್ಲಿ ಕರಗಿ ‘ನೀರಾ’ಗುವಷ್ಟು ಮನವಿರುತ್ತದೆ. ಫೇಲಾದವರಲ್ಲಿ ಡ್ಯಾಂನಲ್ಲಿ ಹಿಡಿದಿಡಬಹುದಾದಷ್ಟು ಕಣ್ಣೀರು ಇರಲಿದೆ ಎಂದು ಸಾಂಕೇತಿಕವಾಗಿ ಸೂಚಿಸಲು ಇದು ನಿರ್ಮಿಸಿಲ್ಲ!
ವಿಶಾಲ ಹೃದಯಿಗಳಲ್ಲಿ ಮಾತ್ರ ‘ಲೌ’ ಅರಳೀತು. ಹೀಗಾಗಿ ಇದು ಕೂಡ ಸಾಕಷ್ಟು ವಿಶಾಲವಾಗಿದೆ. ಲೌ ಶೇಪ್‌ನಲ್ಲಿದ್ದು ಲೌಲಿಯಾಗಿದೆ. ಈ ಅಣೆಕಟ್ಟೆಯ ಮೇಲೆ ಮೇಲೆ ಸರಾಗವಾಗಿ ಕಾರು, ಬಸ್‌ಗಳನ್ನು ಚಲಾಯಿಸಬಹುದಾಷ್ಟು ‘ಲೌ’ (ಗೋಡೆ) ವಿಶಾಲವಾಗಿದೆ. ಪ್ರೇಮಿಗಳು ಮಾತ್ರವಲ್ಲದೆ ಎಲ್ಲರನ್ನೂ ಲೌ ಅಣೆಕಟ್ಟೆ ಆಕರ್ಷಿಸುತ್ತಿದೆ. ಮಿಸೋರಿ ನದಿ ೮೦ ಕಿ.ಮೀ ದೂರದಲ್ಲಿದೆ. ಅಲ್ಲಿಂದ ಸೇಂಟ್ ಫ್ರಾಂಕೋಯಿಸ್ ಪರ್ವತಕ್ಕೆ ಏರಿಸಿ – ‘ನೀರಿಳಿಸಿ’ ೨೨೫ ಮೆ.ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ‘ಲೌ’ನ ಅದ್ಭುತ ‘ಶಕ್ತಿ’ ಕಾಣಬಯಸುವ ‘ಲೌಕಿಕರು’ ಅಮೇರಿಕದ ರೆನಾಲ್ಡ್ಸ್ ಪ್ರಾಂತ್ಯಕ್ಕೆ ತೆರಳಬೇಕು. ಲೌ ಪಾಸಾದರೆ ಮತ್ತೆ ಬರುವ ಹರಕೆ ಹೊತ್ತು ಬನ್ನಿ- ತಪ್ಪಿಲ್ಲ!

