ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಖುಷ್ಬು ಮತ್ತೆ ಒಂದಾಗ್ತಿದ್ದಾರಂತೆ. ಆ ಸಿನಿಮಾದಲ್ಲಿ ಜೋಡಿಯಾಗಿ ಅಭಿನಯಿಸಲಿದ್ದಾರಂತೆ. ಅರ್ರೇ ಯಾವ್ ಸಿನಿಮಾ? ಏನ್ ಕಥೆ? ಡೈರೆಕ್ಟರ್ ಯಾರು? ರವಿಮಾಮ ಮತ್ತೆ ಡೈರೆಕ್ಟರ್ ಹ್ಯಾಟ್ ಏನಾದ್ರೂ ತೊಟ್ರಾ? ಕ್ಯೂಟಿ ಖುಷ್ಬುನಾ ಕನ್ನಡಕ್ಕೆ ಮತ್ತೆ ಕರ್ಕೊಂಡು ಬರಲು ರೆಡಿಯಾದ್ರಾ? ಹೀಗೆ ಒಂದಿಷ್ಟು ಕುತೂಹಲದ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ. ಆ ಎಲ್ಲಾ ಪ್ರಶ್ನೆಗೆ ಉತ್ತರ ಸಿಗುವ ಕಥನ ಇಲ್ಲಿದೆ ನೋಡಿ
ಸೌತ್ ಸಿನಿಮಾ ಇಂಡಸ್ಟ್ರಿಯ ಸೂಪರ್ ಹಿಟ್ ಜೋಡಿಗಳ ಪೈಕಿ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಖುಷ್ಬು ಜೋಡಿಯೂ ಒಂದು. ಇವರಿಬ್ಬರ ಆನ್‍ಸ್ಕ್ರೀನ್ ಕೆಮಿಸ್ಟ್ರಿಗೆ ಸಿನಿಮಾಪ್ರೇಮಿಗಳು ಮಾತ್ರವಲ್ಲ ಬೆಳ್ಳಿತೆರೆಯೇ ಬೆವರುತ್ತಿತ್ತು. ಬಾಕ್ಸ್‍ಆಫೀಸ್ ಅಂತೂ ಹುಚ್ಚೆದ್ದು ಕುಣಿಯುತ್ತಿತ್ತು. ಈಗ ಮಗದೊಮ್ಮೆ ಬಿಗ್‍ಸ್ಕ್ರೀನ್ ಬೆವರೋದಕ್ಕೆ ಅವಕಾಶ ಸಿಗೋ ಥರ ಕಾಣ್ತಿದೆ. ಪ್ರೇಕ್ಷಕ ಮಹಾಷಯರ ಜೊತೆ ಸೀಟಿ ಹೊಡ್ಕೊಂಡು ಶೇಕ್ ಡ್ಯಾನ್ಸ್ ಮಾಡೋ ಅವಕಾಶ ಗಲ್ಲಾಪೆಟ್ಟಿಗೆಗೂ ದಕ್ಕಲಿದೆ. ಯಾಕಂದ್ರೆ, ಈ ಕ್ರೇಜಿಕಿಯಾರೆ ಕಾಂಬಿನೇಷನ್ ಮತ್ತೆ ಕಿಕ್ ಕೊಡೋದಕ್ಕೆ ಸಜ್ಜಾಗಿದೆ.
