ಮಂಗಳವಾರ, ಜುಲೈ 1, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

Majja Webdeskby Majja Webdesk
01/05/2025
in Lifestyle
Reading Time: 1 min read
interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

-ಶವ ತಿಂದರೆ ಕಾಯಿಲೆ ವಾಸಿಯಾಗುತ್ತಿತ್ತಂತೆ!

-ಮೊದಲು ಓ ಮೈ ಗಾಡ್ ಅಂದೋರ್‍ಯಾರು? 

 

ಜನರ ಸೌದರ್ಯ ಪ್ರಜ್ಞೆ ಮತ್ತು ಆ ಬಗ್ಗೆ ಇರುವ ಕೀಳರಿಮೆಗಳೇ ಅದೆಷ್ಟೋ ಕಂಪೆನಿಗಳನ್ನು ಉದ್ಧಾರ ಮಾಡಿ ಬಿಟ್ಟಿದೆ. ದೇಹದ ಬಾಹ್ಯ ಸೌಂದರ್ಯಕ್ಕೆ ಹೆಚ್ಚು ಒತ್ತು ಕೊಡೋ ಜನರಿಗೆ ತಮ್ಮ ದೇಹ ರಚನೆ, ಅಂಗಾಂಗಗಳ ರೂಪುರೇಷೆಗಳ ಬಗ್ಗೆ ಆಳವಾದ ಅಸಹನೆಗಳಿರುತ್ತವೆ. ಕೊಂಚ ಯಾಮಾರಿದರೂ ಅದು ಕೀಳರಿಮೆಯಾಗಿ, ಮನೋವ್ಯಾಕುಲವಾಗಿ ಬದಲಾಗೋ ಅಪಾಯಗಳೇ ಹೆಚ್ಚು. ಅದರಲ್ಲಿಯೂ ಬಹುತೇಕರನ್ನು ಕಂಗಾಲಾಗಿಸಿ ಕಾಡೋದು ದೇಹದ ತೂಕ. ದಪ್ಪಗಿರುವವರು ತೆಳ್ಳಗಾಗಲು ಹರಸಾಹಸ ಪಟ್ಟರೆ ತೆಳ್ಳಗಿರುವವರ ಪಾಲಿಗೆ ಊದಿಕೊಳ್ಳಬೇಕೆಂಬುದೇ ದೊಡ್ಡ ಕನಸಾಗಿರುತ್ತೆ.

ಅದರಲ್ಲಿಯೂ ದಡೂತಿ ದೇಹ ಹೊಂದಿರುವವರ ಪಾಡಂತೂ ಹೇಳ ತೀರದು. ತೀರಾ ತಮ್ಮ ದೇಹ ತಮಗೇ ಭಾರ ಅನ್ನಿಸುವಂಥವರು ಅದರ ಬಗ್ಗೆ ಸದಾ ಕೊರಗ್ತಾರೆ. ಇನ್ನು ಕೊಂಚ ದಪ್ಪಗಿರುವವರೂ ಕೂಡಾ ಸ್ಲಿಮ್ ಆಗಲು ಕಸರತ್ತು ನಡೆಸ್ತಾರೆ. ಈ ವಿಚಾರದಲ್ಲಿ ಹೆಂಗಸರೇ ಮುಂದಿದ್ದಾರೆ. ಆದರೆ ಈ ಡಯೆಟ್ ವಿಚಾರದಲ್ಲಿ ಯಶ ಕಾಣುವ ಮಹಿಳೆಯರ ಸಂಖ್ಯೆ ಕಡಿಮೆ. ತಾನು ಸ್ಲಿಮ್ ಆಗಿ ಬಳುಕುತ್ತಾ ಬದುಕಬೇಕನ್ನೋ ಕನಸು ತುಂಬಾ ದಿನ ಬಾಳಿಕೆ ಬರೋದು ಡೌಟು. ಅದೆಷ್ಟೋ ಮಹಿಳೆಯರು ಸ್ಲಿಮ್ ಆಗಿಲ್ಲವಲ್ಲಾ ಅಂತ ಕೊರಗಿ ಕೊರಗಿಯೇ ಮತ್ತಷ್ಟು ಊದಿಕೊಳ್ತಾರಂತೆ. ಅಂಥಾ ಮಹಿಳೆಯರ ಪಾಲಿಗೆ ತಾನು ಸ್ಲಿಮ್ ಆಗಿದ್ದೇನೆಂಬಂತೆ ಬಿಂಬಿಸುವ, ಭ್ರಮೆ ಅಂತ ಗೊತ್ತಿದ್ದರೂ ನಂಬಿಸುವ ಮಾಯೆ ಒಂದು ಬೇಕಾಗಿತ್ತು. ಅದೀಗ ಸ್ಕಿನ್ನಿ ಮಿರರ್ ರೂಪದಲ್ಲಿ ಸಾಕಾರಗೊಂಡಿದೆ.

