‘ಚೀನಾ’ ಎಂದರೆ ನಕಲಿಗೆ ಮತ್ತೊಂದು ಹೆಸರು ಎಂಬಂತಾಗಿದೆ. ಅಲ್ಲಿನ, ನಕಲಿ ಅಕ್ಕಿಯ ಮೂಲಕ ಅನಾರೋಗ್ಯವಂತರನ್ನಾಗಿ ಮಾಡುತ್ತಿದೆ. ನಕಲಿ ಕಾಂಡೋಂಗಳು ಏಡ್ಸ್ ಕಾಯಿಲೆ ಪಸರಿಸುವಂತೆ ಮಾಡುತ್ತಿವೆ. ಅಲ್ಲಿನ ಡ್ರಾಗನ್ ಪಟಾಕಿ, ಗಾಳಿ ಪಟ ಇವೆಲ್ಲಾ ಸಾಕಷ್ಟು ಅದ್ವಾನ ಸೃಷ್ಟಿಸಿದೆ. ಇವೆಲ್ಲಕ್ಕಿಂತಲೂ ಹೆಚ್ಚಿನ ಅನಾಹುತ ಚೀನಾ ಔಷಧಿಗಳಿಂದಾಗಿದೆ. ಆದರೆ ಅದು ಹೆಚ್ಚಿನ ಸದ್ದುಮಾಡುತ್ತಿಲ್ಲ. ಔಷಧಲೋಕವನ್ನು ಗಮನಿಸುತ್ತಿರುವ ಕೆಲವರಿಗಷ್ಟೇ ಚೀನಾದ ಕೊಲೆಗಡುಕ ಬುದ್ಧಿಯ ಅರಿವಿದ್ದೀತು. ನಕಲಿ ಔಷಧಿಗಳು ಪ್ರಾಣಪಕ್ಷಿಗಳನ್ನೇ ಹಾರಿಸುತ್ತಿವೆ. ಹಾಗೆ ನೋಡಿದರೆ ಪಾಕಿಸ್ತಾನದ ಭಯೋತ್ಪಾದಕರಿಗಿಂತಲೂ ಚೀನಾದ ನಕಲಿಗಳೇ ಹೆಚ್ಚು ಅಪಾಯಕಾರಿ. ದುರಂತವೆಂದರೆ ಸರ್ವಾಧಿಕಾರಿ ಮನೋಭಾವದ ನಮ್ಮ ಜನ ನಾಯಕರಿಗೆ ಚೀನಾ ಒಂದು ರೋಲ್ ಮಾಡೆಲ್ ದೇಶವಾಗಿದೆ. ಆಗಾಗ ಚೀನಾ, ಚೀನಾ ಎಂದು ಕನವರಿಸುತ್ತಾರೆ. ದೆಹಲಿ-ಕಲ್ಕತ್ತಗಳಿಗಿಂತಲೂ ಶಾಂಘೈ-ಬೀಜಿಂಗ್ ಎಂಬ ಮಂತ್ರವನ್ನೇ ಹೆಚ್ಚಾಗಿ ಜಪಿಸುತ್ತಾರೆ.