ಯಸ್, ರವಿಮಾಮ-ಖುಷ್ಬು ಜೋಡಿ ಮತ್ತೆ ಒಂದಾಗಲಿದೆಯಂತೆ. ಮೂರು ದಶಕದ ಹಿಂದೆಯೇ ಬೆಳ್ಳಿಭೂಮಿ ಮೇಲೆ ಮೆರವಣಿಗೆ ಹೊರಟು, ಪ್ರೇಕ್ಷಕರಿಂದ ಮುತ್ತಿನ ಹಾರ ಹಾಕಿಸಿಕೊಂಡಂತಹ ಈ ಮುದ್ದಾದ ಜೋಡಿ, ಮತ್ತೆ ದಿಬ್ಬಣ ಹೊರಡಲು ರೆಡಿಯಾಗ್ತಿದೆಯಂತೆ. ಈ ಕ್ಯೂಟ್ ಫೇರ್‍ನ ಪುನಃ ಒಂದುಗೂಡಿಸೋಕೆ, ಈ ಹಿಟ್ ಜೋಡಿನಾ ಹಾಕ್ಕೊಂಡು ಸಿನಿಮಾ ಮಾಡೋದಕ್ಕೆ ಸ್ಯಾಂಡಲ್‍ವುಡ್ ನಿರ್ದೇಶಕರೊಬ್ಬರು ಮುಂದೆ ಬಂದಿದ್ದಾರೆ.
ರಣಧೀರ, ಅಂಜದ ಗಂಡು, ಯುಗಪುರುಷ ಚಿತ್ರದಲ್ಲಿ ಕ್ರೇಜಿ-ಖುಷ್ಬು ಕೆಮಿಸ್ಟ್ರಿ ಕ್ಲಿಕ್ ಆಗಿತ್ತು. ಬೆಳ್ಳಿಪರದೆ ಮೇಲೆ ಭರ್ಜರಿಯಾಗಿ ವರ್ಕೌಟ್ ಆಗಿತ್ತು. ಅಂದಿನಿಂದ ಇವರಿಬ್ಬರನ್ನು ಹಾಕ್ಕೊಂಡು ಸಿನಿಮಾ ಮಾಡ್ಬೇಕು ಅಂತ ಕೆಲ ನಿರ್ದೇಶಕರು ಪ್ರಯತ್ನಪಟ್ಟರಾದರೂ ಅದು ಸಾಧ್ಯ ಆಗಿರಲಿಲ್ಲ. ಆದ್ರೀಗ, ನಿರ್ದೇಶಕ ಗುರುರಾಜ್ ಕುಲಕರ್ಣಿಗೆ ಬಂಪರ್ ಚಾನ್ಸ್ ಸಿಕ್ಕಿದೆ. ಈಗಾಗ್ಲೇ ರವಿಮಾಮನಿಗೆ ಕಥೆ ಹೇಳಿ ಒಪ್ಪಿಸಿರೋ ಗುರುರಾಜ್, ಖುಷ್ಬು ಅವರನ್ನೂ ಸಂಪರ್ಕಿಸಿ ಸ್ಟೋರಿ ನರೇಟ್ ಮಾಡಿದ್ದಾರಂತೆ. ಕಥೆ ಕೇಳಿ ಕ್ಲೀನ್‍ಬೋಲ್ಡ್ ಆಗಿರೋ ಖುಷ್ಬು ಮೇಡಂ, ಡೇಟ್ಸ್ ಹೊಂದಿಸಿಕೊಳ್ಳೋ ತಯ್ಯಾರಿಯಲ್ಲಿದ್ದಾರಂತೆ.