ಡಯೆಟ್ ಶುರು ಹಚ್ಚಿಕೊಂಡು ಅದನ್ನು ನೆಟ್ಟಗೆ ಮಾಡದ ಮಹಿಳೆಯರು ನಾನು ಸಣ್ಣಗಾಗಿದ್ದೀನಿ ಅಲ್ವಾ ಅಂತ ಆಸುಪಾಸಿನವರನ್ನ ಕೇಳುತ್ತಿರುತ್ತಾರೆ. ಅವರಿಗೆ ಹೌದು ಎಂಬಂಥ ಉತ್ತರವೇ ಬೇಕಿರುತ್ತೆ. ಇನ್ನು ಮುಂದೆ ಆ ರಿಸ್ಕು ತೆಗೆದುಕೊಳ್ಳಬೇಕಿಲ್ಲ. ಯಾಕಂದ್ರೆ ಈ ಸ್ಕಿನ್ನಿ ಕನ್ನಡಿಯನ್ನ ಖರೀದಿಸಿ ತಂದಿಟ್ಟುಕೊಂಡರೆ, ಅದರ ಮುಂದೆ ಹೋಗಿ ನಿಂತರೆ ಅದುವೇ ಎದುರಿಗಿದ್ದವರನ್ನು ಹತ್ತು ಪೌಂಡ್‌ಗಳಷ್ಟು ಕಡಿಮೆ ತೂಕಕ್ಕಿಳಿಸಿ ಸ್ಲಿಮ್ ಆಗಿ ತೋರಿಸುತ್ತೆ. ಈ ಕನ್ನಡಿಯನ್ನ ೨೦೧೩ರಲ್ಲಿ ಆವಿಷ್ಕರಿಸಲಾಗಿತ್ತು. ಅದೀಗ ಮಾಮೂಲಿ ಕನ್ನಡಿಗಳನ್ನೇ ಮೀರಿಸುವಂತೆ ಸೇಲಾಗ್ತಿದೆಯಂತೆ!

ಅಪ್ಪ ಆಗೋದು ಕಷ್ಟ ಕಷ್ಟ

ಅದ್ಯಾವ ದೇಶ, ಭಾಷೆಗಳ ಮಂದಿಯೇ ಇರಲಿ; ತಾಯ್ತನ, ತಂದೆಯಾಗೋ ಸಂಭ್ರಮವೆಲ್ಲ ಒಂದೇ ಆಗಿರುತ್ತೆ. ಮದುವೆ ಮುಂತಾದ ಸಂಪ್ರದಾಯಗಳಲ್ಲಿ ವ್ಯತ್ಯಾಸವಿದ್ದರೂ ಅದರ ಪುಳಕಗಳಲ್ಲಿ ಸಾಮ್ಯತೆ ಇದ್ದೇ ಇದೆ. ಹಾಗಿದ್ದ ಮೇಲೆ ನಮ್ಮಲ್ಲಿರೋ ಒಂದಷ್ಟು ನಂಬಿಕೆಗಳೂ ಕೂಡಾ ಪರಸ್ಪರ ಮ್ಯಾಚ್ ಆಗೋದ್ರಲ್ಲಿ ಅಚ್ಚರಿಯೇನಿಲ್ಲ. ನಮ್ಮದು ಹೇಳಿ ಕೇಳಿ ಸಂಪ್ರದಾಯ, ನಂಬಿಕೆಗಳಿಂದ ತುಂಬಿಕೊಂಡಿರೋ ನೆಲ. ಇಲ್ಲಿ ಅದಕ್ಕೆ ತಕ್ಕುದಾದ ಅನೇಕಾನೇಕ ಆಚರಣೆಗಳಿವೆ, ನಂಬಿಕೆಗಳಿವೆ. ಆದ್ರೆ ನಮ್ಮತನದ ಬಗ್ಗೆ ನಮಗೆ ತಾತ್ಸಾರ ಹೆಚ್ಚು. ಆದ್ದರಿಂದಲೇ ಅದೆಲ್ಲವನ್ನೂ ಒಂದೇ ದೃಷ್ಟಿಕೋನದಿಂದ ನೋಡಿ ಮೂಢನಂಬಿಕೆಯೆಂಬ ಲೇಬಲ್ಲು ಅಂಟಿಸಿ ಕಡೆಗಣಿಸಿ ಬಿಡುತ್ತೇವೆ. ನಂಬಲೇ ಬೇಕಾದ ವಿಚಾರ ಅಂದ್ರೆ, ಕೆಲವಾರು ನಂಬಿಕೆಗಳು ನಮಗೆ ಮಾತ್ರವೇ ಸೀಮಿತವಲ್ಲ. ಕೆಲ ಮೂಢ ನಂಬಿಕೆಗಳಂಥವು ಬೇರೆ ದೇಶಗಳಲ್ಲಿಯೂ ಇವೆ.
ಈ ಮಾತಿಗೆ ಉದಾಹರಣೆಯಾಗಿ ನಿಲ್ಲೋದು ಚೀನಾ. ಕೊರೋನಾ ವೈರಸ್ಸಿನ ಮೂಲಕ ಚೀನಾ ಇಡೀ ವಿಶ್ವದಲ್ಲಿ ವಿಲನ್ ಸ್ಥಾನ ಪಡೆದುಕೊಂಡಿದೆ. ಸದಾ ಒಂದಿಲ್ಲೊಂದು ಕಿತಾಪತಿಗೆ ಹೆಸರಾಗಿರೋ ಈ ದೇಶ ಹೆಚ್ಚಿನ ಜನಸಂಖ್ಯೆಗೂ ಫೇಮಸ್ಸು. ಬೇರೆಲ್ಲವನ್ನೂ ಬದಿಗಿಟ್ಟು ನೋಡಿದರೆ ಆ ದೇಶದೊಳಗೆ ಬೆರಗಾಗಿಸೋ ನಾನಾ ವಿಚಾರಗಳಿರೋದು ಸುಳ್ಳಲ್ಲ. ಅದ್ರಲ್ಲೂ ಅಲ್ಲಿನ ಜನರ ಬದುಕಿನಲ್ಲಿ ನಮ್ಮಲ್ಲಿರುವಂಥಾದ್ದೇ ನಂಬಿಕೆಗಳು ಹಾಸುಹೊಕ್ಕಾಗಿವೆ. ಅಂಥಾದ್ದೇ ಒಂದು ನಂಬಿಕೆ ಅಲ್ಲಿನ ಪ್ರಾಂತ್ಯ ಒಂದರಲ್ಲಿ ಈವತ್ತಿಗೂ ಜೀವಂತವಾಗಿದೆ. ಅದೊಂಥರಾ ಗಂಡು ಜನುಮಕ್ಕೆ ಅಪ್ಪನಾಗೋ ಸಂಭ್ರವೂ ಬೆಚ್ಚಿ ಬೀಳುವಂಥಾ ಸಂಪ್ರದಾಯ.
ಚೀನಾದ ಆ ಪ್ರಾಂತ್ಯದಲ್ಲಿ ಓರ್ವ ಗಂಡ ತನ್ನ ಹೆಂಡತಿ ಗರ್ಭಿಣಿಯಾದಾಕ್ಷಣವೇ ಬೆವರಾಡಲು ಶುರುವಿಡುತ್ತಾನೆ. ಯಾಕಂದ್ರೆ, ಆತನಿಗೆ ಅಪ್ಪನಾಗೋ ಸಂಭ್ರಮಕ್ಕೆ ಗರ್ಭೀಣಿ ಮಡದಿಯನ್ನೆತ್ತಿಕೊಂಡು ನಿಗಿನಿಗಿಸೋ ಕೆಂಡದ ಮೇಲೆ ನಡೆಯೋ ಕಂಟಕವೆದುರಾಗುತ್ತೆ. ನಮ್ಮಲ್ಲಿ ನಾನಾ ಹರಕೆ ಹೊತ್ತು ಕೆಂಡ ಹಾಯೋ ಸಂಪ್ರದಾಯವಿದೆಯಲ್ಲಾ? ಅದೂ ಕೂಡಾ ಹೆಚ್ಚೂ ಕಮ್ಮಿ ಹಾಗೆಯೇ. ನಮ್ಮಲ್ಲಿಯಾದರೆ ಕೆಂಡ ಹಾಯೋವಲ್ಲಿ ಹೆಚ್ಚು ಜನ ಇದ್ದರೆ ಮೊದಲು ಹಾಯುವವರಿಗೆ ಮಾತ್ರ ಬಿಸಿ ತಾಗುತ್ತೆ. ಕಡೇಗೆ ನಡೆಯುವವರ ಪಾದದಡಿ ಉಳಿಯೋದು ಇದ್ದಿಲ ಮಸಿ ಮಾತ್ರ. ಆದರೆ ಚೀನಾದಲ್ಲಿ ಗರ್ಭೀಣಿ ಮಡದಿಯನ್ನು ಎತ್ತಿಕೊಂಡು ಕೆಂಡ ಹಾಯೋ ಬಡಪಾಯಿ ಗಂಡನಿಗೆ ಮಸಿಯ ಭಾಗ್ಯವಿಲ್ಲ. ಯಾಕಂದ್ರೆ ಅಪ್ಪ ಆದದ್ದು ಅವನೊಬ್ಬನೇ ಆದ್ದರಿಂದ ನಿಗಿನಿಗಿ ಕೆಂಡವನ್ನ ಆತನೇ ಹಾಯಬೇಕು. ಅದೂ ಬರಿಗಾಲಿನಲ್ಲಿ. ಅದೇನೇ ದೈವಶಕ್ತಿ, ಭ್ರಮೆಗಳಿದ್ದರೂ ಗಂಡನ ಪಾದಗಳಲ್ಲಿ ಬಿಸಿಗೆ ಬಿರಿದ ಬೊಬ್ಬೆಗಳು ಖಾಯಂ. ಒಂದಷ್ಟು ದಿನ ಆ ಉರಿ ಗಾಯದಲ್ಲಿ ನರಳೋ ಶಿಕ್ಷೆಯೂ ಆತನಿಗೆ ಕಟ್ಟಿಟ್ಟ ಬುತ್ತಿ. ಅಂದಹಾಗೆ, ಈ ರೀತಿ ಕೆಂಡ ಹಾಯೋದರಿಂದ ಮಗು ಸಲೀಸಾಗಿ ಈ ಜಗತ್ತಿಗೆ ಕಣ್ತೆರೆಯುತ್ತೆ, ನೋವಿಲ್ಲದೆ ಪ್ರಸವವಾಗುತ್ತೆ ಅನ್ನೋ ನಂಬಿಕೆ ಅಲ್ಲಿನ ಜನರಲ್ಲಿದೆಯಂತೆ.