ಚೀನಾ ಸೃಷ್ಟಿಸುತ್ತಿರುವ ಅದ್ವಾನಗಳ ಕುರಿತು ತಿಳಿಸುವ ಮೊದಲು ಅಮೆರಿಕದಲ್ಲಿ ಚೀನಾ ಔಷಧಿಗಳ ಕುರಿತಂತೆ ಇರುವ ಒಂದಿಷ್ಟು ಅಂಕಿ ಅಂಶಗಳನ್ನು ಇಲ್ಲಿ ಉಲ್ಲೇಖಿಸಿದ್ದೇವೆ. ಅಮೇರಿಕದಲ್ಲಿ ವಶಪಡಿಸಿಕೊಳ್ಳಲಾಗಿರುವ ನಕಲಿ ಔಷಧಿಗಳಲ್ಲಿ ಶೇ.೭೯ರಷ್ಟು ಚೀನಾದಿಂದ ಬಂದವಾಗಿವೆ. ಶೇ. ೭೦.೩ ಇಬ್ರೂಫೆನ್, ೨೮.೬% ಆಸ್ಪಿರಿನ್, ೭೦.೪% ಆಂಟಿಬಯೋಟಿಕ್ಸ್, ೮೯.೯ % ವಿಟಮಿನ್ ಸಿ… ಹೀಗೆ ನೋವು ನಿವಾರಕ ಔಷಧಗಳಿಂದ ಆರಂಭಿಸಿ ಹೃದ್ರೋಗದಲ್ಲಿ ಬಳಸಲಾಗುವ ಔಷಧಗಳವರೆಗೆ ಎಲ್ಲಬಗೆಯ ಕಲಬೆರಕೆ ಔಷಧಿಗಳನ್ನು ಸೃಷ್ಟಿಸುತ್ತಿರುವ ಕುಖ್ಯಾತಿ ಚೀನಾದ್ದು. ೪೦೦೦ ಸಾವಿರ ನಕಲಿ ಔಷದಿಗಳ ೨೯ ಸಾವಿರ ಕಂಪೆನಿಗಳಿವೆ. * ಚೀನಾದ ಕೃತಕ ಔಷಧಿಗಳ ಮಾರುಕಟ್ಟೆಯ ವ್ಯಾಪ್ತಿ ೨೩-೨೪ ಬಿಲಿಯನ್ ಡಾಲರ್‍ಸ್‌ಗಳು! ಪ್ರತಿವರ್ಷ ಕೃತಕೌಷಧಗಳ ಉದ್ಯಮವು ಶೇ.೮ರಷ್ಟು ಬೆಳವಣಿಗೆ ದಾಖಲಿಸುತ್ತಿದೆ. ವಿಶ್ವದಲ್ಲಿಯೇ ಅತಿ ಹೆಚ್ಚು ಕೆಳದರ್ಜೆಯ ಔಷಧಿಗಳನ್ನು ಸೃಷ್ಟಿಸುತ್ತಿರುವ ದೇಶವದು. ಅತಿ ಹೆಚ್ಚಿನ ಅಪಾಯಗಳು ಚೀನಾದಿಂದ ಆಗುತ್ತಿದೆ. ಅಷ್ಟಾಗಿಯೂ ನಕಲಿ ಔಷಧಿಗಳ ಆದಾಯವನ್ನು ಕಳೆದುಕೊಳ್ಳಲು ಸುತಾರಾಂ ಚೀನಾ ಸಿದ್ದವಿಲ್ಲ.
ನಿಷೇಧದ ನಾಟಕ ವಾಡುತ್ತಲೇ ಉತ್ಪಾದನೆಗೆ ಉತ್ತೇಜನ ನೀಡುತ್ತಲೇ ಇದೆ. ಅಮೆರಿಕದಲ್ಲಿ ನಿಷೇಧ ಬಿದ್ದಿರುವ ಮದ್ದಿಗೆ ಚೀನಾದಲ್ಲಿ ಮಾನ್ಯತೆಯಿದೆ! ಉದಾಹರಣೆಗೆ ಹೇಳುವುದಾದರೆ…ಚೀನಾದ ೧೫೦ಕ್ಕೂ ಕಂಪೆನಿಗಳು ಆಲ್ಪಾ-ಪಿವಿಪಿ ಎಂಬ ಔಷಧಿಯನ್ನು ಉತ್ಪಾದಿಸುತ್ತವೆ. ಇದೊಂದು ಅತ್ಯಂತ ಅಪಾಯಕಾರಿ (ಸ್ಟೆರಾಯ್ಡ್)ಉತ್ತೇಜಕವೆಂದು ಅಮೆರಿಕ ಬ್ಯಾನ್ ಮಾಡಿದೆ. ಇದರ ಸೇವನೆಯಿಂದ ಅಮೆರಿಕದ ಫ್ಲೋರಿಡಾದಲ್ಲಿ ೧೮ಕ್ಕೂ ಹೆಚ್ಚು ಮಂದಿ ಸಾವಿಗೆ ಶರಣಾಗಿದ್ದರು. ಅದು ಚೀನಾದ ‘ಡ್ರಾಗನ್’ ಗೊತ್ತಿದೆ ಆದರೂ ಇದರ ಉತ್ಪಾದನೆಯನ್ನು ನಿಲ್ಲಿಸಿಲ್ಲ. ಮೆಫೆದ್ರೋನ್ ಎಂಬ ಉದ್ದೀಪನ ಔಷಧಿ ಚೀನಾದಲ್ಲೇ ಬ್ಯಾನ್ ಆಗಿರುವುದಾಗಿ ಆ ದೇಶ ಹೇಳುತ್ತದೆ. ಪೌಂಡ್ ಔಷಧಿಗೆ $೧,೪೦೦ ಪಾವತಿಸಿದರೆ ಔಷಧಿಯ ಪೊಟ್ಟಣ ಜಗತ್ತಿನ ಯಾವುದೇ ದೇಶದಲ್ಲಿದ್ದರೂ ಚೀನಾದಿಂದ ನೇರವಾಗಿ ಅಪೇಕ್ಷಿತರ ಕೈ ಸೇರುತ್ತದೆ! ಹೀಗೆ ಡಬ್ಬಲ್ ಗೇಮ್ ಆಡುತ್ತಲೇ ಚೀನಾ ‘ಔಷಧ ಲೋಕದ ಭಯೋತ್ಪಾದಕ’ ಎನಿಸಿಕೊಂಡಿದೆ.
ಆಟಿಕೆಗಳ ಹೆಸರಿನಲ್ಲಿ ಅದ್ವಾನ
ಅಕ್ಟೋಬರ್ ಆದಿಯಲ್ಲಿ ಅಮೆರಿಕದ ಟೆಕ್ಸಾಸ್ ಪೊಲೀಸರು ೩೦ ಶಿಪ್‌ಮೆಂಟ್‌ಗಳಲ್ಲಿ ಆಗಮಿಸಿದ ಆಟಿಕೆ ವಸ್ತುಗಳತ್ತ ಗಮನ ಹರಿಸಿದರು. ಆಟಿಕೆಗಳಿವೆ ಎಂದು ಹೇಳಿ, ಬಾಕ್ಸ್ ಮೇಲೆ ನಮೂದಾಗಿದ್ದ ವಿವರಗಳನ್ನು ತೋರಿಸಿದರೂ ಪೊಲೀಸರಿಗೆ ಅನುಮಾನ ತಗ್ಗಲೇ ಇಲ್ಲ. ಮೂವರನ್ನು ಬಂಧಿಸಿ ಪೂರ್ಣಪ್ರಮಾಣದ ತಪಾಸಣೆಗೆ ಇಳಿದಾಗ ಸುಮಾರು ೧,೦೦,೦೦೦ ನಕಲಿ ಮಾತ್ರೆಗಳು ಪತ್ತೆಯಾಯಿತು.! ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಔಷಧಗಳಿಂದ ಆರಂಭಿಸಿ ಮಾಮೂಲಿ ಜ್ವರ, ಕೆಮ್ಮು, ಕಾಮೋತ್ತೇಜಕ ವಯಾಗ್ರವರೆಗೆ ಬಳಸಬಹುದಾದ ಕೃತಕೌಷಧಿಗಳು ಅದರಲ್ಲಿದ್ದವು. ಈ ಔಷಧಿಗಳನ್ನು ಲ್ಯಾಬೊರೆಟರಿಯಲ್ಲಿ ಪರೀಕ್ಷೆಗೊಳಪಡಿಸಿದಾಗ ಶೇ. ೧೮ರಷ್ಟು ಕೂಡ ಮಾತ್ರೆ ಚೀಟಿಯ ಮೇಲೆ ಘೋಷಿಸಿದ ಔಷಧಿಗಳಿರಲಿಲ್ಲ! ಪೊಲೀಸರು ಸಕಾಲದಲ್ಲಿ ದಾಳಿ ಮಾಡದಿದ್ದಲ್ಲಿ ಊಹೆಗೂ ಮೀರಿದ ಅನಾಹುತಗಳು ಅಮೆರಿಕದಲ್ಲಾಗುತ್ತಿತ್ತು. ಜಾಗತೀಕರಣದ ‘ದುಷ್ಪರಿಣಾಮ’ವಿದು ಎನ್ನುತ್ತಾರೆ ಟೆಕ್ಸಾಸ್‌ನ ರಾಬರ್‍ಟ್ ಬಂಕರ್. ಅಮೆರಿಕನ್ ಸೈನ್ಯದ ಯುದ್ದ ತರಬೇತಿ ಸಂಸ್ಥೆಯ ಪ್ರೊಫೆಸರ್ ಆಗಿರುವ ಇವರು ಚೀನಾ ಔಷಧಿಗಳಿಗೆ ಸಂಪೂರ್ಣ ಕಡಿವಾಣ ಬೀಳದಿದ್ದಲ್ಲಿ ಅಮೆರಿಕಕ್ಕೆ ಉಳಿಗಾಲವಿಲ್ಲವೆಂದು ಎಚ್ಚರಿಸಿದ್ದಾರೆ.
