ಪೈರಸಿ ಎಂಬುದು ಸಿನಿಮಾಮಂದಿಗೆ ಪೆಡಂಭೂತವಾಗಿ ಕಾಡ್ತಿರುವುದು ನಿಮಗೆಲ್ಲ ಗೊತ್ತೆಯಿದೆ. ಬಡ್ಡಿಗೆ, ಚಕ್ರಬಡ್ಡಿಗೆ ದುಡ್ಡು ತಂದಾಕಿ ಸಿನಿಮಾ ಮಾಡಿದ ಅನ್ನದಾತನ್ನ, ಈ ಪೈರಸಿ ಅನ್ನೋದು ಆಕಾಶನೋಡುವಂತೆ ಮಾಡ್ತಿದೆ. ಸಿನಿಮಾ ರಿಲೀಸ್ ಆದ ಕೆಲವೇ ಹೊತ್ತಲ್ಲಿ ಎಚ್ಡಿ ಪ್ರಿಂಟ್ಗಳು ಹೊರಬರುತ್ತಿದ್ದು, ಸಿನಿಮಾ ಸೋಲಿಗೆ ಕಾರಣವಾಗ್ತಿದೆ. ಇದನ್ನ ತಡೆಯೋದಕ್ಕೆ ಸಿನಿಮಾಟೋಗ್ರಫಿ ಕಾಯ್ದೆನಾ ತಿದ್ದುಪಡಿ ಮಾಡೋದಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಪ್ರಧಾನಿ ಮೋದಿ ಅಧ್ಯಕ್ಷತೆಯ ಸಂಪುಟ ಸಭೆಯಲ್ಲಿ ತಿದ್ದುಪಡಿ ಮಸೂದೆಯ ಅಂಗೀಕಾರವಾಗಿದ್ದು, ಸಿನಿಮಾಮಂದಿ ನಿಟ್ಟುಸಿರು ಬಿಡುವಂತಾಗಿದೆ.
ತಿದ್ದುಪಡಿ ಮಸೂದೆಯ ಪ್ರಕಾರ ಇನ್ನು ಮುಂದೆ ಸಿನಿಮಾದ ಪೈರಟೆಡ್ ದೃಶ್ಯಗಳನ್ನು, ತುಣುಕಗಳನ್ನು, ಹಾಡುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವಂತಿಲ್ಲ. ಒಂದು ವೇಳೆ ಹಂಚಿಕೊಂಡರೆ, ಪೈರಸಿ ಮಾಡಿದರೆ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವುದಕ್ಕೆ ಮಸೂದೆಯು ಅವಕಾಶ ನೀಡಲಿದೆ, ಪೈರಸಿ ಮಾಡಿದ ಅಪರಾಧಿಗೆ ಇಲ್ಲಿವರೆಗೂ ಮೂರು ತಿಂಗಳ ಶಿಕ್ಷೆ ನೀಡ್ತಿದ್ದರು, ಬದಲಾದ ತಿದ್ದುಪಡಿ ಕಾಯ್ದೆಯಲ್ಲಿ ಮೂರು ವರ್ಷಗಳಿಗೆ ಶಿಕ್ಷೆಯ ಕಾಲವಧಿಯನ್ನ ಹೆಚ್ಚಿಸಲಾಗ್ತಿದೆ.
ಸಿನಿಮಾ ಪೈರಸಿಯ ಜೊತೆಗೆ ಯಾವ ವಯಸ್ಸಿನವರು ಯಾವ ತರಹದ ಸಿನಿಮಾ ನೋಡಬಹುದು, ಯಾವ ಸಿನಿಮಾವನ್ನು ನೋಡುವಂತಿಲ್ಲ ಎಂಬುದಕ್ಕೂ ಕೆಲವು ಬದಲಾವಣೆಗಳನ್ನ ತರುವುದಕ್ಕೆ ತಿದ್ದುಪಡಿ ಮಾಡಲಾಗ್ತಿದೆ. ಸೆನ್ಸಾರ್ ಮಂಡಳಿಯಿಂದ ಕೊಡಮಾಡುವ ಪ್ರಮಾಣಪತ್ರದಲ್ಲೂ ಬದಲಾವಣೆಗಳಾಗಲಿವೆ. ಸೆನ್ಸಾರ್ ಸರ್ಟಿಫಿಕೇಟ್ ಇಲ್ಲದೇ ಸಿನಿಮಾ ಪ್ರದರ್ಶನ ಮಾಡೋದು ಅಥವಾ ಸರ್ಟಿಫಿಕೇಟ್ ತಗೊಂಡು ಹೋದ್ಮೇಲೆ ಸಿನಿಮಾದಲ್ಲಿ ಬದಲಾವಣೆ ಮಾಡೋದಾದರೆ ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಕ್ಕೂ ಈ ಸಿನಿಮಾಟೋಗ್ರಫಿ ಕಾಯ್ದೆಯಲ್ಲಿ ಕೆಲವು ಬದಲಾವಣೆಗಳನ್ನ ತರಲಾಗುತ್ತಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅನುರಾಗ್ ಠಾಕೂರ್, ಮಸೂದೆಯನ್ನು ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಮಂಡಿಸಲಾಗುವುದು, ಈ ಮಸೂದೆ ರಚನೆಗೆ ಸಾಕಷ್ಟು ಅನುಭವಿಗಳ ಸಲಹೆಗಳನ್ನು ಪಡೆಯಲಾಗಿದೆ. ಈ ಮಸೂದೆಯು ಸಿನಿಮಾ ರಂಗದವರ ನಿರೀಕ್ಷೆಗಳಿಗೆ ಸೂಕ್ತವಾಗಿ ಸ್ಪಂದಿಸಲಿದೆ, ಯಾವುದೇ ವಿವಾದಕ್ಕೆ ಆಸ್ಪದ ಇಲ್ಲದೆ ಎಲ್ಲರೂ ಒಪ್ಪುವಂತಹಾ ತಿದ್ದಪಡಿ ಮಸೂದೆ ಇದಾಗಿದೆ ಎಂದಿದ್ದಾರೆ
2019 ರಲ್ಲಿ ಆಗಿನ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು ಸಿನಿಮಾಟೊಗ್ರಫಿ ಕಾಯ್ದೆಗೆ ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿದ್ದರು. ಆ ಬಳಿಕ ಆ ಮಸೂದೆಗೆ ಹಲವು ಬದಲಾವಣೆಗಳನ್ನು ಮಾಡಲಾಗಿ ಇದೀಗ ಹೊಸ ಮಸೂದೆಯನ್ನು ಸಂಪುಟ ಸಭೆಯು ಅಂಗೀಕರಿಸಿದೆ. ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಿ ಸಂಸತ್ನ ಅಂಗೀಕಾರ ಪಡೆಯಲಾಗುತ್ತದೆ.