ಮೊದಲು `ಓ ಮೈ ಗಾಡ್’ ಅಂದೋರ್‍ಯಾರು?

ತುಂಬಾ ಅಚ್ಚರಿದಾಯಕವಾದ, ಸರ್‌ಪ್ರೈಸ್ ಅನ್ನಿಸುವಂತಾ, ದಿಗ್ಭ್ರಮೆ ಮೂಡಿಸುವಂಥ ಸುದ್ದಿ ಕೇಳಿದಾಗ ಹೆಚ್ಚಿನ ಮಂದಿ ಓ ಮೈ ಗಾಡ್ ಎಂಬ ಉದ್ಗಾರವೆತ್ತುತ್ತಾರೆ. ಅದು ಪಾಶ್ಚಾತ್ಯ ಅನುಕರಣೆಯಾದರೂ ಕೂಡಾ ನಮ್ಮ ನಡುವೆ ಅದೊಂದು ದೊಡ್ಡಸ್ತಿಕೆಯಂತೆ ಹಾಸುಹೊಕ್ಕಾಗಿ ಚಾಲ್ತಿಯಲ್ಲಿದೆ. ಯಾಕಂದ್ರೆ ಇಂಥಾ ಭಾವಗಳಿಗೆಲ್ಲ ನಮ್ಮ ಪೂರ್ವಜರು ಲಕ್ಷಣವಾಗಿ ಅಚ್ಚ ಕನ್ನಡದಲ್ಲಿಯೇ `ಓ ದೇವ್ರೇ’ ಅಂತ ಉದ್ಗಾರವೆತ್ತುತ್ತಿದ್ದರು. ಇರಲಿ, ಇಂಥಾದ್ದೊಂದು ಪದ ಸೃಷ್ಟಿಯಾದದ್ದು ಹೇಗೆ? ಮೊದಲಿಗೆ ಅದನ್ನು ಬಳಸಿದೋರ್‍ಯಾರು ಅನ್ನೋ ಪ್ರಶ್ನೆ ಪದಮೂಲಗಳ ಬಗ್ಗೆ ಆಸಕ್ತಿ ಇರೋರನ್ನೆಲ್ಲ ಕಾಡಿರುತ್ತೆ. ಅದಕ್ಕೊಂದು ಇಂಟರೆಸ್ಟಿಂಗ್ ಉತ್ತರವೂ ಇದೆ!

