ಬ್ರೇಕಿಂಗ್ ನ್ಯೂಸ್ ಅಂದಾಕ್ಷಣ ಕಿವಿ ನೆಟ್ಟಗಾಗೋದು ಸಹಜ. ಅಂತದ್ರಲ್ಲಿ ಕಬ್ಜ-2 ಕುರಿತಾದ ಬಡಾ ಬ್ರೇಕಿಂಗ್ ಅಂದರೆ ಕಿವಿ ಜೊತೆಗೆ ಕಣ್ಣುಗಳು ಅರಳುತ್ವೆ. ಕುತೂಹಲ ಕೆರಳುತ್ತೆ, ನೂರಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಆ ಎಲ್ಲಾ ಪ್ರಶ್ನೆಗಳಿಗೆ ಈಗ್ಲೇ ಉತ್ತರ ಸಿಗದೇ ಇರ್ಬೋದು. ಆದರೆ, ಕಬ್ಜ ಸೀಕ್ವೆಲ್ನ ಸಸ್ಪೆನ್ಸ್ ಪ್ಲಸ್ ಸೀಕ್ರೇಟ್ ಅಂತೂ ರಿವೀಲ್ ಮಾಡ್ತೇವೆ.
ಕಬ್ಜ ಸೀಕ್ವೆಲ್ಗಾಗಿ ಯಾರು ಎದುರುನೋಡ್ತಿದ್ದಾರೋ ಬಿಡ್ತಿದ್ದಾರೋ ಗೊತ್ತಿಲ್ಲ. ಆದರೆ, ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅಭಿಮಾನಿಗಳಂತೂ ಕಬ್ಜ ಪಾರ್ಟ್-2 ಗಾಗಿ ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ಸ್ಯಾಂಡಲ್ವುಡ್ ಬಾದ್ ಷಾ ಸುದೀಪ್ ಸ್ನೇಹಲೋಕ ಹಾಗೂ ರಿಯಲ್ ಸ್ಟಾರ್ ಅಭಿಮಾನಿ ಬಣವೂ ಕಬ್ಜ-2 ಗಾಗಿ ಕಣ್ಣರಳಿಸಿದ್ದು, ಕಬ್ಜ ಕ್ಯಾಪ್ಟನ್ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಆಗಿದ್ದಾಗ್ಲೀ ಇನ್ನೊಂದು ಕೈ ನೋಡೆಬಿಡೋಣ ಅಂತ ಚಾಪ್ಟರ್-2 ಅನೌನ್ಸ್ ಮಾಡೋದಕ್ಕೆ ರೆಡಿಯಾಗಿದ್ದಾರೆ.
ಅಂದ್ಹಾಗೇ, ಪ್ಯಾನ್ ಇಂಡಿಯಾ ಕಬ್ಜ ರಿಲೀಸ್ ಆಗಿ ಭರ್ತಿ 25 ದಿನಗಳು ಕಳೆದ್ವು. ಬರೋಬ್ಬರಿ 4000 ಥಿಯೇಟರ್ಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಗೊಂಡಿದ್ದ ಕಬ್ಜ ಚಿತ್ರ, ಎರಡೇ ದಿನಕ್ಕೆ 100 ಕೋಟಿ ಬಾಚಿಕೊಂಡಿದ್ದರ ಬಗ್ಗೆ ಸುದ್ದಿಯಾಗಿತ್ತು. ಅನಂತರ, ಕಬ್ಜ ಅದೆಷ್ಟು ಕೋಟಿ ಕೊಳ್ಳೆಹೊಡೆದಿದೆ, ಅದೆಷ್ಟು ಕೋಟಿ ದುಡ್ಡು ಕಬ್ಜ ಕ್ಯಾಪ್ಟನ್ ಖಜಾನೆಗೆ ಬಂದು ಬಿದ್ದಿದೆ ಅನ್ನೋದು ರಿವೀಲ್ ಆಗಿಲ್ಲ. ಆದರೆ, ಮಾತುಕೊಟ್ಟಂತೆ ನಾನು ಕಬ್ಜ ಪಾರ್ಟ್-2 ಮಾಡ್ತೀನಿ, ಪಾರ್ಟ್1 ಗಿಂತ ರಿಚ್ ಆಗಿ, ಹೈ ಬಜೆಟ್ನಲ್ಲಿ ಸಿನಿಮಾ ನಿರ್ಮಿಸ್ತೀನಿ ಅಂತ ಕಬ್ಜ ಸಾರಥಿ ಮೀಸೆ ತಿರುವಿದ್ದಾರೆ. ಏಪ್ರಿಲ್ 14ರಂದು ಅದ್ದೂರಿಯಾಗಿ ಒಂದು ಸುದ್ದಿಗೋಷ್ಠಿ ನಡೆಸಿ, ಕಬ್ಜ 25 ಡೇಸ್ ಯಶಸ್ವಿ ಪ್ರದರ್ಶನಗೊಂಡ ಖುಷಿನಾ ಮಾಧ್ಯಮಮಿತ್ರರ ಜೊತೆ ಹಂಚಿಕೊಂಡು, ಚಾಪ್ಟರ್-2ನಾ ಅಧಿಕೃತವಾಗಿ ಘೋಷಣೆ ಮಾಡೋದಕ್ಕೆ ತಯ್ಯಾರಿ ನಡೆಸಿದ್ದಾರಂತೆ. ಹೀಗೊಂದು ಸುದ್ದಿ ಕಬ್ಜ ಕ್ಯಾಪ್ಟನ್ ಮನೆಯಿಂದ ಹೊರಬಿದ್ದಿದ್ದು, ಸೆಂಚುರಿ ಸ್ಟಾರ್ ಶಿವಣ್ಣನ ಅಭಿಮಾನಿಗಳು ಸರಪಟಾಕಿ ಹಚ್ಚುವಂತೆ ಮಾಡಿದೆ.