ಅಮೆರಿಕ ಸರಕಾರದ ಔಷಧ ನಿಯಂತ್ರಣ ಪ್ರಾಧಿಕಾರವಾದ `ಫೆಡರಲ್ ಡ್ರಗ್ ಏಜೆನ್ಸಿ’ (ಎಫ್‌ಡಿಎ) ಅಧಿಕಾರಿಗಳು ಕಳೆದ ವರ್ಷ ಭಾರತದಲ್ಲಿನ ೧೬೦ ಔಷಧ ತಯಾರಿಕಾ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಈ ತಪಾಸಣೆಯಲ್ಲಿ ಔಷಧಿಗಳ ಸುರಕ್ಷತೆಯಲ್ಲಿ ಹಲವಾರು ಲೋಪದೋಷ ಕಂಡುಬಂದ ಹಿನ್ನೆಲೆಯಲ್ಲಿ ಎಫ್‌ಡಿಎ ಭಾರತೀಯ ಕಂಪೆನಿಗಳಿಗೆ ಭಾರೀ ಮೊತ್ತದ ದಂಡ ವಿಧಿಸಿತ್ತು. ಹಾಗೂ ಮುನ್ನೆಚ್ಚರಿಕೆಯ ಪತ್ರಗಳನ್ನೂ ನೀಡಿ ಎಚ್ಚರಿಸಿತ್ತು. ಭಾರತದಲ್ಲಿ ಉತ್ಪಾದನೆಗೊಂಡು ಅಮೆರಿಕಕ್ಕೆ ರಫ್ತಾಗುವ ಹಲವಾರು ಜನಪ್ರಿಯ ಔಷಧಿಗಳ ಅಗ್ಗದ ಆವೃತ್ತಿಗಳು ಕಲಬೆರಕೆಯಿಂದ ಕೂಡಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಎಫ್‌ಡಿಎ ಅವುಗಳನ್ನು ನಿಷೇಧಿಸಿತ್ತು. ಔಷಧ ಕ್ಷೇತ್ರದ ದೈತ್ಯ ಕಂಪೆನಿ ರ್‍ಯಾನ್‌ಬಾಕ್ಸಿ ಸೇರಿದಂತೆ ಭಾರತದ ಬೃಹತ್ ಔಷಧಿ ತಯಾರಕ ಸಂಸ್ಥೆಗಳು ಭಾರೀ ಬೆಲೆಯನ್ನು ತೆರುವಂತಾಗಿದೆ.