ಪದಮೂಲವನ್ನು ಹುಡುಕುತ್ತಾ ಹೋದರೆ ಓ ಮೈ ಗಾಡ್ ಅನ್ನೋದು ಅಂಥಾದ್ದೆ ಉದ್ಗಾರವೆತ್ತುವಂತೆ ೧೯೧೭ರ ದಿನಮಾನಕ್ಕೆ ಕೊಂಡೊಯ್ದು ನಿಲ್ಲಿಸುತ್ತೆ. ಆ ಬಿಂದುವಿನಿಂದಲೇ ಓ ಮೈ ಗಾಡ್‌ನ ಐತಿಹ್ಯವೂ ಬಿಚ್ಚಿಕೊಳ್ಳುತ್ತೆ. ಇದರ ಕೇಂದ್ರಬಿಂದು ವಿನ್ಸೆಂಟ್ ಚರ್ಚಿಲ್. ಆದರೆ ಅದನ್ನು ಮೊದಲ ಬಾರಿ ಬರವಣಿಗೆಯಲ್ಲಿ ದಾಖಲಿಸಿ ಅದಕ್ಕೊಂದು ಅಧಿಕೃತ ಛಾಪು ಮೂಡಿಸಿದ ಕೀರ್ತಿ ಅರ್ಬುತ್ಮೋತ್ ಫಿಶರ್ ಎಂಬಾತನಿಗೆ ಸಲ್ಲುತ್ತೆ. ಬ್ರಿಟಿಷ್ ನೌಕಾಪಡೆಯ ನಿವೃತ್ತ ಅಡ್ಮಿರಲ್ ಆಗಿದ್ದ ಆತ ವಿನ್ಸೆಂಟ್ ಚರ್ಚಿಲ್‌ಗೆ ಬರೆದಿದ್ದ ಪತ್ರವೊಂದರಲ್ಲಿ ಓ ಮೈ ಗಾಡ್ ಎಂಬುದನ್ನ ಮೊದಲು ಬಳಸಿದ್ದರಂತೆ.

ಹಾಗಂತ ಅದಕ್ಕೂ ಮುನ್ನ ಬ್ರಿಟೀಷರೂ ಸೇರಿದಂತೆ ಯಾರೊಬ್ಬರೂ ಓ ಮೈ ಗಾಡ್ ಎಂಬುದನ್ನು ಬಳಸಿಯೇ ಇರಲಿಲ್ಲ ಅಂದುಕೊಳ್ಳಬೇಕಿಲ್ಲ. ಅದಕ್ಕೂ ಮುನ್ನವೇ ಜನ ಮಾತಿನ ಮಧ್ಯೆ ಅದನ್ನು ಯಥೇಚ್ಛವಾಗಿಯೇ ಬಳಸುತ್ತಿದ್ದರು. ಆದರೆ ಅದು ದಾಖಲೆಯಾಗಿ, ಬರವಣಿಗೆಯ ಮೂಲಕ ಉಲ್ಲೇಖಕವಾಗಿದ್ದಿಲ್ಲ. ಭಾಷಾ ಪಂಡಿತರು ಹಲವಾರು ರೀತಿಯಲ್ಲಿ ಜಾಲಾಡಿದರೂ ಕೂಡಾ ಚರ್ಚಿಲ್‌ಗೆ ಬರೆದಿದ್ದ ಪತ್ರದಲ್ಲಿ ಮಾತ್ರವೇ ಅದರ ಉಲ್ಲೇಖ ಮೊದಲ ಬಾರಿಗಾಗಿದೆ. ಆ ಕಾರಣದಿಂದಲೇ ಓ ಮೈ ಗಾಡ್‌ನ ಪರ್ವ ಅಲ್ಲಿಂದಲೇ ಉಗಮವಾಗಿದೆಯೆಂದು ದಾಖಲಾಗಿದೆ.

ಅವರೇಕೆ ಶವ ತಿಂತಿದ್ರು?

ಇಂದು ಆವಿಷ್ಕಾರ, ಸಂಶೋಧನೆಗಳ ಭರಾಟೆಯೂ ಹೆಚ್ಚಾಗಿದೆ. ಅದಕ್ಕೆ ಸ್ಪರ್ಧೆಯೊಡ್ಡುವಂತೆ ಮಾನವರನ್ನು ನಾನಾ ಬಗೆಯ ಕಾಯಿಲೆಗಳೂ ಕೂಡಾ ಬಾಧಿಸಲಾರಂಭಿಸಿವೆ. ಆದರೆ ಕಾಸೊಂದಿದ್ದರೆ ಅದೆಂಥಾ ಕಾಯಿಲೆಗಳನ್ನಾದರೂ ವಾಸಿ ಮಾಡುವಂಥ, ಸಾವಿನ ಕ್ಷಣಗಳನ್ನು ಮತ್ತೊಂದಷ್ಟು ಕಾಲಾವಧಿಗೆ ಮುಂದೆ ತಳ್ಳುವಂಥಾ ಔಷಧಿಗಳೂ ಇದ್ದಾವೆ. ಆಧುನಿಕ ಜೀವನಶೈಲಿಯೇ ಜನರನ್ನು ಇಂಥಾ ಕಾಯಿಲೆ ಕಸಾಲೆಗಳ ಕೋರೆ ಹಲ್ಲುಗಳಲ್ಲಿ ಸಿಲುಕಿಸಿವೆ ಅನ್ನೋ ಅಪವಾದವೂ ಇದೆ.