ಎಲ್ಲಾ ಅಂದುಕೊಂಡಂತೆ ಆದರೆ 32 ವರ್ಷಗಳ ಬಳಿಕ ರವಿಮಾಮ-ಖುಷ್ಬು ಜೋಡಿನಾ ತೆರೆಮೇಲೆ ನೋಡೋ ಸೌಭಾಗ್ಯ ಸಿಗುತ್ತೆ. ಣಧೀರ, ಅಂಜದ ಗಂಡು, ಯುಗಪುರುಷ ನಂತರ ಶಾಂತಿಕ್ರಾಂತಿ ಸಿನಿಮಾದಲ್ಲಿ ನಟಿಸಿದರಾದ್ರೂ, ಕ್ರೇಜಿಸ್ಟಾರ್‍ಗೆ ಖುಷ್ಬು ಜೋಡಿಯಾಗಿರಲಿಲ್ಲ. ಇದೀಗ, ಇವರಿಬ್ಬರು ಮತ್ತೆ ಒಂದಾಗ್ತಿರೋ ಸುದ್ದಿ ಇವರಿಬ್ಬರ ಅಭಿಮಾನಿಗಳನ್ನ ಹುಚ್ಚೆಬ್ಬಿಸಿದೆ. ಈಗೀನ ಯಂಗ್ ಹೀರೋಯಿನ್ಸ್‍ಗೆ ಸೆಡ್ಡು ಹೊಡೆಯೋ ರೇಂಜ್‍ಗೆ ಸ್ಲಿಮ್ ಆಗಿರೋ, ಸೌಂದರ್ಯ ಮೆಂಟೇನ್ ಮಾಡಿರೋ ಖುಷ್ಬು, ರಣಧೀರನ ಜೊತೆ ಕಂಬ್ಯಾಕ್ ಮಾಡಿದರೆ ಅಗೇನ್ ಸಿಲ್ವರ್‍ಸ್ಕ್ರೀನ್ ಮೇಲೆ ಸೆನ್ಸೇಷನ್ ಕ್ರಿಯೇಟ್ ಆಗೋದು ಖರ್ರೆ
ಅಂದ್ಹಾಗೇ, ಇವರಿಬ್ಬರು ಒಂದಾಗ್ತಿರೋ ಸಿನಿಮಾ ಕೋರ್ಟ್ ಥ್ರಿಲ್ಲರ್ ಕಥೆಯನ್ನ ಒಳಗೊಂಡಿದೆಯಂತೆ. ಕ್ರೇಜಿಸ್ಟಾರ್‍ನ ಹೊಸ ಲುಕ್‍ನಲ್ಲಿ ತೋರಿಸೋದಕ್ಕೆ ನಿರ್ದೇಶಕ ಗುರುರಾಜ್ ಕುಲಕರ್ಣಿ ತಯ್ಯಾರಿ ಮಾಡಿಕೊಂಡಿದ್ದಾರೆ. ಇದೇ ಏಪ್ರಿಲ್ 21ರಂದು ಅಧಿಕೃತವಾಗಿ ಸಿನಿಮಾವನ್ನ ಘೋಷಣೆ ಮಾಡಲಿದ್ದಾರಂತೆ. ಬಹುಷಃ ಅವತ್ತು ಈ ಸಿನಿಮಾದ ಬಗ್ಗೆ ಇನ್ನಷ್ಟು ಡೀಟೈಲ್ಸ್ ಹೊರಬೀಳಲಿದೆ. ಸದ್ಯ ಖುಷ್ಬು ಸಿನಿಮಾ ಹಾಗೂ ರಾಜಕೀಯ ಎರಡು ಕ್ಷೇತ್ರದಲ್ಲೂ ಸಕ್ರಿಯರಾಗಿದ್ದಾರೆ. ಇತ್ತ ರವಿಮಾಮ ಹೀರೋ ಆಗಿ ಪ್ಲಸ್ ಪೋಷಕ ನಟನಾಗಿ ಕಮಾಲ್ ಮಾಡ್ತಿದ್ದಾರೆ. ಅಣ್ಣಯ್ಯಪ್ಪನಾಗಿ ಖದರ್ ತೋರ್ಸೋಕೆ ಕೆಡಿ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಗಣಿದಣಿ ಜನಾರ್ಧನ್ ರೆಡ್ಡಿಯವ್ರ ಪುತ್ರ ಕಿರೀಟಿ ರೆಡ್ಡಿಯ ಜೂನಿಯರ್ ಸಿನಿಮಾದಲ್ಲಿ ಸೀನಿಯರ್ ಆಗಿ ಸುನಾಮಿ ಎಬ್ಬಿಸಲಿದ್ದಾರೆ.