ರ್‍ಯಾನ್‌ಬ್ಯಾಕ್ಸಿಗೆ ಕಳೆದ ವರ್ಷ ೫೦೦ ದಶಲಕ್ಷ ಡಾಲರ್ ದಂಡವನ್ನು ಪಾವತಿಸಬೇಕಾದ ಸಂಗತಿಯನ್ನು. ಭಾರತಕ್ಕೆ ಅಮೆರಿಕದ ಎಫ್‌ಡಿಎ ಅಧಿಕಾರಿಗಳು ಬೇಕೆನಿಸಿದಾಗ ಬಂದು ಹೋಗಬಹುದಾದ ಅವಕಾಶಗಳಿವೆ. ಇಲ್ಲಿಯೇ ಬೀಡುಬಿಟ್ಟು ನಿರಂತರವಾಗಿ ತಪಾಸಣೆ ಮಾಡಲೂ ಅನುಮತಿ ಇದೆ. ಆದರೆ ಚೀನಾದಲ್ಲಿ ಅವಕಾಶವೇ ಇಲ್ಲ. ಪೂರ್ವಾನುಮತಿ ಪಡೆದು, ವಿಸಾ ಪಡೆದು, ಅಲ್ಲಿಗೆ ತೆರಳಬೇಕು. ಅಮೆರಿಕದ ವಿಧಿಸಿರುವ ನಿಯಮಗಳಲ್ಲಿ ಲವಲೇಶವನ್ನು ಮಾತ್ರ ಚೀನಾ ಪಾಲಿಸುತ್ತಿವೆ. ಅಷ್ಟೇ. ಚೀನಾದಲ್ಲಿಯೇ ಬೀಡು ಬಿಟ್ಟಿರುವ ಅಮೆರಿಕದ ಎಫ್‌ಡಿಎ ತಂಡ ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ೩ ತಜ್ಞರ ತಂಡವಿದ್ದು ಎರಡು ಪೂರ್ಣಪ್ರಮಾಣದಲಿ ಕಾರ್ಯನಿರ್ವಹಿಸುತ್ತಿದ್ದರೆ ಮತ್ತೊಂದು ‘ಪಾರ್ಟ್ ಟೈಮ್’ ತಂಡವಾಗಿದೆ. ಎಫ್‌ಡಿಎ ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಿಸಲು ಅಮೆರಿಕದಿಂದ ತೊಡಕೇನು ಇಲ್ಲ. ಆದರೆ ಚೀನಾ ಇದಕ್ಕೆ ಅನುಮತಿ ನೀಡುತ್ತಿಲ್ಲ. ಉಭಯ ದೇಶಗಳ ನಡುವೆ ಒಪ್ಪಂದ ಏರ್ಪಟ್ಟ ಹೊರತಾಗಿಯೂ ಹೆಚ್ಚುವರಿ ಎಫ್‌ಡಿಎ ಸಿಬ್ಬಂದಿಗೆ ವೀಸಾ ನೀಡಲು ನಿರಾಕರಿಸುತ್ತಲೇ ಬಂದಿದೆ.
ಅಕ್ರಮ ದಂಧೆಗೆ ಅಪರಾಧಿಗಳ ಬಳಕೆ
ಕೃತಕ ಮದ್ದುಗಳನ್ನು ಅಮೆರಿಕ, ಯುರೋಪ್ ಮುಂತಾದ ರಾಷ್ಟ್ರಗಳಿಗೆ ನುಸುಳಿಸಲು ಚೀನಾ ಕಳ್ಳಸಾಗಣೆಕೋರರನ್ನು ಮಾತ್ರವಲ್ಲದೆ ವಿವಿಧ ಅಪರಾಧಗಳನ್ನು ಮಾಡಿ ಜೈಲು ಸೇರಿರುವ ದುಷ್ಟರನ್ನು ಬಳಸಿಕೊಳ್ಳುತ್ತಿದೆ. ಇದೆಲ್ಲವೂ ಚೀನಾ ಸರ್ಕಾರದ ಸುಪರ್ದಿಯಲ್ಲಿಯೇ ನಡೆಯುತ್ತಿದ್ದರೂ ಅಚ್ಚರಿಯಿಲ್ಲ. ಏಕೆಂದರೆ ಜೈಲು ಹಕ್ಕಿಗಳನ್ನು ಔಷಧ ಕಂಪೆನಿಗಳು