ಆಯ್ತು, ಈಗಿನ ದಿನಮಾನದಲ್ಲಿ ಕಲುಷಿತ ವಾತಾವರಣ ಮನುಷ್ಯನ ದೇಹವನ್ನು ಕಾಯಲೆಗಳ ಕೊಂಪೆಯನ್ನಾಗಿಸಿದೆ. ಹಾಗಂತ ನಮ್ಮ ಪೂರ್ವಜರನ್ನು ಇಂಥಾ ಕಾಯಿಲೆಗಳೂ ಬಾಧಿಸುತ್ತಿರಲಿಲ್ಲವಾ ಅನ್ನೋ ಪ್ರಶ್ನೆ ಕಾಡುತ್ತೆ. ಪ್ರಮಾಣ ಕೊಂಚ ಕಡಿಮೆಯಿದ್ದರೂ ಕೂಡಾ ಮಾರಣಾಂತಿಕ ಕಾಯಿಲೆಗಳು ಮತ್ತು ಸಾಂಕ್ರಾಮಿಕಗಳು ಎಲ್ಲ ಕಾಲದಲ್ಲಿಯೂ ಇದ್ದವು. ಈಗಾದರೆ ಅಂಥಾ ಕಾಯಿಲೆಗಳು ಸಲೀಸಾಗಿ ಬಂದೆರಗದಂತೆ ತಡೆಯುವಂಥಾ, ಅದರ ವಿರುದ್ಧ ಹೋರಾಡುವಂಥ ಲಸಿಕೆಗಳಿದ್ದಾವೆ. ಆದರೆ ಅದರ ಕಲ್ಪನೆಯೂ ಇಲ್ಲದಿದ್ದ ಕಾಲದಲ್ಲಿ ಜನ ಏನು ಮಾಡುತ್ತಿದ್ದರು? ಈ ಪ್ರಶ್ನೆಯೇ ಭಯಾನಕ ಸತ್ಯಗಳನ್ನ ಮುಖಾಮುಖಿಯಾಗಿಸುತ್ತೆ.

ನಮ್ಮ ಪೂರ್ವಜರು ಅದಕ್ಕಾಗಿ ಒಂದಿಷ್ಟು ವಿಚಿತ್ರ ಎನ್ನಿಸುವ, ಭಯ ಆವರಿಸಿಕೊಳ್ಳುವಂಥಾ ಮಾರ್ಗೋಪಾಯಗಳನ್ನ ಅನುಸರಿಸುತ್ತಿದ್ದರು. ಅದರಲ್ಲಿಯೂ ಯುರೋಪಿಯನ್ನರು ಹದಿನೇಳನೇ ಶತಮಾನದಲ್ಲಿ ಕಂಡುಕೊಂಡಿದ್ದ ಮಾರ್ಗವಂತೂ ತುಂಬಾನೇ ಭಯಾನಕ. ಯಾಕಂದ್ರೆ, ಅವರು ಕಾಯಿಲೆಗಳಿಂದ ಪಾರಾಗಲು ಶವದ ಭಾಗಗಳನ್ನು ಪುಡಿ ಮಾಡಿ ತಿನ್ನುತ್ತಿದ್ದರಂತೆ. ಮೊದಲಿಗೆ ಮಮ್ಮಿಗಳ ದೇಹದ ತುಣುಕುಗಳನ್ನು ಪುಡಿ ಮಾಡಿ ಒಳಗಿಳಿಸಿಕೊಳ್ಳುತ್ತಿದ್ದರು. ನಂತರ ಫ್ರೆಶ್ ಆದ ಮನುಷ್ಯರ ಮಾಂಸವನ್ನೇ ಮೆಲ್ಲುವ ಮೂಲಕ ಕಾಯಿಲೆಗಳಿಂದ ತಪ್ಪಿಸಿಕೊಳ್ಳುವ ಮಾರ್ಗವನ್ನು ಶ್ರೀಮಂತ ಯೂರೋಪಿಯನ್ನರು ಅನುಸರಿಸುತ್ತಿದ್ದರಂತೆ!

ಸತ್ತವರ ಕೂದಲನ್ನ ಏನ್ಮಾಡ್ತಾರೆ?

ಇಡೀ ಜಗತ್ತಿಗೆ ಕೊರೋನಾ ವೈರಸ್ ಹಂಚುವ ಮೂಲಕ ಇದೀಗ ಚೀನಾ ಎಲ್ಲರ ಸಿಟ್ಟಿನ ಮೂಲವಾಗಿದೆ. ಈ ಹಿಂದೆ ವ್ಯವಹಾರ, ಕಡಿಮೆ ಬೆಲೆಯ ವಸ್ತುಗಳ ಮಾರಾಟಕ್ಕೆ ಹೆಸರಾಗಿದ್ದ ಚೀನಾ ಕೃಷಿಯಲ್ಲಿಯೂ ತನ್ನದೇ ಆದ ಸ್ಥಾನ ಮಾನಗಳನ್ನ ಹೊಂದಿದೆ. ಇನ್ನು ಜನ ಜೀವನ, ಆಚಾರ ವಿಚಾರಗಳಿಗೆ ಹೋಲಿಸಿದರಂತೂ ಚೀನಾ ಭಾರತದಷ್ಟೇ ವೈವಿದ್ಯತೆಯನ್ನೊಳಗೊಂಡಿದೆ. ಅಲ್ಲಿಯೂ ಕೂಡಾ ವಿಶಿಷ್ಟವಾದ ಜನ ಸಮುದಾಯ, ಆಚರಣೆಗಳಿದ್ದಾವೆ.