ಶೌಚಬಂಡಿ


‘ಅಪಘಾತಕ್ಕೆ ಅವಸರವೇ ಕಾರಣ’ ಈ ಘೋಷವಾಖ್ಯವನ್ನು ಕನ್ನಡಿಗರು ಅರ್ಥ ಮಾಡಿಕೊಂಡಿರುವ ರೀತಿಗೂ ಇವನ ತಿಳಿವಳಿಕೆಗೂ ವ್ಯತ್ಯಾಸವಿರಬೇಕು! ಹೀಗಾಗಿಯೇ ಈ ಶೌಚಬಂಡಿ ತಯಾರಿಸಿರಬೇಕು? ಗಂಟೆಗೆ ೫೫ ಮೈಲಿ ವೇಗದಲ್ಲಿ ಚಲಿಸುತ್ತಾ ‘ಅವಸರ’ತೀರಿಸಿಕೊಳ್ಳಬಹುದಂತೆ. ‘ಅಂತೆ’ ಏನು ಬಂತು…ಲಕ್ಷಣವಾಗಿ ತನ್ನ ಅವಸರವನ್ನು ತೀರಿಸಿಕೊಂಡಿದ್ದಾನೆ! ಹಾಗೆಂದು ಈ ಬಂಡಿ ‘ಅವಸರದ’ ನಿರ್ಧಾರವಲ್ಲ-೩ ತಿಂಗಳ ಪರಿಶ್ರಮಹಾಕಿದ್ದಾನೆ.
೧೪೦ ಸಿ.ಸಿಯ ಬೈಕ್ ಎಂಜಿನ್ ಕಳಚಿದ್ದಾನೆ. ಗಟ್ಟಿ ತಗಡು, ಟೂವೀಲರ್ ಹ್ಯಾಂಡಲ್, ಬ್ರೇಕ್…ಎಲ್ಲವನ್ನೂ ಜೋಡಿಸಿ, ಟಾಯ್ಲೆಟ್‌ವೆಹಿಕಲ್ ನಿರ್ಮಿಸಿದ್ದಾನೆ. ಗಾಡಿ ಚಲಾಯಿಸುತ್ತಲೇ ‘೧-೨’ ಸರಾಗವಾಗಿ ಮಾಡಿ- ಬೇಕೆಂದ ಜಾಗದಲ್ಲಿ ಒಗೆದು ಬರಬಹುದು. ೨೦೧೧ರಲ್ಲಿ ಇಟಲಿಯ ‘ಅವಸರಬಾಧಿತ’ ನೊಬ್ಬ ಗಂಟೆಗೆ ೪೨. ೨೫ ಮೈಲಿಗಳ ವೇಗದಲ್ಲಿ ಚಲಿಸುವ ವೆಹಿಕಲ್ ನಿರ್ಮಿಸಿದ್ದ. ಆ ದಾಖಲೆ ಇವನ ಟಾಯ್ಲೆಟ್ ವೆಹಿಕಲ್‌ನಿಂದಾಗಿ ‘ಫ್ಲಶ್’ ಆಗಿದೆ. ನಮ್ಮಲ್ಲಿ ಅವಿಷ್ಕಾರಗೊಂಡಿದ್ದರೇ… ‘ಉಗಿಬಂಡಿ’ ಎಂದು ಉಗಿದಾಡುತ್ತಿದ್ದೆವು. ಆದರೆ ಬ್ರಿಟನ್‌ನ ಸ್ಟಾಂಫೋರ್ಡ್‌ನ ಕಾಲಿನ್‌ಫರ್‍ಜೆ ನಿರ್ಮಾಣದ ಶೌಚ ಬಂಡಿಗೆ ಮೆಚ್ಚುಗೆ ಹರಿದು ಬಂದಿದೆ.
ಈ ವೆಹಿಕಲ್‌ನ ಮತ್ತೊಂದು ‘ಅಡ್ವಾಂಟೇಜ್’ ಏನೆಂದು ಗೊತ್ತಾ? ಇದನ್ನು ಚಲಾಯಿಸುತ್ತಿರುವಾಗ ಯಾರೂ ‘ಡ್ರಾಪ್’ ಪ್ಲೀಸ್ ಎಂದು ಕೋರುವುದಿಲ್ಲ. ಅಷ್ಟೇ ಅಲ್ಲ, ಪ್ಲಶ್ ಮಾಡದೆ ಸ್ಟಾಕ್‌ನೊಂದಿಗೆ ತೆರಳುತ್ತಿದ್ದಾಗ ಸುಲಭವಾಗಿ ದಾರಿಕೂಡ ಕೊಡುತ್ತಾರೆ. ಇನ್ನು ಅವಸರ ತೀರಿಸಿಕೊಳ್ಳುತ್ತಿರುವಾಗ ಕಣ್ಣು ಕೂಡ ಮುಚ್ಚಿಕೊಂಡು ಹಾದಿ ಬಿಡುತ್ತಾರೆ. ಹೇಗಿದೆ ಬಹು ಉಪಯೋಗಿ ಟಾಯ್ಲೆಟ್ ವೆಹಿಕಲ್?! ಹೊಸ ಹಾಡು…ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ……ಸಾಯೋದ್ರೊಳಗೆ ಒಮ್ಮೆ ನೋಡು… ಶೌಚದ ಬಂಡೀ….!

ಪದ ಕುಸಿಯೇ…. ಪಾತಾಳವಿಹುದು


ರುದ್ರರಮಣೀಯ ದೃಶ್ಯವೆಂದರೆ ಕಾರಿನಲ್ಲಿ ಕೂತು… ಚಿಪ್ಸ್ ತಿನ್ನುತ್ತಾ.. ದೊಡ್ಡ ದೊಡ್ಡ ಪರ್ವತಗಳನ್ನು ಅವುಗಳ ಮೇಲಿನ ಕಾಡುಗಳನ್ನು ನೋಡುವುದಲ್ಲ. ಅಕ್ಷರಶಃ ಅದನ್ನು ಅನುಭವಿಸಬೇಕು. ಹಾಗೆ ‘ರುದ್ರಾನಂದ’ ಪಡೆಯಲು ಇಲ್ಲಿದೆ ಮಾಹಿತಿ… ೧೨ ಇಂಚಿನ ಪುಟ್ಟಪಥವದು. ಸರಿಯುತ್ತಾ ಸಾಗಬೇಕು. ಹಿಡಿತಕ್ಕೆ ಚೈನ್ ಇದೆ. ಮೈಕೊರೆವ ಚಳಿಯಿದೆ. ದೃಷ್ಟಿಸಲು ರುದ್ರರಮಣೀಯ ದೃಶ್ಯಗಳಿದೆ. ಆಯತಪ್ಪಿದರೆ…..ಪಾತಾಳವಿದೆ! ‘ಹರಿ’ ಮಾಡಿದರೆ ‘ಬರಿ’ಯಾಗುವ ಅಪಾಯವಿದೆ. ವಿಶ್ವದ ಅತ್ಯಂತ ಭೀಭತ್ಸ ಪ್ರವಾಸದ ಸಣ್ಣ ಝಲಕ್ ಇದು. ವಿವರ ಪೂರ್ಣಕೊಟ್ಟರೆ ಎದೆ ಧಸಕ್ ಎಂದೀತು.
ಕೆಳಗೆ ಅಂದು ಎಂದೋ ಕಟ್ಟಿದ ಹಲಗೆ. ಒಂದೊಂದು ಹೆಜ್ಜೆ ಇಟ್ಟಾಗಲೂ ಅದು ಮುರಿದು ಬೀಳುತ್ತದೆನೋ ಎನ್ನುವಂತೆ ಕಿರುಚುತ್ತದೆ. ಸೊಂಟಕ್ಕೆ ಬಲವಾದ ಹಗ್ಗ ಬಿಗಿದಿರುತ್ತಾರೆ. ಯುವಕರು, ಉತ್ಸಾಹಿಗಗಳಿಗೆ ಮಾತ್ರ ಇಲ್ಲಿ ಪ್ರವೇಶ. ಬಿಪಿ/ಶುಗರ್/ಮಾನಸಿಕ ವ್ಯಾಧಿಗಳಿದ್ದವರಿಗೆ ವೈದ್ಯರ ಪ್ರಮಾಣ ಪತ್ರ ಕಡ್ಡಾಯ. ಅಷ್ಟಾಗಿಯೂ ಆಯ ತಪ್ಪಿ ಪಾತಾಳ ಸೇರಿದವರಿಗೂ ಇಲ್ಲಿ ಲೆಕ್ಕ ಇಟ್ಟಿಲ್ಲ. ಅಪಾಯದಲ್ಲೇ ಆನಂದ-ಆನಂದವೇ ಇಲ್ಲಿ ಅಪಾಯ. ಆದರೂ ಉಪಾಯ ಮಾಡಿಕೊಂಡು ಬರುವ ಜನರಿಗೆ ಕೊರತೆಯಿಲ್ಲ. ಸಾವಿನಂಚಿನ ರೋಮಾಂಚನ ಎಲ್ಲರಿಗೂ ದಕ್ಕದು. ಒಂದಪ ನೋಡುವ ಆಸೆ ಇದ್ದು, ಗುಂಡಿಗೆ ಗಟ್ಟಿಯಿದ್ದರೆ ಚೈನಾದೇಶದ ಶಾಂಘ್‌ಝೈ ಪ್ರಾಂತ್ಯದ ಹೌಸಾನ್ ಪರ್ವತ ಶ್ರೇಣಿಗೆ ತೆರಳಬೇಕು.

Tags: #interestingfacts#wonderfacts

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
ston balancing artist: ಇವನ ಕೈಗೆ ಸಿಕ್ಕ ಕಲ್ಲೂ ಕಲಾಕೃತಿಯಾಗುತ್ತೆ!

ston balancing artist: ಇವನ ಕೈಗೆ ಸಿಕ್ಕ ಕಲ್ಲೂ ಕಲಾಕೃತಿಯಾಗುತ್ತೆ!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.