ಸರ್ಕಾರದ ಅನುಮತಿಯಿಲ್ಲದೆ ಬಳಸಿಕೊಳ್ಳಲು ಹೇಗೆ ಸಾಧ್ಯ? ಭಾರತೀಯ ಔಷಧಿ ಕಂಪೆನಿಗಳು ನಿಯಮ ಉಲ್ಲಂಘಕರಲ್ಲ ಎಂಬುದು ಚೀನಿಯರಿಗೆ ಮನವರಿಕೆಯಾಗಿದೆ. ಇಲ್ಲಿನ ಕಂಪೆನಿಗಳ ವಿಧೇಯತೆ ಅಮೆರಿಕದವರ ವಿಶ್ವಾಸರ್ಹತೆಗಳಿಸುತ್ತಿದೆ. ಇಂದು ಅಮೆರಿಕದಲ್ಲಿ ಮಾರಾಟವಾಗುತ್ತಿರುವ ಶೇ. ೪೦ ಔಷಧಿಗಳು ಭಾರತದ್ದು. ನಿಜ, ಆಗೊಮ್ಮೆ ಈಗೊಮ್ಮೆ ಭಾರತದ ಕಂಪೆನಿಗಳಿಗೆ ದಂಡ ವಿಧಿಸಬಹುದು. ಆದರೆ ದಂಡ ಪಾವತಿಸಿದ ನಂತರ ಭಾರತದ ಕಂಪೆನಿಗಳು ಎಚ್ಚೆತ್ತುಕೊಳ್ಳುತ್ತಿವೆ. ಚೀನಾ ‘ದಂಡಕ್ಕೂ ದಷಗುಣ’ಕ್ಕೂ ನಿಲುಕುತ್ತಿಲ್ಲ. ಟೋಟಲ್ ಆಗಿ ಚೀನಾದ ಸಹವಾಸ ಬೇಡವೆಂದು ಅಮೆರಿಕ ನಿರ್ಧರಿಸುವ ದಿನಗಳು ಹತ್ತಿರದಲ್ಲಿಯೇ ಇದೆ. ಈ ಸಂಗತಿ ಅರಿತಿರುವ ಚೀನಾದ ಮಂದಿ ತಮ್ಮ ಔಷಧಿಗಳಿಗೆ ಮೇಡ್ ಚೀನಾ ಎಂದು ನಮೂದಿಸುವ ಬದಲು ಮೇಡ್ ಇನ್ ಇಂಡಿಯಾ ಎಂದು ನಮೂದಿಸಿ, ಕಳ್ಳಸಾಕಾಣೆ ಮೂಲಕ ಅಮೆರಿಕ ಸಹಿತ ವಿಶ್ವದ ಹಲವು ದೇಶಗಳನ್ನು ಪ್ರವೇಶಿಸುತ್ತಿವೆ.
೨೦೦೯ರಲ್ಲಿಯೇ ಚೀನಾ ಇಂಥಾದ್ದೊಂದು ಕಳ್ಳಾಟ ನಡಸಿ ಸಾಕ್ಷಿ ಸಮೇತ ಸಿಕ್ಕಿಬಿದ್ದಿತ್ತು! ಚೀನಾದಿಂದ ನೈಜಿರೀಯ ದೇಶಕ್ಕೆ ರಫ್ತು ಮಾಡಲಾಗಿದ್ದ ನಕಲಿ ಔಷಧಗಳ ಮೇಲೆ ಮೇಡ್ ಇನ್ ಇಂಡಿಯಾ ಎಂದು ನಮೂದಿಸಿತ್ತು. ಸುಮಾರು ೨೧ಸಾವಿರ ಅಮೆರಿಕನ್ ಡಾಲರ್ ಮೊತ್ತದ ಈ ಔಷಧಿಯನ್ನು ತನಿಖೆಗೊಳಪಡಿಸಿದಾಗ ಅದು ಚೀನಾದೆಂದು ಪತ್ತೆಯಾಯಿತು. ಈ ನಕಲಿ ಔಷಧಿ ಉತ್ಪನ್ನ ಮಾಡಿದ ೬ ಮಂದಿಯನ್ನು ನೇಣಿಗೇರಿಸಿರುವುದಾಗಿ ಚೀನಾ ಘೋಷಿಸಿತು. ಆದರೆ ಅವರ್‍ಯಾರು? ಏನು-ಎತ್ತ ಎಂಬ ವಿವರಗಳನ್ನು ಮಾತ್ರ ಬಹಿರಂಗಪಡಿಸಿಲ್ಲ! ಕಣ್ಣೊರೆಸುವ ತಂತ್ರವೇ ಹೊರತು ಪ್ರಾಮಾಣಿಕತೆಯ ಲವಲೇಶವೂ ಗೋಚರಿಸದು. ಭಾರತದ ಔಷಧಿ ಉದ್ಯಮವು ದೇಶದ ಅತ್ಯಂತ ಮಹತ್ವದ ಆರ್ಥಿಕ ಮೂಲಗಳಲ್ಲೊಂದೆಂದು ಪರಿಗಣಿಸಲ್ಪಟ್ಟಿದೆ. ಪ್ರತಿವರ್ಷವೂ ಭಾರತದಿಂದ ವಿವಿಧ ರಾಷ್ಟ್ರಗಳಿಗೆ ೧೫ ಶತಕೋಟಿ ಡಾಲರ್ ವೌಲ್ಯದ ಔಷಧಿ ಉತ್ಪನ್ನಗಳು ರಫ್ತಾಗುತ್ತಿವೆ. ದೇಶದಲ್ಲಿರುವ ಕೆಲವು ಔಷಧಿ ತಯಾರಿಕಾ ಕಾರ್ಖಾನೆಗಳು ಖಂಡಿತವಾಗಿಯೂ ವಿಶ್ವದರ್ಜೆಯನ್ನು ಹೊಂದಿದ್ದು, ಗುಣಮಟ್ಟದಲ್ಲಿ ಪಾಶ್ಚಾತ್ಯ ದೇಶಗಳಲ್ಲಿರುವ ಔಷಧಿ ಕಾರ್ಖಾನೆಗಳನ್ನು ಸರಿಗಟ್ಟುತ್ತವೆ… ಈ ಎಲ್ಲಕ್ಕೂ ಮಸಿ ಬಳಿದು ಚೀನಾ ದೇಶ ತನ್ನ ಕಲಬೆರಕೆ ಔಷಧಿಗಳನ್ನು ಜಾಗತಿಕ ಮಾರುಕಟ್ಟೆಯಲ್ಲಿ ಬಿಕರಿಗಿಟ್ಟು, ಕಾಂಚಾಣ ಎತ್ತುವ ಕಾರ್ಯ ಮಾಡುತ್ತಿರುವುದರೊಂದಿಗೆ ಅನೇಕರ ಸಾವಿಗೂ ಕಾರಣವಾಗುತ್ತಿದೆ.
ಭಾರತೀಯರಿಗೇಕೆ ಆತಂಕ?
ಚೀನಾದ ಮಂದಿ ಅಮೆರಿಕದಲ್ಲಿ ಕಲಬೆರಕೆ ಔಷಧಿಗಳನ್ನು ಮಾರಾಟ ಮಾಡಿದರೆ ನಾವೇಕೆ ಆತಂಕ ಪಡಬೇಕು? ಕಠಿಣ ಕಾನೂನು ಇರುವ ಅಮೆರಿಕದಲ್ಲಿಯೇ ಚೀನಾ ತನ್ನ ಕಳ್ಳಾಟವಾಡುತ್ತಿರುವಾಗ ಭಾರತದಲ್ಲಿ ನೀತಿ ನಿಯಮಗಳೆಂಬುದೇ ಇಲ್ಲ! ಸ್ವತಃ ಮೋದಿಯೇ ಆಗಾಗ ಚೀನಾವನ್ನು ಗುಣಮಾಡುತ್ತಿದ್ದಾರೆ. ಅಂತಿರುವಾಗ ಇಲ್ಲಿ ತನ್ನ ನಕಲಿ ಔಷಧಿಗಳನ್ನು ಮಾರಿಕೊಳ್ಳಲು ಚೀನಾಕ್ಕೆ ಎಲ್ಲಿದೆ ತೊಡಕು?! ನಮ್ಮಲ್ಲಿ ಸಾಮಾನ್ಯ ರೋಗಳಿಂದ ಆರಂಭಿಸಿ ಕ್ಯಾನ್ಸರ್‌ವರೆಗಿನ ಎಲ್ಲ ಕಾಯಿಲೆಗಳಿಗೆ ನಕಲಿ ಔಷಧಿಗಳು ಧಾರಾಳವಾಗಿ ಲಭ್ಯವಿದೆ. ಒಂದು ಅಂದಾಜಿನಂತೆ ಭಾರತದಲ್ಲಿ ಲಭ್ಯವಿರುವ ಶೇ. ೨೦ ಔಷಧಿಗಳು ಕಳಪೆ ಅಥವಾ ನಕಲಿ ಅಥವಾ ಕಲಬೆರಕೆ ಅಥವಾ ಕೆಳದರ್ಜೆಯ ಔಷಧಿಗಳಾಗಿವೆ. ಇವುಗಳೊಂದಿಗೆ ಚೀನಾ ಔಷಧಿಗಳೂ ಸೇರ್ಪಡೆಗೊಂಡರೆ ಊಹೆಗೂ ಮೀರಿದ ಅಪಾಯಗಳಾಗಲಿದೆ.