ಅದರ ಭಾಗವಾಗಿ ಮೀಯಾವೋ ಪ್ರದೇಶದಲ್ಲೊಂದು ಸಮುದಾಯವಿದೆ. ಸಾವಿರಾರು ವರ್ಷಗಳಷ್ಟು ಈತಿಹ್ಯವಿರೋ ಆ ಸಮುದಾಯವನ್ನು ಅಳಿವಿನಂಚಿನಲ್ಲಿರೋ ಸಮುದಾಯವೆಂದು ಗುರುತಿಸಲಾಗಿದೆ. ಈ ಸಮುದಾಗದಲ್ಲೀಗ ಹುಡುಕಾಡಿದರೆ ಐದು ಸಾವಿರ ಮಂದಿ ಸಿಕ್ಕರೆ ಅದೇ ಹೆಚ್ಚು. ಇಷ್ಟು ಸೀಮಿತವಾದ ಸಂಖ್ಯೆಯಲ್ಲಿದ್ದರೂ ಕೂಡಾ ಆ ಸಮೂಹದ ಜನ ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಅದರ ನೆರಳಿನಲ್ಲಿಯೇ ಅತ್ಯಂತ ವಿಕ್ಷಿಪ್ತ ಎನ್ನಿಸುವಂಥ ಆಚರಣೆಯೊಂದು ಚಾಲ್ತಿಯಲ್ಲಿದೆ.

ಅಲ್ಲಿ ಅದೆಷ್ಟೋ ವರ್ಷಗಳಿಂದ ಸತ್ತ ಸಂಬಂಧಿಸಕರ ಕೂದಲನ್ನು ಕಿತ್ತು ವಿಗ್ ಮಾಡಿ ಧರಿಸಿಕೊಳ್ಳುವ ಪರಿಪಾಠವಿದೆ. ಒಂದು ಕಾಲದಲ್ಲಿ ಮಹಿಳೆಯರು ಮತ್ತು ಪುರುಷರೂ ಕೂಡಾ ಅಂಥಾ ವಿಗ್ ಧರಿಸಲೇ ಬೇಕೆಂಬ ಕಟ್ಟುಪಾಡಿತ್ತಂತೆ. ಆದರೆ ಇತ್ತೀಚಿನ ದಿನಗಳಲ್ಲಿ ಪುರುಷರು ವಿಗ್ ಧರಿಸೋದನ್ನು ಬಿಟ್ಟಿದ್ದಾರೆ. ಮಹಿಳೆಯರು ಮಾತ್ರ ಕಟ್ಟುನಿಟ್ಟಾಗಿ ಆ ಸಂಪ್ರದಾಯವನ್ನ ಆಚರಿಸ್ತಾರೆ. ಆ ವಿಗ್ ಮುಂಡಾಸಿಗಿಂತಲೂ ದೊಡ್ಡ ಸೈಜಿನಲ್ಲಿರುತ್ತವೆ. ಹಾಗೆ ಆ ಮಹಿಳೆಯರ ತಲೆಯೇರಿಕೊಂಡ ವಿಗ್‌ನಲ್ಲಿ ಅದೆಷ್ಟೋ ತಲೆಮಾರುಗಳ ಪೂರ್ವಜರ ಕೂದಲುಗಳಿರುತ್ತವಂತೆ.

ಪಾದದ ಮಂಡೆಬಿಸಿ!