ಕಬ್ಜ ತೆರೆಗೆ ಅಪ್ಪಳಿಸೋವರೆಗೂ ಸೆಂಚುರಿಸ್ಟಾರ್ ಪಾತ್ರದ ತೂಕದ ಬಗ್ಗೆ ಗೊತ್ತಿರಲಿಲ್ಲ. ಆದರೆ, ಅದ್ಯಾವಾಗ ಮಾಸ್ ಲೀಡರ್ ಶಿವಣ್ಣ ಎಕೆ47 ಗನ್ ಎತ್ಕೊಂಡು, ಜೀಪ್ನಲ್ಲಿ ಗ್ರ್ಯಾಂಡ್ ಎಂಟ್ರಿಕೊಟ್ಟರೋ ಕಬ್ಜ ಕ್ಲೈಮ್ಯಾಕ್ಸ್ಗೆ ಖದರ್ ಬಂತು. ನಾನು ಕಬ್ಜ ಮಾಡೋಕೆ ಬಂದಿರೋ ಫಯರ್ ಅಂತ ಟಗರು ಘರ್ಜಿಸಿದ್ದನ್ನ ಕಂಡಾಗಲೇ ಆಡಿಯನ್ಸ್ ಫಿಕ್ಸ್ ಆಗಿದ್ದರು. ಕಬ್ಜ ಪಾರ್ಟ್ 2 ಟೇಕಾಫ್ ಆಗೋದು ಶಿವಣ್ಣನಿಂದಲೇ ಅಂತ ಷರಾ ಬರೆದಿದ್ದರು.
ಅಂದ್ಹಾಗೇ, ಸಿನಿಮಾ ರಿಲೀಸ್ ಗೂ ಮೊದಲೇ ಉಪ್ಪಿ ಈ ವಿಚಾರವನ್ನ ಮುಂಬೈನಲ್ಲಿ ರಟ್ಟು ಮಾಡಿದ್ದರು. ಸುದೀಪ್ ಹಾಗೂ ಶಿವಣ್ಣ ಕಬ್ಜನಾ ರೂಲ್ ಮಾಡ್ತಾರೆ ಅನ್ನೋ ಸಂಗತಿಯನ್ನ ಬಿಚ್ಚಿಟ್ಟಿದ್ದರು. ಅದ್ರಂತೆ ಚಂದ್ರು ಸಾಹೇಬ್ರು ಕಬ್ಜ-2 ಕಥೆನಾ ಕೆತ್ತಿದ್ದಾರಾ? ಎಲ್ಲಿವರೆಗೂ ಬಂದಿದೆ ಸ್ಟೋರಿ, ಸ್ಕ್ರೀನ್ ಪ್ಲೇ ಕೆಲಸ ಅನ್ನೋದು ಗೊತ್ತಿಲ್ಲ. ಆದರೆ, ಬಾಲಿವುಡ್ ನಿಂದ ಗ್ರೀಕ್ ಗಾಡ್ ಹೃತಿಕ್ ರೋಷನ್, ನಾನಾ ಪಾಟೇಕರ್ ನಂತಹ ದಿಗ್ಗಜರು ಕಬ್ಜ-2ಗಾಗಿ ಕನ್ನಡಕ್ಕೆ ಬರಲಿದ್ದಾರಂತೆ. ಮೊದಲ ಭಾಗಕ್ಕಿಂತ ಅದ್ದೂರಿಯಾಗಿ ಕಬ್ಜ ರಿಚ್ ಆಗಿ, ಹೆಚ್ಚಾಗಿ ಮೂಡಿಬರಲಿದೆಯಂತೆ. ಸದ್ಯ ಹರಿದಾಡ್ತಿರೋ ಸುದ್ದಿ ಪ್ರಕಾರ ಏಪ್ರಿಲ್ 14ರಂದು ಎಲ್ಲಾ ಪ್ರಶ್ನೆಗೆ ಉತ್ತರ ಕೊಡಲಿದ್ದಾರಂತೆ. ಅಂದೇ ಕಬ್ಜ ಚಿತ್ರ ಅಮೇಜಾನ್ ಪ್ರೈಮ್ ನಲ್ಲಿ ಸ್ಕ್ರೀನಿಂಗ್ ಆಗ್ತಿದೆ. ಓಟಿಟಿಯಲ್ಲಿ ಕಬ್ಜ ಆರ್ಭಟ ಶುರುವಾಗಲಿದೆ.