ಮೀತಿ ಮೀರಿ ಚೀನಾವನ್ನು ಅವಲಂಬಿಸಿದ್ದು, ಅದರೊಂದಿಗೆ ಜಾಗತೀಕರಣದ ಹೆಸರಿನಲ್ಲಿ ಮಾಡಿಕೊಂಡು ಕರಾರು ಇವುಗಳಿಂದ ಅಮೆರಿಕ ಬಸವಳಿದಿದೆ. ಗಟ್ಟಿ ನಿರ್ಧಾರ ಮಾಡಿ ಚೀನಾ ವಿರುದ್ಧ ಸೆಟೆದು ನಿಲ್ಲಲು ಅಮೆರಿಕಕ್ಕೆ ಕಷ್ಟವಾಗದು. ಐಸಿಸ್ ಉಗ್ರರ ನೆಲೆಯನ್ನು ಪತ್ತೆ ಮಾಡಿ ಸ್ಪೋಟಗೊಳಿಸಿದಂತೆ ಚೀನಾದ ನಕಲಿ ಔಷಧಿ ಉತ್ಪಾದಕರ ನೆಲೆಯನ್ನು ಸ್ಪೋಟಗೊಳಿಸುವ ಅಥವಾ ದಾಳಿ ಮಾಡುವ ಕಾರ್ಯವನ್ನು ಅಮೆರಿಕ ಮಾಡಿದರೂ ವಿಶ್ವದ ಜನರ ಆರೋಗ್ಯ ದೃಷ್ಟಿಯಿಂದ ತಪ್ಪಾಗದು. ೧-೨ ಕಂಪೆನಿಗಳನ್ನು ಉಡಾಯಿಸಿದರೂ ಸಾಕು… ಚೀನಾದ ಕಮ್ಯೂನಿಸ್ಟ್ ಸರ್ಕಾರ ಮತ್ತು ಉಳಿದ ಕಂಪೆನಿಗಳು ಎಚ್ಚೆತ್ತುಕೊಳ್ಳಲಿದೆ. ಇದು ಅತಿರೇಕದ ಮಾತಲ್ಲ. ಅಗತ್ಯವಾಗಿ ಆಗಬೇಕಾದ ಕಾರ್ಯವಿದು. ನಕಲಿ ಔಷಧಿಗಳ ತಯಾರಿಕೆಯೇ ಭಯೋತ್ಪಾದನೆಗೂ ಮೀರಿದ ದುಷ್ಕೃತ್ಯವೆನ್ನಲಾಗುತ್ತಿದೆ. ವಿಶ್ವ ಸಂಸ್ಥೆ ನಕಲಿ ಔಷಧಿಗಳ ಉತ್ಪಾದನೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಎಲ್ಲ ರಾಷ್ಟ್ರಗಳಿಗೂ ಸೂಚಿಸಿ ಹಲವು ವರ್ಷಗಳೇ ಆಗಿವೆ. ಅಷ್ಟಾಗಿಯೂ ಚೀನಾ ತನ್ನ ಕಳ್ಳಾಟ ನಿಲ್ಲಿಸಿಲ್ಲ! ಔಷಧಲೋಕದ ಭಯೋತ್ಪಾದಕ ಎನಿಸಿರುವ ಚೀನಾವನ್ನು ಎಲ್ಲ ರಾಷ್ಟ್ರಗಳು ಒಟ್ಟಾಗಿ ಬಗ್ಗುಬಡಿಯಬೇಕಾಗಿದೆ. ಅದು ಇಂದಿನ ಅನಿವಾರ್ಯತೆಯೂ ಹೌದು.