ಪ್ರದೇಶದಿಂದ ಪ್ರದೇಶಕ್ಕೆ ಜೀವನಕ್ರಮ, ಸಂಪ್ರದಾಯಗಳು ಬದಲಾಗೋದು ಮಾಮೂಲು. ಹಾಗಿದ್ದ ಮೇಲೆ ದೇಶದಿಂದ ದೇಶಕ್ಕೆ ಅದರಲ್ಲಿ ಅಜಗಜಾಂತರ ವ್ಯತ್ಯಾಸಗಳಿರುತ್ತವೆ. ಇಂಥಾ ಒಂದಷ್ಟು ರೀತಿ ರಿವಾಜು ನಂಬಿಕೆಗಳಲ್ಲಿ ಸಾಮ್ಯತೆಗಳಿದ್ದರೂ ಮತ್ತೊಂದಷ್ಟು ಆಯಾ ದೇಶಕ್ಕೆ ಮಾತ್ರವೇ ಸೀಮಿತವಾಗಿರುತ್ತವೆ. ಚೀನಾದಲ್ಲಿ ಸಾವಿರಾರು ವರ್ಷಗಳಿಂದಲೂ ಚಾಲ್ತಿಯಲ್ಲಿದ್ದು, ಇತ್ತೀಚೆಗೆ ನಿಶೇಧಕ್ಕೊಳಪಟ್ಟಿರೋ ಒಂದು ವಿಲಕ್ಷಣ ಸಂಪ್ರದಾಯವೂ ಆ ಸಾಲಿಗೆ ಸೇರುವಂತಿದೆ. ಚೀನಾದ ಹಲವಾರು ಸಂಪ್ರದಾಯಗಳು, ಪ್ರಾಕೃತಿಕ ವಾತಾವರಣ, ಕೃಷಿ ಚಟುವಟಿಕೆ ಮುಂತಾದವುಗಳೆಲ್ಲವೂ ಭಾರತಕ್ಕೆ ಹೋಲಿಕೆಯಾಗುವಂತಿವೆ. ಆದರೆ ಈಗ ಹೇಳಹೊರಟಿರೋ ವಿಚಾರ ಮಾತ್ರ ಯಾವ ದೇಶಗಳೊಂದಿಗೂ ಹೋಲಿಕೆಯಾಗಲು ಸಾಧ್ಯವೇ ಇಲ್ಲದಂಥಾದ್ದು. ಚೀನಾದ ಒಂದಷ್ಟು ಪ್ರದೇಶಗಳಲ್ಲಿ ಹೆಣ್ಣು ಮಕ್ಕಳ ಪಾದಗಳನ್ನು ಪುಟ್ಟದಾಗಿರುವಂತೆ ನೋಡಿಕೊಳ್ಳಲಾಗುತ್ತಿತ್ತಂತೆ. ಹೆಣ್ಣು ಮಕ್ಕಳಿಗೆ ಪಾದ ಚಿಕ್ಕದಾಗಿದ್ದರೆ ಸೌಂದರ್ಯಕ್ಕೆ ಹೊಸಾ ಮೆರುಗು ಸಿಗುತ್ತದೆಂಬುದು ಈ ನಂಬಿಕೆಯ ತಳಹದಿಯಾಗಿತ್ತು.

ಹೆಣ್ಣು ಮಕ್ಕಳ ಪಾದ ಬೆಳೆಯುತ್ತಾ ಬಂದಂತೆ ಏನಿಲ್ಲವೆಂದರೂ ಐದಾರು ಇಂಚುಗಳಷ್ಟು ಬೆಳೆಯುತ್ತದೆ. ಆದರೆ ಚೀನೀಯರಿಗೆ ಅಷ್ಟು ದೊಡ್ಡದಾಗಿ ಹೆಣ್ಣು ಮಕ್ಕಳ ಪಾದ ಬೆಳೆಯೋದು ಅಸಹ್ಯದಂತೆ ಕಾಣಿಸುತ್ತಿತ್ತಂತೆ. ಆದ್ದರಿಂದಲೇ ಚಿಕ್ಕಂದಿನಿಂದಲೇ ಹೆಣ್ಣುಮಕ್ಕಳ ಪಾದಗಳಿಗೆ ಟೈಟ್ ಆಗಿ ಬ್ಯಾಂಡೇಜು ಸುತ್ತಿ ಹಲವಾರು ವರ್ಷಗಳ ಕಾಲ ಅವು ಬೆಳೆಯದಂತೆ ನೋಡಿಕೊಳ್ಳಲಾಗುತ್ತಿತ್ತಂತೆ. ಕೆಲವೊಮ್ಮೆ ಮೂಳೆ ಮುರಿತ ಸಂಭವಿಸಿ, ಕೆಲವರಿಗೆ ಸೆಫ್ಟಿಕ್ ಆಗಿ ನಾನಾ ಬಾಧೆ ಅನುಭವಿಸುವಂತಾಗುತ್ತಿತ್ತಂತೆ. ಆದರೂ ಕೂಡಾ ಆ ಸಂಪ್ರದಾಯ ಸಾವಿರಾರು ವರ್ಷಗಳಿಂದ ಚಾಲ್ತಿಯಲ್ಲಿತ್ತು. ಇತ್ತೀಚೆಗೆ ಅದರಿಂದಾಗೋ ಹಿಂಸೆಯನ್ನು ಮನಗಂಡು, ಹೋರಾಟ ನಡೆದ ಫಲವಾಗಿ ಈ ಸಂಪ್ರದಾಯ ನಿಶೇಧಕ್ಕೊಳಪಟ್ಟಿದೆಯಂತೆ.

 

Tags: #interesingfacts#lifestyl#weirdfacts#wonderstories

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.